ನಿರುದ್ಯೋಗ ನಿವಾರಣೆಗೆ ಏನು ಮಾಡಬೇಕು?

– ಪ್ರೊ.ಪ್ರಭಾತ್ ಪಟ್ನಾಯಕ್

– ಅನು:ಕೆ.ವಿ.

ಪ್ರಸ್ತುತ ಭಾರತದಲ್ಲಿ ನಾವು ಹೊಂದಿರುವ ತೀವ್ರವಾದ ನಿರುದ್ಯೋಗವು ಬೇಡಿಕೆ-ನಿರ್ಬಂಧಿತ ವ್ಯವಸ್ಥೆಯನ್ನು ಪ್ರತಿಬಿಂಬಿಸುತ್ತದೆ; ಇದರ ಉಪಶಮನಕ್ಕೆ ತಕ್ಷಣದ ಕ್ರಮವಾಗಿ ಸರ್ಕಾರದ ವೆಚ್ಚದಲ್ಲಿ ಏರಿಕೆ ಮತ್ತು ಅದರಿಂದಾಗಿ ಇತರ ಕ್ರಮಗಳೊಂದಿಗೆ ಒಟ್ಟು ಬೇಡಿಕೆಯ ಏರಿಕೆಯ ಅಗತ್ಯವಿದೆ. ಬೇಡಿಕೆ-ನಿರ್ಬಂಧಿತ ವ್ಯವಸ್ಥೆಯಲ್ಲಿ ಪ್ರಭುತ್ವದ ಖರ್ಚು ಮಾಡುವ ಸಾಮರ್ಥ್ಯದ ಮೇಲೆ ವಾಸ್ತವಿಕ ಮಿತಿಗಳೇನೂ ಇಲ್ಲ ಎಂಬುದು ಅರ್ಥಶಾಸ್ತ್ರದಲ್ಲಿ ಈಗಾಗಲೇ ದಾಖಲಾಗಿದೆ. ಸರಕಾರ ಉದ್ಯೋಗವನ್ನು ಹೆಚ್ಚಿಸಲು ಬಯಸಿದರೆ ತನ್ನ ವೆಚ್ಚವನ್ನು ವಿಸ್ತರಿಸುವ ಧೈರ್ಯವನ್ನು ಹೊಂದಿರಬೇಕು ಮತ್ತು ದೇಶೀಯ ಮತ್ತು ವಿದೇಶಿ ಬಂಡವಾಳಶಾಹಿಗಳು ಅದಕ್ಕೆ ಒಡ್ಡುವ ಅಡ್ಡಿ-ಆತಂಕಗಳನ್ನು  ಎದುರಿಸಲು ಸಿದ್ಧವಾಗಿರಬೇಕು, ಅಂತರರಾಷ್ಟ್ರೀಯ ಮತ್ತು ದೇಶೀಯ ದೊಡ್ಡ ಬಂಡವಾಳದ ಚಪಲಗಳಿಗೆ ಗುಲಾಮರಾಗುವುದನ್ನು ಕೊಡವಿಕೊಳ್ಳಬೇಕು.   ಅದು ಪುನಃ ಸ್ವಾಧೀನಗೊಳ್ಳಬೇಕು ಮತ್ತು ಜನರ ಸೇವೆ ಮಾಡುವ ತನ್ನ ಸಂಕಲ್ಪವನ್ನು ಮತ್ತೆ ಪಡೆದು ಕಾರ್ಯಗತಗೊಳಿಸಬೇಕು. ನಿರುದ್ಯೋಗ 

