ಇತಿಹಾಸವನ್ನು ವಿರೂಪಗೊಳಿಸುವ ಮತ್ತೊಂದು ಪ್ರಯತ್ನ

ನಾ ದಿವಾಕರ

ಇತಿಹಾಸವನ್ನು ತನ್ನ ಸೈದ್ಧಾಂತಿಕ, ತಾತ್ವಿಕ ನಿಲುವುಗಳಿಗೆ ಪೂರಕವಾಗಿ ಹೇಳುವ ಒಂದು ಪರಂಪರೆ ಆಳುವ ವರ್ಗಗಳಲ್ಲಿ ಮೊದಲಿನಿಂದಲೂ ಕಾಣಬಹುದು. ಒಂದು ಭೌಗೋಳಿಕ ಪ್ರದೇಶದಲ್ಲಿ ಶತಮಾನಗಳಿಂದ ನಡೆದಿರಬಹುದಾದ ಚಾರಿತ್ರಿಕ ಘಟನೆಗಳನ್ನು ಸಮಕಾಲೀನ ಅಧಿಕಾರ ರಾಜಕಾರಣಕ್ಕೆ ಪೂರಕವಾಗುವಂತೆ ತಿರುಚಿ ಹೇಳುವುದು ಅಧಿಕಾರ ಪೀಠಗಳ ಪರಂಪರೆಯಾಗಿಯೇ ಬೆಳೆದುಬಂದಿದೆ. ಇದಕ್ಕೆ ಭಾರತವನ್ನು 200 ವರ್ಷಗಳ ಕಾಲ ಆಳಿದ ಬ್ರಿಟೀಷ್ ವಸಾಹತು ಸರ್ಕಾರವೂ ಹೊರತಲ್ಲ,  ಸ್ವತಂತ್ರ ಗಣತಂತ್ರ , #ಆತ್ಮನಿರ್ಭರ ಭಾರತವೂ ಹೊರತಲ್ಲ.

ಶಿಕ್ಷಣ ಒಂದು ಸಮಾಜವನ್ನು ಸರಿದಾರಿಯಲ್ಲಿ ಕೊಂಡೊಯ್ಯಬಹುದಾದ ಪ್ರಮುಖ ಸಾಧನ. ಒಂದು ರೀತಿಯಲ್ಲಿ ಏಕೈಕ ಸಾಧನವೂ ಹೌದು. ಏಕೆಂದರೆ ಶಿಕ್ಷಣದ ಮೂಲಕ ಒಂದು ಭೌಗೋಳಿಕ ರಾಷ್ಟ್ರದ ಪ್ರಜೆಗಳಿಗೆ ನೀಡಬಹುದಾದ ಜ್ಞಾನ ಒಂದು ಪರಂಪರೆಯನ್ನು ಸೃಷ್ಟಿಸುತ್ತದೆ. ಸಾಮಾನ್ಯ ಜನರಿಗೆ ತಮ್ಮ ಗತ ಇತಿಹಾಸದ ಆಗುಹೋಗುಗಳನ್ನು ವಸ್ತುನಿಷ್ಟವಾಗಿ ತಿಳಿಸುವುದೇ ಅಲ್ಲದೆ, ತಾವು ವಾಸಿಸುವ ಭೂ ಪ್ರದೇಶದ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಮತ್ತು ಸಮಾಜಶಾಸ್ತ್ರೀಯ ಹೆಜ್ಜೆ ಗುರುತುಗಳನ್ನು, ಪ್ರಾಮಾಣಿಕತೆಯಿಂದ ತಿಳಿಸುವುದರ ಮೂಲಕ, ಒಂದು ಪೀಳಿಗೆಯನ್ನು ಸೌಹಾರ್ದಯುತ ಮಾನವ ಸಮಾಜದ ನಿರ್ಮಾಣದತ್ತ ಕೊಂಡೊಯ್ಯಲು ಸಾಧ್ಯ. ಹಾಗಾಗಿಯೇ ವಿಶ್ವದ ಎಲ್ಲ ದಾರ್ಶನಿಕರೂ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ, ಮಹತ್ವ ನೀಡಿರುವುದನ್ನು ಗಮನಿಸಬಹುದು.

ಪ್ರಜಾಪ್ರಭುತ್ವವನ್ನು ಗೌರವಿಸುವ ಮತ್ತು ನೈಜ ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಮಾನ್ಯತೆ ನೀಡುವ ಆಳುವ ವ್ಯವಸ್ಥೆಗಳು ಇತಿಹಾಸದಿಂದ ಕಲಿತ ಪಾಠಗಳಿಂದಲೇ ಭವಿಷ್ಯದ ಮಾರ್ಗಗಳನ್ನು ಸರಿಪಡಿಸಿಕೊಳ್ಳುತ್ತಾ ಸಾಗಬೇಕಾಗುತ್ತದೆ. ಆದರೆ ಸಮಕಾಲೀನ ರಾಜಕಾರಣದ ಹಿನ್ನೆಲೆಯಲ್ಲಿ ಹೇಳುವುದಾದರೆ, ಯಾವುದೇ ದೇಶದಲ್ಲಿ ಇದು ಸಾಧ್ಯವಾಗುತ್ತಿಲ್ಲ. ಏಕೆಂದರೆ ಜನಸಾಮಾನ್ಯರನ್ನು, ಸಮಾಜವನ್ನು ಕತ್ತಲಲ್ಲಿರಿಸುವ ಮೂಲಕವೇ ಬಂಡವಾಳ-ಮಾರುಕಟ್ಟೆ ವ್ಯವಸ್ಥೆ ತನ್ನ ಶೋಷಕ ಪರಂಪರೆಯನ್ನು ಜೀವಂತವಾಗಿರಿಸಲು ಬಯಸುತ್ತದೆ. ನೈಜ ಇತಿಹಾಸವನ್ನು ತನ್ನ ಅನುಕೂಲಕ್ಕೆ ತಕ್ಕಂತೆ ತಿರುಚಿ ಹೇಳುವ ಮೂಲಕ, ಸಮಾಜವನ್ನು ಭಾವನಾತ್ಮಕ ನೆಲೆಯಲ್ಲೇ ಬಂಧಿಸಿ, ಶೋಷಣೆಯ ಮಾರ್ಗಗಳಿಗೆ ನೆರವಾಗುತ್ತದೆ. ವಸಾಹತು ಕಾಲದ ಬ್ರಿಟೀಷ್ ಅವಧಿಯಲ್ಲೂ ಇದು ಸಂಭವಿಸಿತ್ತು, ಆತ್ಮನಿರ್ಭರ ಭಾರತದ ಸಂದರ್ಭದಲ್ಲೂ ಇದು ಸಂಭವಿಸುತ್ತಿದೆ. ಕೇಂದ್ರ ಸರ್ಕಾರ ಪದವಿ ಶಿಕ್ಷಣದಲ್ಲಿ ಇತಿಹಾಸದ ಪುಸ್ತಕಗಳನ್ನು ಪರಿಷ್ಕರಿಸಲು ಮುಂದಾಗಿರುವುದನ್ನು ಈ ಹಿನ್ನೆಲೆಯಲ್ಲೇ ನೋಡಬೇಕಾಗುತ್ತದೆ.

