ಹಿಮಾಚಲ ಪ್ರದೇಶ ‘ಕೈ’ ಹಿಡಿದ ಮತದಾರ

ನವದೆಹಲಿ : ದೇಶದ ಗಮನ ಸೆಳೆದಿದ್ದ ಗುಜರಾತ್‌ ಹಾಗೂ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಗುಜರಾತ್‌ನಲ್ಲಿ ಬಿಜೆಪಿ, ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್‌ ಅಧಿಕಾರದ ಗದ್ದುಗೆಯೇರಲು ಸಜ್ಜಾಗಿವೆ.

ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ 40, ಬಿಜೆಪಿ 25 ಸ್ಥಾನಗಳನ್ನು, ಬಿಜೆಪಿ ಬಂಡಾಯ ಅಭ್ಯರ್ಥಿಗಳು 3 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಬಿಜೆಪಿಯೇ ಅಧಿಕಾರಕ್ಕೆ ಮರಳುತ್ತದೆ. ಕಾಂಗ್ರೆಸ್‌ ತೀವ್ರ ಸ್ಪರ್ಧೆ ಒಡ್ಡುತ್ತದೆ ಎಂದಷ್ಟೇ ಹೆಚ್ಚಿನ ಸಮೀಕ್ಷೆಗಳು ತಿಳಿಸಿದ್ದವು. ಆದರೆ, ತೀವ್ರ ಸ್ಪರ್ಧೆ ಅಲ್ಲ, ಹಿಮಾಚಲ ಪ್ರದೇಶದಲ್ಲಿ ಸುಲಭವಾಗಿ ಸರ್ಕಾರ ರಚಿಸುವಷ್ಟು (40) ಕ್ಷೇತ್ರಗಳನ್ನು ಜನ ಕೊಟ್ಟಿದ್ದಾರೆ.

ಬಿಜೆಪಿ ಎದುರಿಸುತ್ತಿದ್ದ ಆಡಳಿತ ವಿರೋಧಿ ಅಲೆಯು ಕಾಂಗ್ರೆಸ್ ಪಾಲಿಗೆ ವರದಾನವಾಯಿತು. ಜತೆಗೇ, ನಾಲ್ಕು ದಶಕಗಳ ಅವಧಿಯಲ್ಲಿ ಬಿಜೆಪಿಯಾಗಲೀ, ಕಾಂಗ್ರೆಸ್ ಆಗಲಿ ಸತತ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದಿಲ್ಲ. ಈ ಪ್ರವೃತ್ತಿ 2022ರ ಚುನಾವಣೆಯಲ್ಲೂ ಮುಂದುವರಿದಿದೆ. ಹಿಮಾಚಲ ಪ್ರದೇಶದ ಅತ್ಯಂತ ಜನಪ್ರಿಯ ನಾಯಕರಾದ ಕಾಂಗ್ರೆಸ್‌ನ ವೀರಭದ್ರ ಸಿಂಗ್ ಮತ್ತು ಬಿಜೆಪಿಯ ಪ್ರೇಮ್ ಕುಮಾರ್ ಧುಮಾಲ್ ಅವರಿಗೂ ತಮ್ಮ ಪಕ್ಷಗಳನ್ನು ಎರಡನೇ ಬಾರಿಗೆ ಅಧಿಕಾರ ತರಲು ಸಾಧ್ಯ ಆಗಿಲ್ಲ. ನಾಯಕತ್ವದ ಗೊಂದಲದ ಮಧ್ಯೆಯೂ ಅಲ್ಲಿನ ಜನರು ಕಾಂಗ್ರೆಸ್ ಕೈ ಹಿಡಿದಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.

