ಕಾನೂನು ಮತ್ತು ಕಾಶಿ-ಮಥುರಾ: ಹೆಚ್ಚು ಮೂಲಭೂತ ಸವಾಲು

ಪ್ರಕಾಶ್ ಕಾರಟ್‌

ಧಾರ್ಮಿಕ ಪೂಜಾ ಸ್ಥಳಗಳ ಕಾನೂನು ನಮ್ಮ ರಾಜಕೀಯ ವ್ಯವಸ್ಥೆಯ ಜಾತ್ಯತೀತ ಲಕ್ಷಣಗಳನ್ನು ರಕ್ಷಿಸುವ ಶಾಸನಾತ್ಮಕ ಸಾಧನವಾಗಿದೆ ಎಂದು ಈ ಕಾನೂನಿನ ಸಿಂಧುತ್ವವನು ಸ್ಪಷ್ಟವಾಗಿ ಸರ್ವೋನ್ನತ ನ್ಯಾಯಾಲಯವೇ ಹೇಳಿರುವಾಗ ಅದೀಗ ಇದರ ನಿಬಂಧನೆಗಳನ್ನು ದೃಢವಾಗಿ ಎತ್ತಿ ಹಿಡಿಯದಿರುವುದು ಹಾಗೂ ವಾರಾಣಸಿಯ ಸಿವಿಲ್ ಕೋರ್ಟಿನಲ್ಲಿ  ಸಲ್ಲಿಕೆಯಾಗಿರುವ ಅರ್ಜಿಯ ಪ್ರಕ್ರಿಯೆಗಳನ್ನು ತಿರಸ್ಕರಿಸದಿರುವುದು ತೀರಾ ನಿರಾಶಾದಾಯಕ ಸಂಗತಿ.

ರಾಮಜನ್ಮಭೂಮಿ ಚಳವಳಿ ನಡೆಯುತ್ತಿದ್ದ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮತ್ತು ಇತರ ಹಿಂದುತ್ವ ಸಂಘಟನೆಗಳು `ಅಯೋಧ್ಯಾ ಸಿರ್ಫ್ ಏಕ್ ಝಂಕಿ ಹೈ, ಮಥುರಾ ಔರ್ ಕಾಶಿ ಬಾಕಿ ಹೈ’ ಎಂಬ ಘೋಷಣೆ ಮೊಳಗಿಸಿದ್ದವು. `ಅಯೋಧ್ಯೆ ಆರಂಭವಷ್ಟೇ. ಮಥುರಾ ಮತ್ತು ಕಾಶಿ ಬಾಕಿಯಿದೆ’ ಎನ್ನುವುದು ಅದರ ಅರ್ಥ.

ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಇದ್ದ ಜಾಗದಲ್ಲೇ ರಾಮ ಮಂದಿರ ಕಟ್ಟುವ ಹೋರಾಟದಲ್ಲಿ ಗೆಲುವು ಸಾಧಿಸಿದ ನಂತರ; ಅಯೋಧ್ಯೆಯಲ್ಲಿ ಮಂದಿರಕ್ಕೆ ಶಿಲಾನ್ಯಾಸ ಮಾಡಿದ ಎರಡು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ, ಅದೇ ಶಕ್ತಿಗಳು ಕಾಶಿ ಮತ್ತು ಮಥುರೆಗಾಗಿ ಹೋರಾಟ ಆರಂಭಿಸಿವೆ. ವಾರಾಣಸಿಯ ಜ್ಞಾನವಾಪಿ ಮಸೀದಿ ಮತ್ತು ಮಥುರೆಯ ಷಾಹಿ ಈದ್ಗಾ ಅವುಗಳ ಟಾರ್ಗೆಟ್ ಆಗಿವೆ. 17ನೇ ಶತಮಾನದಲ್ಲಿದ್ದ ದೇವಸ್ಥಾನಗಳ ಮೇಲೆ ಅವುಗಳನ್ನು ನಿರ್ಮಿಸಲಾಗಿದೆ ಎನ್ನುವುದು ಅವುಗಳ ವಾದವಾಗಿದೆ. ಮೊಘಲ್ ಸಾಮ್ರಾಟ ಔರಂಗಜೇಬನ ಕಾಲದಲ್ಲಿ ಅದು ನಡೆದಿತ್ತು ಎನ್ನುವುದು ಐತಿಹಾಸಿಕ ವಾಸ್ತವವಾಗಿದೆ.

