ಎಲ್ಲಾ ಕಷ್ಯಕಾರ್ಪಣ್ಯಗಳನ್ನು ಮೆಟ್ಟಿ-ಸಾಧನೆಯ ಶಿಖರಕ್ಕೇರಿದ ನ್ಯಾಯವಾದಿ ಶಶಿ

ಸೌಮ್ಯಾ ಕೆ.ಆರ್.

ಎಲ್ಲರಂತೆ ನಾನು ಕೂಡ ಮನುಷ್ಯಳು… ನಮಗೂ ಬದುಕುವ ಹಕ್ಕು ಇದೆ. ನಾವು ಕೂಡ ನಿಮ್ಮಂತೆಯೇ, ನಾವು ಈ ದೇಶದ ಪ್ರಜೆಗಳು. ನಮಗೂ ಬದುಕುವುದಕ್ಕೆ ಅವಕಾಶ ಕೊಡಿ. ನಿಮ್ಮಂತೆಯೇ ಸಹಜ ಬದುಕಿನಂತೆ ಜೀವಿಸುವುದಕ್ಕೆ ವಾತಾವರಣ ನಿರ್ಮಿಸಿಕೊಡಿ. ನಾವು ಕೂಡ ನಿಮ್ಮಲ್ಲಿ ನಾವು ಒಬ್ಬರು. ಪ್ರಕೃತಿ ಸಹಜವಾಗಿ ನಾವು ಕೂಡ ಈ ಭೂಮಿಗೆ ಬಂದಿದ್ದು, ಅದೇ ಕಾಲು, ಅದೇ ಕೈ, ಅದೇ ಮುಖಗಳು ಯಾಕೇ ಅದೇ ರಕ್ತ, ಒಂದೇ ಹೃದಯ, ನಮಗೂ ಖುಷಿ ಆದರೇ ನಗು ಬರುತ್ತೆ, ನೋವಾದರೂ ಕಣ್ಣೀರು ಬರುತ್ತೆ,  ಮತ್ಯಾಕೆ ನಮಗೆ ಈ  ಸಾಮಾಜಿಕ ಅನಿಷ್ಠ ಧೋರಣೆಗಳು. ನಾವೇನೂ ಈ ತರನೇ ಹುಟ್ಟಬೇಕು ಎಂದು ಯಾರೂ ಬಯಸಲ್ಲ. ಹೆಣ್ಣು-ಗಂಡು ಹೇಗೋ ನಾವು ಕೂಡ ಅದೇ ಸಹಜ ಸ್ಥಿತಿ.