ಬೇಡಿಕೆ-ನಿರ್ಬಂಧಿತ ವ್ಯವಸ್ಥೆಗಳು ಮತ್ತು ಸಂಪನ್ಮೂಲ-ನಿರ್ಬಂಧಿತ ವ್ಯವಸ್ಥೆಗಳ ನಡುವೆ ಅರ್ಥಶಾಸ್ತ್ರದಲ್ಲಿ ವ್ಯತ್ಯಾಸವನ್ನು ಮಾಡಲಾಗುತ್ತದೆ.  ಸರಳವಾಗಿರಲಿ  ಎಂದು ಸಂಪನ್ಮೂಲ-ನಿರ್ಬಂಧಿತ ವ್ಯವಸ್ಥೆಗಳನ್ನು ನಾವು ಪೂರೈಕೆ-ನಿರ್ಬಂಧಿತ ವ್ಯವಸ್ಥೆಗಳು ಎಂದು ಕರೆಯೋಣ. ಮೊದಲನೆಯದರಲ್ಲಿ, ಒಟ್ಟಾರೆ ಬೇಡಿಕೆಯಲ್ಲಿ ಏರಿಕೆ, ಯಾವುದೇ ಕೊರತೆಯಿಂದಾದ ಹಣದುಬ್ಬರವನ್ನು ಉಂಟುಮಾಡದೆಯೇ ಕಂಡುಬಂದರೆ ಉತ್ಪಾದನೆಯಲ್ಲಿ ಹೆಚ್ಚಳ ಸಂಭವಿಸಬಹುದು; ಎರಡನೆಯದರಲ್ಲಿ, ಉತ್ಪಾದನಾ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸುವುದರಿಂದ ಅಥವಾ ಕೆಲವು ನಿರ್ಣಾಯಕ ಲಾಗುವಾಡುಗಳ ಅಥವಾ ಆಹಾರಧಾನ್ಯಗಳ ಅಥವಾ ಕಾರ್ಮಿಕ ಬಲದ ಕೊರತೆಯಿಂದ ಪೂರೈಕೆಗೆ ನಿರ್ಬಂಧ ಉಂಟಾಗಬಹುದು, ಇದರಿಂದಾಗಿ ಒಟ್ಟು ಬೇಡಿಕೆಯ ಹೆಚ್ಚಳವು ಉತ್ಪಾದನೆಯನ್ನು ಹೆಚ್ಚಿಸುವ ಬದಲು ಕೊರತೆ-ಪ್ರೇರಿತ ಹಣದುಬ್ಬರವನ್ನು ಉಂಟುಮಾಡುತ್ತದೆ. ಬಂಡವಾಳಶಾಹಿ ಸಾಮಾನ್ಯವಾಗಿ, ಅಂದರೆ ಯುದ್ಧದ ಸಮಯಗಳನ್ನು ಹೊರತುಪಡಿಸಿ, ಬೇಡಿಕೆ-ನಿರ್ಬಂಧಿತ ವ್ಯವಸ್ಥೆಯಾಗಿದೆ, ಆದರೆ ಸೋವಿಯತ್ ಒಕ್ಕೂಟ ಮತ್ತು ಪೂರ್ವ ಯುರೋಪಿನಲ್ಲಿ ಅಸ್ತಿತ್ವದಲ್ಲಿದ್ದ ಸಮಾಜವಾದವು ಪೂರೈಕೆ-ನಿರ್ಬಂಧಿತವಾಗಿತ್ತು. ಬೇಡಿಕೆ-ನಿರ್ಬಂಧಿತ ವ್ಯವಸ್ಥೆಯಲ್ಲಿ, ಒಟ್ಟಾರೆ ಬೇಡಿಕೆಯಲ್ಲಿ ಹೆಚ್ಚಳವಾದರೆ ಉದ್ಯೋಗವೂ ಹೆಚ್ಚಾಗುತ್ತದೆ.

ಪ್ರಸ್ತುತ ಭಾರತದಲ್ಲಿ  ಈ ವ್ಯತ್ಯಾಸವನ್ನು ನೆನಪಿನಲ್ಲಿಟ್ಟುಕೊಳ್ಳುವುದು ಮುಖ್ಯವಾಗಿದೆ. ಏಕೆಂದರೆ, ಇಲ್ಲೀಗ ನಿರುದ್ಯೋಗವು ಗಂಭೀರವಾದ ಸಾಮಾಜಿಕ ಸಮಸ್ಯೆಯಾಗಿ ಬಿಟ್ಟು, ಅದರ ತೀವ್ರತೆಯಿಂದಾಗಿ ಅದರ ನಿವಾರಣೆಗೆ ಸಂಪೂರ್ಣ ಆದ್ಯತೆಯ ಅಗತ್ಯವಾಗಿದೆ.  ಇತ್ತೀಚಿನ ಚುನಾವಣೆಗಳಲ್ಲಿ ಬಿಜೆಪಿಯ ಹಿನ್ನಡೆಯ ಹಿಂದೆ ಇದು ಒಂದು ಪ್ರಮುಖ ಅಂಶವಾಗಿತ್ತು.

ಸ್ಥಿರ ಬಂಡವಾಳದ ದಾಸ್ತಾನಿನ ಕೊರತೆಯು ಯಾವುದೇ ಪಾತ್ರವನ್ನು ವಹಿಸದ, ಸರ್ಕಾರಿ ಸೇವೆಗಳು ಸೇರಿದಂತೆ ಸೇವಾ ವಲಯದಲ್ಲಿ ಸಾಕಷ್ಟು ಉದ್ದೇಶಪೂರ್ವಕ ಉದ್ಯೋಗ ಕಡಿತವಾಗಿರುವುದರಿಂದ, ಪ್ರಸ್ತುತ ನಿರುದ್ಯೋಗದ ಮಟ್ಟಕ್ಕೆ ಯಾವುದೇ ಸಾಮರ್ಥ್ಯದ ನಿರ್ಬಂಧ ಕಾರಣ ಎಂದು ಹೇಳುವಂತಿಲ್ಲ.. ಅದೇ ರೀತಿಯಲ್ಲಿ  ಪ್ರಸ್ತುತ ನಿರುದ್ಯೋಗದದ ಮಟ್ಟವು ಯಾವುದೇ ನಿರ್ಣಾಯಕ ಲಾಗುವಾಡಿನ ಕೊರತೆಯಿಂದ ಆದದ್ದಲ್ಲ. ಆಹಾರಧಾನ್ಯಗಳ ಕೊರತೆ  ಕೂಡ ಆಗಿಲ್ಲ, ಏಕೆಂದರೆ, ಬಡವರಿಗೆ ವರ್ಗಾವಣೆಯನ್ನು “ಉಚಿತ ಉಡುಗೊರೆ” ಎಂದು ತಳ್ಳಿಹಾಕುವ ಮೋದಿ ಸರ್ಕಾರವು ಸಹ  ಹೆಚ್ಚಿನ ಸಂಖ್ಯೆಯ ಫಲಾನುಭವಿಗಳಿಗೆ ತಿಂಗಳಿಗೆ ಪ್ರತಿ ವ್ಯಕ್ತಿಗೆ  5 ಕೆಜಿ ಆಹಾರಧಾನ್ಯಗಳನ್ನು ನೀಡುವ ಮೂಲಕ ಕೆಲವು ಚುನಾವಣಾ ಉದ್ದೇಶಗಳಿಗಾಗಿ ಅಸ್ತಿತ್ವದಲ್ಲಿರುವ ದಾಸ್ತಾನುಗಳನ್ನು ಬಳಸುತ್ತಿದೆ. ನಿಜ, ಈ ಕ್ಷಣದಲ್ಲಿ ಖಾಲಿಯಾದ ದಾಸ್ತಾನುಗಳನ್ನು ಮರುಪೂರಣಗೊಳಿಸಲು ಭಾರತವು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗೋಧಿಯನ್ನು ಖರೀದಿಸಲು ಹೊರಟಿದೆ, ಆದರೆ ಇದು ತಪ್ಪು ನಿರ್ವಹಣೆಯಿಂದಲೇ ಹೊರತು ದೇಶದಲ್ಲಿ ಧಾನ್ಯದ ಯಾವುದೇ ಮೂಲಭೂತ ಕಾರಣದಿಂದಾಗಿ ಕೊರತೆಯಿಂದಲ್ಲ. ನಿರುದ್ಯೋಗ 