ಇತಿಹಾಸದ ತಪ್ಪುಗಳನ್ನು ಸರಿಪಡಿಸುವುದು ಆರ್‌ಎಸ್‌ಎಸ್ ಮತ್ತು ಹಿಂದೂತ್ವ ಶಕ್ತಿಗಳ ಆದ್ಯತೆಯಾಗಿದೆ. ಇತಿಹಾಸವನ್ನು ಕಾಮಾಲೆ ಕಣ್ಣಿನಿಂದ ನೋಡುವ ಅವರ ದೃಷ್ಟಿಯಲ್ಲಿ ಮುಸ್ಲಿಂ ಆಡಳಿತವು ಭಾರತೀಯರಿಗೆ ದಾಸ್ಯತ್ವವಾಗಿದ್ದು ಈ ಗುಲಾಮಗಿರಿಯ ಎಲ್ಲ ಕುರುಹುಗಳನ್ನು ಅಳಿಸಿಹಾಕಬೇಕೆಂದು ಅವರು ಹೇಳುತ್ತಾರೆ. ಮಸೀದಿಗಳ ಅಸ್ತಿತ್ವವನ್ನು ಕಾನೂನು ಮೂಲಕವಾಗಿ ಪ್ರಶ್ನಿಸಲು ಆರಂಭಿಸಿದರೂ ಕಾಶಿ ಮತ್ತು ಮಥುರಾವನ್ನು `ಕಬ್ಜಾ’ ಮಾಡುವ ಕುತ್ಸಿತ ಹುನ್ನಾರ ಮೊದಲೇ ಆರಂಭವಾಗಿತ್ತು.

ಕಾನೂನು ಮಾರ್ಗದ ಮೂಲಕದ ಪ್ರಕ್ರಿಯೆಯಲ್ಲಿ ವಾರಾಣಸಿ ಮತ್ತು ಮಥುರಾ ಕೋರ್ಟ್‌ಗಳಲ್ಲಿ ಕಾಶಿ ವಿಶ್ವನಾಥ ಮಂದಿರ-ಗ್ಯಾನವಾಪಿ ಮಸೀದಿ ಹಾಗೂ ಕೃಷ್ಣ ಜನ್ಮಭೂಮಿ ದೇವಾಲಯ-ಈದ್ಗಾ ಜಮೀನಿನ ಸಂಬಂಧವಾಗಿ ಹಲವಾರು ಅರ್ಜಿಗಳನ್ನು ಸಲ್ಲಿಸಲಾಗಿದೆ. ದೆಹಲಿಯ ಕುತುಬ್ ಮಿನಾರ್, ಮಧ್ಯ ಪ್ರದೇಶದ ಭೋಜಶಾಲಾ ಸಂಕೀರ್ಣ ಮಾತ್ರವಲ್ಲದೆ ಆಗ್ರಾದ ತಾಜ್ ಮಹಲ್‌ನಲ್ಲಿ ಕೂಡ ಶಿಲ್ಪಗಳು ಮತ್ತು ದೇವತೆಗಳ ವಿಗ್ರಹಗಳಿವೆ ಎಂದು ವಾದಿಸಿಯೂ ಅರ್ಜಿಗಳನ್ನು ಸಲ್ಲಿಸಲಾಗಿದೆ.

