ಮೂರು ಚುನಾವಣೆ : ಗೆದ್ದದ್ದು ಒಂದು! ಕಳೆದುಕೊಂಡಿದ್ದು ಎರಡು !!

ಗುರುರಾಜ ದೇಸಾಯಿ

ಇತ್ತೀಚೆಗೆ ನಡೆದ ಮೂರು ಚುನಾವಣೆಗಳು  ದೇಶದ ಗಮನವನ್ನು ಸೆಳೆದಿದ್ದವು.  ಫಲಿತಾಂಶ ಕೂಡಾ ಪ್ರಕಟವಾಗಿದ್ದು, ಬಿಜೆಪಿಗೆ ಗುಜರಾತ್‌ , ಹಿಮಾಚಲ ಪ್ರದೇಶಕ್ಕೆ ಕಾಂಗ್ರೆಸ್‌, ದೆಹಲಿ ನಗರ ಪಾಲಿಕೆ ಆಪ್ ಪಾಲಾಗಿದೆ.  ಮೂರು ಚುನಾವಣೆಗಳಲ್ಲಿ ಒಂದೊಂದು ಪಕ್ಷ ಗೆಲುವು ಕಂಡಿದೆ. ಈ ಗೆಲುವು ಆಮ್‌ ಆದ್ಮಿ ಪಕ್ಷಕ್ಕೆ ತುಸ ಹುಮ್ಮಸ್ಸು ನೀಡಿದರೆ, ಕಾಂಗ್ರೆಸ್‌ಗೆ ಕಳಪೆ ಪ್ರದರ್ಶನದ ಚಿಂತೆಯ ಜೊತೆ ನಾಯಕತ್ವದ ವೈಫಲ್ಯಕ್ಕೆ ಅವಲೋಕನ ಮಾಡಿಕೊಳ್ಳುತ್ತಿದೆ. ಬಿಜೆಪಿಗೆ ಈ ಚುನಾವಣೆ ಎಚ್ಚರಿಕೆ ಗಂಟೆಯಾಗಿದೆ.

ದೆಹಲಿ ಮಹಾನಗರ ಪಾಲಿಕೆ, ಗುಜರಾತ್‌ ವಿಧಾನಸಭೆ, ಹಿಮಾಚಲ ಪ್ರದೇಶ ವಿಧಾನಸಭೆ, ಈ ಮೂರರಲ್ಲೂ ಬಿಜೆಪಿ ಆಡಳಿತವನ್ನು ನಡೆಸುತ್ತಿತ್ತು.  ಫಲಿತಾಂಶದ ನಂತರ ಎರಡು ಕಡೆ ಅಧಿಕಾರ ಕಳೆದುಕೊಂಡು ಒದು ಕಡೆ ಮಾತ್ರ ಅಧಿಕಾರ ಹಿಡಿದಿದೆ. ಮೋದಿ ಪ್ರಭಾವ ಕಮ್ಮಿಯಾಗಿಲ್ಲ ಎಂದು ಬಿಜೆಪಿ ಬೀಗುತ್ತಿದೆ. ಉಳಿದೆರಡು ಕ್ಷೇತ್ರಗಳಲ್ಲಿ ಮೋದಿ ಪ್ರಭಾವ ಕುಸಿತ ಕಂಡಿದೆ ಎಂಬುದನ್ನು ಒಪ್ಪಲು ಬಿಜೆಪಿ ತಯಾರಿದ್ದಂತೆ ಕಾಣುತ್ತಿಲ್ಲ. ಇರಲಿ ಈಗ ಮೂರು ಕ್ಷೇತ್ರಗಳ ಲೆಕ್ಕಾಚಾರವನ್ನೊಮ್ಮೊ ನೋಡಿ ಬರೋಣ.

ದೆಹಲಿ ಮಹಾನಗರ ಪಾಲಿಕೆ : ತೀವ್ರ ಕುತೂಹಲ ಕೆರೆಳಿಸಿದ್ದ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಪೈಪೋಟಿಯ ಹೊರತಾಗಿಯೂ ಅಧಿಕಾರದ ಗದ್ದುಗೆ ಹಿಡಿಯುವಲ್ಲಿ ಆಮ್ ಆದ್ಮಿ ಪಕ್ಷ ಯಶಸ್ವಿಯಾಗಿದೆ.  150ಕ್ಕೂ ಹೆಚ್ಚು ವಾರ್ಡ್ ಗಳಲ್ಲಿ ಗೆಲ್ಲುವ ಮೂಲಕ ಮೊದಲ ಬಾರಿಗೆ ಅಧಿಕಾರಕ್ಕೇರಿದೆ. ಆ ಮೂಲಕ ದೆಹಲಿಯಲ್ಲಿ 15 ವರ್ಷಗಳ ಬಿಜೆಪಿ ಆಡಳಿತ ಅಂತ್ಯಗೊಂಡಿದೆ.  ಒಟ್ಟು 250 ವಾರ್ಡುಗಳ ಪೈಕಿ ಆಮ್ ಆದ್ಮಿ ಪಕ್ಷ 134, ಬಿಜೆಪಿ 104 ಸ್ಥಾನ ತನ್ನದಾಗಿಸಿಕೊಂಡಿದೆ. ಉಳಿದಂತೆ ಕಾಂಗ್ರೆಸ್ 9 ಮತ್ತು ಪಕ್ಷೇತರರು 4 ವಾರ್ಡ್ ಗಳಲ್ಲಿ ಜಯಗಳಿಸಿದ್ದಾರೆ.

