ಚುನಾವಣಾ ಬಾಂಡ್‌ಗಳು ರದ್ದು | ಯೋಜನೆ ಅಸಂವಿಧಾನಿಕ ಎಂದ ಸುಪ್ರೀಂಕೋರ್ಟ್ ಮಹತ್ವದ ತೀರ್ಪು

ನವದೆಹಲಿ: ಚುನಾವಣಾ ಬಾಂಡ್‌ಗಳ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಗುರುವಾರ ತನ್ನ ಬಹು ನಿರೀಕ್ಷಿತ ತೀರ್ಪನ್ನು ನೀಡಿದ್ದು, ಅನಾಮಧೇಯ ಎಲೆಕ್ಟೋರಲ್ ಬಾಂಡ್‌ಗಳು ಸಂವಿಧಾನದ 19(1)(ಎ) ಪರಿಚ್ಛೇದದ ಅಡಿಯಲ್ಲಿ ಮಾಹಿತಿಯ ಹಕ್ಕನ್ನು ಉಲ್ಲಂಘಿಸುತ್ತದೆ. ಅದರಂತೆ, ಈ ಯೋಜನೆಯನ್ನು ಅಸಂವಿಧಾನಿಕ ಎಂದು ರದ್ದು ಮಾಡಿದೆ.

ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿಆರ್ ಗವಾಯಿ, ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಸಾಂವಿಧಾನಿಕ ಪೀಠವು ನವೆಂಬರ್‌ನಲ್ಲಿ ಮೂರು ದಿನಗಳ ಕಾಲ ವಿವಾದಾತ್ಮಕ ಚುನಾವಣಾ ಬಾಂಡ್‌ಗಳ ಯೋಜನೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಒಂದು ಬ್ಯಾಚ್ ಪ್ರಕರಣಗಳನ್ನು ಆಲಿಸಿ ತೀರ್ಪನ್ನು ಕಾಯ್ದಿರಿಸಿತ್ತು. ಗುರುವಾರ ಬೆಳಗ್ಗೆ ಈ ತೀರ್ಪು ಹೊರಬಿದ್ದಿದೆ.

ಇದನ್ನೂ ಓದಿ:ರೈತ ಹೋರಾಟ ಬೆಂಬಲಿಸುವ ಪ್ರಮುಖ ‘ಸಾಮಾಜಿಕ ಮಾಧ್ಯಮ ಖಾತೆ’ಗಳಿಗೆ ತಡೆ ಹೇರಿದ ಹೇರಿದ ಬಿಜೆಪಿ ಸರ್ಕಾರ!

ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ಪ್ರಮುಖ ತೀರ್ಪು ನೀಡುವುದರೊಂದಿಗೆ ನ್ಯಾಯಾಲಯವು ಸರ್ವಾನುಮತದ ನಿರ್ಧಾರಕ್ಕೆ ಬಂದರೆ, ನ್ಯಾಯಮೂರ್ತಿ ಖನ್ನಾ ಅವರು ಸ್ವಲ್ಪ ವಿಭಿನ್ನವಾದ ತರ್ಕದೊಂದಿಗೆ ಸಹಮತದ ತೀರ್ಪನ್ನು ನೀಡಿದ್ದಾರೆ.

ಎರಡೂ ತೀರ್ಪುಗಳು ಎರಡು ಪ್ರಮುಖ ಪ್ರಶ್ನೆಗಳಿಗೆ ಉತ್ತರಿಸಿವೆ. ಮೊದಲನೆಯದಾಗಿ, ಚುನಾವಣಾ ಬಾಂಡ್ ಯೋಜನೆಯ ಪ್ರಕಾರ ರಾಜಕೀಯ ಪಕ್ಷಗಳಿಗೆ ಸ್ವಯಂಪ್ರೇರಿತ ಕೊಡುಗೆಗಳ ಮಾಹಿತಿಯನ್ನು ಬಹಿರಂಗಪಡಿಸದಿರುವುದು ಜನ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 29C ಗೆ ತಿದ್ದುಪಡಿಗಳು, ಸೆಕ್ಷನ್ 183(3) ಕಂಪನಿಗಳ ಕಾಯಿದೆ, ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 13A(b) ಸಂವಿಧಾನದ 19(1)(a) ಅಡಿಯಲ್ಲಿ ಮಾಹಿತಿಯ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಹೇಳಿದೆ. ಎರಡನೆಯದಾಗಿ ಸೆಕ್ಷನ್‌ಗೆ ತಿದ್ದುಪಡಿಯಿಂದ ರಾಜಕೀಯ ಪಕ್ಷಗಳಿಗೆ ಅನಿಯಮಿತ ಕಾರ್ಪೊರೇಟ್ ನಿಧಿಯನ್ನು ನೀಡುತ್ತದೆ. ಇದು ಕಂಪನಿಗಳ ಕಾಯಿದೆಯ 182(1) ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯ ತತ್ವಗಳನ್ನು ಉಲ್ಲಂಘಿಸುತ್ತದೆ ಎಂದು ಹೇಳಿದೆ.

