ಪೂರ್ವ ಜೆರುಸಲೇಮ್‌ನ ಶೇಖ್ ಜರ‍್ರಾಹ್ ಪ್ರದೇಶದಲ್ಲಿ ಪ್ಯಾಲೆಸ್ತೀನಿಯರ ಭೂಮಿ ಮತ್ತು ಮನೆಗಳನ್ನು ಕಿತ್ತುಕೊಳ್ಳುವ ನೆಲೆಸಿಗರ ವಸಾಹತುವಾದ, ಇಸ್ರೇಲ್ ಪ್ರಭುತ್ವದ ಜನಾಂಗದ್ವೇಷ ಉಂಟು ಮಾಡಿರುವ ಪ್ರಸಕ್ತ ಸಂಘರ್ಷ ಇದುವರೆಗೆ 64 ಮಕ್ಕಳು, 38 ಮಹಿಳೆಯರು ಸೇರಿದಂತೆ 227 ಪ್ಯಾಲೆಸ್ತೀನಿಯನ್ನರನ್ನು ಬಲಿ ತೆಗೆದುಕೊಂಡಿದೆ. ಸ್ವಯಂ-ನಿರ್ಣಯಕ್ಕಾಗಿ ಏಳು ದಶಕಗಳಿಂದ ನಡೆಯುತಿರುವ ಪ್ಯಾಲೆಸ್ತೀನಿಯರ ಹೋರಾಟವು ಜಗತ್ತಿನಲ್ಲೇ ಅತಿ ದೀರ್ಘ ಕಾಲದಿಂದ ನಡೆಯುತ್ತಿರುವ ರಾಷ್ಟ್ರೀಯ ವಿಮೋಚನಾ ಹೋರಾಟವಾಗಿದೆ. 1967ರ ಪೂರ್ವದ ಇಸ್ರೇಲ್ ಗಡಿಗಳನ್ನು ಹೊಂದಿರುವ ಪ್ರದೇಶಗಳೊಂದಿಗೆ ಸ್ವತಂತ್ರ ಪ್ಯಾಲೆಸ್ತೀನಿ ಪ್ರಭುತ್ವ ಸ್ಥಾಪನೆಯಾಗುವ ವರೆಗೂ ಈ ಹೋರಾಟ ಕೊನೆಗೊಳ್ಳದು ಎಂದು ಸಿಪಿಐ(ಎಂ) ಪೊಲಿಟ್ ಬ್ಯೂರೋ ಸದಸ್ಯರಾದ ಪ್ರಕಾಶ್ ಕಾರಟ್ ಅವರ ಬರೆದಿದ್ದಾರೆ.
ಜೆರುಸಲೇಮ್‌ನಲ್ಲಿ ಪ್ಯಾಲೆಸ್ತೀನಿಯರ ಮೇಲೆ ಇಸ್ರೇಲಿ ದಾಳಿಗಳು ಮತ್ತು ಗಾಜಾ ಮೇಲೆ ಇಸ್ರೇಲಿ ದಾಳಿ -ಇವೆರಡೂ ವಿಭಿನ್ನವಾದ ಅಥವಾ ಕಾಕತಾಳೀಯ ಘಟನೆಗಳಲ್ಲ. ಅವುಗಳು ಗಾಜಾ ಮತ್ತು ಪಶ್ಚಿಮ ದಂಡೆಯ ಆಕ್ರಮಿತ ಪ್ರದೇಶಗಳಲ್ಲಿ ಪ್ಯಾಲೆಸ್ತೀನಿ ಜನರ ಮೇಲೆ ಇಸ್ರೇಲಿ ಪ್ರಭುತ್ವ ನಡೆಸುತ್ತಿರುವ ಸುದೀರ್ಘ ಯುದ್ಧದ ಭಾಗಗಳಾಗಿವೆ. ಇಸ್ರೇಲ್ ಪ್ರಭುತ್ವದ 1967ಕ್ಕೆ ಮುಂಚಿನ ಗಡಿಗಳ ಒಳಗಡೆ ಅರಬ್-ಪ್ಯಾಲೆಸ್ತೀನಿಯರನ್ನು ದಮನಿಸುವ ದೌರ್ಜನ್ಯದ ಭಾಗವಾಗಿವೆ.
