ವಿದ್ಯುತ್ ತಿದ್ದುಪಡಿ ಮಸೂದೆ-2025: ಎಲ್ಲವೂ ಕೇಂದ್ರ ಮತ್ತು ಕಾರ್ಪೊರೇಟ್ ಗಳಿಗೆ

ವಿದ್ಯುತ್ ತಿದ್ದುಪಡಿ ಕರಡು ಮಸೂದೆ- 2025 ಅನ್ನು ಕೇಂದ್ರ ವಿದ್ಯುತ್ ಸಚಿವಾಲಯ ಬಿಡುಗಡೆ ಮಾಡಿದೆ. ಸಾರ್ವಜನಿಕ ವಲಯದಲ್ಲಿನ ವಿದ್ಯುತ್ ಕ್ಷೇತ್ರವನ್ನು ಬೆಂಬಲಿಸಿ, ಉಳಿಸಿ, ಬೆಳೆಸುವ ಬದಲಾಗಿ, ದೇಶದಲ್ಲಿನ ವಿದ್ಯುತ್ ಕ್ಷೇತ್ರವನ್ನು ಬೃಹತ್ ಪ್ರಮಾಣದಲ್ಲಿ ಖಾಸಗೀಕರಣ, ವ್ಯಾಪಾರೀಕರಣ ಹಾಗೂ ಕೇಂದ್ರೀಕರಣ ಮಾಡುವುದಕ್ಕೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಒತ್ತು ಕೊಟ್ಟಿದೆ. ಈ ಮಸೂದೆಯಲ್ಲಿ “ಪರಿಹಾರ ಮತ್ತು ಬಳಕೆದಾರರ ಆಯ್ಕೆ”ಗೆ ಅವಕಾಶ ಕೊಡಲಾಗಿದೆ. ಗೃಹ ಬಳಕೆಗೆ, ಕೃಷಿ ಬಳಕೆಗೆ ಕೂಡಾ ಖಾಸಗಿ ಸಂಸ್ಥೆಗಳು ನಿಗದಿ ಪಡಿಸಿದ ದರಗಳನ್ನು ಎಲ್ಲರೂ ಪಾವತಿಸಲೇ ಬೇಕಾಗುತ್ತದೆ. ಮುಂದಿನ ಐದು ವರ್ಷಗಳಲ್ಲಿ ಸಬ್ಸಿಡಿಗಳನ್ನು ಕೈಬಿಡಲಾಗುತ್ತದೆ. ಅಲ್ಲದೇ ವಿದ್ಯುತ್ ಬಳಕೆದಾರರ ಹಾಗೂ ವಿದ್ಯುತ್ ಕ್ಷೇತ್ರದಲ್ಲಿನ ಲಕ್ಷಾಂತರ ಉದ್ಯೋಗಿಗಳ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಹತ್ತಿಕ್ಕಲಾಗುತ್ತಿದೆ. ಇದರಿಂದಾಗಿ ದೇಶದ ಫೆಡರಲ್‌ ಸಂರಚನೆಗೇ ಪೆಟ್ಟು ಬೀಳುತ್ತದೆ.‌

– ಸಿ. ಸಿದ್ದಯ್ಯ

ವಿದ್ಯುತ್ (ತಿದ್ದುಪಡಿ) ಮಸೂದೆ-2025 ರ ಕರಡನ್ನು ಕೇಂದ್ರ ಸರ್ಕಾರದ ವಿದ್ಯುತ್ ಇಲಾಖೆ ಅಕ್ಟೋಬರ್ 9 ರಂದು ಬಿಡುಗಡೆ ಮಾಡಿದೆ. ವಿದ್ಯುತ್ ಕಾಯಿದೆ- 2003 ಜಾರಿಯಾಗಿ 22 ವರ್ಷಗಳ ನಂತರ ಆ ಕಾಯಿದೆಗೆ ತಿದ್ದುಪಡಿ ಮಸೂದೆಯೊಂದನ್ನು ರಚಿಸಲಾಗಿದೆ. ವಿವಿಧ ಕೇಂದ್ರ ಸರ್ಕಾರಿ ಇಲಾಖೆಗಳು ಮತ್ತು ರಾಜ್ಯ ಸರ್ಕಾರಗಳು ಈ ಕರಡಿನ ಬಗ್ಗೆ ತಮ್ಮ ಅಭಿಪ್ರಾಯಗಳನ್ನು 30 ದಿನಗಳಲ್ಲಿ ಕೇಂದ್ರ ವಿದ್ಯುತ್ ಇಲಾಖೆಗೆ ಕಳುಹಿಸುವಂತೆ ನಿರ್ದೇಶಿಸಲಾಗಿದೆ. ಈ ಮಸೂದೆ ಮತ್ತು ಕೇಂದ್ರದ ಬೆಂಬಲದೊಂದಿಗೆ 57 ಪುಟಗಳ ದೀರ್ಘ ದಾಖಲೆಗಳನ್ನು ನೋಡಿದರೆ ದೇಶ, ಜನರು ಮತ್ತು ವಿದ್ಯುತ್ ವಲಯಕ್ಕೆ ಮುಂದೆ ಬರುವ ಅಪಾಯ ಬಹಿರಂಗವಾಗುತ್ತದೆ. ಸ್ಪಷ್ಟವಾಗಿ ಹೇಳುವುದಾದರೆ, ಇದು ವಿದ್ಯುತ್ ವಿತರಣಾ ವಲಯವನ್ನು ಖಾಸಗೀಕರಣಗೊಳಿಸುವುದು ಮತ್ತು ರಾಜ್ಯಗಳನ್ನು ವಿದ್ಯುತ್ ಕ್ಷೇತ್ರದಲ್ಲಿ ಕೇವಲ ಪ್ರತಿಮೆಗಳಾಗಿ ಪರಿವರ್ತಿಸುವ ಮೂಲಕ ಕೇಂದ್ರ ಸರ್ಕಾರದ ಶಕ್ತಿಯನ್ನು ಹೆಚ್ಚಿಸುವುದಾಗಿದೆ.