ಆದ್ದರಿಂದ  ಪ್ರಸ್ತುತ ಭಾರತದಲ್ಲಿ ನಾವು ಹೊಂದಿರುವ ತೀವ್ರವಾದ ನಿರುದ್ಯೋಗವು ಬೇಡಿಕೆ-ನಿರ್ಬಂಧಿತ ವ್ಯವಸ್ಥೆಯನ್ನು ಪ್ರತಿಬಿಂಬಿಸುತ್ತದೆ; ಇದರ ಉಪಶಮನಕ್ಕೆ ತಕ್ಷಣದ ಕ್ರಮವಾಗಿ ಸರ್ಕಾರದ ವೆಚ್ಚದಲ್ಲಿ ಏರಿಕೆ ಮತ್ತು ಅದರಿಂದಾಗಿ ಇತರ ಕ್ರಮಗಳೊಂದಿಗೆ ಒಟ್ಟು ಬೇಡಿಕೆಯ ಏರಿಕೆಯ ಅಗತ್ಯವಿದೆ.

ಉದ್ಯೋಗ ಕಡಿತದ ವಿಪರ್ಯಾಸ

ಹೆಚ್ಚಿನ ಸಂಖ್ಯೆಯ ಸರ್ಕಾರಿ ಉದ್ಯೋಗಗಳು ಭರ್ತಿಯಾಗದೆ ಉಳಿದಿವೆ; ಶಿಕ್ಷಣ ವಲಯದಲ್ಲಿ ವಿಪರೀತ ಪ್ರಮಾಣದಲ್ಲಿ ಅಗತ್ಯ ಸಿಬ್ಬಂದಿಯ ಕೊರತೆ ಬೋಧನೆಯ ಗುಣಮಟ್ಟದ ಮೇಲೆ ಭಾರಿ ದುಷ್ಪರಿಣಾಮ ಉಂಟು ಮಾಡುತ್ತಿದೆ; “ಅಗ್ನಿವೀರ್” ಯೋಜನೆಯಂತಹ ಯೋಜನೆಗಳನ್ನು ಪರಿಚಯಿಸಿದ ಕಾರಣ ಸಶಸ್ತ್ರ ಪಡೆಗಳಲ್ಲಿ ಸಹ ಎಂದಿನ  ನೇಮಕಾತಿ ಪ್ರಮಾಣ ಕಾಣುತ್ತಿಲ್ಲ. ಸಂಕ್ಷಿಪ್ತವಾಗಿ ಹೇಳುವುದಾದರೆ, ಸರ್ಕಾರವು ಉದ್ಯೋಗವನ್ನು ಒದಗಿಸುವಲ್ಲಿ ಮುಂದಾಳುತ್ವ ವಹಿಸುವ ಬದಲು, ಉದ್ಯೋಗವನ್ನು ಕಡಿತಗೊಳಿಸುತ್ತಿರುವ ವಿಪರ್ಯಾಸ ಕಾಣುತ್ತಿದೆ . ಇದಕ್ಕೆ ಕಾರಣ ಅದು ತಾನು ಹಣಕಾಸಿನ ನಿರ್ಬಂಧ  ಅನುಭವಿಸುತ್ತಿದ್ದೇನೆ ಎಂದು ಭಾವಿಸುತ್ತಿರುವುದು . ಇದನ್ನು ಸ್ವಲ್ಪ ಸೂಕ್ಷ್ಮವಾಗಿ ಪರಿಶೀಲಿಸೋಣ.