ಇದನ್ನು ಓದಿ: ಪ್ಯಾಲೆಸ್ತೇನ್ ಮೇಲೆ ಇಸ್ರೇಲ್ ರಾಕೇಟ್ ದಾಳಿ
ಪ್ರಸಕ್ತ ಸಂಘರ್ಷವು ಅತಿಕ್ರಮಣ, ನೆಲೆಸಿಗರ ವಸಾಹತುವಾದ, ‘ಜನಾಂಗೀಯ ಶುದ್ಧೀಕರಣ’ ಮತ್ತು ಆಕ್ರಮಿತ ಪ್ರದೇಶಗಳಲ್ಲಿ ಜನಾಂಗವಾದದ ಆಡಳಿತ ಸ್ಥಾಪಿಸುವ ಇತಿಹಾಸದ ಒಂದು ಅಧ್ಯಾಯವಾಗಿದೆ.
ಪೂರ್ವ ಜೆರುಸಲೇಮ್‌ನ ಶೇಖ್ ಜರ‍್ರಾಹ್ ಪ್ರದೇಶದಲ್ಲಿ ಪ್ಯಾಲೆಸ್ತೀನಿಯರ ಭೂಮಿ ಮತ್ತು ಮನೆಗಳನ್ನು ವಂಚಿಸಿ ಇಸ್ರೇಲ್ ಸ್ಥಾಪನೆಯಾದ 1948ರಿಂದಲೂ ನೆಲೆಸಿರುವ ಜನರನ್ನು ಈಗ ತೆರವು ಮಾಡಲಾಗುತ್ತಿದೆ.
ತೀವ್ರ ಬಲಪಂಥೀಯ ಯೆಹೂದಿ ಪಕ್ಷಗಳು ಹಾಗೂ ಸತತವಾಗಿ ಆಡಳಿತ ನಡೆಸಿದ ಬೆಂಜಮಿನ್ ನೆತನ್ಯಾಹು ನೇತೃತ್ವದ ಬಲಪಂಥೀಯ ಸರ್ಕಾರಗಳು ನಡೆಸುತ್ತಿರುವ ಪ್ಯಾಲೆಸ್ತೀನ್ ವಿರುದ್ಧದ ಜನಾಂಗವಾದಿ ಮತ್ತು ಜನಾಂಗ ದ್ವೇಷಿ ನೀತಿಗಳು ಈಗ ತೀವ್ರಗೊಂಡಿವೆ. ನಾಲ್ಕನೇ ಬಾರಿ ಚುನಾವಣೆ ನಡೆದರೂ ಬಹುಮತವಿಲ್ಲದೆ ಒಂದು ಹೊಸ ಸರ್ಕಾರವನ್ನು ರಚಿಸಲಾಗದಿರುವ ಸನ್ನಿವೇಶದಲ್ಲಿ ಈಗ ಪ್ರಸಕ್ತ ಆಕ್ರಮಣ, ದಬ್ಬಾಳಿಕೆ ನಡೆಯುತ್ತಿದೆ.
