ಮೊಟ್ಟೆ ಯೋಜನೆ ವಿರೋಧಿಸುವ ಸ್ವಾಮೀಜಿಗಳನ್ನು ಬಂಧಿಸಿ – ವಿ.ಪಿ ನಿರಂಜನಾರಾಧ್ಯ

ಬೆಂಗಳೂರು : ಶಾಲಾ ಮಕ್ಕಳಿಗೆ ಮೊಟ್ಟೆಯನ್ನು ವಿತರಿಸಬಾರದು ಎಂದು ಕೆಲವು ಮಠಾಧೀಶರು ಕ್ಷುಲ್ಲಕ ರಾಜಕಾರಣದ ಮೂಲಕ ಮಕ್ಕಳ ಪೌಷ್ಟಿಕತೆಯ ಮೂಲಭೂತ ಹಕ್ಕನ್ನು ಕಸಿಯಲು ಹೊರಟಿರುವುದು ಖಂಡನೀಯ. ಆಹಾರದ ಹಕ್ಕಿನ‌ ಮೇಲೆ ದಾಳಿ ಮಾಡುತ್ತಿರುವ ಸ್ವಾಮೀಜಿಗಳನ್ನು ಬಂಧಿಸಬೇಕು ಎಂದು ಶಿಕ್ಷಣ ತಜ್ಞ ವಿ.ಪಿ ನಿರಂಜನಾರಾಧ್ಯ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಯಾರು ಏನನ್ನು ತಿನ್ನಬೇಕು ಎಂಬುದು ಅವರ ವೈಯುಕ್ತಿಕ ಹಕ್ಕು ಮತ್ತು ಸಂವಿಧಾನದ 21 39,( ಎಫ್), 45 ಮತ್ತು 47 ಅನ್ವಯ ಮಕ್ಕಳ ಆರೋಗ್ಯಕರ ಬೆಳವಣಿಗೆ ಹಾಗು ಅಭಿವೃದ್ಧಿಗೆ ಪೌಷ್ಠಿಕ ಆಹಾರ ಮುಖ್ಯವಾಗಿದ್ದು ಅದು ರಾಜ್ಯದ ಸಂವಿಧಾನಾತ್ಮಕ ಜವಾಬ್ದಾರಿಯಾಗಿದೆ. ( Article 47:Duty of the State to raise the level of nutrition and the standard of living and to improve public health)

ಸಂವಿಧಾನದ ಈ ಅವಕಾಶಗಳನ್ನು ವಿಸ್ತರಿಸಿ ರಾಷ್ಟ್ರೀಯ ಆಹಾರ ಭದ್ರತೆ ಕಾಯಿದೆ 2013 ರ ಅನ್ವಯ ಎಲ್ಲ ಮಕ್ಕಳಿಗೆ ಸಮತೋಲನ ಹಾಗು ಪೌಷ್ಟಿಕ ಆಹಾರವನ್ನು ನಿಗಧಿಗೊಳಿಸಿ ಖಾತರಿಗೊಳಿಸಿದೆ. ಸಂವಿಧಾನಬದ್ಧ ಈ ಹಕ್ಕನ್ನು ಕಸಿಯಲು ಈ ಸ್ವಾಮೀಜಿಗಳು ಯಾರು? ಎಂದು ಪ್ರಶ್ನಿಸಿದ್ದಾರೆ.

