ಪ್ರೊ. ಆರ್.ರಾಮಕುಮಾರ್
ಸಂಗ್ರಹಾನುವಾದ: ಟಿ.ಸುರೇಂದ್ರ ರಾವ್
ಶ್ರೀಲಂಕಾದ ಅರ್ಥವ್ಯವಸ್ಥೆ ಪಾವತಿ ಬಾಕಿಯ ಗಂಭೀರ ಸಮಸ್ಯೆಯಿಂದಾಗಿ ಒಂದು ಬಿಕ್ಕಟ್ಟನ್ನು ಎದುರಿಸುತ್ತಿದೆ. ಅದರ ವಿದೇಶಿ ವಿನಿಮಯ ಮೀಸಲು ತ್ವರಿತವಾಗಿ ಕರಗುತ್ತಿದೆ. ಬಳಕೆ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳುವುದು ಹೆಚ್ಚೆಚ್ಚು ಕಷ್ಟವಾಗುತ್ತಿದೆ. ಹಿಂದಿನ ಸಾಲಗಳನ್ನು ಮರುಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ. ಶ್ರೀಲಂಕಾದ ಈ ಆರ್ಥಿಕ ಬಿಕ್ಕಟ್ಟು ರಾಜಕೀಯವು ಬಲಪಂಥದತ್ತ ಹೊರಳಿದ್ದು, ಐಎಂಎಫ್ ಷರತ್ತುಗಳು ಮತ್ತು ಯೋಜನೆಗಳ ಕಾರಣದಿಂದ ಎನ್ನುವುದು ಸ್ಪಷ್ಟ.
ಶ್ರೀಲಂಕಾದ ಪ್ರಸಕ್ತ ಬಿಕ್ಕಟ್ಟಿನ ಬೇರುಗಳನ್ನು ವಸಾಹತುಶಾಹಿಯಲ್ಲಿ ಮತ್ತು 2009ರ ನಂತರ ಯುದ್ಧಾನಂತರದ ಅವಧಿಯಲ್ಲಿ ಹಿಡಿದ ದಾರಿಯಲ್ಲಿ ಗುರುತಿಸಬಹುದು.
21ನೇ ಶತಮಾನದಲ್ಲೂ ಶ್ರೀಲಂಕಾದ ಆರ್ಥಿಕ ಹಣೆಬರಹ ಚಹಾ, ರಬ್ಬರು ಮುಂತಾದ ಪ್ರಾಥಮಿಕ ಸರಕುಗಳ ರಫ್ತು ಮತ್ತು ಪ್ರವಾಸೋದ್ಯಮವನ್ನೇ ಅವಲಂಬಿಸಿದೆ. ಇವುಗಳಿಂದ ಬಂದ ವಿದೇಶಿ ವಿನಿಮಯವನ್ನು ಆಹಾರವೂ ಸೇರಿದಂತೆ ಅಗತ್ಯ ಬಳಕೆಯ ಸರಕುಗಳ ಆಮದಿಗೆ ಉಪಯೋಗಿಸುವುದು- ಹೀಗೇ ಮುಂದುವರೆದಿದೆ. ಕಳೆದ ಒಂದು ದಶಕದಲ್ಲಿ ಈ ವಸ್ತುಗಳ ಬೆಲೆಗಳು ಜಾಗತಿಕವಾಗಿ ಕುಸಿದಿದ್ದರಿಂದ ರಫ್ತಿನ ಮೇಲೆ ಭಾರಿ ಹೊಡೆತ ಬಿದ್ದಿತ್ತು. 2009 ನಂತರ ತುಸು ಏರಿಕೆ ಕಂಡ ನಂತರ 2012 ರಿಂದಲೇ ಆರ್ಥಿಕ ಬೆಳವಣಿಗೆಯ ದರ ಇಳಿಕೆಯ ಹಾದಿ ಹಿಡಿದಿತ್ತು. ಯುದ್ಧಾನಂತರದಲ್ಲಿ ಕಂಡಿದ್ದ ಬೆಳವಣಿಗೆ ಬಹಳ ಬೇಗ ಇಳಿದುಹೋಯಿತು. ರಫ್ತು ಬೆಳವಣಿಗೆಯಿಲ್ಲದೆ ಚಾಲ್ತಿ ಲೆಕ್ಕದ ಕೊರತೆ (ಕರೆಂಟ್ ಅಕೌಂಟ್ ಡಿಫಿಸಿಟ್) ವ್ಯಾಪಕವಾಗಿತ್ತು. 2013ರ ನಂತರ ಬೆಳವಣಿಗೆ ದರ ಅರ್ಧಕ್ಕಿಳಿಯಿತು. ಆದರೆ 2009ರಲ್ಲಿ ತೆಗೆದುಕೊಂಡಿದ್ದ 2.6 ಬಿಲಿಯ ಡಾಲರುಗಳ ಐಎಂಎಫ್ ಸಾಲದ ಷರತ್ತಿನಿಂದಾಗಿ ಆದ್ದ ಮಹೇಂದ್ರ ರಾಜಪಕ್ಷೆ ಸರಕಾರ ಯಾವುದೇ ಸರಿಪಡಿಕೆ ಕ್ರಮಕೈಗೊಳ್ಳುವುದು ಸಾಧ್ಯವಾಗಲಿಲ್ಲ. ಏಕೆಂದರೆ ಬಜೆಟ್ ಕೊರತೆ 5%ವನ್ನು ದಾಟುವಂತಿರಲಿಲ್ಲ.
