ಸಮಾಜವಾದಿ ದೇಶಗಳಲ್ಲಿದ್ದ ಸಮಾನತೆ ಮತ್ತು ಅಭಾವ

ಪ್ರೊ. ಪ್ರಭಾತ್ ಪಟ್ನಾಯಕ್

ಗ್ರಾಹಕರ ಉದ್ದನೆಯ ಸರತಿ ಸಾಲುಗಳು ಅದಕ್ಷತೆಯ ಲಕ್ಷಣವಾಗಿರದೆ, ಸಮಾಜವಾದಿ ಸಮಾಜಗಳ ಸಮಾನತೆಯ ಉನ್ನತ ಸ್ವರೂಪದ ಪ್ರತಿಬಿಂಬವಾಗಿದ್ದವು. ಅದೇ ರೀತಿಯಲ್ಲಿ, ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಸರಕು ಸಾಮಗ್ರಿಗಳ ಮುಕ್ತ ಲಭ್ಯತೆಯು ಆ ವ್ಯವಸ್ಥೆಯಲ್ಲಿ ಹಾಸುಹೊಕ್ಕಾಗಿರುವ ಆದಾಯಗಳ ಅತಿರೇಕದ ಅಸಮಾನತೆಯ ಮೇಲೆ ನಿಂತಿದೆ. ಭಾರತದಂತಹ ಮೂರನೇ ಜಗತ್ತಿನ ದೇಶಗಳಲ್ಲಿ ನವಉದಾರವಾದೀ-ಪೂರ್ವ  ಮತ್ತು ನವ-ಉದಾರವಾದೀ ಆಡಳಿತಗಳ ನಡುವಿನ ತೀಕ್ಷ್ಣ ವ್ಯತ್ಯಾಸವು ಕೂಡ ಸುಮಾರಾಗಿ ಇದಕ್ಕೆ ಹತ್ತಿರವೇ ಇದೆ. ಈ ನಿಟ್ಟಿನಲ್ಲಿ 1991ರ ಮೊದಲಿನ ವಿವಿಧ ಸರಕುಗಳ ಪಡಿತರ ಮತ್ತು ಈಗ, ಒಂದೆಡೆ ದುಡಿಯುವ ಜನರ ಕೈಯಲ್ಲಿ ಕೊಳ್ಳುವ ಶಕ್ತಿಯು ಕುಂದಿರುವುದು, ಇನ್ನೊಂದೆಡೆಯಲ್ಲಿ ಸೂಪರ್ ಮಾರ್ಕೆಟ್‌ಗಳಲ್ಲಿ ಹೇರಳ ಲಭ್ಯತೆ ಇದನ್ನೇ ಬಿಂಬಿಸುತ್ತವೆ.

ಬಂಡವಾಳಶಾಹಿ ದೇಶಗಳಿಗೆ ಹೋಲಿಸಿದರೆ, ಸಮಾಜವಾದಿ ವ್ಯವಸ್ಥೆಯು ಅಸಮರ್ಥವಾದದ್ದು. ಯಾವುದೇ ಬಂಡವಾಳಶಾಹಿ ದೇಶದಲ್ಲಿ ನೀವು ಒಂದು ಸೂಪರ್ ಮಾರ್ಕೆಟ್‌ಗೆ ಹೋಗಿ ಏನನ್ನು ಬೇಕಾದರೂ ತಕ್ಷಣವೇ ಕೊಳ್ಳಬಹುದು. ಆದರೆ, ಅದೇ ಸಮಾಜವಾದಿ ದೇಶಗಳಲ್ಲಿ – ಸೋವಿಯತ್ ಒಕ್ಕೂಟ ಮತ್ತು ಪೂರ್ವ ಯುರೋಪಿನ ದೇಶಗಳಲ್ಲಿ – ಆಹಾರ ಪದಾರ್ಥವೇ ಇರಲಿ ಅಥವಾ ಇನ್ನಾವುದೇ ಸರಕು ಸಾಮಗ್ರಿಯೇ ಇರಲಿ, ಅವುಗಳನ್ನು ಕೊಳ್ಳಲು ಜನರು ಉದ್ದನೆಯ ಸರತಿ ಸಾಲುಗಳಲ್ಲಿ ನಿಲ್ಲುತ್ತಾರೆ ಎಂಬುದಾಗಿ ಸಮಾಜವಾದಿ ವ್ಯವಸ್ಥೆಯನ್ನು ಪಶ್ಚಿಮದ ದೇಶಗಳಲ್ಲಿ ಮಾತ್ರವಲ್ಲ, ಭಾರತದಲ್ಲಿಯೂ ಅಪಹಾಸ್ಯ ಮಾಡುತ್ತಿದ್ದುದನ್ನು ಜ್ಞಾಪಿಸಿಕೊಳ್ಳಬಹುದು.