ಈ ಮಸೂದೆಯು ವಿದ್ಯುತ್ ಉತ್ಪಾದನೆ, ವಿತರಣೆ, ಎಲ್ಲವನ್ನೂ ಖಾಸಗಿ ಕಾರ್ಪೊರೇಟ್ ಸಂಸ್ಥೆಗಳ ತೆಕ್ಕೆಗೆ ಒಪ್ಪಿಸುವ ದೂರಾಲೋಚನೆಯಿಂದ ಕೂಡಿದೆ. ಗೃಹಬಳಕೆ, ಕೃಷಿ , ಜೀವನಾಧಾರ ಚಟುವಟಿಕೆಗಳಿಗಾಗಿ ವಿದ್ಯುತ್ ಅಗತ್ಯ. ಅದು ಜನರ ಹಕ್ಕು ಕೂಡಾ. ಜನತೆಯ ವಿವಿಧ ದೀರ್ಘ ಹೋರಾಟಗಳ ಮೂಲಕ ಪಡೆದ ಸೌಲಭ್ಯಗಳನ್ನು ಈ ಮಸೂದೆಯು ಕಸಿದುಕೊಳ್ಳುತ್ತಿದೆ. ಕಾರ್ಪೊರೇಟ್ ಸಂಸ್ಥೆಗಳ ಹಿತ ಕಾಯುವುದಕ್ಕಾಗಿ ಸರಕಾರ ಈ ಪ್ರಯತ್ನಗಳನ್ನು ಮಾಡುತ್ತಿದೆ.

ಇದನ್ನೂ ಓದಿ: ಶಿವಮೊಗ್ಗ | ₹ 3,000 ಕೋಟಿ ವೆಚ್ಚದಲ್ಲಿ 800 ಕರ್ನಾಟಕ ‍ಪಬ್ಲಿಕ್ ಶಾಲೆ ಗೆ ಮುಖ್ಯಮಂತ್ರಿ ಚಾಲನೆ

ಸಾರ್ವಜನಿಕ ಕ್ಷೇತ್ರದ ಮೂಲಭೂತ ಸೌಲಭ್ಯಗಳ ಬಳಕೆಗೆ ಅವಕಾಶ

‘ವಿದ್ಯುತ್ ತಿದ್ದುಪಡಿ ಮಸೂದೆ 2025’ರ ಸೆಕ್ಷನ್ 14, 42 ಮತ್ತು 43ರ ಮೂಲಕ ಬಹು ವಿಧದ ಪರವಾನಿಗೆ ನೀಡಲು ಅವಕಾಶ ಇದೆ. ಸಾರ್ವಜನಿಕ ಕ್ಷೇತ್ರದ ಮೂಲಭೂತ ಸೌಲಭ್ಯಗಳಾದ ಕಂಬಗಳು, ಕಛೇರಿಗಳು, ಸಿಬ್ಬಂದಿ, ವಿತರಣಾ ವ್ಯವಸ್ಥೆ ಎಲ್ಲವನ್ನೂ ಖಾಸಗಿಯವರು ಯಾವುದೇ ಬಂಡವಾಳ ಹೂಡಿಕೆಯಿಲ್ಲದೇ ತಮ್ಮ ಲಾಭದ ಉದ್ದೇಶಕ್ಕೆ ಬಳಸಿಕೊಳ್ಳಲು ಅವಕಾಶ ಮಾಡಿಕೊಡಲಾಗುತ್ತಿದೆ. ಇವುಗಳನ್ನು ಬಳಸುವುದಕ್ಕಾಗಿ ಖಾಸಗಿ ಡಿಸ್ಕಾಂಗಳು ಶುಲ್ಕ ಪಾವತಿಸಬೇಕಾಗುತ್ತದೆ ಎಂದು ಮಸೂದೆ ಹೇಳುತ್ತದೆ, ಆದರೆ ಅದು ನಾಮಮಾತ್ರವಾಗಿರುತ್ತದೆ ಎಂಬುದು ಬಹಿರಂಗ ರಹಸ್ಯ. ಇದು ವಿದ್ಯುತ್ ಕ್ಷೇತ್ರದ ಖಾಸಗೀಕರಣಕ್ಕೆ ಹಿಂಬಾಗಿಲಿನ ಮೂಲಕ ಅವಕಾಶ ಮಾಡಿಕೊಡುವುದೇ ಆಗಿದೆ.

ವಿದ್ಯುತ್ ತಿದ್ದುಪಡಿ ಮಸೂದೆಯ ಸೆಕ್ಷನ್ 58, 64, 126 ಹಾಗೂ 127ರ ಪ್ರಕಾರ ವಿದ್ಯುತ್ ಗ್ರಾಹಕರ ರಕ್ಷಣೆ ಮತ್ತು ಕಾನೂನಾತ್ಮಕ ಸ್ವಾತಂತ್ರ್ಯದ ಕಡಿತಕ್ಕೆ ಅವಕಾಶ ಮಾಡಿಕೊಡುತ್ತದೆ. ವಿದ್ಯುತ್ ವಿತರಣೆಯ ಗುಣಮಟ್ಟವು ಹಣಕಾಸನ್ನೇ ಅವಲಂಬಿಸಿರುತ್ತದೆ. DISCOMಗಳು ಹೆಚ್ಚು ಪಾವತಿಸುವ ಬಳಕೆದಾರರನ್ನು ಒಮ್ಮೆ ಕಳೆದುಕೊಂಡರೆ, ಅವುಗಳು ತಮ್ಮ ಸೇವಾ ಗುಣಮಟ್ಟವನ್ನು ಕಾಪಾಡಿಕೊಳ್ಳುವುದು ಕಷ್ಟ ಸಾಧ್ಯವಾಗುತ್ತದೆ. ಈ ತಿದ್ದುಪಡಿಯು ಬಳಕೆದಾರರ ಮೇಲೆ ಹೆಚ್ಚಿನ ಹೊರೆ ಹಾಕುವುದಕ್ಕೆ ಅವಕಾಶ ಮಾಡಿಕೊಡುತ್ತದೆ ಅಲ್ಲದೇ, ಸೇವಾ ಗುಣಮಟ್ಟದ ಕುಸಿತಕ್ಕೂ ಕಾರಣವಾಗುತ್ತದೆ. ತಿದ್ದುಪಡಿ

