ಅಕ್ಟೋಬರ್ 7: ‘ಗಾಜಾದಲ್ಲಿ ಯುದ್ಧಕ್ಕೆ ಕೊನೆ- ಪ್ಯಾಲೆಸ್ಟೈನ್ ಜೊತೆ ಸೌಹಾರ್ದ’ ದಿನಾಚರಣೆ – ಎಡಪಕ್ಷಗಳ ಕರೆ

ಅಕ್ಟೋಬರ್ 7 ರಂದು ಗಾಜಾದಲ್ಲಿ ಇಸ್ರೇಲ್‌ ನರಮೇಧದ ಯುದ್ಧವನ್ನು ಆರಂಭಿಸಿ ಒಂದು ವರ್ಷವಾಗುತ್ತದೆ. ಈ ಅಕ್ಟೋಬರ್ 7ನ್ನು ಗಾಝಾದಲ್ಲಿ ಯುದ್ಧವನ್ನು ಕೊನೆಗೊಳಿಸಬೇಕು ಎಂದು ಆಗ್ರಹಿಸಿ ಪ್ಯಾಲೆಸ್ತೀನಿಯನ್ನರಿಗೆ ಸೌಹಾರ್ದ ವ್ಯಕ್ತಪಡಿಸುವ ದಿನವಾಗಿ ಆಚರಿಸಬೇಕು ಎಂದು ಐದು ಎಡಪಕ್ಷಗಳು -ಸಿಪಿಐ(ಎಂ), ಸಿಪಿಐ, ಸಿಪಿಐ(ಎಂ-ಎಲ್) ಲಿಬರೇಷನ್, ಅಖಿಲ ಭಾರತ ಫಾರ್ವರ್ಡ್‍ ಬ್ಲಾಕ್ ಮತ್ತು ಆರ್.ಎಸ್‍.ಪಿ. ಕರೆ ನೀಡಿವೆ.

ಕಳೆದ ವರ್ಷ ಅಕ್ಟೋಬರ್ 7 ರಂದು ಹಮಾಸ್ ಇಸ್ರೇಲ್‌ನೊಳಗೆ ನಡೆಸಿದ ದಾಳಿಗೆ ಪ್ರತೀಕಾರದ ಹೆಸರಿನಲ್ಲಿ, ಇಸ್ರೇಲಿ ಸಶಸ್ತ್ರ ಪಡೆಗಳು ಗಾಜಾದಲ್ಲಿ ಪ್ಯಾಲೆಸ್ಟೀನಿಯನ್ನರ ಮೇಲೆ ಕ್ರೂರ ಮತ್ತು ವಿವೇಚನಾಶೂನ್ಯ ದಾಳಿ ನಡೆಸಿವೆ. ಈ ಯುದ್ಧದ ಪರಿಣಾಮವಾಗಿ ಸುಮಾರು 42,000 ಪ್ಯಾಲೆಸ್ಟೀನಿಯನ್ನರು, ಮುಖ್ಯವಾಗಿ ಮಹಿಳೆಯರು ಮತ್ತು ಮಕ್ಕಳು ಸಾವನ್ನಪ್ಪಿದ್ದಾರೆ. ಇನ್ನೂ ಸಾವಿರಾರು ಮಂದಿ ಅವಶೇಷಗಳಡಿಯಲ್ಲಿ ಹೂತು ಹೋಗಿದ್ದಾರೆ.

ಇಸ್ರೇಲ್ ವಸತಿ ಕಟ್ಟಡಗಳು, ಶಾಲೆಗಳು ಮತ್ತು ಆಸ್ಪತ್ರೆಗಳನ್ನು ಸಹ ತನ್ನ ಘೋರ ವೈಮಾನಿಕ ಮತ್ತು ನೆಲ ಬಾಂಬ್ ದಾಳಿಯಿಂದ ಹೊರತಾಗಿಸಿಲ್ಲ. ಪ್ರಖ್ಯಾತ ವೈದ್ಯಕೀಯ ಪತ್ರಿಕೆ ‘ದಿ ಲ್ಯಾನ್ಸೆಟ್’ ಇಸ್ರೇಲ್‌ನ ಆಕ್ರಮಣದಿಂದ ಸಾವಿನ ಸಂಖ್ಯೆ 85,000 ಕ್ಕಿಂತ ಹೆಚ್ಚಿರಬಹುದು(ಆಗಸ್ಟ್ 6 ರ ವರೆಗೆ) ಎಂದು ಪ್ರತ್ಯಕ್ಷ ಮತ್ತು ಪರೋಕ್ಷ ಸಾವುಗಳನ್ನು ಎಣಿಕೆ ಮಾಡಿ ಅಂದಾಜಿಸಿದೆ.

