ಎಸೆದು ಬಿಡು ನಿನ್ನ ಹಾಡುಗಳನೆಲ್ಲ ದೂರ – ಮಹಿಳೆ: ದುಡಿಮೆ ಮತ್ತು ಸ್ವಾತಂತ್ರ್ಯಹೀನತೆ

ಜಿ.ಎನ್. ನಾಗರಾಜ್

ಮಹಿಳೆಯ ದುಡಿಮೆ ಮತ್ತು ಸ್ವಾತಂತ್ರ್ಯಹೀನತೆ ನಮ್ಮ ಸಮಾಜದ ಇತಿಹಾಸದುದ್ದಕ್ಕೂ, ವರ್ತಮಾನದಲ್ಲಿನ ಕ್ರೂರ ವಾಸ್ತವ. ಇದು ನಮ್ಮ ದೇಶದಲ್ಲಿ ಮಾತ್ರವಲ್ಲ, ಜಗತ್ತಿನ ಎಲ್ಲೆಡೆಗಳಲ್ಲಿಯೂ ಕಾಣುವ ಸಂಗತಿಯೂ ಕೂಡ. ಯೂರೋಪ್ ಮತ್ತು ಕನ್ನಡದ ಜಾನಪದಗಳಲ್ಲಿ, ಮನುಸ್ಮೃತಿಯಂತಹ ಧಾರ್ಮಿಕ ಕಟ್ಟಳೆಯ ಗ್ರಂಥಗಳಲ್ಲಿ ಪ್ರತಿಪಾದಿತವಾಗಿರುವುದನ್ನು ಎಳೆ ಎಳೆಯಾಗಿ ವಿಶ್ಲೇಷಿಸಿದ್ದಾರೆ ಚಿಂತಕ ಜಿ.ಎನ್. ನಾಗರಾಜ್ ರವರು. ಅವರ ಬರಹದ ಮೊದಲ ಕಂತು ಇಲ್ಲಿ.

ಮನೆಯಲ್ಲ ನಿನ್ನ ಅಮ್ಮನದು
ಹಾಡುತ್ತ, ನಲಿಯುತ್ತ ಕುಣಿದಾಡಲು
ಎಸೆದುಬಿಡು ನಿನ್ನ ಹಾಡುಗಳನೆಲ್ಲ ಮನೆಯಿಂದ ದೂರ.

-ಕಲೇವಾಲ, ಫಿನ್ಲೆಂಡ್ ದೇಶದ ಪ್ರಸಿದ್ಧ, ಪ್ರಾಚೀನ ಜಾನಪದ ಕಾವ್ಯ

ಅತ್ತೆಯ ಮನೆಯಲ್ಲಿ ತೊತ್ತಾಗಿ ಇರಬೇಕ
ಹೊತ್ತಾಗಿ ನೀಡಿದರು ಉಣಬೇಕ ಮಗಳೇ

-ಕನ್ನಡ ಜಾನಪದ

ಪ್ರಯುಜ್ಯತೇ ವಿವಾಹೇಷು
ಪ್ರದಾನ ಸ್ವಾಮ್ಯ ಕಾರಣಂ

-ವಿವಾಹ ಕಾಲದಲ್ಲಿ ಕನ್ಯಾದಾನ ಮಾಡುವುದರ ಅರ್ಥವೇ ಗಂಡನಿಗೆ ಹೆಂಡತಿಯ ಒಡೆತನವನ್ನು ವರ್ಗಾಯಿಸುವುದು.

ಪತಿ ಶುಶ್ರೂಷತೇ ಯೇನ ತೇನ ಸ್ವರ್ಗೇ ಮಹೀಯತೇ
ಹೆಂಡತಿಗೆ ಗಂಡನ ಶುಶ್ರೂಷೆಯಿಂದಲೇ ಸ್ವರ್ಗ ಪ್ರಾಪ್ತಿ.

-ಮನುಸ್ಪೃತಿಯ ಶ್ಲೋಕಗಳು

ಸುತ್ತುಗೆಲಸವ ಸೊಲ್ಲಿಸದೆ ಎಸಗುವುದು
ಅದರಿಂದ ಅತ್ತೆಯನು ಅನುವರ್ತಿಸುವುದು

-ಹದಿಬದೆಯ ಧರ್ಮ, ಕಾವ್ಯ ಸಂಚಿಯ ಹೊನ್ನಮ್ಮ.

ನಮ್ಮ ಕನ್ನಡದ ಮಹಿಳೆಯರು ಸಾವಿರಾರು ವರ್ಷಗಳಿಂದ ಹಾಡಿಕೊಳ್ಳುತ್ತಿರುವ ಒಂದು ಹಾಡು ಮತ್ತು ಬಹು ದೂರದ, ಬಹಳ ಭಿನ್ನವಾದ ಪಾಶ್ಚಾತ್ಯ ಸಂಸ್ಕೃತಿಯ ಲೋಕದ  ಮತ್ತೊಂದು ಜಾನಪದ ಹಾಡು ಎರಡರಲ್ಲಿಯೂ ಮಹಿಳೆಯರ ಜೀವನದ, ಅವರ ದುಡಿಮೆಯ ಸ್ಥಿತಿ, ವಿರಾಮವನ್ನು ಬಳಸಿಕೊಳ್ಳುವ ಸ್ವಾತಂತ್ರ್ಯದ ನಾಶವನ್ನು ಚಿತ್ರವತ್ತಾಗಿ ನಮ್ಮ ಮುಂದಿಡುತ್ತವೆ. ಈ ಎರಡೂ ಹಾಡುಗಳು ಹೆಣ್ಣು ಮದುವೆಯಾಗಿ ಅಲ್ಲಿಯವರೆಗೆ ತನ್ನದಲ್ಲದ ಮನೆಯನ್ನು ತನ್ನದಾಗಿ ಮಾಡಿಕೊಳ್ಳಲು ಹೊರಡುವ ಸಂದರ್ಭದ ಮಾತು ಎಂಬುದನ್ನು ಗಮನಿಸಬೇಕು. ಈ ಎರಡೂ ಹಾಡುಗಳು ಸಾವಿರಾರು ವರ್ಷಗಳಿಂದ ಹಾಡಲ್ಪಡುತ್ತಿವೆ. ಅಂದಿನಿಂದಲೂ ಹೆಣ್ಣಿನ ಬದುಕಿನ ಮುಖ್ಯ ಸ್ಥಿತ್ಯಂತರವನ್ನು ಹೇಳುತ್ತಿವೆ.

ಇಂದು ಈ ಪರಿಸ್ಥಿತಿಯಲ್ಲಿ ಸ್ವಲ್ಪ ಬದಲಾವಣೆಗಳನ್ನು ಕಾಣುತ್ತಿದ್ದೇವೆ ನಿಜ. ಆದರೆ ಇನ್ನೂ ಬಹಳಷ್ಟು ಮಹಿಳೆಯರು ತಾವು ತಾಯ ಮನೆಯಲ್ಲಿ ಕಲಿತ ಸಂಗೀತ, ನೃತ್ಯ, ಸಾಹಿತ್ಯ, ಚಿತ್ರಕಲೆಗಳನ್ನು ಮದುವೆಯಾದ ಕೂಡಲೇ ಮುದುಡಿ ಮೂಲೆಗಿಡುವ ವಿಷಾದಕರ ಪರಿಸ್ಥಿತಿಯನ್ನು ನೋಡುತ್ತೇವೆ. ನಗರಗಳಲ್ಲಿ ಅತ್ತೆಯ ಮನೆಯ ತೊತ್ತಾಗಿ ಇರುವ ಪರಿಸ್ಥಿತಿಯಲ್ಲಿ ಗಣನೀಯ ಬದಲಾವಣೆಯಾಗಿದ್ದರೂ ಇಂದೂ ಕೂಡಾ ಸಾಸ್- ಬಹು ಅಥವಾ ಅತ್ತೆ -ಸೊಸೆಯರ ಮೇಲಾಟ, ಕಾದಾಟಗಳ ಧಾರಾವಾಹಿಗಳು, ತುತ್ತಾ ಮುತ್ತಾ ಎನ್ನುವ ಗಾದೆಗಳು, ಸಿನೆಮಾಗಳು, ಕಾಮೆಡಿ ಶೋಗಳು, ಹಾಸ್ಯ ಚಟಾಕಿಗಳು ಈ ಸಮಸ್ಯೆ ಇನ್ನೂ ಜೀವಂತವಾಗಿದೆ ಎಂಬುದನ್ನು ಬಿಂಬಿಸುತ್ತವೆ. ಅದರಲ್ಲಿಯೂ ಗ್ರಾಮಿಣ ಪ್ರದೇಶದ ಒಕ್ಕಲುತನದ ಕುಟುಂಬಗಳಲ್ಲಿ ಕೂಡಾ ಸ್ವಲ್ಪ ಬದಲಾವಣೆ ಕಂಡರೂ ಇನ್ನೂ ದೊಡ್ಡ ಪ್ರಮಾಣದಲ್ಲಿ ಅಸ್ತಿತ್ವದಲ್ಲಿದೆ.

ಮಹಿಳೆಯರ ದುಡಿಮೆ, ಅದರ ಪ್ರಮಾಣ (quantity) ಮತ್ತು  ತೀವ್ರತೆ (intensity)ಯ ಪ್ರಶ್ನೆಗಳು ಅಧ್ಯಯನ ಮಾಡಬೇಕಾದ ವಿಷಯಗಳು.

ಆ ದುಡಿಮೆಯ ನಿರ್ಧಾರಕ ಅಂಶವೆಂದರೆ ಅವರ ಸಾಮಾಜಿಕ ಪಾತ್ರ, ಸ್ಥಾನಮಾನ ಮತ್ತು ಸ್ಥಿತಿ. ಈ ಅಂಶಗಳನ್ನೂ ಜೊತೆಗೇ ಅಧ್ಯಯನಕ್ಕೆ ಒಳಪಡಿಸಬೇಕಾಗಿದೆ. ಮತ್ತೊಂದು ಕಡೆ ಮಹಿಳೆಯ ವ್ಯಕ್ತಿತ್ವದ ಬೆಳವಣಿಗೆ ಮತ್ತು ಅಭಿವ್ಯಕ್ತಿಗೆ ವಿರಾಮದ ಅವಶ್ಯಕತೆ, ವಿರಾಮವನ್ನು ಹೇಗೆ ವಿನಿಯೋಗಿಸಬೇಕೆಂಬ ನಿರ್ಧಾರ ಕೈಗೊಳ್ಳುವಲ್ಲಿ ಮಹಿಳೆಯ ಸ್ವಾತಂತ್ರ‍್ಯ ಅಥವಾ ಅಸ್ವಾತಂತ್ರ‍್ಯ, ವಿರಾಮವನ್ನು ಉಪಯೋಗಿಸುವುದರ ಮೇಲಿನ ಮೇಲಿನ ಸಾಮಾಜಿಕ ಒತ್ತಡಗಳನ್ನೂ ಅಧ್ಯಯನಕ್ಕೊಳಪಡಿಸಬೇಕಾಗುತ್ತದೆ.

ಇದನ್ನು ಓದಿ: ಮಹಿಳೆ: ನೆತ್ತಿಯ ಮೇಲೆ ಎಷ್ಟೊಂದು ನಿರ್ಬಂಧಗಳು

ಮಹಿಳೆಯ ದುಡಿಮೆ ಎಲ್ಲ ಕಾಲಕ್ಕೂ, ಎಲ್ಲ ಮಹಿಳೆಯರಿಗೂ ಒಂದೇ ಆಗಿಲ್ಲ ಎಂಬುದು ಎಲ್ಲರೂ ಒಪ್ಪುವ ವಿಷಯ. ಇಂದು, 21 ಶತಮಾನದ ಆದಿಯಲ್ಲಿ, ಮಹಿಳೆಯ ದುಡಿಮೆಯ ಪರಿಸ್ಥಿತಿಯಲ್ಲಾದ ಬದಲಾವಣೆಗಳು, ವಿರಾಮದ ಲಭ್ಯತೆ ಮತ್ತು ಅದರ ವಿನಿಯೋಗದ ಬಗ್ಗೆ ಒತ್ತು ನೀಡುವಾಗಲೂ ಗಮನಕ್ಕೆ ಬರುವ ಮುಖ್ಯ ಅಂಶವೊಂದು ಎದ್ದು ಕಾಣುತ್ತದೆ. ಇಂದಿನ ಬೆಳವಣಿಗೆಗಳು ಬಹು ದೊಡ್ಡ ಸಂಖ್ಯೆಯ ಮಹಿಳೆಯರ ದುಡಿಮೆಯ ಮೇಲೆ ಬೀರುವ ಪ್ರಭಾವಕ್ಕಿಂತ ಸಾವಿರಾರು ವರ್ಷಗಳಿಂದ ಮಹಿಳೆಯ ಮೇಲೆ ಹೇರಲ್ಪಟ್ಟ ಸಾಮಾಜಿಕ ಪಾತ್ರ ಹಾಗೂ ಸ್ಥಿತಿಯ ಪಾತ್ರವೇ ಪ್ರಧಾನವಾಗಿ ಕಾಣುತ್ತದೆ.

ಆರಂಭದಲ್ಲಿ ಉಲ್ಲೇಖಿಸಿದ ಎರಡೂ ಜಾನಪದ ಹಾಡುಗಳ ಮುಂದುವರಿದ ಭಾಗಗಳನ್ನು ಪರಿಶೀಲಿಸೋಣ.

ಕನ್ನಡದ ಜಾನಪದದಲ್ಲಿ ಮೇಲೆ ಉಲ್ಲೇಖಗೊಂಡದ್ದು ಒಂದು ತ್ರಿಪದಿ. ಇವುಗಳನ್ನು ಬಿಡಿ ಬಿಡಿಯಾಗಿಯೂ, ಇತರ ತ್ರಿಪದಿಗಳ ಜೊತೆಗೂಡಿಸಿಕೊಂಡು ಕೂಡಾ ಹಾಡಲಾಗುತ್ತದೆ.

ಅವುಗಳಲ್ಲಿ ಕೆಲವು ತ್ರಿಪದಿಗಳು ಹೀಗಿವೆ:

ಅತ್ತೀಯ ಮನೆಯಾಗ ಅರವತ್ತು ಗಂಗಾಳ/
ಬೆಳಗತೇನತ್ತಿ ಬೈಬ್ಯಾಡ / ತವರವರು
ಸರಮುತ್ತ ಮಾಡಿ ಸಲವ್ಯಾರ //

ಬೀಸಾಕ ಕುಂತೀನಿ ಕೂಸ ನನ ತೊಡಿಮ್ಯಾಲ/
ವಾಸ್ಯಾಡಬೇಡ ನೆಗೆಯೇಣಿ/ ನಿನ ಕೆಲಸ/
ತಾಸೊತ್ತಿನಾಗ ತಿರುವೇನ //

ಅತ್ತೆಯ ಮನೆಯಲ್ಲಿ ಹೇರುತ್ತಿದ್ದ ಕೆಲಸದ ಹೊರೆಯಿಂದ ಬಿಡುಗಡೆ ಮತ್ತು ಬಿಡುವು ಸಿಗುವುದು ಯಾವಾಗೆಂದರೆ :

ಎಷ್ಟೆಷ್ಟು ಬೀಸಿದ್ರೂ ಮುಗಿಯೋದ ನಾಕಾಣೆ/
ಯಾವಾಗ ನನಗೆ ಮಕ್ಕಳು/ ಮರಿಗಳು
ಎಂದಿಗಪ್ಪ ನಾನು ಅತ್ತೆಯು//

ನನಗೆ ಮುಂದೊಂದು ದಿನ ಅತ್ತೆಯಾದಾಗ ಮಾತ್ರ ನನಗೆ ಸ್ವಲ್ಪ ಬಿಡುವು ಸಿಗಬಹುದು ಎಂಬ ಹಳಹಳಿಕೆ ಇಂದೂ ಕೂಡಾ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಕಾಣಬಹುದು. ಆದರೆ ನಗರ ಪ್ರದೇಶಗಳಲ್ಲಿ ಅತ್ತೆಯಾದರೂ ಕತ್ತೆಯ ದುಡಿಮೆ ಎನ್ನುವ ಮಾತು ಪ್ರಚಲಿತ. ಮಗ, ಸೊಸೆ ಇಬ್ಬರೂ ದುಡಿಯಬೇಕಾಗಿದೆಯಲ್ಲ!

ಒಬ್ಬ ಗ್ರಾಮೀಣ ಮಹಿಳೆ ಏನೆಲ್ಲಾ ಕೆಲಸ ಮಾಡುತ್ತಿದ್ದಳೆಂಬ ವಿವರಗಳನ್ನು ಕೆಲ ಜಾನಪದ ಕಾವ್ಯಗಳು ನೀಡುತ್ತವೆ.

ತುಳು ಪಾಡ್ದನಗಳಲ್ಲಿ ಬರುವ ಈ ವಿವರಗಳನ್ನು ನೋಡಿ:

ಅರುಣೋದಯಕ್ಕೆ ಎದ್ದಳು ಕರ್ನಗೆ,
ಹಾಸಿದ ಚಾಪೆ ಮಡಚಿಟ್ಟಳು.
ಬಂಗಾರದ ಕಸಬರಿಗೆ ಹಿಡಿದು ಚಾವಡಿ,
ನಡುಮನೆ ಗುಡಿಸಿದಳು.

ತಾಮ್ರದ ಕೊಡಪಾನ ಹಿಡಿದಳು
ಕಲ್ಲು ಕಟ್ಟಿದ ಬಾವಿಯ ಹತ್ತಿರ ಹೋದಳು
ಪಾತಾಳೋದ ಪನಿನೀರ್ ದೆತ್ತಲು

(ಪಾತಾಳದಲ್ಲಿರುವ ಶುದ್ಧ ನೀರನ್ನು ಎತ್ತಿದಳು)….

ಕಾಶಿಯ ಕಪಿಲೆ ದನಗಳಿಗೆ ಅಕ್ಕಚ್ಚು, ಹಸುಕರುಗಳಿಗೆ ಬಾಯಾರಿಕೆ ಹುರುಳಿ ಮಡ್ಡಿ ನೀಡಿದಳು. ಹಸುಗಳ ಹಾಲನ್ನು ಕರೆದಳು. ಅಗಲ ಬಾಯಿಯ ಪಾತ್ರೆಯಲ್ಲಿ ಮೊಸರು ಕಡೆದಳು. ಚೆಂಬು ಬಟ್ಟಲು ತೊಳೆದಳು. ಕೆಸುವೆ, ಹರಿವೆಗೆ ನೀರೆರೆದಳು.

ಮುಂದೆ ಅಡುಗೆಯ ತಯಾರಿ:

ಅಡುಗೆಯ ತಯಾರಿ ಎಂದರೆ ಇಂದಿನ ಕಲ್ಪನೆ ಬೇರೆಯೇ. ಅಂದಿನ ಅಡುಗೆ ಎಂದರೆ ಎಷ್ಟು ಅಪಾರ ಪ್ರಮಾಣದ ದುಡಿಮೆ ಎಂಬುದನ್ನು ಇಂದು ಕಲ್ಪಿಸಿಕೊಳ್ಳಲೂ ಆಗದು.

ಅಟ್ಟಕ್ಕೆ ಮುಟ್ಟುವ ಏಣಿ ಇಟ್ಟಳು, ಮೇಲಿಟ್ಟ ಭತ್ತದ ಮುಡಿಯಿಂದ ಮೂರು ಸೇರು ಭತ್ತ ತೆಗೆದಳು. ಭತ್ತ ಕುಟ್ಟುವ ಒರಳಿಗೆ ಹಾಕಿದಳು. ಬೆಳ್ಳಿ ಸುತ್ತಿನ ಒನಕೆಯಿಂದ ಕುಟ್ಟಿದಳು. ಜಾಲಿಸಿ, ಕೇರಿ ಒಂದೂವರೆ ಸೇರು ಅಕ್ಕಿ ಮಾಡಿದಳು.

ಸಾಂಬಾರು ಮಾಡಲು ತರಕಾರಿಯ ಹುಡುಕಾಟಕ್ಕೆ ಹೊರಟಳು. ಮೂಡು ದಿಕ್ಕಿನ ಗೆಜ್ಜೆಗಿರಿ ನಂದನ ಹಿತ್ತಲಿಗೆ ಹೋದಳು.

ಮುಂದೆ ಆಕೆ ಕೊಯ್ಯುವ ಹಲವಾರು ತೆರನ ತರಕಾರಿಗಳ ವರ್ಣನೆ ಇದೆ. ಅದನ್ನು ಕೊಯ್ದು ಸಾಂಬಾರು ಮಾಡುತ್ತಾಳೆ. ಮುತ್ತಿನ ವರ್ಣದ ಅನ್ನ ಮಾಡುತ್ತಾಳೆ.

ಇಲ್ಲಿಗೆ ಮುಗಿಯಿತೆ?

ಇಲ್ಲ ಸಾವಿರ ಕೊಡ ನೀರು ತಂದು ಬಿಸಿ ಮಾಡಿದಳು. ಸಾವಿರ ಕೊಡ ತಣ್ಣೀರು ತಂದು ತಂಪಾಗಿರುವ ಜಾಗದಲ್ಲಿಟ್ಟಳು.

ನಂತರ – ಎಲ್ಲಿಗೆ ಹೋದಿರಿ ನರಸಿಂಗ ಪಕಳರೆ, ಎಣ್ಣೆ ಮಜ್ಜನ ಮುಗಿಯಲಿ ಎಂದು ಕರೆದಳು.

ಎಣ್ಣೆ ತೆಗೆದಳು. ನೆತ್ತಿಗೆ ತುಪ್ಪದೆಣ್ಣೆ, ಪಾದಕ್ಕೆ ಹನಿಯೆಣ್ಣೆ, ಉಗುರಿಗೆ ಉರಿಯೆಣ್ಣೆ, ಬೆನ್ನಿಗೆ ಬಿಸಿ ಎಣ್ಣೆ ಪೂಸಿದಳು.

ಗಂಡನನ್ನು ಬಿಸಿ ನೀರ ಜಳಕಕ್ಕೆ ಅಣಿ ಮಾಡಿದಳು. ಗಂಡನಿಗೆ ಹಲವು ರೀತಿಯ ವ್ಯಂಜನ, ಹುಳಿ, ಮಜ್ಜಿಗೆ, ಪಸಂಗಿರಿ, ಹೆಸರು ಬೇಳೆ ಪಾಯಸ, ತುಪ್ಪ ಬಡಿಸಿದಳು.

ಇದಿಷ್ಟೂ ಮಧ್ಯಾಹ್ನದವರೆಗಿನ ಕೆಲಸ ಮಾತ್ರ. ನಂತರದ ಕೆಲಸಗಳು ಮತ್ತಿನ್ನೆಷ್ಟು ಇರಬಹುದು ಊಹಿಸಿಕೊಳ್ಳಿ.

ಈ ಪರಿಯ ಕೆಲಸಗಳ ಮಧ್ಯೆ ಆಕೆಗಿನ್ನೆಲ್ಲಿ ಬಿಡುವು.

ಒಬ್ಬ ಪ್ರಮುಖ ಜಾನಪದ ಸಂಶೋಧಕರಾದ ಹಿ.ಶಿ. ರಾಮಚಂದ್ರೇಗೌಡರು ಹೇಳುವಂತೆ “ಗಂಡು ಪ್ರಧಾನ ಸಮಾಜದಲ್ಲಿ ಹೆಣ್ಣು ತನ್ನ ಗಂಡನೂ ಸೇರಿದಂತೆ ಅನೇಕರಿಗೆ ಹತ್ತಿರದ, ಸುಲಭದ ಮತ್ತು ಒಗ್ಗಿದ ಸೇವಕಿ. ದನ, ಕುರಿ, ಕೋಳಿಗಳಿಗಿಂತಲೂ ಸೌಮ್ಯವಾಗಿ ಹೆಣ್ಣನ್ನು ಪಳಗಿಸಿದ ಗಂಡು ಸಮಾಜದ ದೊಡ್ಡ ಶೋಧನೆ ಈ ಸೇವೆ.”

ಇದಕ್ಕಿಂತಲೂ ಸ್ಪಷ್ಟ ಹಾಗೂ ಖಾರವಾದ ವಿವರಣೆ ಬೇಕಿಲ್ಲ ಮಹಿಳೆಯ ದುಡಿಮೆ ಮತ್ತು ಬಿಡುವಿನ ಗೈರು ಹಾಜರಿ ಮತ್ತದರ ಕಾರಣದ ಬಗ್ಗೆ.

ಯುರೋಪಿನ ಜಾನಪದದಲ್ಲೂ:

ಮಹಿಳೆಯರ ಮೇಲೆ ದುಡಿಮೆಯ ಹೇರಿಕೆ, ಬಿಡುವು ಎಂಬುದೊಂದು ಲಕ್ಷುರಿಯಾಗಿರುವುದು ಕೇವಲ ಕರ್ನಾಟಕದ, ಭಾರತದ ವಿಶಿಷ್ಟ ಲಕ್ಷಣವೇನಲ್ಲ. ಅದು ವಿಶ್ವವ್ಯಾಪಿ. ಮತ್ತು ಇತ್ತೀಚಿನ ಬೆಳವಣಿಗೆಯಲ್ಲ. ಸಾವಿರಾರು ವರ್ಷಗಳ ಹಿಂದಿನಿಂದ ಬೆಳೆದು ಬಂದಿದೆ ಎಂಬುದು ನಮಗೆ ಗೊತ್ತಾಗುತ್ತದೆ, ಫಿನ್ಲೆಂಡಿನ ಜಾನಪದ ಮಹಾ ಕಾವ್ಯ ಕಲೇವಾಲಾದ ಸಾಲುಗಳಿಂದ.

ತಾಯ ಮನೆಯಲ್ಲಿನ  ಬಾಲ್ಯವನ್ನು ನೆನೆಸಿಕೊಳ್ಳುತ್ತಾಳೆ ಅಲ್ಲಿಯ ಒಬ್ಬ ನಾಯಕಿ ಹೀಗೆ :

“ಎಷ್ಟು ಸುಖವಾಗಿದ್ದೆ ತಂದೆ ಮನೆಯಲ್ಲಿ
ಹಾದಿ ಬದಿ ಹೂವಂತೆ ಪೊದರು ಮೆಳೆ ಹಣ್ಣಂತೆ
ನಿದ್ದೆ ಬಿಟ್ಟೇಳುತಲೆ ಕೆನೆ ತುಂಬಿದ ಹಾಲು
ಹೊಸ ಬೆಣ್ಣೆ ರೊಟ್ಟಿ
ಕಷ್ಡವೇನೆಂದು ಅರಿಯದವಳು.”

ಮುಂದೆ ಮದುವೆಯಾಗಿ ಅತ್ತೆಯ ಮನೆಯಲ್ಲಿ:

“ಎಸೆದು ಬಿಡು ನಿನ್ನ ಹಾಡುಗಳನೆಲ್ಲ
………..
ಎಲ್ಲರಿಗೂ ಅಷ್ಟೆ ಬಗ್ಗಿ ನಡೆಯಬೇಕು
ಬಗ್ಗಬೇಕಿದೆ ಇಲ್ಲಿ ಅಲ್ಲಿಗಿಂತಲು ಹೆಚ್ಚು
………..

ಬೆಳಗಿನಲ್ಲಿರಬೇಕು ಕಿವಿಯು ಚುರುಕು
ಕೋಳಿ ಕೂಗಿದ ಸದ್ದು ಕೇಳಲೆಂದು
ಒಂದು ಕೂಗಿಗೇ ನೀನು ಮೇಲೇಳಬೇಕು
ಕಾಯಬಾರದು ಮತ್ತೊಮ್ಮೆ ಕೂಗಲೆಂದು”

ಬೆಳಗ್ಗೆ ಎದ್ದು ಏನೆಲ್ಲ ಮಾಡಬೇಕೆಂಬ ಕೆಲಸಗಳ ಈ ಉದ್ದ ಪಟ್ಟಿ ತುಳುವ ಹೆಣ್ಣಿನ ದುಡಿಮೆಗಿಂತ ಏನೂ ಭಿನ್ನವಲ್ಲ ಎಂಬುದರ ಸೂಚನೆ.

ಅವುಗಳ ಜೊತೆಗೆ

“ಕೋಣೆಯೊಳ ಹೋಗು ಬೀಸುವುದಕೆ ಹಿಟ್ಟು
ದನಿ ಎತ್ತಿ ಜೋರಾಗಿ ಹಾಡಬೇಡ

ಬಿಟ್ಟು ಬಿಡು ಕಲ್ಲಿಗೇ ನಿನ್ನ ಹಾಡು
ಜೋರಾಗಿ ನೋವಿಂದ ನರಳಬೇಡ

ಕಳೆಯದಿರು ಕಾಲ ನೀರ ಬಳಿಯಲ್ಲಿ
ಮನಸು ಕೊಡದಿರು ವಿಶ್ರಾಂತಿಗಲ್ಲಿ.

(ಅನುವಾದ: ಡಾ|| ಸಂಧ್ಯಾರೆಡ್ಡಿ)

ಹೀಗೆ ಮುಂದುವರೆಯುತ್ತದೆ ಮಗಳಿಗೆ ತಾಯ ಬುದ್ಧಿವಾದ.

ಈ ಕಾವ್ಯದ ಭಾಷೆ, ಪ್ರದೇಶಗಳ ವಿವರಣೆ ಮೊದಲಾದ ಅಂಶಗಳ ಆಧಾರದ ಮೇಲೆ ಈ ಕಾವ್ಯದ ಮೂಲ ಭಾಗ 2,500 ವರ್ಷಗಳಿಗಿಂತ ಹಳೆಯದೆಂಬ ತೀರ್ಮಾನಕ್ಕೆ ಬರಲಾಗಿದೆ. ಹೀಗೆ ಅತ್ಯಂತ ಹಿಂದಿನ ಕಾಲದಲ್ಲಿಯೇ ಯುರೋಪಿನ ಫಿನ್ಲೆಂಡ್ ಭಾಗದಲ್ಲಿ ಮಹಿಳೆಯರಿಗೆ ವಿರಾಮ ಎಂಬುದು ಕನಸಿನ ಮಾತಾಗಿತ್ತು.

ಭಾರತದ ವೈದಿಕ ಸಾಹಿತ್ಯದಲ್ಲಿ

ಭಾರತದಲ್ಲಿಯೂ ಅತ್ಯಂತ ಪ್ರಾಚೀನ ಕಾಲದ ಸಾಹಿತ್ಯಗಳಾದ ವೇದಗಳು, ಬ್ರಾಹ್ಮಣಗಳು, ಬೌದ್ಧ ಜಾತಕ ಕತೆಗಳು, ಜೈನ ಧಾರ್ಮಿಕ ಗ್ರಂಥಗಳಲ್ಲಿ ಅಂದಿನ ಮಹಿಳೆಯರ ಸ್ಥಿತಿಗತಿಗಳ ಸೂಚನೆಗಳಿವೆ. ನಂತರದ ಹಂತದಲ್ಲಿ ಮಹಾಕಾವ್ಯಗಳು ಧರ್ಮಶಾಸ್ತ್ರಗ್ರಂಥಗಳು, ಸ್ಮೃತಿಗಳು, ಪುರಾಣಗಳ ಮೂಲಕ ಬಹಳ ವಿವರವಾಗಿ ಸ್ತ್ರಿಯರ ಪರಿಸ್ಥಿತಿ ತಿಳಿಯ ಬರುತ್ತದೆ.

ಈ ಎಲ್ಲವನ್ನೂ ಇಲ್ಲಿ ವಿವರಿಸುವುದು ಪ್ರಬಂಧವನ್ನು ಲಂಬಿಸುತ್ತದೆ. ವೇದ ಕಾಲದ ಕೆಲ ಅಂಶಗಳನ್ನು ಮಾತ್ರ ಗಮನಿಸಿ ಈ ಎಲ್ಲ ಗ್ರಂಥಗಳ ಪ್ರಾತಿನಿಧಿಕವಾಗಿ ಮನುಸ್ಮೃತಿಯಲ್ಲಿ ಮಹಿಳೆಯ ದುಡಿಮೆ ಮತ್ತು ವಿರಾಮದ ಪ್ರಶ್ನೆಯನ್ನು ಪರಿಶೀಲಿಸೋಣ.

ಇದನ್ನು ಓದಿ: ಪಾಪಪ್ರಜ್ಞೆ ಇದ್ದರೆ ತೆರೆದು ನೋಡಲು ನೂರಾರು ಫೈಲುಗಳಿವೆ

ಋಗ್ವೇದದಲ್ಲಿಯೇ ಮಹಿಳೆಯರ ಕೀಳು ಸ್ಥಾನದ ಸೂಚನೆ ಸಿಗುತ್ತದೆ. ದಾಸಿಯರ ಅಸ್ತಿತ್ವ, ಅವರನ್ನು ದಾನ ಮಾಡುವುದು, ಮದುವೆಗಳಲ್ಲಿ ರಾಜರು, ಸಾಮಂತರು, ಇತರ ಶ್ರೀಮಂತರು ಮಗಳಿಗೆ ದಾಸಿಯರನ್ನು ಉಡುಗೊರೆಯಾಗಿ ನೀಡುವುದು ಇಂತಹ ಪ್ರಸ್ತಾಪಗಳಿಂದ ಇದು ತಿಳಿಯುತ್ತದೆ. ಅಥರ್ವಣ ವೇದ, ಶಥಪಥ ಬ್ರಾಹ್ಮಣ ಮೊದಲಾದ ಗ್ರಂಥಗಳಲ್ಲಿ ಬಹು ಸಂಖ್ಯಾತರಾದ ಶೂದ್ರ ಮಹಿಳೆಯರನ್ನು ಕಾಡು, ಹೊಲಗಳಲ್ಲಿ, ನೂಲುವ ಮತ್ತಿತರ ಕಠಿಣ ದುಡಿಮೆಗೆ ಸ್ಪಷ್ಟ ಸೂಚನೆಗಳಿವೆ. ಉಚ್ಛ ವರ್ಣದ ಮಹಿಳೆಯರೂ ಮುಟ್ಟು ಮೊದಲಾದ ಮೈಲಿಗೆಯ ಕಾರಣ ವೇದಾಧ್ಯಯನಕ್ಕೆ ಅನಧಿಕಾರಿಗಳು ಎನ್ನುವ ಕಟ್ಟಳೆಯ ಮೂಲಕ ಮತ್ತು ಮಕ್ಕಳಿಗಾಗಿಯೇ ಅವರ ಪ್ರಾಮುಖ್ಯತೆ ಎಂದು ಸೂಚಿಸುವ ಮೂಲಕ ಅವರ ಸ್ಥಾನವನ್ನು ಕೀಳ್ಗಳೆಯಲಾಗಿದೆ. ಹೀಗೆ ಮೇಲ್ವರ್ಣಗಳ ಸ್ತ್ರೀಯರನ್ನು ಪುರುಷರ ಸೇವೆಗೆ, ಗೃಹಕೃತ್ಯಗಳಿಗೆ ಎಂದು ಸೀಮಿತಗೊಳಿಸಲಾಗಿದೆ. ಬಹು ಪತ್ನಿತ್ವದ ಅಸ್ತಿತ್ವವನ್ನು ಕೂಡಾ ಕಾಣಬಹುದಾಗಿದೆ. ಬೌದ್ಧ ಗ್ರಂಥ ವಿನಯ ಪಿಟಕ ಮತ್ತು ವೈದಿಕ ಸೂತ್ರ ಗ್ರಂಥಗಳಲ್ಲಿ ವಿವರಿಸಲಾದ ವಿವಾಹದ ವಿವಿಧ ಪದ್ಧತಿಗಳಲ್ಲಿ ಹೆಣ್ಣನ್ನು ಕೊಳ್ಳುವುದು, ಅಪಹರಿಸುವುದು, ದಾಸಿಯರನ್ನು ವಿವಾಹವಾಗುವುದು ಮೊದಲಾದ ಪದ್ಧತಿಗಳು ಆಕೆಯ ಜೊತೆ ಲೈಂಗಿಕ ಸಂಬಂಧದ ಜೊತೆಗೆ  ದುಡಿಮೆ ಕೂಡಾ ಮುಖ್ಯ ಅಂಶ ಎಂಬುದನ್ನು ಸೂಚಿಸುತ್ತವೆ.

ಈ ಗ್ರಂಥಗಳ ಸಮಯದ ಸ್ವಲ್ಪ ಕಾಲದ ನಂತರ ಪಾತಿವ್ರತ್ಯ, ವಿಧವೆ ಎಂಬ ನಂಬಿಕೆ ಮತ್ತು ಪದ್ಧತಿಗಳು ವ್ಯಾಪಕವಾದವು. ಪಾತಿವ್ರತ್ಯ ಎಂಬುದು ಗಂಡನಿಗೆ ಲೈಂಗಿಕ ನಿಷ್ಟೆ ಮಾತ್ರವಲ್ಲದೆ ಗಂಡನ ಸೇವೆಯನ್ನೇ ಹೆಣ್ಣಿನ ಧರ್ಮವಾಗಿಸಿತು. ಗಂಡ ತೀರಿದ ಮೇಲಂತೂ ಇದ್ದೆಲ್ಲ ಸ್ಥಾನಮಾನ ಕಳೆದುಕೊಂಡು ಅವಲಂಬಿತಳಾಗಿ ಬದುಕುವ ಅನಿವಾರ್ಯ ಸ್ಥಿತಿಯನ್ನು ಹೇರಲಾಯಿತು.

ಮನುಸ್ಮೃತಿಯಲ್ಲಿ:

ಎಲ್ಲ ಧರ್ಮ ಗ್ರಂಥಗಳು, ಶಾಸ್ತ್ರ ಗ್ರಂಥಗಳಲ್ಲಿ ಹೆಚ್ಚು ಪ್ರಚಲಿತವಾದುದು ಮನುಸ್ಮೃತಿ. ಇತರ ಕಾವ್ಯ, ನಾಟಕ, ಪುರಾಣ ಹರಿಕತೆಗಳ, ಜಾನಪದಗಳ ಮೂಲಕ ಜನರ ನಡುವೆ ಬಿಂಬಿಸಲ್ಪಟ್ಟದ್ದು ಮನುಸ್ಮೃತಿಯ ಕಟ್ಟಲೆಗಳು.

ಮಹಿಳೆಯರ ಬದುಕಿನ ಹಲವು ಆಯಾಮಗಳ ಬಗೆಗೆ ಅವರು ಅನುಸರಿಸಬೇಕಾದ ಕಟ್ಟಲೆಗಳನ್ನು ಮನುಸ್ಮೃತಿ ಒಳಗೊಂಡಿದೆ. ಇಲ್ಲಿ ಮಹಿಳೆಯರ ದುಡಿಮೆ ಮತ್ತು ವಿರಾಮವನ್ನು ನಿಯಂತ್ರಿಸುವ ಅಂಶಗಳ ಬಗ್ಗೆ ಮಾತ್ರ ಗಮನ ನೀಡಲಾಗಿದೆ.

ಬಾಲಯಾ ವಾ ಯುವತ್ಯಾ ವಾ ವೃದ್ಧಯಾ ವಾಪಿ ಯೋಷಿತಾ/
ನ ಸ್ವಾತಂತ್ರ್ಯೇಣ ಕರ್ತವ್ಯಂ ಕಿಂಚಿತ್ಕಾರ್ಯಂ ಗೃಹೇಷ್ವಪಿ 5-147

ಬಾಲಕಿಯಿದ್ದಾಗಲೂ, ಯುವತಿಯಿದ್ದಾಗಲೂ, ವೃದ್ಧೆಯಾದ ಮೇಲೂ ಮನೆಗಳಲ್ಲಿದ್ದಾಗಲೂ ತಾನೇ ಸ್ವತಂತ್ರವಾಗಿ ಸ್ತ್ರಿಯು ಯಾವ ಕಾರ್ಯವನ್ನೂ ಮಾಡಬಾರದು.

ಮಹಿಳೆಯರ ಬದುಕಿನ ಎಲ್ಲವೂ-ಆಕೆಯ ವಿರಾಮ, ವಿರಾಮ ಸಿಕ್ಕಿದಲ್ಲಿ ಏನು ಮಾಡಬಹುದು ಅಥವಾ ಬಾರದು ಎಂಬುದರಲ್ಲಿ ಕೂಡಾ ಆಕೆ ತನ್ನ ಇಚ್ಛೆಯಂತೆ ನಡೆಯವಂತಿಲ್ಲ. ಇಂತಹ ಸಂದರ್ಭದಲ್ಲಿ ವಿರಾಮವೂ ಕೂಡಾ ಕಡು ಬೇಸರದ ಸಂಗತಿಯಾಗುತ್ತದೆ.

ಸದಾ ಪ್ರಹೃಷ್ಟಯಾ ಭಾವ್ಯಂ ಗೃಹಕಾರ್ಯೇಷು ದಕ್ಷಯಾ/
ಸುಸಂಸ್‌ಋತೋಪಸ್ಕರಯಾ ವ್ಯಯೇ ಚ ಮುಕ್ತ ಹಸ್ತಯಾ // 5.150

ಸದಾ ಸಂತೋಷದಿಂದ ಇರುತ್ತ, ಸ್ತ್ರಿಯು ಗೃಹಕಾರ್ಯಗಳನ್ನು ದಕ್ಷತೆಯಿಂದ ಮಾಡಬೇಕು. ಮನೆಯ ಪಾತ್ರೆ ಪಡಗಗಳನ್ನು ಚೆನ್ನಾಗಿ ಉಜ್ಜಿ ಶುದ್ಧವಾಗಿಡಬೇಕು. ಮಿತವ್ಯಯದಿಂದ ಖರ್ಚು ಮಾಡುವವಳಾಗಿರಬೇಕು. ಮನುಸ್ಮೃತಿಯಂತಹಾ ಧರ್ಮ ಗ್ರಂಥದಲ್ಲಿಯೂ ಮಹಿಳೆ ಮುಸುರೆ ಪಾತ್ರೆ ತೊಳೆಯಬೇಕೆಂಬುದು ಪ್ರಸ್ತಾಪವಾಗಿದೆಯೆಂದರೆ ಮಹಿಳೆಯರ ಇಂತಹ  ದುಡಿಮೆ  ಕುಟುಂಬ ಹಾಗೂ ಸಮಾಜಕ್ಕೆ ಎಷ್ಟೊಂದು ಮುಖ್ಯ. ಅದನ್ನೊಂದು ಧಾರ್ಮಿಕ ಕಟ್ಟಲೆಯಾಗಿಸಿ ಅವರ ಮೇಲೆ ಹೇರುವ ಅಗತ್ಯ ಇದೆ. ಧಾರ್ಮಿಕ ಎಂಬ ರೂಪ ತಳೆದ ಈ ಕಟ್ಟಲೆಗಳಿಗೆ ಅವರು ತಲೆಬಾಗಿ ಒಪ್ಪಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಿಸಲಾಗಿದೆ ಎಂಬುದನ್ನು ಸೂಚಿಸುತ್ತದೆ. ಇಡೀ ಗ್ರಂಥದಲ್ಲಿ ಪರುಷರು ಗೃಹ ಕೃತ್ಯ ಮಾಡುವ ಬಗ್ಗೆ ಒಂದಾದರೂ ಉಲ್ಲೇಖವಿಲ್ಲದಿರುವುದು ಆಶ್ಚರ್ಯವೇನಲ್ಲ.

ಪ್ರಯುಜ್ಯತೇ ವಿವಾಹೇಷು ಪ್ರದಾನಂ ಸ್ವಾಮ್ಯ ಕಾರಣಂ // 5- 152

ವಿವಾಹದಲ್ಲಿ ಕನ್ಯಾದಾನ ಮಾಡುವುದೆಂದರೆ ಪತಿಗೆ ಅವಳ ಮೇಲೆ ಒಡೆತನವನ್ನು ಅಧಿಕಾರವನ್ನು ನೀಡುವುದಾಗಿದೆ.

ನಾಸ್ತಿ ಸ್ತ್ರಿಣಾಂ ಪ್ರಥಗ್ಯಜ್ಞೋ ನ ವೃತಂ ನಾಪ್ಯುಪೋಷಿತಂ/
ಪತಿ ಶುಶ್ರೂಷತೇ ಯೇನ ತೇನ ಸ್ವರ್ಗೇ ಮಹಿಯತೇ // 5- 155

ಪತಿಯನ್ನು ಬಿಟ್ಟು ಸ್ತ್ರಿಗೆ ಬೇರಾವ ಯಜ್ಞವೂ ಇಲ್ಲ. ಪತಿಸೇವೆಯನ್ನು ಬಿಟ್ಟು ಬೇರಾವ ವ್ರತವೂ ಇಲ್ಲ. ಪತಿ ಸೇವೆ ಮಾಡುವುದರಿಂದಲೇ ಸ್ತ್ರಿಯು ಸ್ವರ್ಗದಲ್ಲಿ ಗೌರವ ಪಡೆಯುತ್ತಾಳೆ.

ವಿಶೀಲಂ ಕಾಮವೃತ್ತೋ ವಾ ಗುಣೈರ್ವಾ ಪರಿವರ್ಜಿತಃ /
ಉಪಚರ್ಯಃ ಸ್ತ್ರಿಯಾ ಸಾಧ್ಯಾ ಸತತಂ ದೇವವತ್ಪತಿಃ // 5.154

ಪತಿಯ ನಡತೆ ಚೆನ್ನಾಗಿಲ್ಲದಿದ್ದರೂ, ಕಾಮಾತುರನಾಗಿ ಬೇರೆ ಹೆಂಗಸರನ್ನು ಭೋಗಿಸುತ್ತಿದ್ದರೂ, ದುರ್ಗುಣಿಯಾಗಿದ್ದರೂ ಸಾಧ್ವಿಯಾದ ಸ್ತ್ರಿಯು ತನ್ನ ಪತಿಯನ್ನು ದೇವರೆಂದೇ ತಿಳಿದು ಸೇವೆ ಮಾಡಬೇಕು.

ಈ ಮೇಲಿನ ಶ್ಲೋಕಗಳು ಮೇಲೆ ವಿವರಿಸಿದಂತೆ ಪಾತಿವ್ರತ್ಯವೆಂದರೆ ಪತಿಗೆ ಲೈಂಗಿಕ ನಿಷ್ಟೆ ಮಾತ್ರವೇ ಅಲ್ಲ. ಪತಿಯ ಸೇವೆ-ಎಲ್ಲ ರೀತಿಯ ಸೇವೆ, ಅವನು ಬಯಸುವುದನ್ನೆಲ್ಲಾ ಮಾಡುವುದು ಎಂಬುದಕ್ಕೆ ಧಾರ್ಮಿಕ ರೂಪ ನೀಡಲಾಗಿದೆ. ಮಹಾ ಪತಿವ್ರತೆಯರ ಕತೆಗಳೆಂದು ಪುರಾಣಗಳು ಪ್ರಚಲಿತಗೊಳಿಸಿರುವುದು ಇಂತಹ ಸೇವೆಯ ಮಾದರಿಯನ್ನು ಒದಗಿಸುತ್ತವೆ. ಕುಷ್ಟ ರೋಗಿಯಾದ ಗಂಡನನ್ನು ಶುಚಿಗೊಳಿಸಿ ಬುಟ್ಟಿಯಲ್ಲಿ ಹೊತ್ತು ಅವನ ಪ್ರಿಯ ವೇಶ್ಯೆಯ ಮನೆಗೆ ಹೊತ್ತೊಯ್ಯುವ ಪತಿವ್ರತೆಯ ಮಾದರಿ ಭಾರತದ ನಾರಿಯರ ಬದುಕಿನ ಜೀವನದ ಗುರಿಯನ್ನು ನಿರ್ದೇಶಿಸಿದೆ. ಇಂತಹ ಮಾದರಿಯ ಪರಿಣಾಮವಾಗಿ ಗಂಡಂದಿರು, ಮಾವಂದಿರು ಕುಳಿತ ಕಡೆಯಿಂದ ಒಂದು ಕೂಗು ಹಾಕಿದರೆ ಸಾಕು ಯಾವ ತುರ್ತಿನ ಕೆಲಸ ಮಾಡುತ್ತಿದ್ದರೂ ಓಡೋಡಿ ಬಂದು ಅವರು ಕುಳಿತಲ್ಲಿಗೆ ಅವರ ಬೇಕುಗಳನ್ನು ಒದಗಿಸಬೇಕು ಎಂಬ ಪುರುಷಾಹಂಕಾರದ ಮನಸ್ಥಿತಿಯನ್ನು ರೂಪಿಸಿದೆ. ಮಹಿಳೆಯರಿಗೆ ಸಿಗುವ ಅಲ್ಪ ವಿರಾಮವನ್ನೂ ರುಚಿಯಾದ ವ್ಯಂಜನಗಳ ತಯಾರಿ, ತನ್ನ ಅಲಂಕರಣ, ಪುರುಷರ ದೀರ್ಘಾಯುಷ್ಯಕ್ಕಾಗಿ ವ್ರತಗಳು ಇತ್ಯಾದಿಗಳಿಗೆ ವಿನಿಯೋಗಿಸುವ ಒತ್ತಡವನ್ನು ಹೇರುತ್ತದೆ. ತನ್ನದೇ ವ್ಯಕ್ತಿತ್ವದ ಬೆಳವಣಿಗೆ, ಅಭಿವ್ಯಕ್ತಿಗಳ ಮಾತಂತಿರಲಿ ದುಡಿದು ದಣಿದ ದೇಹಕ್ಕೆ ವಿಶ್ರಾಂತಿ ದೊರೆಯುವ ಸಾಧ್ಯತೆಯೂ ಅಪರೂಪವಾಗುತ್ತದೆ.

ಭಾರ್ಯಾ ಪುತ್ರಶ್ಚ ದಾಸಶ್ಚ ತ್ರಯ ಏವಧನಾಃ ಸ್ಮೃತಾಃ/
ಯತ್ತೇ ಸಮಧಿಗಚ್ಚಂತಿ ಯಸ್ಯ ತೇ ತಸ್ಯ ತದ್ಧನಂ //

ಹೆಂಡತಿ, ಮಗ ಮತ್ತು ದಾಸ ಈ ಮೂವರೂ ಅಧನರು (ಧನಾಧಿಕಾರವಿಲ್ಲದವರು) ಎನ್ನಿಸಿಕೊಳ್ಳುತ್ತಾರೆ. ಇವರ ಹಣವೆಲ್ಲ ಇವರ ಮೇಲೆ ಅಧಿಕಾರವುಳ್ಳ ಒಡೆಯನಿಗೆ ಸೇರತಕ್ಕದ್ದು.

ಮಹಿಳೆಯರು ಹೇಗೋ ಕಷ್ಟಪಟ್ಟು ವಿರಾಮವನ್ನು ರೂಪಿಸಿಕೊಂಡು ತಮ್ಮ ಅಗತ್ಯಗಳಿಗಾಗಿ ಹಣ ಸಂಪಾದನೆ ಮಾಡಿದರೂ ಕೂಡಾ ಆ ವಿರಾಮದ ಗಳಿಕೆಯ ಮೇಲೆ ಅವಳಿಗೆ ಹಕ್ಕಿಲ್ಲ ಎಂಬುದು ಕಟ್ಟಲೆಗಳ ಭಾಗವಾಗಿ ಬಿಟ್ಟಿದೆ ಎಂಬುದು ಪುರುಷಾಧಿಪತ್ಯಕ್ಕೆ ದೊರಕಿರುವ ಧಾರ್ಮಿಕ ಅಸ್ತಿವಾರ.

ಮನುಸ್ಮೃತಿಯ ಇಂತಹ ಕಟ್ಟಲೆಗಳು ಪದ್ಧತಿಗಳನ್ನು ಜನರ ನಡುವೆ ಹಲವು ರೀತಿಯಲ್ಲಿ ಪಸರಿಸಲಾಗಿದೆ.

Donate Janashakthi Media

Leave a Reply

Your email address will not be published. Required fields are marked *