ಮೇಲೆ ತಿಳಿಸಿರುವಂತೆ, ಮೂಲಭೂತ ವ್ಯತ್ಯಾಸ ಬೇಡಿಕೆ ಮತ್ತು ಪೂರೈಕೆ-ನಿರ್ಬಂಧಿತ ವ್ಯವಸ್ಥೆಗಳ ನಡುವೆ. ಈಗಾಗಲೇ ಚರ್ಚಿಸಿರುವಂತೆ, ಸರಬರಾಜು ನಿರ್ಬಂಧಗಳು ಇಲ್ಲ ಎಂದು ನಾವು ನೋಡಿದ್ದೇವೆ, ಅವನ್ನು ಹೊರತು ಪಡಿಸಿ ಒಂದು ಸಾರ್ವಭೌಮ ಪ್ರಭುತ್ವದ ಮೇಲೆ ಹಣಕಾಸಿನ ನಿರ್ಬಂಧವೇನೂ ಇಲ್ಲ.. ಅಂತಹ ಯಾವುದೇ ಹಣಕಾಸಿನ ನಿರ್ಬಂಧ ಅಂತರರಾಷ್ಟ್ರೀಯ ಬಂಡವಾಳ ಮತ್ತು ಅದರ ಸ್ಥಳೀಯ ಪ್ರತಿರೂಪವಾದ ದೇಶೀಯ ಕಾರ್ಪೊರೇಟ್-ಹಣಕಾಸಿನ ಕೂಟ ಪ್ರಭುತ್ವದ ಮೇಲೆ ಹೇರಿದ್ದಾಗಿರುತ್ತದೆ; ಇದು ಪ್ರಭುತ್ವ ತನ್ನ ಸ್ವಾಯತ್ತತೆಯನ್ನು ಕಳೆದುಕೊಂಡದ್ದನ್ನು  ಬಿಂಬಿಸುತ್ತದೆಯೇ ಹೊರತು ಪ್ರಭುತ್ವದ ಮೇಲೆ ಯಾವುದೇ ವಾಸ್ತವಿಕ ನಿರ್ಬಂಧಗಳಿವೆ ಎಂಬುದನ್ನಲ್ಲ. ನಿರುದ್ಯೋಗ

ಇದನ್ನು ಓದಿ : ಫಿಚ್ ರೇಟಿಂಗ್‌ಗಳು 2024-25ಕ್ಕೆ ಭಾರತದ ಜಿಡಿಪಿ ಬೆಳವಣಿಗೆಯ ಮುನ್ನೋಟ 7.2% ಕ್ಕೆ ಹೆಚ್ಚಳ

ನಿಜ ಹೇಳಬೇಕೆಂದರೆ, ಒಂದು ಬೇಡಿಕೆ-ನಿರ್ಬಂಧಿತ ವ್ಯವಸ್ಥೆಯಲ್ಲಿ ಪ್ರಭುತ್ವದ ಖರ್ಚು ಮಾಡುವ ಸಾಮರ್ಥ್ಯದ ಮೇಲೆ ವಾಸ್ತವಿಕ ಮಿತಿಗಳೇನೂ ಇಲ್ಲ ಎಂಬುದು ಅರ್ಥಶಾಸ್ತ್ರದಲ್ಲಿ ಈಗಾಗಲೇ ದಾಖಲಾಗಿದೆ. ಇದು ತೊಂಬತ್ತು ವರ್ಷಗಳ ಹಿಂದೆ ಕಲೇಕಿ-ಕೀನ್ಸ್ ರವರ ಸೈದ್ಧಾಂತಿಕ ಕ್ರಾಂತಿಯು ಪ್ರಾರಂಭವಾದಾಗಲಿಂದಲೇ ಇದೆ. ಆಧರೂ ಇಂದಿಗೂ ಆ ಕಲ್ಪನೆಯನ್ನು ಪುನಶ್ಚೇತನಗೊಳಿಸಿ, ವಾಸ್ತವವಾಗಿ ಪ್ರಭುತ್ವದ  ಮೇಲೆ ದೊಡ್ಡ ಬಂವಾಳಶಾಹಿ  ಹೇರುವ  ಮಿತಿಗಳನ್ನು ಪ್ರಭುತ್ವದ ಮೇಲಿರುವ ಮಿತಿಗಳು ಎಂಬ ಒಂಬತ್ತು ದಶಕಗಳ ಹಿಂದೆಯೇ ತಳ್ಳಿಹಾಕಲ್ಪಟ್ಟ ಸುಳ್ಳು ಸಿದ್ಧಾಂತಕ್ಕೆ ಮತ್ತೆ ಜೀವ ಕೊಡಲಾಗುತ್ತಿದೆ.  ನಿರುದ್ಯೋಗವನ್ನು ನಿವಾರಿಸಲು ಅತ್ಯುನ್ನತವಾದ ಅವಶ್ಯಕತೆಯೆಂದರೆ, ಪ್ರಭುತ್ವವು ಅಂತರರಾಷ್ಟ್ರೀಯ ಮತ್ತು ದೇಶೀಯ ದೊಡ್ಡ ಬಂಡವಾಳದ ಚಪಲಗಳಿಗೆ ಗುಲಾಮರಾಗುವುದನ್ನು ಕೊಡವಿಕೊಳ್ಳಬೇಕು.   ಅದು ಪುನಃ ಸ್ವಾಧೀನಗೊಳ್ಳಬೇಕು ಮತ್ತು ಜನರ ಸೇವೆ ಮಾಡುವ ತನ್ನ ಸಂಕಲ್ಪವನ್ನು ಮತ್ತೆ ಪಡೆದು ಕಾರ್ಯಗತಗೊಳಿಸಬೇಕು.

