ದೇಶದ ಜನಸಂಖ್ಯೆಯ 14% ರಷ್ಟಿದ್ದರೂ, ಉನ್ನತ ಶಿಕ್ಷಣವನ್ನು ಪಡೆಯುವವರಲ್ಲಿ ಮುಸ್ಲಿಮರು ಕೇವಲ 4.6%ಉನ್ನತ ಶಿಕ್ಷಣದಲ್ಲಿ ಪರಿಶಿಷ್ಟ ಜಾತಿಗಳು (ಎಸ್‌ಸಿ) ಪರಿಶಿಷ್ಟ ಪಂಗಡಗಳು (ಎಸ್‌ಟಿ) ಮತ್ತು ಇತರ ಹಿಂದುಳಿದ ವರ್ಗಗಳ (ಒಬಿಸಿ) ದಾಖಲಾತಿಯು 4.2%, 11.9% ಮತ್ತು 4% ರಷ್ಟು ಸುಧಾರಿಸಿದೆ , ಆದರೆ ಮುಸ್ಲಿಂ ಸಮುದಾಯದಲ್ಲಿ ಇದು 8% ದಷ್ಟು ಕುಸಿದಿದೆ. ಅಖಿಲ ಭಾರತ ಉನ್ನತ ಶಿಕ್ಷಣ ಸಮೀಕ್ಷೆ (AISHE ) 2020- 21 ತಿಳಿಸಿರುವುದಾಗಿ ‘ದಿ ಹಿಂದೂ’ (ಮೇ 30) ವರದಿ ಮಾಡಿದೆ.
ಈ ಅಭೂತಪೂರ್ವ ಕುಸಿತಕ್ಕೆ ಕೊವಿಡ್ ಸಾಂಕ್ರಾಮಿಕ ಭಾಗಶಃ ಕಾರಣವಾಗಿದ್ದರೂ, ಒಟ್ಟಾರೆಯಾಗಿ ಇದು ಈ ಸಮುದಾಯದ ಹೆಚ್ಚಿನ ಆರ್ಥಿಕ ಬಡತನವನ್ನು ಸೂಚಿಸುತ್ತದೆ, ಈ ಬಡತನದಿಂದಾಗಿ ಆ ಸಮುದಾಯ ತನ್ನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪದವಿ ಹಂತದಲ್ಲಿ ಉನ್ನತ ಶಿಕ್ಷಣವನ್ನು ಮುಂದುವರಿಸಲು ಬಿಡುವ ಬದಲು ಉದ್ಯೋಗಾರ್ಥಿಗಳ ಸಾಲಿಗೆ ಸೇರುವಂತೆ ಮಾಡಬೇಕಾಗುತ್ತದೆ ಎಂದು ವರದಿ ಹೇಳಿದೆ.
ಮುಸ್ಲಿಮರು ಜನಸಂಖ್ಯೆಯ ಸುಮಾರು 20% ರಷ್ಟಿರುವ ಉತ್ತರ ಪ್ರದೇಶದ್ದು ಈ ರಂಗದಲ್ಲಿ 36%ರಷ್ಟು ಕುಸಿತದೊಂದಿಗೆ ಅತ್ಯಂತ ಕೆಟ್ಟ ಸಾಧನೆ. ಇದರ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ 26%, ಮಹಾರಾಷ್ಟ್ರದಲ್ಲಿ 8.5% ಮತ್ತು ತಮಿಳುನಾಡಿನಲ್ಲಿ 8.1% ಇಳಿಕೆಯಾಗಿದೆ ಎಂದು ವರದಿ ತಿಳಿಸಿದೆ.
ಉತ್ತರ ಪ್ರದೇಶದಲ್ಲಿ ಕಾಲೇಜುಗಳ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳವಾಗಿದ್ದರೂ, ಮುಸ್ಲಿಮರ ದಾಖಲಾತಿ ಪ್ರಮಾಣವು ಕೇವಲ 4.5% ರಷ್ಟಿದೆ ಎಂದು ಹಿಂದೂ ವರದಿ ಹೇಳಿದೆ.