ವಿದೇಶೀ ವಿನಿಮಯದ ಕೊರತೆ ಹೆಚ್ಚುತ್ತಿದ್ದಾಗ 2016ರಲ್ಲಿ ಅಧಿಕಾರಕ್ಕೆ ಬಂದ ಯುಎನ್‌ಪಿ ನೇತೃತ್ವದ ಸಮ್ಮಿಶ್ರ ಸರಕಾರ 1,5ಬಿಲಿಯ ಡಾಲರುಗಳ ಇನ್ನೊಂದು ಸಾಲಕ್ಕೆ ಐಎಂಎಫ್ ಬಳಿ ಹೋಯಿತು. ಇದಕ್ಕೆ ಬಜೆಟ್ ಕೊರತೆಯ ಪ್ರಮಾಣವನ್ನು 3.5%ಕ್ಕೆ ಇಳಿಸಬೇಕು, ‘ತೆರಿಗೆ ಸುಧಾರಣೆ’ ಮಾಡಬೇಕು, ಖರ್ಚುಗಳಲ್ಲಿ ಕಡಿತ ಮಾಡಬೇಕು ಮತ್ತು ಸಾರ್ವಜನಿಕ ವಲಯದ ವಾಣಿಜ್ಯೀಕರಣ ಮಾಡಬೇಕು ಎಂಬ ಷರತ್ತುಗಳನ್ನು ಐಎಂಎಫ್ ಹಾಕಿತು.
ಈ ಐಎಂಎಫ್ ಪ್ಯಾಕೇಜ್ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿತು. ಜಿಡಿಪಿ ಬೆಳವಣಿಗೆ ದರ 2015ರಲ್ಲಿ 5% ಇದ್ದದ್ದು 2019ರಲ್ಲಿ 2.9%ಕ್ಕೆ ಇಳಿಯಿತು. ಹೂಡಿಕೆ ದರ, ಉಳಿತಾಯ ದರ, ಸರಕಾರದ ಆದಾಯ ಎಲ್ಲವೂ ಇಳಿದವು. ಸರಕಾರೀ ಸಾಲದ ಪ್ರಮಾಣ ಏರಿತು.
2019 ರಲ್ಲಿನ ಎರಡು ಘಟನೆಗಳು ಶ್ರೀಲಂಕಾದ ಆರ್ಥಿಕ ಬೆಳವಣಿಗೆಗೆ ಇನ್ನೂ ದೊಡ್ಡ ಪ್ರಮಾಣದಲ್ಲಿ ಪೆಟ್ಟು ನೀಡಿದವು.