ಇಂಥ ವಿಭಜನಕಾರಿ ಹಾಗೂ ಪ್ರತಿಗಾಮಿ ವಿವಾದಗಳಿಗೆ ಕೊನೆ ಹಾಡಬೇಕೆಂಬ ಉದ್ದೇಶದಿಂದಲೇ ಸಂಸತ್ತು ಪಿ.ವಿ. ನರಸಿಂಹ ರಾವ್ ಸರಕಾರದ ಅವಧಿಯಲ್ಲಿ 1991ರ ಧಾರ್ಮಿಕ ಪೂಜಾ ಸ್ಥಳಗಳು (ವಿಶೇಷ ನಿಯಮಗಳು) ಕಾನೂನನ್ನು ರಚಿಸಿತ್ತು. ಈ ಕಾನೂನಿನ ಸೆಕ್ಷನ್ 3, ಪೂಜಾ ಸ್ಥಳಗಳನ್ನು ಪರಿವರ್ತಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸುತ್ತದೆ. 1947ರ ಆಗಸ್ಟ್ 15 ರಂದು ಇದ್ದಂಥ ಪೂಜಾ ಸ್ಥಳಗಳ ಸ್ವರೂಪವು ಆ ದಿನ ಇದ್ದಂತೆಯೇ ಮುಂದುವರಿಯಬೇಕೆಂದು ಸೆಕ್ಷನ್ 4 (1) ನಮೂದಿಸಿದೆ. ಪೂಜಾ ಸ್ಥಳಗಳ ಸ್ವರೂಪವನ್ನು ಬದಲಾಯಿಸುವುದಕ್ಕೆ ಸಂಬಂಧಿಸಿ ಹೊಸದಾಗಿ ಯಾವುದೇ ಉಪಕ್ರಮಕ್ಕೆ ಮುಂದಾಗುವುದನ್ನು ಸೆಕ್ಷನ್ 4 (2) ನಿಷೇಧಿಸಿದೆ. ಯಾವುದೇ ಕಾನೂನು ಪ್ರಕ್ರಿಯೆಗಳು ಬಾಕಿಯಿದ್ದಲ್ಲಿ ಅವುಗಳು ಹಾಗೇ ಇರಬೇಕೆಂದೂ (ಸ್ಟಾಂಡ್ ಅಬೇಟೆಡ್) ಅದು ತಿಳಿಸಿದೆ. ಜಮೀನಿನ ಮೂಲ ದಾವೆಯ ಸಂಬಂಧ ವಿವಾದ ಕೋರ್ಟ್ಗಳಲ್ಲಿ ಇದ್ದಿದ್ದರಿಂದ ರಾಮಜನ್ಮಭೂಮಿ ವಿವಾದಕ್ಕೆ ಮಾತ್ರ ಇದರಿಂದ ವಿನಾಯಿತಿ ನೀಡಲಾಗಿತ್ತು.

ಜ್ಞಾನವಾಪಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ, ಮಸೀದಿ ಸಂಕೀರ್ಣದಲ್ಲಿ ಇರುವ `ಮಾ ಶೃಂಗಾರಿ ಗೌರಿ’ ವಿಗ್ರಹಕ್ಕೆ ಪೂಜೆ ಸಲ್ಲಿಸಲು ಅವಕಾಶ ಕೋರಿ ಕೆಲವು ಮಹಿಳೆಯರು ಸಲ್ಲಿಸಿದ್ದ ಅರ್ಜಿ ಆಧಾರದಲ್ಲಿ ವಾರಾಣಸಿಯ ಸಿವಿಲ್ ಕೋರ್ಟ್ ಮಸೀದಿ ಸಂಕೀರ್ಣದ ವಿಡಿಯೋಗ್ರಫಿ ಸಮೀಕ್ಷೆ ನಡೆಸುವಂತೆ ಆದೇಶಿಸಿತ್ತು. ಇದು ಧಾರ್ಮಿಕ ಪೂಜಾ ಸ್ಥಳಗಳ ಕಾನೂನಿಗೇ ವ್ಯತಿರಿಕ್ತವಾದ ಆದೇಶವಾಗಿದೆ. ಪೂಜಾ ಸ್ಥಳದ ಪ್ರಸ್ತುತ ಸ್ವರೂಪವನ್ನು ಪ್ರಶ್ನಿಸುವ ಅಥವಾ ಅದನ್ನು ಹೀಗಳೆಯುವ ಯಾವುದೇ ಪ್ರಯತ್ನ ಮಾಡಬಾರದೆಂಬ ನಿಯಮದ ಉಲ್ಲಂಘನೆಯಾಗಿದೆ. ವಿಡಿಯೋಗ್ರಫಿ ಸಮೀಕ್ಷೆ ನಡೆಸಿದ ರೀತಿಯೇ ಪ್ರಶ್ನಾರ್ಹವಾಗಿದೆ. ಮಸೀದಿಯ ಆವರಣದಲ್ಲಿರುವ ಕೊಳದಲ್ಲಿ ಒಂದು `ಶಿವಲಿಂಗ’ ಸಿಕ್ಕಿದೆ ಎಂಬ ವರದಿಯನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಲಾಗಿದೆ. ಆ ಕಲ್ಲಿನ ರಚನೆಯು ಒಂದು ಕಾರಂಜಿಯಾಗಿದೆ ಎಂದು ಮಸೀದಿಯ ಆಡಳಿತ ಮಂಡಳಿಯವರು ಹೇಳಿದ್ದಾರೆ.