ಪ್ರೌಢಾವಸ್ಥೆಯಲ್ಲಿ ದೇಹದಲ್ಲಾದ ಬದಲಾವಣೆಯಿಂದಾಗಿ ಯುವಕನೊಬ್ಬ ತೃತೀಯ ಲಿಂಗಿಯಾಗಿ ಬದಲಾಗಿದ್ದು, ಬಾಲ್ಯಾವಸ್ಥೆಯಿಂದ ಪದೇಪದೇ ಎದುರಾದ ನೋವು ಎದುರಿಸಿ, ಮನಸ್ಸಿಗೆ ಆಗುತ್ತಿದ್ದ, ಭೌತಿಕ ಬುದ್ಧಿಗೆ ಆಗುತ್ತಿದ್ದ ಹಿಂಸೆಯ ಪರಿಮೆಟ್ಟಿ ನಿಂತು ಇದೀಗ ಸಾಧನೆಯ ಹಾದಿ ತುಳಿಯುತ್ತಿದ್ದಾರೆ. ನಮ್ಮ ಕುಟುಂಬದವರು ಕೂಡ ಅಕ್ಕ ಪಕ್ಕದ ಮನೆಯವರ ಈ ವ್ಯವಸ್ಥೆಯಿಂದ ನೋವುಗಳೇ ನೀಡಿದ್ದು, ವ್ಯಂಗ್ಯ ಮಾಡಿ, ನಮ್ಮನ್ನು ಅನ್ಯಗ್ರಹದಿಂದ ಬಂದಿದ್ದಾರೆ ಎಂದು ನೋಡುವಂತೆ ನೋಡುತ್ತಲೇ ಕಣ್ಣಿನ ನೋಟದಿಂದಲೆ ಹಿಂಸೆಯನ್ನು ಮಾಡುತ್ತಿದ್ದರು. ಈಗಿನ ಕಾಲದಂತೆ ಆಗಿನ ಕಾಲದಲ್ಲಿ ಗುರುತಿಸುತ್ತಿರಲಿಲ್ಲ. ಆಗ ನಾವು ನಮ್ಮನ್ನು ಮಾತಾಡಿಸುವುದಕ್ಕೂ, ನೋಡುವುದಕ್ಕೂ ಭಯ, ಅಂಜಿಕೆ ಇತ್ತು. ಈ ವ್ಯವಸ್ಥೆ ಬಿಡಲಿಲ್ಲ ನಾವೆಲ್ಲರೂ ಈ ಭೂಮಿಗೆ ಶಾಪ ಇದ್ದಂತೆ ಅಂದು ಕೊಳ್ಳುತ್ತಿದ್ದರು. ಅದರಲ್ಲೂ ನಾವು ನಿಮ್ಮವರಲ್ಲಿ ಒಂದು ಎಂದು ಭಾವಿಸಿ ಅಂದರೂ ಪ್ರಾಣಿಗಳಂತೆ ನೋಡುತ್ತಿದ್ದ ಸಮಯವೂ ಇತ್ತು. ಬದುಕುವುದಕ್ಕೇ ನೀವು ಅರ್ಹರಲ್ಲ ಎಂದು ನೋಡುತ್ತಿದ್ದರು. ಅಂತದ್ರಲ್ಲಿ ಮೂಲಭೂತ ಹಕ್ಕುಗಳಲ್ಲಿ ಒಂದಾದ ಶಿಕ್ಷಣ ಹಕ್ಕನ್ನು ಕೂಡ ಬಹಳ ತಡವಾಗಿಯೇ ನಮ್ಮ ಸಮುದಾಯಕ್ಕೆ ದೊರೆತಿದೆ. ನಾವು ಶಿಕ್ಷಣ ಕಲಿಯೋದೋ ಎಲ್ಲರ ಜೊತೆಗೆ ಬೆರೆತು ಮಾತಾನಾಡುವುದು ಬಹಳ ಕಷ್ಟ ಆಗಿತ್ತು. ಆಗುತ್ತಿದ್ದ ಎಲ್ಲಾ ನಿಂದನೆಯನ್ನೇ ಛಲವಾಗಿ ಸ್ವೀಕರಿಸಿ ಕಾನೂನು ಪದವಿ ಪಡೆಯುವ ಮೂಲಕ ರಾಜ್ಯದ ಮೊಟ್ಟ ಮೊದಲ ತೃತೀಯ ಲಿಂಗಿ ನ್ಯಾಯವಾದಿ ಎಂಬ ಕೀರ್ತಿಗೆ ಪಾತ್ರವಾಗಿದ್ದಾರೆ.