ಮೊದಲನೆಯದು, 2019 ರ ಈಸ್ಟರ್ ಹಬ್ಬದ ಸಂದರ್ಭದಲ್ಲಿ ಕೊಲಂಬೋದ ಮೂರು ಚರ್ಚುಗಳು ಮತ್ತು ಮೂರು ಹೋಟಲುಗಳಲ್ಲಿ ಸಂಭವಿಸಿದ ಸ್ಪೋಟವು 253 ಜನರ ಸಾವಿಗೆ ಕಾರಣವಾಗಿತ್ತು ಮತ್ತು ಅದು ಶ್ರೀಲಂಕಾದ ಪ್ರವಾಸೋದ್ಯಮದ ಮೇಲೆ ತೀಕ್ಷ್ಣವಾದ ಪರಿಣಾಮ ಬೀರಿತು. ಪ್ರವಾಸಿಗಳ ಸಂಖ್ಯೆ ಶೇಕಡಾ 18 ರಷ್ಟು ಕುಸಿದಿತ್ತು. ಅದು ವಿದೇಶಿ ವಿನಿಮಯ ಮೊತ್ತದಲ್ಲಿನ ಭಾರೀ ಕೊರತೆಗೆ ಕಾರಣವಾಯಿತು.
ಎರಡನೆಯದಾಗಿ, ಯಾರದ್ದೋ ಅವಿವೇಕದ ಸಲಹೆ ಕೇಳಿಕೊಂಡು ನೂತನ ಅಧ್ಯಕ್ಷ ಗೋಟಬಾಯ ರಾಜಪಕ್ಸೆಯವರು 2019 ರ ಡಿಸೆಂಬರಿನಲ್ಲಿ ವ್ಯಾಟ್ ದರವನ್ನು ಶೇಕಡಾ 15 ರಿಂದ ಶೇಕಡಾ 8 ಕ್ಕೆ ಇಳಿಸಿದರು. ಅದರ ಜತೆಯಲ್ಲೇ, ಇತರ ಹಲವು ತೆರಿಗೆಗಳನ್ನೂ ಇಳಿಸಿದರು, ಕೆಲವನ್ನು ರದ್ದುಗೊಳಿಸಿದರು.
ಇವೆಲ್ಲದರ ಪರಿಣಾಮವಾಗಿ, ಕೋವಿಡ್ ಮಹಾಜಾಡ್ಯಕ್ಕೆ ಮುಂಚೆ ಶ್ರೀಲಂಕಾವು ಜಗತ್ತಿನಲ್ಲೆ ಅತ್ಯಂತ ಕಡಿಮೆ ಪರೋಕ್ಷ ತೆರಿಗೆಯನ್ನು ಹೊಂದಿತ್ತು. ಇದು ಭಾರಿ ಪ್ರಮಾಣದ ಆದಾಯದ ಕೊರತೆಗೆ ಕಾರಣವಾಯಿತು. ಜಿಎಸ್‌ಟಿ/ವ್ಯಾಟ್ ಆದಾಯವು 2019ರಲ್ಲಿ 443,877 ಮಿಲಿಯನ್ ಶ್ರೀಲಂಕಾ ರೂಪಾಯಿಗಳಿದ್ದದ್ದು 2020 ರಲ್ಲಿ 233,786 ಮಿಲಿಯನ್ ಶ್ರೀಲಂಕಾ ರೂಪಾಯಿಗಳಿಗೆ ಕುಸಿಯಿತು, ಅಂದರೆ ಆದಾಯ ಸರಿಸುಮಾರು ಶೇಕಡಾ 50 ರಷ್ಟು ಕುಸಿಯಿತು.
2020 ರಲ್ಲಿ ಕೋವಿಡ್ ಮಹಾರೋಗ ಅಪ್ಪಳಿಸಿತು ಮತ್ತು ಅದು ಪರಿಸ್ಥಿತಿಯನ್ನು ಇನ್ನೂ ಹದಗೆಡಿಸಿತು. ಪ್ರವಾಸಿಗಳ ಸಂಖ್ಯೆಯ ಇಳಿಮುಖ ಹಾಗೂ ಪ್ರವಾಸೋದ್ಯಮದ ಆದಾಯ ಇನ್ನೂ ಕೆಳಕ್ಕಿಳಿಯಿತು. ಬೇಡಿಕೆ ಇಲ್ಲದೇ ಚಹಾ ಹಾಗೂ ರಬ್ಬರ್ ರಫ್ತು ಕೂಡ ಕುಸಿಯಿತು. ಜಗತ್ತಿನ ಇತರ ಭಾಗಗಳಲ್ಲಿ ಇರುವ ಅನಿವಾಸಿ ಶ್ರೀಲಂಕನ್ನರು ಉದ್ಯೋಗ ಕಳೆದುಕೊಂಡ ಕಾರಣ ಅವರು ಕಳಿಸುತ್ತಿದ್ದ ಹಣ ನಿಂತು ಹೋಗಿ ವಿದೇಶಿ ವಿನಿಮಯ ಮೊತ್ತವೂ ಪಾತಾಳಕ್ಕಿಳಿಯಿತು.
