ಮತ್ತೆ ಕಾಡುತ್ತಿವೆ ರಫ್ತು-ಪ್ರಧಾನ ಬೆಳವಣಿಗೆಯ ಹಳ್ಳ-ಗುಂಡಿಗಳು

ಪ್ರೊ.ಪ್ರಭಾತ್ ಪಟ್ನಾಯಕ್
ಅನು:ಕೆ.ಎಂನಾಗರಾಜ್

ರಫ್ತು-ಪ್ರಧಾನ ಬೆಳವಣಿಗೆಯ ಪರಿಕಲ್ಪನೆಯು ಯುದ್ಧಗಳ ನಡುವಿನ ಅವಧಿಯ ವಿಶ್ವ ಬಂಡವಾಳಶಾಹಿಯ ಬಿಕ್ಕಟ್ಟಿನಿಂದಾಗಿ ಅಪಖ್ಯಾತಿಗೊಳಗಾಗಿತ್ತು. ಈ ಕಾರ್ಯತಂತ್ರದ ಅನುಸರಣೆ ಚಾಲ್ತಿ ಕೊರತೆಯನ್ನು ಸಂಭಾಳಿಸುವ ಸಲುವಾಗಿ, ದೇಶವು ಜಾಗತೀಕರಣಗೊಂಡ ಹಣಕಾಸು ಬಂಡವಾಳದ ತಿಕ್ಕಲುತನವನ್ನು ಅವಲಂಬಿಸುವಂತೆ ಮಾಡುತ್ತದೆ. ಈ ವಿದ್ಯಮಾನವು, ತುಲನಾತ್ಮಕವಾಗಿ ಪ್ರಭಾವಶಾಲಿ ಮಾನವ ಅಭಿವೃದ್ಧಿ ಸಾಧನೆಗಳನ್ನು ಮಾಡಿದ ನಮ್ಮ ನೆರೆಯ ಶ್ರೀಲಂಕಾ ಮತ್ತು ಬಾಂಗ್ಲಾದೇಶದಂತಹ ದೇಶಗಳಲ್ಲೂ ಸಂಭವಿಸಿರುವುದನ್ನು ನಾವು ನೋಡಿದ್ದೇವೆ. ಈ ಪರಿಕಲ್ಪನೆಯು ಅಪಖ್ಯಾತಿಗೊಳಗಾದಾಗ ಸುಮಾರಾಗಿ ಎಲ್ಲ ಮೂರನೇ ಜಗತ್ತಿನ ದೇಶಗಳಲ್ಲಿ ಆಮದುಗಳ ಬದಲಿಗೆ ಅದೇ ವಸ್ತುಗಳನ್ನು ದೇಶೀಯವಾಗಿ ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸುವ ಪ್ರಕ್ರಿಯೆಯು ಸಂಭವಿಸಿತ್ತು. ನವ-ಉದಾರವಾದದ ಮೂಲಕ, ಮತ್ತೆ ಕಾಣಿಸಿಕೊಂಡ ಆ ಪರಿಕಲ್ಪನೆ ಈಗ ವಿಶ್ವ ಬಂಡವಾಳಶಾಹಿಯು ಹೊಸ ಬಿಕ್ಕಟ್ಟನ್ನು ಎದುರಿಸುತ್ತಿರುವ ಸಂದರ್ಭದಲ್ಲಿ, ಮತ್ತೊಮ್ಮೆ ದೂರಸರಿಯುವ ಬದಲಾವಣೆ ಅಜೆಂಡಾದಲ್ಲಿ ಕಾಣಿಸಿಕೊಳ್ಳುತ್ತಿದೆ.

ಎಂಭತ್ತರ ದಶಕದಲ್ಲಿ, ಪೂರ್ವ ಏಷ್ಯಾದ ಕೆಲವು ದೇಶಗಳು ಸಾಧಿಸಿದ ಅಭಿವೃದ್ಧಿಯನ್ನು “ಪವಾಡ”ವೆಂದು ಮತ್ತು ನಿಧಾನ ಗತಿಯಲ್ಲಿ ಸಾಗುತ್ತಿದ್ದ ಭಾರತದಂತಹ ದೇಶಗಳ ಅಭಿವೃದ್ಧಿಯನ್ನು ವಿಶ್ವಬ್ಯಾಂಕಿನ ಪರಿಭಾಷೆಯಲ್ಲಿ “ಅಂತರ್ಮುಖಿ” ಎಂದು ಹೇಳಲಾಗಿತ್ತು. ಈ ಎರಡೂ ಅಭಿವೃದ್ಧಿ ಕಾರ್ಯತಂತ್ರಗಳ ಅನುಭವಗಳ ಹೋಲಿಕೆಯೊಂದಿಗೆ ರಫ್ತು- ಪ್ರಧಾನ ಬೆಳವಣಿಗೆಯ ಕಾರ್ಯತಂತ್ರವು ಮುನ್ನೆಲೆಗೆ ಬಂತು. ಆದರೆ, ನಿಜ ಜೀವನದಲ್ಲಿ ನಿರ್ಣಾಯಕ ಪಾತ್ರ ವಹಿಸುವ ಒಂದು ಬಹುಮುಖ್ಯ ಅಂಶವು ಈ ಅಭಿವೃದ್ಧಿ ಕಾರ್ಯತಂತ್ರಗಳ ಚರ್ಚೆಗಳಲ್ಲಿ ಕಾಣೆಯಾಗಿದೆ.