ಮೈಸೂರಿನ ಜಯನಗರದ ನಿವಾಸಿ ಶಶಿ ಅಲಿಯಾಸ್ ಶಶಿಕುಮಾರ್ ಮೈಸೂರು ಜಿಲ್ಲೆಯಲ್ಲಿ ಕಾನೂನು ಪದವಿ ಪಡೆದ ಮೈಸೂರು ಮಾತ್ರವಲ್ಲದೆ ರಾಜ್ಯದ ಮೊದಲ ತೃತೀಯ ಲಿಂಗಿ ಎನಿಸಿದ್ದಾರೆ. ಸಮಾಜದಲ್ಲಿ ತಿರಸ್ಕೃತಗೊಂಡಿರುವ ಮಂಗಳಮುಖಿಯರು ಶಿಕ್ಷಣ, ಔದ್ಯೋಗಿಕ ಕ್ಷೇತ್ರದಿಂದ ದೂರವುಳಿದಿದ್ದು, ಬಹುತೇಕ ಮಂಗಳಮುಖಿಯರು ಬಿಕ್ಷಾಟನೆ ಹಾಗೂ ವೇಶ್ಯಾವಾಟಿಕೆಯನ್ನೇ ಅವಲಂಬಿಸಿ ಬಾಳ ಬಂಡಿಸಾಗಿಸುತ್ತಿದ್ದಾರೆ. ಬೆರಳೆಣಿಕೆಯಷ್ಟು ಮಂದಿ ಅಂಗಡಿ ಮುಂಗಟ್ಟು, ಹೋಟೆಲ್‌ಗಳಲ್ಲಿ ಕೆಲಸ ಮಾಡಿಕೊಂಡು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಸಮಾಜದ ಬೆಂಬಲ ದೊರೆತರೆ, ಮಂಗಳಮುಖಿಯರು ಸಾಮಾನ್ಯರಂತೆ ಜೀವನ ಸಾಗಿಸಬಹುದೆಂದು ಶಶಿ ಸಮಾಜಕ್ಕೆ ಸಂದೇಶ ನೀಡುತ್ತಾರೆ.

14 ವರ್ಷದ ನಂತರ ಬದಲಾಯ್ತು

ತಂದೆ ಬಿಎಸ್‌ಎನ್‌ಎಲ್ ನಿವೃತ್ತ ಸಿಬ್ಬಂದಿ, ತಾಯಿ ಗೃಹಣಿ. ಶಶಿ ಅವರಿಗೆ ಮೂವರು ಒಡಹುಟ್ಟಿದವರು. ಅಕ್ಕ, ತಮ್ಮ, ತಂಗಿ. ಶಶಿ 14 ವರ್ಷದವರೆಗೂ ಶಶಿಕುಮಾರ್ ಆಗಿದ್ದರು. ಪ್ರೌಢಶಾಲೆ ಮೆಟ್ಟಿಲೇರುತ್ತಿದ್ದಂತೇ ಶಶಿಕುಮಾರ್ ದೇಹದಲ್ಲಿ ಹಾರ್ಮೋನ್ ವ್ಯತ್ಯಾಸವಾಗಿ ಸಹಜವಲ್ಲದ ವರ್ತನೆ ಕಂಡುಬಂದಿದೆ. ಹುಡುಗಿಯರಂತೆ ಉಡುಪು ಧರಿಸುವುದು, ಮೇಕಪ್ ಮಾಡಿಕೊಳ್ಳುವ ಬಯಕೆ ಹೆಚ್ಚಾಗುತ್ತಿದ್ದಂತೆ ಸಹಪಾಠಿಗಳೂ ಶಶಿಕುಮಾರ್ ಹತ್ತಿರ ಸುಳಿಯಲಿಲ್ಲ. ನಿಂದನೆ ಆರಂಭವಾಗಿದೆ. ಮನೆಯಲ್ಲೂ ಮಗನ ವರ್ತನೆ ಪೋಷಕರು ಹಾಗೂ ಒಡಹುಟ್ಟಿದವರಿಗೆ ಮುಜುಗರ ಎನಿಸಿದೆ. ನೆರೆಹೊರೆಯವರ ನಿಂದನೆ ಮಾತು ಪೋಷಕರನ್ನು ಮತ್ತಷ್ಟು ಕಂಗೆಡಿಸಿದೆ. ಇದರಿಂದ ಶಶಿಕುಮಾರ್ ಮಾನಸಿಕ ಸ್ಥೈರ್ಯ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಆದರೆ ಮನಸ್ಸಲ್ಲಿ ಛಲ ಉಂಟಾಗಿದೆ.