ದೆಹಲಿ ಮಹಾನಗರ ಪಾಲಿಕೆಯನ್ನು ಗೆಲ್ಲಲ್ಲು ಬಿಜೆಪಿ ಹರಸಾಹಸ ಮಾಡಿತ್ತು. ಕೇಂದ್ರದ ಮಂತ್ರಿಗಳು ಅಲ್ಲಿಯೇ ಠೀಕಾಣಿ ಹೂಡಿದ್ದರು. ಗಲ್ಲಿ ಗಲ್ಲಿಯಲ್ಲಿ ಪ್ರಚಾರ ನಡೆಸಿದ್ದರು. ಸತತವಾಗಿ 15 ವರ್ಷ ಆಡಳಿತ ನಡೆಸಿದ್ದರಿಂದ ಆಡಳಿತ ವಿರೋಧಿ ಅಲೆ ಇದೆ ಎಂಬುದನ್ನು ಅರಿತಿದ್ದ ಬಿಜೆಪಿ ಮೂರು ಮಹಾನಗರ ಪಾಲಿಕೆಯನ್ನು ವಿಲೀನಗೊಳಿಸಿತು. ದೆಹಲಿ  ಉತ್ತರ ಮತ್ತು ದೆಹಲಿ ದಕ್ಷಿಣ ಪಾಲಿಕೆ ತಲಾ 104 ವಾರ್ಡ್‌ಗಳನ್ನು ಹೊಂದಿದ್ದವು. ದೆಹಲಿ ಪೂರ್ವ ಪಾಲಿಕೆಯಲ್ಲಿ 64 ವಾರ್ಡ್‌ ಸೇರಿದಂತೆ ಒಟ್ಟು 272 ವಾರ್ಡ್‌ಗಳಿದ್ದವು. ವಾರ್ಡ್‌ಗಳನ್ನು ಕಡಿತ ಗೊಳಿಸಿ 250 ಕ್ಕೆ ಇಳಿಸಲಾಯಿತು. ಈ ಕ್ರಮವನ್ನು ಎಎಪಿ ವಿರೋಧಿಸಿತ್ತು.

ಕೇಂದ್ರದಲ್ಲಿ ಇಷ್ಟು ವರ್ಷ ಬಿಜೆಪಿ ಆಡಳಿತವಿದ್ದರೂ ಏಕೆ ವಿಲೀನಗೊಳಿಸಿರಲಿಲ್ಲ ಎಂದು ಎಎಪಿ ಪ್ರಶ್ನಿಸಿತ್ತು. ದೆಹಲಿ ಮಹಾನಗರ ಪಾಲಿಕೆ ಚುನಾವಣೆಗಳನ್ನು ವಿಳಂಬಗೊಳಿಸುವ ಉದ್ದೇಶದಿಂದ ಪಾಲಿಕೆ ವಿಲೀನ ಮಾಡಲಾಗುತ್ತಿದೆ. ಈ ವಿಚಾರದಲ್ಲಿ ರಾಜಕೀಯ ಮಾಡಲಾಗುತ್ತಿದೆ. ಮಹಾನಗರ ಪಾಲಿಕೆ ಚುನಾವಣೆಗಳು ನಡೆದರೆ ಬಿಜೆಪಿ ಸೋಲುವ ಭಯವಿದೆ. ಆದ್ದರಿಂದ ಚುನಾವಣೆಗೆ ದಿನಾಂಕ ಘೋಷಣೆಗೆ ಕೆಲವೇ ದಿನ ಮೊದಲು ಪಾಲಿಕೆ ವಿಲೀನ ತೀರ್ಮಾನ ಕೈಗೊಂಡು ಬಿಜೆಪಿ ರಾಜಕಾರಣದಲ್ಲಿ ತೊಡಗಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪ ಮಾಡಿತ್ತು.

ದೆಹಲಿಯ ಮೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಮತ್ತು ಎಎಪಿ ನಡುವೆ 2017 ರಲ್ಲಿ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು. ದೆಹಲಿ ಉತ್ತರದಲ್ಲಿ ಬಿಜೆಪಿ 35% ಮತ ಪಡೆದರೆ, ಎಎಪಿ 28% ರಷ್ಟು ಮತ ಪಡೆದಿತ್ತು. ದೆಹಲಿ ದಕ್ಷಿಣದಲ್ಲಿ ಬಿಜೆಪಿ 34% ಮತ ಎಎಪಿ 27% ರಷ್ಟು ಮತ ಪಡೆದಿತ್ತು. ದೆಹಲಿ ಪೂರ್ವದಲ್ಲಿ ಬಿಜೆಪಿ 38% ಎಎಪಿ 24% ರಷ್ಟು ಪಡೆದಿತ್ತು. ಬಿಜೆಪಿ 181, ಎಎಪಿ 49, ಕಾಂಗ್ರೆಸ್‌ 31 ಸ್ಥಾನ ಪಡೆದಿತ್ತು. ಈ ಬಾರಿಯ ಚುನಾವಣೆಯಲ್ಲಿ ಎಎಪಿ 42.05%, ಬಿಜೆಪಿ 39.09%, ಕಾಂಗ್ರೆಸ್‌ 11.68% ಮತಗಳನ್ನು ಪಡೆದಿದೆ. ಈ ಲೆಕ್ಕಾಚಾರ ಗಮನಿಸಿದರೆ ಬಿಜೆಪಿ ಸೋಲುವ ಭೀತಿಯಲ್ಲಿದ್ದ ಕಾರಣದಿಂದಲೇ ಮೂರು ಪಾಲಿಕೆಗಳನ್ನು ವಿಲೀನ ಮಾಡಿದಂತೆ ಕಾಣುತ್ತದೆ. 40 ಕ್ಷೇತ್ರಗಳಲ್ಲಿ ಬಿಜೆಪಿ 50 ರಿಂದ 150 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದೆ. ಈ ಅಂತರ ಬಿಜೆಪಿಗೆ ಸೋಲುವ ಭಯ ಇತ್ತು ಎನ್ನುವುದನ್ನು ನಿರೂಪಿಸುತ್ತದೆ.

ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

ಗುಜರಾತ್‌ ವಿಧಾನಸಭೆ : ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 52.05%   ಮತ ಪಡೆಯುವ ಮೂಲಕ ಸಾಧನೆಯನ್ನು ಮಾಡಿದೆ. 1985ರ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 149 ಸೀಟುಗಳಲ್ಲಿ ಗೆಲುವು ಸಾಧಿಸಿ ದಾಖಲೆ ಬರೆದಿತ್ತು. ಪ್ರಸ್ತುತ ಬಿಜೆಪಿ 156 ಸ್ಥಾನ ಗೆಲ್ಲುವ ಮೂಲಕ ಕಾಂಗ್ರೆಸ್‌ನ ದಾಖಲೆ ಮುರಿದಿದ್ದಾರೆ. ಕಳೆದ ಬಾರಿ ಬಲಿಷ್ಠ ವಿಪಕ್ಷವಾಗಿ ಹೊರಹೊಮ್ಮಿದ್ದ ಕಾಂಗ್ರೆಸ್‌ ಹೀನಾಯ ಸೋಲು ಅನುಭವಿಸಿದೆ. ಆಮ್‌ ಆದ್ಮಿ ಪಕ್ಷವು ಖಾತೆ ತೆರೆಯುವ ಮೂಲಕ ಅಚ್ಚರಿ ಮೂಡಿಸಿದೆ.