‘ಎಲೆಕ್ಟ್ರಿಕ್ ಲೈನ್ ಪ್ರಾಧಿಕಾರ’ ರಚನೆ

ಖಾಸಗಿ ಡಿಸ್ಕಾಮ್‌ ಗಳಿಗೆ ಅಧಿಕಾರ ಒದಗಿಸುವ ಸಲುವಾಗಿ, ಈ ಮಸೂದೆಯಲ್ಲಿ ‘ಎಲೆಕ್ಟ್ರಿಕ್ ಲೈನ್ ಪ್ರಾಧಿಕಾರ’ವನ್ನು ಹೊಸದಾಗಿ ಪರಿಚಯಿಸಲಾಗಿದೆ. ಹಿಂದಿನ ರಾಜ್ಯ ವಿದ್ಯುತ್ ಮಂಡಳಿಗಳು ಮತ್ತು ಅವುಗಳ ಉತ್ತರಾಧಿಕಾರಿಯಾದ ಡಿಸ್ಕಾಂಗಳು, ವಿದ್ಯುತ್ ಮಾರ್ಗಗಳನ್ನು ಹಾಕುವ ಮತ್ತು ಶಾಶ್ವತ ರಚನೆಗಳು ಮತ್ತು ಸ್ಥಿರ ಆಸ್ತಿಗಳ ಬಗ್ಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವ ಅಧಿಕಾರ ಹೊಂದಿದ್ದವು. ಈಗ, ‘ಎಲೆಕ್ಟ್ರಿಕ್ ಲೈನ್ ಪ್ರಾಧಿಕಾರ’ದ ಹೆಸರಿನಲ್ಲಿ ಅಂತಹ ಎಲ್ಲಾ ಅಧಿಕಾರಗಳನ್ನು ಖಾಸಗಿ ಡಿಸ್ಕಾಂಗಳಿಗೆ ಹಸ್ತಾಂತರಿಸಲು ಪ್ರಸ್ತಾಪಿಸಲಾಗಿದೆ. ಮತ್ತೊಂದೆಡೆ, ಸರ್ಕಾರಿ ಡಿಸ್ಕಾಂಗಳ ಅಸ್ತಿತ್ವದಲ್ಲಿರುವ ಮೂಲಸೌಕರ್ಯವನ್ನು ಖಾಸಗಿ ಡಿಸ್ಕಾಂಗಳು  ಬಳಸಲು ಅನುವು ಮಾಡಿಕೊಡಲು ‘ಎಲೆಕ್ಟ್ರಿಕ್ ಲೈನ್ ಪ್ರಾಧಿಕಾರ’ ಕೆಲವು ಹೊಸ ವಿಭಾಗಗಳನ್ನು ಸೇರಿಸಲಾಗಿದೆ. ತಿದ್ದುಪಡಿ

ಪರಿಹಾರ ಮತ್ತು ಬಳಕೆದಾರರ ಆಯ್ಕೆಗೆ ಅವಕಾಶ

“ಪರಿಹಾರ ಮತ್ತು ಬಳಕೆದಾರರ ಆಯ್ಕೆ” ಹೆಸರಿನಲ್ಲಿ ಖಾಸಗಿಯವರ ಪಾಲು ಮಾಡುವುದು, ಆ ಮೂಲಕ ಖಾಸಗಿಯವರ ಲಾಭದ ಕಾರಣಕ್ಕಾಗಿ ಕೈಗಾರಿಕಾ ಮತ್ತು ವಾಣಿಜ್ಯ ಉದ್ದೇಶಕ್ಕಾಗಿ ಬಳಸುವ ವಿದ್ಯುತ್ ಬಳಕೆದಾರರಿಗೆ ಹೆಚ್ಚಿನ ಆದ್ಯತೆ ನೀಡಿ, ವಿದ್ಯುತ್ ವಿತರಿಸಲು ಆದ್ಯತೆ ನೀಡಲಾಗುತ್ತದೆ. ಖಾಸಗಿ ಡಿಸ್ಕಾಂಗಳು ತಮ್ಮ ಆದ್ಯತೆಯ ಗ್ರಾಹಕರಿಗೆ (ಮುಖ್ಯವಾಗಿ ಶ್ರೀಮಂತರು) ಸಂಪರ್ಕಗಳನ್ನು ಒದಗಿಸುತ್ತವೆ ಮತ್ತು ಶುಲ್ಕವನ್ನು ಸಂಗ್ರಹಿಸುತ್ತವೆ. ಲಾಭದಾಯಕ ಅಲ್ಲದ ಭಾಗಗಳಿಗೆ ಖಾಸಗಿ ವಿತರಕರು ವಿದ್ಯುತ್ ವಿತರಣೆ ಮಾಡದೇ ಇರಲು ಮತ್ತು ತೀರಾ ಹಿಂದುಳಿದ ಪ್ರದೇಶಗಳಿಗೆ ಅಥವಾ ಆ ಭಾಗದ ಅರ್ಜಿದಾರರ ಅರ್ಜಿಗಳನ್ನು ತಿರಸ್ಕರಿಸುವುದಕ್ಕೂ ಈ ತಿದ್ದುಪಡಿ ಮಸೂದೆಯಲ್ಲಿ ಅವಕಾಶ ಮಾಡಿಕೊಡಲಾಗಿದೆ. ಕಡಿಮೆ ಆದಾಯ ತರುವ ಗ್ರಾಮೀಣ ಮತ್ತು ಡೊಮೆಸ್ಟಿಕ್ ವಲಯದ DISCOMಗಳನ್ನು ನಿರ್ಲಕ್ಷಿಸಿ ಮುಚ್ಚಲಾಗುತ್ತದೆ. ಖಾಸಗಿ ವಿತರಕರಿಗೆ ಬಹು ವಿಧೀಯ ಅನುಮತಿ ಕೊಡುವ ಮೂಲಕ ಸಾರ್ವತ್ರಿಕ ವಿತರಣಾ ವ್ಯವಸ್ಥೆಗೆ ತಿಲಾಂಜಲಿ ಹಾಡಲಾಗುತ್ತದೆ.

