ನವದೆಹಲಿ: ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಎಸ್‌ಸಿ/ಎಸ್‌ಟಿ ಮೀಸಲಾತಿಯ ಗಡುವನ್ನು ವಿಸ್ತರಿಸಲು ಸಂಸತ್ತು ತನ್ನ ಸಂವಿಧಾನಾತ್ಮಕ ಅಧಿಕಾರವನ್ನು ಬಳಸಬಹುದೇ ಎಂಬುದನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ. ವಿಸ್ತರಣೆ
ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಾತಿ ವಿಸ್ತರಣೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನವೆಂಬರ್-21ರಂದು ಕೈಗೆತ್ತಿಕೊಳ್ಳಲಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ, ಎಂ.ಎಂ.ಸುಂದರೇಶ್, ಜೆ.ಬಿ.ಪಾರ್ದೀವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನು ಒಳಗೊಂಡ ನ್ಯಾಯಪೀಠವು, ಸಂವಿಧಾನದ 104ನೇ ತಿದ್ದುಪಡಿ ಮೂಲಕ ಮತ್ತೆ ಹತ್ತು ವರ್ಷಗಳ ಕಾಲ ಈ ಸಮುದಾಯಗಳಿಗೆ ಮೀಸಲಾತಿ ಸೌಲಭ್ಯ ವಿಸ್ತರಿಸಿರುವ ಬಗ್ಗೆ ಪರಾಮರ್ಶೆ ನಡೆಸಲಿದೆ.
ಈ ಸಮುದಾಯಗಳಿಗೆ ಹಿಂದೆ ಮೀಸಲಾತಿ ವಿಸ್ತರಣೆಗೆ ಸಂಬಂಧಿಸಿ ಸಂವಿಧಾನಕ್ಕೆ ತಂದಿರುವ ತಿದ್ದುಪಡಿಗಳಿಗೆ ಈ ವಿಚಾರಣೆಯ ಅನ್ವಯಿಸುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ಸಂವಿಧಾನದ ಮೂಲದಲ್ಲಿ ಪರಿಶಿಷ್ಟರಿಗೆ ಹತ್ತು ವರ್ಷಗಳಷ್ಟೇ ಮೀಸಲಾತಿ ನಿಗದಿಪಡಿಸಲಾಗಿದೆ. ಆದರೆ, ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಸಂವಿಧಾನದ ತಿದ್ದುಪಡಿಗೆ ಒಪ್ಪಿಗೆ ನೀಡುವ ಮೂಲಕ ಮೀಸಲಾತಿಯನ್ನು ವಿಸ್ತರಿಸಲಾಗಿದೆ. 104ನೇ ತಿದ್ದುಪಡಿ ಮೂಲಕ ಮತ್ತೆ ಹತ್ತು ವರ್ಷಗಳವರೆಗೆ ಮೀಸಲಾತಿ ಸೌಲಭ್ಯವನ್ನು ಮುಂದುವರಿಸಲಾಗಿದೆ. ಜೊತೆಗೆ, ಆಂಗ್ಲೋ ಇಂಡಿಯನ್ ಪ್ರಾತಿನಿಧ್ಯವನ್ನು ರದ್ದುಪಡಿಲಾಗಿದೆ. ಈ ತಿದ್ದುಪಡಿಯ ಸಿಂಧುತ್ವವನ್ನು ಪರಾಮರ್ಶೆ ನಡೆಸಲಾಗುತ್ತದೆ ಎಂದು ಹೇಳಿದೆ.
1950 ರಲ್ಲಿ ಸಂವಿಧಾನವನ್ನು ಜಾರಿಗೊಳಿಸಿದಾಗ ಮೀಸಲಾತಿಯು ಆರಂಭದಲ್ಲಿ 10 ವರ್ಷಗಳ ಅವಧಿಗೆ ಇತ್ತು ನಂತರ 1969 ರಿಂದ ವಿಸ್ತರಿಸಲಾಯಿತು. 2019 ರಲ್ಲಿ ಸಂಸತ್ತು ಸಂವಿಧಾನ (104 ನೇ ತಿದ್ದುಪಡಿ) ಕಾಯಿದೆಯ ಮೂಲಕ 2030 ನ್ನು ಗಡುವು ಎಂದು ನಿಗದಿಪಡಿಸಿದೆ.
ವಿಡಿಯೋ ನೋಡಿ:ದುರ್ಬಳಕೆಯಾಗುತ್ತಿರುವ ದೇಶದ್ರೋಹ ಕಾನೂನು!? – ಜಸ್ಟೀಸ್ ಎಚ್. ಎನ್. ನಾಗಮೋಹನದಾಸ್ Janashakthi Media