ಶಾಲಾ-ಕಾಲೇಜಲ್ಲಿ ಏಕಾಂಗಿ

ಅಶೋಕಪುರಂನಲ್ಲಿರುವ ಸಿದ್ಧಾರ್ಥ ಪ್ರೌಢಶಾಲೆಯಲ್ಲಿ 8ರಿಂದ 10ನೇ ತರಗತಿ, ಲಕ್ಷ್ಮೀಪುರಂನಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಲ್ಲಿ ವಿಜ್ಞಾನ(ಪಿಸಿಎಂಬಿ) ಹಾಗೂ ಕುವೆಂಪುನಗರದ ಸೋಮಾನಿ ಕಾಲೇಜಿಲ್ಲಿ ಕಲಾ ವಿಭಾಗದಲ್ಲಿ(ಹೆಚ್‌ಇಪಿ) ಪದವಿ ಶಿಕ್ಷಣ ಪಡೆದ ಶಶಿ ಒಂದೂವರೆ ವರ್ಷ ಓದಿಗೆ ವಿರಾಮ ಹಾಕಿದ್ದರು. ನಂತರ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಸಾರ್ವಜನಿಕ ಆಡಳಿತ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದರು. ಈ ವೇಳೆ ಆರಂಭದಿಂದಲೂ ಸಹಪಾಠಿಗಳಿಂದಲೂ ಅಪಹಾಸ್ಯ, ನಿಂದನೆಗೆ ಒಳಗಾಗುತ್ತಲೇ ಇದ್ದರು. 2-3 ಮಂದಿ ವಿದ್ಯಾರ್ಥಿಯರು ಮಾತ್ರ ಶಶಿಯೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರೆ, ಬೇರೆಲ್ಲಾ ವಿದ್ಯಾರ್ಥಿಗಳು ಅಂತರ ಕಾಯ್ದುಕೊಂಡಿದ್ದರು. ಇದರಿಂದ ಸಹಜವಾಗಿಯೇ ಮನನೊಂದು ಏಕಾಂಗಿಯಾಗಿಯೇ ಇರಲು ನಿರ್ಧರಿಸಿ, ಪದವಿ ಶಿಕ್ಷಣವನ್ನು ಪೂರೈಸಿದ್ದರು.

ಮನೆಗೆಲಸ

ಓದಿನೊಂದಿಗೆ ನಾಲ್ಕಾರು ಮನೆಗಳಲ್ಲಿ ಕೆಲಸಕ್ಕೆ ಹೋಗುತ್ತಿದ್ದ ಶಶಿ ಪದವಿ ಶಿಕ್ಷಣ ಪಡೆದ ನಂತರ ಮನೆಗೆಲಸಕ್ಕೆ ಹೋಗುವುದನ್ನು ಮುಂದುವರೆಸಿದ್ದರು. ಪಾತ್ರೆ ತೊಳೆಯುವುದು, ಬಟ್ಟೆ ಹೊಗೆಯುವುದು ಸೇರಿದಂತೆ ಇನ್ನಿತರ ಕೆಲಸ ಮಾಡುತ್ತಿದ್ದರು. ಇದರಿಂದ ಬಂದ ಹಣದಲ್ಲಿ ಸ್ವಾವಲಂಬಿ ಜೀವನ ನಡೆಸುತ್ತಿದ್ದರು.

