ಎಂ.ಚಂದ್ರ ಪೂಜಾರಿ
ಸ್ವಾತಂತ್ರ್ಯದ ಉತ್ಸವ ಮುಗಿದಿದೆ. ಘರ್‌ಘರ್ ಮೇ ತಿರಂಗಾ ಘೋಷಣೆ ನಿಂತಿದೆ. ತಿರಂಗಾದ ಜೊತೆ ಸೆಲ್ಫಿ ಕೂಡ ಆಗಿದೆ. ಧ್ವಜವನ್ನು ಮಡಜಿ ಚೀಲದೊಳಗೆ ಇಟ್ಟಿದ್ದೇವೆ. ಇನ್ನು ನಾವು ಕೂಲ್ ಆಗಿ ಸ್ವಾತಂತ್ರ್ಯದ ಬಗ್ಗೆ ಸ್ವಲ್ಪ ಆಲೋಚನೆ ಮಾಡಬಹುದು
ನಮ್ಮಲ್ಲಿ ಎರಡು ಬಗೆಯ ಸ್ವಾತಂತ್ರ್ಯದ ಆಚರಣೆ ಇದೆ. ಒಂದು, ಆಗಸ್ಟ್ 15ರಂದು ನಡೆಯುವ ಸ್ವಾತಂತ್ರ್ಯದ ಆಚರಣೆ ಮತ್ತೊಂದು ನಿಜ ಜೀವನದಲ್ಲಿ ನಡೆಯುವ ಸ್ವಾತಂತ್ರ್ಯ ಆಚರಣೆ. ನನ್ನ ಲೇಖನದ ಉದ್ದೇಶ ದಿನನಿತ್ಯದ ಬದುಕಿನಲ್ಲಿ ಆಗಸ್ಟ್ 15ರ ಸ್ವಾತಂತ್ರ್ಯವನ್ನು ಆಚರಿಸಲಿರುವ ಅಡ್ಡಿಗಳೇನು? ಮತ್ತು ಇವುಗಳ ಪರಿಹಾರ ಹೇಗೆ? ಎನ್ನುವ ಪ್ರಶ್ನೆಗೆ ಉತ್ತರಿಸುವುದು. ಸ್ವಾತಂತ್ರ್ಯದ ಉತ್ಸವ ಮುಗಿದಿದೆ. ಘರ್‌ಘರ್ ಮೇ ತಿರಂಗಾ ಘೋಷಣೆ ನಿಂತಿದೆ. ತಿರಂಗಾದ ಜೊತೆ ಸೆಲ್ಫಿ ಕೂಡ ಆಗಿದೆ. ಧ್ವಜವನ್ನು ಮಡಜಿ ಚೀಲದೊಳಗೆ ಇಟ್ಟಿದ್ದೇವೆ. ಇನ್ನು ನಾವು ಕೂಲ್ ಆಗಿ ಸ್ವಾತಂತ್ರ್ಯದ ಬಗ್ಗೆ ಸ್ವಲ್ಪ ಆಲೋಚನೆ ಮಾಡಬಹುದು. ಏನಿದು ಸ್ವಾತಂತ್ರ್ಯ? ನಾವು ಇಷ್ಟಪಟ್ಟ ಬದುಕು ಬದುಕುವ ಸ್ವಾತಂತ್ರ್ಯವೇ? ಇಲ್ಲ ಇಷ್ಟಪಟ್ಟದನ್ನು ಪಡೆಯುವ ಸ್ವಾತಂತ್ರ್ಯವೇ? ಅಲ್ಲ ಇಷ್ಟಪಟ್ಟಲ್ಲಿ ಹೋಗುವ ಸ್ವಾತಂತ್ರ್ಯವೇ? ಇಷ್ಟಪಟ್ಟ ಬದುಕು ಬದುಕಬಾರದು, ಹೋಗಬಾರದು, ಮಾಡಬಾರದೆಂದು ಯಾರು ಅಡ್ಡಿಪಡಿಸುತ್ತಿಲ್ಲ. ಆದರೂ ಬದುಕಲಾಗುತ್ತಿಲ್ಲ, ಹೋಗಲಾಗುತ್ತಿಲ್ಲ, ಮಾಡಲಾಗುತ್ತಿಲ್ಲ ಏಕೆ? ಏಕೆಂದು ಅರ್ಥವಾಗಬೇಕಾದರೆ ನಮ್ಮ ಸ್ವಾತಂತ್ರ್ಯದ ಬಗ್ಗೆ ಅಲ್ಪಸ್ವಲ್ಪ ಅರಿವು ಬೇಕು.