ತಮ್ಮ ಸಶಸ್ತ್ರ ಕಾವಲುಕೋರ ಪಡೆಗಳೊಂದಿಗೆ ಬಲಪಂಥೀಯ ನೆಲೆಸಿಗ ಗುಂಪುಗಳು ಪೊಲೀಸರ ನೆರವಿನಿಂದ ಶೇಖ್ ಜರ‍್ರಾಹ್ ದಲ್ಲಿರುವ ಪ್ಯಾಲೆಸ್ತೀನಿ ಕುಟುಂಬಗಳನ್ನು ಒಕ್ಕಲೆಬ್ಬಿಸುತ್ತಿವೆ. ಇದನ್ನು ಪ್ಯಾಲೆಸ್ತೀನಿಯರು ಪ್ರತಿರೋಧಿಸುತ್ತಿದ್ದಾರೆ. ರಂಜಾನ್ ಆರಂಭದ ವೇಳೆ, ಡಮಾಸ್ಕಸ್ ಗೇಟ್ ಬಳಿ ಪ್ಯಾಲೆಸ್ತೀನಿಯರು ಸಾಮಾನ್ಯವಾಗಿ ಒಟ್ಟು ಸೇರುತ್ತಿದ್ದ ಸ್ಥಳಕ್ಕೆ ಹೋಗದಂತೆ ಇಸ್ರೇಲಿ ಅಧಿಕಾರಿಗಳು ತಡೆ ಹಿಡಿದಿದ್ದರು. ಇದು ಅಲ್-ಅಕ್ಸಾ ಮಸೀದಿಯಿರುವ ಟೆಂಪಲ್ ಮೌಂಟ್‌ನ ಹಾದಿಯಲ್ಲಿದೆ. ಅಲ್-ಅಕ್ಸಾ ಮಸೀದಿಯು ಜಗತ್ತಿನ ಮುಸ್ಲಿಮರಿಗೆ ಮೂರನೇ ಪವಿತ್ರ ಪ್ರಾರ್ಥನಾ ಸ್ಥಳವಾಗಿದೆ.
ಇದನ್ನು ಓದಿ: ವಿಶ್ವಸಂಸ್ಥೆಯಿಂದ ಗಾಜಾದಲ್ಲಿ ಕದನ ವಿರಾಮ ಘೋಷಣೆಗೆ ಅಮೆರಿಕ ವಿರೋಧ
ಮೇ 7 ರಂದು ಮಸೀದಿ ಆವರಣದೊಳಗೆ ಪ್ರತಿಭಟನೆ ನಡೆಸುತ್ತಿದ್ದ ಜನರ ಮೇಲೆ ಸಶಸ್ತ್ರ ಪೊಲೀಸರು ಅಶ್ರುವಾಯು, ಗ್ರೆನೇಡ್ ದಾಳಿ ನಡೆಸಿದರು. ರಬ್ಬರ್-ಆವರಣವಿದ್ದ ಬುಲೆಟ್‌ಗಳನ್ನು ಹಾರಿಸಿದರು. ಇದು ಎಲ್ಲೆಡೆ ಪ್ಯಾಲೆಸ್ತೀನಿಯರಲ್ಲಿ ಆಕ್ರೋಶ ಭುಗಿಲೇಳುವಂತೆ ಮಾಡಿದೆ. ಈ ದಾಳಿಯಲ್ಲಿ ನೂರಾರು ಜನರು ಗಾಯಗೊಂಡಿದ್ದಾರೆ. ಇಸ್ರೇಲ್‌ನಾದ್ಯಂತ ಪಟ್ಟಣಗಳಲ್ಲಿ ಪ್ಯಾಲೆಸ್ತೀನಿ-ಅರಬ್ಬರು ಪ್ರತಿಭಟನೆ ನಡೆಸಿದ್ದು ಯೆಹೂದಿ ಬಲಪಂಥೀಯ ಗ್ಯಾಂಗ್‌ಗಳು ಹಾಗೂ ಪೊಲೀಸರು ಅವುಗಳ ಮೇಲೆ ಹಿಂಸಾತ್ಮಕ ದಾಳಿ ನಡೆಸಿದ್ದಾರೆ. ಈ ದಾಳಿಗಳಿಗೆ ಪ್ರತಿಯಾಗಿ ಗಾಜಾದಲ್ಲಿರುವ ಹಮಾಸ್ ಪ್ರಾಧಿಕಾರ ಇಸ್ರೇಲ್ ಪಡೆಗಳಿಗೆ ಗಡುವು ನೀಡಿದೆ, ಪೂರ್ವ ಜೆರುಸಲೇಮ್ ಮತ್ತು ಟೆಂಪಲ್ ಮೌಂಟ್ ಪ್ರದೇಶ ಬಿಟ್ಟು ಹೋಗಿ ಎಂದು ತಾಕೀತು ಮಾಡಿದೆ. ಇದಕ್ಕೆ ಇಸ್ರೇಲಿ ಪಡೆಗಳು ಕಿವಿಗೊಡದಿದ್ದಾಗ ಗಾಜಾದಿಂದ ರಾಕೆಟ್ ದಾಳಿ ನಡೆಸಲಾಗಿದೆ.