ಕೋವಿಡ್ ಅಂಟುಜಾಡ್ಯದ ಕಾರಣ ಸರ್ಕಾರವು ವೆಚ್ಚದ ಬಜೆಟನ್ನು ಹೆಚ್ಚಿಸಲೇ ಬೇಕಾಯಿತು. ಆದಾಯಗಳು ಕುಸಿಯುತ್ತಿದ್ದ ಕಾರಣ, ಹಣಕಾಸಿನ ಕೊರತೆ ಶೇಕಡಾ 10 ಕ್ಕಿಂತಲೂ ಹೆಚ್ಚಾಯಿತು. 2019ರಲ್ಲಿ ಸಾರ್ವಜನಿಕ ಸಾಲ ಜಿಡಿಪಿಯ 94% ತಲುಪಿದ್ದರೆ, 2021ರಲ್ಲಿ ಅದು 119%ಕ್ಕೇರಿತು. ಫೆಬ್ರವರಿ 2022ರಲ್ಲಿ, ಐಎಂಎಫ್ ಇದಕ್ಕೆ ಮೂರು ಕಾರಣಗಳನ್ನು ಗುರುತಿಸಿತು: ಕೋವಿಡ್ ಅಂಟುಜಾಡ್ಯಕ್ಕಿಂತ ಮುಂಚಿನ ತೆರಿಗೆ ಕಡಿತಗಳು, ಆದಾಯದ ದುರ್ಬಲ ಕಾರ್ಯನಿರ್ವಹಣೆ, ಮತ್ತು ಹೆಚ್ಚಾದ ಲಾಕ್‌ಡೌನ್ ಖರ್ಚುಗಳು.
ಇಂತಹ ಸಮಯದಲ್ಲಿ ಸಾವಯವ ವ್ಯವಸಾಯದ ವಶೀಲಿ ಗುಂಪು ಅದಾಗಲೇ ಹದಗೆಟ್ಟಿದ್ದ ಪರಿಸ್ಥಿತಿಯನ್ನು ಮತ್ತಷ್ಟು ಕೆಡಿಸಲು ಪ್ರವೇಶ ಮಾಡಿತು. ದೇಶೀಯ ವಿಜ್ಞಾನ ವಿರೋದಿ ಉತ್ಸಾಹಿಗಳು, ಮತ್ತು ವಂದನಾ ಶಿವರಂತಹ ಹೊರಗಿನ ಸಲಹೆಗಾರರು ‘ರಸಗೊಬ್ಬರಗಳ ಆಮದನ್ನು ನಿಲ್ಲಿಸಿದರೆ ನಿಮ್ಮ ವಿದೇಶಿ ವಿನಿಮಯ ಮೊತ್ತದ ಮೇಲಿನ ಒತ್ತಡವನ್ನು ಕಡಿಮೆ ಮಾಡಬಹುದು’ ಎಂಬ ಉಪದೇಶ ಮಾಡಿದರು.
ರಾಜಪಕ್ಸೆ ಅದಕ್ಕೆ ಒಪ್ಪಿದರು. ತಾನೊಬ್ಬ ಸಾವಯವ ಕೃಷಿಯ ಉದ್ಧಾರಕ ಎಂದು ತನಗೆ ತಾನೇ ಸೋಗು ಹಾಕಿಕೊಂಡ ರಾಜಪಕ್ಸೆ, ಮೇ 2021 ರಿಂದ ಎಲ್ಲಾ ರೀತಿಯ ರಾಸಾಯನಿಕ ಗೊಬ್ಬರಗಳ ಆಮದನ್ನು ನಿಷೇಧಿಸಿದರು. ಅದರ ವಿಧ್ವಂಸಕ ಪರಿಣಾಮಗಳು ದೇಶವನ್ನು ದಿವಾಳಿಯಂಚಿಗೆ ತಳ್ಳಿದವು.