ಬಿಜೆಪಿ 156 ಸ್ಥಾನಗಳೊಂದಿಗೆ 52.05 %  ಮತ ಪ್ರಮಾಣ ಪಡೆದುಕೊಂಡಿದೆ.  ಕಳೆದ ಬಾರಿಗಿಂತ 3.4% ಮತ ಪ್ರಮಾಣ ಹೆಚ್ಚಳದ ಜೊತೆ 57 ಸ್ಥಾನಗಳನ್ನು ಹೆಚ್ಚಿಸಿಕೊಂಡಿದೆ.  ಕಾಂಗ್ರೆಸ್‌ ಕಳೆದ ಬಾರಿ 77 ಸ್ಥಾನಗಳಲ್ಲಿ ಗೆಲುವು ಕಂಡಿದ್ದ ಕಾಂಗ್ರೆಸ್‌ 17 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡು 60 ಸ್ಥಾನಗಳನ್ನು ಕಳೆದುಕೊಂಡಿದೆ. ಕಳೆದ ಬಾರಿ 41.1% ಮತ ಪಡೆದಿದ್ದ ಕಾಂಗ್ರೆಸ್‌, ಈ ಬಾರಿ 27.28% ಮತವನ್ನು ಪಡೆದುಕೊಂಡಿದೆ. ಎಎಪಿ ಕಳೆದ ಚುನಾವಣೆಯಲ್ಲಿ 0.1% ದಷ್ಟು ಇದ್ದ ಮತ ಪ್ರಮಾಣವನ್ನು 12.92% ಕ್ಕೆ ಹೆಚ್ಚಿಸಿಕೊಳ್ಳುವ ಮೂಲಕ 05 ಸ್ಥಾನಗಳಲ್ಲಿ ಗೆಲವು ಪಡೆದು ಗುಜರಾತಿನಲ್ಲಿ ಖಾತೆ ತೆರೆದಿದೆ.

ಚಿತ್ರಕೃಪೆ : ಸತೀಶ ಆಚಾರ್ಯ

ಬಿಜೆಪಿ ಗೆಲುವಿಗೆ ಕಾರಣಗಳು : ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಅಲ್ಲಿಯೇ ಠೀಕಾಣಿ ಹೂಡಿದ್ದರು. ಅಮಿತ್‌ ಶಾ ಅವರಂತೂ ಎರಡು ತಿಂಗಳು ಗುಜರಾತ್‌ನಲ್ಲಿಯೇ ವಾಸ್ತವ್ಯ ಹೂಡಿದ್ದರು. ಮೋದಿ  ಗುಜರಾತ್‌ ರಾಜ್ಯದಲ್ಲಿ ಬರೋಬ್ಬರಿ 27 ರ‍್ಯಾಲಿಗಳನ್ನು ನಡೆಸಿದ್ದರು. ಅಷ್ಟೆ ಅಲ್ಲದೆ, 16 ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿ 50 ಕಿ.ಮೀ ಮೆಗಾ ರೋಡ್‌ ಶೋ  ನಡೆಸಿದ್ದರು.  ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸೇರಿ ಹಲವು ಪ್ರಮುಖರು ಗುಜರಾತ್‌ನಲ್ಲಿ ಸಾಲು ಸಾಲು ರ‍್ಯಾಲಿ, ಸಮಾವೇಶಗಳನ್ನು ಕೈಗೊಳ್ಳುವ ಮೂಲಕ ಮತದಾರರ ಒಲವು ಬೇರೆಡೆ ವಾಲದಂತೆ ತಡೆಯಲು ಬಿಜೆಪಿ  ಯತ್ನಿಸಿತ್ತು.

2017ರ ಚುನಾವಣೆಯಲ್ಲಿ ಕಷ್ಟಪಟ್ಟು ಗೆದ್ದಿದ್ದ ಬಿಜೆಪಿಗೆ ಈ ಬಾರಿಯ ಚುನಾವಣೆ ಅಷ್ಟು ಸಲೀಸಾಗಿ ಇರಲಿಲ್ಲ ಅದಕ್ಕಾಗಿ ಅಬ್ಬರದ ಪ್ರಚಾರದ ಜೊತೆ ಒಂದು ವರ್ಷ ಮೊದಲೆ ಇತರೆ ಪಕ್ಷದ ಹಾಗೂ ಗುಜರಾತಿನ ಪ್ರಮುಖ ಜಾತಿ ಪ್ರಾಬಲ್ಯ ಇದ್ದ ನಾಯಕರನ್ನು  ಸೆಳೆಯುವ ಮೂಲಕ ಅಕ್ರಮ ಚುನಾವಣೆಗೆ ಮುಂದಾಗಿತ್ತು.  ಚುನಾವಣೆ ಸಮೀಪಿಸುತ್ತಿರುವಾಗ ಹಲವು ಪ್ರಮುಖ ನಾಯಕರು ಕೈ ಪಾಳೆಯ ತೊರೆದು ಕೇಸರಿ ಪಕ್ಷದ ಕೈ ಹಿಡಿದಿದ್ದರು. ಹಾರ್ದಿಕ್‌ ಪಟೇಲ್, ಒಬಿಸಿ ನಾಯಕ ಅಲ್ಪೇಶ್‌ ಠಾಕೂರ್‌ ಕಾಂಗ್ರೆಸ್‌ ಬಿಟ್ಟು ಬಿಜೆಪಿ ಪಡಸಾಲೆಗೆ ಸೇರಿದ್ದರು. ಗೆಲ್ಲುವ ಕುದುರೆಗಳನ್ನು ಯಾವುದೇ ಪಕ್ಷ, ಮೂಲವಾದರೂ ಸರಿ ಎಂದು ಬಿಜೆಪಿ ಸ್ವಾಗತಿಸಿತ್ತು.