ಸಿವಿಲ್ ನ್ಯಾಯಾಲಯದ ಆದೇಶ ಪ್ರಶ್ನಿಸಿ ಹಾಗೂ ಪೂಜೆಗೆ ಅವಕಾಶ ಕೋರಿದ ಅರ್ಜಿಯನ್ನು ಮಾನ್ಯ ಮಾಡದಂತೆ ಕೋರಿ ಮಸೀದಿಯ ಅಧಿಕಾರಿಗಳು ಸುಪ್ರೀಂ ಕೋರ್ಟ್ ಮೊರೆ ಹೋದಾಗ; ಸರ್ವೋನ್ನತ ನ್ಯಾಯಾಲಯವು ವಿಡಿಯೋ ಸಮೀಕ್ಷೆಗೆ ತಡೆ ನೀಡಲಿಲ್ಲ. ಇಲ್ಲವೇ ಪೂಜಾ ಸ್ಥಳಗಳ ಕಾನೂನಿನ ಉಲ್ಲಂಘನೆಯಾಗುವ ಅರ್ಜಿಯನ್ನು ನಿರ್ಬಂಧಿಸಲು ಮಧ್ಯ ಪ್ರವೇಶ ಮಾಡಲೂ ಇಲ್ಲ. `ಧಾರ್ಮಿಕ ಸ್ಥಳದ ಸ್ವರೂಪವನ್ನು ಖಚಿತಪಡಿಸಿಕೊಳ್ಳುವುದನ್ನು 1991ರ ಕಾನೂನು ನಿರ್ಬಂಧಿಸಿಲ್ಲ’ ಎಂದು ಜಸ್ಟಿಸ್ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠ ಹೇಳಿದೆ. ಇಂಥದ್ದೊಂದು ಧೋರಣೆಯು ಅಯೋಧ್ಯೆ ವಿವಾದದ ಸಂಬಂಧ 2019ರಲ್ಲಿ ಸ್ವತಃ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿನ ಅಂತಃಸತ್ವಕ್ಕೇ ವಿರುದ್ಧವಾಗುತ್ತದೆ. ಆ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಹೀಗೆ ಹೇಳಿತ್ತು:

`ಕಾನೂನು ಪ್ರಭುತ್ವ ಮಾತ್ರವಲ್ಲದೆ ದೇಶದ ಪ್ರಜೆಗಳನ್ನು ಉದ್ದೇಶಿಸಿರುತ್ತದೆ. ಪ್ರಭುತ್ವವು ಕಾನೂನು ರೂಪಿಸುವ ಮೂಲಕ ಸಾಂವಿಧಾನಿಕ ಬದ್ಧತೆಯನ್ನು ಜಾರಿ ಮಾಡುತ್ತದೆ ಹಾಗೂ ಎಲ್ಲ ಧರ್ಮಗಳು ಮತ್ತು ಸಂವಿಧಾನದ ಮೂಲ ಲಕ್ಷಣದ ಭಾಗವಾದ ಜಾತ್ಯತೀತತೆಯ ಸಾಂವಿಧಾನಿಕ ಬಾಧ್ಯತೆಗಳನ್ನು ಈಡೇರಿಸುತ್ತದೆ. ಧಾರ್ಮಿಕ ಪೂಜಾ ಸ್ಥಳಗಳ ಕಾನೂನು ಭಾರತೀಯ ಸಂವಿಧಾನದಲ್ಲಿ ನಮೂದಿಸಲಾಗಿರುವ ಜಾತ್ಯತೀತತೆಯ ಬದ್ಧತೆಗೆ ನಿಸ್ಸಂದೇಹವಾದ ಬಾಧ್ಯತೆಯನ್ನು ಹೇರುತ್ತದೆ. ಹೀಗಾಗಿ ಈ ಕಾನೂನು ನಮ್ಮ ರಾಜಕೀಯ ವ್ಯವಸ್ಥೆಯ ಜಾತ್ಯತೀತ ಲಕ್ಷಣಗಳನ್ನು ರಕ್ಷಿಸುವ ಶಾಸನಾತ್ಮಕ ಸಾಧನವಾಗಿದೆ. ಪೂಜಾ ಸ್ಥಳಗಳ ಕಾನೂನು ನಮ್ಮ ಜಾತ್ಯತೀತ ಮೌಲ್ಯಗಳ ಅಗತ್ಯ ಲಕ್ಷಣವನ್ನು ರಕ್ಷಿಸುವ ಶಾಸನಾತ್ಮಕ ಮಧ್ಯಪ್ರವೇಶವಾಗಿದೆ’.