ವಾಸ್ತವವಾಗಿ ಹೇಳುವುದಾದರೆ, ಗ್ರಾಹಕರ ಉದ್ದನೆಯ ಸರತಿ ಸಾಲುಗಳು ಅದಕ್ಷತೆಯ ಲಕ್ಷಣವಾಗಿರದೆ, ಸಮಾಜವಾದಿ ಸಮಾಜಗಳ ಸಮಾನತೆಯ ಉನ್ನತ ಸ್ವರೂಪದ ಪ್ರತಿಬಿಂಬವಾಗಿದ್ದವು. ಅದೇ ರೀತಿಯಲ್ಲಿ, ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಸರಕು ಸಾಮಗ್ರಿಗಳ ಮುಕ್ತ ಲಭ್ಯತೆಯು ಆ ವ್ಯವಸ್ಥೆಯಲ್ಲಿ ಹಾಸುಹೊಕ್ಕಾಗಿರುವ ಆದಾಯಗಳ ಅತಿರೇಕದ ಅಸಮಾನತೆಯ ಮೇಲೆ ನಿಂತಿದೆ. ಈ ಅಸಮಾನತೆಯ ಅಂಶವನ್ನು, ಆದಾಯಗಳ ಹಂಚಿಕೆಯನ್ನು ಹೊರತುಪಡಿಸಿ, ಮಿಕ್ಕೆಲ್ಲ ವಿಷಯಗಳಲ್ಲೂ ಸಮರೂಪಿಯಾಗಿರುವ ಅಂಶಗಳ ಉದಾಹರಣೆಯ (ಉದ್ದೇಶಪೂರ್ವಕ ಆಯ್ಕೆ) ಮೂಲಕ ಬಂಡವಾಳಶಾಹಿ ವ್ಯವಸ್ಥೆಯಲ್ಲಿರುವ ನಿರೂಪಿಸಬಹುದು.

ಇದನ್ನು ಓದಿ: ಆಧುನಿಕ ಭಾರತ ನಿರ್ಮಾಣದ ಬುನಾದಿ ತತ್ವಗಳನ್ನು ದುರ್ಬಲಗೊಳಿಸಿದ ಆರ್ಥಿಕ ಉದಾರೀಕರಣದ ಮೂರು ದಶಕಗಳು

‘ಸ’ (ಸಮಾಜವಾದಿ ಅರ್ಥವ್ಯವಸ್ಥೆಯ ಅಡಿಯಲ್ಲಿರುವಂತದ್ದು) ಮತ್ತು ‘ಬಂ’(ಬಂಡವಾಳಶಾಹಿ ಅರ್ಥವ್ಯವಸ್ಥೆಯ ಅಡಿಯಲ್ಲಿ ಇರುವಂತದ್ದು) ಎಂಬ ಎರಡು ಅರ್ಥವ್ಯವಸ್ಥೆಗಳನ್ನು ಕಲ್ಪಿಸಿಕೊಳ್ಳೋಣ. ಪ್ರತಿಯೊಂದೂ, 20 ಯುನಿಟ್ ಹೂಡಿಕೆ ಮಾಡುತ್ತದೆ. ಪ್ರತಿಯೊಂದೂ 100 ಯೂನಿಟ್‌ಅನ್ನು ಉತ್ಪಾದಿಸುತ್ತದೆ. ‘ಸ’ ನಲ್ಲಿ ಮೇಲ್ತುದಿಯ 20% ಮಂದಿಯ (ಸಮಾಜವಾದಿ ಅಧಿಕಾರಿವರ್ಗವನ್ನು ಒಳಗೊಂಡಿರುವಂತದ್ದು)) ಉತ್ಪಾದನೆಯು, ಒಟ್ಟು ಉತ್ಪಾದನೆಯ 30%ದಷ್ಟು ಇರುತ್ತದೆ ಮತ್ತು ಕೆಳಗಿನ 80% ಮಂದಿಯ (ಕಾರ್ಮಿಕರನ್ನು ಒಳಗೊಂಡಿರುತ್ತದೆ) ಉತ್ಪಾದನೆಯು ಉಳಿದ 70% ಇರುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ‘ಬಂ’ ಅರ್ಥವ್ಯವಸ್ಥೆಯಲ್ಲಿ, ಮೇಲ್ತುದಿಯ 20% ಮಂದಿಯ (ಬಂಡವಾಳಗಾರರು ಮತ್ತು ಅಧಿಕಾರಿಗಳನ್ನು ಒಳಗೊಂಡಿರುವಂತದ್ದು) ಉತ್ಪಾದನೆಯು, ಒಟ್ಟು ಉತ್ಪಾದನೆಯ ಶೇ.60ರಷ್ಟಿರುತ್ತದೆ ಮತ್ತು ಉಳಿದ 80% ಮಂದಿಯ (ಕಾರ್ಮಿಕರನ್ನು ಒಳಗೊಂಡಿರುವಂತದ್ದು) ಉತ್ಪಾದನೆಯು 40% ಇರುತ್ತದೆ. ಈ ಎರಡೂ ಅರ್ಥವ್ಯವಸ್ಥೆಗಳಲ್ಲಿ, ಮೇಲ್ತುದಿಯ ಗುಂಪಿನ ಜನರು ತಮ್ಮ ಆದಾಯದ ಅರ್ಧದಷ್ಟನ್ನು ಉಪಭೋಗಕ್ಕಾಗಿ ಬಳಸಿಕೊಳ್ಳುತ್ತಾರೆ ಮತ್ತು ಎರಡೂ ವ್ಯವಸ್ಥೆಗಳಲ್ಲಿ ಕಾರ್ಮಿಕರು ಉಪಭೋಗಕ್ಕಾಗಿ ತಮ್ಮ ಇಡೀ ಆದಾಯವನ್ನು ಬಳಸಿಕೊಳ್ಳುತ್ತಾರೆ.

