ಶಿವಮೊಗ್ಗ: ಕಾಡಾನೆ ಹಾವಳಿ ನಿಯಂತ್ರಿಸಲು ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಭಾಗದಲ್ಲಿ ಭದ್ರಾ ಅಭಯಾರಣ್ಯಗಳಲ್ಲಿ ಆನೆ ಶಿಬಿರ ಸ್ಥಾಪಿಸುವುದಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ. ಕಾಡಾನೆ
ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಸಭಾಂಗಣದಲ್ಲಿಂದು ನಡೆದ ಭದ್ರಾ ಹುಲಿ ಸಂರಕ್ಷಿತ ಪ್ರದೇಶ ರಜತ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ವನ್ಯಜೀವಿ ಮತ್ತು ಮಾನವ ಸಂಘರ್ಷ ಹೆಚ್ಚಾಗುತ್ತಿದ್ದು, ಆನೆಗಳಿಂದ ಹೆಚ್ಚಿನ ಜೀವಹಾನಿ ಮತ್ತು ಬೆಳೆ ಹಾನಿ ಸಂಭವಿಸುತ್ತಿದೆ. ಇದನ್ನು ನಿಯಂತ್ರಿಸಲು 2 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಆನೆ ವಿಹಾರ ಧಾಮ ಅಂದರೆ ಎಲಿಫೆಂಟ್ ಸಾಫ್ಟ್ ರಿಲೀಸ್ ಸೆಂಟರ್ ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸುವಂತೆ ವನ್ಯಜೀವಿ ಪರಿಪಾಲಕರಿಗೆ ಸೂಚನೆ ನೀಡಿರುವುದಾಗಿ ಹೇಳಿದರು.
ಈ ಆನೆ ವಿಹಾರ ಧಾಮದ ಸುಮಾರು 5 ಸಾವಿರ ಎಕರೆ ಪ್ರದೇಶದಲ್ಲಿ ಆನೆಗಳಿಗೆ ಇಷ್ಟವಾದ ಬಿದಿರು, ಹಲಸು, ಹುಲ್ಲು ಇತ್ಯಾದಿ ಬೆಳೆಸಲಾಗುವುದು ಮತ್ತು ಸುತ್ತಲೂ ಬ್ಯಾರಿಕೇಡ್ ಅಳವಡಿಸಿ ಸೆರೆ ಹಿಡಿದ ಆನೆಗಳನ್ನು ಇಲ್ಲಿ ತಂದು ಬಿಡಲಾಗುವುದು. ಇದರಿಂದ ಕೊಡಗು, ಹಾಸನ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಾಡಿನ ಹೊರಗೆ ಇರುವ ಆನೆಗಳಿಂದ ಜನರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ಸಾಧ್ಯವಾಗುತ್ತದೆ ಎಂದರು.
ಭದ್ರಾ ಹುಲಿ ಅಭಯಾರಣ್ಯ ಒಂದು ಸಾವಿರ ಚದರ ಕಿಲೋ ಮೀಟರ್ ವ್ಯಾಪ್ತಿಯ ವಿಶಾಲವಾದ ಸುಭದ್ರ ಅರಣ್ಯವಾಗಿದೆ. ಇದು ವಿಶ್ವ ಪಾರಂಪರಿಕ ತಾಣವಾದ ಪಶ್ಚಿಮ ಘಟ್ಟಗಳ ಶ್ರೀಮಂತ ಅರಣ್ಯ ಸಂಪತ್ತನ್ನು ಒಳಗೊಂಡಿದೆ. ಕರ್ನಾಟಕ ಹುಲಿ ಸಂಖ್ಯೆಯಲ್ಲಿ ದೇಶದಲ್ಲೇ 2ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಸುಮಾರು 563 ಹುಲಿಗಳಿವೆ. ಅಳಿವಿನಂಚಿನಲ್ಲಿರುವ ಹುಲಿಗಳನ್ನು ಸಂರಕ್ಷಿಸಲು ಅಂದಿನ ಪ್ರಧಾನಿ ಇಂದಿರಾಗಾಂಧೀ ಅವರು 1973ರಲ್ಲಿ ಆರಂಭಿಸಿದ ಹುಲಿ ಯೋಜನೆಗೆ 50 ವರ್ಷ ತುಂಬಿರುವುದೂ ಮತ್ತೊಂದು ಸಂತೋಷದಾಯಕ ವಿಚಾರವಾಗಿದೆ ಎಂದರು.
ಇದನ್ನು ಓದಿ : ಬಿಎಂಟಿಸಿ ಕಂಡಕ್ಟರ್, ಡ್ರೈವರ್ ಗೆ ಸ್ಕ್ರೂಡ್ರೈವರ್ ತೋರಿಸಿ ಬೆದರಿಕೆ ಹಾಕಿದ ಪ್ರಯಾಣಿಕ
1980ರಲ್ಲಿ ದೇಶದಲ್ಲಿ ಕೇವಲ 1,827ರಷ್ಟಿದ್ದ ಹುಲಿಗಳ ಸಂಖ್ಯೆ ಈಗ 3ಸಾವಿರ ದಾಟಿದೆ. ಇದು ದೇಶದ ಅರಣ್ಯ ಇಲಾಖೆಯ ಸಿಬ್ಬಂದಿಯ ಪರಿಶ್ರಮದ ಫಲ ಎಂದರು.