ಬೇಡಿಕೆ-ನಿರ್ಬಂಧಿತ ವ್ಯವಸ್ಥೆಯಲ್ಲಿ ಸರಕಾರದ ವೆಚ್ಚಕ್ಕೆ ಹಣಕಾಸನ್ನು ವಿತ್ತೀಯ ಕೊರತೆಯಿಂದ ಒದಗಿಸಲಾಗಿದ್ದರೂ ಸಹ ಅದು ನಿರುದ್ಯೋಗವನ್ನು ನಿವಾರಿಸುತ್ತದೆ; ಅದರ ಮುಖ್ಯ ಹಾನಿಕಾರಕ ಪರಿಣಾಮ ಉದ್ಭವಿಸುವುದು  ಖಾಸಗಿ ಹೂಡಿಕೆಯನ್ನು “ಹೊರದಬ್ಬುತ್ತದೆ” ಅಥವಾ ಇಂತಹ  ಇತರ ಬೋಗಸ್‍ ದಾವೆಗಳಿಂದಾಗಿ ಅಲ್ಲ, ಬದಲಿಗೆ ಇದು ಸಂಪತ್ತಿನ ಅಸಮಾನತೆಯನ್ನು ಅನಪೇಕ್ಷಿತವಾಗಿ ಹೆಚ್ಚಿಸುತ್ತದೆ ಎಂಬುದು. ಸರ್ಕಾರವು ವಿತ್ತೀಯ ಕೊರತೆಯಿಂದ 100 ರೂ.ಗಳನ್ನು ಖರ್ಚು ಮಾಡಿದರೆ, ಅಂದರೆ ಸಾಲದ ಮೂಲಕ ಹಣಕಾಸು ಒದಗಿಸಿದರೆ, ಅದು ತನ್ನ ವೆಚ್ಚದ ಮೂಲಕ ಬಂಡವಾಳಶಾಹಿಗಳ ಕೈಗೆ 100 ರೂ.ಹಾಕುತ್ತದೆ ( ದುಡಿಯುವ ಜನಗಳು ಹಚ್ಚುಕಡಿಮೆ ತಾವು ಗಳಿಸಿದ್ದನ್ನೆಲ್ಲ ಖರ್ಚು ಮಾಡುತ್ತಾರೆ) ಮತ್ತು ನಂತರ ಅದನ್ನು ಅವರಿಂದ ಎರವಲು ಪಡೆಯುತ್ತದೆ. ನಿರುದ್ಯೋಗ 

ಅಡ್ಡಿಗಳನ್ನು ಎದುರಿಸಲು ಸಿದ್ಧವಾಗಿರಬೇಕು

ನಾವು ಅರ್ಥವ್ಯವಸ್ಥೆಯನ್ನುಮೂರು ಪರಸ್ಪರ ಪ್ರತ್ಯೇಕವಾದ ಮತ್ತು ಸಂಪೂರ್ಣ ಭಿನ್ನವಾದ ಮೂರು  ಭಾಗಗಳಾಗಿ, ಅಂದರೆ ಸರಕಾರ, ದುಡಿಯುವ ಜನರು ಮತ್ತು ಬಂಡವಾಳಶಾಹಿಗಳು ಎಂದು  ವಿಭಜಿಸಿದರೆ ಇದು ಸುಲಭವಾಗಿ ಕಂಡುಬರುತ್ತದೆ. ಗಣಿತದ ಪ್ರಕಾರ,ಈ ಮೂರು ಭಾಗಗಳ ಒಟ್ಟು ಕೊರತೆಯು ಯಾವುದೇ ಅವಧಿಯಲ್ಲಿ ಶೂನ್ಯವಾಗಿರಬೇಕು. ದುಡಿಯುವ ಜನರು ಸಾಮಾನ್ಯವಾಗಿ ಅವರು ಗಳಿಸುವ ಎಲ್ಲವನ್ನೂ  ಬಳಸುವುದರಿಂದ, ಅವರ ಕೊರತೆ (ಅಥವಾ ಹೆಚ್ಚುವರಿ) ಶೂನ್ಯವಾಗಿರುತ್ತದೆ, ಸರ್ಕಾರ ವಿತ್ತೀಯ ಕೊರತೆಗಿಳಿದರೆ, ಅಷ್ಟೇ  ಮೊತ್ತದಷ್ಟು ಮೀಸಲು ಹಣವನ್ನು   ತಂತಾನೇ, ಬಂಡವಳಿಗರಲ್ಲಿ,  ಅದರ ಬಗ್ಗೆ ಅವರು ಪ್ರಜ್ಞಾಪೂರ್ವಕವಾಗಿ ಏನನ್ನೂ ಮಾಡದೆಯೇ, ಸೃಷ್ಟಿಸಬೇಕು. ಸರ್ಕಾರವು ಪ್ರಾರಂಭದಲ್ಲಿ  ಬ್ಯಾಂಕ್‌ಗಳಿಂದ ರೂ100 ಸಾಲ ಪಡೆದು ಖರ್ಚು ಮಾಡಿದರೆ, ಅವಧಿಯ ಅಂತ್ಯದ ವೇಳೆಗೆ ಅದು ಬಂಡವಳಿಗರಲ್ಲಿ  ಅನಪೇಕ್ಷಿತವಾಗಿ ಸಂಗ್ರಹವಾಗಬಹುದಾದ ರೂ100 ಹೆಚ್ಚುವರಿ ಹಣವನ್ನು ಅವರಿಂದ  ಎರವಲು ಪಡೆಯಬಹುದು ಮತ್ತು ಬ್ಯಾಂಕುಗಳಿಗೆ ಮರುಪಾವತಿ ಮಾಡಬಹುದು.