“ಮತದಾನದ ಆಯ್ಕೆಯ ಪರಿಣಾಮಕಾರಿ ಪ್ರಕ್ರಿಯೆಗೆ ರಾಜಕೀಯ ಪಕ್ಷಗಳ ನಿಧಿಯ ಬಗ್ಗೆ ಮಾಹಿತಿ ಅತ್ಯಗತ್ಯ,” ಎಂದು ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರು ಮುಕ್ತ ಆಡಳಿತದ ಮಹತ್ವವನ್ನು ಒತ್ತಿಹೇಳಿದ್ದಾರೆ. ತಮ್ಮ ಮತ್ತು ನ್ಯಾಯಮೂರ್ತಿಗಳಾದ ಗವಾಯಿ, ಪರ್ದಿವಾಲಾ ಮತ್ತು ಮಿಶ್ರಾ ಅವರ ಪರವಾಗಿ ಅಭಿಪ್ರಾಯವನ್ನು ಬರೆದ ಮುಖ್ಯ ನ್ಯಾಯಮೂರ್ತಿ ಚುನಾವಣಾ ಬಾಂಡ್‌ಗಳ ಯೋಜನೆಯು ಸಂವಿಧಾನದ 19(1)(ಎ) ಅನ್ನು ಉಲ್ಲಂಘಿಸಿದೆ ಎಂದು ನಿರ್ಣಾಯಕವಾಗಿ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ:ಚಿತ್ರ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಮಾಲೀಕತ್ವದ ಮಾಲ್‌ಗೆ ಬೀಗ ಜಡಿದ ಬಿಬಿಎಂಪಿ!

ಕಪ್ಪುಹಣವನ್ನು ತಡೆಯುವ ಉದ್ದೇಶವನ್ನು ಸಾಧಿಸಲು ಚುನಾವಣಾ ಬಾಂಡ್‌ಗಳ ಹೊರತಾಗಿ ಇತರ ಮಾರ್ಗಗಳಿವೆ ಎಂದು ನ್ಯಾಯಾಲಯ ಹೇಳಿದ್ದು, ಮಾಹಿತಿ ಹಕ್ಕು ಉಲ್ಲಂಘನೆ ಸಮರ್ಥನೀಯವಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಜೊತೆಗೆ ಆದಾಯ ತೆರಿಗೆ ಕಾಯಿದೆ, ಜನರ ಪ್ರಾತಿನಿಧ್ಯ ಕಾಯಿದೆ, ಕಂಪನಿಗಳ ಕಾಯಿದೆಗೆ ತಿದ್ದುಪಡಿಗಳನ್ನು ಅಸಂವಿಧಾನಿಕ ಎಂದು ಪರಿಗಣಿಸಲಾಗಿದೆ.

ಇಷ್ಟೆ ಅಲ್ಲದೆ ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಚುನಾವಣಾ ಬಾಂಡ್‌ಗಳ ವಿವರವನ್ನು ಚುನಾವಣಾ ಆಯೋಗಕ್ಕೆ ನೀಡುವಂತೆ ನ್ಯಾಯಾಲಯ ಹೇಳಿದ್ದು. ಅದನ್ನು ತನ್ನ ವೆಬ್‌ಸೈಟ್‌ನಲ್ಲಿ ಚುನಾವಣಾ ಆಯೋಗಕ್ಕೆ ನ್ಯಾಯಾಲಯ ಆದೇಶಿಸಿದೆ. ಅದಕ್ಕಾಗಿ ನ್ಯಾಯಾಲಯವು ಈ ಕೆಳಗಿನ ನಿರ್ದೇಶನಗಳನ್ನು ನೀಡಿದೆ:

