ಸೆಪ್ಟಂಬರ್ 5 ರ ಕಿಸಾನ್-ಮಜ್ದೂರ್ ಮಹಾಪಂಚಾಯತ್
ಅಶೋಕ ಧವಳೆ
ಸೆಪ್ಟಂಬರ್ 5ರಂದು ಉತ್ತರಪ್ರದೇಶದ ಮುಝಫ್ಪರ್ನಗರದಲ್ಲಿ ನಡೆದ ಬೃಹತ್ ಕಿಸಾನ್-ಮಜ್ದೂರ್ ಮಹಾಪಂಚಾಯತ್ ಒಂದು ಬೃಹತ್ ಜನಪ್ರವಾಹವಾಗಿತ್ತು. ಭಾರತದ ಇತಿಹಾಸದಲ್ಲೇ ಮತ್ತು ಜಗತ್ತಿನ ಇತಿಹಾಸದಲ್ಲೇ ಅತ್ಯಂತ ದೊಡ್ಡ ರೈತರ ರ್ಯಾಲಿ ಎನ್ನಬಹುದಾದ ಇಲ್ಲಿಂದ 10 ಲಕ್ಷ ರೈತರು ಮೋದಿ, ಯೋಗಿ, ಷಾಗಳ ನೇತೃತ್ವದ ಸರಕಾರಗಳಿಗೆ ಮತ್ತು ಅಂಬಾನಿಗಳು, ಅದಾನಿಗಳಂತಹ ಅವರ ಬಂಟ ಕಾರ್ಪೊರೇಟ್ಗಳಿಗೆ ಒಂದು ಸ್ಪಷ್ಟ ಸಂದೇಶವನ್ನು ತಲುಪಿಸಿದರು ಎನ್ನುತ್ತಾರೆ ಈ ಐತಿಹಾಸಿಕ ರ್ಯಾಲಿಯ ಮಹತ್ವವನ್ನು ವಿಶ್ಲೇಷಿಸುತ್ತ ಅಖಿಲ ಭಾರತ ಕಿಸಾನ್ ಸಭಾದ ಅಧ್ಯಕ್ಷರು.
“ಕೃಷಿಯಲ್ಲಿ ಏನಾದರೂ ತಪ್ಪಾದರೆ, ಬೇರೆ ಯಾವುದೂ ಸರಿಯಾಗುವ ಅವಕಾಶವಿಲ್ಲ” ಎಂದು ಪ್ರಖ್ಯಾತ ಕೃಷಿ ವಿಜ್ಞಾನಿ ಡಾ.ಎಂ.ಎಸ್.ಸ್ವಾಮಿನಾಥನ್ ಒಂದೊಮ್ಮೆ ಹೇಳಿದ್ದರು. ಸೆಪ್ಟಂಬರ್ 5ರಂದು ಉತ್ತರಪ್ರದೇಶದ ಮುಝಫ್ಫರ್ನಗರದಲ್ಲಿ 10 ಲಕ್ಷ ಜನ ಭಾಗವಹಿಸಿದ್ದ ಸಂಯುಕ್ತ ಕಿಸಾನ್ ಮೋರ್ಚಾದ ನೇತೃತ್ವದ ‘ಕಿಸಾನ್-ಮಜ್ದೂರ್ ಮಹಾಪಂಚಾಯತ್’ ಟೈಮ್ಸ್ ಆಫ್ ಇಂಡಿಯಾದಂತಹ ಆಳುವವರ ಪರವಾದ ಪತ್ರಿಕೆ ಕೂಡ ಇದನ್ನು ನೆನಪಿಸಿಕೊಳ್ಳುವಂತೆ ಮಾಡಿದೆ. ಸೆಪ್ಟಂಬರ್ 7ರಂದು ಟೈಮ್ಸ್ ಆಫ್ ಇಂಡಿಯಾ ತನ್ನ ಸಂಪಾದಕೀಯ ಪುಟದ ‘ಇಂದಿನ ವಿಚಾರ’ದಲ್ಲಿ ಇದನ್ನು ನೆನಪಿಸಿಕೊಂಡಿತು. ಸೆಪ್ಟಂಬರ್ 5 ಮತ್ತು 6 ರಂದು ಇಲೆಕ್ಟ್ರಾನಿಕ್ ಮತ್ತು ಮುದ್ರಣ ಮಾಧ್ಯಮಗಳು ರೈತರ ಈ ಅಭೂತಪೂರ್ವ ಸಮಾವೇಶವನ್ನು ಒಬ್ಬರ ಮೇಲೆ ಒಬ್ಬರು ಬಿದ್ದು ವರದಿ ಮಾಡಿದರು, ಸಂಪಾದಕೀಯಗಳನ್ನು ಬರೆದರು.
