ನವದೆಹಲಿ: ಕೊರೊನಾ ಲಸಿಕೆಗೆ ಸಂಬಂಧಿಸಿದಂತೆ ವಿಶ್ವ ಆರೋಗ್ಯ ಸಂಸ್ಥೆ ರೂಪಿಸಿದ ನೀತಿ ನಿಯಮಗಳು ಹಾಗೂ ಶಿಫಾರಸುಗಳನ್ನು ವಿಶ್ವದ ಎಲ್ಲಾ ದೇಶಗಳು ಪಾಲಿಸಬೇಕಾಗಿದೆ ಯಾರೂ ಅದನ್ನು ಮೀರುವಂತಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಹೇಳಿದರು.
ಬ್ರಿಟನ್ ದೇಶವು ಕೋವಿಶೀಲ್ಡ್ ಲಸಿಕೆ ಪಡೆದುಕೊಂಡ ಭಾರತೀಯರನ್ನು 10 ದಿನ ಕ್ವಾರಂಟೈನ್‌ಗೆ ಒಳಪಡಿಸುತ್ತಿರುವ ಕೋವಿಡ್ ನಿಯಂತ್ರಣ ನಿಯಮಗಳ ಕುರಿತು ನಡೆಯುತ್ತಿರುವ ಚರ್ಚೆ ಕುರಿತಂತೆ ಐಎಎನ್ಎಸ್ ಜೊತೆ ಮಾತನಾಡಿದ ಸೌಮ್ಯ ಸ್ವಾಮಿನಾಥನ್ ‘ಎಲ್ಲ ದೇಶಗಳು ನಮ್ಮ ಶಿಫಾರಸುಗಳನ್ನು ಅನುಸರಿಸಬೇಕು’ಎಂದು ಹೇಳಿದ್ದಾರೆ.
ಬ್ರಿಟನ್ನಿನ ಹೊಸ ಕೋವಿಡ್ ಪ್ರಯಾಣ ನಿಯಮಗಳ ಪ್ರಕಾರ, ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ತಯಾರಿಸಿದ ಕೋವಿಶೀಲ್ಡ್ನ ಎರಡು ಲಸಿಕೆಗಳನ್ನು ಪಡೆದುಕೊಂಡಿದ್ದರೂ ಸಹ ಭಾರತೀಯ ಪ್ರಯಾಣಿಕರನ್ನು ಲಸಿಕೆ ಹಾಕಿಸಿಕೊಳ್ಳದವರೆಂದು ಪರಿಗಣಿಸಲಾಗುತ್ತಿದೆ. ಜೊತೆಗೆ, ಅವರಿಗೆ 10 ದಿನಗಳವರೆಗೆ ಕ್ವಾರಂಟೈನ್ ವಿಧಿಸಲಾಗುತ್ತಿದೆ.
ಬ್ರಿಟನ್ ಸರಕಾರದ ನಿಯಮಗಳಂತೆ ಅರಬ್, ಭಾರತ, ಟರ್ಕಿ, ಜೋರ್ಡಾನ್, ಥೈಲ್ಯಾಂಡ್, ರಷ್ಯಾ ಹಾಗೂ ಆಫ್ರಿಕಾ, ದಕ್ಷಿಣ ಅಮೆರಿಕಗಳಲ್ಲಿ ಲಸಿಕೆ ಪಡೆದ ವ್ಯಕ್ತಿಗಳನ್ನು ಲಸಿಕೆ ಪಡೆಯದವರು ಎಂದು ಪರಿಗಣಿಸಲಾಗುತ್ತದೆ ಹಾಗೂ ಅವರನ್ನು ಹತ್ತು ದಿನಗಳ ಕಾಲ ಕ್ವಾರಂಟೈನ್‌ನಲ್ಲಿಡುವುದು ಕಡ್ಡಾಯ ಎಂದು ಈಚೆಗೆ ಆದೇಶಿಸಿದ್ದು ವಿವಾದಕ್ಕೆ ಕಾರಣವಾಗಿದೆ.
ಬ್ರಿಟನ್, ಯುರೋಪ್, ಅಮೆರಿಕದಂತಹ ಲಸಿಕೆ ಕಾರ್ಯಕ್ರಮದಡಿಯಲ್ಲಿ ವಿದೇಶದಲ್ಲಿ ಅನುಮೋದಿತ ಅಸ್ಟ್ರಾಜೆನೆಕಾ, ಫೈಜರ್ ಅಥವಾ ಮಾಡರ್ನಾ ಲಸಿಕೆಯ ಎರಡು ಡೋಸ್, ಜಾನ್ಸೆನ್ ಲಸಿಕೆಯ ಸಿಂಗಲ್ ಡೋಸ್ ಲಸಿಕೆ ಪಡೆದವರನ್ನು ಮಾತ್ರ ಲಸಿಕೆ ಹಾಕಿಸಿಕೊಂಡವರೆಂದು ಬ್ರಿಟನ್ ಸರ್ಕಾರ ಹೊರಡಿಸಿರುವ ಹೊಸ ನಿಯಮಗಳಲ್ಲಿ ತಿಳಿಸಿದೆ.
ಭಾರತದಲ್ಲಿ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಗಳೊಂದಿಗೆ ಮುಖ್ಯವಾಗಿ ಸಾಮೂಹಿಕ ಲಸಿಕಾ ಅಭಿಯಾನವನ್ನು ಕೈಗೊಳ್ಳಲಾಗಿದೆ. ಕೋವಿಶೀಲ್ಡ್ ಲಸಿಕೆಯನ್ನು ಆಸ್ಟ್ರಾಜೆನೆಕಾ/ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರ ತಂಡ ಅಭಿವೃದ್ಧಿಪಡಿಸಿದ್ದು, ಭಾರತದಲ್ಲಿ ಸೀರಂ ಇನ್‌ಸ್ಟಿಟ್ಯೂಟ್ ಇದರ ಉತ್ಪಾದನೆಯಲ್ಲಿ ತೊಡಗಿಕೊಂಡಿದೆ. ಕೋವ್ಯಾಕ್ಸಿನ್ ಲಸಿಕೆಯನ್ನು ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಉತ್ಪಾದನೆ ಮಾಡುತ್ತಿದೆ.