A. ಎಲೆಕ್ಟೋರಲ್ ಬಾಂಡ್‌ಗಳನ್ನು ವಿತರಣೆ ಮಾಡುವ ಬ್ಯಾಂಕ್ ವಿತರಣೆಯನ್ನು ನಿಲ್ಲಿಸಗಬೇಕು.

B. ಭಾರತೀಯ ಸ್ಟೇಟ್ ಬ್ಯಾಂಕ್ ಏಪ್ರಿಲ್ 12, 2019 ರ ನ್ಯಾಯಾಲಯದ ಮಧ್ಯಂತರ ಆದೇಶದಿಂದ ಇಲ್ಲಿಯವರೆಗೆ ಖರೀದಿಸಿದ ಚುನಾವಣಾ ಬಾಂಡ್‌ಗಳ ವಿವರಗಳನ್ನು ಭಾರತದ ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು. ವಿವರಗಳು ಪ್ರತಿ ಚುನಾವಣಾ ಬಾಂಡ್‌ನ ಖರೀದಿಯ ದಿನಾಂಕ, ಬಾಂಡ್‌ನ ಖರೀದಿದಾರರ ಹೆಸರು ಮತ್ತು ಖರೀದಿಸಿದ ಎಲೆಕ್ಟೋರಲ್ ಬಾಂಡ್‌ನ ಮುಖಬೆಲೆಯನ್ನು ಒಳಗೊಂಡಿರಬೇಕು.

C. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಏಪ್ರಿಲ್ 12, 2019 ರ ಮಧ್ಯಂತರ ಆದೇಶದಿಂದ ಇಲ್ಲಿಯವರೆಗೆ ಚುನಾವಣಾ ಬಾಂಡ್‌ಗಳ ಮೂಲಕ ಕೊಡುಗೆಗಳನ್ನು ಪಡೆದ ರಾಜಕೀಯ ಪಕ್ಷಗಳ ವಿವರಗಳನ್ನು ECI ಗೆ ಸಲ್ಲಿಸಬೇಕು. ಎಸ್‌ಬಿಐ ರಾಜಕೀಯ ಪಕ್ಷಗಳು ಎನ್‌ಕ್ಯಾಶ್ ಮಾಡಿದ ಪ್ರತಿಯೊಂದು ಚುನಾವಣಾ ಬಾಂಡ್‌ಗಳ ವಿವರಗಳನ್ನು ಬಹಿರಂಗಪಡಿಸಬೇಕು, ಇದು ಎನ್‌ಕ್ಯಾಶ್‌ಮೆಂಟ್ ದಿನಾಂಕ ಮತ್ತು ಚುನಾವಣಾ ಬಾಂಡ್‌ನ ಮುಖಬೆಲೆಯನ್ನು ಒಳಗೊಂಡಬೇಕು.

ಇದನ್ನೂ ಓದಿ:ಜಾಮೀನು ಅರ್ಜಿ ಹಿಂಪಡೆದ ಹೋರಾಟಗಾರ ಉಮರ್ ಖಾಲಿದ್‌!

D. SBI ಮೇಲಿನ ಮಾಹಿತಿಯನ್ನು ಇಂದಿನಿಂದ ಮೂರು ವಾರಗಳ ಒಳಗೆ ಅಂದರೆ ಮಾರ್ಚ್ 6 ರೊಳಗೆ ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು.

E. ಚುನಾವಣಾ ಆಯೋಗ ತನ್ನ ವೆಬ್‌ಸೈಟ್‌ನಲ್ಲಿ ಮಾರ್ಚ್ 13, 2024 ರೊಳಗೆ SBI ನಿಂದ ಸ್ವೀಕರಿಸಿದ ಮಾಹಿತಿಯನ್ನು ಪ್ರಕಟಿಸಬೇಕು.

F. 15 ದಿನಗಳ ಸಿಂಧುತ್ವದ ಅವಧಿಯೊಳಗೆ ಇರುವ ಆದರೆ ರಾಜಕೀಯ ಪಕ್ಷಗಳು ಇನ್ನೂ ಎನ್‌ಕ್ಯಾಶ್ ಮಾಡದ ಚುನಾವಣಾ ಬಾಂಡ್‌ಗಳನ್ನು ರಾಜಕೀಯ ಪಕ್ಷವು ಖರೀದಿದಾರರಿಗೆ ಹಿಂತಿರುಗಿಸಬೇಕು. ಜೊತೆಗೆ ವಿತರಿಸುವ ಬ್ಯಾಂಕ್ ನಂತರ ಖರೀದಿದಾರರ ಖಾತೆಗೆ ಈ ಮೊತ್ತವನ್ನು ಮರುಪಾವತಿ ಮಾಡಬೇಕಿದೆ.

ಅರ್ಜಿದಾರರ ಪರ ಹಿರಿಯ ವಕೀಲರಾದ ಕಪಿಲ್ ಸಿಬಲ್,  ಪ್ರಶಾಂತ್ ಭೂಷಣ್,  ಶಾದನ್ ಫರಾಸತ್, ನಿಜಾಮ್ ಪಾಷಾ, ಹಿರಿಯ ವಕೀಲ ವಿಜಯ್ ಹನ್ಸಾರಿಯಾ ವಾದ ಮಂಡಿಸಿದ್ದರು. ಕೇಂದ್ರ ಸರ್ಕಾರದ ಪರವಾಗಿ ಭಾರತದ ಅಟಾರ್ನಿ ಜನರಲ್ ಆರ್ ವೆಂಕಟರಮಣಿ, ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದ್ದಾರೆ.