ಆರಂಭದಿಂದಲೂ ಗಲಭೆ ಮೂಲಕ ಅಧಿಕಾರಕ್ಕೇರಿದ ಬಿಜೆಪಿ ರಕ್ತದಲ್ಲಿ ಕೈತೊಳದದ್ದೆ ಹೆಚ್ಚು. ಈ ಚುನಾವಣೆಯಲ್ಲೂ ಮೋರ್ಭಿ ದುರಂತದ ಮೂಲಕ  ರಕ್ತದ ಕಲೆ ಹಾಗಿಯೇ ಇತ್ತು.  ಕಳೆದ ಮೂರು ದಶಕಗಳಲ್ಲಿ ಬಿಜೆಪಿ-ಆರ್‌ಎಸ್‌ಎಸ್ ಆಳವಾದ ಕೋಮು ಧ್ರುವೀಕರಣವನ್ನು ಸೃಷ್ಟಿಸಿದ್ದು ಮಾತ್ರ ಗುಜರಾತ್‌ನಲ್ಲಿ ಬಿಜೆಪಿ ಮಾಡಿದ ಸಾಧನೆಯಾಗಿದೆ.  ಅಭಿವೃದ್ಧಿಗೆ ಆದ್ಯತೆ ನೀಡುವದರ ಬದಲು ಕೋಮು ಗಲಭೆಗಳಿಗೆ ಹೆಚ್ಚಿನ ಆಧ್ಯತೆ ನೀಡಿದೆ. ಈಗಲೂ ಗುಜರಾತ್‌,   ಶಿಕ್ಷಣ, ಆರೋಗ್ಯ,  ಸಾರ್ವಜನಿಕ ಅಭಿವೃದ್ಧಿ, ಉದ್ಯೋಗ ಸೃಷ್ಟಿ ವಿಚಾರದಲ್ಲಿ ಕೆಳಗಿನ ಸ್ಥಾನದಲ್ಲಿದೆ. ಇದನ್ನೆಲ್ಲ ಪ್ರಶ್ನಿಸಿದರೆ ಮತ್ತೆ ಗಲಭೆಗಳಾಗುತ್ತವೆ ಎಂದು ಜನರನ್ನು ಹೆದರಿಸಿ ಚುನಾವಣೆ ಗೆದ್ದಿದ್ದಾರೆ ಎಂದು ಅಲ್ಲಿನ ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.

ಇದನ್ನೂ ಓದಿ : ಗುಜರಾತ್‌ನಲ್ಲಿ ಸತತ 7ನೇ ಬಾರಿಗೆ ಅಧಿಕಾರಕ್ಕೇರಿದ ಬಿಜೆಪಿ

ನಾಯಕರ ಕೊರತೆಯಲ್ಲಿ ಕಮರಿದ ಕಾಂಗ್ರೆಸ್‌ : ಗುಜರಾತ್‌ ಚುನಾವಣೆಯನ್ನು ನಾವು ಸೋಲುತ್ತೇವೆ ಎಂಬುದು ಕಾಂಗ್ರೆಸ್‌ಗೆ ಮೊದಲೇ ಗೊತ್ತಿದ್ದಂತೆ ಕಾಣುತ್ತದೆ. ಸತತ ಸೋಲಿನಿಂದಾಗಿ ಗುಜರಾತ್‌ನಲ್ಲಿ ಕಾಂಗ್ರೆಸ್‌ ಸಂಘಟನೆಯೇ ದುರ್ಬಲವಾಗಿತ್ತು. ಆರಂಭದಲ್ಲೇ ಹುಮ್ಮಸ್ಸು ಕಳೆದುಕೊಂಡಿದ್ದ ಕಾಂಗ್ರೆಸ್ ನಾಯಕರು ನೆಪ ಮಾತ್ರಕ್ಕೆ ಸ್ಪರ್ಧಿಸಿದ್ದರು ಎಂಬಂತೆ ಕಂಡುಬಂದಿದೆ. ಕಾಂಗ್ರೆಸ್‌, ಭಾರತ್‌ ಜೋಡೋ ಯಾತ್ರೆಯ ಕಡೆ ಗಮನ ನೀಡಿತೇ ಹೊರತು, ಗುಜರಾತ್‌ ಕಡೆ ಹೆಚ್ಚಿನ ಗಮನ ಹರಿಸಲಿಲ್ಲ. ಮಲ್ಲಿಕಾರ್ಜುನ ಖರ್ಗೆ ಹೊರತುಪಡಿಸಿ ಬೇರೆ ರಾಷ್ಟ್ರೀಯ ನಾಯಕರು ಗುಜರಾತ್‌ ಕಡೆ ತಲೆ ಹಾಕಲಿಲ್ಲ. ನೆಪ ಮಾತ್ರಕ್ಕೆ ರಾಹುಲ್ ಪ್ರಚಾರ ನಡೆಸಿದಂತೆ ಕಾಣಿಸಿತು. ವಿರೋಧಿ ಅಲೆಯನ್ನು ಮತಗಳಾಗಿಸಿಕೊಳ್ಳುವ ಚಾಣಾಕ್ಷತನ ತೋರಲಿಲ್ಲ.

