ರೋಹಿಣಿ ಅಕ್ಕಾ… ಹೌದು, ಆ ಮುಖದ ಮುಗ್ಧ ನಗೆಯನ್ನು ನೋಡಿ. ಅವರನ್ನು ʻಅಕ್ಕಾʼ ಎಂದೇ ಕರೆಯುವಂತೆ ಅನಿಸುವುದು. ಹಿರಿಯ ಸಾಹಿತಿ, ಶಿಕ್ಷಕಿ, ಚಿಂತಕಿ, ನೊಂದವರ ಧ್ವನಿ, ನೇರ ನುಡಿಯ ದಿಟ್ಟ ಮಾತಿನ ಈ ʻರೋಹಿಣಿʼ ಎಂಬ ಮಹಿಳೆಯನ್ನು ಪ್ರೀತಿಸದ, ಗೌರವಿಸದವರು ಯಾರೂ ಇಲ್ಲ. ʻಅನುಪಮʼ ಮಹಿಳಾ ಮಾಸಿಕ ಆರಂಭವಾಗಿ ಇಪ್ಪತ್ತೈದು ವರುಷ ಈಗ ಪೂರ್ಣವಾಯಿತು. ನಮ್ಮ ಪತ್ರಿಕೆಯ ಬರಹಗಾರ್ತಿಯೂ, ಓದುಗರೂ ಆಗಿರುವ ಬಿ.ಎಂ.ರೋಹಿಣಿಯವರು, ನಮಗೆ ಮಾರ್ಗದರ್ಶಕರೂ ಆಗಿದ್ದಾರೆ. ʻಅನುಪಮʼ ಪತ್ರಿಕೆಯಲ್ಲಿ ʻನೂರು ಮುಸ್ಲಿಮ್ ವಿಜ್ಞಾನಿಗಳು, ಸಾಧಕರುʼ ಎಂಬ ಅಂಕಣವನ್ನು ಲೇಖಕಿ ಶಹೀದಾರವರಿಂದ ಪ್ರತೀ ತಿಂಗಳು ಬರೆಸಲು ನಮಗೆ ಸಲಹೆ ನೀಡಿದವರು ಈ ನಮ್ಮ ರೋಹಿಣಿ ಅಕ್ಕ. ಎವರ್
– ಶಹನಾಝ್ ಎಂ
– ಸಂಪಾದಕರು: ಅನುಪಮಾ ಮಾಸಿಕ
ಅವರ ಕೃತಿಗಳ ಲೇಖನಗಳನ್ನು ನಾವು ಆಯ್ಕೆ ಮಾಡಿ ನಮ್ಮ ಪತ್ರಿಕೆಯಲ್ಲಿ ಪ್ರಕಟಿಸುತ್ತಿದ್ದೆವು. ಮುಸ್ಲಿಮ್ ಸಾಹಿತ್ಯ ಸಂಘದ ಪ್ರತಿಭಾವಂತೆಯರಾದ ಯುವ ಬರಹಗಾರ್ತಿಯರಿಗೆ ನಾವು ಕಥೆ, ಕವನ, ಕಮ್ಮಟ ಏರ್ಪಡಿಸಿದಾಗ ರೋಹಿಣಿ ಮೇಡಮ್ ಸಂಪನ್ಮೂಲ ಅತಿಥಿಯಾಗಿ ಬರುತ್ತಿದ್ದರು. ಅವರಾಡುವ ಮಾತು ಕೇಳಲೂ ಸೊಗಸು. ಆ ಮಾತಿನಲ್ಲಿ ನಾಟಕೀಯತೆ ಇಲ್ಲ. ನೇರಾನೇರವಾದ ಸರಳ ಸುಂದರ ಉಪನ್ಯಾಸದ ಶಿಕ್ಷಕಿ ಅವರು. ಮಡಿವಂತಿಕೆಯನ್ನು ಬದಿಗಿರಿಸಿ ವಾಸ್ತವತೆಯಲ್ಲಿ ಕಹಿಸತ್ಯವನ್ನೇ ಹೇಳುವ ದಿಟ್ಟ ಮಾತುಗಾರ್ತಿ.`ಅಬ್ಬಕ್ಕರಾಣಿ’ ಪ್ರಶಸ್ತಿ, `ಅಮ್ಮ’ ಪ್ರಶಸ್ತಿ ಅವರ ವ್ಯಕ್ತಿತ್ವಕ್ಕೆ ದಕ್ಕಿದ ಗೌರವ ಎಂದು ನನ್ನ ಅನಿಸಿಕೆ. ಎವರ್