ರಾಜಪಕ್ಸೆಯ ‘ಸಾವಯವ ಸಾಹಸ’ವನ್ನು ಹಲವಾರು ಪಾಶ್ಚಿಮಾತ್ಯ ಪರಿಸರವಾದಿ ಗುಂಪುಗಳು ಕೊಂಡಾಡಿದವು ಮತ್ತು ಬೆಂಬಲಿಸಿದವು. ಅವರನ್ನು ನಾವು “ಹಸಿರು ಸಾಮ್ರಾಜ್ಯವಾದಿಗಳು” ಎಂದು ಕರೆಯೋಣ, ಜಾಗತಿಕ ಇಂಗಾಲ ಬಜೆಟ್ಟನ್ನು ತಮ್ಮ ವಸಾಹತು ಮಾಡಿಕೊಳ್ಳಲು ಪಾಶ್ಚಿಮಾತ್ಯ ಏಜಂಟರುಗಳ ಪ್ರಯತ್ನಗಳವು, ಇಂಗಾಲದ ಹೊರಸೂಸುವಿಕೆಗಳಿಗೆ ಅಭಿವೃದ್ಧಿಶೀಲ ದೇಶಗಳು ತಮ್ಮದೇ ಆದ ನ್ಯಾಯಯುತ ಪಾಲು ಪಡೆಯುವುದನ್ನು ನಿರಾಕರಿಸಿದವು.
ಶ್ರೀಲಂಕಾದ ಸಾವಯವ ಕೃಷಿ ನೀತಿಯು ವಿನಾಶಕಾರಿಯಾಯಿತು. ಐಎಂಎಫ್ ಪ್ರಕಾರ, “ರಾಸಾಯನಿಕ ಗೊಬ್ಬರ ನಿಷೇಧದಿಂದ ಕೃಷಿ ಉತ್ಪಾದನೆಯ ಮೇಲೆ ನಿರೀಕ್ಷಿತ ಪರಿಣಾಮಕ್ಕಿಂತಲೂ ಇನ್ನೂ ಕೆಟ್ಟದಾಗಿಯೇ ಇತ್ತು.”
ಇನ್ನೂ ಮುಂದುವರಿದು ಅದು “ಅದರ ಬಳಕೆಯ ಮತ್ತು ರಾಸಾಯನಿಕ ಗೊಬ್ಬರದ ಆಮದಿನ ಮೇಲಿನ ತಾತ್ಕಾಲಿಕ ತಡೆಯಿಂದಾಗಿ ಕೃಷಿ ಉತ್ಪಾದನೆಯ ಮೇಲೆ ಕೆಟ್ಟ ಪರಿಣಾಮ ಬೀರಿತು ಹಾಗೂ ಕೆಲವು ಆಮದನ್ನು ತಡೆ ಹಿಡಿದ ಕಾರಣ ಚೇತರಿಕೆಯು ಇನ್ನೂ ನಿಧಾನವಾಯಿತು” ಎಂದು ಹೇಳಿದೆ.
ಹೀಗೆ, ಕೃಷಿ ಉತ್ಪಾದನೆ ಕುಂಠಿತವಾಯಿತು; ಆಹಾರ ಕೊರತೆಯು ಹಣದುಬ್ಬರ ಸೃಷ್ಟಿಸಿತು; ಆಹಾರ ಆಮದಿನ ಅಗತ್ಯ ಬಿತ್ತು. ಚಹಾ ಹಾಗೂ ರಬ್ಬರ್ ಉತ್ಪಾದನೆ ಮತ್ತು ರಫ್ತು ಕಷ್ಟವಾಯಿತು. ವಿದೇಶಿ ವಿನಿಮಯ ಮೊತ್ತದ ಮೇಲಿನ ಒತ್ತಡ ಕಡಿಮೆಯಾಗುವ ಬದಲು ಹೆಚ್ಚಾಯಿತು.