2017 ರಲ್ಲಿ ಗುಜರಾತ್‌ನಲ್ಲಿ ಕಾಂಗ್ರೆಸ್‌ 77 ಕ್ಷೇತ್ರ ಗೆದ್ದಿದ್ದೇ ಅಹ್ಮದ್‌ ಪಟೇಲ್‌ ಎಂಬ ಜನಪ್ರಿಯ ನಾಯಕನ ಶ್ರಮದಿಂದ. ಅದರಲ್ಲೂ, ಅದೇ ವರ್ಷ ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಹಿಮ್ಮೆಟ್ಟಿಸಿದ್ದು, ಕಾರ್ಯಕರ್ತರನ್ನು ಒಗ್ಗೂಡಿಸಿದ್ದು ಅವರ ಹೆಗ್ಗಳಿಕೆಯಾಗಿತ್ತು. ಆದರೆ, ಅಹಮದ್‌ ನಿಧನರಾದ ನಂತರ ಕಾಂಗ್ರೆಸ್‌ ನಾಯಕರ ಕೊರತೆಯನ್ನು ಎದುರಿಸಿತು. ಈ ಬಾರಿ ಗುಜರಾತ್‌ನಲ್ಲಿ ಅಹ್ಮದ್‌ ಪಟೇಲರ್‌ರಂತಹ ಬಲಾಢ್ಯ ಮತ್ತು ಅನುಭವಿ ನಾಯಕರ ಅನುಪಸ್ಥಿತಿ ಹಾಗೂ ಪಟೇಲ್‌ ಸಮುದಾಯದ ಪ್ರಬಲ ನಾಯಕರ ಕೊರತೆಯು ಕಾಂಗ್ರೆಸ್‌ಗೆ ಇನ್ನಿಲ್ಲದಂತೆ ಕಾಡಿತು. ಹಾಗಾಗಿಯೇ, ಬಿಜೆಪಿಗೆ ಕನಿಷ್ಠ  ಸ್ಪರ್ಧೆಯೊಡ್ಡುವಲ್ಲಿಯೂ ವಿಫಲವಾಯಿತು.

ಗುಜರಾತ್‌ ಕಾಂಗ್ರೆಸ್‌ನಲ್ಲಿ ನಾಯಕತ್ವ ಬಿಕ್ಕಟ್ಟು, ಪಕ್ಷದ ನಾಯಕರಿಗೆ ಮಣೆ ಹಾಕದ ಪರಿಣಾಮ ಒಂದಷ್ಟು ನಾಯಕರು ಪಕ್ಷಾಂತರ ಮಾಡಿದ್ದು ನುಂಗಲಾರದ ತುತ್ತಾಯಿತು. 11 ಬಾರಿ ಗೆದ್ದ ಶಾಸಕ ಮೋಹನ್‌ ಸಿಂಗ್‌ ರಾತ್ವಾ, ಭಾವೇಶ್‌ ಕತಾರ, ಹಿಮಾಂಶು ವ್ಯಾಸ್‌, ಹಾರ್ದಿಕ್‌ ಪಟೇಲ್‌ ಸೇರಿ ಹಲವು ಪ್ರಮುಖ ನಾಯಕರು ಚುನಾವಣೆಗೂ ಮುನ್ನ ಕಾಂಗ್ರೆಸ್‌ ತೊರೆದರು. ಇದರಿಂದಾಗಿ ಕಾಂಗ್ರೆಸ್‌ಗೆ ಪಕ್ಷ ಸಂಘಟನೆ, ಪ್ರಬಲ ಸಮುದಾಯದವರ ಮತಗಳನ್ನು ಸೆಳೆಯುವುದು ದುಸ್ತರವಾಯಿತು ಎಂದು ಹೇಳಬಹುದು. ದಲಿತ ನಾಯಕ ಜಿಗ್ನೇಶ್‌ ಮೆವಾನಿ ಗೆಲುವು ಸಾಧಿಸಿದ್ದು, ಅವರ ನೇತೃತ್ವದಲ್ಲಿ ಕಾಂಗ್ರೆಸ್‌ ಬಲಗೊಳ್ಳಬಹುದು ಎಂಬ ಲೆಕ್ಕಾಚಾರಗಳನ್ನು ಹಾಕಲಾಗುತ್ತಿದೆ.

ಚಿತ್ರಕೃಪೆ : ಸತೀಶ ಆಚಾರ್ಯ

ಎಎಪಿ, ಒವೈಸಿಯಿಂದ ಮುಸ್ಲಿಂ ಮತಗಳ ವಿಭಜನೆಎಎಪಿ 5 ಸ್ಥಾನದಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೆಸ್‌ ಸೋಲಿಗೆ, ಬಿಜೆಪಿ ಗೆಲುವಿಗೆ  ಎಎಪಿ ಮತ್ತು ಒವೈಸಿ ಪಕ್ಷಗಳು ಮುಸ್ಲಿಂ ಮತ ವಿಭಜನೆ ಮಾಡಿದ್ದಕ್ಕೆ ಸೋಲುಂಟಾಗಿದೆ ಎಂದು ಹೇಳಲಾಗುತ್ತಿದೆ. ಮುಸ್ಲಿಂ ಬಾಹುಳ್ಯದ ಪ್ರದೇಶಗಳಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಬಿಜೆಪಿಯಿಂದ ಯಾವುದೇ ಮುಸ್ಲಿಂ ಅಭ್ಯರ್ಥಿ ಕಣಕ್ಕಿಳಿಯದಿದ್ದರೂ ಸಹ ಬಿಜೆಪಿ ಪಕ್ಷಕ್ಕೆ ಜಯ ಸಿಕ್ಕಿದೆ.  ಹೆಚ್ಚಿನ ಮುಸ್ಲಿಂ ಜನಸಂಖ್ಯೆ ಇರುವ ಗುಜರಾತ್‌ನ 17 ಕ್ಷೇತ್ರಗಳ ಪೈಕಿ 12 ರಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಸಾಂಪ್ರದಾಯಿಕವಾಗಿ ಮತಗಳನ್ನು ವಿಭಜಿಸುವಲ್ಲಿ ಈ ಎರಡೂ ಪಕ್ಷಗಳು ದೊಡ್ಡ ಪಾತ್ರವನ್ನು ಹೊಂದಿವೆ ಎಂಬುದು ರಾಜಕೀಯ ತಜ್ಞರ ಅಭಿಪ್ರಾಯವಾಗಿದೆ.