ಅರಣ್ಯ ಇಲಾಖೆ ರಾಜ್ಯದ 5 ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ 200ಕ್ಕೂ ಹೆಚ್ಚು ಕಳ್ಳಬೇಟೆ ತಡೆ ಶಿಬಿರ ಅಂದರೆ ಆಂಟಿ ಪೋಚಿಂಗ್ ಕ್ಯಾಂಪ್ ತೆರೆದಿದೆ. ಇದರಿಂದ ಕಳ್ಳಬೇಟೆ ನಿಂತಿದ್ದು, ಹುಲಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದು ವಿವರಿಸಿದರು.
ಭದ್ರಾ ಹುಲಿ ಸಂರಕ್ಷಿತ ಪ್ರದೇಶವು ನಿಸರ್ಗದತ್ತವಾದ ರಮಣೀಯ ಭೂಪ್ರದೇಶವನ್ನು ಒಳಗೊಂಡಿದೆ. ಇಲ್ಲಿ ವರ್ಷದ 365 ದಿನವೂ ನದಿ, ತೊರೆ, ಹಳ್ಳಗಳು ಹರಿಯುತ್ತಲೇ ಇರುತ್ತವೆ. ಜಲ ಸಮೃದ್ಧಿ, ಸಸ್ಯ ಸಂಕುಲ, ಪ್ರಾಣಿ ಸಂಕುಲ, ಕೀಟ ಸಂಕುಲ ಇರುವ ಈ ಪ್ರದೇಶ ಅತ್ಯಮೂಲ್ಯ ಜೀವವೈಧ್ಯತೆಯಿಂದ ಕೂಡಿದ್ದು, ನೂರಾರು ಪ್ರಬೇಧದ ವನ್ಯಜೀವಿಗಳಿಗೆ ನೆಲೆಯಾಗಿದೆ. ಕಾಡಾನೆ
ಅಂದಿನ ಮೈಸೂರು ಸರ್ಕಾರವು ಈ ಪ್ರದೇಶದ ವನ್ಯಜೀವಿಗಳ ಪ್ರಾಮುಖ್ಯತೆಯನ್ನು ಅರಿತು 1951 ರಲ್ಲಿ 124 ಚದರ ಕಿ.ಮೀ ವಿಸ್ತೀರ್ಣವನ್ನು ಜಾಗರ ವ್ಯಾಲಿ ಗೇಂ ರಿಸರ್ವ್ ಎಂಬುದಾಗಿ ಘೋಷಣೆ ಮಾಡಿದ್ದು, ತದ ನಂತರ 1974 ರಲ್ಲಿ 492 ಚದರ ಕಿ.ಮೀ ವ್ಯಾಪ್ತಿಗೆ ವಿಸ್ತರಿಸಿ ಭದ್ರಾ ವನ್ಯಜೀವಿ ಧಾಮವನ್ನಾಗಿ ಕರ್ನಾಟಕ ಸರ್ಕಾರವು ಅಧಿಸೂಚನೆ ಮಾಡಿತು. ಈ ವನ್ಯಧಾಮವನ್ನು 1998 ರಲ್ಲಿ “ಹುಲಿ ಯೋಜನೆ” ಅಡಿಯಲ್ಲಿ ರಾಷ್ಟದ 25ನೇ ಹುಲಿ ಸಂರಕ್ಷಿತ ಪ್ರದೇಶವನ್ನಾಗಿ ಘೋಷಿಸಲಾಗಿರುತ್ತದೆ ಎಂದು ತಿಳಿಸಿದರು. ಕಾಡಾನೆ
ಈ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಿಂದೆ 16 ಗ್ರಾಮಗಳ 736 ಕುಟುಂಬಗಳು ವಾಸವಿದ್ದು, ಆ ಕುಟುಂಬಗಳು ಸ್ವ ಇಚ್ಛೆಯಿಂದ ಭದ್ರಾ ಪುನರ್ವಸತಿ ಯೋಜನೆಯಡಿಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕೆಳಗೂರು ಹಾಗೂ ಮಳಲಿ ಚನ್ನೇನಹಳ್ಳಿ ಗ್ರಾಮಗಳಿಗೆ ಸ್ಥಳಾಂತರಗೊಂಡಿರುತ್ತಾರೆ. ಇದೊಂದು ಭಾರತದಲ್ಲಿಯೇ ಅತ್ಯಂತ ಯಶಸ್ವಿ ಪುನರ್ವಸತಿ ಯೋಜನೆಯಾಗಿದ್ದು, ಹುಲಿ ಸಂರಕ್ಷಣೆಯಲ್ಲಿ ಜನರ ಸಹಭಾಗಿತ್ವದ ಪ್ರಾಮುಖ್ಯತೆಯನ್ನು ತೋರಿಸುತ್ತದೆ. ಇದೇ ರೀತಿ ರಾಜ್ಯದ ಇತರ ಅರಣ್ಯ ಪ್ರದೇಶದ ಒಳಗೆ ವಾಸಿಸುತ್ತಿರುವವರ ಮನವೊಲಿಸಿ ಅವರೆಲ್ಲರಿಗೂ ಪುನರ್ವಸತಿ ಕಲ್ಪಿಸಲು ರಾಜ್ಯ ಸರ್ಕಾರ ಪ್ರಯತ್ನ ಮಾಡುವುದು ಎಂದು ತಿಳಿಸಿದರು.
ಇದನ್ನು ನೋಡಿ : ಕತ್ತೆ ಹಾಲು: ಹೆಚ್ಚು ಸುಳ್ಳುಗಳು ಕಡಿಮೆ ಸತ್ಯಗಳು !