“ದಯಮಾಡಿ ನನ್ನನ್ನು ಅವನಿಂದ ಕಾಪಾಡಿ”
ಇತ್ತ ದಿವಾಳಿ- ಅತ್ತ ಮತ್ತಷ್ಟು ಸಾಲ – ವ್ಯಂಗ್ಯಚಿತ್ರ: ಅಲೋಕ್ ನಿರಂತರ್
ಐಎಂಎಫ್‌ನ ಉದ್ದೇಶಗಳು ಎಂದಿನಂತೆ ತೀವ್ರ ಅನುಮಾನಕ್ಕೊಳಗಾದವು. ಮೇಲೆ ಹೇಳಿದಂತೆ, 2016 ರಲ್ಲೇ, ‘ಆರ್ಥಿಕ ಸುಧಾರಣೆ’ಯ ಯೋಜನೆಗೆ ಒತ್ತಾಸೆ ನೀಡಲು ಐಎಂಎಫ್‌ನೊಂದಿಗೆ 1.5 ಬಿಲಿಯನ್ ಅಮೆರಿಕ ಡಾಲರಿನ ಸಾಲದ 36 ತಿಂಗಳು ವಿಸ್ತರಣೆಯ ಇಎಫ್‌ಎಫ್ ಒಪ್ಪಂದಕ್ಕೆ ಶ್ರೀಲಂಕಾ ಮುಂದಾಯಿತು. ಅದಕ್ಕೆ, ಐಎಂಎಫ್ ವಿಧಿಸಿದ ಷರತ್ತುಗಳು ವಾಷಿಂಗ್ ಟನ್ ಒಮ್ಮತದ ಮಾದರಿಗಳಾಗಿದ್ದವು: ತೆರಿಗೆ ನೀತಿಗಳು ಹಾಗೂ ಆಡಳಿತ ಸುಧಾರಣೆ; ವೆಚ್ಚದ ಮೇಲಿನ ನಿಯಂತ್ರಣ; ಸರ್ಕಾರಿ ಸಂಸ್ಥೆಗಳನ್ನು ವ್ಯಾಪಾರೀಕರಣ ಮಾಡುವುದು; ವಿನಿಮಯ ದರಗಳು ಸಡಿಲವಾಗಿರಬೇಕು; ಪೈಪೋಟಿಗೆ ಉತ್ತೇಜನ; ಮತ್ತು ಮುಕ್ತ ಹಣಹೂಡಿಕೆ ವಾತಾವರಣ.
ಮೂರು ವರ್ಷಗಳ ನಂತರ, 2019ರಲ್ಲಿ, “ಇಎಫ್‌ಎಫ್ ಯೋಜನೆಗೆ ಬದ್ಧತೆ”, “ಆದಾಯ ಆಧಾರಿತ ಹಣಕಾಸು ಕ್ರೋಢೀಕರಣಕ್ಕೆ ಮಾಡಿದ ಪ್ರಯತ್ನಗಳು”, “ಹೆಚ್ಚಿನ ವಿನಿಮಯ ದರ ಸಡಿಲತೆ ಅಡಿಯಲ್ಲಿ, ನಿಧಿಯನ್ನು ಬಲಪಡಿಸುವುದು”, ಮತ್ತು “ವಿವೇಕಯುತ ಹಣಕಾಸಿನ ನಿಲುವು” ನಂತಹ ಕಾರ್ಯಕ್ರಮಗಳನ್ನು ಜಾರಿ ಮಾಡಿದ ಶ್ರೀಲಂಕಾವನ್ನು ಐಎಂಎಫ್ ಹಾಡಿ ಹೊಗಳಿ ಕೊಂಡಾಡಿತು.
ವಾಸ್ತವದಲ್ಲಿ ಐಎಂಎಫ್ ಸುಧಾರಣಾ ಕ್ರಮಗಳಿಂದಾಗಿ 2016-2019 ರ ಅವಧಿಯ ಅನುಭವಗಳು ಶ್ರೀಲಂಕಾದ ಜನರಿಗೆ ತೀವ್ರ ಯಾತನಾಮಯವಾಗಿದ್ದವು. ಜಿಡಿಪಿ ಬೆಳವಣಿಗೆ ದರ ಮತ್ತಷ್ಟು ಕುಸಿಯಿತು. ಆದಾಯ ಮತ್ತು ಜಿಡಿಪಿ ನಡುವಿನ ಅನುಪಾತ ಇಳಿಮುಖವಾಯಿತು. (ಕಾರ್ಪೊರೇಟ್ ತೆರಿಗೆ ದರವನ್ನು ಶೇಕಡಾ 28 ರಿಂದ ಶೇಕಡಾ 24 ಕ್ಕೆ ಇಳಿಸಲಾಗಿತ್ತು). ಸಾರ್ವಜನಿಕ ಸಾಲ ಶೇಕಡಾ 30ಕ್ಕೆ ಏರಿತ್ತು. ಆಗ 2019ರಲ್ಲಿ ಇನ್ನೂ ವಿಪರೀತ ಹಾನಿ ಮಾಡಲು ರಾಜಪಕ್ಸೆ ಬಂದರು.