ಪೂಜಾ ಸ್ಥಳಗಳ ಕಾನೂನಿನ ಸಿಂಧುತ್ವವನ್ನು ಇಷ್ಟು ಸ್ಪಷ್ಟವಾಗಿ ಸರ್ವೋನ್ನತ ನ್ಯಾಯಾಲಯವೇ ಹೇಳಿರುವಾಗ ಅದು ಈಗ ಕಾನೂನಿನ ನಿಯಮಗಳನ್ನು ದೃಢವಾಗಿ ಎತ್ತಿ ಹಿಡಿಯದಿರುವುದು ಹಾಗೂ ವಾರಾಣಸಿಯ ಸಿವಿಲ್ ಕೋರ್ಟ್ನಲ್ಲಿ ಸಲ್ಲಿಕೆಯಾಗಿರುವ ಅರ್ಜಿಯ ಪ್ರಕ್ರಿಯೆಗಳನ್ನು ತಿರಸ್ಕರಿಸದಿರುವುದು ತೀರಾ ನಿರಾಶಾದಾಯಕ ಸಂಗತಿಯಾಗಿದೆ. ಅದರ ಬದಲು, ವಾರಾಣಸಿ ಜಿಲ್ಲಾ ಹಿರಿಯ ನ್ಯಾಯಾಧೀಶರು ಅರ್ಜಿಯ ವಿಚಾರಣೆ ನಡೆಸುವಂತೆ ನಿರ್ದೇಶಿಸಿದೆ. ಒಂದು ಸ್ಥಳಧ ಧಾರ್ಮಿಕ ಸ್ವರೂಪವನ್ನು ಖಚಿತಪಡಿಸಿಕೊಳ್ಳಲು ಕ್ರಮಕೈಗೊಳ್ಳುವುದು ಕಾನೂನು ಕ್ರಮಗಳ ಸುನಾಮಿಗೇ ಹಾದಿ ಮಾಡಿಕೊಟ್ಟಂತಾಗುತ್ತದೆ. ಹಾಗೂ ಅದರ ಪರಿಣಾಮವಾಗಿ ಅಂತರ್-ಸಮುದಾಯಗಳ ಸಂಬಂಧದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ.

ಕಾಶಿ ಮತ್ತು ಮಥುರೆಯಲ್ಲಿನ ಧಾರ್ಮಿಕ ಸ್ಥಳಗಳ ಸ್ವರೂಪವನ್ನು ಬದಲಾಯಿಸಲು ಕಾನೂನಾತ್ಮಕ ಸವಾಲನ್ನು ಒಡ್ಡಲು ಅವಕಾಶಗಳನ್ನು ನೀಡುವಲ್ಲಿ ನ್ಯಾಯಾಂಗದ ಕೆಳ ಹಂತದ ನ್ಯಾಯಾಧೀಶರು ಶಾಮೀಲಾಗಿರುವುದರಿಂದ ಪರಿಸ್ಥಿತಿ ಇನ್ನಷ್ಟು ಸಂಕೀರ್ಣಗೊಂಡಿದೆ. ಮಥುರೆಯಲ್ಲಿ ಜಿಲ್ಲಾ ಜಡ್ಜ್, ಕೆಳ ನ್ಯಾಯಾಲಯವೊಂದರ ನಿರ್ಧಾರವನ್ನು ತಿರಸ್ಕರಿಸಿ ಮಸೀದಿ ಕಟ್ಟಲಾಗಿರುವ ಜಾಗದ ಒಡೆತನ ಬಯಸಿ ಶ್ರೀಕೃಷ್ಣ ಜನ್ಮಭೂಮಿ ಟ್ರಸ್ಟ್ ಮತ್ತಿತರ ಸಂಘಟನೆಗಳು ಸಲ್ಲಿಸಿರುವ ಮನವಿಗೆ ಅವಕಾಶ ಕಲ್ಪಿಸಿದ್ದಾರೆ. 1991ರ ಕಾನೂನು ಆರಂಭವಾಗುವುದಕ್ಕೂ ಮುಂಚಿನ ಮೇಲ್ಮನವಿಗಳು, ಕಾನೂನುಗಳು ಮತ್ತು ಪ್ರಕ್ರಿಯೆಗಳಿಗೆ ಅದು ಅನ್ವಯವಾಗುವುದಿಲ್ಲ ಎಂಬ ಕಾನೂನಿನಲ್ಲಿರುವ ಒಂದು ನಿಯಮವನ್ನು ಆಧಾರವಾಗಿಸಿಕೊಂಡು ಜಿಲ್ಲಾ ಜಡ್ಜ್ ಈ ಕೆಲಸ ಮಾಡಿದ್ದಾರೆ. ದೇವಸ್ಥಾನ ಮತ್ತು ಮಸೀದಿಯ ಆಡಳಿತ ಮಂಡಳಿಗಳ ನಡುವೆ 1974ರಲ್ಲಿ ಏರ್ಪಟ್ಟ ರಾಜಿಯನ್ನು ಪ್ರಶ್ನಿಸಿ ಅರ್ಜಿಯನ್ನು ಸಲ್ಲಿಸಲಾಗಿದೆ.