2017ರ ಹಣಕಾಸು ಕಾಯಿದೆಯಲ್ಲಿನ ತಿದ್ದುಪಡಿಗಳ ಮೂಲಕ ಪರಿಚಯಿಸಲಾದ ಚುನಾವಣಾ ಬಾಂಡ್‌ಗಳ ಯೋಜನೆಯನ್ನು ಪ್ರಶ್ನಿಸಿ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಮತ್ತು ಕಾಂಗ್ರೆಸ್ ನಾಯಕ ಜಯಾ ಠಾಕೂರ್ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ಇದನ್ನೂ ಓದಿ:ನೇಜಾರು ಹತ್ಯಾಕಾಂಡ | ಆರೋಪಿ ವಿರುದ್ಧ 2,250 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ

ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದ ಅನಾಮಧೇಯತೆಯು ರಾಜಕೀಯ ನಿಧಿಯಲ್ಲಿ ಪಾರದರ್ಶಕತೆಯನ್ನು ಹಾಳುಮಾಡುತ್ತದೆ ಮತ್ತು ಮತದಾರರ ಮಾಹಿತಿಯ ಹಕ್ಕನ್ನು ಅತಿಕ್ರಮಿಸುತ್ತದೆ ಎಂದು ಅರ್ಜಿದಾರರು ವಾದಿಸಿದ್ದರು. ಈ ಯೋಜನೆಯು ಶೆಲ್ ಕಂಪನಿಗಳ ಮೂಲಕ ಕೊಡುಗೆ ನೀಡುವ ದಾರಿಯನ್ನು ಸುಗಮಗೊಳಿಸುತ್ತದೆ ಅರ್ಜಿದಾರರು ಹೇಳಿದ್ದರು.

ವಿಚಾರಣೆಯ ಉದ್ದಕ್ಕೂ, ಪೀಠವು ಸರ್ಕಾರಕ್ಕೆ ತನಿಖಾ ಪ್ರಶ್ನೆಗಳನ್ನು ಹಾಕಿತ್ತು ಮತ್ತು ಯೋಜನೆಯ ‘ಆಯ್ದ ಅನಾಮಧೇಯತೆ’ ಹಿಂದಿನ ತಾರ್ಕಿಕತೆಯನ್ನು ಪ್ರಶ್ನಿಸಿತ್ತು. ರಾಜಕೀಯ ಪಕ್ಷಗಳಿಗೆ ಕಿಕ್‌ಬ್ಯಾಕ್‌ಗಳನ್ನು ಸಾಂಸ್ಥಿಕಗೊಳಿಸುವ ಸಾಮರ್ಥ್ಯದ ಬಗ್ಗೆ ನ್ಯಾಯಾಲಯ ಆತಂಕವನ್ನು ವ್ಯಕ್ತಪಡಿಸಿತ್ತು. ಅದರಲ್ಲೂ ಮುಖ್ಯವಾಗಿ ದಾನಿಗಳ ಮಾಹಿತಿಗೆ ಸಿಗದಿರುವ ಬಗ್ಗೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿತ್ತು.

ಅರ್ಜಿಗಳ ವಿಚಾರಣೆ ಮುಕ್ತಾಯವಾಗುತ್ತಿದ್ದಂತೆ, ಸೆಪ್ಟೆಂಬರ್ 30 ರವರೆಗೆ ಚುನಾವಣಾ ಬಾಂಡ್‌ಗಳ ಮೂಲಕ ರಾಜಕೀಯ ಪಕ್ಷಗಳ ಕೊಡುಗೆಗಳ ವಿವರಗಳನ್ನು ಒದಗಿಸುವಂತೆ ಪೀಠವು ಭಾರತೀಯ ಚುನಾವಣಾ ಆಯೋಗಕ್ಕೆ ಆದೇಶಿಸಿತ್ತು.

ವಿಡಿಯೊ ನೋಡಿ:ದೆಹಲಿ ಚಲೋ’ : ರೈತರ ಮೇಲೆ ಆಶ್ರುವಾಯು ಪ್ರಯೋಗ – ಫೆ 16 ರಂದು ದೇಶವ್ಯಾಪಿ ಪ್ರತಿಭಟನೆ

Donate Janashakthi Media

Leave a Reply

Your email address will not be published. Required fields are marked *