ಬೆಂಗಳೂರು : ಕೆಲವು ತಿಂಗಳುಗಳ ಹಿಂದೆ ರಾಜ್ಯದ ಆಯ್ದ ವಿಧಾನಸಭಾ ಕ್ಷೇತ್ರಗಳಲ್ಲಿನ ಮತದಾರರ ಮಾಹಿತಿಯನ್ನು ಚಿಲುಮೆ ಎಂಬ ಸರ್ಕಾರೇತರ ಸಂಸ್ಥೆಯೊಂದು ಅಕ್ರಮವಾಗಿ ಪಡೆದ ಆರೋಪಗಳು ಕೇಳಿಬಂದಿದ್ದವು. ರಾಜ್ಯ ಸರ್ಕಾರ ಆ ಸಂಸ್ಥೆಯ ವಿರುದ್ಧ ಪ್ರಕರಣ ದಾಖಲಾಗಿದೆ.
ಈಗ, ಬೆಂಗಳೂರಿನ ಖಾಸಗಿ ಸಂಸ್ಥೆಯೊಂದು 25 ಸಾವಿರ ರೂ.ಗಳಿಗೆ ಕೆಲವು ಕ್ಷೇತ್ರಗಳ ಮತದಾರರ ಪಟ್ಟಿಯನ್ನು ಮಾರಾಟ ಮಾಡಿಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ.
ಈ ಕುರಿತಂತೆ ಬೆಂಗಳೂರಿನಲ್ಲಿರುವ ಸೈಬರ್ ಪೊಲೀಸ್ ಠಾಣೆಗೆ ದೂರೊಂದು ದಾಖಲಾಗಿದೆ. ಖಾಸಗಿ ಸಂಸ್ಥೆಯ ಹೆಸರನ್ನು ಹಾಗೂ ಆ ಸಂಸ್ಥೆಯು ಯಾರ‍್ಯಾರಿಗೆ ಮತದಾರರ ಮಾಹಿತಿಯನ್ನು ಮಾರಾಟ ಮಾಡಿಕೊಂಡಿದೆ ಎಂಬುದನ್ನು ದೂರಿನಲ್ಲಿ ಉಲ್ಲೇಖಿಸಲಾಗಿದ್ದರೂ, ಆ ಬಗ್ಗೆ ಪೊಲೀಸರು ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.
ಈ ಖಾಸಗಿ ಕಂಪನಿಯು ಮತದಾರರ ಪಟ್ಟಿಯನ್ನು ಸಂಗ್ರಹಿಸಿದ್ದು ಆ ಪಟ್ಟಿಯನ್ನು ತೆರೆದು ಓದಲು ಲಾಗಿನ್ ಐಡಿ ಹಾಗೂ ಪಾಸ್ ವರ್ಡ್ ಮಾಡಿಕೊಂಡಿದೆ. ಈ ಲಾಗಿನ್ ಐಡಿ ಹಾಗೂ ಪಾಸ್ ವರ್ಡ್ ಅನ್ನು ಕೇವಲ 25 ಸಾವಿರ ರೂ. ಕೊಟ್ಟರೆ ಆ ಕಂಪನಿ ಯಾರಿಗಾದರೂ ಮಾರಾಟ ಮಾಡುತ್ತದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಪ್ರತಿ ಲಾಗಿನ್ ಐಡಿ ಹಾಗೂ ಪಾಸ್ ವರ್ಡ್ ನೀಡಲು 25 ಸಾವಿರ ರೂ.ಗಳನ್ನು ಈ ಖಾಸಗಿ ಸಂಸ್ಥೆಯು ನಿಗದಿಪಡಿಸಿತ್ತು. ಅಷ್ಟು ಹಣವನ್ನು ನೀಡುವ ರಾಜಕೀಯ ಪಕ್ಷದ ನಾಯಕರಿಗೆ ಈ ಮಾಹಿತಿಯನ್ನು ನೀಡಲಾಗಿದೆ ಎಂಬ ಆರೋಪವಿದೆ. ಆದರೆ, ಬೆಂಗಳೂರಿನ ಮತದಾರರ ಮಾಹಿತಿಯನ್ನು ಕೊಡಲಾಗಿದೆಯೋ ಅಥವಾ ಬೇರೆ ಜಿಲ್ಲೆಯ ಅಭ್ಯರ್ಥಿಗಳಿಗೆ ಆಯಾ ಜಿಲ್ಲೆಯ ಮತದಾರರ ಪಟ್ಟಿಯನ್ನು ಕೊಡಲಾಗಿದೆಯೂ ಎಂಬುದು ಸ್ಪಷ್ಟವಾಗಿಲ್ಲ.
ಯಾವ್ಯಾವ ಮಾಹಿತಿಗಳು ಲೀಕ್? :
ತನ್ನಲ್ಲಿ ಹಲವಾರು ಕ್ಷೇತ್ರಗಳ ಮತದಾರರ ಪಟ್ಟಿಯನ್ನು ಹೊಂದಿದ್ದ ಸಂಸ್ಥೆಯು, ಅದರಲ್ಲಿ ಮತದಾರರ ಹೆಸರು, ಅವರ ಭಾವಚಿತ್ರ, ಅವರ ವಿಳಾಸ, ಜಾತಿ ಹಾಗೂ ಮೊಬೈಲ್ ನಂಬರ್ ಗಳನ್ನು ಹೊಂದಿತ್ತು ಎಂದು ಹೇಳಲಾಗಿದೆ. ಬೆಂಗಳೂರು ಮಾತ್ರವಲ್ಲದೆ, ಹಲವಾರು ಜಿಲ್ಲೆಗಳ, ತಾಲೂಕುಗಳ ಮತದಾರರ ಪಟ್ಟಿಯನ್ನು ಈ ಕಂಪನಿ ಹೊಂದಿದ್ದು ಅವುಗಳಲ್ಲಿಯೂ ಎಲ್ಲಾ ಮತದಾರರ ಹೆಸರು, ವಿಳಾಸ, ಜಾತಿ ಹಾಗೂ ಮೊಬೈಲ್ ಸಂಖ್ಯೆಗಳನ್ನು ಹೊಂದಿತ್ತು ಎಂಬ ಆರೋಪಗಳು ಕೇಳಿಬಂದಿವೆ.
