ಹಾಸನ: ಹಲವು ವಿಘ್ನಗಳಿಂದಾಗಿ ಕುಟುಂತ್ತಾ ಸಾಗಿರುವ ನಗರದ ಹೊಸ ಬಸ್ ನಿಲ್ದಾಣ ಎದುರಿನ ರೈಲ್ವೆ ಮೇಲ್ಸೇತುವೆ ಕಾಮಗಾರಿ ನಾಲ್ಕು ವರ್ಷವಾದರೂ ಮುಗಿಯದೇ ಕಾಮಗಾರಿ ಸಾಗಿದ್ದು, ಈ ವರ್ಷವೂ ಫ್ಲೈ ಓವರ್ ಮೇಲೆ ಓಡಾಡುವ ಸಾಧ್ಯತೆಗಳಿಲ್ಲ.
ಹಲವು ರೀತಿಯ ವಿಘ್ನ:
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ 2018-19 ರ ಅವಧಿಯಲ್ಲಿ ಆರಂಭಗೊಂಡ ಅಂದಾಜು 44 ಕೋಟಿ ರೂ. ವೆಚ್ಚದ ಯೋಜನೆಗೆ ನಾನಾ ರೀತಿಯ ವಿಘ್ನಗಳು ಎದುರಾದವು. 2020 ಮಾರ್ಚ್ 12 ರಂದು ನಿರ್ಮಾಣ ಹಂತದಲ್ಲಿದ್ದ ನಾಲ್ಕು ಉದ್ದನೆಯ ಸಿಮೆಂಟ್ ಕಂಬಗಳು(ಭೀಮ್) ಮುರಿದು ಬಿದ್ದವು. ಅದಾದ ಬಳಿಕ ಕೊರೊನಾ ಮಹಾಮಾರಿ ಎದುರಾಗಿ ಕಾರ್ಮಿಕರಿಲ್ಲದೆ ಹೆಚ್ಚು ಕಡಿಮೆ ಕೆಲಸ ಸ್ಥಗಿತಗೊಂಡಿತ್ತು. ಇದರಿಂದ ಕುಂಠಿತವಾಗಿದ್ದ ಕಾಮಗಾರಿ ಹಲವು ರೀತಿ ಅಡೆ-ತಡೆ ದಾಟಿ ಈಗ ಮತ್ತೆ ಕಾಮಗಾರಿ ಆರಂಭವಾಗಿದೆ.
ಕಂಬ ನಿರ್ಮಾಣ ಕೆಲಸ ನಡೆಯುತ್ತಿದೆ…
ಎನ್.ಆರ್.ವೃತ್ತದಿಂದ ರೈಲ್ವೆ ಹಳಿಯವರೆಗೆ ಕಂಬಗಳ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಅವುಗಳ ಮೇಲೆ ಹಾಸು ಕಂಬಗಳ ಅಳವಡಿಕೆ ಕೆಲಸ ಮತ್ತು ರಸ್ತೆ ಸುರಕ್ಷಿತ ಗೋಡೆ ನಿರ್ಮಾಣ ಮಾಡಲಾಗುತ್ತಿದೆ. ಮುಂದುವರಿದು ರೈಲ್ವೆ ಹಳಿಯ ಎಡ-ಬಲದಲ್ಲೂ ಕಂಬಗಳನ್ನು ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ಶೀಘ್ರವೇ ಹಾಲಿ ಇದ್ದ ರೈಲ್ವೆ ಗೇಟ್‌ನನ್ನು ಬಂದ್ ಮಾಡಲಾಗುವುದು. ವಾಹನ ಸಂಚಾರದಕ್ಕೆ ಬದಲಿಯಾಗಿ ಅದರ ಪಕ್ಕದಲ್ಲೇ ಹೊಸ ಗೇಟ್ ನಿರ್ಮಾಣ ಈಗಾಗಲೇ ಪೂರ್ಣಗೊಂಡಿದ್ದು, ಅದು ಶೀಘ್ರ ಕಾರ್ಯಾರಂಭ ಮಾಡಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರೈಲ್ವೆ ಗೇಟ್ ಅಕ್ಕ-ಪಕ್ಕ ಬಾಕಿ ಕಂಬಗಳ ನಿರ್ಮಾಣ ಕೆಲಸ ಮುಗಿದರೆ, ಅವುಗಳ ಮೇಲೆ ಹಾಸು ಕಂಬಗಳನ್ನು ಜೋಡಣೆ ಮಾಡುವ ಕೆಲಸ ಶುರುವಾಗಲಿದೆ. ಇದಕ್ಕೆ ಬೇಕಿರುವ ಸುಮಾರು 30 ರಿಂದ 40 ಮೀಟರ್ ಉದ್ದದ ಸಿಮೆಂಟ್ ಕಂಬಗಳನ್ನು ಈಗಾಗಲೇ ಸಿದ್ಧಗೊಳಿಸಲಾಗಿದೆ.