ವಿದ್ಯುತ್ ಬಳಕೆದಾರರು 1 ಮೆಗಾವ್ಯಾಟ್ ಗಿಂತಲೂ ಹೆಚ್ಚು ಬಳಸುವಿರಾದರೆ, ಅಂತಹ ಪ್ರಕರಣಗಳನ್ನು ಖಾಸಗಿ ವಿತರಕರಿಗೆ ಶಿಫಾರಸ್ಸು ಮಾಡಲಾಗುತ್ತದೆ. ಅದರ ಲಾಭ ಖಾಸಗಿಯವರಿಗೆ ಆಗುತ್ತದೆ. ಆ ಮೂಲಕ DISCOMಗಳ ಆದಾಯ ಕಡಿಮೆಯಾಗಿ, ಅವು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡಬೇಕಾದ ಪರಿಸ್ಥಿತಿಯನ್ನು ನಿರ್ಮಾಣ ಮಾಡಲಾಗುತ್ತದೆ. ಹೀಗೆ ಮಾಡುವುದಕ್ಕೆ ವಿದ್ಯುತ್ ತಿದ್ದುಪಡಿ ಮಸೂದೆ 2025ರ ಸೆಕ್ಷನ್ 43(4)ರಲ್ಲಿ ಅವಕಾಶ ಮಾಡಿಕೊಡಲಾಗಿದೆ. ಸೆಕ್ಷನ್ 90ರಲ್ಲಿ ಕೇಂದ್ರ ಸರಕಾರವು ಉದ್ದೇಶ ಪೂರ್ವಕ ಉಲ್ಲಂಘನೆ, ನಿರ್ಲಕ್ಷ್ಯ ಇತರ ಅಸ್ಪಷ್ಟ ನೆಪಗಳನ್ನು ಒಡ್ಡಿ ರಾಜ್ಯಗಳ Electricity Regulatory Commissionಗಳ ಸದಸ್ಯರನ್ನು ತೆಗೆದುಹಾಕಲು ಅನುಮತಿ ನೀಡಿದೆ.

ಸೆಕ್ಷನ್ 166(1)(ಎ)ರ ಪ್ರಕಾರ ಕೇಂದ್ರ ವಿದ್ಯುತ್ ಸಚಿವರ ಅಧ್ಯಕ್ಷತೆಯಲ್ಲಿ central electricity commission ರಚಿಸಲು ಅವಕಾಶವಿದೆ. ಇದು ರಾಜ್ಯಗಳ ವಿದ್ಯುತ್ ನೀತಿಗಳ ಮೇಲೆ ನಿಯಂತ್ರಣ ಹೊಂದಿರುತ್ತದೆ ಮತ್ತು ವಿದ್ಯುತ್ ನಿರ್ವಹಣೆಯನ್ನು ಕೇಂದ್ರೀಕರಣ ಮಾಡುವುದಾಗಿದೆ. ಈ ಮಸೂದೆಯ ಸೆಕ್ಷನ್ 86(e), 80, 166, 176ರ ಪ್ರಕಾರ ದೇಶದ ವಿದ್ಯುತ್ ಕ್ಷೇತ್ರದಲ್ಲಿನ ಫೆಡರಲ್ ಸಂರಚನೆಯನ್ನು ವ್ಯವಸ್ಥಿತವಾಗಿ ಹಾಳುಗೆಡವಲು ಅವಕಾಶ ಮಾಡಿಕೊಡಲಾಗಿದೆ. ಸೆಕ್ಷನ್ 176 ರ ಪ್ರಕಾರ ಕೇಂದ್ರ ಸರಕಾರಕ್ಕೆ ಸರ್ವೋಚ್ಚ ಪರಮಾಧಿಕಾರ ಇರುತ್ತದೆ. ಅದು ಎಷ್ಟರ ಮಟ್ಟಿಗೆ ಅಂದರೆ ಸಂಸತ್ತು ಮತ್ತು ಸಾರ್ವತ್ರಿಕ ಮತ್ತು ಸಾರ್ವಜನಿಕ ಭದ್ರತೆಯನ್ನು ಮೀರಿಯೂ ಕೆಲಸ ಮಾಡಬಹುದಾಗಿದೆ.

ಗ್ರಾಹಕರ ಮೇಲೆ ವಿದ್ಯುತ್ ಶುಲ್ಕದ ಹೊರೆ ಹೆಚ್ಚಾಗುತ್ತದೆ

ಹಲವು ರಾಜ್ಯಗಳಲ್ಲಿ ತಿಂಗಳಿಗೆ 30 ಯೂನಿಟ್‌ಗಳನ್ನು ಬಳಸುವ ಬಡ ಕುಟುಂಬವು ಈಗ ಪ್ರತಿ ಯೂನಿಟ್‌ಗೆ ರೂ. 1.90 ಪಾವತಿಸಿದರೆ, ಗೃಹಬಳಕೆಯ ದರಕ್ಕಿಂತ ಕಮರ್ಷಿಯಲ್ ಬಳಕೆಗೆ ಹೆಚ್ಚು ದರ ವಿಧಿಸಲಾಗುತ್ತದೆ. ಅಂದರೆ, ಡಿಸ್ಕಾಮ್‌ ಗಳ ವ್ಯಾಪ್ತಿಯೊಳಗಿನ ಬಡ ಮತ್ತು ದುರ್ಬಲ ಗ್ರಾಹಕರಿಗೆ ಸ್ವಲ್ಪ ಅನುಕೂಲ ಒದಗಿಸಲು, ಶ್ರೀಮಂತ ಮತ್ತು ಐಷಾರಾಮಿ ಗ್ರಾಹಕರಿಗೆ ಹೆಚ್ಚಿನ ಶುಲ್ಕ ವಿಧಿಸಲಾಗುತ್ತದೆ. ಇದನ್ನು ಕ್ರಾಸ್ ಸಬ್ಸಿಡಿ ಎಂದು ಕರೆಯಲಾಗುತ್ತದೆ. ಇದು ಸ್ವಾತಂತ್ರ್ಯದ ನಂತರ ನಮ್ಮ ದೇಶದಲ್ಲಿ ಜಾರಿಗೆ ಬಂದಿರುವ ನೀತಿಯಾಗಿದೆ. ವಿಶ್ವ ಬ್ಯಾಂಕ್ ಇದನ್ನು ಒಪ್ಪುವುದಿಲ್ಲ. ಅದಕ್ಕಾಗಿಯೇ ಈ ಮಸೂದೆಯಲ್ಲಿ ಕ್ರಾಸ್ ಸಬ್ಸಿಡಿಗಳು ಇರಬಾರದು ಎಂದು ಹೇಳಿದೆ.