ಈ ಹೆಚ್ಚುವರಿ ಮೊತ್ತವು ಸರ್ಕಾರ ಮಾಡುವ ವೆಚ್ಚದಿಂದ  ಉತ್ಪತ್ತಿಯಾಗುವ ಸರಕುಗಳಿಗೆ ಹೆಚ್ಚಿನ ಬೇಡಿಕೆಯಿಂದಾಗಿ ಬಂಡವಾಳಶಾಹಿಗಳಿಗೆ ಸೇರಿಕೊಳ್ಳುತ್ತದೆ. ಇದು ಅವರ ಉಳಿತಾಯ ಮತ್ತು ಸಂಪತ್ತಿಗೆ ಅನಪೇಕ್ಷಿತ ಸೇರ್ಪಡೆಯಾಗಿದೆ ಮತ್ತು ಅದರಿಂದಾಗಿ ಸಂಪತ್ತಿನ ಅಸಮಾನತೆಯನ್ನು ಹೆಚ್ಚಿಸುತ್ತದೆ. ಸಂಪತ್ತಿನ ಅಸಮಾನತೆಯನ್ನು ತಡೆಗಟ್ಟಲು, ಸರ್ಕಾರವು ಬಂಡವಳಿಗರ  ಮೇಲೆ ಅಷ್ಟೇ ಮೊತ್ತದ ತೆರಿಗೆಯನ್ನು ವಸೂಲು ಮಾಡಿ  ತನ್ನ ವೆಚ್ಚವನ್ನು ಭರಿಸಬಹುದು. ಇದು ಆರಂಭಿಕ ಪರಿಸ್ಥಿತಿಗೆ ಹೋಲಿಸಿದರೆ ಬಂಡವಳಿಗರ ಸಂಪತ್ತನ್ನು ಕಡಿಮೆ ಮಾಡುವುದಿಲ್ಲ. ಅಂದರೆ, ಬಂಡವಳಿಗರ ಮೇಲೆ ತೆರಿಗೆ ವಿಧಿಸುವ ಮೂಲಕ ಪ್ರಭುತ್ವದ ಹೆಚ್ಚುವರಿ ವೆಚ್ಚದಿಂದ ಪ್ರಭುತ್ವ ವೆಚ್ಚವು ಉದ್ಯೋಗಗಳನ್ನು ಹೆಚ್ಚಿಸಬಹುದು; ಇದು ಬಂಡವಳಿಗರ  ಸಂಪತ್ತನ್ನೂ ತಟ್ಟುವುದಿಲ್ಲ, ಏಕೆಂದರೆ ಅವರ ಆರಂಭಿಕ ಸಂಪತ್ತು ಬದಲಾಗದೆ ಉಳಿದಿರುತ್ತದೆ. ಪ್ರಭುತ್ವವು ಉದ್ಯೋಗವನ್ನು ಹೆಚ್ಚಿಸಲು ಬಯಸಿದರೆ ತನ್ನ ವೆಚ್ಚವನ್ನು ವಿಸ್ತರಿಸುವ ಧೈರ್ಯವನ್ನು ಹೊಂದಿರಬೇಕು ಮತ್ತು ದೇಶೀಯ ಮತ್ತು ವಿದೇಶಿ ಬಂಡವಾಳಶಾಹಿಗಳು ತನ್ನ ಕ್ರಮಗಳಿಗೆ ಒಡ್ಡುವ ಅಡ್ಡಿ-ಆತಂಕಗಳನ್ನು  (ಬಂಡವಾಳದ ಹೊರಹರಿವು ಮುಂತಾದ ರೂಪಗಳಲ್ಲಿ) ಎದುರಿಸಲು ಸಿದ್ಧವಾಗಿರಬೇಕು.