ಇಸ್ರೇಲಿ ಪಡೆಗಳು ಈ ಕಿರಿದಾದ ಭೂ ಪ್ರದೇಶದಿಂದ ಹಿಂದೆ ಸರಿದಾಗಿನಿಂದಲೂ ಗಾಜಾವನ್ನು ಈಜಿಪ್ಟ್ ಬೆಂಬಲದಿಂದ 15 ವರ್ಷಗಳಿಂದ ದಿಗ್ಬಂಧನಕ್ಕೆ ಒಳಪಡಿಸಿಟ್ಟಿವೆ. ಗಾಜಾದಲ್ಲಿ 1.9 ಮಿಲಿಯ ಪ್ಯಾಲೆಸ್ತೀನಿಯರು ವಾಸಿಸುತ್ತಿದ್ದಾರೆ. 2008 ಮತ್ತು 2014ರಲ್ಲಿ ಗಾಜಾದ ಮೇಲೆ ವೈಮಾನಿಕ ದಾಳಿ ನಡೆಸಲಾಗಿತ್ತು. 2014ರ ಯುದ್ಧದಲ್ಲಿ ಬಹುತೇಕವಾಗಿ ನಾಗರಿಕರ ಸಹಿತ 2,300 ಪ್ಯಾಲೆಸ್ತೀನಿಯರು ಮೃತಪಟ್ಟಿದ್ದರು; 18,000 ಮನೆಗಳು ನಾಶಗೊಂಡಿದ್ದವು.
ಈಗ, ಮೇ 19ರ ವರೆಗೆ ಗಾಜಾದ ಮೇಲೆ ಸತತ ಒಂಬತ್ತು ದಿನ ಬಾಂಬ್ ದಾಳಿ ನಡೆದಿದೆ. 227 ಜನರು ಮೃತಪಟ್ಟಿದ್ದಾರೆ. ಆ ಪೈಕಿ 64 ಮಕ್ಕಳು ಮತ್ತು 38 ಮಹಿಳೆಯರು ಎನ್ನುವುದು ಆಘಾತಕಾರಿ ಸಂಗತಿ. ಕ್ಷಿಪಣಿಗಳು ಮತ್ತು ಬಾಂಬ್‌ಗಳಿಂದ ನಡೆಸಿದ ಬರ್ಬರ ದಾಳಿಯಿಂದ ಇಡೀ ಜಗತ್ತು ಆಘಾತಗೊಂಡಿದೆ. ಏನನ್ನೂ ಬಿಡದೆ ದಾಳಿ ನಡೆಸಲಾಗಿದೆ. ಗಾಜಾದಲ್ಲಿ ವಾಸದ ಕಟ್ಟಡಗಳಲ್ಲದೆ ಅಂತಾರಾಷ್ಟ್ರೀಯ ಮಾಧ್ಯಮ ಕೇಂದ್ರ ಮತ್ತು ಏಕೈಕ ಕೋವಿಡ್ ಪರೀಕ್ಷಾ ಕೇಂದ್ರವಿದ್ದ ಒಂದು ಕಟ್ಟಡವನ್ನು ಕೂಡ ನಾಶ ಮಾಡಲಾಗಿದೆ. ಇಸ್ರೇಲ್‌ನಲ್ಲಿ ರಾಕೆಟ್ ದಾಳಿಯಲ್ಲಿ 12 ಜನರು ಸತ್ತಿದ್ದಾರೆ.