ಆದಾಗ್ಯೂ, ಒಂದೇ ಬಾರಿಗೆ ಹಾಗೆ ಮಾಡುವುದರಿಂದ ಜನರಲ್ಲಿ ವಿರೋಧಕ್ಕೆ ಕಾರಣವಾಗುವುದರಿಂದ, ಐದು ವರ್ಷಗಳಲ್ಲಿ ಅದನ್ನು ಕ್ರಮೇಣ ಕಡಿಮೆ ಮಾಡಬೇಕು ಎಂಬ ಷರತ್ತು ವಿಧಿಸಿದೆ. ಹಾಗಾಗಿ, ಒಂದೇ ಒಂದು ಬಲ್ಬ್ ಬಳಸುವ ಬಡ ಗ್ರಾಹಕರು ಕೂಡ ಕಮರ್ಷಿಯಲ್ ಗ್ರಾಹಕರಿಗೆ ವಿಧಿಸುವ ವಿದ್ಯುತ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಹೊಸ ಮಸೂದೆಯ ಪ್ರಕಾರ, ವೆಚ್ಚಕ್ಕೆ ಲಾಭವನ್ನು ಸೇರಿಸುವ ಮೂಲಕ ಸೇವೆಯ ವೆಚ್ಚದ ಹೆಸರಿನಲ್ಲಿ ವಿದ್ಯುತ್ ಶುಲ್ಕವನ್ನು ನಿರ್ಧರಿಸಲಾಗುತ್ತದೆ. ಆದ್ದರಿಂದ, ಗ್ರಾಹಕರ ಮೇಲೆ ವಿದ್ಯುತ್ ಶುಲ್ಕದ ಹೊರೆ ಹೆಚ್ಚಾಗುತ್ತದೆ.

ಮುಂದಿನ ಐದು ವರ್ಷಗಳಲ್ಲಿ ಸಬ್ಸಿಡಿಗಳನ್ನು ಕೈಬಿಡಲಾಗುತ್ತದೆ

ವಿದ್ಯುತ್ ಸಬ್ಸಿಡಿ ರದ್ದತಿ ಮತ್ತು ದರ ಏರಿಕೆಗೆ ಈ ವಿದ್ಯುತ್ ತಿದ್ದುಪಡಿ ಮಸೂದೆ 2025ರ ಸೆಕ್ಷನ್ 61(g)ನಲ್ಲಿ ಅವಕಾಶ ಮಾಡಿಕೊಡಲಾಗಿದೆ. ಮುಂದಿನ ಐದು ವರ್ಷಗಳಲ್ಲಿ ಸಬ್ಸಿಡಿಗಳನ್ನು ಕೈಬಿಟ್ಟು, ಅದರ ಹೊರೆಗಳನ್ನು ರಾಜ್ಯಗಳ ಮೇಲೆಯೇ ಹಾಕಲು ಅವಕಾಶವಿದೆ. ಮಸೂದೆಯ ಸೆಕ್ಷನ್ 66ರ ಪ್ರಕಾರ ವಿದ್ಯುತ್ತಿನ ಮಾರುಕಟ್ಟೆ ಆಧಾರಿತ ವ್ಯಾಪಾರ ತಂತ್ರಜ್ಞಾನವು, ವಿದ್ಯುತ್ತಿನ ದೀರ್ಘಕಾಲದ ಖರೀದಿ ಒಪ್ಪಂದಗಳನ್ನು ಉಲ್ಲಂಘನೆ ಮಾಡುತ್ತದೆ. DISCOMಗಳ ಹಣಕಾಸು ಸ್ಥಿತಿಯನ್ನು ಅಸ್ಥಿರಗೊಳಿಸುತ್ತದೆ. ಇದು ವಿದ್ಯುತ್ ಕೊರತೆಗೂ ದರ ವ್ಯತ್ಯಾಸಗಳಿಗೂ ಕಾರಣವಾಗಿ, ರೈಲ್ವೆ, ಮೆಟ್ರೊ ರೈಲು, ಉತ್ಪಾದನಾ ಕೈಗಾರಿಕೆಗಳು ಭಾರೀ ಪ್ರಮಾಣದ ಆದಾಯದ ಹಿನ್ನಡೆಗೆ ಕಾರಣವಾಗುತ್ತದೆ. ಅದರ ಹೆಚ್ಚುವರಿ ಹೊರೆಯನ್ನು ಗ್ರಾಹಕರಿಗೆ ಹೊರಿಸಲಾಗುತ್ತದೆ.

ಸಕ್ಷನ್ 86(e) ಪ್ರಕಾರ ನವೀಕರಿಸಬಹುದಾದ ಇಂಧನ ಬಳಕೆಯ ಗುರಿ ರಾಜ್ಯಗಳಿಗೆ ಕಡ್ಡಾಯ.‌ ರಾಜ್ಯಗಳಿಗೆ ಸಾಮರ್ಥ್ಯ ಇದೆಯೋ? ಇಲ್ಲವೋ? ಅವು ವೆಚ್ಚ ಅಥವಾ ಮೂಲ ಸೌಕರ್ಯಗಳ ಖರ್ಚು ಭರಿಸಬೇಕು.