ನಿಜವಾಗಿಯೂ ಇದೊಂದು ಬೃಹತ್ ಜನಪ್ರವಾಹವಾಗಿತ್ತು. ಬಹುಶಃ ಇದು ಭಾರತದ ಇತಿಹಾಸದಲ್ಲೇ, ಮತ್ತು ಜಗತ್ತಿನ ಇತಿಹಾಸದಲ್ಲೇ ಅತ್ಯಂತ ದೊಡ್ಡ ರೈತರ ರ್ಯಾಲಿ.
ಇಡೀ ಮುಝಫ್ಫರ್ನಗರವೇ ರ್ಯಾಲಿಯ ಮೈದಾನವಾಗಿ ಬಿಟ್ಟಿತ್ತು. ಜಿಐಸಿ ಮೈದಾನ ಒಂದು ಲಕ್ಷ ಜನ ಸೇರುವಷ್ಟು ದೊಡ್ಡದು. ಆದರೆ ಸೆಪ್ಟಂಬರ್ 5 ರಂದು ಈ ಮೈದಾನ ತುಂಬಿಸಿಕೊಳ್ಳಲು ಸಾಧ್ಯವಾದದ್ದು ಬೆಳಿಗ್ಗೆಯಿಂದಲೇ ಬಂದು ಸೇರಲಾರಂಭಿಸಿದ ಜನಸಾಗರದ ಹತ್ತನೇ ಒಂದು ಭಾಗವನ್ನಷ್ಟೇ. ನಂತರ ಬಂದವರೆಲ್ಲರೂ ನಗರದ ಮುಖ್ಯ ರಸ್ತೆಗಳಲ್ಲಿ ತುಂಬಿಕೊಂಡರು. ಹಲವು ಕಿಲೋಮೀಟರುಗಳ ಉದ್ದಕ್ಕೂ ಹಾಕಿದ್ದ ಲೌಡ್ ಸ್ಪೀಕರುಗಳಲ್ಲಿ ಅವರು ಭಾಷಣಗಳಿಗೆ ಕಿವಿಗೊಟ್ಟರು. ಇಡೀ ನಗರವೇ ರ್ಯಾಲಿಯ ಮೈದಾನವಾಗಿ ಬಿಟ್ಟಿತು. ಭಾಗವಹಿಸಲು ಬಂದ ರೈತರಿಗೆ ನೆರವಾಗಲು ನೂರಾರು ಲಂಗರ್(ಆಹಾರ ಪೂರೈಕೆ ವ್ಯವಸ್ಥೆ)ಗಳು ವೈದ್ಯಕೀಯ ಕ್ಯಾಂಪುಗಳನ್ನು ಕೂಡ ಏರ್ಪಡಿಸಲಾಗಿತ್ತು.
ಸ್ಪಷ್ಟ ಸಂದೇಶ
ಮಧ್ಯ್ಯಾಹ್ನದವರೆಗೂ ಜನಸಾಗರ ಹರಿದು ಬರುತ್ತಲೇ ಇತ್ತು, ಹಲವು ಪ್ರದೇಶಗಳ, ಹಲವು ಭಾಷೆಗಳ, ಧರ್ಮಗಳ, ಜಾತಿಗಳ ಜನರು ಒಟ್ಟುಗೂಡಿದರು, ಮೋದಿ, ಯೋಗಿ, ಷಾಗಳ ನೇತೃತ್ವದ ಸರಕಾರಗಳಿಗೆ ಮತ್ತು ಅಂಬಾನಿಗಳು, ಅದಾನಿಗಳಂತಹ ಅವರ ಬಂಟ ಕಾರ್ಪೊರೇಟ್ಗಳಿಗೆ ಒಂದು ಸ್ಪಷ್ಟ ಸಂದೇಶವನ್ನು ತಲುಪಿಸಿದರು.
