ಎರಡನೆ ಟೆಸ್ಟ್ ಟೀಮ್ ಇಂಡಿಯಾಗೆ ಭರ್ಜರಿ ಗೆಲುವು

ಚೆನ್ನೈ(ಫೆ. 16): ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆದ ಭಾರೀ ಸೋಲಿನ ಅವಮಾನಕ್ಕೆ ಅಷ್ಟೇ ಭರ್ಜರಿಯಾಗಿ ಆಟವಾಡುವ ಮೂಲಕ ಕ್ರಿಕೆಟ್ ಅಭಿಮಾನಿಗಳನ್ನು ಖುಷಿ ಪಡಿಸಿದೆ. ಚೆನ್ನೈನಲ್ಲೇ ನಡೆದ ಎರಡನೇ ಪಂದ್ಯದಲ್ಲಿ ಭಾರತ 317 ರನ್​ಗಳಿಂದ ಭರ್ಜರಿಯಾಗಿ ಗೆಲುವು ಸಾಧಿಸಿದೆ.

ಗೆಲ್ಲಲು 482 ರನ್ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡದ ಎರಡನೇ ಇನ್ನಿಂಗ್ಸ್ 164 ರನ್​ಗೆ ಅಂತ್ಯಗೊಂಡಿತು. ಭಾರತೀಯ ಸ್ಪಿನ್ನರ್​ಗಳ ಕೈಚಳಕಕ್ಕೆ ಆಂಗ್ಲರು ಬೇಸ್ತುಬಿದ್ದು ಸೋಲೊಪ್ಪಿದರು. ಈ ಗೆಲುವಿನ ಮೂಲಕ ಭಾರತ ಈ ನಾಲ್ಕು ಪಂದ್ಯಗಳ ಸರಣಿಯನ್ನು 1-1ರಿಂದ ಸಮಬಲ ಸಾಧಿಸಿದೆ. ಸರಣಿಯಲ್ಲಿ ಇನ್ನೂ ಎರಡು ಪಂದ್ಯಗಳು ಬಾಕಿ ಇವೆ.

ನಿನ್ನೆ ಮೂರನೇ ದಿನ ಇಂಗ್ಲೆಂಡ್ ತಂಡ ತನ್ನ ಎರಡನೇ ಇನಿಂಗ್ಸಲ್ಲಿ 3 ವಿಕೆಟ್ ಕಳೆದುಕೊಂಡು 53 ರನ್ ಗಳಿಸಿದ್ದಾಗಲೇ ಸೋಲು ಖಚಿತವಾಗಿತ್ತು ಇಂದು ನಾಲ್ಕನೇ ದಿನ ನಿರೀಕ್ಷೆ ಮೀರಿ ಇಂಗ್ಲೆಂಡ್ ತಂಡದ ಪತನ ಆಯಿತು. 126 ರನ್ ಆಗುವಷ್ಟರಲ್ಲಿ 9 ವಿಕೆಟ್​ಗಳು ಪತನವಾಗಿದ್ದವು. ಆದರೆ, ಅಂತ್ಯದಲ್ಲಿ ಮೊಯೀನ್ ಅಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿ ಸೋಲನ್ನು ತುಸು ವಿಳಂಬಗೊಳಿಸಿದರು. ಮಾಜಿ ಆರ್​ಸಿಬಿ ಆಟಗಾರನಾದ ಮೊಯೀನ್ ಅಲಿ ಕೇವಲ 18 ಎಸೆತದಲ್ಲಿ 43 ರನ್ ಚಚ್ಚಿದರು. 5 ಸಿಕ್ಸರ್ 3 ಬೌಂಡರಿ ಭಾರಿಸಿದ ಅವರು ಈ ಪಿಚ್ ಬ್ಯಾಟುಗಾರರ ಸ್ವರ್ಗ ಎಂಬಂತೆ ಬ್ಯಾಟಿಂಗ್ ನಡೆಸಿದ್ದು ವಿಶೇಷ. ಮೊಯೀನ್ ಅವರ 43 ರನ್ ಈ ಪಂದ್ಯದಲ್ಲಿ ಇಂಗ್ಲೆಂಡ್ ಆಟಗಾರರ ಪೈಕಿ ಗರಿಷ್ಠ ಸ್ಕೋರ್ ಎನಿಸಿತು.