ಇಳಿಜಾರು ಕೆಲಸ ಪೂರ್ಣ:
ಇನ್ನು ಚನ್ನಪಟ್ಟಣ ಕಡೆಯಿಂದ ಈ ಹಿಂದೆ ನಾಲ್ಕು ಬೃಹತ್ ಕಂಬಗಳು ಮುರಿದು ಬಿದ್ದ ಜಾಗದಲ್ಲಿ ಮೇಲ್ಸೇತುವೆ ಇಳಿಜಾರು ಕಾಮಗಾರಿ ಬಹುತೇಕ ಮುಗಿದಿದೆ. ಇದರ ಮೇಲಿನ ರಸ್ತೆಯ ಇಕ್ಕೆಲಗಳಲ್ಲಿ ತಡೆಗೋಡೆ ನಿರ್ಮಿಸುವ ಕೆಲಸವೂ ಚುರುಕಾಗಿದೆ. ಅಲ್ಲಿಂದ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಎದುರಿನ ಸಿಮೆಂಟ್ ರಸ್ತೆವರೆಗೆ ಕೆಲಸ ಮುಗಿದರೆ ಆ ಭಾಗದ ಕೆಲಸ ಅಂತಿಮ ಹಂತಕ್ಕೆ ಬರಲಿದೆ.
ಅದರ ಮುಂದುವರಿದ (ಕೆಹೆಚ್‌ಬಿ ಕಟ್ಟಡ ಮುಂಭಾಗ) ಭಾಗದಲ್ಲಿ ಎರಡೂ ಕಡೆ ಸಿಮೆಂಟ್ ತಡೆಗೋಡೆ ಕಟ್ಟುವ ಕೆಲಸದಲ್ಲಿ ಕಾರ್ಮಿಕರು ಹಾಗೂ ಕ್ರೇನ್‌ಗಳು ಕಾರ್ಯನಿರತವಾಗಿವೆ. ಎರಡೂ ಕಡೆ ತಡೆಗೋಡೆ ತಲೆ ಎತ್ತಿದ ನಂತರ ಅದಕ್ಕೆ ಮಣ್ಣು ತುಂಬಿ ಗಟ್ಟಿಯಾದ ನಂತರ ಸಿಮೆಂಟ್ ರಸ್ತೆ ಕಾಮಗಾರಿ ಆರಂಭವಾಗಲಿದೆ. ಉಳಿದಂತೆ ಎನ್.ಆರ್.ವೃತ್ತದ ಕಡೆಯಿಂದ ಡಾನ್ ಬಾಸ್ಕೋ ಕಾಲೇಜು ವರೆಗೆ ಮೇಲ್ಸೇತುವೆಯಿಂದ ಇಳಿಜಾರು ರಸ್ತೆ ಕಾಮಗಾರಿ ಇನ್ನೂ ಆರಂಭವಾಗಬೇಕಿದೆ.
ಜೋರು ಮಳೆಯದ್ದೇ ಚಿಂತೆ
ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದೆ. ಆದರೆ ಜೋರು ಮಳೆ ಮುಂದೇನು ಎಂಬ ಚಿಂತೆಯನ್ನು ತಂದೊಡ್ಡಿದೆ. ಏಕೆಂದರೆ ಈಗಾಗಲೇ ಆರಂಭದ ಮಳೆಯೇ ಆರ್ಭಟಿಸತೊಡಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗಬಹುದು ಎಂಬ ಮುನ್ಸೂಚನೆಯೂ ಹೊರ ಬಿದ್ದಿದೆ. ಇದು ನಿಜವಾದರೆ ಕಾಮಗಾರಿಯ ಕತೆಯೇನು ಎಂಬ ಪ್ರಶ್ನೆ ಮೂಡಿದೆ. ಒಂದು ವೇಳೆ ವರ್ಷಧಾರೆ ಅಧಿಕವಾದರೆ ವರ್ಷಾಂತ್ಯದೊಳಗೆ ಕಾಮಗಾರಿ ಮುಗಿಯುವುದು ಅನುಮಾನ.