ಇದನ್ನೂ ಓದಿ: ನಿರಂತರ ಮಳೆಯಿಂದ ಮತ್ತೆ ಉರುಳಿ ಬಿದ್ದಿ ಮಳಖೇಡ ಕೋಟೆಯ ಗೋಡೆ

ಅಂತರಾಷ್ಟ್ರೀಯ ನ್ಯಾಯಾಲಯವು (ICJ) ಈ ವರ್ಷದ ಜನವರಿಯಲ್ಲಿ ಇಸ್ರೇಲಿ ಕ್ರಮಗಳು ಸಂಭವನೀಯ ನರಮೇಧದತ್ತ ಒಯ್ಯುತ್ತವೆ ಎಂದಿತ್ತು  ಮತ್ತು ಗಾಜಾದಲ್ಲಿ ಮಿಲಿಟರಿ ಕ್ರಮಗಳನ್ನು ನಿಲ್ಲಿಸುವಂತೆ ಇಸ್ರೇಲಿಗೆ ಕರೆ ನೀಡಿತ್ತು. ಆದರೆ ಇಸ್ರೇಲ್ ಇಲ್ಲಿಯವರೆಗೆ ಕದನ ವಿರಾಮಕ್ಕಾಗಿ ಎಲ್ಲಾ ಅರ್ಥಪೂರ್ಣ ಮಾತುಕತೆಗಳನ್ನು ವಿಫಲಗೊಳಿಸಿದೆ.

ಅಷ್ಟೇ ಅಲ್ಲ, ವರ್ಷವಿಡೀ ಇಸ್ರೇಲ್ ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಪ್ಯಾಲೆಸ್ತೀನಿಯರ ಮೇಲೆ ದಾಳಿ ನಡೆಸಿದೆ. ಬಾಂಬ್‌ಗಳನ್ನು ಸಿಡಿಸಲು ಇಸ್ರೇಲ್ ಪೇಜರ್‌ಗಳು ಮತ್ತು ಇತರ ಸಂವಹನಗಳನ್ನು ಬೃಹತ್ ಪ್ರಮಾಣದಲ್ಲಿ ಬಳಸಿ ಸಂಘರ್ಷವನ್ನು ಲೆಬನಾನ್‌ಗೆ ವಿಸ್ತರಿಸುತ್ತಿದೆ ಎಂದು ಎಡಪಕ್ಷಗಳು ಹೇಳಿವೆ.

ಪ್ರಪಂಚದಾದ್ಯಂತ, ಲಕ್ಷಾಂತರ ಜನರು ಇಸ್ರೇಲಿ ನರಮೇಧದ ಯುದ್ಧದ ವಿರುದ್ಧ ಪ್ರತಿಭಟಿಸುತ್ತಿದ್ದಾರೆ ಮತ್ತು ಯುದ್ಧವನ್ನು ಕೊನೆಗೊಳಿಸುವಂತೆ ಕರೆ ನೀಡಿದ್ದಾರೆ. ಈ ಬರ್ಬರ ಯುದ್ಧದ ಮೊದಲ ವಾರ್ಷಿಕದಂದು, ಭಾರತದ ಶಾಂತಿಪ್ರಿಯ ಜನರು ಯುದ್ಧವನ್ನು ತಕ್ಷಣವೇ ಕೊನೆಗೊಳಿಸಬೇಕೆಂದು ಒತ್ತಾಯಿಸುತ್ತಾರೆ ಎಂದಿರುವ  ಎಡಪಕ್ಷಗಳು, ಅಕ್ಟೋಬರ್ 7, 2024 ನ್ನು ತಕ್ಷಣವೇ ಕದನ ವಿರಾಮ ಮತ್ತು ಯುದ್ಧವನ್ನು ಕೊನೆಗೊಳಿಸಲು ಆಗ್ರಹಿಸುವ ದಿನವಾಗಿ ಆಚರಿಸಲು ಕರೆ ನೀಡಿವೆ.

ಅಂದು ತಕ್ಷಣವೇ ಕದನ ವಿರಾಮವನ್ನು ಒತ್ತಾಯಿಸಲು ಪ್ರದರ್ಶನಗಳು ಮತ್ತು ಸಭೆಗಳನ್ನು ನಡೆಸಲಾಗುವುದು, ಇಸ್ರೇಲ್‌ಗೆ ಎಲ್ಲಾ ಶಸ್ತ್ರಾಸ್ತ್ರ ರಫ್ತುಗಳನ್ನು ನಿಲ್ಲಿಸಲು ಮತ್ತು ಈ ಸಂಘರ್ಷಕ್ಕೆ ಪರಿಹಾರವಾಗಿ ಎರಡು-ಪ್ರಭುತ್ವ ರಚನೆಗೆ  ಕೆಲಸ ಮಾಡುವ ಮೂಲಕ ಸ್ವತಂತ್ರ ಪ್ಯಾಲೇಸ್ಟಿನಿಯನ್ ಪ್ರಭುತ್ವ ಅಸ್ತಿತ್ವಕ್ಕೆ ಬರುವಂತಾಗಬೇಕೆಂದು  ಭಾರತ ಸರಕಾರವನ್ನು ಆಗ್ರಹಿಸಬೇಕು  ಎಂದು ಎಡಪಕ್ಷಗಳು ಹೇಳಿವೆ.

ಇದನ್ನೂ ನೋಡಿ: ಬಿಜೆಪಿ – ಜೆಡಿಎಸ್‌ ಸಂಚು, ಒಳಸಂಚು, ರಾಜಭವನ ದುರುಪಯೋಗ – ಇದ್ಯಾವುದಕ್ಕೂ ನಾನು ಹೆದರುವವನಲ್ಲ – ಸಿದ್ದರಾಮಯ್ಯ

Donate Janashakthi Media

Leave a Reply

Your email address will not be published. Required fields are marked *