ಉದ್ಯೋಗವನ್ನು ವಿಸ್ತರಿಸಲು, ಮೊದಲನೆಯದಾಗಿ, ಶಾಲೆ ಮತ್ತು ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಶಿಕ್ಷಕರು ಮತ್ತು ಆರೋಗ್ಯ ಮತ್ತು ಶುಶ್ರೂಷಾ ಸಿಬ್ಬಂದಿ ಸೇರಿದಂತೆ ಸರ್ಕಾರದೊಳಗೆ ಇರುವ ಎಲ್ಲಾ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಅಗತ್ಯವಿದೆ. ಎರಡನೆಯದಾಗಿ, ಈ ವಲಯಗಳಲ್ಲಿನ ಹುದ್ದೆಗಳ ಸಂಖ್ಯೆಯಲ್ಲಿ ಹೆಚ್ಚಳದ ಅಗತ್ಯವಿದೆ; ಉದಾಹರಣೆಗೆ ದೇಶದಲ್ಲಿ ಶಿಕ್ಷಣವು ಹೀನಾಯ ಮಟ್ಟವನ್ನು ತಲುಪಿದೆ ಮತ್ತು ಅರ್ಹ ಸಿಬ್ಬಂದಿಯ ಸೂಕ್ತ ವಿಸ್ತರಣೆಯ ಮೂಲಕ ಅದಕ್ಕೆ ಪುನಶ್ಚೇತನದ ಅಗತ್ಯವಿದೆ. ಮೂರನೆಯದಾಗಿ, ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅಸ್ತಿತ್ವದಲ್ಲಿರುವ ಮಿತಿಗಳನ್ನು ತೆಗೆದುಹಾಕುವ ಮೂಲಕ ಮತ್ತು ಸಾರ್ವತ್ರಿಕ ಮತ್ತು ಬೇಡಿಕೆ-ಚಾಲಿತಗೊಳಿಸುವ ಮೂಲಕ ಅದರ ವ್ಯಾಪ್ತಿಯನ್ನು ವಿಸ್ತರಿಸುವ ಅಗತ್ಯವಿದೆ; ಇದನ್ನು ನಗರ ಪ್ರದೇಶಗಳಿಗೂ ವಿಸ್ತರಿಸಬೇಕು ಮತ್ತು ಪ್ರಸ್ತುತ ಕೊಡುತ್ತಿರುವ ಅತ್ಯಲ್ಪ ಮೊತ್ತಕ್ಕಿಂತ ಹೆಚ್ಚಿನ ಕೂಲಿಯನ್ನು ಸೂಕ್ತ ಮಟ್ಟದಲ್ಲಿ ನಿಗದಿಪಡಿಸಬೇಕು.

ಒಂದೇ ಕಲ್ಲಿನಲ್ಲಿ ಮೂರು ಹಕ್ಕಿಗಳು

ಇದರಿಂದಲೇ, ಅರ್ಥವ್ಯವಸ್ಥೆಯಲ್ಲಿ  ಎಲ್ಲಾ ತರಹದ  ಸರಕುಗಳಿಗೆ ಬೇಡಿಕೆಯನ್ನು ಸೃಷ್ಟಿಯಾಗುತ್ತದೆ;  ಇದನ್ನು ಭಾಗಶಃ ಅಸ್ತಿತ್ವದಲ್ಲಿರುವ ಸಾಮರ್ಥ್ಯದ ಹೆಚ್ಚಿನ ಬಳಕೆಯ ಮೂಲಕ, ಆಮೂಲಕ  ಹೆಚ್ಚಿನ ಉದ್ಯೋಗಗಳಿಂದ ಮತ್ತು ಭಾಗಶಃ ಉತ್ಪಾದನಾ ಸಾಮರ್ಥ್ಯವನ್ನು ಮುಖ್ಯವಾಗಿ ಸಣ್ಣ ಪ್ರಮಾಣದ ವಲಯದಲ್ಲಿ, ಸೂಕ್ತ ಸಾಲ-ವ್ಯವಸ್ಥೆಗಳ  ಮೂಲಕ ಹೆಚ್ಚಿಸಿ  ಪೂರೈಸಬಹುದು. ಬೇರೆ ರೀತಿಯಲ್ಲಿ ಹೇಳುವುದಾದರೆ ಸರ್ಕಾರ ಉದ್ಯೋಗವನ್ನು ಒದಗಿಸುವುದು  ಅದರ “ಗುಣಕ” ಪರಿಣಾಮಗಳಿಂದಾಗಿ ಖಾಸಗಿ ವಲಯದಲ್ಲೂ ಹೆಚ್ಚುವರಿ ಉದ್ಯೋಗವನ್ನು ಸೃಷ್ಟಿಸುತ್ತದೆ.