ಕಾಂಗ್ರೆಸ್‌ ಗೆಲುವಿಗೆ ಬಿಜೆಪಿಯ ಬಂಡಾಯ ಅಭ್ಯರ್ಥಿಗಳ ಕೊಡುಗೆಯೂ ಇದೆ. ಬಿಜೆಪಿಯು 11 ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಿತ್ತು. ಇದರಿಂದ ಬಿಜೆಪಿ ಪಕ್ಷದ ಗೆಲುವಿನ ಮಾರ್ಜಿನ್ ಕೂಡ ಕಡಿಮೆಯಾಯಿತು ಅಲ್ಲದೇ, ಕೆಲವು ಕಡೆ ಕಾಂಗ್ರೆಸ್ ಗೆಲ್ಲಲು ಅನುಕೂಲವಾಯಿತು.

ಹಿಮಾಚಲ ಪ್ರದೇಶದ ಆರ್ಥಿಕ ಅಭಿವೃದ್ಧಿಗೆ ಸೇಬು ಕೃಷಿ ಮತ್ತು ಮಾರಾಟ ಪ್ರಮುಖ ಕೊಡುಗೆಯನ್ನು ನೀಡುತ್ತದೆ. ಆದರೆ, ಬಿಜೆಪಿ ಸರ್ಕಾರವು ಆದಾನಿ ಕಂಪನಿಗೆ ಅನುಕೂಲವಾಗುವಂತೆ ನಡೆದುಕೊಂಡಿದ್ದು, ಸರ್ಕಾರ ವಿರುದ್ಧ ಕೋಪಗೊಳ್ಳಲು ಕಾರಣವಾಯಿತು. ಸೇಬು ಪೆಟ್ಟಿಗೆ ಮೇಲಿನ ಜಿಎಸ್‌ಟಿ ಹೆಚ್ಚಳವು ಭಾರೀ ಹೊಡೆತ ನೀಡಿತ್ತು. ತೋಟಗಾರಿಕೆಯನ್ನು ಕಾರ್ಪೊರೇಟ್ ಕಂಪನಿಗಳಿಗೆ ಅಡ ಇಡಲು ಹೊರಟಿದ್ದು ಪ್ರತಿಭಟನೆ ಕಾರಣವಾಗಿತ್ತು. ಇದು ಕೂಡ ಬಿಜೆಪಿ ಸೋಲಿಗೆ ಕಾರಣವಾದರೆ, ಕಾಂಗ್ರೆಸ್ ಗೆಲುವಿನ ಅಂಶಗಳಲ್ಲಿ ಒಂದಾಗಿದೆ ಎಂಬುದು ತಜ್ಞರ ಲೆಕ್ಕಾಚಾರವಾಗಿದೆ.

ಹಿಮಾಚಲ ಪ್ರದೇಶದ ಜನತೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಧನ್ಯವಾದ ಅರ್ಪಿಸಿದ್ದಾರೆ.

ತಮ್ಮ ಪಕ್ಷಕ್ಕೆ ನಿರ್ಣಾಯಕ ಜನಾದೇಶ ನೀಡಿದಕ್ಕೆ ಧನ್ಯವಾದ. ಕಾಂಗ್ರೆಸ್ ಸರ್ಕಾರ ಎಲ್ಲಾ ಚುನಾವಣೆಯ ಭರವಸೆಗಳನ್ನು ಈಡೇರಿಸುತ್ತದೆ ಎಂದು ಅವರು ಹೇಳಿದ್ದಾರೆ. ಗುಜರಾತ್ ಜನರ ಆದೇಶವನ್ನು ವಿನಮ್ರವಾಗಿ ಸ್ವೀಕರಿಸುತ್ತನೇ. ನಾವು ಪುನರ್ರಚನೆ ಮಾಡುತ್ತೇವೆ, ಶ್ರಮಿಸುತ್ತೇವೆ. ದೇಶದ ಆದರ್ಶಗಳು ಮತ್ತು ರಾಜ್ಯದ ಜನರ ಹಕ್ಕುಗಳಿಗಾಗಿ ಹೋರಾಟವನ್ನು ಮುಂದುವರಿಸುತ್ತೇವೆ ಎಂದು ಅವರು ಹೇಳಿದರು.

Donate Janashakthi Media

Leave a Reply

Your email address will not be published. Required fields are marked *