ಈ ಕಿಸಾನ್-ಮಜ್ದೂರ್ ಮಹಾಪಂಚಾಯತ್ ಕಾರ್ಮಿಕರಿಂದ, ಕೃಷಿಕೂಲಿಕಾರರಿಂದ, ನೌಕರರಿಂದ, ಸಣ್ಣ ವ್ಯಾಪಾರಿಗಳು, ಮಹಿಳೆಯರು, ಯುವಜನರು, ವಿದ್ಯಾರ್ಥಿಗಳಿಂದ ಅಭೂತಪೂರ್ವ ಬೆಂಬಲವನ್ನು ಪಡೆಯಿತು. ರೈತ-ಕಾರ್ಮಿಕ ಐಕ್ಯತೆಯ ಘೋಷಣೆಗಳು, ರೈತ-ವಿರೋಧಿ, ಜನ-ವಿರೋಧಿ, ರಾಷ್ಟ್ರ-ವಿರೋಧಿ ಆರೆಸ್ಸೆಸ್-ಬಿಜೆಪಿ ಸರಕಾರದ ವಿರುದ್ಧ ಘೋಷಣೆಗಳು ರ್ಯಾಲಿಯುದ್ದಕ್ಕೂ ಕೇಳಬಂದವು.
ಉತ್ತರಪ್ರದೇಶ, ಉತ್ತರಾಖಂಡ, ಪಂಜಾಬ್, ಹರ್ಯಾಣ, ರಾಜಸ್ತಾನ, ಮಧ್ಯಪ್ರದೇಶ ಮತ್ತಿತರ ಹಲವು ರಾಜ್ಯಗಳಿಂದ ರೈತರು ಬಂದಿದ್ದರು, ಅದರಲ್ಲೂ ಯುವ ಮತ್ತು ಮಹಿಳಾ ರೈತರು ದೊಡ್ಡ ಸಂಖ್ಯೆಯಲ್ಲಿದ್ದರು. ಸಾವಿರಾರು ರಾಷ್ಟ್ರಧ್ವಜಗಳು ಮತ್ತು ಆವರವರ ಸಂಘಟನೆಗಳ ಬಾವುಟಗಳನ್ನು ಹಿಡಿದು ಅವರು ಬಂದಿದ್ದರು. ಅದೊಂದು ವರ್ಣಮಯ ದೃಶ್ಯ. ಹಸಿರು, ಕೆಂಪು, ಹಳದಿ, ಬಿಳಿ, ನೀಲಿ ಬಾವುಟಗಳು- ಕೇಸರಿ ಬಣ್ಣವೊಂದು ಬಿಟ್ಟು ಬೇರೆಲ್ಲ ಬಣ್ಣಗಳೂ ಮೇಳವಿಸಿದಂತಿತ್ತು.
ರಾಜಕೀಯ ಮಹತ್ವ-ಐದು ಮುಖ್ಯ ಕಾರಣಗಳು
ಈ ಮಹಾರ್ಯಾಲಿ ಭಾರತದ ರಾಜಕೀಯ ರಂಗದಲ್ಲಿ ಒಂದು ತಿರುಗು ಬಿಂದು ಆಗುವ ಸಾಧ್ಯತೆಗಳನ್ನು ಹೊಂದಿದೆ. ದೇಶಕ್ಕಾಗಿ ನಡೆದಿರುವ ಸಮರ ಪಂಜಾಬ್, ಹರ್ಯಾಣದಿಂದ ಈಗ ನೇರವಾಗಿ ಹಿಂದಿ ಭಾಷಿಕ ಹೃದಯಭಾಗಕ್ಕೆ ಚಲಿಸಿದಂತೆ ಕಾಣುತ್ತಿದೆ ಎಂಬುದನ್ನು ಇದು ತೋರಿಸಿದೆ. ಐದು ಮುಖ್ಯ ಕಾರಣಗಳಿಗಾಗಿ ಇದು ಮಹತ್ವದ್ದಾಗಿದೆ.