ನಮ್ಮದೊಂದು ಲಿಬರಲ್ ಡೆಮಾಕ್ರಸಿ. ಅಂದರೆ ನಮ್ಮ ಡೆಮಾಕ್ರಸಿಯಲ್ಲಿ ರಾಜಕೀಯ ಸ್ವಾತಂತ್ರ್ಯಕ್ಕೆ ಹೆಚ್ಚಿನ ಮಹತ್ವ. ವಾಖ್, ಅಭಿವ್ಯಕ್ತಿ, ಸಂಘಟನಾ ಸ್ವಾತಂತ್ರ್ಯಗಳನ್ನು ಸಂವಿಧಾನ ನೀಡಿದೆ. ರಾಜಕೀಯ ಪಕ್ಷಗಳು, ತರಗತಿಗಳ ಪಠ್ಯಗಳು, ಮಾಧ್ಯಮಗಳು ಇವೇ ಸ್ವಾತಂತ್ರ್ಯದ ಬಗ್ಗೆ ಮಾತಾಡುತ್ತಿವೆ. ಆದುದರಿಂದ ನಮ್ಮಲ್ಲಿ ಸ್ವಾತಂತ್ರ್ಯಕ್ಕೇನೂ ಕೊರತೆ ಇಲ್ಲ, ಯಾರು ಏನು ಆಗಬಹುದು, ಭಾರತದ ಪ್ರಧಾನಿ ಆಗಬಹುದು, ಅಧ್ಯಕ್ಷರಾಗಬಹುದು, ದೇಶದದ ಎಲ್ಲೂ ಸುತ್ತಾಡಬಹುದು, ಎಲ್ಲೂ ವ್ಯಾಪಾರ ಮಾಡಬಹುದು ಇತ್ಯಾದಿ ಸ್ವಾತಂತ್ರ್ಯದ ಅತ್ಯಂತ ಸಡಿಲ ದೃಷ್ಟಿಕೋನ ಗಟ್ಟಿಯಾಗಿದೆ. ವಾಸ್ತವದಲ್ಲಿ ಬಹುತೇಕರಿಗೆ ಇವು ಯಾವುದನ್ನು ಮಾಡಲಾಗುವುದಿಲ್ಲ. ಏಕೆಂದರೆ ರಾಜಕೀಯ ಸ್ವಾತಂತ್ರ್ಯವನ್ನು ಆಚರಿಸಬೇಕಾದರೆ ನಮಗೆ ಆರ್ಥಿಕ ಸ್ವಾತಂತ್ರ್ಯ ಬೇಕು.
ದೇಶದ ಪ್ರಧಾನಿ ಅಥವಾ ಅಧ್ಯಕ್ಷರಾಗುವ ಕನಸು ಬಿಡಿ ಪಕ್ಕದ ಪಂಚಾಯತ್‌ಲ್ಲಿ ಸದಸ್ಯರಾಗುವುದು ಕೂಡ ಬಹುತೇಕರಿಗೆ ಕಷ್ಟ. ಏಕೆಂದರೆ ಪಂಚಾಯತ್ ಸದಸ್ಯರಾಗಲು ಕೆಲವು ಲಕ್ಷ ರೂಗಳ ವಿನಿಯೋಜನೆಯ ಅಗತ್ಯವಿದೆ. ಇದೇ ಕಾರಣದಿಂದ ಪಂಚಾಯತ್ ಸದಸ್ಯರಾಗುವುದು, ಎಂಎಲ್‌ಎ, ಎಂಪಿಗಳಾಗುವುದು ಇವೆಲ್ಲ ಒಂದು ಸಣ್ಣ ವರ್ಗಕ್ಕೆ ಸಾಧ್ಯವಾಗುವ ಸ್ವಾತಂತ್ರ್ಯಗಳು. ಆದರೆ ನಾವೆಲ್ಲ ಮನಸ್ಸು ಮಾಡಿದರೆ ಮತ ಚಲಾಯಿಸಬಹುದು. ಆದರೆ ಇಲ್ಲೂ ನಾವು ಇಷ್ಟಪಟ್ಟ ವ್ಯಕ್ತಿಗೆ ಅಥವಾ ಪಕ್ಷಕ್ಕೆ ಮತ ಚಲಾಯಿಸುವುದು ಕಷ್ಟ. ಏಕೆಂದರೆ ಇಷ್ಟಪಟ್ಟ ಅಭ್ಯರ್ಥಿ ಆರ್ಥಿಕವಾಗಿ ಬಲಾಢ್ಯರಲ್ಲ. ಚುನಾವಣ ಪ್ರಚಾರದ ಮೇಲೆ ಖರ್ಚು ಮಾಡುವ ಶಕ್ತಿ ಇಲ್ಲ. ಅದಕ್ಕಿಂತಲೂ ಮುಖ್ಯವಾಗಿ ಬೇರೆಯವರೆಲ್ಲ ಪ್ರತಿ ಓಟಿಗೆ ಕೆಲವು ಸಾವಿರ ಕೊಡುವಾಗ ಇವರು ಒಂದು ನಯಾಪೈಸೆ ಬಿಚ್ಚಿಲ್ಲ. ದುಡ್ಡು ಕೊಟ್ಟವರನ್ನು ಬಿಟ್ಟು ದುಡ್ಡು ಕೊಡದವರಿಗೆ ಮತ ಚಲಾಯಿಸಲು ಮನಸಾಕ್ಷಿ ಒಪ್ಪುವುದಿಲ್ಲ. ಜೊತೆಗೆ ದುಡ್ಡು ಕೊಟ್ಟವರು ಕುಟುಂಬದವರ ದೇವರ ಮುಂದೆ ಪ್ರತಿಜ್ಞೆ ಮಾಡಿಸಿದ್ದಾರೆ. ಇವೆಲ್ಲ ರಾಜಕೀಯ ಸ್ವಾತಂತ್ರ್ಯದ ಆಚರಣೆಗೆ ಆರ್ಥಿಕ ಸ್ವಾತಂತ್ರ್ಯ ಮುಖ್ಯ ಎಂದು ಹೇಳುವ ನಕರಾತ್ಮಕ ಉದಾಹರಣೆಗಳು.
ಇದನ್ನೂ ಓದಿ : ಸಂವಿಧಾನ ಅನುಷ್ಠಾನ ಶಿಕ್ಷಣ ಸುಧಾರಣೆ ಮೇಲೆ ನಿಂತಿದೆ
ಸಕರಾತ್ಮಕ ಉದಾಹರಣೆ ನೋಡುವ. ಈ ಬಾರಿ ಕರ್ನಾಟಕದ ಎಸೆಂಬ್ಲಿ ಚುನಾವಣೆಗೆ ಕಾಂಗ್ರೆಸ್ ಪಕ್ಷ 5 ಗ್ಯಾರಂಟಿಗಳ ಭರವಸೆ ನೀಡಿದೆ. ನೀವು ಕಾಂಗ್ರೆಸ್ ಪಕ್ಷ ಗ್ಯಾರಂಟಿಗಳಿಂದ ಆಕರ್ಷಿತರಾಗಿ ಪಕ್ಷಕ್ಕೆ ತಮ್ಮ ಮತ ಎನ್ನುವ ತೀರ್ಮಾನಕ್ಕೆ ಬಂದಿದ್ದೀರಿ. ಆವಾಗ ನಿಮ್ಮ ಸ್ನೇಹಿತ ಹೇಳುತ್ತಾರೆ ಈ ಗ್ಯಾರಂಟಿಗಳು ನಿಮ್ಮ ಬಡತನ ನಿವಾರಿಸುವುದಿಲ್ಲ, ಬಡತನ ನಿವಾರಣೆ ಆಗಬೇಕಾದರೆ ಒಂದಿಷ್ಟು ಭೂಮಿ ಅಥವಾ ಬಂಡವಾಳ ಬೇಕು, ಇವು ಇಲ್ಲವಾದರೆ ಕನಿಷ್ಠ ಉಚಿತ ಶಿಕ್ಷಣ, ಆರೋಗ್ಯಗಳಾದರೂ ಬೇಕು. ನಮ್ಮ ಪಕ್ಷ ಗೆದ್ದರೆ ಇವನ್ನೆಲ್ಲ ನೀಡಲು ರೆಡಿ ಇದೆ ತಮ್ಮ ಪಕ್ಷವನ್ನು ಬೆಂಬಲಿಸಿ ಎನ್ನುತ್ತಾರೆ. ನಿಮ್ಮ ಸ್ನೇಹಿತರ ಮಾತು ಸರಿ ಎಂದು ಕಂಡರೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ನಿಮ್ಮ ನಿರ್ಧಾರದಿಂದ ಹಿಂದಕ್ಕೆ ಸರಿಯುವುದಿಲ್ಲ. ಏಕೆಂದರೆ ಭೂಮಿ, ಬಂಡವಾಳ ನೀಡುವ ಪಕ್ಷ ಅಧಿಕಾರಕ್ಕೆ ಬರುವುದರ ಬಗ್ಗೆ ನಿಮಗೆ ಖಾತ್ರಿ ಇಲ್ಲ. ಅಂದರೆ ಈ ಭರವಸೆಗಳೆಲ್ಲ ಈಡೇರಲು ವರ್ಷಗಳು ಬೇಕು. ಆದರೆ ನಿಮ್ಮ ಆರ್ಥಿಕ ಸಮಸ್ಯೆ ಎಷ್ಟು ಗಂಭೀರ ಇದೆಯೆಂದರೆ ವರ್ಷ ಬಿಡಿ ಕೆಲವು ದಿನ ಕಾಯವ ಸ್ಥಿತಿಯಲ್ಲಿ ನೀವಿಲ್ಲ. ಹೀಗೆ ನಿಮ್ಮ ಆರ್ಥಿಕ ಸ್ಥಿತಿಯಿಂದಾಗಿ ನೀವು ಇಷ್ಟಪಟ್ಟ ರೀತಿಯಲ್ಲಿ ನಿಮ್ಮ ರಾಜಕೀಯ ಸ್ವಾತಂತ್ರ್ಯವನ್ನು ಚಲಾಯಿಸಲು ಸಾಧ್ಯವಾಗುವುದಿಲ್ಲ.
ರಾಜಕೀಯ ಪಕ್ಷಗಳು, ಸರಕಾರಗಳು ಮನಸ್ಸು ಮಾಡಿದರೆ ನಿಮ್ಮನ್ನು ಇಂತಹ ಸಂದಿಗ್ಧ ಸ್ಥಿತಿಯಿಂದ ಪಾರು ಮಾಡಬಹುದು. ಅದು ಹೇಗೆ? ಹೇಗೆಂದರೆ ನಿಮ್ಮ ಆರ್ಥಿಕ ಸಾಮರ್ಥ್ಯವನ್ನು ವೃದ್ಧಿಸುವ ಮೂಲಕ ನಿಮ್ಮ ಆರ್ಥಿಕ ಸ್ವಾತಂತ್ರ್ಯವನ್ನು ಹೆಚ್ಚಿಸಬಹುದು. ಸರಕಾರದ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ನೀತಿಗಳು ಜನಸಾಮಾನ್ಯರ ಆರ್ಥಿಕ ಸಾಮರ್ಥ್ಯವನ್ನು ಕುಗ್ಗಿಸಲೂಬಹುದು, ಹೆಚ್ಚಿಸಲೂಬಹುದು. ಒಂದು ವೇಳೆ ಸರಕಾರ ಶ್ರೀಮಂತರಿಂದ ಹೆಚ್ಚು ತೆರಿಗೆ ಸಂಗ್ರಹ ಮಾಡಿದರೆ ಬಡವರ ಆದಾಯದ ಬಹುಭಾಗ ಅವರ ಸ್ವಾಧೀನ ಉಳಿಯುತ್ತದೆ. ಇದರ ಬದಲು ಬಡವರಿಂದ ಹೆಚ್ಚು ತೆರಿಗೆ ಸಂಗ್ರಹ ಮಾಡಿದರೆ ಅವರ ಅಲ್ಪಸ್ವಲ್ಪ ಆದಾಯ ಕೂಡ ಸರಕಾರದ ಪಾಲಾಗುತ್ತದೆ. ಇದೇ ರೀತಿ ಸರಕಾರ ಉಚಿತ ಗುಣಮಟ್ಟದ ಶಿಕ್ಷಣ, ಆರೋಗ್ಯಗಳನ್ನು ನೀಡಿದರೆ ಬಡವರು ತಮ್ಮ ಸ್ವಂತ ಜೇಬಿನಿಂದ ಖರ್ಚು ಮಾಡುವುದು ತಪ್ಪುತ್ತದೆ. ಸರಕಾರ ಶಿಕ್ಷಣ, ಆರೋಗ್ಯಗಳ ಮೇಲೆ ಖರ್ಚು ಮಾಡದಿದ್ದರೆ ಬಡವರು ದುಡಿದು ಬಹುಭಾಗ ಶಿಕ್ಷಣ, ಆರೋಗ್ಯಗಳ ಮೇಲೆ ಖರ್ಚು ಮಾಡಬೇಕಾಗುತ್ತದೆ.