ಈ ಬಗೆಯ ನಿರ್ಣಯವನ್ನು ಈ ಹಿಂದೆ 2004 ರಲ್ಲಿ ಸರ್ಕಾರ ಕೈಗೊಂಡಾಗ ಇದೇ ರೀತಿಯಲ್ಲಿ ವಿರೋಧವನ್ನು ಮೂಲಭೂತವಾದಿ ಧಾರ್ಮಿಕ ಸಂಘಟನೆಗಳು ವ್ಯಕ್ತಪಡಿಸಿದ್ದರು. ಅನೇಕ ಅಧ್ಯಯನಗಳು ಮತ್ತು ಸಂಶೋಧನಾ ವರದಿಗಳ ಅನ್ವಯ ನಮ್ಮ ಮಕ್ಕಳಿಗೆ ಅಗತ್ಯ ಪ್ರೋಟಿನ್ಯುಕ್ತ ಆಹಾರ ನಿರಂತರವಾಗಿ ದೊರೆಯದೇ ಇರುವುದರಿಂದ ಅವರ ದೈಹಿಕ , ಮಾನಸಿಕ ಹಾಗು ಬೌದ್ಧಿಕ ಬೆಳವಣಿಗೆಯ ಮೇಲೆ ಅಪಾರ ಪರಿಣಾಮ ಬೀರಿದ್ದು ಕುಂಠಿತ ಬೆಳವಣಿಗೆಯ ಬಗ್ಗೆ ಉಲ್ಲೇಖಿಸಲಾಗಿದೆ. ಆತಂಕವೆಂದರೆ ಇದು ದುರ್ಬಲ ಸಮುದಾಯದ ಮಕ್ಕಳಲ್ಲಿ ಅತಿ ಹೆಚ್ಚು ಎಂಬ ವಿಷಯವು ಹಲವಾರು ಅಧ್ಯಯನದಿಂದ ಸಾಬೀತಾಗಿವೆ ಎಂದರು.

ಈ ವಿಷಯದಲ್ಲಿ ಅಧ್ಯಯನ ನಡೆಸಲು ನೇಮಕವಾಗಿದ್ದ ಹಿರಿಯ ನ್ಯಾಯಧೀಶರಾಗಿದ್ದ ನ್ಯಾಯಮೂರ್ತಿ ಎನ್.ಕೆ.ಪಾಟೀಲ್ ರವರ ಸಮಿತಿಯ ವರದಿಯೂ ಕೂಡ ಮಕ್ಕಳಲ್ಲಿ ಪೌಷ್ಟಿಕತೆಯನ್ನು ಹೆಚ್ಚಿಸಲು ಸರ್ಕಾರವು ಮುಂದಾಗಬೇಕೆಂದು ತಿಳಿಸಿದೆ.

ಪೌಷ್ಠಿಕಾಂಶದ ವಿಷಯದಲ್ಲಿ ಕರ್ನಾಟಕವು ನೀರಸ ಸೂಚಕಗಳನ್ನು ಹೊಂದಿದೆ ಎಂದು ಎಲ್ಲರಿಗೂ ತಿಳಿದಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS) 5 ನೇ ಸುತ್ತಿನ ಪ್ರಕಾರ, ಕರ್ನಾಟಕದಲ್ಲಿ ಹೆಚ್ಚಿನ ಮಕ್ಕಳು ತಮ್ಮ ಪ್ರಮಾಣಿತ ಎತ್ತರ ಮತ್ತು ತೂಕವನ್ನು ತಲುಪುತ್ತಿಲ್ಲ. ವರದಿ ಅನ್ವಯ 35.4% ರಷ್ಟು ಕುಂಠಿತ ಬೆಳವಣಿಗೆ, (ವಯಸ್ಸಿಗನುಗುಣವಾಗಿ ಎತ್ತರ ಹಾಗು ತೂಕವಿಲ್ಲದಿರುವುದು ) ಹಾಗು 32.9% ರಷ್ಟು ಮಕ್ಕಳು ತಮ್ಮ 6 ನೇ ವರ್ಷದ ಶಾಲಾ ಜೀವನವನ್ನು ಪ್ರಾರಂಭಿಸುವಾಗ ಕಡಿಮೆ ತೂಕ ಹೊಂದಿರುವುದು ಕಂಡು ಬಂದಿದೆ.

2020-21 ರ ನೀತಿ ಆಯೋಗದ ವರದಿಯು
ಈ ಬಗ್ಗೆ ಆತಂಕದ ಅಂಶಗಳನ್ನು ಹೊರತಂದಿದೆ. ರಾಜ್ಯದಲ್ಲಿ ಶೇಕಡ 32 ರಷ್ಟು ಮಕ್ಕಳು ಕಡಿಮೆ ತೂಕ , ಶೇಕಡ 32.5 ಮಕ್ಕಳು ಕುಂಠಿತ ಬೆಳವಣಿಗೆ , ಶೇಕಡ 45.2 ಮಕ್ಕಳು ಮಹಿಳೆಯರು ರಕ್ತ ಹೀನತೆ ಹಾಗು 10 – 19 ವರ್ಷ ವಯಸ್ಸಿನ ಶೇಕಡ 17.2 ರಷ್ಟು ಮಕ್ಕಳು ತೀವ್ರ ರಕ್ತ ಹೀನತೆ ಹೊಂದಿದ್ದಾರೆ.

ರಾಷ್ಟ್ರೀಯ ಆಹಾರ ಭದ್ರಾತಾ ಕಾಯ್ದೆ 2013 ಕೂಡ ಈ ವಿಷಯವನ್ನು ಪ್ರಮುಖವಾಗಿ ತೆಗೆದುಕೊಂಡು ದೇಶದ ಅಭಿವೃದ್ದಿಯಲ್ಲಿ ಮಕ್ಕಳ ಬೆಳವಣಿಗೆ ಮಹತ್ವದಾಗಿದ್ದು ಮಕ್ಕಳಿಗೆ ನಿರಂತರವಾಗಿ ಪೂರಕ ಪೌಷ್ಟಿಕ ಆಹಾರವನ್ನು ಒದಗಿಸುವುದು ಸರ್ಕಾರದ ಕರ್ತವ್ಯವಾಗಿದೆ ಇದಕ್ಕೆ ಯೋಜನಗಳನ್ನು ರೂಪಿಸಬೇಕು ಎಂದು ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಪೂರಕ ಪೌಷ್ಟಿಕಾಂಶದ ಆಹಾರವನ್ನು ನೀಡುವ ಕುರಿತಾಗಿ ಸರ್ಕಾರಗಳು ತೆಗೆದುಕೊಳ್ಳುವ ತೀರ್ಮಾನಗಳಿಗೆ ಯಾವುದೇ ಜಾತಿ, ಧರ್ಮ ಹಾಗೂ ರಾಜಕೀಯವನ್ನು ಬೆರೆಸದೆ ಮಕ್ಕಳ ಸರ್ವಾಂಗೀಣ ಬೆಳವಣಿಗೆಯ ಹಿತದೃಷ್ಟಿಯಿಂದ ತೀರ್ಮಾನವನ್ನು ಸ್ವಾಗತಿಸಿ ಪರಿಣಾಮಕಾರಿ ಜಾರಿಗೆ ಒತ್ತಾಯಿಸಬೇಕಿದೆ.

ಸರ್ಕಾರವು ಈಗಾಗಲೇ ಸುತ್ತೋಲೆ
ಹೊರಡಿಸಿರುವಂತೆ ಕಲ್ಯಾಣದ ಕರ್ನಾಟಕದ 7 ಜಿಲ್ಲೆಗಳಿಗೆ ಮಾತ್ರವಲ್ಲದೇ ಕರ್ನಾಟಕದ ಎಲ್ಲಾ ಜಿಲ್ಲೆಗಳಿಗೂ ಈ ಯೋಜನೆಯನ್ನು ವಿಸ್ತರಿಸಿ ಮೊಟ್ಟೆಯನ್ನು ತಿನ್ನದ ಮಕ್ಕಳಿಗೆ ಪರ್ಯಾಯ ಹಣ್ಣು, ಚಿಕ್ಕಿ ಮತ್ತು ಕಾಳುಗಳನ್ನು ನೀಡಲು ಮುಂದಾಗಬೇಕು ಎಂದು ನಾವು ಒಕ್ಕೊರಲಿನಿಂದ ಸರಕಾರವನ್ನು ಒತ್ತಾಯಿಸುತ್ತೇವೆ.

ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಯಾವುದೇ ಜಾತಿ, ಧರ್ಮ ಮತ್ತು ರಾಜಕೀಯ ಒತ್ತಡಕ್ಕೆ ಒಳಗಾಗದೇ ಕೈಗೊಂಡಿರುವ ನಿರ್ಧಾರವನ್ನು ಪರಿಣಾಮಾಕಾರಿಯಾ ಜಾರಿಗೊಳುಸಬೇಕೆಂದು ರಾಜ್ಯ ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಒತ್ತಾಯಿಸುತ್ತದೆ ಎಂದು ನಿರಂಜನಾರಾಧ್ಯ ತಿಳಿಸಿದ್ದಾರೆ.

ಸ್ವಾಮೀಜಿಗಳು ಸಂವಿಧಾನ ಅಥವಾ ಕಾನೂನಿಗಿಂತ ದೊಡ್ಡವರಲ್ಲ. ಲಿಂಗಾಯತ ಧರ್ಮಕ್ಕೆ ಸೇರಿದವರೆಂದು ಬೊಬ್ಬೆ ಹೊಡೆಯುವ ಹಲವು ಸ್ವಾಮೀಜಿಗಳು ಬಸವಣ್ಣ ಮತ್ತು ಅವರ ಮೂಲ ತತ್ವಗಳಾದ ಸಮಾನತೆ , ಸಾಮಾಜಿಕ ನ್ಯಾಯ , ಜಾತಿರಹಿರಹಿತ ಸಮಸಮಾಜದ ಪರಿಕಲ್ಪನೆಗೆ ಕಳಂಕ. ಇಂಥವರನ್ನು ಪ್ರಜ್ಞಾವಂತ ನಾಗರೀಕರು ಹಾಗು ನಾಗರೀಕ ಸಮಾಜ ಬಹಿಷ್ಕರಿಸಬೇಕು .ಜನರ ಮಧ್ಯೆ ಅಸ್ಪ್ರುಶ್ಯತೆ , ವಿಭಜನೆ , ತಾರತಮ್ಯ ಹುಟ್ಟುಹಾಕುವ ಹಾಗು ಸಮಾಜದ ಶಾಂತಿ ಕದಡುವ ಆರೋಪದ ಮೇಲೆ ಕೂಡಲೇ ಬಂಧಿಸಿ ಗಡೀಪಾರು ಮಾಡಬೇಕು.

ಸರಕಾರ ಜಾರಿಗೊಳುಸಿರುವ ಮೊಟ್ಟೆ ವಿತರಣೆ ಯೋಜನೆಯನ್ನು ಯಾವುದೇ ಕಾರಣಕ್ಕೆ ನಿಲ್ಲಿಸುವುದಾಗಲಿ ಅಥವಾ ಬದಲಾಯಿಸುವ ಬಗ್ಗೆಯಾಗಲಿ ಸರ್ಕಾರ ಯೋಚಿಸಬಾರದು . ಬದಲಿಗೆ ಈ ದೇಶ ವಿಭಜಕ ಶಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವ ಬಗ್ಗೆ ಬೆಳಗಾವಿಯಲ್ಲಿ ನಡೆಯುತ್ತಿರುವ ಹಾಲಿ ಅಧಿವೇಶನದಲ್ಲಿ ಚರ್ಚಿಸಿ , ಸಾರ್ವಜನಿಕರ ಕಾಣಿಕೆಯಿಂದ ಕಟ್ಟಿರುವ ಈ ಮಠಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ನಿರಂಜನಾರಾಧ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.

Donate Janashakthi Media

One thought on “ಮೊಟ್ಟೆ ಯೋಜನೆ ವಿರೋಧಿಸುವ ಸ್ವಾಮೀಜಿಗಳನ್ನು ಬಂಧಿಸಿ – ವಿ.ಪಿ ನಿರಂಜನಾರಾಧ್ಯ

Leave a Reply

Your email address will not be published. Required fields are marked *