ಕದನ ವಿರಾಮಕ್ಕೆ ನೀಡಲಾದ ಎಲ್ಲ ಕರೆಗಳನ್ನು ಇಸ್ರೇಲ್ ತಿರಸ್ಕರಿಸಿದೆ. “ಉದ್ದೇಶ ಸಾಧನೆ ಆಗುವವರೆಗೆ’ ದಾಳಿಗಳನ್ನು ಮುಂದುವರಿಸುವುದಾಗಿ ಘೋಷಿಸಿದೆ. ಅಮೆರಿಕದ ದೃಢ ಬೆಂಬಲವಿರುವುದರಿಂದ ಇಸ್ರೇಲ್ ಈ ಕ್ರಿಮಿನಲ್ ನೀತಿಗಳು ಮತ್ತು ದಾಳಿಗಳನ್ನು ಮುಂದುವರಿಸಬಹುದು. ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿದ್ದಾಗ, ಜೆರುಸಲೇಮನ್ನು ಇಸ್ರೇಲ್ ರಾಜಧಾನಿ ಎಂದು ಅಮೆರಿಕ ಮಾನ್ಯ ಮಾಡಿತ್ತು. ಜೆರುಸಲೇಮ್ ಒಂದು ಆಕ್ರಮಿತ ಪ್ರದೇಶ ಎಂದು ವಿಶ್ವ ಸಂಸ್ಥೆ ಗುರುತಿಸಿದೆ. ಆಕ್ರಮಿತ ಪ್ರದೇಶಗಳಲ್ಲಿನ ಕಾನೂನುಬಾಹಿರ ಯೆಹೂದಿ ವಸಾಹತುಗಳು (ಸೆಟ್ಲ್‌ಮೆಂಟ್) ಕಾನೂನುಬದ್ಧ ಎಂದೂ ಟ್ರಂಪ್ ಘೋಷಿಸಿದ್ದರು.
ಇಸ್ರೇಲ್ ಆಡಳಿತಕ್ಕೆ ಬೆಂಬಲ ನೀಡುವ ಅಮೆರಿಕದ ಮೂಲ ನೀತಿಯಿಂದ ಹೊಸ ಅಧ್ಯಕ್ಷ ಜೋ ಬೈಡೆನ್ ವಿಮುಖವಾಗಿಲ್ಲ. ಪ್ರಸಕ್ತ ಸಂಘರ್ಷ ಸ್ಫೋಟಗೊಳ್ಳುವ ಕೆಲವೇ ದಿನಗಳ ಮುಂಚೆ, ಇಸ್ರೇಲ್‌ಗೆ 735 ಮಿಲಿಯ ಡಾಲರ್ ಮೌಲ್ಯದ ಕರಾರುವಾಕ್ಕಾಗಿ ಹೊಡೆಯಬಹುದಾದ ಆಯುಧಗಳನ್ನು ಮಾರಾಟ ಮಾಡುವ ಯೋಜನೆಗೆ ಬೈಡೆನ್ ಆಡಳಿತ ಅನುಮೋದನೆ ನೀಡಿದೆ. ಅದೇ ರೀತಿಯ ಶಸ್ತ್ರಾಸ್ತ್ರಗಳನ್ನು ಈಗ ಗಾಜಾದಲ್ಲಿ ಬಳಸಲಾಗುತ್ತಿದೆ. ಬಿಕ್ಕಟ್ಟಿನ ಬಗ್ಗೆ ಒಂದು ಹೇಳಿಕೆ ನೀಡಲೂ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಅಮೆರಿಕ ಅವಕಾಶ ನೀಡಿಲ್ಲ. ಮೇ 17ರಂದು ಕದನ ವಿರಾಮಕ್ಕೆ ಬೈಡೆನ್ ಕರೆ ನೀಡಿರುವುದಷ್ಟೆ ಇತ್ತೀಚಿನ ವಿದ್ಯಮಾನವಾಗಿದೆ. ಸಂಘರ್ಷ ಕೊನೆಗೊಳ್ಳುವುದಕ್ಕೂ ಮುನ್ನ ಗಾಜಾದಲ್ಲಿ ತನ್ನ ಆಕ್ರಮಣಾತ್ಮಕ ಯೋಜನೆಯನ್ನು ಕಾರ್ಯಗತಗೊಳಿಸಲು ಇಸ್ರೇಲ್‌ಗೆ ಕಾಲಾವಕಾಶ ಒದಗಿಸುವುದೇ ಅಮೆರಿಕದ ಈ ತಂತ್ರದ ಹಿಂದಿನ ಉದ್ದೇಶವಾಗಿದೆ.