ಒಂದು ಅರ್ಥವ್ಯವಸ್ಥೆಯಲ್ಲಿ, ಒಟ್ಟು ಬೇಡಿಕೆಯಲ್ಲಿ ಅನೇಕ ರೀತಿಯ ವೆಚ್ಚಗಳು ಅದರ ಅಂಗವಾಗಿರುತ್ತವೆ. ಈ ವೆಚ್ಚಗಳಲ್ಲಿ ಕೆಲವು ಸ್ವನಿಯಂತ್ರಿತವಾಗಿರುತ್ತವೆ. ಇನ್ನೂ ಕೆಲವು ವೆಚ್ಚಗಳು ಒಟ್ಟು ಬೇಡಿಕೆ ಹೆಚ್ಚಿದ ಕಾರಣದಿಂದ ಉಂಟಾಗುತ್ತವೆ. ರಫ್ತುಗಳನ್ನು ಮತ್ತು ಸರ್ಕಾರದ ಖರ್ಚು-ವೆಚ್ಚಗಳನ್ನು ಸಾಮಾನ್ಯವಾಗಿ ಬೇಡಿಕೆಯ ಎರಡು ಪ್ರಮುಖ ಸ್ವನಿಯಂತ್ರಿತ ಅಂಶಗಳೆAದು ಪರಿಗಣಿಸಲಾಗುತ್ತದೆ: ಬಳಕೆಯ ಮಟ್ಟವು ವರಮಾನದ ನಿರ್ದಿಷ್ಟ ಮಟ್ಟವನ್ನು ಅವಲಂಬಿಸಿರುತ್ತದೆ. ಬಳಕೆಯಲ್ಲಿಯೂ ಒಂದು ಸ್ವನಿಯಂತ್ರಿತ ಅಂಶವಿರುತ್ತದೆ ಮತ್ತು ಅದು ವರಮಾನವನ್ನು ಅವಲಂಬಿಸಿರುವುದಿಲ್ಲ. ಆದರೆ, ಬಳಕೆಯ ಈ ಸ್ವನಿಯಂತ್ರಿತ ಅಂಶವು ಕೆಲವು ಸಂದರ್ಭಗಳಲ್ಲಿ ಮಾತ್ರ ಸ್ಪಷ್ಟವಾಗಿ ಕಾಣುತ್ತದೆ. ಉದಾಹರಣೆಗೆ, ಅದುವರೆಗೂ ಲಭ್ಯವಿರದ ಸರಕುಗಳು ಇದ್ದಕ್ಕಿದ್ದಂತೆ ಲಭ್ಯವಾದಾಗ.

ಒಂದು ಅರ್ಥವ್ಯವಸ್ಥೆಯಲ್ಲಿ, ಬೇಡಿಕೆಯ ಹೆಚ್ಚಿದಾಗ ಅದರೊಂದಿಗೆ ಉತ್ಪಾದನೆಯೂ ಹೆಚ್ಚುತ್ತದೆ. ಉತ್ಪಾದನೆಯ ಹೆಚ್ಚಳವು, ಸ್ವನಿಯಂತ್ರಿತ ಬೇಡಿಕೆಯನ್ನು ಅವಲಂಬಿಸಿರುತ್ತದೆ. ಗಡಿಯಾಚೆಗಿನ ಬಂಡವಾಳದ ಹರಿವಿಗೆ ಮುಕ್ತವಾಗಿರುವ ಒಂದು ನವ-ಉದಾರವಾದಿ ಅರ್ಥವ್ಯವಸ್ಥೆಯಲ್ಲಿ, ಜಿಡಿಪಿಯ ಅನುಪಾತದಲ್ಲಿ, ವಿತ್ತೀಯ ಕೊರತೆಯ ಮೇಲೆ ಒಂದು ಮಿತಿಯನ್ನು ಹೇರಲಾಗುತ್ತದೆ. ಆದ್ದರಿಂದ, ವಿತ್ತೀಯ ಕೊರತೆಯನ್ನು ಹೆಚ್ಚಿಸಿಕೊಳ್ಳಲಾಗದ ಅಥವಾ ಶ್ರೀಮಂತರ ಮೇಲೆ ಹೆಚ್ಚು ತೆರಿಗೆ ವಿಧಿಸಲಾಗದ ಕಾರಣದಿಂದಾಗಿ, ಬೇಡಿಕೆಯನ್ನು ವೃದ್ಧಿಸುವ ಸರ್ಕಾರದ ಸಾಮರ್ಥ್ಯ ಕಡಿಮೆಯಾಗುತ್ತದೆ. ಇಂಥಹ ನಿರ್ಬಂಧಗಳ ಕಾರಣದಿಂದಾಗಿ, ಆರ್ಥಿಕ ಅಭಿವೃದ್ಧಿಯನ್ನು ಸಾಧಿಸಬೇಕು ಎಂದಾದರೆ, ರಫ್ತುಗಳನ್ನು ಅವಲಂಬಿಸಬೇಕಾಗುತ್ತದೆ. ವಿಷಯವನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ, ಒಂದು ನವ-ಉದಾರವಾದಿ ಅರ್ಥವ್ಯವಸ್ಥೆಯ ಬೆಳವಣಿಗೆಯು ರಫ್ತು-ಪ್ರಧಾನವಾಗಿರುತ್ತದೆ.
ರಫ್ತು-ಪ್ರಧಾನ ಬೆಳವಣಿಗೆಯ ಕಾರ್ಯತಂತ್ರವನ್ನು ನವ-ಉದಾರವಾದಿ ಸನ್ನಿವೇಶದಲ್ಲಿ ಮಾತ್ರ ಅನುಸರಿಸಲಾಗುತ್ತದೆ ಎಂದೇನಲ್ಲ. ದೇಶದ ಮಾರುಕಟ್ಟೆಯನ್ನು ವಿಸ್ತರಿಸುವ ಸಲುವಾಗಿಯೂ ಸರ್ಕಾರವು ರಫ್ತುಗಳನ್ನು ಉದ್ದೇಶಪೂರ್ವಕವಾಗಿಯೇ ಪ್ರೋತ್ಸಾಹಿಸಬಹುದು. ಅಂದರೆ, ಆರ್ಥಿಕ ಬೆಳವಣಿಗೆಗಾಗಿ ಸರ್ಕಾರವು ತಾನು ಖರ್ಚು ಮಾಡುವುದರ ಬದಲು ರಫ್ತುಗಳು ಹೆಚ್ಚುವಂತೆ ನೋಡಿಕೊಳ್ಳುವ ಮೂಲಕ ಅಭಿವೃದ್ಧಿಯನ್ನು ಸಾಧಿಸುತ್ತದೆ. ಅಂದರೆ, ಆರ್ಥಿಕ ಬೆಳವಣಿಗೆಯಲ್ಲಿ ಸರ್ಕಾರದ ಪಾತ್ರವು ನಿರ್ಣಾಯಕವಾಗಿರುತ್ತದೆ. ಪೂರ್ವ ಏಷ್ಯಾದ ದೇಶಗಳಲ್ಲಿ ವಾಸ್ತವವಾಗಿ ಜರುಗಿದ್ದ ವಿದ್ಯಮಾನ ಇದುವೇ ಎಂದು ಅನೇಕರು ಹೇಳುತ್ತಾರೆ.