ಕರಾವಳಿ ಲೇಖಕಿ ವಾಚಕಿಯರ ಸಂಘದಲ್ಲಿ ನಾನು ಆಜೀವ ಸದಸ್ಯೆಯಾಗಿರುವುದರಿಂದ ನನಗೆ ಈ ಹಿರಿಯ ಲೇಖಕಿಯ ಸಾಮೀಪ್ಯ ದೀರ್ಘ ಕಾಲದಿಂದ ಇದೆ. ರೋಹಿಣಿಯವರ ಪ್ರೀತಿ, ಅಭಿಮಾನವೇ ನನ್ನನ್ನು ಈ ಸಂಘಕ್ಕೆ ಹೋಗುವಂತೆ ಉತ್ತೇಜಿಸುತ್ತಿತ್ತು. ಯಾಕೆಂದರೆ ಈ ನನ್ನ ಅಕ್ಕನಿಗೆ ಜಾತಿ ಭೇದ ಇಲ್ಲ. ಅವರು ನಂಬುವ ನಾರಾಯಣ ಗುರುವಿನ ತತ್ವವೇ ಅವರನ್ನು `ಮಾನವಕುಲ ಒಂದೇ’, `ಧರ್ಮ ಒಂದೇ’ ಎಂಬ ನಂಬಿಕೆಯಂತೆ ಎಲ್ಲರೊಂದಿಗೆ ಬೆರೆಯುವಂತೆ ಮಾಡಿದೆ.
ಇದನ್ನೂ ಓದಿ: ಪಶು-ಪಕ್ಷಿ ಲೋಕದ ವಿಸ್ಮಯಗಳು: ಸಂಚಿಕೆ-5
ಅವರ ಈ ವಿಶಾಲ ಮನೋಭಾವವೇ ನನಗೆ ಅವರ ಮೇಲೆ ಇನ್ನಷ್ಟು ಅಭಿಮಾನ ಹುಟ್ಟಿಸಿತ್ತು. ಬುರ್ಖಾ ಹಾಕಿದ ಸಂಪ್ರದಾಯವಾದಿ ಲೇಖಕಿಯಾಗಿ ನಾನು ಪ್ರಗತಿಪರ ಮಹಿಳೆಯರ ಜೊತೆಗೆ ಇರುವಾಗ ನನ್ನಲ್ಲಿ ಆತ್ಮವಿಶ್ವಾಸ ಹುಟ್ಟುವುದೇ ಇಂತಹ ಜಾತ್ಯತೀತ ನಿಲುವಿನ ವ್ಯಕ್ತಿತ್ವದ ರೋಹಿಣಿ ಅಕ್ಕನಂತವರಿಂದ ಎಂದರೆ ಅತಿಶಯೋಕ್ತಿಯಲ್ಲ. ಕರಾವಳಿ ಲೇಖಕಿಯರ ಸಂಘದ ಕಾರ್ಯಕಾರಿ ಸಮಿತಿಯಲ್ಲಿ ನನ್ನನ್ನು ಸೇರ್ಪಡೆ ಮಾಡಲೂ ಅವರೇ ಕಾರಣ.

ನಾನು ನಿರಾಕರಿಸಿದರೂ ತಮ್ಮ ಹಠದಲ್ಲೇ ನನ್ನನ್ನು ಮಣಿಸಿದ್ದರು. ಅವರು ಪ್ರತಿಯೋರ್ವ ಬರಹಗಾರ್ತಿಯರಿಗೂ ಬಹಳ ಮಾನ್ಯತೆ ನೀಡುತ್ತಾರೆ. ಕಿರಿಯರಿಗೆ ಪ್ರೋತ್ಸಾಹ ನೀಡುವುದನ್ನು ಅವರಿಂದ ಕಲಿಯಬೇಕು. ಅದೇ ರೀತಿ ಹಿರಿಯರಿಗೆ ಗೌರವ ನೀಡಲೂ ಅವರಿಂದ ಕಲಿಯಬೇಕು. ತುಂಬಿದ ಕೊಡ ಎಂದಿಗೂ ತುಳುಕುವುದಿಲ್ಲ. ಆಶೆ, ಆಕಾಂಕ್ಷೆ, ನಿರೀಕ್ಷೆಗಳೂ ಅವರಲ್ಲಿ ಕಾಣದು.
ಅವರನ್ನು ನಾನು ‘ಎವರ್ ಗ್ರೀನ್’ ಎಂದೂ ಕರೆಯುವುದಿದೆ. ಅವರು ಶಿಕ್ಷಕಿಯಾಗಿ ಪಾಠ ಮಾಡಿದ ವಿದ್ಯಾರ್ಥಿಗಳು ತಲೆ ಕೂದಲು ಬೆಳ್ಳಗಾಗಿ, ಹಿರಿಯರಾಗಿ ಕಾಣುವಾಗ ನಮ್ಮ ರೋಹಿಣಿ ಟೀಚರ್ ಅವರ ಕೂದಲು ಬೆಳ್ಳಗಾಗದೇ ಕಪ್ಪಾಗಿ ಇರುವುದರಿಂದ ನಾನು `ಸದಾ ಹಸಿರು’ ಮಹಿಳೆ ಎಂದು ಕರೆಯುತ್ತಿದ್ದೆ. ಈಗಲೂ ಕೂದಲು ಬೆಳ್ಳಗಾಗದಿದ್ದರೂ ಕೂದಲು ಉದುರಿ ಹೋಗುತ್ತಿರುವುದು ಕಾಣುತ್ತದೆ. ಆದ್ರೆ… ಮನಸ್ಸಿಗೆ ಅದೇ ಲವಲವಿಕೆ, ಯೌವನದ ಹುರುಪು… ಸಾಹಿತಿಗಳಿಗೆ ವಯಸ್ಸಾಗುವುದಿಲ್ಲ. ಅವರ ಬರಹಗಳಿಗೂ ವಯಸ್ಸಾಗುವುದಿಲ್ಲ! ಯಾಕೆಂದರೆ ಸಾಹಿತಿಗಳು ಸದಾ ಕನಸುಗಾರರು. ವಯಸ್ಸು ಮೀರಿದರೂ ಅವರ ಬರಹವು ಯೌವನದಲ್ಲಿರುತ್ತದೆ ಅಲ್ಲವೇ?
ರೋಹಿಣಿ ಅವರು ಏಪ್ರಿಲ್ 6, 2026 ಕ್ಕೆ 82 ತುಂಬಿ 83ಕ್ಕೆ ಕಾಲಿಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅವರಿಗೆ ಅವರ ಗೆಳತಿಯರು, ಅಭಿಮಾನಿಗಳು, ಕರಾವಳಿಯ ವಿದ್ವತ್ವಲಯ, ಶಿಷ್ಯರು, ಸಹೋದ್ಯೋಗಿಗಳು, ಅವರು ಒಡನಾಡಿದ ಎಲ್ಲ ಸಂಘ ಸಂಸ್ಥೆಯವರು ಒಗ್ಗೂಡಿ ಅವರ ಮೇಲಿನ ತಮ್ಮ ಪ್ರೀತಿ, ಅಭಿಮಾನ, ಗೌರವಗಳ ಅಭಿವ್ಯಕ್ತಿಗಾಗಿ ಫೆಬ್ರವರಿ 21 ರಂದು ʻನಾಗರಿಕ ಸನ್ಮಾನʼ ಮಾಡುತ್ತಿದ್ದಾರೆ. ರೋಹಿಣಿ ಅಕ್ಕನಿಗೆ ಅಭಿನಂದನಾ ಗ್ರಂಥ ನಿಜವಾಗಿಯೂ ಸಲ್ಲಬೇಕಾದ ಗೌರವ. ಈ ಎವರ್ ಗ್ರೀನ್ ಲೇಡಿ ನಮ್ಮ ನಡುವೆ ಹೀಗೆಯೇ ನಗುತ್ತಾ ಜೊತೆಯಾಗಿರಲಿ ಎಂಬ ಪ್ರಾರ್ಥನೆ ನನ್ನದು. ಅವರಿಗೆ ತುಂಬು ಮನದ ಶುಭಾಶಯಗಳು.
ಇದನ್ನೂ ನೋಡಿ: “ಏನಿದು ‘ಕೆಂಪು ಪುಸ್ತಕ’? ಅದರ ವಿಶೇಷವೇನು?” – ಡಾ. ಕೆ.ಪ್ರಕಾಶ್ | ಯು.ಎಸ್. ಸಾಮ್ರಾಜ್ಯಶಾಹಿ Janashakthi Media