ಬೆಳಕಾಗಿ ಬಂದು ಆಸರೆಯಾದ ವೈದ್ಯೆ

ವಿವೇಕಾನಂದ ನಗರದ ಬಳಿ ಹಾಸಿಗೆ ಹಿಡಿದಿದ್ದ ಹಿರಿಯ ನಾಗರಿಕರೊಬ್ಬರ ಕೇರ್‌ ಟೇಕರ್‌ ಆಗಿಯೂ ಕೆಲಸ ಮಾಡುತ್ತಿದ್ದ ಶಶಿಗೆ ಪಂಚಕರ್ಮ ವೈದ್ಯೆಯೊಬ್ಬರು ನೆರವು ನೀಡುವ ಮೂಲಕ ಉನ್ನತ ಶಿಕ್ಷಣ ಪಡೆಯಲು ಉತ್ತೇಜಿಸಿದರು. ಪದವಿ ಪಡೆದು ಕೆಲಸ ಮಾಡುತ್ತಿದ್ದ ಶಶಿಯನ್ನು ಆಪ್ತ ಸಮಾಲೋಚಕಿಯೂ, ಆಯುರ್ವೇದ ಮತ್ತು ಪಂಚಕರ್ಮ ವೈದ್ಯರಾದ ಡಾ.ಜೆ.ರಶ್ಮಿರಾಣಿ ಗುರುತಿಸಿ ಉನ್ನತ ಶಿಕ್ಷಣ ಪಡೆಯಲು ಸಹಕಾರ ನೀಡಿದ್ದಾರೆ. ಪದವಿ ಪಡೆದಿದ್ದ ಶಶಿಗೆ ವಿವೇಕಾನಂದ ವೃತ್ತದ ಬಳಿ ಇರುವ ಚಿರಂತ್‌ಆಯುರ್ವೇದ ಕ್ಲಿನಿಕ್ ಹಾಗೂ ಆಪ್ತ ಸಮಾಲೋಚನ ಕೇಂದ್ರದಲ್ಲಿ ಸಹಾಯಕರಾಗಿ ಕೆಲಸ ನೀಡಿದ್ದಲ್ಲದೆ, ಮುಕ್ತ ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಳ್ಳುವಂತೆ ಪ್ರೇರೇಪಿಸಿದ್ದಾರೆ. ನಂತರ 2018ರಲ್ಲಿ ವಿದ್ಯಾವರ್ಧಕ ಕಾನೂನು ಕಾಲೇಜಿಗೆ ಶಶಿಯನ್ನು ಕಾನೂನು ಪದವಿ ಶಿಕ್ಷಣ ಪಡೆಯಲು ದಾಖಲು ಮಾಡಿಸಿದ್ದಾರೆ. ಪ್ರತಿ ವರ್ಷ ಕಾಲೇಜು ಶುಲ್ಕ 30 ಸಾವಿರ ರೂ. ಅವರೇ ಪಾವತಿಸಿದ್ದಾರೆ. ಅಲ್ಲದೆ ಕುಟುಂಬದ ಸದಸ್ಯರಲ್ಲೊಬ್ಬರಂತೆ ನೋಡಿಕೊಂಡಿದ್ದಾರೆ. ಈಗ ಕಾನೂನು ಪದವಿ ಪಡೆದಿರುವ ಶಶಿ, ಹಿರಿಯ ವಕೀಲರಾದ ಟಿ.ನಾಗರಾಜು ಅವರ ಬಳಿ ಪ್ರಾಕ್ಟೀಸ್ ಮಾಡುತ್ತಿದ್ದಾರೆ.

ಔಷಧಿ ತಯಾರಿಕೆ

2018ರಿಂದ ಪ್ರತಿದಿನ ಕಾನೂನು ತರಗತಿಗೆ ಹೋಗುತ್ತಿದ್ದ ಶಶಿ, ಸಂಜೆ ವೇಳೆ ಚಿರಂತ್‌ ಆಯುರ್ವೇದ ಕ್ಲಿನಿಕ್ ಹಾಗೂ ಆಪ್ತ ಸಮಾಲೋಚನಾ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದರು. ವೈದ್ಯೆ ಡಾ.ಜೆ.ರಶ್ಮಿರಾಣಿ ಅವರೊಂದಿಗೆ ಆಯುರ್ವೇದ ಔಷಧಿ ತಯಾರಿಕೆ, ಕ್ಲಿನಿಕ್ ನಿರ್ವಹಣೆ ಹಾಗೂ ಸಹಾಯಕರಾಗಿ ಕೆಲಸ ಮಾಡುವ ಮೂಲಕ ಸಂಪಾದನೆ ಕೂಡ ಮಾಡುತ್ತಿದ್ದಾರೆ.