ಈಗ, ‘ಸ’ ಅರ್ಥವ್ಯವಸ್ಥೆಯು ತನ್ನ ಪೂರ್ಣ ಸಾಮರ್ಥ್ಯದ 100 ಯೂನಿಟ್‌ ಅನ್ನು ಉತ್ಪಾದಿಸಿದರೆ, ಆಗ ಒಟ್ಟು ಬಳಕೆ ಬೇಡಿಕೆಯು 85 ಆಗಿರುತ್ತದೆ (ಮೇಲ್ತುದಿಯ 30ರ ಅರ್ಧದಷ್ಟು ಅಂದರೆ 15 + 70 ಕಾರ್ಮಿಕರದ್ದು); ಮತ್ತು, ಹೂಡಿಕೆಯ 20 ಯೂನಿಟ್‌ ಅನ್ನೂ ಒಳಗೊಂಡಂತೆ ಒಟ್ಟು ಬೇಡಿಕೆಯು 105 ಯೂನಿಟ್ ಆಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ‘ಬಂ’ ಅರ್ಥವ್ಯವಸ್ಥೆಯಲ್ಲಿ ಒಟ್ಟು ಬಳಕೆ ಬೇಡಿಕೆಯು 70 ಆಗಿರುತ್ತದೆ (ಮೇಲ್ತುದಿಯ 60ರ ಅರ್ಧದಷ್ಟು, ಅಂದರೆ 30 + 40 ಕಾರ್ಮಿಕರದ್ದು); ಮತ್ತು, ಹೂಡಿಕೆಯ 20 ಯೂನಿಟ್‌ ಅನ್ನೂ ಒಳಗೊಂಡಂತೆ ಒಟ್ಟು ಬೇಡಿಕೆಯು 90 ಯೂನಿಟ್ ಆಗುತ್ತದೆ. ಈ ಅಂಶವನ್ನು ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಎರಡೂ ವ್ಯವಸ್ಥೆಗಳಲ್ಲಿ ಪೂರ್ಣ ಸಾಮರ್ಥ್ಯದ 100 ಯೂನಿಟನ್ನು ಉತ್ಪಾದಿಸಿದರೆ, ಆಗ ‘ಸ’ ಅರ್ಥವ್ಯವಸ್ಥೆಯಲ್ಲಿ 5 ಯೂನಿಟ್‌ನಷ್ಟು ಅಧಿಕ (ಅಂದರೆ, 105 ಯೂನಿಟ್) ಬೇಡಿಕೆ ಇರುತ್ತದೆ, ಮತ್ತು ‘ಬಂ’ ಅರ್ಥವ್ಯವಸ್ಥೆಯಲ್ಲಿ ಬೇಡಿಕೆಯಲ್ಲಿ 5 ಯೂನಿಟ್‌ನಷ್ಟು ಕೊರತೆ  (ಅಂದರೆ, 95 ಯೂನಿಟ್) ಇರುತ್ತದೆ.

ಸಮಾಜವಾದಿ ಅರ್ಥವ್ಯವಸ್ಥೆಗಳಲ್ಲಿ ಕಾಣಬರುತ್ತಿದ್ದ ಸರತಿಯ ಸಾಲುಗಳು ಆ ವ್ಯವಸ್ಥೆಯ ಅಸಮರ್ಥತೆಗಳಿಂದ ಉಂಟಾದದ್ದಲ್ಲ. ಅದಕ್ಕೆ ವ್ಯತಿರಿಕ್ತವಾಗಿ, ಆದಾಯ ವಿತರಣೆಯಲ್ಲಿನ ಅಸಮಾನತೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ವ್ಯವಸ್ಥೆಯ ಕಾಳಜಿ ವಹಿಸಿದ್ದರಿಂದಾಗಿ. ಅಸಮಾನತೆಯನ್ನು ಕಡಿಮೆ ಮಾಡುವ ಉದ್ದೇಶವನ್ನು ಎರಡು ವಿಭಿನ್ನ ರೀತಿಗಳಲ್ಲಿ ಸಾಧಿಸಿತು: ಮೊದಲನೆಯದು, ವಿತರಣೆಯ ಮೂಲ ಮಟ್ಟವನ್ನು ತುಲನಾತ್ಮಕವಾಗಿ ಹೆಚ್ಚು ಸಮಾನವಾಗಿರಿಸುವ ಮೂಲಕ; ಎರಡನೆಯದು, ಉದ್ಭವಿಸಿದ ಅಧಿಕ ಬೇಡಿಕೆಯ ನಿವಾರಣೆಯು ಬೆಲೆ ಏರಿಕೆಯ ರೂಪವನ್ನು ಪಡೆಯದಂತೆ (ಹಾಗೆ ಪಡೆದರೆ ಅದು ತಿರೋಗಾಮಿ ಕ್ರಮವಾಗುತ್ತಿತ್ತು) ನಿರ್ದಿಷ್ಟಪಡಿಸಿದ ಬೆಲೆಗಳ ಪಡಿತರದ ರೂಪವನ್ನು ಪಡೆಯಿತು. ಈ ಪಡಿತರದ ಪರಿಣಾಮವಾಗಿ ಸರತಿಯ ಸಾಲುಗಳಿದ್ದವು.