ಸರಕಾರಿ ಬ್ಯಾಂಕ್‌ಗಳ ಕಡಿಮೆ ಬಡ್ಡಿ ಸಾಲದ ಬಹುಭಾಗವವನ್ನು ಬಡವರಿಗೆ ನೀಡಿದರೆ ಅವರು ಲೇವಾದೇವಿಯವರಿಂದ ದುಬಾರಿ ಬಡ್ಡಿಗೆ ಸಾಲ ಮಾಡುವುದು ತಪ್ಪುತ್ತದೆ.
ಹೀಗೆ ಬಡವರ ಆರ್ಥಿಕ ಸಾಮರ್ಥ್ಯವನ್ನು ವೃದ್ಧಿಸುವ ಹಲವು ಮಾರ್ಗಗಳು ಸರಕಾರದ ವಶ ಇವೆ. ಈ ಕ್ರಮಗಳನ್ನು ಸರಕಾರ ಕೈಗೊಂಡರೆ ಬಡವರ ಆರ್ಥಿಕ ಸ್ವಾತಂತ್ರ್ಯ ವೃದ್ಧಿಸುತ್ತದೆ. ಅವರು ನಮ್ಮ ರಾಜಕೀಯ ಸ್ವಾತಂತ್ರ್ಯವನ್ನು ಮಾರಿಕೊಳ್ಳುವ ಸ್ಥಿತಿ ನಿರ್ಮಾಣ ಆಗುವುದಿಲ್ಲ. ಆದರೆ ಈಗ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರಕಾರದ ಆರ್ಥಿಕ ನೀತಿಗಳು ಬಡವರ ಅರ್ಥಿಕ ಸ್ವಾತಂತ್ರ್ಯವನ್ನು ವೃದ್ಧಿಸುವ ರೂಪದಲ್ಲಿ ಇಲ್ಲ. ಬಹುಪಾಲು ಆರ್ಥಿಕ ನೀತಿಗಳು ಅನುಕೂಲಸ್ಥರ ಆರ್ಥಿಕ ಸಾಮರ್ಥ್ಯವನ್ನು ವೃದ್ದಿಸುತ್ತಿವೆ. ಇಂತಹ ಅರ್ಥಿಕ ನೀತಿಗಳನ್ನು ಜಾರಿಗೊಳಿಸಿ ಧ್ವಜವನ್ನು ಎತ್ತರಕ್ಕೆ ಹಾರಿಸಿದರೆ, ಧ್ವಜದೊಂದಿಗೆ ಸೆಲ್ಫಿ ಕ್ಲಿಕ್ ಮಾಡಿದರೆ, ಸಿನಿಮಾ ಥಿಯೇಟರ್‌ಲ್ಲಿ ರಾಷ್ಟ್ರಗೀತೆ ಹಾಡಿಸಿದರೆ ಬಡವರ ರಾಜಕೀಯ ಸ್ವಾತಂತ್ರ್ಯ ವೃದ್ದಿಸುವುದಿಲ್ಲ. ರಾಜಕೀಯ ಸ್ವಾತಂತ್ರ್ಯ ವೃದ್ಧಿಸದಿದ್ದರೆ ಬಡವರು ತಮ್ಮ ಆಸಕ್ತಿಗೆ ವಿರುದ್ದ ಇರುವ ಆರ್ಥಿಕ, ಸಾಮಾಜಿಕ ಪಾಲಿಸಿ ತರುವವರನ್ನು ಚುನಾಯಿಸುತ್ತಾರೆ.