ಈಗ, ಕರ್ನಾಟಕದಲ್ಲಿ ‘ಗೃಹ ಜ್ಯೋತಿ ಯೋಜನೆ” ಹೆಸರಿನಲ್ಲಿ 200 ಯೂನಿಟ್ ವರೆಗಿನ ಗೃಹ ಬಳಕೆ ವಿದ್ಯುತ್ ಉಚಿತವಾಗಿ ಒದಗಿಸುತ್ತಿದೆ. ಇದಕ್ಕೂ ಮೊದಲು ಭಾಗ್ಯ ಜ್ಯೋತಿ ಯೋಜನೆಯ ಅಡಿಯಲ್ಲಿ ಬಡವರಿಗೆ ಉಚಿತ ವಿದ್ಯುತ್ ಒದಗಿಸಲಾಗುತ್ತಿತ್ತು. ಕರ್ನಾಟಕ ಸೇರಿದಂತೆ ಇತರ ಕೆಲವು ರಾಜ್ಯಗಳಲ್ಲಿ, ಕೃಷಿಗೆ ಉಚಿತವಾಗಿ ಅಥವಾ ಸಬ್ಸಿಡಿ ದರದಲ್ಲಿ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಜಲಚರ ಸಾಕಣೆ ಮತ್ತು ತೋಟಗಾರಿಕೆಗೆ ವಿಭಿನ್ನ ದರಗಳಿವೆ. ಇವೆಲ್ಲದಕ್ಕೂ ಡಿಸ್ಕಾಮ್‌ ಗಳು ಮಾಡುವ ವೆಚ್ಚವನ್ನು ಆಯಾ ರಾಜ್ಯ ಸರ್ಕಾರಗಳು ಸಬ್ಸಿಡಿಯಾಗಿ ಭರಿಸುತ್ತವೆ. ರಾಜ್ಯ ಸರ್ಕಾರ ಪಾವತಿಸಿದರೂ ಮತ್ತು ಪಾವತಿಸದಿದ್ದರೂ, ಆಯಾ ವರ್ಗಗಳಿಗೆ ರಿಯಾಯಿತಿಯ ಮೇಲೆ ವಿದ್ಯುತ್ ಸರಬರಾಜು ನಡೆಯುತ್ತಿದೆ. ಈ ಹೊಸ ಮಸೂದೆಯೂ ಅವರಿಗೆ ಬೆದರಿಕೆ ಹಾಕುತ್ತಿದೆ. ರಾಜ್ಯ ಸರ್ಕಾರಗಳು ನೀಡುವ ಸಬ್ಸಿಡಿಯನ್ನು ಹಣಕಾಸು ವರ್ಷದ ಆರಂಭದಲ್ಲಿಯೇ ಡಿಸ್ಕಾಮ್‌ ಗಳಿಗೆ ಪಾವತಿಸಬೇಕು ಎಂಬ ಷರತ್ತನ್ನು ಅದು ವಿಧಿಸಿದೆ. ರಾಜ್ಯ ಸರ್ಕಾರಗಳ ಆರ್ಥಿಕ ದುಸ್ಥಿತಿ ಗೊತ್ತೇ ಇದೆ. ಹೀಗಿರುವಾಗ, ಮುಂಗಡ ಸಬ್ಸಿಡಿ ಕಾರ್ಯಸಾಧ್ಯವೇ?

ರಾಜ್ಯ ಸರ್ಕಾರ ಸಬ್ಸಿಡಿಯನ್ನು ಮುಂಗಡವಾಗಿಯೇ ನೀಡಬೇಕು!

ಸಾಮಾನ್ಯವಾಗಿ, ಪ್ರತಿ ವರ್ಷ, ನಿಯಂತ್ರಣ ಆಯೋಗ (ERC) ವಿದ್ಯುತ್ ಶುಲ್ಕಗಳನ್ನು ನಿರ್ಧರಿಸುವ ಮೊದಲು ಅದು ಎಷ್ಟು ಸಬ್ಸಿಡಿಯನ್ನು ಭರಿಸುತ್ತದೆ ಎಂದು ರಾಜ್ಯ ಸರ್ಕಾರವನ್ನು ಲಿಖಿತವಾಗಿ ಕೇಳುತ್ತದೆ. ರಾಜ್ಯ ಸರ್ಕಾರವು ತನ್ನ ವಿವೇಚನೆಯಿಂದ ಭರಿಸಬೇಕಾದ ಸಬ್ಸಿಡಿ ಮೊತ್ತವನ್ನು ಲಿಖಿತವಾಗಿ ತಿಳಿಸುತ್ತದೆ. ರಾಜ್ಯ ಸರ್ಕಾರವು ಭರಿಸಬೇಕಾದ ಸಬ್ಸಿಡಿ ಮೊತ್ತವನ್ನು ಡಿಸ್ಕಾಮ್‌ಗಳ ವಾರ್ಷಿಕ ಆದಾಯದ ಅಗತ್ಯ ಮೊತ್ತದಿಂದ ಕಡಿಮೆ ಮಾಡುವ ಮೂಲಕ ERC ವಿದ್ಯುತ್ ಶುಲ್ಕಗಳನ್ನು (ಸುಂಕ) ಘೋಷಿಸುತ್ತದೆ. ಈ ಸಂಪೂರ್ಣ ಪ್ರಕ್ರಿಯೆಯನ್ನು ಪ್ರಸ್ತುತ ವಿದ್ಯುತ್ ಕಾಯ್ದೆ (2003) ಪ್ರಕಾರ ಮಾಡಲಾಗುತ್ತಿದೆ.