ಒಂದು, ಸಂಯುಕ್ತ ಕಿಸಾನ್ ಮೋರ್ಚಾದ ರಾಷ್ಟ್ರೀಯ ಸಮಾವೇಶ ನೀಡಿದ ಭಾರತ್ ಬಂದ್ ಕರೆಯನ್ನು ಅದು ಪುನರುಚ್ಚರಿಸಿತು. ನಿಜ, ಅನಿವಾರ್ಯ ಕಾರಣಗಳಿಂದಾಗಿ ದಿನಾಂಕ ತುಸು ಬದಲಾಗಿ ಸೆಪ್ಟಂಬರ್ 27 ಆಗಿದೆ. ಆಡಳಿತದಲ್ಲಿರುವ ಸರಕಾರದ ಬಗ್ಗೆ ಜನಗಳಲ್ಲಿ ಅಸಂತೃಪ್ತಿ ತುಂಬಿರುವುದನ್ನು ಇದು ತೋರಿಸಿದೆ. ಇಲ್ಲಿಂದ ಈ ಕಾರ್ಯಾಚರಣೆಗೆ ದೇಶಾದ್ಯಂತ ಎಲ್ಲ ಪ್ರಗತಿಪರ, ಪ್ರಜಾಪ್ರಭುತ್ವವಾದಿ ಮತ್ತು ಜಾತ್ಯತೀತ ಶಕ್ತಿಗಳು ಬಿರುಸಿನ ಸಿದ್ಧತೆಗಳನ್ನು ಆರಂಭಿಸುತ್ತವೆ. ರ್ಯಾಲಿಯಲ್ಲಿ ಮಾತಾಡಿದ ಎಲ್ಲ ಭಾಷಣಕಾರರೂ ಇದನ್ನು ಯಶಸ್ವಿಗೊಳಿಸುವುದರ ಮಹತ್ವವನ್ನು ಒತ್ತಿ ಹೇಳಿದರು.
ಎರಡು, ಈ ರ್ಯಾಲಿ ‘ಮಿಷನ್ ಉತ್ತರಪ್ರದೇಶ-ಉತ್ತರಾಖಂಡ’ ವನ್ನು ಉದ್ಘಾಟಿಸಿತು. ತನ್ನ ಕೇಂದ್ರ ಬೇಡಿಕೆಗಳನ್ನು ಪುನರುಚ್ಚರಿಸಿದ್ದಲ್ಲದೆ ಈ ರ್ಯಾಲಿ ಮುಂಬರುವ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಗೆ ಭಾರೀ ಸೋಲನ್ನುಣ್ಣಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನೂ ಮಾಡಲಾಗುವುದು ಎಂದು ನಿರ್ಧರಿಸಿತು. ಲಕ್ನೌನಲ್ಲಿ ಸೆಪ್ಟಂಬರ್ 9-10ರಂದು ಸೇರುವ ಎಸ್ಕೆಎಂ ಸಭೆಯಲ್ಲಿ ಇದರ ವಿವರಗಳನ್ನು ರೂಪಿಸಲಾಗುವುದು. ಎರಡೂ ರಾಜ್ಯಗಳ ವಿಭಾಗ ಕೇಂದ್ರಗಳಲ್ಲಿ ಬೃಹತ್ ರ್ಯಾಲಿಗಳು ಮತ್ತು ಪ್ರತಿಜಿಲ್ಲೆಯಲ್ಲಿ ರ್ಯಾಲಿಗಳು ನಡೆಯಲಿವೆ.