ಹಾಗಾಗಿ, ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲಿ ಬೇಡಿಕೆಯ ಕೊರತೆಯಿಂದಾಗಿ ಪೂರ್ಣ ಸಾಮರ್ಥ್ಯ ಮಟ್ಟದ ಉತ್ಪಾದನೆ ಆಗುವುದೇ ಇಲ್ಲ. ಬದಲಾಗಿ, ಅದು ತನ್ನ ಪೂರ್ಣ ಉತ್ಪಾದನಾ ಸಾಮರ್ಥ್ಯದ (100 ಯೂನಿಟ್) ಕೇವಲ 66 2/3 ಭಾಗವನ್ನು ಮಾತ್ರ ಉತ್ಪಾದಿಸುತ್ತದೆ. ಏಕೆಂದರೆ, ಈ ಉತ್ಪಾದನೆಯಲ್ಲಿ ಮತ್ತು ಅದೇ ಹಂಚಿಕೆಯ ವಿಧಾನದಲ್ಲಿ, ಬಂಡವಾಳಗಾರರು 40 ಮತ್ತು ಕಾರ್ಮಿಕರು 26 2/3 ಭಾಗವನ್ನು ಹೊಂದಿರುತ್ತಾರೆ. ಈ ಮಟ್ಟದ ಉತ್ಪಾದನೆಯಿಂದಾಗಿ ಒಟ್ಟು ಬಳಕೆಯು 46 2/3 ಆಗುತ್ತದೆ. ಇದು ಹೂಡಿಕೆಯ 20 ಯೂನಿಟ್‌ನೊಂದಿಗೆ ಉತ್ಪಾದಿಸಿದ ಒಟ್ಟು 66 2/3 ಕ್ಕೆ ನಿಖರವಾಗಿ ಸಮವಾಗಿರುತ್ತದೆ. ಆದ್ದರಿಂದ ನೈಜ ಉದ್ಯೋಗವು, ಪೂರ್ಣ ಸಾಮರ್ಥ್ಯದ ಮಟ್ಟದಲ್ಲಿ ಉತ್ಪಾದನೆ ಎಷ್ಟಿರುತ್ತಿತ್ತು ಎಂಬುದರ ಮೂರನೇ ಎರಡರಷ್ಟು ಮಾತ್ರ ಇರುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಬೃಹತ್ ಮಟ್ಟದ ನಿರುದ್ಯೋಗ ಇರುತ್ತದೆ. ಈ ರೀತಿಯ ಅರ್ಥವ್ಯವಸ್ಥೆಯಲ್ಲಿ ಯಾವುದೇ ಕೊರತೆಯಾಗಲಿ ಅಥವಾ ಅಧಿಕ ಬೇಡಿಕೆಯಾಗಲಿ ಉದ್ಭವವಾಗುವ ಪ್ರಶ್ನೆಯೇ ಇಲ್ಲವಾದ್ದರಿಂದ, ಗ್ರಾಹಕರು ಯಾವುದೇ ಸೂಪರ್ ಮಾರ್ಕೆಟ್‌ಗೆ ಹೋಗಿ ತಮಗಿಷ್ಟವಾದ ಸರಕು ಸಾಮಗ್ರಿಗಳನ್ನು ಖರೀದಿಸಬಹುದು. ಹಾಗಾಗಿ, ಸರಕು ಸಾಮಗ್ರಿಗಳನ್ನು ಕೊಳ್ಳಲು ಸರತಿಯ ಸಾಲುಗಳ ಪ್ರಶ್ನೆಯೇ ಉದ್ಭವಿಸುವುದಿಲ್ಲ.

ಇದನ್ನು ಓದಿ: ನವ-ಉದಾರವಾದವೂ ಮತ್ತು ಉಗ್ರ ಬಲ ಪಂಥವೂ ಹಾಗೂ ಕಾರ್ಪೊರೇಟ್-ಹಿಂದುತ್ವ ಮೈತ್ರಿಯೂ

ಈ ಪರಿಸ್ಥಿತಿಗೆ ವ್ಯತಿರಿಕ್ತವಾಗಿ ಸಮಾಜವಾದಿ ಅರ್ಥವ್ಯವಸ್ಥೆಯಲ್ಲಿ, ಪೂರ್ಣ ಸಾಮರ್ಥ್ಯ ಮಟ್ಟದ ಉತ್ಪಾದನೆಯು 100 ಯೂನಿಟ್ ಇದ್ದು, ಆ 100 ಯೂನಿಟ್ ಉತ್ಪಾದನೆಯು 5 ಯೂನಿಟ್‌ನಷ್ಟು ಅಧಿಕ ಬೇಡಿಕೆಯನ್ನು ಉಂಟುಮಾಡುತ್ತದೆ. ಪ್ರಶ್ನೆಯೆಂದರೆ, ಅಂತಹ ಅರ್ಥವ್ಯವಸ್ಥೆಯು 5 ಯೂನಿಟ್ ಅಧಿಕ ಬೇಡಿಕೆಯನ್ನು ಹೇಗೆ ನಿಭಾಯಿಸುತ್ತದೆ? ಆ ವ್ಯವಸ್ಥೆಯು ಅದನ್ನು ನಿಭಾಯಿಸುವ ಸುಲಭ ಮಾರ್ಗವೆಂದರೆ, ಕೆಲವು ಗ್ರಾಹಕರ ನೈಜ ಆದಾಯವು 5ರಷ್ಟು ಕೊಳ್ಳುವ ಶಕ್ತಿಯನ್ನು ಕಡಿಮೆ ಮಾಡುವಷ್ಟು ಹಿಂಡಿಹಿಪ್ಪೆಯಾಗುವವರೆಗೂ ಬೆಲೆಗಳನ್ನು ಹೆಚ್ಚಲು ಬಿಡುವುದು. ಬಳಕೆಯ ಮಟ್ಟವನ್ನು ಕಾಪಾಡಿಕೊಳ್ಳುವ ಉದ್ದೇಶಕ್ಕಾಗಿ ಕೈಯಲ್ಲಿ ಕಡಿಮೆ ನಗದು ಹೊಂದಿರುವ ಕಾರ್ಮಿಕರನ್ನು ಹಿಂಡುವುದೇ ಸಾಮಾನ್ಯ. ಆಗ 5 ಯೂನಿಟ್ ಅಧಿಕ ಬೇಡಿಕೆಯನ್ನು ಕಾರ್ಮಿಕರ ವೆಚ್ಚದಲ್ಲಿ ಮಾಡಿದಂತಾಗುತ್ತದೆ. ಆದರೆ, ಈ ಪರಿಸ್ಥಿತಿಗೆ ಹೋಲಿಸಿದರೆ, ಪ್ರತಿಯೊಬ್ಬರ ಬಳಕೆಯನ್ನೂ ಸೂಕ್ತ ಅನುಪಾತದಲ್ಲಿ ಕಡಿತ ಮಾಡುವುದೇ ಒಂದು ಉತ್ತಮ ಮಾರ್ಗವಾಗುತ್ತದೆ. ಸಮಾಜವಾದಿ ಅರ್ಥವ್ಯವಸ್ಥೆಗಳು ಮಾಡಿದ್ದು ಇದನ್ನೇ. ಪಡಿತರವನ್ನು ಸ್ಥಾಪಿಸುವ ಮೂಲಕ ಹಳೆಯ ಮಟ್ಟದಲ್ಲೇ ಬೆಲೆಗಳನ್ನು ಕಾಯ್ದುಕೊಳ್ಳುವ ಏರ್ಪಾಟು ಮಾಡಿದವು. ಹಾಗಾಗಿ, 5 ಯೂನಿಟ್‌ನಷ್ಟು ಬೇಡಿಕೆಯ ಕಡಿತವನ್ನು ಸಮಾನವಾಗಿ ಹಂಚಲಾಯಿತು. ಈ ರೀತಿಯ ಪಡಿತರದಿಂದಾಗಿ ಜನರು ತಮ್ಮ ಖರೀದಿಗಾಗಿ ಸರದಿಯ ಸಾಲಿನಲ್ಲಿ ನಿಲ್ಲಬೇಕಾಯಿತು.