ಆದಾಗ್ಯೂ, ಪ್ರಾಯೋಗಿಕವಾಗಿ, ರಾಜ್ಯ ಸರ್ಕಾರಗಳು ವರ್ಷಗಳಿಂದ ಸಬ್ಸಿಡಿ ಮೊತ್ತವನ್ನು ಬಾಕಿ ಉಳಿಸಿಕೊಂಡಿವೆ. ಇದು ಡಿಸ್ಕಾಮ್‌ಗಳ ನಷ್ಟಕ್ಕೆ ಮುಖ್ಯ ಕಾರಣವಾಗಿದೆ. ದೇಶದ 67 ಡಿಸ್ಕಾಮ್ ಗಳ ಆ ನಷ್ಟದ ಪ್ರಮಾಣವು ಕಳೆದ 22 ವರ್ಷಗಳಲ್ಲಿ 26,000 ಕೋಟಿ ರೂಪಾಯಿಗಳಿಂದ 6 ಲಕ್ಷ 90 ಸಾವಿರ ಕೋಟಿ ರೂಪಾಯಿಗಳಿಗೆ ಏರಿದೆ ಎಂಬ ಆರೋಪವನ್ನು ಈ ಮಸೂದೆಯಲ್ಲಿ ಮಾಡಲಾಗಿದೆ. ಇದಕ್ಕೆ ಕಾರಣ ವಿಶ್ವಬ್ಯಾಂಕ್ ಸುಧಾರಣೆಗಳು ಮತ್ತು ವಿದ್ಯುತ್ ಕ್ಷೇತ್ರದಲ್ಲಿ ಸರ್ಕಾರ ಅನುಸರಿಸುತ್ತಿರುವ ನವ ಉದಾರವಾದಿ ಆರ್ಥಿಕ ನೀತಿಗಳೂ ಕಾರಣವಾಗಿವೆ.  ಆದರೆ ಡಿಸ್ಕಾಮ್ ಗಳನ್ನು ನಾಶಮಾಡುವ ಪ್ರಯತ್ನದ ತಂತ್ರವಾಗಿ ನಷ್ಟದ ಹೊರೆಯನ್ನು ಡಿಸ್ಕಾಮ್ ಮೇಲೆ ಹೊರಿಸಲಾಗುತ್ತಿದೆ.

ಸ್ಮಾರ್ಟ್ ಮೀಟರ್ ಅಳವಡಿಕೆ: ಮುಂಚಿತವಾಗಿ ಹಣ ಪಾವತಿ

ವಿದ್ಯುತ್ ವಿತರಣೆಗೆ ತಂತ್ರಜ್ಞಾನ ಅಳವಡಿಕೆ ಅನಿವಾರ್ಯ ಎನ್ನುವ ವಾತಾವರಣ ನಿರ್ಮಾಣ ಮಾಡಲಾಗುತ್ತಿದೆ. ಆ ಮೂಲಕ ಸ್ಮಾರ್ಟ್ ಮೀಟರುಗಳ ಅಳವಡಿಕೆ ಆಗಲೇಬೇಕು ಎನ್ನುವ ಒತ್ತಡ ಹೇರಲಾಗುತ್ತದೆ. ಈಗ ವಿದ್ಯುತ್ ಬಳಕೆ ಮಾಡಿದ್ದಕ್ಕೆ ಹಣ ಪಾವತಿಸುತ್ತಿದ್ದೆವೆ. ಆದರೆ ಕ್ಷೇತ್ರ ಖಾಸಗಿಯವರ ಪಾಲಾದಾಗ ಮೊದಲೇ ಹಣ ಪಾವತಿಸಿ (ಪ್ರಿಫೇಯ್ಡ್), ಎಷ್ಟು ಹಣ ಕಟ್ಟಿರುತ್ತೇವೆಯೋ ಅಷ್ಟೇ ವಿದ್ಯುತ್ ಬಳಕೆ ಮಾಡಿಕೊಳ್ಳಬೇಕಾಗುತ್ತದೆ. ಹೆಚ್ಚುವರಿ ಬಳಕೆಗೆ ಮುಂಗಡವಾಗಿಯೇ ಹಣ ಪಾವತಿಸಿಯೇ ಬಳಕೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಮುಂಗಡ ಪಾವತಿಯ ಹಣದ ಕ್ರೋಢೀಕರಣವೇ ಖಾಸಗಿಯವರಿಗೆ ಮತ್ತಷ್ಟು ಬಂಡವಾಳವಾಗಿ, ಆ ಹಣವನ್ನು ಪುನಃ ಲಾಭಕ್ಕಾಗಿ ಹೂಡಿಕೆ ಮಾಡಲು ಅವಕಾಶ ಮಾಡಿಕೊಡುತ್ತದೆ.

ರಾಷ್ಟ್ರೀಯ ಭದ್ರತೆಗೂ ಧಕ್ಕೆಯಾಗುವ ಸಾಧ್ಯತೆಗಳಿವೆ

ಈ ಮಸೂದೆಯ ಸೆಕ್ಷನ್ 15(2) , 18(2)( ಬಿ)ಯ ಪ್ರಕಾರ ವ್ಯವಹಾರವನ್ನು ಸುಲಭ ಮಾಡುವ ಮೂಲಕ ರಾಷ್ಟ್ರೀಯ ಭದ್ರತೆಯನ್ನು ನಿರ್ಲಕ್ಷಿಸಲಾಗುತ್ತಿದೆ.‌ ಹೇಗೆಂದರೆ, ರಕ್ಷಣಾ ವಲಯಗಳಲ್ಲಿ ವಿದ್ಯುತ್ ಘಟಕಗಳನ್ನು ಆರಂಭಿಸಲು ಲೈಸೆನ್ಸ್ ಪಡೆಯಲು ಈ ಮೊದಲು ನಿರಪೇಕ್ಷಣಾ ಪತ್ರ ಡೆಯಲು ಕಡ್ಡಾಯ ಮಾಡಲಾಗಿತ್ತು . ಅದರೆ, ಅದಕ್ಕೆ ವಿನಾಯಿತಿ ನೀಡಲಾಗಿದೆ. ಈ ಕ್ಷೇತ್ರ ಖಾಸಗಿಯವರ ಹಿಡಿತಕ್ಕೆ ಹೋದರೆ, ಖಾಸಗಿ ಪರವಾನಿಗೆದಾರರಿಂದ ರಕ್ಷಣಾ ತೊಂದರೆಗಳು, ನಿರ್ವಹಣಾ ಗೊಂದಲಗಳಿಂದಾಗಿ ರಾಷ್ಟ್ರೀಯ ಭದ್ರತೆಗೂ ಧಕ್ಕೆ ಆಗುವ ಸಾಧ್ಯತೆಗಳಿವೆ. ‌