ಇದನ್ನು ಓದಿ: ಪದವಿ ಶಿಕ್ಷಣಕ್ಕೆ ಹೊಸ ಪಠ್ಯ : ಶಿಕ್ಷಣದ ಮತೀಯವಾದಿಕರಣಕ್ಕೆ ದಾರಿ ಮಾಡಿಕೊಡಲಿದೆಯೇ?

ನೂತನ ಪಠ್ಯಕ್ರಮಕ್ಕೆ ಯುಜಿಸಿ ಚಿಂತನೆ

ವಿಶ್ವವಿದ್ಯಾಲಯಗಳ ಪದವಿ ತರಗತಿಗಳಲ್ಲಿ ಬೋಧಿಸಲಾಗುತ್ತಿರುವ ಇತಿಹಾಸ ಪಠ್ಯಗಳನ್ನು ಪರಿಷ್ಕರಿಸಲು ಯುಜಿಸಿ ನಿರ್ಧರಿಸಿದ್ದು ಈ ನಿಟ್ಟಿನಲ್ಲಿ ಒಂದು ದಸ್ತಾವೇಜು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ. ಪದವಿ ತರಗತಿಗಳ ಇತಿಹಾಸ ಪಠ್ಯಗಳಲ್ಲಿ ಹಿಂದೂ ಮತಧಾರ್ಮಿಕ ಗ್ರಂಥಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ಮತ್ತು ಮುಘಲ್ ಆಳ್ವಿಕೆಯ ಇತಿಹಾಸವನ್ನು ಅಲಕ್ಷಿಸುವ ನಿಟ್ಟಿನಲ್ಲಿ ಹೊಸ ಪಠ್ಯಕ್ರಮವೊಂದನ್ನು ಸಿದ್ಧಪಡಿಸಲಾಗಿದ್ದು, ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಸಲ್ಲಿಸಲಾಗಿದೆ. ಮೊಟ್ಟಮೊದಲ ಬಾರಿಗೆ ಯುಜಿಸಿ ಸಂಪೂರ್ಣ ಪಠ್ಯಕ್ರಮವನ್ನು ಸಿದ್ಧಪಡಿಸಿದ್ದು, ದೇಶದ ಇತಿಹಾಸವನ್ನು ಸಮರ್ಪಕವಾಗಿ ಅರ್ಥಮಾಡಿಕೊಳ್ಳಲು ನೆರವಾಗುವಂತೆ ಮಧ್ಯಕಾಲೀನ ಭಾರತೀಯ ಇತಿಹಾಸವನ್ನು ಬೋಧಿಸಲು ಯೋಜಿಸಲಾಗಿದೆ ಎಂದು ತನ್ನ ಕರಡುಪ್ರತಿಯ ಪೀಠಿಕೆಯಲ್ಲಿ ಯುಜಿಸಿ ಹೇಳಿದೆ.

ಈ ಹಿಂದೆಯೂ ಬಿಜೆಪಿ ಸರ್ಕಾರ ಇತಿಹಾಸದಲ್ಲಿ ಹಿಂದೂ ಮತಧಾರ್ಮಿಕ ಭಾವನೆಗಳನ್ನು ಶೋಧಿಸುವ ನಿಟ್ಟಿನಲ್ಲಿ ಇಂತಹ ಒಂದು ಪ್ರಯತ್ನವನ್ನು ಮಾಡಿತ್ತು. ಈ ಬಾರಿ ಹಿಂದೂ ಧರ್ಮವನ್ನೇ ಕೇಂದ್ರೀಕರಿಸುವಂತೆ “ಭಾರತೀಯ ಸಾಹಿತ್ಯದ ಭವ್ಯ ಪರಂಪರೆ- ವೇದ ವೇದಾಂಗ, ಉಪನಿಷತ್ತುಗಳು, ಮಹಾಕಾವ್ಯಗಳು, ಜೈನ ಬೌದ್ಧ ಸಾಹಿತ್ಯ, ಸ್ಮೃತಿ ಮತ್ತು ಪುರಾಣಗಳು ” ಇವೆಲವನ್ನೂ ಒಳಗೊಂಡಂತಹ ಇತಿಹಾಸ ಪಠ್ಯಗಳನ್ನು ರಚಿಸಲು ಯುಜಿಸಿ ನಿರ್ಧರಿಸಿದೆ. ಮತಧಾರ್ಮಿಕ ನೆಲೆಯಲ್ಲಿ ತಟಸ್ಠ ಎನ್ನಬಹುದಾದ ಕೌಟಿಲ್ಯನ ಅರ್ಥಶಾಸ್ತ್ರದಂತಹ ಪಠ್ಯಗಳನ್ನು ಕೈಬಿಡಲು ಯೋಚಿಸಲಾಗಿದೆ. ಪ್ರಾಚೀನ ಮತ್ತು ಮಧ್ಯಕಾಲೀನ ಇತಿಹಾಸದ ಬಗ್ಗೆ ಬೆಳಕು ಚೆಲ್ಲುವ ಆರ್ ಎಸ್ ಶರ್ಮ, ಇರ್ಫಾನ್ ಹಬೀಬ್ ಮುಂತಾದವರ ಕೃತಿಗಳನ್ನು ಪಠ್ಯಕ್ರಮದಿಂದ ಕೈಬಿಡಲು ಯೋಚಿಸಲಾಗಿದೆ.

