ಪಠ್ಯಪುಸ್ತಕದಲ್ಲಿ “ಭಗವದ್ಗೀತೆ” ಸೇರ್ಪಡೆ ಬಗ್ಗೆ ಚರ್ಚೆ – ಬಿ.ಸಿ. ನಾಗೇಶ್‌

ಬೆಂಗಳೂರು: ಕರ್ನಾಟಕದ ಪಠ್ಯ ಪುಸ್ತಕದಲ್ಲಿ ಭಗವದ್ಗೀತೆ ಪರಿಚಯಿಸುವ ವಿಚಾರವಾಗಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸ್ಪಷ್ಟನೆ ನೀಡಿದ್ದು, “ಈಗ ಪುಸ್ತಕದಲ್ಲಿ ಜ್ಞಾನವಿದೆ, ಸಂಸ್ಕಾರವಿಲ್ಲ ಎನ್ನುತ್ತಿದ್ದಾರೆ. ನೈತಿಕ ಶಿಕ್ಷಣ ತರುವಂತೆ ಹಲವರು ಬೇಡಿಕೆ ಇಟ್ಟಿದ್ದು, ಇಂತಹದೊಂದು ಬೇಡಿಕೆ ಬಗ್ಗೆ ನಾವು ಚರ್ಚೆ ಮಾಡುತ್ತೇವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಿಕ್ಷಣ ತಜ್ಞರ ಜೊತೆ ಚರ್ಚಿಸುತ್ತೇವೆ. ಅದನ್ನು ಹೇಗೆ ಜಾರಿ ಮಾಡಬೇಕೆಂದು ನಿರ್ಧಾರ ಮಾಡುತ್ತೇವೆ” ಎಂದು ತಿಳಿಸಿದ್ದಾರೆ.

“ಗುಜರಾತ್ ಮಾದರಿ ಎಂಬುದು ನನಗೆ ಗೊತ್ತಿಲ್ಲ. ವಿದ್ಯಾರ್ಥಿಗಳಿಗೆ ಜ್ಞಾನದ ಜತೆ ಸಂಸ್ಕಾರ ಕಲಿಸಬೇಕಿದೆ. ಅದರ ಬಗ್ಗೆ ಈಗ ಚರ್ಚೆ ನಡೆಯುತ್ತಿದೆ. ಶತಮಾನಗಳಿಂದ ಭಗವದ್ಗೀತೆಯನ್ನು ಅಧ್ಯಯನ ಮಾಡುವ, ಓದುವ ಪದ್ಧತಿ ನಮ್ಮಲ್ಲಿದೆ, ಈ ವರ್ಷ ತರುವುದಿಲ್ಲ, ಮುಂದಿನ ಶೈಕ್ಷಣಿಕ ವರ್ಷದಲ್ಲಿ ತರುವ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ” ಎಂದು ಬೆಂಗಳೂರಿನಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದರು.

ಇದನ್ನು ಓದಿ: ಹಿಜಾಬ್ ಪ್ರಕರಣ ತುರ್ತು ವಿಚಾರಣೆ ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್‌

ಗುಜರಾತ್ ಮಾದರಿಯಲ್ಲಿ ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆ ವಿಚಾರವಾಗಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆ ಬದಲಾಯಿಸಲು ಹೋಗಬೇಡಿ. ಕೊರೊನಾದಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗ್ತಿದ್ದಾರೆ. ಅವರಿಗೆ ಗುಣಮಟ್ಟದ ಶಿಕ್ಷಣ ಕೊಡುವ ಬಗ್ಗೆ ಗಮನಹರಿಸಿ. ಶಾಲಾಕಟ್ಟಡಗಳು, ಮೂಲಸೌಕರ್ಯಗಳ ಬಗ್ಗೆ ಗಮನ ಕೊಡಿ ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಪುನೀತ್ ಹೆಸರು ಸೇರ್ಪಡೆ ಸಮಿತಿಗೆ ಬಿಟ್ಟ ನಿರ್ಧಾರ:

ಇನ್ನು ಶಾಲಾ ಪಠ್ಯಪುಸ್ತಕದಲ್ಲಿ ನಟ ಪುನೀತ್ ರಾಜ್ ಕುಮಾರ್ ಕುರಿತು ವಿಷಯ ಸೇರಿಸುವ ಬಗ್ಗೆ ಸಚಿವರಲ್ಲಿ ಕೇಳಿದಾಗ, ಅಂತಹ ಬೇಡಿಕೆಗಳನ್ನು ಪಠ್ಯಪುಸ್ತಕ ರಚನಾ ಸಮಿತಿಯ ಮುಂದಿಡುತ್ತೇವೆ. ಕರ್ನಾಟಕದ ಪಠ್ಯದಲ್ಲಿ ಯಾವ ರೀತಿ ಸೇರಿಸಬೇಕು ಎಂದು ಮುಖ್ಯಮಂತ್ರಿ, ಶಿಕ್ಷಣ ತಜ್ಞರ ಜೊತೆ ಸೇರಿ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.

