ಎರ್ಡೊಗಾನ್/ಎಕೆಪಿ ಪುನರಾಯ್ಕೆ, ‘ಚುನಾಯಿತ ಅಧಿಕಾರಶಾಹಿ’ಯ ಸಫಲ ಮಾದರಿ ?

– ವಸಂತರಾಜ ಎನ್.ಕೆ

ತುರ್ಕಿಯ ಇತ್ತೀಚಿನ ಚುನಾವಣೆ ಆ ದೇಶದೊಳಗೂ, ಜಾಗತಿಕವಾಗಿಯೂ ಅಭೂತಪೂರ್ವ ಕುತೂಹಲ, ನಿರೀಕ್ಷೆ, ಆತಂಕಗಳನ್ನು ಮೂಡಿಸಿತ್ತು. ಎರ್ಡೊಗಾನ್ ಮತ್ತು ಅವರ ಬಲಪಂಥೀಯ ಇಸ್ಲಾಮಿಕ್ ಪಕ್ಷದ ಕಳೆದ ಎರಡು ದಶಕಗಳ ಆಡಳಿತ, ಜಗತ್ತಿನ ಹಲವೆಡೆ ಸಾಮಾನ್ಯವಾಗುತ್ತಿರುವ ‘ಚುನಾಯಿತ ಅಧಿಕಾರಶಾಹಿ’ (ಇಲೆಕ್ಟೊರಲ್ ಅಟೊಕ್ರಸಿ’) ಯ ‘ಸಫಲ ಮಾದರಿ’ ಯಾಗಿರುವುದು ಒಂದು ಕಾರಣ.  ಎರ್ಡೊಗಾನ್ ಪುನರಾಯ್ಕೆ ‘ಚುನಾವಣಾ ಅಧಿಕಾರಶಾಹಿ’ಯ ಸಫಲ ಮಾದರಿಯಾಗಿ ಜಗತ್ತಿನಾದ್ಯಂತ ಪ್ರಗತಿಪರ ಶಕ್ತಿಗಳಿಗೆ ಆತಂಕ ಹುಟ್ಟಿಸುವಂಥದ್ಧೇ. ಭಾರತದ ಮೋದಿ/ಬಿಜೆಪಿಯ ಮತ್ತು ಎರ್ಡೊಗಾನ್/ಎಕೆಪಿಯ ರಾಜಕಾರಣದ ಕಣ್ಣಿಗೆ ಹೊಡೆಯುವ ಹಲವು ಸಾಮ್ಯತೆಗಳ ಬೆಳಕಿನಲ್ಲಿ ಇದನ್ನು ಹೆಚ್ಚು ಆಳವಾಗಿ ವಿಶ್ಲೇಷಿಸುವ ಅಗತ್ಯವಿದೆ.

ಮೇ 28ರಂದು ನಡೆದ ಎರಡನೆಯ ಸುತ್ತಿನ ಅಧ‍್ಯಕ್ಷೀಯ ಚುನಾವಣೆಯಲ್ಲಿ, ಕಳೆದ ಎರಡು ದಶಕಗಳಿಂದ ತುರ್ಕಿಯನ್ನು ಆಳುತ್ತಿರುವ ರೆಸಿಪ್ ತಯ್ಯಿಪ್ ಎರ್ಡೊಗಾನ್ ಸತತ 5ನೆಯ ಬಾರಿಗೆ ದೇಶದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಅವರು ತಮ್ಮ ಪ್ರತಿಸ್ಪರ್ಧಿ ಕೆಮಾಲ್ ಕಿಲಿಕ್ ದಾರೊಗ್ಲು ಅವರನ್ನು 23 ಲಕ್ಷಗಳಷ್ಟು (ಶೇ.4.36) ಮತಗಳ ಅಂತರದಿಂದ ಸೋಲಿಸಿದ್ದಾರೆ. ಎರ್ಡೊಗಾನ್ 2.78 ಕೋಟಿ (52.18%) ಮತ ಪಡೆದರೆ, ಕೆಮಾಲ್ 2.55 ಕೋಟಿ (47.82%) ಮತ ಪಡೆದಿದ್ದಾರೆ.  ತುರ್ಕಿಯ ಅಧ‍್ಯಕ್ಷೀಯ ಚುನಾವಣೆಯಲ್ಲಿ ಮೊದಲ ಬಾರಿಗೆ ಎರಡನೆಯ ಸುತ್ತು ಅಗತ್ಯವಾಗಿದೆ. ತುರ್ಕಿಯ ಅಧ‍್ಯಕ್ಷೀಯ ಚುನಾವಣಾ ವಿಧಾನದ ಪ್ರಕಾರ ಮೊದಲ ಸುತ್ತಿನಲ್ಲಿ ಯಾವ ಅಭ‍್ಯರ್ಥಿಗೂ ಶೇ.50ಕ್ಕಿಂತ ಹೆಚ್ಚು ಮತ ಬರದಿದ್ದರೆ, ಅತಿ ಹೆಚ್ಚು ಮತ ಪಡೆದ ಮೊದಲ ಎರಡು ಅಭ್ಯರ್ಥಿಗಳು ಮಾತ್ರ ಭಾಗವಹಿಸುವ ಎರಡನೆಯ ಸುತ್ತಿನ ಚುನಾವಣೆ ಅಂತಿಮ ಫಲಿತಾಂಶ ನಿರ್ಧರಿಸುತ್ತದೆ. ಎರ್ಡೊಗಾನ್ ಮೊದಲ ಸುತ್ತಿನಲ್ಲಿಯೇ ಆಯ್ಕೆಯಾಗಲು ಬೇಕಾದ ಮತಗಳಿಗಿಂತ ಕೇವಲ 0.50% ರಷ್ಟು ಮತಗಳು ಕಡಿಮೆಯಾಗಿತ್ತು.

ಎರ್ಡೊಗಾನ್ ಇಸ್ಲಾಮಿಕ್ ಬಲಪಂಥೀಯ ಪಕ್ಷವಾದ ‘ಜಸ್ಟೀಸ್ ಅಂಡ್ ಡೆವಲೆಪ್ ಮೆಂಟ್ ಪಾರ್ಟಿ’ (ಎಕೆಪಿ) ಯ ನಾಯಕತ್ವದ 4 ಪಕ್ಷಗಳ ‘ಜನತಾ ಒಕ್ಕೂಟ’ದ ಅಭ್ಯರ್ಥಿಯಾಗಿದ್ದರು.ಕೆಮಾಲ್ ಪ್ರಮುಖ ವಿರೋಧ ಪಕ್ಷವಾದ ರಿಪಬ್ಲಿಕನ್ ಪೀಪಲ್ಸ್ ಪಾರ್ಟಿ ನಾಯಕತ್ವದ ಹೆಚ್ಚು ಕಡಿಮೆ ಎಲ್ಲ ವಿರೋಧ ಪಕ್ಷಗಳ ‘ರಾಷ್ಟ್ರೀಯ ಒಕ್ಕೂಟ’ದ  ಪರವಾಗಿ ಸ್ಪರ್ಧಿಸಿದ್ದರು. ಪಾರ್ಲಿಮೆಂಟ್ ಚುನಾವಣೆಗಳಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಿದ್ದ ತುರ್ಕಿ ಕಮ್ಯುನಿಸ್ಟ್ ಪಕ್ಷದ ನಾಯಕತ್ವದ ‘ಸಮಾಜವಾದಿ ಶಕ್ತಿಗಳ ಒಕ್ಕೂಟ’ ಮತ್ತು ಗ್ರೀನ್ ಪಾರ್ಟಿ ನಾಯಕತ್ವದ ‘ಲೇಬರ್ ಒಕ್ಕೂಟ’ ಗಳು ಸಹ ಅಧ‍್ಯಕ್ಷೀಯ ಚುನಾವಣೆಯಲ್ಲಿ ಎರಡೂ ಸುತ್ತುಗಳಲ್ಲಿ ಕೆಮಾಲ್ ಅವರನ್ನು ಬೆಂಬಲಿಸಿದ್ದವು. ಮೊದಲ ಸುತ್ತಿನಲ್ಲಿ ವಿಕ್ಟರಿ ಪಾರ್ಟಿಯ ನಾಯಕತ್ವದ ವಲಸೆಗಾರ-ವಿರೋಧೀ ಉಗ್ರ ರಾಷ್ಟ್ರೀಯವಾದಿ ‘ಪ್ರಾಚೀನ ಒಕ್ಕೂಟ’ದ  ಒಗಾನ್ ಸ್ಪರ್ಧಿಸಿದ್ದು ಅವರು ಎರಡನೆಯ ಸುತ್ತಿನಲ್ಲಿ ಎರ್ಡೊಗಾನ್ ಅವರಿಗೆ ಬೆಂಬಲ ಘೋಷಿಸಿದ್ದರು.

ಮೇ 14ರಂದು ನಡೆದ ಮೊದಲ ಸುತ್ತಿನಲ್ಲಿ ಎರ್ಡೊಗಾನ್ 2.71 ಕೋಟಿ (49.52%), ಕೆಮಾಲ್ 2.45 ಕೋಟಿ (44.88%), ಒಗಾನ್ 28.3 ಲಕ್ಷ (5.17%) ಮತ ಗಳಿಸಿದ್ದರು. ಮೊದಲ ಸುತ್ತಿಗೆ (87.04%) ಹೋಲಿಸಿದರೆ ಎರಡನೆಯ ಸುತ್ತಿನಲ್ಲಿ (84.15%) ಮತದಾನ ಸುಮಾರು 8 ಲಕ್ಷದಷ್ಟು ಕಡಿಮೆಯಾಗಿತ್ತು. ಎರಡನೆಯ ಸುತ್ತಿನಲ್ಲಿ ಎರ್ಡೊಗಾನ್ 8 ಲಕ್ಷದಷ್ಟು ಮತ್ತು ಕೆಮಾಲ್ 10 ಲಕ್ಷದಷ್ಟು ಹೆಚ್ಚು ಮತ ಪಡೆದಿದ್ದರು. ಮತಗಳ ಅಂತರ  26 ಲಕ್ಷದಿಂಧ 23 ಲಕ್ಷಕ್ಕೆ ಇಳಿದಿತ್ತು.

ಮೇ 14ರಂದು ಮೇ 14ರಂದು ಅಧ್ಯಕ್ಷೀಯ ಚುನಾವಣೆಗಳ ಮೊದಲ ಸುತ್ತಿನ ಜತೆಗೆ ನಡೆದ ಪಾರ್ಲಿಮೆಂಟರಿ ಚುನಾವಣೆಗಳಲ್ಲಿ ಸಹ ಎರ್ಡೊಗಾನ್ ಅವರ ‘ಜನತಾ ಒಕ್ಕೂಟ’ 49.91% ಮತ

ಗಳಿಸಿ 600 ರಲ್ಲಿ 323 ಸೀಟುಗಳನ್ನು ಪಡೆದು ನಿಚ್ಚಳ ಬಹುಮತ ಪಡೆದಿದೆ. ಆದರೆ 2018 ಚುನಾವಣೆಗೆ ಹೋಲಿಸಿದರೆ 21 ಸೀಟುಗಳನ್ನು ಕಳೆದುಕೊಂಡಿದೆ. ಪ್ರಮುಖ ವಿರೋಧ ಪಕ್ಷಗಳ ‘ರಾ಼ಷ್ಟ್ರೀಯ ಒಕ್ಕೂಟ’ 35.35 % ಮತ ಪಡೆದು 212 ಸೀಟುಗಳನ್ನು ಪಡೆದಿದೆ.  2018 ಚುನಾವಣೆಗೆ ಹೋಲಿಸಿದರೆ 23 ಸೀಟುಗಳನ್ನು ಹೆಚ್ಚಿಸಿಕೊಂಡಿದೆ. ‘ಲೇಬರ್ ಒಕ್ಕೂಟ’ 65 ಸೀಟು 10.67% ಮತ ಗಳಿಸಿ ಮೂರನೇಯ ಸ್ಥಾನದಲ್ಲಿ ಇದೆ. ಈ ಬಾರಿಯ ಚುನಾವಣೆಯಲ್ಲಿ ಒಂದು ಪಕ್ಷ ಅಥವಾ ಕೂಟ ಕ್ಕೆ ಪಾರ್ಲಿಮೆಂಟ್ ಪ್ರವೇಶಿಸಲು ಬೇಕಾದ ಕನಿಷ್ಠ ಮತಪ್ರಮಾಣವನ್ನು 10ರಿಂದ 7% ಗೆ ಇಳಿಸಿದ್ದು, ಇದರಿಂದಾಗಿ 8 ಪಕ್ಷಗಳು ಪಾರ್ಲಿಮೆಂಟನ್ನು ಪ್ರವೇಶಿಸಿವೆ.

‘ಇಸ್ಲಾಮಿಕ್ ಬಹುಸಂ‍ಖ್ಯಾತವಾದ’ ಮತ್ತು ‘ಉಗ್ರ ರಾಷ್ಟ್ರವಾದ’ದ ಕಾಕ್ ಟೈಲ್

ಆಂತರಿಕವಾಗಿ ತುರ್ಕಿಯ ಸೆಕ್ಯುಲರ್ ಸಂವಿಧಾನಿಕ ಪ್ರಜಾಪ್ರಭುತ್ವವನ್ನು ಬಳಸಿಕೊಂಡೇ ಎರ್ಡೊಗಾನ್ ಮತ್ತು ಅವರ ಎಕೆಪಿ ಪಕ್ಷ ಅಧಿಕಾರಕ್ಕೆ ಬಂದು ‘ಇಸ್ಲಾಮಿಕ್ ಧರ್ಮ ಆಧಾರಿತ ಬಹುಸಂ‍ಖ್ಯಾತವಾದ’ ಮತ್ತು ‘ಉಗ್ರ ರಾಷ್ಟ್ರವಾದ’ದ ಮಿಶ್ರಣವನ್ನು ಬಳಸಿ ತನ್ನ ಸಾಮೂಹಿಕ ನೆಲೆಯನ್ನೂ ಕಾದುಕೊಳ್ಳುತ್ತಾ ವಿಸ್ತರಿಸುತ್ತಾ ಬಂದಿದೆ. ವಿರೋಧ ಪಕ್ಷಗಳ, ವಿರೋಧಿ ಗುಂಪುಗಳ, ಟ್ರೇಡ್ ಯೂನಿಯನ್ ನಂತಹ ಜನಸಂಘಟನೆಗಳ ಮತ್ತು ಜನತೆಯ ಪ್ರಜಾಪ್ರಭುತ್ವ ಹಕ್ಕುಗಳನ್ನು ದಮನ ಮಾಡುತ್ತಾ ಬಂದಿದೆ. ಅವುಗಳ ಮೇಲೆ ನಿಷೇಧಗಳನ್ನೂ ಹೇರಿದೆ. ಮಾಧ‍್ಯಮಗಳ ಮೇಲೆ ಭಾರೀ ಹಿಡಿತ ಸಾಧಿಸಿ ಯಾವುದೇ ರೀತಿಯ ಭಿನ್ನಮತವನ್ನು ತುಳಿಯುತ್ತಾ ಬಂದಿದೆ. ಗಮನಾರ್ಹ ಸಂಖ್ಯೆಯಲ್ಲಿರುವ ಕುರ್ದಿಶ್ ಅಲ್ಪಸಂಖ್ಯಾತರ ಹಕ್ಕುಗಳನ್ನು ನಿರಾಕರಿಸುತ್ತಾ ಅವರ ಹೋರಾಟಗಳನ್ನು ಅತ್ಯಂತ ಕ್ರೂರವಾಗಿ ದಮನಿಸುತ್ತಾ ಬಂದಿದೆ.  ಪ್ರಾಂತ್ಯಗಳ ಮತ್ತು ಸ್ಥಳೀಯ ಸಂಸ್ಥೆಗಳನ್ನು ಸಂಖ್ಯಾತ್ಮಕವಾಗಿ ಗುಣಾತ್ಮಕವಾಗಿ ಕಡಿತಗೊಳಿಸುತ್ತಾ ಅಧಿಕಾರದ ಕೇಂದ್ರೀಕರಣವನ್ನು ಸ್ಥಾಪಿಸುತ್ತಾ ಬಂದಿದೆ. ಪಾರ್ಲಿಮೆಂಟರಿ ವ್ಯವಸ್ಥೆಯನ್ನು 2017ರಲ್ಲಿ ಒಂದು ಜನಮತ ಸಂಗ್ರಹದಲ್ಲಿ ಅಲ್ಪ ಬಹುಮತದ ಆಧಾರದ ಮೇಲೆ ಅಧ್ಯಕ್ಷೀಯ ಮಾದರಿಗೆ ಬದಲಾಯಿಸಲಾಯಿತು. ಅಧ್ಯಕ್ಷೀಯ ಮಾದರಿ ಹೆಚ್ಚು ಕೇಂದ್ರೀಕೃತ ಎಂಬುದು ‘ಚುನಾಯಿತ ಅಧಿಕಾರಶಾಹಿ’ಗೆ ಉತ್ತೇಜಕವಾದ ವ್ಯವಸ್ಥೆ.  2014ರಲ್ಲಿ ಪಾರ್ಲಿಮೆಂಟರಿ ವ್ಯವಸ್ಥೆಯಲ್ಲಿ ಚುನಾಯಿತ ಅಧ್ಯಕ್ಷರಾಗಿದ್ದ ಎರ್ಡೊಗಾನ್ ತಮ್ಮ ಅವಧಿ ಮುಗಿಯುವ ಮೊದಲು ಸಂವಿಧಾನ ಬದಲಾಯಿಸಿ 2018ರಲ್ಲಿ ಮತ್ತೆ ಅಧ್ಯಕ್ಷರಾದರು.

ಆಳುವ ಎಕೆಪಿ ಪಕ್ಷ ಆಧುನಿಕ ತುರ್ಕಿಯ ಸ್ಥಾಪಕನಾಗಿದ್ದ ಕೆಮಾಲ್ ಅತಾತುರ್ಕ್ ನಾಯಕತ್ವದಲ್ಲಿ ಸ್ಥಾಪಿತವಾಗಿದ್ದ ಪ್ರಭುತ್ವ ಮತ್ತು ಧರ್ಮಗಳ ಕಟ್ಟುನಿಟ್ಟಿನ ಸಾಂವಿಧಾನಿಕ ಪ್ರತ್ಯೇಕತೆಯನ್ನು ಪ್ರಾಯೋಗಿಕವಾಗಿ ಮುರಿಯುತ್ತಾ ಬಂದಿದೆ. ಪ್ರಭುತ್ವದ ವಿವಿಧ ಅಂಗಗಳಲ್ಲಿದ್ದ ಸೆಕ್ಯುಲರ್ ವ್ಯಕ್ತಿಗಳನ್ನು ಗುರಿಯಿಟ್ಟು ಅಪ್ರಜಾಸತ್ತಾತ್ಮಕವಾಗಿ ಕಿತ್ತು ಹಾಕಲಾಗಿದೆ. ಸಾಮಾಜಿಕ ಸಂಪ್ರದಾಯಶರಣತೆಯನ್ನು ಹೆಚ್ಚೆಚ್ಚು ಉತ್ತೇಜಿಸಲು ಧಾರ್ಮಿಕ ಸಂಸ್ಥೆಗಳನ್ನು ಬಳಸುತ್ತಾ ಬಂದಿದೆ.  ಧಾರ್ಮಿಕ ಸಂಸ್ಥೆಗಳನ್ನು ನೇರವಾಗಿ ರಾಜಕಾರಣಕ್ಕೆ ಸಹ ಬಳಸುತ್ತಾ ಬಂದಿದೆ.  ಮಧ್ಯಯುಗದಲ್ಲಿ ಯುರೇಶ್ಯಾದಲ್ಲಿ ಸ್ಥಾಪಿತವಾಗಿದ್ದ ಒಟ್ಟೊಮಾನ್ ಸಾಮ್ರಾಜ್ಯದ ಗತಕಾಲವನ್ನು ವೈಭವೀಕರಿಸುವ ಮತ್ತು ಅದನ್ನು ಮರುಕಳಿಸುವುದರ ಮೇಲೆ ಆಧಾರಿತ ‘ರಾಷ್ಟ್ರವಾದ’ ವನ್ನು ತನ್ನ ಮುಖ್ಯ ನೆಲೆಯಾಗಿಸುತ್ತಾ ಬಂದಿದೆ. ಇದಕ್ಕಾಗಿ ಚಾರಿತ್ರಿಕ ಸ್ಮಾರಕಗಳನ್ನು ರಾಜಕೀಯ ದಾಳವಾಗಿ ಬಳಸುತ್ತಾ ಬಂದಿದೆ. ಇಸ್ತಾನ್ ಬುಲ್ ನಲ್ಲಿರುವ 6ನೆಯ ಶತಮಾನದ ‘ಹಗಿಯಾ ಸೋಫಿಯಾ’ ಎಂಬ ಒರ್ಥೊಡಾಕ್ಸ್ ಚರ್ಚನ್ನು ಮತ್ತೆ ಮಸೀದಿಯಾಗಿಸಿದ್ದು ಉತ್ತಮ ಉದಾಹರಣೆ. ಜಗತ್ತಿನಲ್ಲೇ ಅತ್ಯಂತ ಹೆಚ್ಚಿನ ಕಟ್ಟಡದ ಒಳಾಂಗಣ ವಿಸ್ತೀರ್ಣ ಇರುವ ಬೈಜಂಟೀನ್ ವಾಸ್ತುಶಿಲ್ಪದ ಅತ್ಯುತ್ತಮ ಮಾದರಿಯಾಗಿದ್ದು ಕ್ರಿ.ಶ 537 ರಲ್ಲಿ ಕಟ್ಟಲಾಗಿದ್ದ ಈ ಚರ್ಚನ್ನು ಒಟ್ಟೊಮಾನ್ ಸಾಮ್ರಾಜ್ಯದ ಕಾಲದಲ್ಲಿ 1453ರಲ್ಲಿ ಮಸೀದಿಯಾಗಿ ಪರಿವರ್ತಿಸಲಾಗಿತ್ತು. 1935ರಲ್ಲಿ ತುರ್ಕಿ ಸೆಕ್ಯುಲರ್ ರಿಪಬ್ಲಿಕ್ ಆದ ನಂತರ ಅದನ್ನು ಮ್ಯೂಸಿಯಂ ಆಗಿ ಪರಿವರ್ತಿಸಲಾಗಿದ್ದು ಅತ್ಯಂತ ಹೆಚ್ಚು ದೇಶ-ವಿದೇಶಗಳ ಪ್ರವಾಸಿಗರು ಭೇಟಿ ನೀಡಿದ ತುರ್ಕಿಯ ಪ್ರವಾಸಿ ತಾಣವಾಗಿತ್ತು. ವಿರೋಧ ಪಕ್ಷಗಳ, ಯುನೆಸ್ಕೊ ದಂತಹ ಜಾಗತಿಕ ಸಂಸ್ಥೆಗಳ ವಿರೋದದ ನಡುವೆ 2020ರಲ್ಲಿ ಎಕೆಪಿ ಸರಕಾರ ಇದನ್ನು ಮತ್ತೆ ಮಸೀದಿಯಾಗಿ ಪರಿವರ್ತಿಸಿತು.

ತುರ್ಕಿ ಜನತೆಗೆ ಸಂಕಷ್ಟಗಳ ಸರಮಾಲೆ

ಎಕೆಪಿ ಯ ಆರ್ಥಿಕ ನೀತಿ ನವ-ಉದಾರವಾದಿ ಬಂಡವಾಳಶಾಹಿಯನ್ನು ಬೆಂಬಲಿಸುವಂಥದೇ. ಈ ನೀತಿಗಳು ಜನರ ಆರ್ಥಿಕ-ಸಾಮಾಜಿಕ ಸಮಸ್ಯೆಗಳಿಗೆ ಯಾವುದೇ ನಿಜವಾದ ಪರಿಹಾರವನ್ನು ಕೊಡದೆನೇ, ಹೆಚ್ಚಾಗಿ ಅವನ್ನು ಉಲ್ಬಣಿಸುತ್ತಾ ಬಂದಿವೆ.  ಅಗ್ಗದ ಕಾರ್ಮಿಕ ಶ್ರಮದ ಮೇಲೆ ಆಧಾರಿತವಾದ ಅಗ್ಗದ ಸರಕು-ಸೇವೆಗಳನ್ನು ಯುರೋಪಿಯನ್ ಮಾರುಕಟ್ಟೆಗೆ ರಫ್ತು ಮಾಡುವುದರ ಮೇಲೆ ತುರ್ಕಿಯ ಆರ್ಥಿಕತೆ ನಿಂತಿದೆ. ಶೇ.12 ರಷ್ಟು ಬಡತನವಿರುವ ಅದರ ಆಂತರಿಕ ಮಾರುಕಟ್ಟೆ ಸ್ಥಗಿತವಾಗಿದೆ, ಅದು ಯುರೋ ಕೂಟದ ಪೂರ್ಣ ಸದಸ್ಯ ದೇಶವಾಗುವ ಆಕಾಂಕ್ಷೆ ಹೊಂದಿದೆ. ಆದರೆ ಯುರೋ ಕೂಟ ತುರ್ಕಿಗೆ ಷರತ್ತುಗಳನ್ನು ವಿಧಿಸುತ್ತಾ ಮೂಗಿಗೆ ತುಪ್ಪ ಸವರುತ್ತಾ ಅದನ್ನು ಹೊರಗಿಟ್ಟಿದೆ. ಇತ್ತೀಚಿನ  ನವ-ಉದಾರವಾದಿ ಬಂಡವಾಳಶಾಹಿ ಮತ್ತು ಯುರೋಪಿನ ತೀವ್ರ ಬಿಕ್ಕಟ್ಟು ತುರ್ಕಿಗೆ ಹೆಚ್ಚಿನ ಆಘಾತ ಕೊಟ್ಟಿದೆ.

ಕಳೆದ ಒಂದು ವರ್ಷವಂತೂ ತುರ್ಕಿ ಜನತೆಗೆ ಸಂಕಷ್ಟಗಳ ಸರಮಾಲೆಯನ್ನೇ ತಂದಿತ್ತು. ಆಗಲೇ ತುರ್ಕಿ ತೀವ್ರ ಬೆಲೆಏರಿಕೆ, ನಿರುದ್ಯೋಗ, ಹಣದುಬ್ಬರವನ್ನು ಎದುರಿಸುತ್ತಿತ್ತು. 2022 ರ ಒಂದು ವರ್ಷದಲ್ಲೇ ಈರುಳ್ಳಿ ಬೆಲೆ ಆರು ಪಟ್ಟು ಆಗಿದೆ. ಆಹಾರ ವಸ್ತುಗಳ ಬೆಲೆಏರಿಕೆ ದರ 2022ರಲ್ಲಿ ಶೇ.85 ರಷ್ಟಿದ್ದು, ಈಗ ಶೇ.44 ಆಗಿದೆ. ಇದು ಇತ್ತೀಚೆಗಿನ ಜಗತ್ತಿನಲ್ಲೇ ಅತ್ಯಂತ ಹೆಚ್ಚು. ಮತ್ತು ತುರ್ಕಿಯಲ್ಲೇ ಕಳೆದ 25 ವರ್ಷಗಳಲ್ಲೇ ಅತ್ಯಂತ ಹೆಚ್ಚಿನ ಬೆಲೆಏರಿಕೆಯ ದರ. ತುರ್ಕಿಯ ನಾಣ್ಯ ಲಿರಾ 2022ರಲ್ಲಿ ಶೇ.30 ರಷ್ಟು ತನ್ನ ಮೌಲ್ಯ ಕಳೆದುಕೊಂಡಿದೆ. ನಿರುದ್ಯೋಗ ದರ ಶೇ.10 ರಷ್ಟಿತ್ತು. ಇದು ಸಾಲದೆಂಬಂತೆ ಈ ವರ್ಷ ತುರ್ಕಿಯನ್ನು ಬಾಧಿಸಿದ ಭೂಕಂಪ ಭಾರಿ ಹಾನಿ ತಂದಿದೆ. ಸುಮಾರು 50 ಸಾವಿರ ಜನ ಸತ್ತರು. ಲಕ್ಷಾಂತರ ಜನ ಗಾಯಗೊಂಡರು, ನಿರಾಶ್ರಿತರಾದರು, ಬಹುಮಹಡಿ ಕಟ್ಡಡಗಳ ನಿರ್ಮಾಣಗಳ ಮೇಲೆ ಇದ್ದ ಕಟ್ಟುಪಾಡು, ನಿರ್ಬಂಧಗಳನ್ನು ಎಕೆಪಿ ಸರಕಾರ ಸಡಿಲಿಸಿದ್ದು ಭೂಕಂಪ ಇಷ್ಟು ಕಷ್ಟ-ನಷ್ಟ ಉಂಟು ಮಾಡಲು ಕಾರಣವಾಯಿತು ಪರಿಹಾರ ಕ್ರಮಗಳನ್ನು ಸಹ ಎರ್ಡೊಗಾನ್ ಸರಕಾರ ಯುದ್ಧೋಪಾದಿಯಲ್ಲಿ ಮಾಡಲಿಲ್ಲ, ಎಂಬ ತೀವ್ರ ಟೀಕೆ ವ್ಯಕ್ತವಾಗಿದೆ.

‘ಈರುಳ್ಳಿ, ಆಲೂಗಡ್ಡೆಗಾಗಿ ಒಬ್ಬ ಒಳ್ಳೆಯ ನಾಯಕನನ್ನು ಬಲಿಗೊಡಬೇಡಿ’

ಅಧ್ಯಕ್ಷೀಯ ಚುನಾವಣೆಯಲ್ಲಿ ಹೆಚ್ಚಿನ ವಿರೋಧ ಪಕ್ಷಗಳು ಜಂಟಿಯಾಗಿ ಒಬ್ಬ ಅಭ್ಯರ್ಥಿಯನ್ನು ಬೆಂಬಲಿಸಿದ್ದವು. ವಿರೋಧ ಪಕ್ಷಗಳ ಮೇಲೆ ಇದ್ದ ತೀವ್ರ ನಿರ್ಬಂಧಗಳನ್ನು ಎದುರಿಸಿ ಸಾಕಷ್ಟು ವ್ಯಾಪಕ ಪ್ರಚಾರ ನಡೆಸಿದ್ದವು. ಎಲ್ಲರನ್ನೂ ಬಾಧಿಸಿದ್ದ ತೀವ್ರ ಬೆಲೆಏರಿಕೆಯ ಮೇಲೆ ಕೇಂದ್ರೀಕರಿಸಿ ‘ಈರುಳ್ಳಿ, ಆಲೂಗಡ್ಡೆ ಮೇಲೆ ಮೇಲಕ್ಕೆ, ಎರ್ಡೋಗಾನ್ ಹೊರಕ್ಕೆ’ ಎಂಬ ಘೋಷಣೆ ವ್ಯಾಪಕವಾಗಿ ಕೇಳಿ ಬಂದಿದ್ದವು. ‘ಈರುಳ್ಳಿ, ಆಲೂಗಡ್ಡೆಗಾಗಿ ಒಬ್ಬ ಒಳ್ಳೆಯ ನಾಯಕನನ್ನು ಬಲಿಗೊಡಬೇಡಿ’ ಎಂದು ಎರ್ಡೊಗಾನ್ ಮತ್ತೆ ಮತ್ತೆ ಹೇಳಬೇಕಾಗುವ ಮಟ್ಟಿಗೆ ಅದು ಪರಿಣಾಮಕಾರಿಯಾಗಿತ್ತು ಕೂಡಾ. ಹಾಗಾದರೆ ಎರ್ಡೊಗಾನ್ ಎರಡನೆಯ ಸುತ್ತಿನಲ್ಲೂ, ಅಲ್ಪ ಬಹುಮತದಿಂದಲಾದರೂ ಗೆದ್ದಿದ್ದು ಹೇಗೆ?

ಎರ್ಡೊಗಾನ್ ನಂತಹ ನಾಯಕನ ವಿರುದ್ಧ ನೇರ ಸ್ಪರ್ಧೆಯನ್ನು ಎರಡನೆಯ ಸುತ್ತಿಗೆ ಎಳೆದದ್ದು ಕಡಿಮೆ ಸಾಧನೆಯೇನಲ್ಲ. ಅದಕ್ಕೆ ಆಡಳಿತ-ವಿರೋಧಿ ಅಲೆ ಮತ್ತು ವಿರೋಧ ಪಕ್ಷಗಳ ಐಕ್ಯತೆ ಕಾರಣವಾಗಿತ್ತು. ಅಲ್ಲದೆ ಅಲ್ಪ ಬಹುಮತ ಸಾಧಿಸುವಲ್ಲಿ ಆಳುವ ಒಕ್ಕೂಟದ ಇತರ ಬಲಪಂಥೀಯ, ಉಗ್ರ ಬಲಪಂಥೀಯ ಪಕ್ಷಗಳ ಮತ್ತು ಮೊದಲ ಸುತ್ತಿನ ಮೂರನೆಯ ಅಭ್ಯರ್ಥಿಯ ಕೂಟದ ಬೆಂಬಲ ಗಮನಾರ್ಹವಾಗಿತ್ತು. ಮೊದಲನೆಯ ಸುತ್ತಿನ ಸೋಲು ಮತ್ತು ಎರ್ಡೊಗಾನ್ ಗೆ ಮೂರನೆಯ ಅಭ್ಯರ್ಥಿಯ ಬೆಂಬಲದಿಂದ ನಿರಾಸೆಗೊಂಡ ಕೆಮಾಲ್ ಬೆಂಬಲಿಗರು ಎರಡನೆಯ ಸುತ್ತಿನಲ್ಲಿ ಮತದಾನದಲ್ಲಿ ಭಾಗವಹಿಸದಿರುವ ಸಾಧ‍್ಯತೆ ಸಹ ಇದೆ. ಎರಡನೆಯ ಸುತ್ತಿನಲ್ಲಿ ಮತದಾನದ ಪ್ರಮಾಣ ಕಡಿಮೆಯಾಗಿತ್ತು. ಕೆಮಾಲ್ ಹೆಚ್ಚಿನ ವಿರೋಧ ಪಕ್ಷಗಳ ಸಾಮಾನ್ಯ ಅಭ್ಯರ್ಥಿಯಾಗಿದ್ದರೂ ಹೆಚ್ಚಿನ ಆಡಳಿತ ಅನುಭವವಿರುವ ಜನರಲ್ಲಿ ನಂಬಿಕೆ ಹುಟ್ಟಿಸಬಲ್ಲ ಪ್ರಭಾವಿ ನಾಯಕರಾಗಿರಲಿಲ್ಲ. ಹೆಚ್ಚೆಚ್ಚು ವ್ಯಕ್ತಿಗತವಾಗುವ ಅಧ್ಯಕ್ಷೀಯ ಚುನಾವಣೆಯಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆಯೆಂಬುದು ಸರ್ವವಿದಿತ. ಇದಲ್ಲದೆ ವಿರೋಧ ಪಕ್ಷಗಳ ಕೂಟ ಬದಲಿ ನೀತಿ, ಸಮಸ್ಯೆಗಳಿಗೆ ಪರಿಹಾರ ಮಂಡಿಸುವಲ್ಲಿ ಸೋತವು ಎಂದು ಕಮ್ಯುನಿಸ್ಟ್ ಪಕ್ಷ ಹೇಳಿದೆ. ದೇಶವನ್ನು ದುರ್ಬಲಗೊಳಿಸುತ್ತಿರುವ, ರಾಷ್ಟ್ರದ ಭದ್ರತೆಗೆ ಮಾರಕವಾಗಿರುವ ಕುರ್ದೀಶ್ ಅಲ್ಪಸಂಖ್ಯಾತರನ್ನು ಮತ್ತು ಸಿರಿಯನ್ ನಿರಾಶ‍್ರಿತರನ್ನು ವಿರೋಧ ಪಕ್ಷಗಳು ಬೆಂಬಲಿಸುತ್ತಿವೆ ಎಂಬ ಅಪಪ್ರಚಾರ ಸಹ ವಿರೋಧ ಪಕ್ಷಗಳ ಬೆಂಬಲವನ್ನು ಕುಗ್ಗಿಸಿವೆ. ಇದಲ್ಲದೆ ಮೇಲೆ ವಿವರಿಸಿದ ಎರ್ಡೊಗಾನ್ ಮತ್ತು ಅವರ ಎಕೆಪಿ ಪಕ್ಷದ  ದೀರ್ಘಕಾಲೀನ ವಿಶಿಷ್ಟ ‘ಧಾರ್ಮಿಕ ರಾಷ್ಟ್ರವಾದಿ’ ರಾಜಕಾರಣದ ನೆಲೆಯ ಮೂಲಕ ಅದು ಐದನೇ ಬಾರಿ ಅಧಿಕಾರಕ್ಕೆ ಬಂದಿದೆ ಎನ್ನಬಹುದು.

ಜಾಗತಿಕ ಮುತ್ಸದಿ

ಇದಲ್ಲದೆ ಎರ್ಡೊಗಾನ್ ತುರ್ಕಿಯ ‘ರಾಷ್ಟ್ರ ಹೆಮ್ಮೆ’ ಎತ್ತಿ ಹಿಡಿಯುವ ಜಾಗತಿಕ ಮುತ್ಸದಿ ತಾನು ಎಂದು ಬಿಂಬಿಸಿಕೊಂಡಿದ್ದೂ ಕಾರಣವಾಗಿದೆ. ಇತ್ತೀಚಿನ ಉಕ್ರೇನ್ ಯುದ್ಧದ ಆರಂಭದಲ್ಲಿ ಗೋಧಿಯ ಜಾಗತಿಕ ಒಳಿತಿಗಾಗಿ ತುರ್ತು ರಫ್ತಿಗೆ ಮಧ್ಯಸ್ತಿಕೆ ವಹಿಸಿದ್ದು, ಶಾಂತಿ ಮಾತುಕತೆಗೂ ಪ್ರಯತ್ನಿಸಿದ್ದು; ಸ್ವೀಡನ್ ಫಿನ್ ಲ್ಯಾಂಡ್  ಗಳ ನಾಟೋದ ಸದಸ್ಯತ್ವಕ್ಕೆ ಷರತ್ತುಗಳನ್ನು ಹಾಕಿದ್ದು; ನಾಟೋ ಸದಸ್ಯ ದೇಶವಾಗಿಯೂ ಮಿಲಿಟರಿ ಉಪಕರಣಗಳ ಸರಕು-ಸೇವೆಗಳ ಖರೀದಿ, ಹೂಡಿಕೆಗೆ ಆಹ್ವಾನ ಗಳ ಕುರಿತು ರಶ್ಯಾದ ಜತೆ ಸಂಬಂಧ; ತುರ್ಕಿಯಲ್ಲಿ ಸೆಕ್ಯುಲರ್-ಪ್ರಜಾಪ್ರಭುತ್ವದ ಮೇಲಿನ ಪಾಶ್ಚಿಮಾತ್ಯ ದಾಳಿ ತನ್ನ ಸ್ವತಂತ್ರ ವಿದೇಶಾಂಗ ನೀತಿಯಿಂದಾಗಿ ಮತ್ತು ಅದನ್ನು ತಾನು ಲೆಕ್ಕಿಸುವುದಿಲ್ಲ ಎಂಬ ಪೋಸು – ಇತ್ಯಾದಿಗಳ ಮೂಲಕ ಇದು ಸಾಧ್ಯವಾಗಿದೆ.

ಎರ್ಡೊಗಾನ್ ಪುನರಾಯ್ಕೆ ‘ಚುನಾವಣಾ ಅಧಿಕಾರಶಾಹಿ’ಯ ಸಫಲ ಮಾದರಿಯಾಗಿ ಜಗತ್ತಿನಾದ್ಯಂತ ಪ್ರಗತಿಪರ ಶಕ್ತಿಗಳಿಗೆ ಆತಂಕ ಹುಟ್ಟಿಸುವಂಥದ್ಧೇ. ಭಾರತದ ಮೋದಿ/ಬಿಜೆಪಿಯ ಮತ್ತು ಎರ್ಡೊಗಾನ್/ಎಕೆಪಿಯ ರಾಜಕಾರಣದ ಕಣ್ಣಿಗೆ ಹೊಡೆಯುವ ಹಲವು ಸಾಮ್ಯತೆಗಳ ಬೆಳಕಿನಲ್ಲಿ ಇದನ್ನು ಹೆಚ್ಚು ಆಳವಾಗಿ ವಿಶ್ಲೇಷಿಸುವ ಅಗತ್ಯವಿದೆ. ಹಲವು ಪ್ರಮುಖ ವ್ಯತ್ಯಾಸಗಳಿದ್ದರೂ ಅವು ಮೋದಿ/ಬಿಜೆಪಿ ಯ ರಾಜಕಾರಣವನ್ನು ಇನ್ನಷ್ಟು ಅಫಾಯಕಾರಿಯಾಗಿಸುವಂಥವು.

*************

Donate Janashakthi Media

Leave a Reply

Your email address will not be published. Required fields are marked *