ಅಧಿಕ ಮುಸ್ಲಿಂ ಜನಸಂಖ್ಯೆಯುಳ್ಳ 17 ಕ್ಷೇತ್ರಗಳಲ್ಲಿ ಈ ಬಾರಿ ಬಿಜೆಪಿ ಪಾರುಪತ್ಯ ಮೆರೆದಿದೆ.   ಇತಿಹಾಸದ ಪುಟಗಳನ್ನು ತೆಗೆದು ನೋಡಿದರೆ, ಈ  ಕ್ಷೇತ್ರಗಳಲ್ಲಿ ಸಾಮಾನ್ಯವಾಗಿ ಕಾಂಗ್ರೆಸ್‌ನದ್ದೇ ಪಾರುಪತ್ಯವಿತ್ತು. ಕಾಂಗ್ರೆಸ್ ಕೂಡ ಹೆಚ್ಚಾಗಿ ಮುಸ್ಲಿಂ ಅಭ್ಯರ್ಥಿಗಳನ್ನೂ ಹುಡುಕಿ ಕಣಕ್ಕಿಳಿಸುತ್ತಿತ್ತು. ಈ ಬಾರಿ ಕೂಡ ಕಾಂಗ್ರೆಸ್ ಅನೇಕ ಕ್ಷೇತ್ರಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು ಆಯ್ಕೆ ಮಾಡಿತ್ತು. ಆದರೆ ಅವರಿಗೆ ಅದೇ ಸಮುದಾಯದ ಮುಖಂಡರಿಂದ ಪೈಪೋಟಿ ಎದುರಾಗಿತ್ತು. ಅದರ ಲಾಭವನ್ನು ಬಿಜೆಪಿ ಪಡೆದುಕೊಂಡು 15 ಸ್ಥಾನಗಳಲ್ಲಿ ಗೆಲುವು ಸಾಧಿಸಿತು.  ಹೀಗೆ ಈ ಕ್ಷೇತ್ರಗಳಲ್ಲಿನ ಬಿಜೆಪಿಯ ಗೆಲುವಿನಲ್ಲಿ ಎಎಪಿ ಮತ್ತು ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಪಾತ್ರ ಸಾಕಷ್ಟಿದೆ.

ಹಿಮಾಚಲ ಪ್ರದೇಶ : ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳ ಭಾರಿ ಪೈಪೋಟಿಗೆ ಕಾರಣವಾಗಿದ್ದ ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆ ಫಲಿತಾಂಶ ಹೊರ ಬಿದ್ದಿದೆ. ಒಟ್ಟು 68 ವಿಧಾನಸಭೆ ಕ್ಷೇತ್ರಗಳಲ್ಲಿ 40ಕ್ಷೇತ್ರಗಳನ್ನು ತನ್ನದಾಗಿಸಿಕೊಳ್ಳುವ ಮೂಲಕ ಕಾಂಗ್ರೆಸ್‌ ಗೆಲುವಿನ ನಗೆ ಬೀರಿದೆ.

ಕಾಂಗ್ರೆಸ್‌ 43.90%  ಮತಗಳೊಂದಿಗೆ 40 ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ. ಬಿಜೆಪಿ 43% ಮತಗಳೊಂದಿಗೆ 25 ಸ್ಥಾನ ಪಡೆದಿದ್ದಾರೆ. ಎಎಪಿ 1.10% ಮತ ಪಡೆದು ಯಾವುದೆ ಸ್ಥಾನವನ್ನು ಗಳಿಸಿಲ್ಲ. ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿ 48.8% ನೊಂದಿಗೆ 44 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಕಾಂಗ್ರೆಸ್‌ 41.07% 21 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.  ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಮತ ಪ್ರಮಾಣದಲ್ಲಿ ದೊಡ್ಡ ವ್ಯತ್ಯಾಸವೇನು ಇಲ್ಲ. 10 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು 1000 ಮತಗಳ ಒಳಗೆ ಸೋಲು ಕಂಡಿದ್ದಾರೆ.

ಇದನ್ನೂ ಓದಿ : ಹಿಮಾಚಲ ಪ್ರದೇಶ ‘ಕೈ’ ಹಿಡಿದ ಮತದಾರ

ಬಿಜೆಪಿ ಸೋಲಿಗೆ ಕಾರಣಗಳೇನು: ಹಿಮಾಚಲ ಪ್ರದೇಶದಲ್ಲಿ ಮತದಾರರು ತಮ್ಮ ಮೂರು ದಶಕಗಳ ಸಂಪ್ರದಾಯವನ್ನು ಮತ್ತೆ  ಪಾಲಿಸಿದ್ದಾರೆ. 1985 ರಿಂದ ಅಲ್ಲಿ ಒಮ್ಮೆ ಕಾಂಗ್ರೆಸ್‌ ಬಂದರೆ ಮತ್ತೊಮ್ಮೆ ಬಿಜೆಪಿ ಗೆಲ್ಲುತ್ತಾ ಬಂದಿದೆ. ೀ ಬಾರಿ ಬಿಜೆಪಿ ಗೆಲ್ಲಬಹುದು ಎಂದು ಹೇಳಲಾಗಿತ್ತು. ಆದರೆ ಬಂಡಾಯದ ಬಿಸಿ, ಆಡಳಿತ ವಿರೋಧಿ ಅಲೆ ಬಿಜೆಪಿಯನ್ನು ಸೋಲಿಸುವಂತೆ ಮಾಡಿವೆ.