ಹಿಜಾಬ್ ಧರಿಸಿ ಹಾಜರಾಗಲು ನಿಯಮ ಸಡಿಲಿಕೆ ಇಲ್ಲ

ಹಿಜಾಬ್ ವಿಚಾರವಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗುವ ವಿದ್ಯಾರ್ಥಿನಿಯರಿಗೆ ಶಿಕ್ಷಣ ಇಲಾಖೆ ಮತ್ತೆ ಸ್ಪಷ್ಟನೆ ನೀಡಿದ್ದು, ಅದರಂತೆ ಸದ್ಯ ಹೈಕೋರ್ಟ್ ತೀರ್ಪಿನ ಅನುಸಾರ ಹಿಜಾಬ್ ಧರಿಸಿ ಶಾಲೆಗೆ ಹಾಜರಾಗಲು ಅಥವಾ ಪರೀಕ್ಷೆಗೆ ಹಾಜರಾಗಲು ಅವಕಾಶ ಇಲ್ಲ ಎಂದು ಹೇಳಲಾಗಿದೆ.

ಇದನ್ನು ಓದಿ: ತಾರತಮ್ಯವಿಲ್ಲದ ಸಾರ್ವತ್ರಿಕ ಶಿಕ್ಷಣದ ಹಕ್ಕಿಗೆ ಹೊಡೆತ-ಕರ್ನಾಟಕ ಉಚ್ಛ ನ್ಯಾಯಾಲಯದ ತೀರ್ಪು: ಸಿಪಿಐ(ಎಂ)

ದ್ವಿತೀಯ ಪಿಯುಸಿ ಪರೀಕ್ಷೆಗೆ ತಿಂಗಳು ಮಾತ್ರ ಬಾಕಿ ಇದೆ. ಈ ನಡುವೆಯೇ ಸುಪ್ರೀಂ ಕೋರ್ಟ್ ಮೊರೆ ಹೋದರೆ, ಅಲ್ಲಿಯ ತೀರ್ಪು ಬರುವವರೆಗೂ ಹಿಜಾಬ್ ದರಿಸಲು ಅವಕಾಶ ನೀಡಿ ಎಂದು ಕೆಲ ಮುಸ್ಲಿಂ ವಿದ್ಯಾರ್ಥಿಗಳು ಬೇಡಿಕೆ ಇಟ್ಟಿದ್ದರು. ಪರೀಕ್ಷೆಯಲ್ಲಿ ಆದರೂ ಹಿಜಾಬ್ ಧರಿಸಲು ಅವಕಾಶ ನೀಡಿ ಎಂದು ಕೇಳಿದ್ದರು. ಆದರೆ, ಅದಕ್ಕೆ ಅವಕಾಶ ಇರುವುದಿಲ್ಲ ಎಂದು ತಿಳಿಸಲಾಗಿದೆ.

ತರಗತಿಯಲ್ಲಿಗಳಲ್ಲಿಯೂ ಹಿಜಾಬ್ ಧರಿಸಲು ಅವಕಾಶ ಇಲ್ಲ. ಹೈಕೋರ್ಟ್ ತೀರ್ಪು ನೀಡಿದೆ ಹೀಗಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗುವ ವಿದ್ಯಾರ್ಥಿಗಳಿಗೆ ಯಾವುದೇ ಕಾರಣಕ್ಕೂ ಮತ್ತೆ ಅವಕಾಶ ಸಡಿಲಿಕೆ ಇರುವುದಿಲ್ಲ. ಇಷ್ಟು ದಿನ ಕೋರ್ಟ್ ತೀರ್ಪು ಬಂದಿರಲಿಲ್ಲ. ಹೀಗಾಗಿ ಶಿಕ್ಷಣ ಇಲಾಖೆ ಕೊಂಚ ಸಡಿಲಿಕೆ ನೀಡಿತ್ತು. ಇನ್ನುಮುಂದೆ ಮತ್ತೆ ಯಾವುದೇ ಕಾರಣಕ್ಕೂ ಹಿಜಾಬ್ ಅವಕಾಶವಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಸ್ಪಷ್ಟವಾಗಿ ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *