ಬೆಂಗಳೂರು: ವಿದ್ಯುತ್ ತಂತಿ ತುಳಿದು ತಾಯಿ-ಮಗು ಸಾವು ಪ್ರಕರಣದಲ್ಲಿ ಈಗಾಗಲೇ ಐವರು ಬೆಸ್ಕಾಂ ಅಧಿಕಾರಿಗಳು, ಸಿಬ್ಬಂದಿಯನ್ನು ಪೊಲೀಸರು ಬಂದಿಸಿದ್ದಾರೆ. ಇನ್ನು ಪ್ರಕರಣದಲ್ಲಿ ನಿರ್ಲಕ್ಷ್ಯದ ಆರೋಪದಲ್ಲಿ ಇಬ್ಬರು ಬೆಸ್ಕಾಂ ಅಧಿಕಾರಿಗಳನ್ನು ಇಂಧನ ಇಲಾಖೆ ಅಮಾನತು ಮಾಡಿದ್ದು, ಮೃತರಿಗೆ ರಾಜ್ಯ ಸರ್ಕಾರದಿಂದ ತಲಾ 5 ಲಕ್ಷ ಪರಿಹಾರ ಘೋಷಿಸಲಾಗಿದೆ. ಅಮಾನತು
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು, ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ಹೋಪ್ ಫಾರ್ಮ್ ಬಳಿ ವಿದ್ಯುತ್ ಶಾಕ್‌ಗೆ ಒಬ್ಬ ಮಹಿಳೆ ಮತ್ತು ಒಂದು ಮಗು ಸಾವನ್ನಪ್ಪಿರುವ ದುರ್ದೈವದ ಘಟನೆ ನಡೆದಿದೆ. ಈ ದುರದೃಷ್ಟಕರ ಸಾವುಗಳಿಗೆ ಕಾರಣವಾದ ಘಟನೆಯ ಕುರಿತು ನಾವು ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದೇವೆ. ಇದರ ವರದಿಯನ್ನು ಎದುರು ನೋಡುತ್ತಿದ್ದೇವೆ. ಈ ಅಪಘಾತಕ್ಕೆ ಕಾರಣರಾದ AE ಮತ್ತು AEE ಯನ್ನು ಅಮಾನತುಗೊಳಿಸಲಾಗಿದೆ ಮತ್ತು ಇದಕ್ಕೆ ಕಾರಣಾದವರು ಮತ್ತಾರೇ ಇದ್ದರೂ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು. ಈ ದುರ್ಘಟನೆಯಲ್ಲಿ ಸಂಬಂಧಿಕರನ್ನು ಕಳೆದುಕೊಂಡ ಕುಟುಂಬ ಸದಸ್ಯರಿಗೆ ರಾಜ್ಯ ಸರ್ಕಾರ ತಲಾ 5 ಲಕ್ಷ ರೂ ಪರಿಹಾರ ನೀಡಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ವಿದ್ಯುತ್ ಚಾಲಿತ ದ್ವಿಚಕ್ರ ವಾಹನಕ್ಕೆ ಬೆಂಕಿ: 1441 ವಾಹನ ಹಿಂಪಡೆದ ಓಲಾ ಸಂಸ್ಥೆ
ಐವರ ಬಂಧನ:
ವಿದ್ಯುತ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಕಾಡುಗುಡಿ ಪೊಲೀಸರು ಬಂಧಿಸಿದ್ದಾರೆ. ನಿರ್ಲಕ್ಷ್ಯದ ಆರೋಪದಡಿ ಬೆಸ್ಕಾಂ ವೈಟ್‌ಫೀಲ್ಡ್ ವಿಭಾಗದ ಎಕ್ಸಿಕ್ಯೂಟಿವ್ ಎಂಜಿನಿಯರ್ ಶ್ರೀರಾಮ್, ಅಸಿಸ್ಟೆಂಟ್ ಎಂಜಿನಿಯರ್ ಚೇತನ್, ಎಇಇ ಸುಬ್ರಮಣ್ಯ, ಜೂನಿಯರ್ ಎಂಜಿನಿಯರ್ ರಾಜಣ್ಣ ಹಾಗೂ ಸ್ಟೇಷನ್ ಆಪರೇಟರ್ ಮಂಜು ಅವರನ್ನು ಪೊಲೀಸರು ಬಂಧಿಸಿದ್ದಾರೆ. ಅಮಾನತು
ಇಬ್ಬರ ಸಾವಿಗೆ ಬಿಎಂಟಿಸಿ ಬಸ್ ಡ್ರೈವರ್ ಕೂಡ ಕಾರಣ?