ಸಮಾಜವಾದಿ ಅರ್ಥವ್ಯವಸ್ಥೆಗಳಲ್ಲಿ ಕಾಣಬರುತ್ತಿದ್ದ ಸರತಿಯ ಸಾಲುಗಳು ಆ ವ್ಯವಸ್ಥೆಯ ಅಸಮರ್ಥತೆಗಳಿಂದ ಉಂಟಾದದ್ದಲ್ಲ. ಅದಕ್ಕೆ ವ್ಯತಿರಿಕ್ತವಾಗಿ, ಆದಾಯ ವಿತರಣೆಯಲ್ಲಿನ ಅಸಮಾನತೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ವ್ಯವಸ್ಥೆಯ ಕಾಳಜಿ ವಹಿಸಿದ್ದರಿಂದಾಗಿ. ಅಸಮಾನತೆಯನ್ನು ಕಡಿಮೆ ಮಾಡುವ ಉದ್ದೇಶವನ್ನು ಎರಡು ವಿಭಿನ್ನ ರೀತಿಗಳಲ್ಲಿ ಸಾಧಿಸಿತು: ಮೊದಲನೆಯದು, ವಿತರಣೆಯ ಮೂಲ ಮಟ್ಟವನ್ನು ತುಲನಾತ್ಮಕವಾಗಿ ಹೆಚ್ಚು ಸಮಾನವಾಗಿರಿಸುವ ಮೂಲಕ; ಎರಡನೆಯದು, ಉದ್ಭವಿಸಿದ ಅಧಿಕ ಬೇಡಿಕೆಯ ನಿವಾರಣೆಯು ಬೆಲೆ ಏರಿಕೆಯ ರೂಪವನ್ನು ಪಡೆಯದಂತೆ (ಹಾಗೆ ಪಡೆದರೆ ಅದು ತಿರೋಗಾಮಿ ಕ್ರಮವಾಗುತ್ತಿತ್ತು) ನಿರ್ದಿಷ್ಟಪಡಿಸಿದ ಬೆಲೆಗಳ ಪಡಿತರದ ರೂಪವನ್ನು ಪಡೆಯಿತು. ಈ ಪಡಿತರದ ಪರಿಣಾಮವಾಗಿ ಸರತಿಯ ಸಾಲುಗಳಿದ್ದವು.

ಸಮಾಜವಾದಿ ಅರ್ಥವ್ಯವಸ್ಥೆಯಲ್ಲಿ ಇಂತಹ ಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ಅನೇಕ ಸಮಸ್ಯೆಗಳು ತಲೆದೋರಿದವು. ಉದಾಹರಣೆಗೆ, ಕೆಲವು ವಿಶೇಷ ಸವಲತ್ತುಗಳನ್ನು ಹೊಂದಿದ್ದ ಅಧಿಕಾರಿಗಳು ಮತ್ತು ಪಕ್ಷದ ಕಾರ್ಯಕರ್ತರು ಕೆಲವು ಅಪರೂಪದ ವಸ್ತುಗಳನ್ನು/ಸೇವೆಗಳನ್ನು ಪಡೆಯುತ್ತಿದ್ದರು. “ಮೊದಲು ಬಂದವರಿಗೆ ಮೊದಲು ಸೇವೆ” ನಿಯಮವನ್ನು ಹಾಗೂ ಪ್ರತಿಯೊಬ್ಬರಿಗೂ ಸಮಾನ ಪಡಿತರದ ತತ್ವವನ್ನು ಉಲ್ಲಂಘಿಸುತ್ತಿದ್ದರು. ಆದರೂ, ಈ ಕೆಲವು ನ್ಯೂನತೆಗಳು ಸಮಾಜವಾದಿ ಅರ್ಥವ್ಯವಸ್ಥೆಯಲ್ಲಿ ಸರಕು ಸಾಮಗ್ರಿಗಳ ಕೊರತೆಯು ಆದಾಯದ ಹೆಚ್ಚು ಸಮತ್ವಪೂರ್ಣ ಹಂಚಿಕೆಯ ಪರಿಣಾಮವಾಗಿ ಕಂಡುಬಂದವು ಎಂಬ ಮೂಲಭೂತ ಅಂಶವನ್ನು ನಿರಾಕರಿಸಲಾರವು. ಅಂತೆಯೇ, ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲಿ ಸರಕು ಸಾಮಗ್ರಿಗಳು ಹೇರಳವಾಗಿ ಕಂಡುಬರುವ ಒಂದು ಕಾರಣವೆಂದರೆ, ಈ ಸರಕುಗಳನ್ನು ಕೊಳ್ಳಲು ಅಪಾರ ಸಂಖ್ಯೆಯ ದುಡಿಯುವ ಜನರ ಕೈಯಲ್ಲಿ ಹಣವಿಲ್ಲದಿರುವುದು. ಪರಿಣಾಮವಾಗಿ, ನಿರುದ್ಯೋಗ ಸಮಸ್ಯೆಯು ಈ ವ್ಯವಸ್ಥೆಯನ್ನು ನಿರಂತರವಾಗಿ ಕಾಡುತ್ತಲೇ ಇರುತ್ತದೆ.