ಜನರು ಬೆಲೆಯೇರಿಕೆ ಮತ್ತು ಆರ್ಥಿಕ ಕಷ್ಟಗಳನ್ನು ಎದುರಿಸುತ್ತಿರುವಾಗ ಅವರ ಸಂಕಷ್ಟಗಳಿಂದ ಗಮನವನ್ನು ಬೇರೆಡೆ ಸೆಳೆಯಲು ಮಂದಿರ-ಮಸೀದಿ ವಿವಾದಗಳನ್ನು ಕೆದಕಲಾಗುತ್ತಿದೆ ಎಂದು ಅನೇಕ ತಜ್ಞರು ಮತ್ತು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ. 2024ರ ಲೋಕಸಭೆ ಚುನಾವಣೆಗಳಲ್ಲಿ ಬಿಜೆಪಿಗೆ ಹೆಚ್ಚು ಲಾಭ ಮಾಡಿಕೊಡುವ ಉದ್ದೇಶದಿಂದ ಈ ರೀತಿಯ ಧ್ರುವೀಕರಣದ ವಿಚಾರಗಳನ್ನು ಕೆದಕಿ ನೆಲವನ್ನು ಹದಗೊಳಿಸಲಾಗುತ್ತಿದೆ ಎಂದೂ ಕೆಲವು ರಾಜಕೀಯ ವೀಕ್ಷಕರು ಭಾವಿಸಿದ್ದಾರೆ.

ಹೌದು, ಇದೆಲ್ಲ ನಿಜವೇ. ಆದರೆ ಇನ್ನೂ ಆಳವಾಗಿ ಯೋಚಿಸಿದರೆ ಗೊತ್ತಾಗುವ ಸಂಗತಿಯೊಂದಿದೆ. ತನ್ನ ಹಿಂದೂತ್ವ ಇಮೇಜ್‌ಗೆ ತಕ್ಕಂತೆ ಭಾರತವನ್ನು ಪುನರ್‌ರಚಿಸುವ ಹಿಂದೂತ್ವ ಅಜೆಂಡಾವನ್ನು ಜಾರಿ ಮಾಡಲು ಬಿಜೆಪಿ-ಆರ್‌ಎಸ್‌ಎಸ್ ಕೂಟ ಸಿದ್ಧವಾಗಿದೆ ಎನ್ನುವುದೇ ಆ ವಿಚಾರವಾಗಿದೆ.

ಯಾವುದೇ ಚುನಾವಣೆ ಅಥವಾ ರಾಜಕೀಯ ಚದುರಂಗದಾಟಕ್ಕಿಂತ ಮೂಲಭೂತವಾದ ಸವಾಲು ಇಲ್ಲಿ ಅಡಕವಾಗಿದೆ. ಬಿಜೆಪಿ-ವಿರೋಧಿ ಶಕ್ತಿಗಳು ಇದನ್ನು ಎಷ್ಟು ಬೇಗ ಮನವರಿಕೆ ಮಾಡಿಕೊಳ್ಳುತ್ತವೋ ಈ ದೇಶಕ್ಕೆ ಅಷ್ಟು ಒಳ್ಳೆಯದಾಗುತ್ತದೆ.

ಅನು: ವಿಶ್ವ

Donate Janashakthi Media

Leave a Reply

Your email address will not be published. Required fields are marked *