ಮೂರು, ಈ ಐಕ್ಯ ರ್ಯಾಲಿ 2013ರಲ್ಲಿ ಆರೆಸ್ಸೆಸ್-ಬಿಜೆಪಿ ಇಲ್ಲಿಯೇ ಸೃಷ್ಟಿಸಿದ್ದ ಭೀಕರ ಕೋಮು ಗಲಭೆಗಳ ವಿಭಜನಕಾರೀ ನೆನಪುಗಳನ್ನು ಶಕ್ತಿಯುತವಾಗಿ ಎದುರಿಸಿತು. ಈ ಗಲಭೆಗಳು ಉಂಟು ಮಾಡಿದ ಕೋಮು ಧ್ರುವೀಕರಣ, 2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಇಡೀ ಉತ್ತರ ಭಾರತದಲ್ಲಿ, ಮತ್ತು 2017ರಲ್ಲಿ ಉತ್ತರಪ್ರದೇಶದಲ್ಲಿ ಭಾರೀ ಚುನಾವಣಾ ಜಯಗಳಿಸುವಲ್ಲಿ ಒಂದು ಪ್ರಮುಖ ಅಂಶವಾಯಿತು. ಈ ರ್ಯಾಲಿಯಲ್ಲಿ ವ್ಯಕ್ತಗೊಂಡ ಐಕ್ಯತೆಯ ಸಂಕೇತವೆಂದರೆ ನರೇಶ್ ಟಿಕಾಯ್ತ್ ಮತ್ತು ಗುಲಾಮ್ ಮಹಮ್ಮದ್ ಜೌಲ ವೇದಿಕೆಯಲ್ಲಿ ಜತೆಗೆ ಕುಳಿತಿದ್ದುದು. ರ್ಯಾಲಿಯಲ್ಲಿ ಮಾತನಾಡಿದವರೆಲ್ಲರೂ ಉತ್ತರಪ್ರದೇಶದ ಬಿಜೆಪಿ ಸರಕಾರ ಬ್ರಿಟಿಷರ ಕುಖ್ಯಾತ ಒಡೆದಾಳುವ ಧೋರಣೆಯನ್ನು ಅನುಸರಿಸುತ್ತಿದೆ, ಆದರೆ ರೈತ-ಕಾರ್ಮಿಕ ಐಕ್ಯತೆ ಈ ಕೋಮುವಾದಿ-ಜಾತಿವಾದಿ ರಾಜಕೀಯದ ಮೇಲೆ ವಿಜಯ ಸಾಧಿಸುತ್ತದೆ, ರೈತರು ಇನ್ನೆಂದೂ ಕೋಮುಗಲಭೆ ನಡೆಯಲು ಬಿಡುವುದಿಲ್ಲ ಎಂದು ಸಾರಿದರು.
ಉತ್ತರಪ್ರದೇಶದ ಸಾವಿರಾರು ಮುಸ್ಲಿಮರು ಈ ರ್ಯಾಲಿಯಲ್ಲಿ ಭಾಗವಹಿಸಿದ್ದಲ್ಲದೆ, ಲಂಗರ್ಗಳನ್ನು ರಚಿಸಿ ಆಹಾರ ಪೂರೈಕೆ, ಮತ್ತಿತರ ಸೇವೆಗಳನ್ನೂ ಒದಗಿಸಿದರು, ಮಸೀದಿಗಳಲ್ಲಿ ಹಿಂದೂ ಮತ್ತು ಸಿಖ್ ರೈತರು ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಇಲ್ಲಿನ ಮುಸ್ಲಿಮರ ಆತಿಥ್ಯ ಹಲವರ ಮನ ತಟ್ಟಿತು.