ಮತ್ತೊಂದೆಡೆ ಕೇವಲ ಋಗ್ವೇದದಲ್ಲಿ ಮಾತ್ರವೇ ಪ್ರಸ್ತಾಪವಾಗಿರುವ ಸರಸ್ವತಿ ನದಿ ಮತ್ತು ಅದರ ಸುತ್ತಲಿನ ಪ್ರಾಚೀನ ನಾಗರಿಕತೆ ಪಠ್ಯಕ್ರಮದಲ್ಲಿ ಸ್ಥಾನ ಪಡೆಯಲಿದೆ. ಪ್ರಾಚೀನ ಭಾರತದ ಇತಿಹಾಸದಲ್ಲಿ ಸರಸ್ವತಿ ನದಿಯನ್ನು ಕುರಿತ ಉಲ್ಲೇಖ ಇರುವುದಾದರೂ ಇದು ಇತಿಹಾಸ ಸಂಶೋಧಕರಿಂದ ಇಂದಿಗೂ ಸಾಕ್ಷ್ಯಾಧಾರಗಳನುಸಾರವಾಗಿ ನಿಖರವಾದ ಮಾಹಿತಿ ಲಭ್ಯವಾಗಿಲ್ಲ. ಪುರಾತತ್ವಶಾಸ್ತ್ರ ಇಲಾಖೆಯಿಂದಲೂ ಸಹ ಇದು ಅಧಿಕೃತವಾದ ಮಾನ್ಯತೆ ಪಡೆದಿಲ್ಲ. ಮುಘಲರ ಆಗಮನವನ್ನು ಅತಿಕ್ರಮಣ ಎಂದು ಬಣ್ಣಿಸಿರುವ ಪಠ್ಯದಲ್ಲಿ ಬ್ರಿಟೀಷರ ವಸಾಹತು ಮತ್ತು ಆಳ್ವಿಕೆಯನ್ನು ಪ್ರಾದೇಶಿಕ ವಿಸ್ತರಣೆ ಎಂದೇ ಬಣ್ಣಿಸಲಾಗಿದೆ. ಕರಡು ಪಠ್ಯಕ್ರಮದಲ್ಲಿ 13 ರಿಂದ 18ನೆಯ ಶತಮಾನದ ಮುಸ್ಲಿಂ ಆಳ್ವಿಕೆಯ ಇತಿಹಾಸಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಲಾಗಿಲ್ಲ.

ಭಾರತದ ಭವ್ಯ ಇತಿಹಾಸ ಮತ್ತು ವ್ಯಾಪಕವಾದ ಚಾರಿತ್ರಿಕ ಹಿನ್ನೆಲೆಯನ್ನು ಸಮರ್ಪಕವಾಗಿ ಬಿಂಬಿಸುವ ಸಲುವಾಗಿ ಅತಿ ಸೂಕ್ಷ್ಮ ಚಾರಿತ್ರಿಕ ಅಂಶಗಳಿಗೂ ಪ್ರಾಮುಖ್ಯತೆ ನೀಡಲಾಗಿದ್ದು, ಇತಿಹಾಸದ ನೈಜ ಚಿತ್ರಣ ನೀಡಲು ಈ ಪ್ರಯತ್ನ ಮಾಡಲಾಗಿದೆ ಎಂದು ಯುಜಿಸಿ ತನ್ನ ಕರಡು ಸಲಹೆಯಲ್ಲಿ ಹೇಳಿದೆ. ಈ ನಿಟ್ಟಿನಲ್ಲಿ ಯುಜಿಸಿ ವಿಶ್ವವಿದ್ಯಾಲಯಗಳಿಗೆ ಸಾಮಾನ್ಯ ನಿರ್ದೇಶನವನ್ನು ಮಾತ್ರ ನೀಡುತ್ತಿತ್ತು. ಶೇ 20 ರಿಂದ 30ರಷ್ಟು ಭಿನ್ನ ಮಾರ್ಗ ಅನುಸರಿಸಲು ವಿಶ್ವವಿದ್ಯಾಲಯಗಳಿಗೆ ಅವಕಾಶ ನೀಡಲಾಗುತ್ತಿತ್ತು.  ಇದೇ ಮೊದಲ ಬಾರಿಗೆ ವಿಶ್ವವಿದ್ಯಾಲಯಗಳ ವ್ಯಾಪ್ತಿಯನ್ನೂ ಮೀರಿ ಯುಜಿಸಿ ಸಂಪೂರ್ಣ ಪಠ್ಯಕ್ರಮವನ್ನು ತಾನೇ ಸಿದ್ಧಪಡಿಸಿರುವುದು ಸಾಕಷ್ಟು ಚರ್ಚೆಗೀಡಾಗಿದೆ.