ಜೋರ್ಡಾನ್, ಯುಎಇ ಮತ್ತು ಸೌದಿ ಅರೇಬಿಯಾದಂಥ ಅಮೆರಿಕದೊಂದಿಗೆ ನಿಕಟ ಬಾಂಧವ್ಯ ಹೊಂದಿರುವ ಅರಬ್ ದೇಶಗಳು ಪ್ಯಾಲೆಸ್ತೀನಿ ಉದ್ದೇಶವನ್ನು ಯಾವತ್ತೋ ಕೈ ಬಿಟ್ಟಿವೆ. ಕೇವಲ ಬಾಯುಪಚಾರದ ಸಹಾನುಭೂತಿ ವ್ಯಕ್ತಪಡಿಸುತ್ತಿವೆ. ಇಂಥದ್ದೊಂದು ಕಠಿಣ ಸನ್ನಿವೇಶದಲ್ಲಿ ಪ್ಯಾಲೆಸ್ತೀನಿಯರು ಸೆಟೆದು ನಿಂತು ಪ್ರತಿಭಟಿಸುತ್ತಿದ್ದಾರೆ. ಶೇಖ್ ಜರ‍್ರಾಹ್ ನಿವಾಸಿಗಳಿಗೆ ಬೆಂಬಲವಾಗಿ ಹಾಗೂ ಅಲ್-ಅಕ್ಸಾ ಮಸೀದಿ ಮೇಲಿನ ದಾಳಿ ನಂತರ, ಇಸ್ರೇಲ್ ಒಳಗಿನ ಪ್ಯಾಲೆಸ್ತೀನಿ ನಾಗರಿಕರು ದೊಡ್ಡ ಸಂಖ್ಯೆಯಲ್ಲಿ ಬೀದಿಗಿಳಿದು ಪ್ರತಿಭಟಿಸುತ್ತಿರುವುದು ಈ ಬಾರಿಯ ವಿಶೇಷವಾಗಿದೆ.
ಅಕ್ಕಾ, ಲಿಡ್ಡಾ, ರಾಮಲೆ, ಹೈಫಾ ಮತ್ತಿತರ ನಗರ-ಪಟ್ಟಣಗಳಲ್ಲಿ ಪ್ಯಾಲೆಸ್ತೀನಿ ಯುವಜನರು ಬೀದಿಗಿಳಿದಿದ್ದಾರೆ. ಅವರ ಮೇಲೆ ಯೆಹೂದಿ ಗ್ಯಾಂಗ್‌ಗಳು ಮತ್ತು ಪೊಲೀಸರು ವ್ಯಾಪಕ ಹಿಂಸಾಚಾರ ನಡೆಸಿದ್ದಾರೆ. ಕೋಮು ಸಂಘರ್ಷಗಳು ಭುಗಿಲೆದ್ದಿದ್ದು ಅವುಗಳ ನಿಯಂತ್ರಣಕ್ಕೆ ಕೆಲವು ನಗರಗಳಲ್ಲಿ ಇಸ್ರೇಲಿ ಸೇನೆಯನ್ನೂ ಕರೆಸಬೇಕಾಯಿತು. ಅರಬ್ ನಾಗರಿಕರನ್ನು ದ್ವಿತೀಯ ದರ್ಜೆ ಪ್ರಜೆಗಳಾಗಿ ಕಾಣುತ್ತಿರುವ ಯೆಹೂದಿ ಜನಾಂಗದ್ವೇಷಿ ಆಡಳಿತದಲ್ಲಿನ ಆಂತರಿಕ ವೈರುಧ್ಯಗಳು ಸ್ಫೋಟಗೊಳ್ಳುತ್ತಿವೆ.