ತನ್ನ ದೇಶದಲ್ಲಿ ಅಸ್ತಿತ್ವದಲ್ಲಿದ್ದ ಸಮಾಜವಾದಿ ವ್ಯವಸ್ಥೆಯ ಟೀಕಾಕಾರರಾದ ಪ್ರಸಿದ್ಧ ಹಂಗೇರಿಯನ್ ಅರ್ಥಶಾಸ್ತ್ರಜ್ಞ ಯಾನೋಸ್ ಕೊರ್ನೈ ಹೀಗೆ ಹೇಳಿದ್ದರು: “ರೂಢ ಬಂಡವಾಳಶಾಹಿಯು ಬೇಡಿಕೆ-ನಿರ್ಬಂಧಿತವಾಗಿದೆ, ಆದರೆ ರೂಢ ಸಮಾಜವಾದವು ಸಂಪನ್ಮೂಲ-ನಿರ್ಬಂಧಿತವಾಗಿದೆ”. ಅಂದರೆ, ಬಂಡವಾಳಶಾಹಿಯು ಲಭ್ಯವಿರುವ ಶ್ರಮಶಕ್ತಿಯೂ ಸೇರಿದಂತೆ ತನ್ನ ಎಲ್ಲಾ ಸಂಪನ್ಮೂಲಗಳನ್ನೂ ಸಂಪೂರ್ಣವಾಗಿ ಬಳಸಿಕೊಳ್ಳುತ್ತದೆ. ಈ ವಿದ್ಯಮಾನಕ್ಕೆ ಅವರು ನೀಡಿದ ಕಾರಣವೆಂದರೆ, ಸಮಾಜವಾದಿ ವ್ಯವಸ್ಥೆಯಲ್ಲಿ, ಸಂಸ್ಥೆಗಳಿಗೆ ಸರ್ಕಾರದ ಸಬ್ಸಿಡಿಗಳ ಭರವಸೆ ಇರುವುದರಿಂದ, ಅಂದರೆ “ಮೃದು-ಬಜೆಟ್ ನಿರ್ಬಂಧ”ವಿರುವುದರಿಂದ, ನಿರೀಕ್ಷಿತ ಪ್ರತಿಫಲದ ಬಗ್ಗೆ ತಲೆಕೆಡಿಸಿಕೊಳ್ಳದೆ ಅವರು ಯೋಜನೆಗಳಿಗೆ ಹೆಚ್ಚು ಹಣ ವ್ಯಯಿಸುತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಸಂಸ್ಥೆಗಳು “ಕಠಿಣ ಬಜೆಟ್ ನಿರ್ಬಂಧ”ವನ್ನು ಎದುರಿಸುತ್ತವೆ. ಅಂದರೆ, ಹೂಡಿಕೆ ಮಾಡುವಾಗ ಅವರು ಬಿಡಿ ಕಾಸನ್ನೂ ಲೆಕ್ಕ ಮಾಡುತ್ತಾರೆ.