ಆದರೆ ಶ್ರೀಲಂಕಾಗೆ ಇದು ಐಎಂಎಫ್‌ನೊಂದಿಗಿನ ಮೊದಲ ಮುಖಾಮುಖಿಯಾಗಿರಲಿಲ್ಲ. 1970 ರಲ್ಲೇ ಶ್ರೀಲಂಕಾವು ನವ ಉದಾರವಾದಿ ನೀತಿಯನ್ನು ಜಾರಿ ಮಾಡಿದ ದಕ್ಷಿಣ ಏಶಿಯಾದ ಮೊದಲ ದೇಶವಾಗಿತ್ತು. ಈ ಐಎಂಎಫ್ ಪ್ರಣೀತ ಸುಧಾರಣೆಗಳ ಜತೆಯಲ್ಲೇ ಅಲ್ಪಸಂಖ್ಯಾತರ ದಮನ ಹಾಗೂ ಕಾರ್ಮಿಕ ಸಂಘಟನೆಗಳು ಮತ್ತು ಎಡಪಂಥೀಯರ ಮೇಲೆ ದಾಳಿ ಪ್ರಾರಂಭವಾದವು. ಇವೆಲ್ಲವೂ ಯುಧ್ಧಕ್ಕೆ ಮೊದಲು ನಡೆದವು.
ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟು ಮತ್ತು ರಾಜಕೀಯವು ಬಲಪಂಥದತ್ತ ಹೊರಳಿದ್ದು ಐಎಂಎಫ್ ಷರತ್ತುಗಳು ಮತ್ತು ಯೋಜನೆಗಳ ಕಾರಣದಿಂದ ಎನ್ನುವುದು ಸ್ಪಷ್ಟ.
ಐಎಂಎಫ್ ಮಾದರಿಯು ಎಲ್ಲೂ ಉದ್ಧಾರ ಮಾಡಲಿಲ್ಲ ಎನ್ನುವುದು ಸರ್ವವಿದಿತ, ಮತ್ತು ಅಲ್ಲಿಯ ಎಲ್ಲಾ ರೀತಿಯ ರಾಜಕೀಯ ಪಕ್ಷಗಳ ಅವ್ಯವಹಾರ ಕೂಡ ಅದಕ್ಕೆ ಮುಖ್ಯ ಕಾರಣವಾಗಿವೆ. ಮತ್ತು ನರೇಂದ್ರ ಮೋದಿಯವರಿಂದ ಹಾಡಿ ಹೊಗಳಲ್ಪಟ್ಟ ರಾಜಪಕ್ಸೆಯ ಕೃಷಿಯಲ್ಲಿನ ಹುಸಿ ವಿಜ್ಞಾನದ ಆಲಿಂಗನವು ಪರಿಸ್ಥಿತಿಯನ್ನು ಇನ್ನೂ ಹದಗೆಡಿಸಿತು.
ಪ್ರಾಯಶಃ ಶ್ರೀಲಂಕಾವು ಈಗ ಇನ್ನೊಂದು ಐಎಂಎಫ್ ಸಾಲವನ್ನು, ಇನ್ನೂ ಕಟ್ಟುನಿಟ್ಟಾದ ಷರತ್ತುಗಳೊಂದಿಗೆ ಪಡೆಯಬಹುದು. ಅದು ಮತ್ತೊಮ್ಮೆ ಹಣದುಬ್ಬರ ಇಳಿಸುವ ಸಾಹಸಕ್ಕೆ ನಾಂದಿಯಾಗಬಹುದು. ಇದು ಹಾಗೂ ಬಲಪಂಥದತ್ತ ರಾಜಕೀಯ ಪಲ್ಲಟ ಎರಡೂ ಜನಜೀವನ ಮತ್ತು ಅವರ ಕೆಲಸದ ಮೇಲೆ ತೀವ್ರತರದ ಪರಿಣಾಮ ಬೀರಲಿವೆ.