ನಾಲ್ಕು, ಸುಮಾರಾಗಿ ಎಲ್ಲ ಪ್ರಮುಖ ಭಾಷಣಕಾರರು ಮೋದಿ ಸರಕಾರ ನಾಚಿಕೆಗೆಟ್ಟ ರಾಷ್ಟ್ರೀಯ ನಗದೀಕರಣ ಕ್ರಮಸರಣಿಯ ಮೂಲಕ ಇಡೀ ದೇಶವನ್ನು ದೇಶಿ-ವಿದೇಶಿ ಕಾರ್ಪೊರೇಟ್ಗಳಿಗೆ ಮಾರಾಟ ಮಾಡುತ್ತಿದೆ ಎಂದು ನೇರವಾಗಿ ಆಪಾಧಿಸಿದರು. ನಾಲ್ಕು ಕಾರ್ಮಿಕ ಸಂಹಿತೆಗಳ ರದ್ದತಿಯ ಕಾರ್ಮಿಕ ವರ್ಗದ ಬೇಡಿಕೆಯನ್ನು ಕೂಡ ಅವರು ಬೆಂಬಲಿಸಿದರು. ಜತೆಗೆ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಮತ್ತಿತರ ಅಗತ್ಯ ವಸ್ತುಗಳ ಬೆಲೆಯೇರಿಕೆಗಳನ್ನು ಖಂಡಿಸಿದರು. ಹೀಗೆ, ಸಂಯುಕ್ತ ಕಿಸಾನ್ ಮೋರ್ಚಾದ ಈ ಮಹಾಪಂಚಾಯತ್, ಹತ್ತು ದಿನಗಳ ಹಿಂದೆ ನಡೆದ ರಾಷ್ಟ್ರೀಯ ಸಮಾವೇಶದಂತೆ ಕೃಷಿ ಕ್ಷೇತ್ರದ ಆಚೆಗಿನ ಪ್ರಶ್ನೆಗಳನ್ನೂ ಎತ್ತಿಕೊಂಡಿದೆ. ರೈತರ ಹೋರಾಟ ಮೂರು ಕೃಷಿ ಕಾಯ್ದೆಗಳು ಮತ್ತು ಎಂಎಸ್ಪಿಗಿಂತಲೂ ಹೆಚ್ಚಿನ ವ್ಯಾಪ್ತಿ ಪಡೆಯುತ್ತಿದೆ. ಅದು ಪ್ರಜಾಪ್ರಭುತ್ವ ಮತ್ತು ಜಾತ್ಯತೀತತೆಯನ್ನು ರಕ್ಷಿಸುವುದಷ್ಟೇ ಅಲ್ಲ, ಆಳಗೊಳಿಸಿದೆ ನಮ್ಮ ಸಂವಿಧಾನವನ್ನು ರಕ್ಷಿಸುವ ಅತಿ ದೊಡ್ಡ ಆಂದೋಲನವಾಗಿ ಬಿಟ್ಟಿದೆ. ಇದನ್ನು ಹಲವು ಪ್ರಮುಖ ಭಾಷಣಕಾರರು ತಮ್ಮ ಭಾಷಣಗಳಲ್ಲಿ ಒತ್ತಿ ಹೇಳಿದರು.
ಐದನೆಯದಾಗಿ, ಯೋಗಿ ಸರಕಾರ ರೈತರಿಗೆ ಕೊಟ್ಟ ಆಶ್ವಾಸನೆಗಳನ್ನು ಈಡೇರಿಸಿಲ್ಲ ಎಂದು ಭಾಷಣಕಾರರು ಆರೋಪಿಸಿದರು. ಬೆಳೆ ಖರೀದಿಯ ಭರವಸೆ ಕೂಡ 20%ದಷ್ಟೂ ನೆರವೇರಿಲ್ಲ. 86 ಲಕ್ಷ ರೈತರಿಗೆ ಸಾಲ ಮನ್ನಾದ ಆಶ್ವಾಸನೆ ನೀಡಿತ್ತು, 45 ಲಕ್ಷ ಮಂದಿ ಮಾತ್ರವೇ, ಅದೂ ಅಲ್ಪ-ಸ್ವಲ್ಪ ಪ್ರಯೋಜನ ಪಡೆದಿದ್ದಾರೆ. ಕೃಷಿ ವೆಚ್ಚಗಳು ಮತ್ತು ಬೆಲೆಗಳ ಆಯೋಗ (ಸಿಎಸಿಪಿ) ಕಬ್ಬು ಬೆಳೆಯುವ ಖರ್ಚು 2017ರಲ್ಲಿ ಕ್ವಿಂಟಾಲಿಗೆ 383ರೂ. ಆಗುತ್ತದೆ ಎಂದಿತ್ತು. ಆದರೆ ರೈತರಿಗೆ ಸಿಕ್ಕಿರುವುದು 325ರೂ. ಮಾತ್ರ. ಸಕ್ಕರೆ ಕಾರ್ಖಾನೆಗಳು ರೈತರಿಗೆ 12,000 ಕೋಟಿ ರೂ. ಬಾಕಿ ಇಟ್ಟುಕೊಂಡಿವೆ. ಬೆಳೆವಿಮೆ ಪಡೆದ ರೈತರ ಸಂಖ್ಯೆ 2016-17ರಲ್ಲಿದ್ದ 72ಲಕ್ಷ ದಿಂದ 2019-20ರಲ್ಲಿ 47 ಲಕ್ಷಕ್ಕೆ ಇಳಿದಿದೆ. ಆದರೆ ಬೆಳೆವಿಮಾ ಕಂಪನಿಗಳು 2508 ಕೊಟಿ ರೂ. ಲಾಭ ಗಳಿಸಿವೆ. ಉತ್ತರ ಪ್ರದೇಶ ಸರಕಾರ ಆಶ್ವಾಸನೆ ನೀಡಿದ ಕಬ್ಬಿಗೆ ಕ್ವಿಂಟಾಲಿಗೆ 450ರೂ. ದರಕ್ಕಾಗಿ ಒಂದು ಚಳುವಳಿಯನ್ನು ಸದ್ಯದಲ್ಲೇ ಎಸ್ಕೆಎಂ ಪ್ರಕಟಿಸಲಿದೆ.