ಎಲ್ಲಿ ಹಣದ ಆಮಿಷ ತೋರಿ ರಾಜಕೀಯ ಸ್ವಾತಂತ್ರ್ಯದ ಮೊದಲ ಸೋಪಾನವನ್ನೇ ಮಲಿನಗೊಳಿಸಿಬಿಡುತ್ತಾರೋ ಅಲ್ಲೇ ಬಡವರ ಆರ್ಥಿಕ ಸ್ವಾತಂತ್ರ್ಯ ಅಪಹರಣ ವಾಗಿಬಿಟ್ಟಿರುತ್ತದೆ. ಬಂಡವಾಳ ಹೂಡಿ ಬಂದಿದ್ದು ಬಡವರ ಆರ್ಥಿಕ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯಲಲ್ಲ. ಬಂಡವಾಳ ಹಾಕದೆ ಸಂವಿಧಾನದ ಘೋಷಣೆಯ ಮಿತಿಯೊಳಗೆ ಗೆದ್ದು ಬಂದವನನ್ನು ನಾಕಾಣಲಿಲ್ಲ.
ಎರಡನೆಯದಾಗಿ ಜಾತಿ ಭಾರತದಲ್ಲಿ ರಾಜಕೀಯ ಎಂಬುದು ಜಾತಿಯ ವಿಷಭಾಗವನುಂಡು, ನಂಜು ಹಿಡಿದು ಸಾವ ನಿದ್ರೆಯಲ್ಲಿ ಚಲನರಹಿತವಾಗಿ ಬಿದ್ದು ಜಡವಾಗಿಬಿಟ್ಟಿದೆ. ಇಲ್ಲಿಯವರೆಗೆ ಸಂವಿಧಾನದ ಚಾಲ್ತಿಯಿಂದಾಗಿ ಜಡಗಟ್ಟಿದ ಜಾತಿಯ ನಂಜಿನ ಸ್ಥಿತಿಯಿಂದ ಬಿಡಿಸಿಕೊಳ್ಳಲು
ಸಾಧ್ಯವಾಗಿದೆಯೇ ಎಂದು ತಿರುಗಿ ನೋಡಿದರೆ ಸಾಧ್ಯವಾಗಿಲ್ಲ ಎಂದೇ ಹೇಳಬೇಕು.
ಬಹುಸಂಖ್ಯಾತ ದಲಿತರು ೭೭ ವರ್ಷಗಳ ನಂತರವೂ ಪ್ರಧಾನಿ ಆಗಲು, ಮುಖ್ಯಮಂತ್ರಿ ಆಗಲು ಸಾಧ್ಯವಾಗಲಿಲ್ಲ. ಜಾತಿಯ ಮೇಲಾಟಗಳೇ ನಮ್ಮದೇಶದ ರಾಜಕೀಯ ಮೇಲಾಟಗಳಾಗಿವೆ. ಬಸವಾದಿ ಶರಣರ, ಬುದ್ಧನ ಜಾತಿರಹಿತ ಆಲೋಚನೆಗಳು ಈ ನೆಲದಲ್ಲಿ ನೆಲೆಗೊಳ್ಳಲು ಯಾವ ಮನಸುಗಳು ಬಿಡಲಿಲ್ಲವೊ ಅದೇ ಮನಸುಗಳು ದೇಶವನ್ನು ಆಳುತ್ತಿವೆ. ಅವರ ಆಲೋಚನೆಗೆ ತಕ್ಕಂತೆ ಫಲಿತಾಂಶ ಇರುತ್ತದೆ. ಇಲ್ಲಿ ಸ್ವಾತಂತ್ರ್ಯ ಎಂಬುದು ಅವರು ಕೊಟ್ಟಂತಿರಬೇಕು. ಅದಕ್ಕೇ ಅಲ್ಲವೆ ಇರುವ ಕಾನೂನುಗಳನ್ನು ‘ವಿದೇಶಿ ಕಾನೂನುಗಳು’ ಹೆಸರಿನಲ್ಲಿ ಕಿತ್ತೂ ಕಿತ್ತೂ ಹಳ್ಳ ಹಿಡಿಸುತ್ತಿರುವುದು.