ಇದನ್ನು ಓದಿ: ವಿಶೇಷ ಸ್ಥಾನಮಾನ ಇದ್ದರೂ ಸಿಗದ ಉದ್ಯೋಗ – ಕನ್ನಡಿಯೊಳಗಿನ ಗಂಟಾಯ್ತೆ 371 ಜೆ ಕಲಂ

ಭಾರತದ ಪರಿಕಲ್ಪನೆ ಎಂದಿದ್ದ ಅಧ್ಯಾಯವನ್ನು ಈಗ ಭರತವರ್ಷದ ಪರಿಕಲ್ಪನೆ ಎಂದು ಮಾರ್ಪಾಡು ಮಾಡಲಾಗಿದ್ದು ಇದರಲ್ಲಿ “ ಭಾರತೀಯ ಸಾಹಿತ್ಯದ ಭವ್ಯ ಪರಂಪರೆ- ವೇದ ವೇದಾಂಗ, ಉಪನಿಷತ್ತುಗಳು, ಮಹಾಕಾವ್ಯಗಳು, ಜೈನ ಬೌದ್ಧ ಸಾಹಿತ್ಯ, ಸ್ಮೃತಿ ಮತ್ತು ಪುರಾಣಗಳು ” ಒಂದು ಅಧ್ಯಾಯವಾಗಿರುತ್ತದೆ. ಭಾರತೀಯ ಜ್ಞಾನಪರಂಪರೆ, ಕಲೆ ಮತ್ತು ಸಂಸ್ಕೃತಿ ವಿಭಾಗದಲ್ಲಿ ಭಾರತೀಯ ಕಲೆ ಮತ್ತು  ಸಂಸ್ಕೃತಿಯ ಮೂಲ ಲಕ್ಷಣಗಳು, ಭಾರತೀಯ ಶಿಕ್ಷಣ ಪದ್ಧತಿ, ಭಾರತೀಯ ಶೌರ್ಯ ಮತ್ತು ಪರಾಕ್ರಮದ ನೀತಿ ಸೂತ್ರಗಳು ಮತ್ತು ಸಂಸ್ಕೃತ, ಪಾಲಿ, ಪ್ರಾಕೃತ್ ಭಾಷೆಗಳನ್ನು ಕುರಿತ ಅಧ್ಯಾಯಗಳನ್ನು ಸೇರ್ಪಡಿಸಲಾಗಿದೆ. ಧರ್ಮ ಮತ್ತು ತತ್ವಶಾಸ್ತ್ರಗಳನ್ನು ಕುರಿತ ಅಧ್ಯಾಯದಲ್ಲಿ ಧರ್ಮ ಮತ್ತು ದರ್ಶನದ ಭಾರತೀಯ ಪರಿಕಲ್ಪನೆ, ವಸುದೈವ ಕುಟುಂಬಕಂ ಪರಿಕಲ್ಪನೆ, ಕುಟುಂಬ ಮತ್ತು ಸಮಾಜ, ರಾಜಕಾರಣ ಮತ್ತು ಆಡಳಿತ ವ್ಯವಸ್ಥೆ ಹಾಗೂ, ಜಾನಪದ ಮತ್ತು ಗ್ರಾಮ ಸ್ವರಾಜ್ಯವನ್ನು ಕುರಿತ ಅಧ್ಯಾಯಗಳಿವೆ. ವಿಜ್ಞಾನ ಪರಿಸರ ಮತ್ತು ವೈದ್ಯಕೀಯ ವಿಜ್ಞಾನದ ಅಧ್ಯಾಯದಲ್ಲಿ ಪ್ರಾಚೀನ ಭಾರತದಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನ, ಭಾರತದ ದೃಷ್ಟಿಯಲ್ಲಿ ಪರಿಸರ ರಕ್ಷಣೆ, ಜೀವ ವಿಜ್ಞಾನವನ್ನು ಕುರಿತಂತೆ ಆಯುರ್ವೇದ, ಯೋಗ ಮತ್ತು ನ್ಯಾಚುರೋಪತಿ ಕುರಿತ ಅಧ್ಯಾಯಗಳಿವೆ. ಗಣಿತ ಶಾಸ್ತ್ರ ಮತ್ತು ಭಾರತೀಯ ಸಂಖ್ಯಾ ಪದ್ಧತಿ ಈ ಅಧ್ಯಾಯದಲ್ಲಿ ಒಳಗೊಳ್ಳಲಾಗಿದೆ.

ಋಗ್ವೇದದಲ್ಲಿ ಉಲ್ಲೇಖ ಮಾತ್ರವಾಗಿ ಬರುವ ಸರಸ್ವತಿ ನದಿ ಮತ್ತು ಅದರ ಸುತ್ತಲಿನ ನಾಗರಿಕತೆಯನ್ನು ಕುರಿತು ಪುರಾತತ್ವ ಶಾಸ್ತ್ರದ ವಿದ್ವಾಂಸರು ಮತ್ತು ಇತಿಹಾಸ ಸಂಶೋಧಕರು ತಮ್ಮದೇ ಆದ ಅನುಮಾನಗಳನ್ನು ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಕಳೆದ ಒಂದು ಶತಮಾನದಿಂದಲೂ ಈ ಕುರಿತ ವಾದ ವಿವಾದಗಳು ನಡೆಯುತ್ತಿದ್ದು, ಭಾರತೀಯ ಮತ್ತು ಪಾಶ್ಚಿಮಾತ್ಯ ಇತಿಹಾಸ ತಜ್ಞರು, ವಿದ್ವಾಂಸರು ಸರಸ್ವತಿ ನದಿ ಮತ್ತು ಸರಸ್ವತಿ ನಾಗರಿಕತೆಯ ಅಸ್ತಿತ್ವವನ್ನೇ ಪ್ರಶ್ನಿಸಿದ್ದಾರೆ. ಆದರೂ ಯುಜಿಸಿ ಸಿದ್ಧಪಡಿಸಿರುವ ಪಠ್ಯಕ್ರಮದಲ್ಲಿ ಸಿಂಧೂ-ಸರಸ್ವತಿ, ಸರಸ್ವತಿ ನದಿಯ ನಾಗರಿಕತೆ ಮತ್ತು ವೇದ ಕಾಲದ ನಾಗರಿಕತೆಯ ಬಗ್ಗೆ ಒಂದು ಅಧ್ಯಾಯವನ್ನು ಸೇರಿಸಲಾಗಿದೆ. ಪೌರಾಣಿಕ ಪರಿಕಲ್ಪನೆಯ ಸರಸ್ವತಿ ನದಿಯ ಉಗಮ, ಹರಿವು, ವ್ಯಾಪ್ತಿ ಮತ್ತು ವಿಸ್ತಾರವನ್ನು ಅಧ್ಯಯನ ಮಾಡಲು ಈಗಾಗಲೇ ಕೇಂದ್ರ ಸರ್ಕಾರ ಕೋಟ್ಯಂತರ ರೂಗಳನ್ನು ಖರ್ಚು ಮಾಡಲು ಮುಂದಾಗಿದ್ದು, ಇದು ಹಲವಾರು ಅನುಮಾನಗಳಿಗೆ ಆಸ್ಪದ ನೀಡಿದೆ.