ಬಂಡವಾಳಶಾಹಿಯು ಬೇಡಿಕೆ-ನಿರ್ಬಂಧಿತ ಮತ್ತು ಸಮಾಜವಾದವು ಸಂಪನ್ಮೂಲ-ನಿರ್ಬಂಧಿತ ಎಂಬುದಕ್ಕೆ ಒಂದು ಅಧಿಕ ಮತ್ತು ಪ್ರಬಲ ಕಾರಣವಿದೆ. ಒತ್ತಿ ಹೇಳಬೇಕಾದ ಈ ಕಾರಣವು ಯಾವುದೆಂದರೆ, ಸಮಾಜವಾದದ ಅಡಿಯಲ್ಲಿ ಆದಾಯಗಳ ವಿತರಣೆಯಲ್ಲಿರುವ ಹೆಚ್ಚಿನ ಸಮಾನತೆ. ಇದನ್ನೇ ವಿಭಿನ್ನವಾಗಿ ಹೇಳುವುದಾದರೆ, ಯಾವುದೇ ಅರ್ಥವ್ಯವಸ್ಥೆಯಲ್ಲಿ (ವಿದೇಶಿ ವ್ಯಾಪಾರವನ್ನು ಗಣನೆಗೆ ತೆಗೆದುಕೊಳ್ಳದೆ) ಒಟ್ಟು ಬೇಡಿಕೆಯ ಮಟ್ಟವು ಎರಡು ಅಂಶಗಳನ್ನು ಒಳಗೊಂಡಿರುತ್ತದೆ. ಹೂಡಿಕೆಯ ಮಟ್ಟ ಮತ್ತು ಆದಾಯದ ಬಳಕೆಯ ಮಟ್ಟ. ಬಂಡವಾಳಶಾಹಿ ಮತ್ತು ಸಮಾಜವಾದದ ನಡುವಿನ ವ್ಯತ್ಯಾಸದ ಬಗ್ಗೆ ಕೊರ್ನೈ ನೀಡಿದ ವಿವರಣೆಯು ಮೊದಲ ಅಂಶವನ್ನು ಮಾತ್ರ ಪರಿಗಣಿಸಿದೆ. ಎರಡನೆಯದಕ್ಕೆ ಸಂಬಂಧಿಸಿದಂತೆ ಒಂದು ಪ್ರಮುಖ ವ್ಯತ್ಯಾಸವಿದೆ. ಸಮಾಜವಾದಿ ವ್ಯವಸ್ಥೆಯಲ್ಲಿ ಆದಾಯಗಳ ಹಂಚಿಕೆಯಲ್ಲಿ ಹೆಚ್ಚಿನ ಸಮಾನತೆ ಇರುವುದರಿಂದ ಸರಾಸರಿ ಬಳಕೆ-ಆದಾಯ ಅನುಪಾತವು ಹೆಚ್ಚು ಇರುತ್ತದೆ. ಆದ್ದರಿಂದ, ಬೇಡಿಕೆಯೂ ಹೆಚ್ಚಿನ ಮಟ್ಟದಲ್ಲೇ ಇರುತ್ತದೆ. ಸಮಾಜವಾದಿ ಅರ್ಥವ್ಯವಸ್ಥೆಯ ಈ ಪ್ರಮುಖ ಅಂಶವನ್ನೇ ಕೊರ್ನೈ ಬಿಟ್ಟುಬಿಟ್ಟಿದ್ದರು.

ಸೋವಿಯತ್ ಒಕ್ಕೂಟ ಮತ್ತು ಪೂರ್ವ ಯೂರೋಪಿನಲ್ಲಿ ಸಮಾಜವಾದಿ ವ್ಯವಸ್ಥೆಯು ಕುಸಿದಿರುವಾಗ, ಈಗ ಇದೆಲ್ಲವನ್ನೂ ಹೇಳುವುದರಲ್ಲಿ ಅರ್ಥವೇನಿದೆ? ಎಂದು ಕೇಳಬಹುದು. ಭಾಗಶಃ ಉತ್ತರವೆಂದರೆ, ಅವರ ಎಲ್ಲಾ ಇತಿ-ಮಿತಿಗಳ ಹೊರತಾಗಿಯೂ, ಸಮಾಜವಾದಿ ಅರ್ಥವ್ಯವಸ್ಥೆಗಳು ಪೂರ್ಣ ಉದ್ಯೋಗದ ಗುರಿಯನ್ನು ಸಾಧಿಸಿದ್ದವು. ಕಳೆದ ಇನ್ನೂರು ವರ್ಷಗಳಲ್ಲಿ ಈ ಸಾಧನೆಯನ್ನು ಯಾರೂ ಮಾಡಿರಲಿಲ್ಲ ಎಂಬುದನ್ನು ನಮಗೆ ನಾವೇ ಹೇಳಿಕೊಳ್ಳಬಹುದು. ಇದು ಹೆಮ್ಮೆಯ ವಿಷಯವೇ. ಏಕೆಂದರೆ, ಬಂಡವಾಳಶಾಹಿಯು ಸ್ವಭಾವತಃ ಪೂರ್ಣ ಉದ್ಯೋಗವನ್ನು ಸಾಧಿಸಲು ಸಾಧ್ಯವಿಲ್ಲ. ಆದರೆ, ಸಮಾಜವಾದಿ ವ್ಯವಸ್ಥೆಯು ಒಂದು ವಿಭಿನ್ನ ಚಲನಶೀಲತೆಯನ್ನು ಹೊಂದಿದ್ದರಿಂದಲೇ ಪೂರ್ಣ ಉದ್ಯೋಗದ ಗುರಿಯನ್ನು ಸಾಧಿಸುವ ಅವಕಾಶವನ್ನು ಮಾಡಿಕೊಟ್ಟಿತು. ಅಂತಹ ವ್ಯವಸ್ಥೆಯು ಅಸ್ತಿತ್ವದಲ್ಲಿತ್ತು ಎಂಬುದನ್ನು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಬೇಕು.