ಹೋರಾಟದ ಜ್ವಾಲೆ
‘ದಾಮ್ ನಹೀ ತೋ ವೋಟ್ ನಹೀ’(ನ್ಯಾಯಬೆಲೆ ಕೊಡದಿದ್ದರೆ ವೋಟ್ ಕೊಡುವುದಿಲ್ಲ), ‘ವೋ ತೋಡೇಂಗೆ, ಹಮ್ ಜೋಡೇಂಗೆ’(ಅವರು ಮುರಿಯುತ್ತಾರೆ, ನಾವು ಜೋಡಿಸುತ್ತೇವೆ), ಜತೆಗೆ ಅಲ್ಲಾಹು ಅಕ್ಬರ್, ಹರಹರ ಮಹಾದೆವ್ ಮತ್ತು ಜೋ ಬೋಲೆ ಸೋ ನಿಹಾಲ್ ಧಾರ್ಮಿಕ ಘೋಷಣೆಗಳು ಒಟ್ಟಿಗೇ ಮೊಳಗಿದವು.
ತಮಿಳುನಾಡು, ಕರ್ನಾಟಕ, ಕೇರಳದ ಮುಖಂಡರು ತಂತಮ್ಮ ಭಾಷೆಗಳಲ್ಲೇ ಮಾತಾಡಿದಾಗ, ಅವರ ಮಾತುಗಳು ಅರ್ಥವಾಗದಿದ್ದರೂ ದೀರ್ಘ ಕರತಾಡನಗಳು ಅವನ್ನು ಸ್ವಾಗತಿಸಿದವು.
ಅದೇ ರೀತಿ, ಹುತಾತ್ಮರಾದ ಭಗತ್ಸಿಂಗ್, ಅಶ್ಫಾಕುಲ್ಲ ಖಾನ್ ಮತ್ತು ಡಾ.ಅಂಬೇಡ್ಕರ್, ಸ್ವಾಮಿ ಸಹಜಾನಂದ ಸರಸ್ವತಿ ಮತ್ತಿತರರ ಉಲ್ಲೇಖ ಮಾಡಿದಾಗಲೂ ದೀರ್ಘ ಕರತಾಡನಗಳು ಕಂಡು ಬಂದವು. ಇವೆಲ್ಲವೂ ಭಾರತದ ರೈತಾಪಿಗಳ ಐಕ್ಯತೆ ಮತ್ತು ದೃಢನಿರ್ಧಾರದ ಅಭಿವ್ಯಕ್ತಿಗಳು.
ಸಂಯುಕ್ತ ಕಿಸಾನ್ ಮೋರ್ಚಾದ ಸುಮಾರಾಗಿ ಎಲ್ಲ ಪ್ರಮುಖ ಮುಖಂಡರು ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು.