“ಸಮಾಜ ಮತ್ತು ಅರ್ಥವ್ಯವಸ್ಥೆ” ವಿಭಾಗದಲ್ಲಿ ಹಿಂದೂ ಮತ್ತು ಮುಸ್ಲಿಂ ಸಮಾಜಗಳು ಎಂದು ಎರಡು ಪ್ರತ್ಯೇಕ ಅಧ್ಯಾಯಗಳಿರುವುದು, ಮಧ್ಯಕಾಲೀನ ಭಾರತದಲ್ಲಿ ಎರಡೂ ಸಮಾಜಗಳನ್ನು ಭಿನ್ನ ನೆಲೆಯಲ್ಲಿ ನೋಡುವ ಪ್ರಯತ್ನವೇ ಆಗಿದೆ ಎಂದು ಇತಿಹಾಸ ತಜ್ಞರು ಆಕ್ಷೇಪ ವ್ಯಕ್ತಪಡಿಸುತ್ತಾರೆ. ಈ ಎರಡೂ ಸಮುದಾಯಗಳು ಎಲ್ಲ ಇತಿಹಾಸದ ಕಾಲಘಟ್ಟಗಳಲ್ಲೂ ಸಹಬಾಳ್ವೆಯೊಂದಿಗೇ ಇದ್ದುದನ್ನು ಈವರೆಗಿನ ಇತಿಹಾಸ ಸಂಶೋಧನೆ ಮತ್ತು ಅಧ್ಯಯನಗಳು ಸ್ಪಷ್ಟಪಡಿಸುತ್ತವೆ. ಹೊಸ ಪಠ್ಯಕ್ರಮದಲ್ಲಿ 13ನೆಯ ಶತಮಾನದಿಂದ 18ನೆಯ ಶತಮಾನದ ಇತಿಹಾಸವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ.

ಇದನ್ನು ಓದಿ: ಹೊಸ ಶಿಕ್ಷಣ ನೀತಿ ಮತ್ತು ತಾಯ್ನುಡಿ ಕಲಿಕೆ

ಹೊಸ ಕರಡು ಪಠ್ಯಕ್ರಮದಲ್ಲಿ ಮಹಾತ್ಮ ಗಾಂಧಿ, ಜವಹರಲಾಲ್ ನೆಹರೂ, ಸರದಾರ್ ಪಟೇಲ್ ಮತ್ತು ಭೀಮರಾವ್ ಅಂಬೇಡ್ಕರ್ ಅವರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿಲ್ಲದೆ. 20ನೆಯ ಶತಮಾನದ ಆರಂಭಿಕ ಕಾಲಘಟ್ಟದ ಕೋಮುವಾದದ ಬೆಳವಣಿಗೆಗಳು ಮತ್ತು 1857 ರಿಂದ 1950ರ ನಡುವಿನ ದಲಿತ ರಾಜಕಾರಣ ಬಗ್ಗೆಯೂ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿಲ್ಲ ಎಂಬ ಆಕ್ಷೇಪಗಳು ಕೇಳಿಬಂದಿವೆ. 1857ರ ಸಿಪಾಯಿ ದಂಗೆಯನ್ನು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದು ವ್ಯಾಖ್ಯಾನಿಸಲಾಗಿದೆ. ಆದರೆ 1857ಕ್ಕೂ ಮುನ್ನ ನಡೆದ ಬಂಗಾಲದ ಸನ್ಯಾಸಿ ದಂಗೆ, ಒಡಿಷಾದ ಪೈಕಾ ದಂಗೆ, ತಮಿಳುನಾಡಿನ ಪಾಲಿಗಾರ್ ದಂಗೆಗಳ ಪ್ರಸ್ತಾಪವನ್ನೇ ಕೈಬಿಡಲಾಗಿದೆ. 1905ರ ಬಂಗಾಲ ವಿಭಜನೆ ಮತ್ತು ಅದರ ವಿರುದ್ಧ ನಡೆದ ಪ್ರತಿರೋಧದ ಹೋರಾಟಗಳ ಉಲ್ಲೇಖವನ್ನೂ ಸಹ ಕೈಬಿಡಲಾಗಿದೆ.