ದೆಹಲಿಯಲ್ಲಿ ಶಿಕ್ಷಣದ ಸುಧಾರಣೆಗಳ ಬಗ್ಗೆ ಎಎಪಿ ಬಹಳಷ್ಟು ಮಾತನಾಡುತ್ತಿದ್ದರೂ, ಅಲ್ಲಿಯೂ ಪ್ರತಿ ಐವರಲ್ಲಿ ಒಬ್ಬ ಮುಸ್ಲಿಂ ವಿದ್ಯಾರ್ಥಿಯು ರಾಷ್ಟ್ರ ರಾಜಧಾನಿಯಲ್ಲಿ ಉನ್ನತ ಶಿಕ್ಷಣಕ್ಕೆ ದಾಖಲಾಗಲು ವಿಫಲನಾಗುತ್ತಾನೆ ಎಂದೂ ವರದಿ ಹೇಳಿದೆ.
ಮುಸ್ಲಿಮರು ಈ ರೀತಿ ಅತ್ಯಂತ ತಳಭಾಗಕ್ಕೆ ತಳ್ಲಲ್ಪಡದಿರುವ ಏಕೈಕ ರಾಜ್ಯವೆಂದರೆ ಕೇರಳ. ಇಲ್ಲಿ 43% ಮುಸ್ಲಿಮರು ಉನ್ನತ ಶಿಕ್ಷಣಕ್ಕಾಗಿ ಹೋಗುತ್ತಾರೆ ಎಂದು ಈ ವರದಿ ಹೇಳುತ್ತದೆ.
ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ಕಾಣಬರದಿರುವ ದೃಶ್ಯದ ಪ್ರತಿಬಿಂಬವೆಂಬಂತೆ ಮುಸ್ಲಿಂ ಶಿಕ್ಷಕರ ಗೈರುಹಾಜರಿಯೂ ಎದ್ದು ಕಾಣುತ್ತಿದೆ. ಅಖಿಲ ಭಾರತ ಮಟ್ಟದಲ್ಲಿ, ಸಾಮಾನ್ಯ ವರ್ಗಕ್ಕೆ ಸೇರಿದ ಶಿಕ್ಷಕರು ಎಲ್ಲಾ ಶಿಕ್ಷಕರಲ್ಲಿ 56% ರಷ್ಟಿದ್ದಾರೆ. OBC, SC ಮತ್ತು ST ಶಿಕ್ಷಕರು ಕ್ರಮವಾಗಿ 32%, 9% ಮತ್ತು 2.5% ಶಿಕ್ಷಕರಿದ್ದಾರೆ. ಮುಸ್ಲಿಮರು ಕೇವಲ 5.6% ಎಂದು ವರದಿ ಹೇಳಿದೆ.
ಸಮೀಕ್ಷೆಯ ಪ್ರಕಾರ ಒಬಿಸಿ ಸಮುದಾಯದ ಕುರಿತ ಚಿತ್ರ ಉಜ್ವಲವಾಗಿ ಕಾಣುತ್ತಿದೆ, ದೇಶದ ಉನ್ನತ ಶಿಕ್ಷಣದಲ್ಲಿ ಒಟ್ಟು ದಾಖಲಾತಿಯಲ್ಲಿ ಒಬಿಸಿ ಪ್ರಮಾಣ 36% ಮತ್ತು ಪರಿಶಿಷ್ಟ ಜಾತಿಗಳವರು 14% ರಷ್ಟಿದ್ದಾರೆ. ಅಂದರೆ ಈ ಎರಡು ಸಮುದಾಯಗಳು ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳಲ್ಲಿನ ಸುಮಾರು 50% ಸೀಟುಗಳನ್ನು ಒಳಗೊಂಡಿವೆ.
ಉನ್ನತ ಶಿಕ್ಷಣದಲ್ಲಿ ಮುಸ್ಲಿಮರ ಇಂತಹ ತೀವ್ರ ಪ್ರಾತಿನಿಧ್ಯದ ಕೊರತೆಯ ಹೊರತಾಗಿಯೂ, ಕರ್ನಾಟಕದಲ್ಲಿ ಹಿಂದಿನ ಬಿಜೆಪಿ ಸರ್ಕಾರವು ವಿಧಾನಸಭೆ ಚುನಾವಣೆಯ ಮೊದಲು ಮುಸ್ಲಿಮರಿಗೆ 4% ಮೀಸಲಾತಿಯನ್ನು ರದ್ದುಗೊಳಿಸಿತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.