ಇದನ್ನು ಓದಿ: ಕಲ್ಯಾಣ-ಪ್ರಭುತ್ವದ ಕ್ರಮಗಳು ʻʻಜನರಂಜನೆʼʼಗಾಗಿ ಎಂದು ಹೀನಾಯಗೊಳಿಸುವ ನವ-ಉದಾರವಾದ

ಎರಡು ರೀತಿಯ ಪ್ರಕರಣಗಳು
ದೇಶ ದೇಶಗಳು ಅನುಸರಿಸುವ ರಫ್ತು-ಪ್ರಧಾನ ಬೆಳವಣಿಗೆಯ ಕಾರ್ಯತಂತ್ರದಲ್ಲಿ ಎರಡು ರೀತಿಯ ಪ್ರಕರಣಗಳಿರುತ್ತವೆ. ಅವುಗಳ ನಡುವೆ ಇರುವ ವ್ಯತ್ಯಾಸವನ್ನು ಗುರುತಿಸಬೇಕಾಗುತ್ತದೆ: ಮೊದಲನೆಯ ಪ್ರಕರಣದಲ್ಲಿ, ದೇಶಗಳು ತಮ್ಮ ರಫ್ತು ಗಳಿಕೆಯನ್ನು ವ್ಯವಸ್ಥಿತವಾಗಿ ಹೆಚ್ಚಿಸಿಕೊಳ್ಳುತ್ತವೆ ಮತ್ತು ಆ ಮೂಲಕ ತಮ್ಮ ಚಾಲ್ತಿ ಖಾತೆಯಲ್ಲಿ ಒಂದು ಬೃಹತ್ ಮೊತ್ತದ ವಿದೇಶಿ ಕರೆನ್ಸಿಯನ್ನು ಹೊಂದಿರುತ್ತವೆ ಮತ್ತು ಆ ಮೂಲಕ ತಮ್ಮ ವಿದೇಶಿ ವಿನಿಮಯ ಮೀಸಲುಗಳನ್ನು ನಿರ್ಮಿಸಿಕೊಳ್ಳುತ್ತವೆ. ಚೀನಾ ಇದಕ್ಕೊಂದು ಪ್ರಮುಖ ಉದಾಹರಣೆಯಾಗಿದೆ. ವಿಶ್ವ ಆರ್ಥಿಕ ಪರಿಸ್ಥಿತಿಯಲ್ಲಿ ಒಂದು ವೇಳೆ ಪ್ರತಿಕೂಲ ಬೆಳವಣಿಗೆಗಳು ಸಂಭವಿಸಿದರೆ, ಇಂಥಹ ದೇಶಗಳು ತಮ್ಮ ಚಾಲ್ತಿ ಖಾತೆಯಲ್ಲಿ ಮಿಕ್ಕಿದ ಪ್ರಮಾಣದಲ್ಲಿ ಸ್ವಲ್ಪ ವ್ಯತ್ಯಾಸವಾಗಬಹುದು ಮತ್ತು ಅವುಗಳು ಇಟ್ಟುಕೊಂಡಿರುವ ವಿದೇಶಿ ವಿನಿಮಯ ಮೀಸಲುಗಳ ಪ್ರಮಾಣವು ಸ್ವಲ್ಪಮಟ್ಟಿಗೆ ತಗ್ಗಬಹುದು. ಹಾಗಾಗಿ, ಅವು ವಿದೇಶಿ ವಿನಿಮಯದ ಯಾವುದೇ ಬಿಕ್ಕಟ್ಟನ್ನು ಎದುರಿಸಬಲ್ಲವು.

ಎರಡನೇ ರೀತಿಯ ಪ್ರಕರಣದಲ್ಲಿ ಅನೇಕ ದೇಶಗಳು ಬರುತ್ತವೆ. ಅವುಗಳ ಚಾಲ್ತಿ ಖಾತೆಗಳು ಅನುಗಾಲವೂ ಕೊರತೆಯಲ್ಲೇ ಇರುತ್ತವೆ. ಹೊರ ದೇಶಗಳಿಂದ ಒಳಹರಿಯುವ ಖಾಸಗಿ ಬಂಡವಾಳ ಹೂಡಿಕೆಯನ್ನು (ಅಂದರೆ, ವಿದೇಶಿ ಕರೆನ್ಸಿಯನ್ನು) ಈ ದೇಶಗಳು ತಮ್ಮ ಆಮದು ಪಾವತಿಗಳಿಗೆ ಬಳಸಿಕೊಳ್ಳುತ್ತವೆ ಮತ್ತು ಆ ಮೂಲಕ ತಮ್ಮ ಚಾಲ್ತಿ ಖಾತೆಯ ಕೊರತೆಯನ್ನು ಸರಿದೂಗಿಸಿಕೊಳ್ಳುತ್ತವೆ. ಈ ದೇಶಗಳು ನಿರ್ಮಿಸಿಕೊಂಡಿರುವ ವಿದೇಶಿ ವಿನಿಮಯ ಮೀಸಲುಗಳು, ಹೊರ ದೇಶಗಳ ಖಾಸಗಿ ಲೇವಾದೇವಿಗಾರರಿಂದ ಪಡೆದ ಸಾಲಗಳೂ ಸೇರಿದಂತೆ ವಿದೇಶಗಳಿಂದ ಪಡೆದ ಸಾಲಗಳಿಂದ ಕೂಡಿರುತ್ತವೆ. ದಕ್ಷಿಣ ಏಷ್ಯಾದ ದೇಶಗಳು ಮತ್ತು ಜಾಗತಿಕ ದಕ್ಷಿಣದ ಹೆಚ್ಚಿನ ದೇಶಗಳು ಈ ಗುಂಪಿನಲ್ಲಿವೆ. ಭಾರತವೂ ಇದೇ ಗುಂಪಿನಲ್ಲಿದೆ.
ಕೆಲವು ಸಂದರ್ಭಗಳಲ್ಲಿ, ಈ ಎರಡನೇ ಗುಂಪಿನ ದೇಶಗಳ ಚಾಲ್ತಿ ಖಾತೆಯ ಕೊರತೆಗಳ ಗಾತ್ರ ಹೆಚ್ಚಿದಾಗ ಆ ದೇಶಗಳ ಪರಿಸ್ಥಿತಿ ದಯನೀಯವಾಗುತ್ತದೆ. ಉದಾಹರಣೆಗೆ, ಕೊರೊನಾ ಕಾರಣದಿಂದ (ಶ್ರೀಲಂಕಾದ ಸಂದರ್ಭದಲ್ಲಿ ಪ್ರವಾಸೋದ್ಯಮ ಆದಾಯ ನಷ್ಟ), ಉಕ್ರೇನ್ ಯುದ್ಧದ ಕಾರಣದಿಂದ ಆಮದು ವಸ್ತುಗಳ ಬೆಲೆಗಳ ಏರಿಕೆಯ ಕಾರಣದಿಂದ, ವಿಶ್ವ ಆರ್ಥಿಕ ಹಿಂಜರಿತದಿAದಾಗಿ ರಫ್ತು ಗಳಿಕೆಯ ಕುಸಿತದಿಂದ (ಬಾಂಗ್ಲಾದೇಶದ ಸಂದರ್ಭದಲ್ಲಿ ಇವೆರಡೂ ಕಾರಣದಿಂದ), ಇಂಥಹ ಕೆಲವು ಬಾಹ್ಯ ಕಾರಣಗಳಿಂದಾಗಿ ಚಾಲ್ತಿ ಖಾತೆಯಲ್ಲಿ ಕೊರತೆ ಹೆಚ್ಚುತ್ತದೆ. ಈ ಕೊರತೆಯ ಗಾತ್ರ ಹೆಚ್ಚಿದಾಗ, ಸಾಮಾನ್ಯವಾಗಿ ಖಾಸಗಿ ಏಜೆಂಟರ ವರ್ತನೆಯಿಂದಾಗಿ, ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಆತಂಕ ಸೃಷ್ಟಿಯಾಗುತ್ತದೆ ಮತ್ತು ಅದು ಅರ್ಥವ್ಯಸ್ಥೆಯ ಮೇಲೆ ಒಂದು ಗಂಭೀರ ಪರಿಣಾಮವನ್ನು ಬೀರುತ್ತದೆ. ಏಕೆಂದರೆ, ಚಾಲ್ತಿ ಖಾತೆ ಕೊರತೆ ಹೆಚ್ಚಿದ ಕಾರಣದಿಂದಾಗಿ ಖಾಸಗಿ ಬಂಡವಾಳದ ಒಳಹರಿವಿನ ಅಗತ್ಯ ಹೆಚ್ಚುತ್ತಿರುವ ಸಮಯದಲ್ಲಿ, ಈ ಕೊರತೆ ಹೆಚ್ಚಿದ ಕಾರಣದಿಂದಲೇ ವಿದೇಶಿ ಬಂಡವಾಳವು ಪಲಾಯನ ಮಾಡುವುದರಿಂದ ಹೀಗಾಗುತ್ತದೆ.

ಐಎಂಎಫ್‌ನ ಉಕ್ಕಿನ ಆಲಿಂಗನ
ಚಾಲ್ತಿ ಖಾತೆಯ ಕೊರತೆ ಹೆಚ್ಚುತ್ತಾ ಹೋದಾಗ, ದೇಶೀಯ ಕರೆನ್ಸಿಯ ಮೌಲ್ಯ ಇಳಿಕೆಯಾಗುತ್ತಾ ಹೋಗುತ್ತದೆ ಎಂದು ಖಾಸಗಿ ಹೂಡಿಕೆದಾರರು ನಿರೀಕ್ಷಿಸುತ್ತಾರೆ. ಆದ್ದರಿಂದ, ತಮ್ಮ ಸ್ವಂತ ಹಿತಾಸಕ್ತಿಯ ಬಗ್ಗೆ ಮಾತ್ರ ಕಾಳಜಿ ವಹಿಸುವ ಈ ಮಂದಿ ತಮ್ಮ ಹೂಡಿಕೆಯ ಹಣವನ್ನು ಹಿಂಪಡೆಯುತ್ತಾರೆ ಮತ್ತು ಆ ಮೂಲಕ ವಿದೇಶಿ ವಿನಿಮಯ ಸಮಸ್ಯೆಯನ್ನು ಉಲ್ಬಣಗೊಳಿಸುತ್ತಾರೆ. ಈ ಸಂಬAಧವಾಗಿ ಒಂದು ವಾಸ್ತವಾಂಶವನ್ನು ಹೇಳುವುದಾದರೆ, ವಿದೇಶಿ ವಿನಿಮಯ ಸಂಬಂಧಿತ ವಿಷಯಗಳನ್ನು ಒಂದು ವೇಳೆ “ಮಾರುಕಟ್ಟೆ”ಯ ವಿವೇಚನೆಗೆ ಬಿಟ್ಟದ್ದೇ ಆದರೆ, ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ದೇಶವು ಎಂದಾದರೂ ಸಮತೋಲನವನ್ನು ತಲುಪುತ್ತದೆಯೇ ಎಂಬುದು ಸ್ಪಷ್ಟವಿಲ್ಲ. ಆದರೆ, ಒಂದು ಸಂದಿಗ್ಧ ಪರಿಸ್ಥಿತಿ ಉದ್ಭವಿಸಿದಾಗ ದೇಶವು ಐಎಂಎಫ್‌ನ ಮೊರೆಹೋಗುತ್ತದೆ. ಐಎಂಎಫ್‌ನಿಂದ ಸಾಲ ಪಡೆದರೆ ಅದು ವಿನಿಮಯ ದರದ ಅಪಮೌಲ್ಯವನ್ನು ತಡೆಯುತ್ತದೆ ಮತ್ತು ಅದರಿಂದಾಗಿ ವಿದೇಶಿ ವಿನಿಮಯ ಮಾರುಕಟ್ಟೆಯು ಒಂದು ರೀತಿಯ ಸಮತೋಲನಕ್ಕೆ ಬರಬಹುದು ಎಂಬ ನಿರೀಕ್ಷೆಯನ್ನು ಖಾಸಗಿ ಹೂಡಿಕೆದಾರರರಲ್ಲಿ ಹುಟ್ಟಿಸುತ್ತದೆ. ಆದರೆ, ಸಾಲ ಪಡೆದಾಗ ಐಎಂಎಫ್ ವಿಧಿಸುವ ಶರತ್ತುಗಳನ್ನು ಪಾಲಿಬೇಕಾಗುತ್ತದೆ – ಈ ಶರತ್ತುಗಳ ಭಾಗವಾಗಿ, ಜನ ಕಲ್ಯಾಣ ವೆಚ್ಚಗಳನ್ನು ಕಡಿತಗೊಳಿಸುವುದು, ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಕೊನೆಗೊಳಿಸುವುದು, ರಾಷ್ಟ್ರದ ಆಸ್ತಿಗಳನ್ನು ವಿದೇಶಿಯರಿಗೆ ಹಸ್ತಾಂತರಿಸುವುದು (ಆಸ್ತಿಗಳ ಈ ಹಸ್ತಾಂತರವನ್ನು ಕೆಲವೊಮ್ಮೆ “ಅಪ-ರಾಷ್ಟ್ರೀಕರಣ” ಎಂದು ಕರೆಯಲಾಗುತ್ತದೆ) ಮುಂತಾದ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ.

ವಿದೇಶಿ ವಿನಿಮಯದ ಕೊರತೆಯ ಆರಂಭಿಕ ಹಂತದಲ್ಲೇ ಅದು ಬಹು ದೊಡ್ಡ ಕೊರತೆಯಾಗಲಿದೆ ಎಂಬAತೆ ಉತ್ಪ್ರೇಕ್ಷೆಗೊಳಿಸುವ ಖಾಸಗಿ ಹೂಡಿಕೆದಾರರ ನಡವಳಿಕೆಯಿಂದಾಗಿ ಈ ಘಟನಾವಳಿಗಳು ಅತ್ಯಲ್ಪಾವಧಿಯಲ್ಲಿ ಸಂಭವಿಸಿ ನಿಜಕ್ಕೂ ಒಂದು ಕೊರತೆಯ ಸನ್ನಿವೇಶವೇ ಸೃಷ್ಟಿಯಾಗುತ್ತದೆ ಮತ್ತು ದೇಶವು ಐಎಂಎಫ್‌ನ ಉಕ್ಕಿನ ಆಲಿಂಗನಕ್ಕೆ ಸಿಕ್ಕಿಕೊಳ್ಳುತ್ತದೆ. ಈ ವಿದ್ಯಮಾನವು, ಏಕೆ “ಪವಾಡ”ಸದೃಶ ದೇಶಗಳು ಇದ್ದಕ್ಕಿದ್ದಂತೆಯೇ “ಭಿಕ್ಷುಕ”ರಾಗಿ ಬದಲಾಗುತ್ತವೆ ಎಂಬುದನ್ನು ವಿವರಿಸುತ್ತದೆ. ರಫ್ತು-ಪ್ರಧಾನ ಬೆಳವಣಿಗೆಯ ಸಮಸ್ಯೆ ಏನೆಂದರೆ, ಮೇಲ್ನೋಟದಲ್ಲಿ ಕಾಣುವ ಅದರ ಯಶಸ್ಸು ಕ್ಷಣಾರ್ಧದಲ್ಲಿ ಮಾಯವಾಗಬಹುದು. ಮತ್ತು, ರಫ್ತು-ಪ್ರಧಾನ ಬೆಳವಣಿಗೆಯ ಅನುಸರಣೆಯು, ಚಾಲ್ತಿ ಕೊರತೆಯನ್ನು ಸಂಬಾಳಿಸುವ ಸಲುವಾಗಿ, ದೇಶವು ಜಾಗತೀಕರಣಗೊಂಡ ಹಣಕಾಸು ಬಂಡವಾಳದ ತಿಕ್ಕಲುತನವನ್ನು ಅವಲಂಬಿಸುವAತೆ ಮಾಡುತ್ತದೆ.

ಈ ವಿದ್ಯಮಾನವು, ತುಲನಾತ್ಮಕವಾಗಿ ಪ್ರಭಾವಶಾಲಿ ಮಾನವ ಅಭಿವೃದ್ಧಿ ಸಾಧನೆಗಳನ್ನು ಮಾಡಿದ ನಮ್ಮ ನೆರೆಯ ಶ್ರೀಲಂಕಾ ಮತ್ತು ಬಾಂಗ್ಲಾದೇಶದಂತಹ ದೇಶಗಳಲ್ಲೂ ಸಂಭವಿಸಿರುವುದನ್ನು ನಾವು ನೋಡಿದ್ದೇವೆ. ವಿಶ್ವ ಅರ್ಥವ್ಯವಸ್ಥೆಯ ಸ್ಥಗಿತತೆಯ ಕಾರಣದಿಂದ ಮೂರನೇ ಜಗತ್ತಿನ ಹಲವಾರು ದೇಶಗಳ ರಫ್ತುಗಳು ಇಳಿಕೆಯಾಗಿರುವುದರಿಂದ, ಮುಂಬರುವ ದಿನಗಳಲ್ಲಿ ಭಿಕ್ಷುಕ ದೇಶಗಳ ಪಟ್ಟಿ ಉದ್ದವಾಗುವ ಸಾಧ್ಯತೆಯಿದೆ. ಅರ್ಥವ್ಯವಸ್ಥೆಯ ಗಾತ್ರ ಮತ್ತು ವಿದೇಶಿ ವಿನಿಮಯ ಮೀಸಲುಗಳ (ಈ ಮೀಸಲುಗಳು ಚಾಲ್ತಿ ಖಾತೆಯಲ್ಲಿ ಮಿಕ್ಕಿದ ಮೊತ್ತದ ಬಾಹುಳ್ಯದಿಂದಲ್ಲ, ಒಳಹರಿದ ದೊಡ್ಡ ಪ್ರಮಾಣದ ಹಣಕಾಸು ಬಂಡವಾಳದಿಂದ ಕೂಡಿವೆ) ಗಾತ್ರ ಇವೆರಡೂ ದೊಡ್ಡದಿರುವುದರ ಹೊರತಾಗಿಯೂ, ಭಾರತದ ಪರಿಸ್ಥಿತಿ ಸುರಕ್ಷಿತವಲ್ಲ. ಆಹಾರ ಧಾನ್ಯಗಳ ಸ್ವಾವಲಂಬನೆ (ಧಾನ್ಯಗಳ ಬಳಕೆಯ ಅತ್ಯಂತ ಕೆಳ ಮಟ್ಟದಲ್ಲಿದ್ದರೂ) ಮತ್ತು ಸಾಮ್ರಾಜ್ಯಶಾಹಿ “ನಿರ್ಬಂಧ”ಗಳಿಗೆ ಒಳಗಾದ ದೇಶಗಳಿಂದ ತೈಲ ಆಮದಿಗೆ ಅವಕಾಶ ಕಲ್ಪಿಸಿದ ವಿದೇಶ ಸಂಬAಧಗಳು ಭಾರತದ ಘನತೆ ಗೌರವಗಳನ್ನು ಉಳಿಸಿವೆ. ಮೋದಿ ಸರ್ಕಾರದ ಮೂರು ಕೃಷಿ ಕಾನೂನುಗಳನ್ನು ಜಾರಿಗೆ ತಂದಿದ್ದರೆ ಆಹಾರ ಧಾನ್ಯಗಳ ಸ್ವಾವಲಂಬನೆ ಕೂಡ ಕಣ್ಮರೆಯಾಗುತ್ತಿತ್ತು. ಆದರೆ ರೈತರು ದೇಶದ ಮರ್ಯಾದೆಯನ್ನು ಉಳಿಸಿದರು.

ಇದನ್ನು ಓದಿ: ವರಮಾನಗಳ ಅಸಮತೆ ಹೆಚ್ಚುವುದರಿಂದಾಗಿಯೇ ಸಂಪತ್ತಿನ ಅಸಮತೆಯೂ ಹೆಚ್ಚುತ್ತದೆ

ಹಣಕಾಸು ಬಂಡವಾಳದ ಹರಿದಾಟದ ಸುಳಿ
ವಿದೇಶ ವ್ಯಾಪಾರ ಸಂಬಂಧಗಳಲ್ಲಿ ಯಾವುದೇ ಬದಲಾವಣೆ ಇಲ್ಲದಿದ್ದರೂ ಸಹ, ದೇಶದ ಆಳುವ ಪಕ್ಷದ ಬದಲಾವಣೆ ಅಥವಾ ಅದೇ ಆಳುವ ಪಕ್ಷದ ಮಂತ್ರಿಮಂಡಲದ ಸದಸ್ಯರೊಬ್ಬರ ಬದಲಾವಣೆಯೂ ಸೇರಿದಂತೆ ಹಲವಾರು ಅಂಶಗಳು ಹಣಕಾಸು ಬಂಡವಾಳದ ಉದ್ದೇಶವಿಲ್ಲದ ಹೊರಹರಿವಿಗೆ ಪ್ರಚೋದನೆಯಾಗಬಹುದು. ಇಂಥಹ ಹೊರಹರಿವು, ವಿನಿಮಯ ದರವನ್ನು ಅಪ-ಮೌಲ್ಯಗೊಳಿಸುವ ಮೂಲಕ, ಮತ್ತಷ್ಟು ಹೊರಹರಿವನ್ನು, ಅದು ಇನ್ನಷ್ಟು ಹೊರಹರಿವನ್ನು ಉಂಟುಮಾಡುತ್ತದೆ. ಆದ್ದರಿಂದ, ಜಾಗತಿಕ ಹಣಕಾಸು ಬಂಡವಾಳ ಹರಿದಾಟದ ಸುಳಿಗೆ ದೇಶವು ಒಡ್ಡಿಕೊಂಡಿರುವುದರಿಂದ, ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿನ ಯಾವುದೇ ಆರಂಭಿಕ ತೊಡರುಗಳು ಇದ್ದಕ್ಕಿದ್ದಂತೆ ದೊಡ್ಡದಾಗಿ ಬಿಡುತ್ತವೆ ಮತ್ತು ವಿನಿಮಯ ಮಾರುಕಟ್ಟೆಯನ್ನು ಅಯೋಮಯಗೊಳಿಸುತ್ತವೆ. ಆದಾಗ್ಯೂ, ಒಂದು ರಫ್ತು-ಪ್ರಧಾನ ಬೆಳವಣಿಗೆಯ ಕಾರ್ಯತಂತ್ರವನ್ನು ಅನುಸರಿಸುವ ಅರ್ಥವ್ಯವಸ್ಥೆಯು ಜಾಗತಿಕ ಹಣಕಾಸು ಬಂಡವಾಳದ ಹರಿವಿಗೆ ಒಡ್ಡಿಕೊಳ್ಳಲೇಬೇಕಾಗುತ್ತದೆ. ಇಲ್ಲದಿದ್ದರೆ ಪಾವತಿ ಶೇಷದ ಇತ್ಯರ್ಥಕ್ಕಾಗಿ ಚಾಲ್ತಿ ಖಾತೆ ಕೊರತೆಗೆ ಹಣ(ವಿದೇಶಿ ವಿನಿಮಯ) ಹೊಂದಿಸಿಕೊಳ್ಳುವುದು ಅಸಾಧ್ಯವಾಗುತ್ತದೆ. ಆಗ ದೇಶವು ತನ್ನ ಚಾಲ್ತಿ ಖಾತೆಯನ್ನು ಸರಿದೂಗಿಸಲು ಆಮದುಗಳನ್ನು ನಿರ್ಬಂಧಿಸಬಹುದು. ಆದರೆ, ಅಂತಹ ನಿರ್ಬಂಧವು ರಫ್ತು-ಪ್ರಧಾನ ಬೆಳವಣಿಗೆಯ ಕಾರ್ಯತಂತ್ರಕ್ಕೆ ಹೊಂದಿಕೆಯಾಗುವುದಿಲ್ಲ. ಏಕೆಂದರೆ, ಇದು ದೇಶದ ಅಂತಾರಾಷ್ಟ್ರೀಯ ಸ್ಪರ್ಧಾತ್ಮಕತೆಗೆ ಒಂದು ಅಡಚಣೆಯಾಗುತ್ತದೆ.

ಇತ್ತೀಚೆಗೆ ಅರ್ಜೆಂಟೀನಾದ ಅಧ್ಯಕ್ಷರಾಗಿ ಚುನಾಯಿತರಾದ ಬಲಪಂಥೀಯ ರಾಜಕಾರಣಿ ಜೆವಿಯರ್ ಮಿಲೀ ಅವರು ಆ ದೇಶವನ್ನು ಪೀಡಿಸಿದ ಅತಿ ಹೆಚ್ಚಿನ ಮಟ್ಟದ ಹಣದುಬ್ಬರ (150%) ಕಾರಣದಿಂದ ಅಧಿಕಾರಕ್ಕೆ ಬಂದಿದ್ದಾರೆ ಎಂದು ಭಾವಿಸಲಾಗಿದೆ ಮತ್ತು ಹಿಂದಿನ ಪೆರೋನಿಸ್ಟ್ ಸರ್ಕಾರವನ್ನು ಹಣದುಬ್ಬರದ ಈ ಮಟ್ಟಿನ ಉಲ್ಬಣಕ್ಕೆ ಹೊಣೆ ಮಾಡಲಾಗಿದೆ. ಬಲಪಂಥೀಯ ಪತ್ರಿಕೆಗಳು ಪೆರೋನಿಸ್ಟ್ರ ಎಡಪಂಥೀಯ ನೀತಿಗಳನ್ನು ಕಟುವಾಗಿ  ಟೀಕಿಸುತ್ತಿವೆ. ಈ ಪತ್ರಿಕೆಗಳು ಸತ್ಯಾಂಶಗಳನ್ನು ವಿಕೃತಗೊಳಿಸುತ್ತಿವೆ. ಅಲ್ಲಿ ಹಣದುಬ್ಬರ ಉಲ್ಬಣಗೊಳ್ಳಲು ಪೆರೋನಿಸ್ಟರ ಎಡಪಂಥೀಯ ನೀತಿಗಳು ಕಾರಣವಲ್ಲ. ಬದಲಿಗೆ, ಅರ್ಜೆಂಟೀನಾದ ಶ್ರೀಮಂತರು ಆ ದೇಶದಿಂದ ಹಣವನ್ನು ಹೊರತೆಗೆದಿರುವುದೇ  ಅಲ್ಲಿನ   ಹಣದುಬ್ಬರ ಹೆಚ್ಚಲು ಕಾರಣವಾಗಿದೆ.   ಹಣಕಾಸಿನ ಈ ಹೊರಹರಿವು   ದೇಶದ ಕರೆನ್ಸಿಯನ್ನು ಅಪ-ಮೌಲ್ಯಗೊಳಿಸಿದೆ. ದೇಶೀಯ ಕರೆನ್ಸಿಯ ಈ ಅಪ-ಮೌಲ್ಯವು, ಹಣಕಾಸು ಹೊರಹರಿಯುವುದನ್ನು ಮತ್ತಷ್ಟು ಹೆಚ್ಚಿಸಿದೆ. ದೇಶೀಯ ಕರೆನ್ಸಿಯ ಅಪ-ಮೌಲ್ಯ ಮತ್ತು ಹಣಕಾಸಿನ ಹೊರಹರಿವು, ಒಂದನ್ನೊAದು ಹಿಂಬಾಲಿಸುತ್ತಾ ಹೋದ ಪರಿಣಾಮವಾಗಿ ಆಮದು ಸರಕು ಸಾಮಗ್ರಿಗಳ ಬೆಲೆಗಳೂ ಹೆಚ್ಚುತ್ತಾ ಹೋಗಿವೆ. ಈ ಹೆಚ್ಚಳವನ್ನು ಸರಕು ಸಾಮಗ್ರಿಗಳ ಅಂತಿಮ ಬೆಲೆಗಳ ರೂಪದಲ್ಲಿ “ರವಾನಿಸಲಾಗಿದೆ” ಎಂಬುದನ್ನು ಗಮನಿಸಬಹುದು.

ಇಲ್ಲೊಂದು ವಿಷವರ್ತುಲವಿದೆ. ಹಣಕಾಸಿನ ಆರಂಭಿಕ ಹೊರಹರಿವು, ಅರ್ಜೆಂಟೀನಾದ ಸಂದರ್ಭದಲ್ಲಿ ಪೆರೋನಿಸ್ಟ್ ಅಲ್ಲದ ಸರ್ಕಾರವು, ಐಎಂಎಫ್‌ನಿಂದ ಸಾಲ ತೆಗೆದುಕೊಳ್ಳುವಂತೆ ಮಾಡುತ್ತದೆ. ಈ ಕ್ರಮವು ದೇಶವನ್ನು ನವ-ಉದಾರವಾದಿ ಆಳ್ವಿಕೆಯೊಂದಿಗೆ ಕಟ್ಟಿಹಾಕಿಕೊಳ್ಳುವಂತೆ ಮಾಡುತ್ತದೆ. ಐಎಂಎಫ್ ಸಾಲವನ್ನು ತೀರಿಸುವ (ಮರುಪಾವತಿಸುವ) ಸಮಯ ಬಂದಾಗ, ಪಾವತಿ ಶೇಷದ ಇತ್ಯರ್ಥಕ್ಕಾಗಿ ಚಾಲ್ತಿ ಖಾತೆ ಕೊರತೆಗೆ ಹಣ (ವಿದೇಶಿ ವಿನಿಮಯ) ಒದಗಿಸಿಕೊಳ್ಳುವ ಸಮಸ್ಯೆ ಬಿಗಡಾಯಿಸುವ ನಿರೀಕ್ಷೆಯು ಹಣಕಾಸಿನ ಮತ್ತಷ್ಟು ಹೊರಹರಿವಿಗೆ ಕಾರಣವಾಗುತ್ತದೆ ಮತ್ತು ಅದು ವಿನಿಮಯದ ಬಿಕ್ಕಟ್ಟನ್ನು ಮತ್ತಷ್ಟು ತೀವ್ರಗೊಳಿಸುತ್ತದೆ. ವಿಷಯವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ರಫ್ತು-ಪ್ರಧಾನ ಬೆಳವಣಿಗೆಯೊಂದಿಗೆ ಸಂಬAಧಿಸಿದ ಆಡಳಿತವು ಅಂತಿಮವಾಗಿ ಅಸ್ಥಿರಗೊಳ್ಳುತ್ತದೆ.

ರಫ್ತು-ಪ್ರಧಾನ ಬೆಳವಣಿಗೆಯ ಪರಿಕಲ್ಪನೆಯು ಯುದ್ಧಗಳ ನಡುವಿನ ಅವಧಿಯ ವಿಶ್ವ ಬಂಡವಾಳಶಾಹಿಯ ಬಿಕ್ಕಟ್ಟಿನಿಂದಾಗಿ ಅಪಖ್ಯಾತಿಗೊಳಗಾಗಿತ್ತು. ಆಗ ಸುಮಾರಾಗಿ ಎಲ್ಲ ಮೂರನೇ ಜಗತ್ತಿನ ದೇಶಗಳಲ್ಲಿ ಆಮದುಗಳ ಬದಲಿಗೆ ಅದೇ ವಸ್ತುಗಳನ್ನು ದೇಶೀಯವಾಗಿ ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸುವ ಪ್ರಕ್ರಿಯೆಯು ಸಂಭವಿಸಿತ್ತು. ನವ-ಉದಾರವಾದದ ಮೂಲಕ, ಮತ್ತೆ ಕಾಣಿಸಿಕೊಂಡ ಆ ಪರಿಕಲ್ಪನೆ ಈಗ ವಿಶ್ವ ಬಂಡವಾಳಶಾಹಿಯು ಹೊಸ ಬಿಕ್ಕಟ್ಟನ್ನು ಎದುರಿಸುತ್ತಿರುವ ಸಂದರ್ಭದಲ್ಲಿ, ಮತ್ತೊಮ್ಮೆ ದೂರಸರಿಯುವ ಬದಲಾವಣೆ ಅಜೆಂಡಾದಲ್ಲಿ ಕಾಣಿಸಿಕೊಳ್ಳುತ್ತಿದೆ.

 

 

Donate Janashakthi Media

Leave a Reply

Your email address will not be published. Required fields are marked *