ಉತ್ತರದ ಇನ್ನೊಂದು ಭಾಗವೆಂದರೆ, ಭಾರತದಂತಹ ಮೂರನೇ ಜಗತ್ತಿನ ದೇಶಗಳಲ್ಲಿ ನಿಯಂತ್ರಣ ನೀತಿಗಳ ಮತ್ತು ನವ-ಉದಾರ ಆಡಳಿತಗಳ ನಡುವಿನ ತೀಕ್ಷ್ಣ ವ್ಯತ್ಯಾಸವು ಬಂಡವಾಳಶಾಹಿ ಮತ್ತು ಸಮಾಜವಾದದ ನಡುವಿನ ವ್ಯತ್ಯಾಸಗಳಿಗೆ ಸುಮಾರಾಗಿ ಹತ್ತಿರವೇ. ಈ ದೇಶಗಳು ಪೂರ್ಣ ಉದ್ಯೋಗದಂತಹ ಏನನ್ನೂ ಸಾಧಿಸಲಿಲ್ಲ, ನಿಜ. ಆದರೆ, ನಿಯಂತ್ರಣ ನೀತಿಗಳ ಆಡಳಿತಗಳು ಆದಾಯ ವಿತರಣೆಯಲ್ಲಿ ಹೆಚ್ಚಿನ ಸಮಾನತೆಯನ್ನು ಸಾಧಿಸಿದ್ದವು. ಈ ಕಾರಣದಿಂದಾಗಿಯೇ ಈ ದೇಶಗಳು ಅಧಿಕ ಬೇಡಿಕೆಯ ಸಮಸ್ಯೆಗಳನ್ನು ಎದುರಿಸಿದವು ಮತ್ತು ವಿವಿಧ ಸರಕುಗಳ ಪಡಿತರವನ್ನು ಜಾರಿಮಾಡಿದವು. ಇದೇ ದೇಶಗಳು ನವ-ಉದಾರ ನೀತಿಗಳನ್ನು ಅಳವಡಿಸಿಕೊಂಡ ನಂತರ, ಆದಾಯಗಳ ಅಸಮಾನತೆಯಲ್ಲಿ ಭಾರಿ ಹೆಚ್ಚಳವನ್ನು ಕಂಡಿವೆ ಮತ್ತು ದುಡಿಯುವ ಜನರ ಕೈಯಲ್ಲಿ ಕೊಳ್ಳುವ ಶಕ್ತಿಯು ಕುಂದಿದೆ. ಹಾಗಾಗಿ, ಸರಕು ಸಾಮಗ್ರಿಗಳು ಸೂಪರ್ ಮಾರ್ಕೆಟ್‌ಗಳಲ್ಲಿ ಹೇರಳವಾಗಿ ಕಂಡುಬರುವ ಅಂಶವು ಒಂದು ಸಂಪೂರ್ಣ ತಪ್ಪು ಅಭಿಪ್ರಾಯವನ್ನು ಮೂಡಿಸುತ್ತದೆ.

ಉದಾಹರಣೆಗೆ, ಚಾನ್ಸಲ್ ಮತ್ತು ಪಿಕೆಟ್ಟಿ ಅವರ ಪ್ರಕಾರ, “ಉದಾರೀಕರಣ” ಆರಂಭಗೊಳ್ಳುವ ಮೊದಲು, 1982ರಲ್ಲಿ ರಾಷ್ಟ್ರೀಯ ಆದಾಯದಲ್ಲಿ ಶೇ.6ರಷ್ಟು ಪಾಲು ಹೊಂದಿದ್ದ ಜನಸಂಖ್ಯೆಯ ಮೇಲ್ತುದಿಯ ಶೇ. 1 ರಷ್ಟು ಮಂದಿಯು 2013ರ ವೇಳೆಗೆ ರಾಷ್ಟ್ರೀಯ ಆದಾಯದಲ್ಲಿ ತಮ್ಮ ಪಾಲನ್ನು ಶೇ. 22ಕ್ಕೆ ಏರಿಸಿಕೊಂಡಿದ್ದರು. ಇದು ಸುಮಾರು ಒಂದು ಶತಮಾನದಲ್ಲೇ ಅತಿ ಹೆಚ್ಚಿನ ಏರಿಕೆ. ಹಾಗಾಗಿ, ನವ-ಉದಾರವಾದಿ ಆಡಳಿತದಲ್ಲಿ ಹಣದುಬ್ಬರವು ಹೆಚ್ಚುವರಿ ಬೇಡಿಕೆಯಿಂದ ಉಂಟಾದದ್ದಲ್ಲ; ಬಂಡವಾಳಶಾಹಿಗಳ ಸಂಪತ್ತು ಅಥವಾ ಅವರ ಲಾಭಗಳ ಮೇಲೆ ತೆರಿಗೆ ವಿಧಿಸುವುದರ ಬದಲು ಸಾಮಾನ್ಯ ಬಳಕೆಯ ಸರಕುಗಳ ಮೇಲೆ ತೆರಿಗೆಗಳನ್ನು ಹೆಚ್ಚಿಸುವ ಮೂಲಕ ಸರ್ಕಾರವು ಹಣದುಬ್ಬರವನ್ನು ನಿರ್ವಹಿಸಿದೆ.

ಈ ಹಣದುಬ್ಬರವನ್ನೂ ಸಹ ವಿತ್ತೀಯ ಮಿತವ್ಯಯವನ್ನು ಹೇರುವ ಮೂಲಕ ನಿಯಂತ್ರಿಸುವ ಪ್ರಯತ್ನವು (ಹೆಚ್ಚುವರಿ ಬೇಡಿಕೆಯೇ ಅದಕ್ಕೆ ಕಾರಣ ಎಂಬಂತೆ), ಹಣದುಬ್ಬರವನ್ನು ಕಡಿಮೆ ಮಾಡದೆ ನಿರುದ್ಯೋಗ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುತ್ತದೆ. ಭಾರತ ಸರ್ಕಾರವು ಈಗ ಅಂತಹ ಒಂದು ಬುದ್ಧಿಹೀನ ಪ್ರಕ್ರಿಯೆಯಲ್ಲಿ ತೊಡಗಿದೆ.

ಅನು: ಕೆ.ಎಂ. ನಾಗರಾಜ್

Donate Janashakthi Media

Leave a Reply

Your email address will not be published. Required fields are marked *