ಪರ ವಿರೋಧದ ನಡುವೆ

ಕಳೆದ ಮೂರು ನಾಲ್ಕು ದಶಕಗಳ ಸಾಂಸ್ಕೃತಿಕ ರಾಜಕಾರಣ ಮತ್ತು ಮತೀಯ ರಾಜಕಾರಣದ ಹಿನ್ನೆಲೆಯಲ್ಲಿ ಈಗಾಗಲೇ ದೇಶದ ವಿಶ್ವವಿದ್ಯಾಲಯಗಳಲ್ಲಿ ಮತೀಯವಾದದ ಛಾಯೆ ದಟ್ಟವಾಗಿ ಆವರಿಸಿದೆ. ಈ ಬೆಳವಣಿಗೆಗೆ ಪೂರಕವಾಗಿಯೇ ಇತಿಹಾಸ ಪಠ್ಯಗಳಲ್ಲಿರುವ ಜಾತ್ಯತೀತ ವಾಸ್ತವಗಳನ್ನು ತೆಗೆದುಹಾಕುವ ಮೂಲಕ ಕೇಂದ್ರ ಬಿಜೆಪಿ ಸರ್ಕಾರ ತನ್ನ ಹಿಂದುತ್ವ ರಾಜಕಾರಣಕ್ಕೆ ಒಂದು ಸ್ಪಷ್ಟ ಶೈಕ್ಷಣಿಕ-ಬೌದ್ಧಿಕ ತಳಹದಿಯನ್ನು ನಿರ್ಮಿಸುತ್ತಿರುವುದು ಸ್ಪಷ್ಟವಾಗಿದೆ. ಪಠ್ಯಕ್ರಮಗಳಲ್ಲಿನ ಚಾರಿತ್ರಿಕ ಸತ್ಯಗಳನ್ನು ವಿರೂಪಗೊಳಿಸುವ ಮೂಲಕ ಅಥವಾ ತನ್ನ ಸೈದ್ಧಾಂತಿಕ ಪರಿಕಲ್ಪನೆಗಳಿಗೆ ಅನುಸಾರವಾಗಿ ತಿರುಚುವ ಪ್ರವೃತ್ತಿಯನ್ನು ಬಿಜೆಪಿ ಆಳ್ವಿಕೆಯ ಎಲ್ಲ ರಾಜ್ಯಗಳಲ್ಲೂ ಕಾಣುತ್ತಲೇ ಬಂದಿದ್ದೇವೆ. ಕರ್ನಾಟಕದ ಸಂದರ್ಭದಲ್ಲೂ ಇತ್ತೀಚೆಗೆ ಸಚಿವರೊಬ್ಬರು ಟಿಪ್ಪೂ ಇತಿಹಾಸವನ್ನು ಪಠ್ಯಕ್ರಮದಿಂದ ಕೈಡುವಂತೆ ಆಗ್ರಹಿಸಿದ್ದುದನ್ನು ಗಮನಿಸಬಹುದು.

2020ರ ನೂತನ ಶಿಕ್ಷಣ ನೀತಿಯನ್ನು ಜಾರಿಗೊಳಿಸುತ್ತಲೇ ಉನ್ನತ ವ್ಯಾಸಂಗದ ಪದವಿಗಳಲ್ಲಿ, ಕಾಲೇಜುಗಳಲ್ಲಿ ಇತಿಹಾಸ ಪಠ್ಯವನ್ನು ವಿರೂಪಗೊಳಿಸುವ ಮೂಲಕ ಭಾರತದ ನೈಜ ಚರಿತ್ರೆಯನ್ನು ಮರೆಮಾಚಿ, ಕೋಮುವಾದಿ ದೃಷ್ಟಿಕೋನದ ಇತಿಹಾಸವನ್ನು ಪರಿಚಯಿಸುವುದು ಒಂದು ರಾಜಕೀಯ ತಂತ್ರವೇ ಆಗಿದೆ. ಹಾಗೆಯೇ ಭಾರತೀಯ ಪರಂಪರೆಯನ್ನು ವೈಭವೀಕರಿಸುವ ನೆಪದಲ್ಲಿ ಅವೈಜ್ಞಾನಿಕ ಚಿಂತನೆಗಳನ್ನು ಪಠ್ಯಕ್ರಮಗಳಲ್ಲಿ ಸೇರಿಸುವ ಮೂಲಕ ವಿದ್ಯಾರ್ಥಿಗಳನ್ನು ದಿಕ್ಕುತಪ್ಪಿಸುವ ಪ್ರಯತ್ನವೂ ಇದಾಗಿದೆ. ವೇದ ಗಣಿತ, ಜ್ಯೋತಿಷ್ಯ ವಿಜ್ಞಾನ ಮುಂತಾದ ಅವೈಜ್ಞಾನಿಕ ಮತ್ತು ಅವೈಚಾರಿಕ ಪಠ್ಯಕ್ರಮಗಳಿಗೆ ಈಗಾಗಲೇ ಹಲವು ವಿಶ್ವವಿದ್ಯಾಲಯಗಳಲ್ಲಿ ಮಾನ್ಯತೆ ದೊರೆತದ್ದೂ ಆಗಿದೆ. ಈಗ ಯುಜಿಸಿ ಈ ಅಪ್ರಬುದ್ಧ ನೀತಿಗಳಿಗೆ ಅಧಿಕೃತ  ಮಾನ್ಯತೆ ನೀಡಲು ಮುಂದಾಗಿದೆ.