ಮೇಲೆ ಚರ್ಚಿಸಿದಂತೆ, ಪ್ರಭುತ್ವದ ಹೆಚ್ಚುವರಿ ವೆಚ್ಚಕ್ಕೆ  ಸಂಪೂರ್ಣವಾಗಿ  ಬಂಡವಳಿಗರ ಮೇಲೆ, ಒಟ್ಟಾರೆಯಾಗಿ  ಶ್ರೀಮಂತರ ಮೇಲೆ ಹೆಚ್ಚಿನ ತೆರಿಗೆಗಳ ಮೂಲಕ ಹಣಕಾಸು ಒದಗಿಸಬೇಕಾಗುತ್ತದೆ. ಅಂತಹ ತೆರಿಗೆಗಳು ಅವರ ಹರಿವಿನ ಆದಾಯದ ಮೇಲೆ ಅಥವಾ ಅವರ ಸಂಪತ್ತಿನ ದಾಸ್ತಾನುಗಳ ಮೇಲೆ ಇರಬಹುದು; ಇವೆರಡರಲ್ಲಿ, ರಿಯಲ್ ಎಸ್ಟೇಟ್ ಮತ್ತು ನಗದು ಬಾಕಿಗಳನ್ನು ಒಳಗೊಂಡಂತೆ ಯಾವುದೇ ಗಮನಾರ್ಹ ನೇರ ಆದಾಯವನ್ನು ಗಳಿಸದ  ಅವರ ಸಂಪತ್ತಿನ ಮೇಲೆ ತೆರಿಗೆ ವಿಧಿಸುವುದು ಒಳ್ಳೆಯದು.  ಏಕೆಂದರೆ ಅದು ಉತ್ಪಾದಕ ಹೂಡಿಕೆಯ ಮೇಲೆ ಯಾವುದೇ ಪ್ರತಿಕೂಲ ಪರಿಣಾಮಗಳನ್ನು ಬೀರುವುದಿಲ್ಲ ಎಂದು  ಹೇಳಬಹುದು. ನಿಜ, ಯಾವುದೇ ಸಂಪತ್ತಿನ ತೆರಿಗೆಯೊಂದಿಗೆ, ಅದನ್ನು ವಂಚಿಸುವುದನ್ನು ತಡೆಗಟ್ಟಲು ಪಿತ್ರಾರ್ಜಿತ ಆಸ್ತಿ ತೆರಿಗೆ ಇರಬೇಕು. ನವ ಉದಾರವಾದಿ ಯುಗದಲ್ಲಿ ದೇಶದಲ್ಲಿ ಸಂಪತ್ತಿನ ಅಸಮಾನತೆಯು ಗಗನಕ್ಕೇರಿದ್ದರೂ ಸಹ ಭಾರತವು ವಾಸ್ತವಿಕವಾಗಿ ಯಾವುದೇ ಸಂಪತ್ತು ಅಥವಾ ಪಿತ್ರಾರ್ಜಿತ ಆಸ್ತಿ ತೆರಿಗೆಯನ್ನು ಹೊಂದಿಲ್ಲ ಎಂಬುದು ಆಘಾತಕಾರಿ ಸಂಗತಿ. ಆದಾಗ್ಯೂ ಈ ಖಂಡನೀಯ ಸಂಗತಿಯು  ಸಂಪತ್ತು ಮತ್ತು ಪಿತ್ರಾರ್ಜಿತ ಆಸ್ತಿ ತೆರಿಗೆಯನ್ನು ಹೇರಲು ಅಪಾರ ಅವಕಾಶಗಳಿವೆ ಎಂಬುದನ್ನೂ ಸೂಚಿಸುತ್ತದೆ.

ಸಂಪತ್ತು ಮತ್ತು ಪಿತ್ರಾರ್ಜಿತ ಆಸ್ತಿ ತೆರಿಗೆಯಿಂದ ಹಣಕಾಸು ಒದಗಿಸಿಕೊಂಡ  ಸರ್ಕಾರಿ ವೆಚ್ಚದ ಹೆಚ್ಚಳವು ಅರ್ಥವ್ಯವಸ್ಥೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗಾವಕಾಶಗಳನ್ನು ನಿರ್ಮಿಸುವ ಅತ್ಯಂತ ಸುಲಭವಾದ ಮತ್ತು ನೇರವಾದ ಮಾರ್ಗವನ್ನು ಒದಗಿಸುತ್ತದೆ. ಇದು ಒಂದೇ ಕಲ್ಲಿನಲ್ಲಿ ಹಲವಾರು ಪಕ್ಷಿಗಳನ್ನು ಹೊಡೆಯುತ್ತದೆ: ಹೆಚ್ಚಿನ ಪ್ರಮಾಣದಲ್ಲಿ  ಉದ್ಯೋಗವನ್ನು ಒದಗಿಸುವುದು, ಪ್ರಜಾಪ್ರಭುತ್ವಕ್ಕೆ ಅಗತ್ಯವಾದ ಸಂಪತ್ತಿನ ಅಸಮಾನತೆಯನ್ನು ತಡೆಗಟ್ಟುವುದು ಮತ್ತು ದೇಶದಲ್ಲಿ ಶಿಕ್ಷಣ ಮತ್ತು ಆರೋಗ್ಯದ ಸ್ಥಿತಿಯನ್ನು ಅವುಗಳು ಈಗ ತಲುಪಿರುವ  ಹೀನಾಯ ಸ್ಥಿತಿಯಿಂದ ಮೇಲಕ್ಕೆತ್ತಿ ಉತ್ತಮಗೊಳಿಸುವುದು. ನಿರುದ್ಯೋಗ 

 

 

“ರೈಲ್ವೆಯಲ್ಲಿ ಸುರಕ್ಷಿತತೆಯ ವಿಭಾಗದಲ್ಲಿ

1,70,000 ಹುದ್ದೆಗಳಿಗಿಂತಲೂ ಹೆಚ್ಚು ಖಾಲಿ ಇವೆ”

 

ಯಾವುದಾದರೂ ರೈಲಿನ

ಉದ್ಘಾಟನೆಗೆ

ತಡಮಾಡಬಾರದು

ಎಂದಿದ್ದರೆ  ಅದು ಈ ರೈಲಿನದ್ದು                                                           

(ಉದ್ಯೋಗ ನಿರ್ಮಾಣದ್ದು)

 

ವ್ಯಂಗ್ಯಚಿತ್ರ: ಸಂದೀಪ ಅಧ್ವರ್ಯು,

ಟೈಂಸ್‍ ಆಫ್ ಇಂಡಿಯ

 

 

ಇದನ್ನು ನೋಡಿ : ಬಂಡವಾಳಶಾಹಿ ಬೆಳೆದಷ್ಟು ಪ್ರತಿರೋಧ ಹೆಚ್ಚಾಗುತ್ತಲೆ ಇರುತ್ತದೆ – ರಾಜೇಂದ್ರ ಚೆನ್ನಿJanashakthi Media

Donate Janashakthi Media

Leave a Reply

Your email address will not be published. Required fields are marked *