ಹಿಂದೆಲ್ಲಾ ಗಾಜಾದ ಮೇಲೆ ದಾಳಿಯಾದಾಗ ಇಸ್ರೇಲ್‌ನಲ್ಲಿನ ಪ್ಯಾಲೆಸ್ತೀನಿ ಪ್ರಜೆಗಳು ಯಾವುದೇ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿರಲಿಲ್ಲ. ಆದರೆ ಈಗ ಎಲ್ಲ ಪ್ರದೇಶಗಳಲ್ಲಿ ಪ್ಯಾಲೆಸ್ತೀನಿ ರಾಷ್ಟ್ರೀಯ ಪ್ರತಿರೋಧದ ಭಾಗವಾಗಿದ್ದಾರೆ. ಪಶ್ಚಿಮ ದಂಡೆಯಲ್ಲಿ ಸಾರ್ವತ್ರಿಕ ಮುಷ್ಕರ ನಡೆದಿದ್ದು ಡಜನ್‌ಗೂ ಹೆಚ್ಚು ಪ್ಯಾಲೆಸ್ತೀನಿಯರು ಇಸ್ರೇಲಿ ಪಡೆಗಳ ಗುಂಡಿಗೆ ಬಲಿಯಾಗಿದ್ದಾರೆ.
ಬಲಪಂಥೀಯ ನೆತನ್ಯಾಹು ಸರ್ಕಾರದೊಂದಿಗೆ ನಿಕಟ ಬಾಂಧವ್ಯ ಬೆಳೆಸಿಕೊಂಡಿರುವ ನರೇಂದ್ರ ಮೋದಿ ಸರ್ಕಾರ, ಪ್ರಸಕ್ತ ಸಂಘರ್ಷದ ವೇಳೆ ಅಮೆರಿಕದ ಧೋರಣೆಯನ್ನೇ ಅನುಸರಿಸುತ್ತಿದೆ. ಇಸ್ರೇಲ್‌ನೊಂದಿಗೆ ವ್ಯಾಪಕ ಭದ್ರತಾ ಮತ್ತು ಮಿಲಿಟರಿ ಸಂಬಂಧ ಇರುವುದರಿಂದ ನರೇಂದ್ರ ಮೋದಿ ಪ್ಯಾಲೆಸ್ತೀನ್ ವಿಚಾರದಲ್ಲಿ ಭಾರತದ ಹಿಂದಿನ ನೀತಿಯಿಂದ ಹಿಂದೆ ಸರಿಯುತ್ತಿದ್ದಾರೆ. ಅದು ಮೇ 16ರಂದು ನಡೆದ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಗಾಜಾದಲ್ಲಿ ಪರಿಸ್ಥಿತಿ ತಿಳಿಗೊಳ್ಳಬೇಕೆಂದು ಕರೆ ನೀಡಿದೆಯೇ ಹೊರತು ಕದನ ವಿರಾಮಕ್ಕೆ ಕರೆ ನೀಡಿಲ್ಲ. ಗಾಜಾದಿಂದ ಇಸ್ರೇಲ್ ಮೇಲೆ ನಡೆದ ರಾಕೆಟ್ ದಾಳಿಗಳನ್ನು ಖಂಡಿಸುತ್ತಲೇ ಅದು ಇಸ್ರೇಲಿ ಆಕ್ರಮಣವನ್ನು ‘ಪ್ರತೀಕಾರದ ದಾಳಿ’ ಎಂದು ಬಣ್ಣಿಸಿದೆ. ಪ್ಯಾಲೆಸ್ತೀನಿ ಧ್ಯೇಯೋದ್ದೇಶ ಮತ್ತು ದ್ವಿ-ರಾಷ್ಟ್ರ ಪರಿಹಾರಕ್ಕೆ ಅಸ್ಪಷ್ಟ ಮಾತುಗಳಲ್ಲಿ ಬೆಂಬಲ ಸೂಚಿಸಿದೆ. ಆದರೆ ಪೂರ್ವ ಜೆರುಸಲೇಮ್ ಅನ್ನು ಪ್ಯಾಲೆಸ್ತೀನ್‌ನ ರಾಜಧಾನಿ ಎಂದು ಕರೆ ನೀಡಿಲ್ಲ. ಮೋದಿ ಸರ್ಕಾರ 2017ರಲ್ಲೇ ಇದನ್ನು ಕೈ ಬಿಟ್ಟಿತ್ತು.