ಪಕ್ಷದ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ  ಬರೋಬ್ಬರಿ 50 ರ‍್ಯಾಲಿಗಳನ್ನು ನಡೆಸಿದ್ದರೆ, ಪ್ರಧಾನಿ ನರೇಂದ್ರ ಮೋದಿ ಐದು, ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ 20 ರ‍್ಯಾಲಿ ನಡೆಸಿದ್ದರು. ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರಂತೂ ಕಣ್ಣೀರು ಕೂಡಾ ಸುರಿಸಿದ್ದರು. ಆದರೂ ಬಿಜೆಪಿ ಸೋತಿದೆ. ಇದಕ್ಕೆ ಬಂಡಾಯ ಅಭ್ಯರ್ಥಿಗಳು ಕಾರಣ ಎಂಬ ಅಂಶ ಚರ್ಚೆಯಾಗುತ್ತಿದೆ. 30 ಕಡೆ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಬಂಡಾಯ ಅಭ್ಯರ್ಥಿಗಳಾಗಿ ಕಣದಲ್ಲಿದ್ದರು. ಈ ಪೈಕಿ ಇಬ್ಬರು ಗೆದ್ದಿದ್ದಾರೆ. ಬಿಜೆಪಿ ಟಿಕೆಟ್ ವಂಚಿತರಾಗಿದ್ದ ಹೋಶಿಯಾರ್ ಸಿಂಗ್ ದೆಹ್ರಾ ಕ್ಷೇತ್ರದಲ್ಲಿ 14 ಸಾವಿರ ಮತಗಳ ಅಂತರದಿಂದ ಗೆದ್ದಿದ್ದರೆ, ಕೆ.ಎಲ್.ಠಾಕೂರ್ ನಾಲಗಢ ಕ್ಷೇತ್ರದಿಂದ ಜಯ ಸಾಧಿಸಿದ್ದಾರೆ. 28 ಕ್ಷೇತ್ರಗಳಲ್ಲಿ ಬಂಡಾಯ ಅಭ್ಯರ್ಥಿಗಳು ಬಿಜೆಪಿಯ ಮತಬುಟ್ಟಿಗೆ ಕೈ ಹಾಕಿದ್ದರಿಂದ ಬಿಜೆಪಿ ಸೋಲು ಅನುಭವಿಸಬೇಕಾಯಿತು. ಬಂಡಾಯ ಅಭ್ಯರ್ಥಿಗಳು 8.9% ಮತಗಳನ್ನು ಪಡೆದಿದ್ದಾರೆ. ಬಂಡಾಯ ಸಮಸ್ಯೆ ಜತೆಗೆ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಒಂದು ಬಣ, ಠಾಕೂರ್ ನೇತೃತ್ವದ ಇನ್ನೊಂದು ಬಣ ಹಾಗೂ ಸಿಎಂ ಜೈರಾಂ ಠಾಕೂರ್ ನೇತೃತ್ವದ ಮೂರನೇ ಬಣ ಹೀಗೆ ಪಕ್ಷದ ಮುಖಂಡರಲ್ಲೇ ಆಂತರಿಕ ಬಣ ರಾಜಕೀಯ ಕೂಡಾ ಬಿಜೆಪಿಗೆ ಮುಳುವಾಯಿತು ಎಂದು ವಿಶ್ಲೇಷಿಸಲಾಗುತ್ತಿದೆ.

ಕಾಂಗ್ರೆಸ್‌ಗೆ ಲಾಭವಾಗಿದ್ದು ಹೇಗೆ : ಬಿಜೆಪಿ ಎದುರಿಸುತ್ತಿದ್ದ ಆಡಳಿತ ವಿರೋಧಿ ಅಲೆಯು ಕಾಂಗ್ರೆಸ್ ಪಾಲಿಗೆ ವರದಾನವಾಯಿತು. ಹಿಮಾಚಲ ಪ್ರದೇಶದ ಅತ್ಯಂತ ಜನಪ್ರಿಯ ನಾಯಕರಾದ ಕಾಂಗ್ರೆಸ್‌ನ ವೀರಭದ್ರ ಸಿಂಗ್ ಮತ್ತು ಬಿಜೆಪಿಯ ಪ್ರೇಮ್ ಕುಮಾರ್ ಧುಮಾಲ್ ಅವರಿಗೂ ತಮ್ಮ ಪಕ್ಷಗಳನ್ನು ಎರಡನೇ ಬಾರಿಗೆ ಅಧಿಕಾರ ತರಲು ಸಾಧ್ಯ ಆಗಿಲ್ಲ. ನಾಯಕತ್ವದ ಗೊಂದಲದ ಮಧ್ಯೆಯೂ ಅಲ್ಲಿನ ಜನರು ಕಾಂಗ್ರೆಸ್ ಕೈ ಹಿಡಿದಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.

ಹಿಮಾಚಲ ಪ್ರದೇಶದಲ್ಲಿ ವೀರಭದ್ರ ಸಿಂಗ್‌. ಅವರಿದ್ದಾರೆ ಎಂದರೆ ಹೈಕಮಾಂಡ್‌ ಕೂಡಾ ಹೆಚ್ಚು ತಲೆ ಬಿಸಿ ಮಾಡಕೊಳ್ಳುತ್ತಿರಲಿಲ್ಲ. . ಆದರೆ, ವರ್ಷದ ಹಿಂದೆ ವೀರಭದ್ರ ಸಿಂಗ್‌ ಅವರು ಮೃತಪಟ್ಟಾಗ ಅಲ್ಲೊಂದು ಅನಾಥ ಭಾವ ಸೃಷ್ಟಿಯಾಯಿತು. ಅವರ ಪುತ್ರಿಯಾಗಿರುವ ಪ್ರತಿಭಾ ಸಿಂಗ್‌ ಅವರನ್ನು ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷರನ್ನಾಗಿ ಮಾಡಿದ್ದರೂ ಅವರ ಮೇಲೆ ಪೂರ್ತಿ ಭಾರವನ್ನು ಹಾಕುವಂತಿರಲಿಲ್ಲ. ಹಾಗೂ ಸಿಎಂ ಆಕಾಂಕ್ಷಿಗಳು ಡಜನ್‌ಗಟ್ಟಲೇ ಇರುವುದನ್ನು ಮನಗಂಡ ಪ್ರಿಯಾಂಕಾ ಗಾಂಧಿ (ವಾದ್ರಾ) ಹಿಮಾಚಲದಲ್ಲಿ ತಿಂಗಳ ಪೂರ್ತಿ ಠೀಕಾಣಿ ಹೂಡಿದ್ದರು. ನಾಯಕರು ಕಚ್ಚಾಡಿಕೊಳ್ಳದಂತೆ ನೋಡಿಕೊಳ್ಳುವಲ್ಲಿ ಅವರು ಯಶಸ್ವಿಯಾದರು.