ಇತಿಹಾಸವನ್ನು ತಿರುಚುವುದು ಎಲ್ಲ ಆಳುವ ವರ್ಗಗಳೂ ಅನುಸರಿಸುವ ಒಂದು ತಂತ್ರಗಾರಿಕೆಯಾಗಿದ್ದು, ಅಧಿಕಾರ ರಾಜಕಾರಣದಲ್ಲಿ ಹೆಚ್ಚಿನ ಪ್ರಾಬಲ್ಯ ಗಳಿಸಲು ಈ ತಂತ್ರವನ್ನು ಅನುಸರಿಸಲಾಗುತ್ತದೆ. ಭಾರತದ ಸಂದರ್ಭದಲ್ಲೇ ನೋಡುವುದಾದರೆ ಹನ್ನೆರಡನೆ ತರಗತಿಯವರೆಗಿನ ಇತಿಹಾಸ ಪಠ್ಯಕ್ರಮದಲ್ಲಿ 20ನೆಯ ಶತಮಾನದಲ್ಲೂ ಭಾರತೀಯ ಸಮಾಜದಲ್ಲಿದ್ದ ಅಸ್ಪೃಶ್ಯತೆ, ಜೀತ ಪದ್ಧತಿ, ಜಾತಿ ತಾರತಮ್ಯಗಳು, ದೇವದಾಸಿ ಪದ್ಧತಿಯಂತಹ ಅನಿಷ್ಟಗಳನ್ನು ಪರಿಚಯಿಸಿರುವುದು ಕಡಿಮೆಯೇ. ಮಹಾತ್ಮ ಗಾಂಧಿ ಆಫ್ರಿಕಾದಲ್ಲಿ ಅನುಭವಿಸಿದ ಅಪಮಾನವನ್ನು ವೈಭವೀಕರಿಸುವ ನಮ್ಮ ಇತಿಹಾಸ ಪಠ್ಯಗಳು , ಡಾ ಬಿ ಆರ್ ಅಂಬೇಡ್ಕರ್ ಭಾರತದಲ್ಲೇ ಅನುಭವಿಸಿದ ತಾರತಮ್ಯ ಮತ್ತು ಅಪಮಾನಗಳನ್ನು ಸಂಪೂರ್ಣವಾಗಿ ದಾಖಲಿಸಿಲ್ಲ ಎನ್ನುವುದೂ ಗಮನಿಸಬೇಕಾದ ಅಂಶ.

ಇದನ್ನು ಓದಿ: ನೂತನ ಶಿಕ್ಷಣ ನೀತಿ 2020: ಸದಾಶಯಗಳು ಮತ್ತು ಹುನ್ನಾರಗಳು

ಭಾರತದ ಇತಿಹಾಸವನ್ನು ಹಿಂದೂ ಸುವರ್ಣಯುಗ, ಮುಸ್ಲಿಂ ಯುಗ ಮತ್ತು ವಸಾಹತು ಯುಗ ಎಂದು ವಿಂಗಡಿಸುವ ಬ್ರಿಟೀಷ್ ಆಡಳಿತ ನೀತಿಯನ್ನೇ ಸ್ವತಂತ್ರ ಭಾರತದಲ್ಲೂ ಅನುಸರಿಸಿರುವುದನ್ನೂ ಇಲ್ಲಿ ಗಮನಿಸಬೇಕಾಗುತ್ತದೆ. ಇದೂ ಸಹ ವಿರೂಪಗೊಳಿಸಿದ ಇತಿಹಾಸವೇ ಆಗಿದೆ. ಭಾರತದ ಇತಿಹಾಸದಲ್ಲಿ ಪರ್ಷಿಯನ್ ದೊರೆಗಳ ಪಾತ್ರ ಮತ್ತು ಪರ್ಷಿಯನ್ ಮತ್ತು ಭಾರತೀಯ ಸಂಸ್ಕøತಿಯ ಸಮ್ಮಿಲನ, ಸಂಸ್ಕøತ ಮತ್ತು ಪರ್ಷಿಯನ್ ಭಾಷೆಗಳ ನಡುವಿನ ಸಮನ್ವಯತೆ ಇವಾವುದನ್ನೂ ಭಾರತದ ಶೈಕ್ಷಣಿಕ ಇತಿಹಾಸ ಪಠ್ಯಕ್ರಮಗಳಲ್ಲಿ ನ್ಯಾಯಯುತವಾಗಿ ಬಿಂಬಿಸಿಲ್ಲ. ಕೆಲವು ಮುಸ್ಲಿಂ ದೊರೆಗಳ ಕ್ರೌರ್ಯ ಮತ್ತು ದಬ್ಬಾಳಿಕೆಯನ್ನು ದಾಖಲಿಸುವ ಪಠ್ಯಗಳಲ್ಲಿ ಭಾರತದಲ್ಲೇ ಪೇಶ್ವೆಯರ ಆಡಳಿತದಲ್ಲಿ ಅಸ್ಪøಶ್ಯ ಸಮುದಾಯಗಳು ಎದುರಿಸಿದ ದೌರ್ಜನ್ಯ ಮತ್ತು ಚಿತ್ರಹಿಂಸೆ, ಕೇರಳದ ಸಮಾಜದಲ್ಲಿದ್ದ ಜಾತಿ ತಾರತಮ್ಯಗಳು ಇದಾವುದನ್ನೂ ದಾಖಲಿಸಲಾಗಿಲ್ಲ.