ತಾರತಮ್ಯ ಮಾಡುವುದು ಸರಿಯಲ್ಲ

ರೋಗಿಯೊಬ್ಬರಿಗೆ ಚಿಕಿತ್ಸೆ ನೀಡಲು ಮನೆಗೆ ಹೋಗಿದ್ದಾಗ ಶಶಿ ಅವರ ಪರಿಚಯವಾಯಿತು. ಪದವಿ ಶಿಕ್ಷಣ ಪಡೆದಿರುವ ಮಾಹಿತಿ ತಿಳಿಯಿತು. ಅಲ್ಲದೆ ಮುಂದಿನ ಶಿಕ್ಷಣ ಪಡೆಯಲು ಇಂಗಿತ ವ್ಯಕ್ತಪಡಿಸಿದರು. ಸಮಾಜ ತೃತೀಯ ಲಿಂಗಿಯರನ್ನು ತಾರತಮ್ಯ ದೃಷ್ಟಿಯಿಂದ ನೋಡುತ್ತದೆ. ಇದರಿಂದ ಸಹಜವಾಗಿ ತೃತೀಯ ಲಿಂಗಿಗಳು ಕೆಲಸಕ್ಕೆ ಹೋಗುವುದಕ್ಕೆ ಹಿಂದೇಟು ಹಾಕಿ ಅನ್ಯ ಮಾರ್ಗದಲ್ಲಿ ಜೀವನ ಸಾಗಿಸಲು ಮುಂದಾಗುತ್ತಾರೆ. ಇದಕ್ಕೆ ಸಮಾಜ ನೋಡುವ ದೃಷ್ಟಿಕೋನವೇ ಕಾರಣ. ಈ ಹಿನ್ನೆಲೆಯಲ್ಲಿ ನಮ್ಮ ಕ್ಲಿನಿಕ್‌ ನಲ್ಲಿ ಸಹಾಯಕ ಕೆಲಸವನ್ನೂ ನೀಡಿ, ಉನ್ನತ ಶಿಕ್ಷಣ ಪಡೆಯಲು ನೆರವು ನೀಡಲಾಯಿತು. ಕೇವಲ ಕೆಲಸದವರಂತೆ ನೋಡದೆ, ಕುಟುಂಬದ ಸದಸ್ಯರಂತೆ ಶಶಿಗೆ ನೆರವು ನೀಡಲಾಗಿದೆ. ಇದೀಗ ಎಲ್‌ಎಲ್‌ಬಿ ಮುಗಿಸಿ ಪ್ರಾಕ್ಟೀಸ್‌ಗೆ ಹೋಗುತ್ತಿರುವುದು ಸಂತಸ ತಂದಿದೆ. ಶಶಿ ಅವರ ಸಾಧನೆ ಇತರೆ ಮಂಗಳಮುಖಿಯರಿಗೆ ಪ್ರೇರಣೆಯಾಗಬೇಕು. ಶಿಕ್ಷಣ ಪಡೆದು ವಿವಿಧ ಹುದ್ದೆಗಳನ್ನು ಪಡೆದುಕೊಳ್ಳುವಂತಾಗಬೇಕು. ಶಶಿಗೆ ಉಜ್ವಲ ಭವಿಷ್ಯವಿದೆ ಎಂದು ಶಶಿಯ ಬಾಳಲ್ಲಿ ಬೆಳಕಾಗಿ ಬಂದ ಚಿರಂತ್‌ ಆಯುರ್ವೇದ ಕ್ಲಿನಿಕ್ ಹಾಗೂ ಆಪ್ತ ಸಮಾಲೋಚನಾ ಕೇಂದ್ರ ಸಂಸ್ಥಾಪಕಿ, ಆಯುರ್ವೇದ ವೈದ್ಯೆ ಡಾ.ಜೆ.ರಶ್ಮಿರಾಣಿರವರ ಮನದಾಳದ ಮಾತು.