ಇದನ್ನು ಓದಿ: ಗಾಜಾ ಸಂಘರ್ಷ ಅಂತ್ಯಕ್ಕೆ ಇಸ್ರೇಲ್-ಹಮಸ್ ಒಪ್ಪಿಗೆ
ಬಿಜೆಪಿ ಮತ್ತು ಆರ್‌ಎಸ್‌ಎಸ್‌ನಂತಲ್ಲದೆ ಭಾರತದ ಇತರ ಎಲ್ಲ ಪ್ರಜಾಸತ್ತಾತ್ಮಕ ರಾಜಕೀಯ ಶಕ್ತಿಗಳು ಪ್ಯಾಲೆಸ್ತೀನ್‌ನ ಸ್ವಾತಂತ್ರ್ಯ ಹೋರಾಟಕ್ಕೆ ಬೆಂಬಲ ನೀಡುತ್ತಾ ಬಂದಿವೆ. ಇದು ನಮ್ಮ ಸ್ವಾತಂತ್ರ್ಯ ಸಂಗ್ರಾಮದ ಪರಂಪರೆಯಾಗಿದೆ. ಪ್ಯಾಲೆಸ್ತೀನಿ ಜನರೊಂದಿಗೆ ಭಾರತದ ಜನತೆಯ ಸೌಹಾರ್ದ ವ್ಯಕ್ತಪಡಿಸಲು ಇದು ಸಕಾಲವಾಗಿದೆ. ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ಜನರು ಬೀದಿಗಿಳಿದು ಬೆಂಬಲ ಸೂಚಿಸುತ್ತಿದ್ದಾರೆ. ಕೋವಿಡ್-19ರ ಭೀಕರ ಅಲೆಯ ಕಾರಣದಿಂದ ಬೀದಿಗಿಳಿದು ಭಾರತೀಯರ ಸೌಹಾರ್ದತೆ ದಾಖಲಿಸಲು ಸಾಧ್ಯವಾಗುತ್ತಿಲ್ಲ. ಆದರೆ ಬೇರೆಲ್ಲ ವಿಧಾನಗಳಿಂದ ನಮ್ಮ ಬೆಂಬಲವನ್ನು ದಾಖಲಿಸಲು ಸಾಧ್ಯವಾಗಬೇಕು.
ಸ್ವಯಂ-ನಿರ್ಣಯಕ್ಕಾಗಿ ಏಳು ದಶಕಗಳಿಂದ ನಡೆಯುತ್ತಿರುವ ಪ್ಯಾಲೆಸ್ತೀನಿಯರ ಹೋರಾಟವು ಜಗತ್ತಿನಲ್ಲೇ ಅತಿ ದೀರ್ಘ ಕಾಲದಿಂದ ನಡೆಯುತ್ತಿರುವ ರಾಷ್ಟ್ರೀಯ ವಿಮೋಚನಾ ಹೋರಾಟವಾಗಿದೆ. 1967ರ ಪೂರ್ವದ ಇಸ್ರೇಲ್ ಗಡಿಗಳನ್ನು ಹೊಂದಿರುವ ಪ್ರದೇಶಗಳೊಂದಿಗೆ ಸ್ವತಂತ್ರ ಪ್ಯಾಲೆಸ್ತೀನಿ ಪ್ರಭುತ್ವ ಸ್ಥಾಪನೆಯಾಗುವವರೆಗೂ ಈ ಹೋರಾಟ ಕೊನೆಗೊಳ್ಳದು.
ಅನು: ವಿಶ್ವ