 

ಈ ಪಂದ್ಯದಲ್ಲಿ ಭಾರತದ ಗೆಲುವಿಗೆ ಪ್ರಮುಖ ರೂವಾರಿಯಾದವರು ರೋಹಿತ್ ಶರ್ಮಾ, ಆರ್ ಅಶ್ವಿನ್ ಮತ್ತು ಅಕ್ಷರ್ ಪಟೇಲ್. ರೋಹಿತ್ ಶರ್ಮಾ ಮೊದಲ ಇನ್ನಿಂಗ್ಸಲ್ಲಿ ಗಳಿಸಿದ ಅಮೋಘ ಶತಕ (161 ರನ್) ಭಾರತದ ಗೆಲುವಿಗೆ ಒಳ್ಳೆಯ ಬುನಾದಿ ಹಾಕಿತು. ಆರ್ ಅಶ್ವಿನ್ ಎರಡನೇ ಇನ್ನಿಂಗ್ಸಲ್ಲಿ ಶತಕ ಭಾರಿಸಿದಲ್ಲದೆ ಒಟ್ಟಾರೆ 8 ವಿಕೆಟ್ ಪಡೆದರು. ಅಕ್ಷರ್ ಪಟೇಲ್ 7 ವಿಕೆಟ್ ಪಡೆದು ಭಾರತದ ಗೆಲುವನ್ನ ಸುಗಮಗೊಳಿಸಿದರು.

ಚೆನ್ನೈನಲ್ಲೇ ನಡೆದ ಮೊದಲ ಪಂದ್ಯದಲ್ಲಿ ಭಾರತ 227 ರನ್​ಗಳಿಂದ ಸೋಲುಂಡಿತು. ಇದರಿಂದ ಐಸಿಸಿ ಟೆಸ್ಟ್ ಚಾಂಪಿಯನ್​ಶಿಪ್​ನ ಫೈನಲ್ ಸ್ಥಾನದಿಂದ ವಂಚಿತವಾಗುವ ಭೀತಿ ಇತ್ತು. ಫೈನಲ್​ಗೆ ಅರ್ಹತೆ ಪಡೆಯಬೇಕಾದರೆ ಭಾರತ ಈ ನಾಲ್ಕು ಪಂದ್ಯಗಳ ಸರಣಿಯನ್ನು ಗೆಲ್ಲುವುದು ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಇವತ್ತು ಭಾರತ ಗಳಿಸಿದ ಗೆಲುವಿನಿಂದ ಸರಣಿ ಜೀವಂತವಾಗಿದ್ದಷ್ಟೇ ಅಲ್ಲ ಭಾರತ ಐಸಿಸಿ ಟೆಸ್ಟ್ ಚಾಂಪಿಯನ್​ಶಿಪ್​ನ ಫೈನಲ್ ತಲುಪುವ ಆಸೆಯೂ ಜೀವಂತವಾಗಿದೆ. ಇದೀಗ ಈ ಗೆಲುವಿನ ಮೂಲಕ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಎರಡನೇ ಸ್ಥಾನಕ್ಕೇರಿದೆ. ಈ ಸರಣಿಯನ್ನು ಭಾರತ 3-1 ಅಥವಾ 2-1ರಿಂದ ಗೆಲುವು ಸಾಧಿಸಿದರೆ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ಗೆ ಅರ್ಹತೆ ಪಡೆಯಲಿದೆ.

Donate Janashakthi Media

Leave a Reply

Your email address will not be published. Required fields are marked *