ವಿದ್ಯುತ್ ತಗುಲಿ ತಾಯಿ-ಮಗು ಮೃತಪಡಲು ಬಿಎಂಟಿಸಿ ಬಸ್ ಡ್ರೈವರ್ ಕೂಡ ಕಾರಣ ಎಂಬ ಆರೋಪ ಕೇಳಿಬಂದಿದೆ. ಸಿಗ್ನಲ್ ಬಿದ್ದಿದೆ ಎಂದು ಘಟನೆ ನಡೆದಿದ್ದ ಸ್ಥಳದಲ್ಲಿ ಬಸ್ ಚಾಲಕ ಡೋರ್ ಓಪನ್ ಮಾಡಿದ್ದ. ಸ್ಥಳದಿಂದ ನೂರು ಮೀಟರ್ ದೂರದಲ್ಲಿ ಬಸ್ ನಿಲ್ದಾಣವಿತ್ತು. ಆದರೂ ಮೊದಲೇ ನಿಲ್ಲಿಸಿದ್ದರಿಂದ ತಾಯಿ-ಮಗು ಇಳಿದು ನಡೆದುಕೊಂಡು ಹೋಗಿದ್ದರಿಂದ ವಿದ್ಯುತ್ ತಂತಿ ತುಳಿದು ದರಂತಕ್ಕೆ ಕಾರಣವಾಗಿದೆ. ಹೀಗಾಗಿ ಬಸ್ ಚಾಲಕನ ವಿರುದ್ಧವೂ ಕ್ರಮಕ್ಕೆ ಆಗ್ರಹ ಕೇಳಿಬಂದಿದೆ.
ನ್ಯಾಯಕ್ಕಾಗಿ ಆಗ್ರಹಿಸಿ ಸಂಬಂಧಿಕರ ಪ್ರತಿಭಟನೆ:
ವಿದ್ಯುತ್ ತಂತಿ ತುಳಿದು ತಾಯಿ-ಮಗು ಸಾವಿಗೀಡಾದ್ದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಹೀಗಾಗಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಂಡು, ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಮೃತರ ಕುಟುಂಬಸ್ಥರು, ಸ್ಥಳೀಯರು ಕಾಡುಗುಡಿಯಲ್ಲಿ ಪ್ರತಿಭಟನೆ ನಡೆಸಿದರು. ಬೆಸ್ಕಾಂಗೆ ಧಿಕ್ಕಾರ ಕೂಗಿದ ಪ್ರತಿಭಟನಾಕಾರರು ನ್ಯಾಯಕ್ಕಾಗಿ ರಸ್ತೆ ತಡೆ ನಡೆಸಿ ಆಕ್ರೋಶ ಹೊರಹಾಕಿದರು. ಇದರಿಂದ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತವಾಯಿತು. ಸ್ಥಳಕ್ಕೆ ಪೊಲೀಸರು ದೌಡಾಯಿಸಿ, ಪರಿಸ್ಥಿತಿಯನ್ನು ನಿಯಂತ್ರಿಸಿದರು. ಅಮಾನತು
ವಿಡಿಯೋ ನೋಡಿ:ಬೆಳಕಿನ ಚಿತ್ತಾರದಲ್ಲಿ ಮೈಸೂರು ದಸರಾ Janashakthi Media