ಈ ರ್ಯಾಲಿಯಲ್ಲಿ ಎಐಕೆಎಸ್ನ ಭಾಗವಹಿಸುವಿಕೆ ಗಮನಾರ್ಹವಾಗಿತ್ತು. ಉತ್ತರ ಭಾರತದ ಎಲ್ಲ ರಾಜ್ಯಗಳಿಂದ ಮತ್ತು ದೂರದ ಅಸ್ಸಾಂನಿಂದಲೂ ಎಐಕೆಎಸ್ನ ದೊಡ್ಡ ತುಕಡಿಗಳು ಭಾಗವಹಿಸಿದವು. ಬಿಹಾರ ಕಿಸಾನ್ ಸಭಾದ ಒಂದು ದೊಡ್ಡ ತಂಡ ಒಂದು ವಾರದ ಮೊದಲೇ ಗಾಝೀಪುರ ಗಡಿಯಲ್ಲಿ ಬಂದು ನೆಲೆಯೂರಿತ್ತು.
ಬಿಜೆಪಿ ಸರಕಾರ ಒಡ್ಡಿದ ಎಲ್ಲ ಅಡೆ-ತಡೆಗಳನ್ನು ಮೀರಿ ಈ ರ್ಯಾಲಿಯನ್ನು ಯಶಸ್ವಿಗೊಳಿಸಿದ ಲಕ್ಷಾಂತರ ರೈತರಿಗೆ ಸಂಯುಕ್ತ ಕಿಸಾನ್ ಮೋರ್ಚಾ ಅಭಿನಂದನೆಗಳನ್ನು ಸಲ್ಲಿಸಿದೆ.
ಕರ್ನಾಲ್ ರ್ಯಾಲಿ
ಇದಾದ ಮೇಲೆ ಇನ್ನೊಂದು ಬೃಹತ್ ರೈತ ರ್ಯಾಲಿ ಹರ್ಯಾಣದ ಕರ್ನಾಲ್ನಲ್ಲಿ ನಡೆದಿದೆ. ಸೆಪ್ಟಂಬರ್ 7ರಂದು ಎರಡು ಲಕ್ಷ ರೈತರು ಬಿಜೆಪಿ-ಜೆಜೆಪಿ ಸರಕಾರವನ್ನು ಖಂಡಿಸಿ ಈ ರ್ಯಾಲಿ ನಡೆದಿದೆ. “ತಲೆ ಒಡೆಯಿರಿ’ ಎಂದು ಪೋಲೀಸರಿಗೆ ಸೂಚನೆ ನೀಡಿದ ಎಸ್ಡಿಎಂ ಆಯುಷ್ ಸಿನ್ಹರನ್ನು ಕೆಲಸದಿಂದ ತೆಗೆದು ಹಾಕಬೇಕು, ಆತನ ಮೇಲೆ ಕೊಲೆ ಮೊಕದ್ದಮೆ ನಡೆಸಬೇಕು ಎಂದು ಆಗ್ರಹಿಸಿ ಈ ರ್ಯಾಲಿ ನಡೆದಿದೆ. ಹರ್ಯಾಣ ಸರಕಾರ ಆತನನ್ನು ವಜಾ ಮಾಡುವ ಬದಲು ಬಿಜೆಪಿ ಮುಖ್ಯಮಂತ್ರಿ ಮತ್ತು ಜೆಜೆಪಿ ಉಪಮುಖ್ಯಮಂತ್ರಿಯ ಕೃಪಾಶೀರ್ವಾದದಿಂದ ಬಡ್ತಿ ಕೊಟ್ಟು ವರ್ಗ ಮಾಡಲಾಗಿದೆ. ಈಗಾಗಲೇ ವರದಿಯಾಗಿರುವಂತೆ ಆಗಸ್ಟ್28 ರಂದು ನಡೆದ ಅಮಾನುಷ ಲಾಠೀ ಪ್ರಹಾರದಲ್ಲಿ ಹತ್ತಾರು ರೈತರು ತೀವ್ರವಾಗಿ ಗಾಯಗೊಂಡಿದ್ದಾರೆ, ಸುಶೀಲ್ ಕಾಜಲ್ ಎಂಬ ಹೆಸರಿನ ರೈತ ಈ ಗಾಯಗಳಿಂದಾಗಿ ಹುತಾತ್ಮರಾಗಿದ್ದಾರೆ. ರಾಜ್ಯ ಸರಕಾರದ ವಿರುದ್ದ ಈ ಹೋರಾಟ ಇನ್ನೂ ಮುಂದುವರೆಯುತ್ತಿದೆ.