ನ್ಯಾಯಾದೀಶೆಯಾಗಬೇಕು ಎಂಬ ಮಹದಾಸೆ

ಅಪಮಾನ, ನಿಂದನೆ, ಲೈಂಗಿಕ ಕಿರುಕುಳದಿಂದ ಜೀವನವೇ ಸಾಕೆನಿಸಿತ್ತು. ಆದರೂ ಛಲವೊಂದು ಬೆಂಬಡದೆ ಕಾಡುತ್ತಿತ್ತು. ಮನೆ ಕೆಲಸ ಮಾಡಿ ಪದವಿ ಶಿಕ್ಷಣ ಪಡೆದಿದ್ದೆ. ಹಿರಿಯ ನಾಗರಿಕರೊಬ್ಬರ ನೋಡಿಕೊಳ್ಳುತ್ತಿದ್ದಾಗ ಡಾ.ಜೆ.ರಶ್ಮಿರಾಣಿ ಪರಿಚಯವಾಗಿ ನನಗೆ ಕೆಲಸವನ್ನೂ ನೀಡಿದರು. ಸ್ನಾತಕೋತ್ತರ ಪದವಿ ಹಾಗೂ ಕಾನೂನು ಪದವಿ ಪಡೆಯಲು ಅಗತ್ಯ ಸಹಕಾರ ನೀಡಿದರು. ಕಾನೂನು ಶಿಕ್ಷಣ ಪಡೆಯುವ ವೇಳೆ ಉಪನ್ಯಾಸಕರಾದ ಪ್ರಕೃತಿ ಎಂಬುವರು ನನಗೆ ನೆರವಾದರು. ತೃತೀಯ ಲಿಂಗಿ ಪ್ರಮಾಣ ಪತ್ರ ಪಡೆಯಲು, ಓದಿಗೆ ಬೇಕಾದ ನೆರವನ್ನೂ ನೀಡಿದರು. ಕಾನೂನು ಪದವಿ ಪಡೆದ ನಂತರ ಹಿರಿಯ ವಕೀಲರಾದ ಟಿ.ನಾಗರಾಜು ಪ್ರಾಕ್ಟೀಸ್‌ಗೆ ಅವಕಾಶ ನೀಡಿ, ವಾದ ಮಂಡಿಸುವುದು, ಕಲಾಪ ಹೇಗಿರಬೇಕು ಎನ್ನುವುದನ್ನು ಹೇಳಿಕೊಟ್ಟರಲ್ಲದೆ ಅಗತ್ಯ ಪ್ರೋತ್ಸಾಹ ನೀಡುತ್ತಿದ್ದಾರೆ. ಎಸಿ ನ್ಯಾಯಲಯದ ನ್ಯಾಯಾಧೀಶರಾದ ಡಾ.ಎನ್.ಸಿ.ವೆಂಕಟರಾಜು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ನನಗೆ ನ್ಯಾಯಾಧೀಶರಾಗಬೇಕೆಂಬ ಹಂಬಲವಿದೆ. ಅದಕ್ಕಾಗಿ ಪರೀಕ್ಷೆ ಬರೆಯಲು ಸಿದ್ದತೆ ಮಾಡಿಕೊಳ್ಳುತ್ತಿದ್ದೇನೆ. ನನ್ನಂತೆ ಕಿರುಕುಳಕ್ಕೆ ಒಳಗಾದವರಿಗೆ ನೆರವು ನೀಡಬೇಕೆನ್ನುವುದು ನನ್ನಾಸೆ. ಮಂಗಳಮುಖಿಯರಿಗೂ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಆಸೆಯಿದೆ. ಆದರೆ ಯಾರೂ ಉದ್ಯೋಗ ಕೊಡುವುದಿಲ್ಲ. ಇದರಿಂದಾಗಿ ಭಿಕ್ಷಾಟನೆ ಹಾಗೂ ವೇಶ್ಯಾವಾಟಿಕೆಯತ್ತ ಅನಿವಾರ್ಯವಾಗಿ ಮುಖಮಾಡಲು ಸಮಾಜವೇ ಪ್ರೇರಣೆ ನೀಡುತ್ತಿದೆ. ನಾನು ಓದುವ ಹಂಬಲ ವ್ಯಕ್ತಪಡಿಸಿದ್ದಾಗಲೂ ಕೆಲವರು ಓದುವುದು ನಿಮ್ಮಂತಹವರಿಗಲ್ಲ, ಸಿಗ್ನಲ್‌ನಲ್ಲಿ ನಿಂತು ಬಿಕ್ಷೆ ಬೇಡುವಂತೆಯೂ, ವೇಶ್ಯಾವಾಟಿಕೆಯಲ್ಲಿ ತೊಡಗುವಂತೆಯೂ ಛೇಡಿಸಿದ್ದಾರೆ. ಅದೆಲ್ಲವನ್ನು ಬದಿಗೊತ್ತಿ ಇಂದು ಕಾನೂನು ಪದವಿ ಪಡೆದಿದ್ದೇನೆ. ನನ್ನಂತೆ ಓದುವ ಹಂಬಲ ಇರುವ ಮಂಗಳಮುಖಿಯರು ಸಮಾಜದಲ್ಲಿನ ನಿಂದನೆಗೆ ಅಂಜದೆ ಓದಲು ಮುಂದೆ ಬರಬೇಕು ಎಂದು ಕಾನೂನು ಪದವಿ ಪಡೆದ ತೃತೀಯ ಲಿಂಗಿ ಸಿ.ಶಶಿ ಅಲಿಯಾಸ್ ಶಶಿಕುಮಾರ್‌ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಬದಲಾವಣೆ ಜಗತ್ತಿನ ನಿಯಮ… ಆದರೆ ಬದಲಾವಣೆಗಳು ಯಾವ ದಾರಿಯಲ್ಲಿ ಆ ಬದಲಾವಣೆಯಿಂದ ಎಷ್ಟು ಅಭಿವೃದ್ಧಿ, ಯಾವ ಸಮುದಾಯಕ್ಕೆ ಏನೆಲ್ಲಾ ಸಹಕಾರಿ ಆಗುತ್ತೆ ಅನ್ನೊದೋ ಬಹಳ ಮುಖ್ಯ. 21ನೇ ಶತಮಾನದಲ್ಲಿದ್ದೀವಿ ಈಗಲೂ ಮಂಗಳಮುಖಿ ಸಮುದಾಯವರನ್ನು ಮೌಡ್ಯತೆಗಳಿಂದಲೇ ನೋಡುತ್ತಿದ್ದಾರೆ. ನಮ್ಮ ಹಕ್ಕುಗಳಿಗೆ ಎಲ್ಲಿಲ್ಲಿ ಸಾಧ್ಯವಾಗುತ್ತೋ ಅಲ್ಲಲ್ಲಿ ಹೋರಾಟಗಳನ್ನು ಮಾಡುತ್ತಿದ್ದೀವಿ. ನಾವು ಈ ದೇಶದ ಪ್ರಜೆಗಳು ನಮಗೂ ಸಂವಿಧಾನದಲ್ಲಿರುವ ಮೂಲಭೂತ ಹಕ್ಕುಗಳನ್ನ ಪಡೆಯಲು ಸಂಪೂರ್ಣ ಹಕ್ಕಿದೆ.. ಆ ನಿಟ್ಟಿನಲ್ಲಿ ಇತ್ತೆಚೆಗೆ ಮತದಾರರ ಚೀಟಿ, ಪಡಿತರ ಚೀಟಿ, ಕೆಲವು ಕಡೆ ನಮಗೂ ಉಧ್ಯೋಗಗಳು (ಕಡಿಮೆ ಪ್ರಮಾಣದಲ್ಲಿ) ಎಲ್ಲಿ ಸಾಧ್ಯವಾಗೂತ್ತೋ ಅಲ್ಲಿಲ್ಲಿ ದುಡಿಮೆ… ಆದರೆ ಈ ವ್ಯವಸ್ಥೆಗೆ ಕೇಳುವುದೆಂದರೆ ನಮಗೂ ನಿಮ್ಮಂತಹೇ ಬದುಕುವ ಹಕ್ಕಿದೆ… ಬದುಕಲು ಬಿಡಿ…

ಶಶಿ ಗೆ ಆಕೆಯ ಬದುಕಿನ ದಾರಿಯಲ್ಲಿ ಯಶಸ್ವಿ ಸಿಗಲಿ ಹಾಗೂ ಡಾ.ಜೆ.ರಶ್ಮಿರಾಣಿರಂತಹ ಮನಸುಗಳು ಸದಾ ಹಾರೈಸಲಿ……

Donate Janashakthi Media

Leave a Reply

Your email address will not be published. Required fields are marked *