ಇದನ್ನೂ ನೋಡಿ: ಸಾರ್ವಜನಿಕ ಶಿಕ್ಷಣದ ಉಳಿವಿಗಾಗಿ, ಹಾಸ್ಟೆಲ್ ಬಲವರ್ಧನೆಗಾಗಿ SFI ರಾಜ್ಯವ್ಯಾಪಿ ಜಾಥಾ Janashakthi Media

ವಿದ್ಯುತ್ ತಿದ್ದುಪಡಿ ಮಸೂದೆ 2025ನ್ನು ಪ್ರತ್ಯೇಕವಾಗಿ ನೋಡದೇ ನವ ಉದಾವಾದಿ ತಂತ್ರಗಳ ಫಲವಾಗಿ ನೋಡಬೇಕಾಗುತ್ತದೆ. ಸಮಗ್ರ ವಿದ್ಯುತ್ ರಂಗವನ್ನು ಅಂದರೆ, ಅದರ ಉತ್ಪಾದನೆಯಿಂದ ವಿತರಣೆಯವರೆಗಿನ ಸರಪಳಿಯನ್ನು ಖಾಸಗಿ ಏಕಸ್ವಾಮ್ಯದಾರರ ತೆಕ್ಕೆಗೆ ತಳ್ಳುವ ಮತ್ತು ಸಾರ್ವಜನಿಕ ಸಂಪತ್ತನ್ನು ಖಾಸಗಿಯವರ ತೆಕ್ಕೆಗೆ ಹಸ್ತಾಂತರ ಮಾಡುವ ಸ್ಪಷ್ಟ ತಂತ್ರವಾಗಿದೆ. ಮೋದಿ ಸರ್ಕಾರ ಇಂತಹ ಪ್ರಯತ್ನವನ್ನು 2014ರಿಂದಲೂ ನಿರಂತರವಾಗಿ  ಮಾಡುತ್ತಲೇ ಬಂದಿದೆ. ಆದರೆ ವಿದ್ಯುತ್ ನೌಕರರು, ರೈತರು, ಜನತೆ ದೊಡ್ಡ ರೀತಿಯಲ್ಲಿ ಪ್ರತಿರೋಧಿಸುತ್ತಾ ಇದನ್ನು ತಡೆದಿದ್ದಾರೆ. ಈಗ (2025ರಲ್ಲಿ) ಪುನಃ ವಿದ್ಯುತ್ ತಿದ್ದುಪಡಿ ಮಸೂದೆಯನ್ನು ಮುನ್ನೆಲೆಗೆ ತಂದಿದೆ.

ವಿದ್ಯುತ್ ಮಾರುಕಟ್ಟೆಯ ವಸ್ತು ಆಗಬಾರದು. ವಿದ್ಯುತ್ ಕ್ಷೇತ್ರ ಯಾವುದೇ ರೀತಿಯ ಖಾಸಗೀಕರಣ ಆಗಬಾರದು. ವಿದ್ಯುತ್ ಉತ್ಪಾದನೆ ವಿತರಣೆ ಪ್ರಕ್ರಿಯೆಯಲ್ಲಿ ರಾಜ್ಯಗಳಿಗೂ ಅವಕಾಶ ಇರಬೇಕು. ಫೆಡರಲ್ ಸಂರಚನೆಯ ಸ್ವರೂಪ ಕಾಪಾಡಬೇಕು. ಅದು ಕೇಂದ್ರೀಕರಣ ಆಗಬಾರದು. ಈ ವಿನಾಶಕಾರಿ ವಿದ್ಯುತ್ ತಿದ್ದುಪಡಿ ಮಸೂದೆಯ ವಿರುದ್ಧ ದೇಶಾದ್ಯಂತ ಚಳುವಳಿಯನ್ನು ಸಂಘಟಿಸಬೇಕು ಮತ್ತು ಅದನ್ನು ಸಂಪೂರ್ಣವಾಗಿ ಹಿಮ್ಮೆಟ್ಟಿಸಬೇಕಿದೆ.

ಸಾರ್ವಜನಿಕ ಬಳಕೆಯ ಕ್ಷೇತ್ರದ ಮೂಲಭೂತ ಸೌಲಭ್ಯಗಳಾದ ಕಂಬಗಳು, ಕಛೇರಿಗಳು, ಸಿಬ್ಬಂದಿ, ವಿತರಣಾ ವ್ಯವಸ್ಥೆ ಎಲ್ಲವನ್ನೂ ಖಾಸಗಿಯವರು ಯಾವುದೇ ಬಂಡವಾಳದ ಹೂಡಿಕೆಯಿಲ್ಲದೇ ತಮ್ಮ ಲಾಭದ ಉದ್ದೇಶಕ್ಕೆ ಬಳಸಿಕೊಳ್ಳಲು ಅವಕಾಶ ಮಾಡಿಕೊಡಲಾಗುತ್ತಿದೆ. ಈ ಮೂಲಕ ಸಾರ್ವಜನಿಕರಿಗೆ ಸರಕಾರ ಕೊಡಮಾಡುವ ಉಚಿತ ಸೌಲಭ್ಯಗಳನ್ನು ಕಡಿತಮಾಡಿ ಅಥವಾ ಇಲ್ಲವಾಗಿಸಿ ಸಾರ್ವಜನಿಕರು ಕೂಡಾ ಕಡ್ಡಾಯವಾಗಿ ವಿದ್ಯುತ್ ಖರೀದಿಸಿಯೇ ಬಳಕೆ ಮಾಡಬೇಕಾದ ಪರಿಸ್ಥಿತಿಯನ್ನು ನಿರ್ಮಾಣ ಮಾಡಲಾಗುತ್ತದೆ. ಗೃಹ ಬಳಕೆಗೆ, ಕೃಷಿ ಬಳಕೆಗೆ ಕೂಡಾ ಖಾಸಗಿ ಸಂಸ್ಥೆಗಳು ನಿಗದಿ ಪಡಿಸಿದ ದರಗಳನ್ನು ಎಲ್ಲರೂ ಪಾವತಿಸಲೇ ಬೇಕಾಗುತ್ತದೆ.

Donate Janashakthi Media

Leave a Reply

Your email address will not be published. Required fields are marked *