ಅಧಿಕಾರ ರಾಜಕಾರಣದ ಅನಿವಾರ್ಯತೆಗಳು

ವಿಶ್ವ ಇತಿಹಾಸವನ್ನು ದಾಖಲಿಸುವ ಸಂದರ್ಭದಲ್ಲೂ ಸಹ ಭಾರತದ ಯಾವುದೇ ಹಂತದ ಇತಿಹಾಸ ಪಠ್ಯಕ್ರಮಗಳಲ್ಲಿ ಲ್ಯಾಟಿನ್ ಅಮೆರಿಕದ ಕ್ರಾಂತಿಕಾರಿ ಬೆಳವಣಿಗೆಗಳು, ಕ್ಯೂಬಾದ ಕ್ರಾಂತಿ ಮತ್ತು ದಕ್ಷಿಣ ಆಫ್ರಿಕಾದ ವರ್ಣಬೇಧ ನೀತಿಯ ವಿರುದ್ಧ ನಡೆದ ಅನೇಕ ಕ್ರಾಂತಿಕಾರಿ ಘಟ್ಟಗಳನ್ನು ದಾಖಲಿಸಲಾಗಿಲ್ಲ ಎನ್ನುವುದು ಗಮನಿಸಬೇಕಾದ ಅಂಶ. ಅಮೆರಿಕದ ಸ್ವಾತಂತ್ರ್ಯ ಸಂಗ್ರಾಮ, ಜರ್ಮನಿ ಮತ್ತು ಇಟಲಿಯ ಏಕೀಕರಣ ಮುಂತಾದ ಇತಿಹಾಸಗಳನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಅರ್ಜೆಂಟೈನ, ಚಿಲಿ, ಪೆರು ಮತ್ತು ಮಧ್ಯಪ್ರಾಚ್ಯದ ದೇಶಗಳಲ್ಲಿನ ಕ್ರಾಂತಿಕಾರಿ ಚರಿತ್ರೆಯನ್ನು ಅಧ್ಯಯನ ಮಾಡುವ ಅವಕಾಶವೇ ಇಲ್ಲದಂತೆ ಪಠ್ಯಕ್ರಮವನ್ನು ರಚಿಸಿಕೊಂಡುಬರಲಾಗಿದೆ.

ಈ ನ್ಯೂನತೆಗಳನ್ನು ಸರಿಪಡಿಸುವ ಮೂಲಕ ಭವಿಷ್ಯದ ಪೀಳಿಗೆಗಳಿಗೆ ಮಾನವನ ಅಭ್ಯುದಯದ ಹಾದಿಯಲ್ಲಿನ ನೈಜ ಚಾರಿತ್ರಿಕ ಘಟ್ಟಗಳನ್ನು ಪರಿಚಯಿಸುವತ್ತ ಯೋಚಿಸುವುದು ಒಂದು ಪ್ರಜಾಸತ್ತಾತ್ಮಕ ವ್ಯವಸ್ಥೆಯ ಆದ್ಯತೆಯಾಗಬೇಕು. ಚರಿತ್ರೆಯ ವಿಭಿನ್ನ ಕಾಲಘಟ್ಟಗಳಲ್ಲಿ ನಡೆದ ಅನ್ಯಾಯಗಳನ್ನು ಭವಿಷ್ಯದ ಪೀಳಿಗೆಗೆ ತಿಳಿಸುವುದು ಅಪಮಾನಕರ ಎಂದು ಭಾವಿಸುವುದು ಅಪ್ರಬುದ್ಧತೆಯಾಗುತ್ತದೆ. ಈ ಚರಿತ್ರೆಯ ಹೆಜ್ಜೆಗಳು  ಭವಿಷ್ಯದ ಭಾರತದ ಆತ್ಮಾವಲೋಕನಕ್ಕೆ ಅವಕಾಶ ಕೊಡಬೇಕಾಗುತ್ತದೆ. ಆದರೆ  ಭವ್ಯ ಭಾರತದ ಪರಂಪರೆ ಎನ್ನುವ ಆತ್ಮರತಿಯಲ್ಲೇ ಇತಿಹಾಸದ ಕಪ್ಪುಚುಕ್ಕೆಗಳನ್ನು ಮರೆಮಾಚುವ ನಿಟ್ಟಿನಲ್ಲಿ ಆಳುವ ವರ್ಗಗಳು ವರ್ತಿಸುತ್ತವೆ. ಇದಕ್ಕೆ ಕಾಂಗ್ರೆಸ್ ಪಕ್ಷದ ಸರ್ಕಾರಗಳೂ ಹೊರತಲ್ಲ ಎನ್ನುವುದನ್ನು ಗಮನಿಸಬೇಕು.

ಕಳೆದ ಮೂರು ದಶಕಗಳ ಸಾಂಸ್ಕೃತಿಕ ರಾಜಕಾರಣ ಭಾರತದ ಭೂಪಟವನ್ನೇ ಬದಲಿಸುವ ಮಾರ್ಗದಲ್ಲಿ ಸಾಗುತ್ತಿದೆ. #ಆತ್ಮನಿರ್ಭರ ಭಾರತ  ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇರಿಸಿದೆ. ಪಠ್ಯಕ್ರಮಗಳಲ್ಲಿನ ಬದಲಾವಣೆ ಈ ಮಾರ್ಗದ ಒಂದು ಸಾಧನ. ನೂತನ ಶಿಕ್ಷಣ ನೀತಿ 2020ರ ಮೂಲಕ ಪ್ರಾದೇಶಿಕ ಭಾಷೆಗಳನ್ನು ಕಡೆಗಣಿಸಿ ಸಂಸ್ಕೃತ ಮತ್ತು ಹಿಂದಿ ಹೇರಿಕೆಯ ಮೂಲಕ ಹಿಂದುತ್ವ ರಾಜಕಾರಣದ ಮತ್ತೊಂದು ಆಯಾಮವನ್ನು ಪರಿಚಯಿಸುತ್ತಿರುವ ಕೇಂದ್ರ ಸರ್ಕಾರ ಈ ಪಠ್ಯಕ್ರಮದಲ್ಲಿಯೇ ತಿದ್ದುಪಡಿ ಮಾಡುವ ಮೂಲಕ ಭಾರತದ ಶೈಕ್ಷಣಿಕ ವ್ಯವಸ್ಥೆಯ ಬೌದ್ಧಿಕ ತಳಹದಿಯನ್ನು ವಿರೂಪಗೊಳಿಸಲು ಮುಂದಾಗುತ್ತಿದೆ. ಇದು ಮತೀಯ ರಾಜಕಾರಣ ಮತ್ತು ಸಾಂಸ್ಕೃತಿಕ ಅಧಿಪತ್ಯದ ಮತ್ತೊಂದು ಆಯಾಮ ಎನ್ನುವುದನ್ನೂ ಗಮನಿಸಬೇಕಿದೆ.

Donate Janashakthi Media

Leave a Reply

Your email address will not be published. Required fields are marked *