ಕಾಂಗ್ರೆಸ್‌ ಗೆಲುವಿಗೆ ಬಿಜೆಪಿಯ ಬಂಡಾಯ ಅಭ್ಯರ್ಥಿಗಳ ಕೊಡುಗೆಯೂ ಇದೆ. ಬಿಜೆಪಿಯು 11 ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಿತ್ತು. ಇದರಿಂದ ಬಿಜೆಪಿ ಪಕ್ಷದ ಗೆಲುವಿನ ಮಾರ್ಜಿನ್ ಕೂಡ ಕಡಿಮೆಯಾಯಿತು ಅಲ್ಲದೇ, ಕೆಲವು ಕಡೆ ಕಾಂಗ್ರೆಸ್ ಗೆಲ್ಲಲು ಅನುಕೂಲವಾಯಿತು. ಹಿಮಾಚಲ ಪ್ರದೇಶದ ಆರ್ಥಿಕ ಅಭಿವೃದ್ಧಿಗೆ ಸೇಬು ಕೃಷಿ ಮತ್ತು ಮಾರಾಟ ಪ್ರಮುಖ ಕೊಡುಗೆಯನ್ನು ನೀಡುತ್ತದೆ. ಆದರೆ, ಬಿಜೆಪಿ ಸರ್ಕಾರವು ಆದಾನಿ ಕಂಪನಿಗೆ ಅನುಕೂಲವಾಗುವಂತೆ ನಡೆದುಕೊಂಡಿದ್ದು, ಸರ್ಕಾರ ವಿರುದ್ಧ ಕೋಪಗೊಳ್ಳಲು ಕಾರಣವಾಯಿತು. ಸೇಬು ಪೆಟ್ಟಿಗೆ ಮೇಲಿನ ಜಿಎಸ್‌ಟಿ ಹೆಚ್ಚಳವು ಭಾರೀ ಹೊಡೆತ ನೀಡಿತ್ತು. ತೋಟಗಾರಿಕೆಯನ್ನು ಕಾರ್ಪೊರೇಟ್ ಕಂಪನಿಗಳಿಗೆ ಅಡ ಇಡಲು ಹೊರಟಿದ್ದು ಪ್ರತಿಭಟನೆ ಕಾರಣವಾಗಿತ್ತು. ಇದು ಕೂಡ ಬಿಜೆಪಿ ಸೋಲಿಗೆ ಕಾರಣವಾದರೆ, ಕಾಂಗ್ರೆಸ್ ಗೆಲುವಿನ ಅಂಶಗಳಲ್ಲಿ ಒಂದಾಗಿದೆ ಎಂಬುದು ತಜ್ಞರ ಲೆಕ್ಕಾಚಾರವಾಗಿದೆ.

ಸತೀಶ ಆಚಾರ್ಯ, ಮೊಲಿಟಿಕ್ಸ್.ಇನ್

ತಲೆಕೆಳಗಾದ ಆಪ್‌ ಲೆಕ್ಕಾಚಾರ : ಎರಡೂ ರಾಜ್ಯಗಳಲ್ಲಿ ಭಾರಿ ನಿರೀಕ್ಷೆ ಉಂಟು ಮಾಡಿದ್ದ ಆಮ್ ಆದ್ಮಿ ಪಕ್ಷ (ಆಪ್) ಗುಜರಾತ್​ನಲ್ಲಿ ಐದು ಸ್ಥಾನಗಳಿಸಿರುವುದು ಸಾಧನೆ. ಆದರೆ, ಹಿಮಾಚಲದಲ್ಲಿ ಖಾತೆ ತೆರೆಯಲು ವಿಫಲವಾಗಿದೆ. ಎಎಪಿ ಸಾಕಷ್ಟು ಹಣ ಖರ್ಚು ಮಾಡಿ ಗುಜರಾತ್‌ನಲ್ಲಿ ಅಬ್ಬರದ ಪ್ರಚಾರ ನಡೆಸಿತ್ತು.

ಗುಜರಾತ್‌ ನಲ್ಲಿ ಕಾಂಗ್ರೆಸ್‌ 31 ಅಭ್ಯರ್ಥಿಗಳ ಸೋಲಿಗೆ ಎಎಪಿ ನೇರವಾಗಿ ಕಾರಣವಾಗಿದೆ. ಇದು ಬಿಜೆಪಿಯ ಬಿ ಟೀಮ್‌ ಎಂಬ ಆರೋಪಗಳು ಕೇಳಿ ಬರುತ್ತಿವೆ. ಹಿಮಾಚಲದಲ್ಲಿ ಹಲವು ಕ್ಷೇತ್ರಗಳಲ್ಲಿ ನೋಟಾಗಿಂತಲೂ ಕಡಿಮೆ ಮತವನ್ನು ಪಡೆದಿವೆ. ದೆಹಲಿ ಮಹಾನಗರದ ಚುಕ್ಕಾಣಿ ಹಿಡಿದು ಬಿಜೆಪಿ ಅಧಿಕಾರದ ಅಂಗಳಕ್ಕೆ ಲಗ್ಗೆ ಹಾಕಿದ್ದು ಎಎಪಿಗೆ ಸಮಾಧಾನ ತಂದಿದ್ದು ಬಿಟ್ಟರೆ ಉಳಿದ ಕಡೆ ಕಹಿ ಅನುಭವಿಸಿದೆ. ಒಟ್ಟಾರೆ ಮಾಧ್ಯಮಗಳ ಅಬ್ಬರಕ್ಕೆ ಉಬ್ಬಿಕೊಂಡಿದ್ದ ಎಎಪಿ ಬಲೂನ್‌ ಟುಸ್‌ ಆಗಿದೆ.

ಒಟ್ಟಿನಲ್ಲಿ ಈ ಮೂರು ಚುನಾವಣೆಗಳು ಸಾಕಷ್ಟು ಪಾಠಗಳನ್ನು ಕಲಿಸಿವೆ.  ಮುಂಬರುವ ಚುನಾವಣೆಗಳಲಿ ಕೋಮುವಾದಿ ಪಕ್ಷವನ್ನು ಗೆಲ್ಲಿಸಬಾರದು ಎಂದು ಹೇಳುತ್ತಿರುವ ವಿಪಕ್ಷಗಳು ಐಕ್ಯ ಹೋರಾಟ, ಸೀಟು ಹೊಂದಾಣಿಕೆ ಮಾಡಕೊಳ್ಳದೆ ಹೊದರೆ ಬಿಜೆಪಿಯ ನಾಗಾಲೋಟ ಮುಂದುವರೆಯಲಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ.

 

 

Donate Janashakthi Media

Leave a Reply

Your email address will not be published. Required fields are marked *