ಪಕ್ಷೇತರ, ಸಣ್ಣ ಪಕ್ಷಗಳ ಅಭ್ಯರ್ಥಿಗಳೇ ಟಾರ್ಗೆಟ್! :
ಸಾಮಾನ್ಯವಾಗಿ, ಪಕ್ಷೇತರ ಹಾಗೂ ಸಣ್ಣ ಪಕ್ಷಗಳ ಅಭ್ಯರ್ಥಿಗಳನ್ನೇ ಹುಡುಕಿಕೊಂಡು ಹೋಗುತ್ತಿದ್ದ ಈ ಸಂಸ್ಥೆ ಅವರಿಗೆ ಮತದಾರರ ಪಟ್ಟಿಯನ್ನು ನೀಡುವ ಬಗ್ಗೆ ಜಾಹೀರಾತು ನೀಡುತ್ತಿತ್ತು. ನಿಮ್ಮ ಕ್ಷೇತ್ರದಲ್ಲಿ ಇಂತಿಷ್ಟು ಮತದಾರರಿದ್ದಾರೆ. ಅವರಲ್ಲಿ ಪುರುಷ ಮತದಾರರು ಇಷ್ಟಿದ್ದಾರೆ, ಮಹಿಳೆಯರು ಇಷ್ಟಿದ್ದಾರೆ. ಯಾವ್ಯಾವ ಜಾತಿಯವರು ಎಷ್ಟೆಷ್ಟಿದ್ದಾರೆ ಎಂಬೆಲ್ಲಾ ಮಾಹಿತಿಗಳು ನಮ್ಮಲ್ಲಿವೆ. ಅವುಗಳನ್ನು ನೀಡುತ್ತೇವೆ. ನೀವು ನಮಗೆ 25 ಸಾವಿರ ರೂ. ಕೊಡಬೇಕು ಎಂದು ಕೇಳುತ್ತಿದ್ದರು. ಅದಕ್ಕೆ ಸಮ್ಮತಿಸುವ ಅಭ್ಯರ್ಥಿಗಳಿಗೆ, ತನ್ನಲ್ಲಿರುವ ಮತದಾರರ ಪೂರ್ಣ ಮಾಹಿತಿಯನ್ನು ನೀಡುತ್ತಿತ್ತು ಎಂದು ಹೇಳಲಾಗಿದೆ. ಪಕ್ಷೇತರ ಅಥವಾ ಸಣ್ಣ ಪುಟ್ಟ ಪಕ್ಷಗಳ ಅಭ್ಯರ್ಥಿಗಳನ್ನು ಸಂಪರ್ಕಿಸಿದರೆ ಅವರು ಬೇಗನೇ ಇಂಥ ಮಾಹಿತಿಯನ್ನು ಪಡೆದುಕೊಳ್ಳುತ್ತಾರೆ. ಅಲ್ಲದೆ, ಅಂಥವರಿಗೆ 25 ಸಾವಿರ ರೂ. ಕೊಡುವುದು ಅಂಥಾ ಅಸಾಧ್ಯವೇನಲ್ಲ ಎಂಬುದು ಈ ಖಾಸಗಿ ಸಂಸ್ಥೆಯ ಲೆಕ್ಕಾಚಾರವಾಗಿತ್ತು ಎನ್ನಲಾಗಿದೆ.
ಇದನ್ನೂ ಓದಿ : ಬಿಬಿಎಂಪಿ ವ್ಯಾಪ್ತಿಯಲ್ಲಿ 94 ಲಕ್ಷ ಮತದಾರರು: ಪರಿಷ್ಕೃತ ಮತದಾರರ ಪಟ್ಟಿ ಪ್ರಕಟ
ದೂರು ನೀಡಿದ್ಯಾರು? :
ಬೆಂಗಳೂರಿನ ಕ್ಷೇತ್ರವೊಂದರಲ್ಲಿ ಪಕ್ಷೇತರ ಅಭ್ಯರ್ಥಿಯೊಬ್ಬರನ್ನು ಈ ಸಂಸ್ಥೆ ಇದೇ ರೀತಿಯಲ್ಲಿ ಸಂಪರ್ಕಿಸಿತ್ತು. ಅವರು ಸಂಸ್ಥೆಯ ಆಫರನ್ನು ತಿರಸ್ಕರಿಸಿದ್ದರು. ಆದರೆ, ಇದೇ ಸಂಸ್ಥೆಯು ಬೇರೆ ಅಭ್ಯರ್ಥಿಗಳನ್ನು ಸಂಪರ್ಕಿಸಿ ಈ ರೀತಿಯ ವ್ಯವಹಾರಕ್ಕೆ ಇಳಿದಾಗ, ಅವರು ಸೆನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.