ಬೆಂಗಳೂರು: ರಾಜ್ಯ ಸರ್ಕಾರ ಶುಕ್ರವಾರ ಮಂಡಿಸಿದ ಬಜೆಟ್ ಶಿಕ್ಷಣ ಕ್ಷೇತ್ರಕ್ಕೆ ಅನುದಾನ ಕಡಿತ ಮಾಡಿದ್ದು ವಿದ್ಯಾರ್ಥಿಗಳಲ್ಲಿ ನಿರಾಸೆ ಮೂಡಿಸಿದ ಎಂದು ವಿದ್ಯಾರ್ಥಿ ಸಂಘಟನೆ ಎಸ್‌ಎಫ್‌ಐ ಶನಿವಾರ ಹೇಳಿದೆ. ಶಿಕ್ಷಣ ಕ್ಷೇತ್ರಕ್ಕೆ 2020-21 ರಲ್ಲಿ 13% , 2021-22 ರಲ್ಲಿ 12.7% , 2022-23 ರಲ್ಲಿ 12.9%, 2023-24 ರಲ್ಲಿ 11% ಹಾಗೂ ಈ 2024-25 ರ ಬಜೆಟ್ ನಲ್ಲಿ 12% ಹಣ ಮೀಸಲಿಡಲಾಗಿದ್ದು, ಕಳೆದ 4 ವರ್ಷಗಳ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ನೀಡಿದ್ದ ಪ್ರಾಧಾನ್ಯತೆ ಕಡಿಮೆಯಾಗುತ್ತಾ ಬಂದಿದೆ ಎಂದು ಸಂಘಟನೆಯು ಅಸಮಾಧಾನ ವ್ಯಕ್ತಪಡಿಸಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಎಸ್‌ಎಫ್‌ಐ ರಾಜ್ಯ ಸಮಿತಿ, ಈ ಬಜೆಟ್ ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಕೇವಲ 44,422 ಕೋಟಿ ರೂಪಾಯಿ ಅನುದಾನ ನೀಡುವ ಮೂಲಕ ಶಿಕ್ಷಣ ಕ್ಷೇತ್ರವನ್ನು ಸರ್ಕಾರ ಕಡೆಗಣಿಸಿದೆ ಎಂದು ಹೇಳಿದೆ. “ಶಿಕ್ಷಣ ಕ್ಷೇತ್ರವನ್ನು ಪ್ರಾಧಾನ್ಯತೆಯಾಗಿ ತೆಗೆದುಕೊಳ್ಳಬೇಕಿದ್ದ ಸರ್ಕಾರ ಖಾಸಗಿಯವರ ಸಹಭಾಗಿತ್ವವನ್ನು ನಿರೀಕ್ಷಿಸುತ್ತಿರುವುದು ಸ್ಪಷ್ಟವಾಗುತ್ತದೆ. ಹಾಗೆಯೇ ಕಾಂಗ್ರೆಸ್ ಸರ್ಕಾರ ಶಿಕ್ಷಣವನ್ನು ಗ್ಯಾರಂಟಿ ಪಟ್ಟಿಗೆ ಸೇರಿಸಬೇಕಿತ್ತು. ಶಿಕ್ಷಣ ವ್ಯವಸ್ಥೆಯ ಸಮಗ್ರ ಅಭಿವೃದ್ಧಿಯ ಬಗ್ಗೆ ಯಾವುದೇ ದೂರದೃಷ್ಟಿಕೋನ ಮತ್ತು ಅಭಿವೃದ್ಧಿ ಕಣ್ಣೋಟ ಇಲ್ಲ ಎಂಬುದು ಈ ಬಜೆಟ್ ನಲ್ಲಿ ಸಾಬೀತಾಗಿದೆ” ಎಂದು ಸಂಘಟನೆ ಹೇಳಿದೆ.
ಇದನ್ನೂ ಓದಿ:ಇಸ್ಲಾಂಗೆ ಮತಾಂತರಗೊಂಡವರಿಗೂ ಮೀಸಲಾತಿ ವಿಸ್ತರಣೆ ಬಗ್ಗೆ ಚಿಂತನೆ – ತಮಿಳುನಾಡು ಸಿಎಂ
ಬಜೆಟ್‌ನಲ್ಲಿ ಮೊರಾರ್ಜಿ ದೇಸಾಯಿ, ಅಲ್ಪಾ ಸಂಖ್ಯಾತರ, ಹಿಂದುಳಿದ ವರ್ಗಗಳ ಕಲ್ಯಾಣ, ಸಮಾಜ ಕಲ್ಯಾಣ ಇಲಾಖೆ 345 ಹಾಸ್ಟೆಲ್ ಗಳನ್ನು ಘೋಷಣೆ ಮಾಡಿದ್ದು ಸ್ವಾಗತರ್ಹಾ ಎಂದು ಎಸ್‌ಎಫ್‌ಐ ಹೇಳಿದ್ದು, ಈ ಬಗ್ಗೆ ಸಂಘಟನೆಯು ಮುಖ್ಯಮಂತ್ರಿಗೆ ರಾಜ್ಯದಲ್ಲಿ ಹೊಸ ಹಾಸ್ಟೆಲ್ ಮಂಜೂರು ಮಾಡಲು ಸಲ್ಲಿಸಿದ್ದ ಮನವಿಯನ್ನು ನೆನಪಿಸಿಕೊಂಡಿದೆ.
ಅದಾಗ್ಯೂ, ವಸತಿ ನಿಲಯ ವಿದ್ಯಾರ್ಥಿಗಳ ಆಹಾರ ಭತ್ಯೆಯನ್ನು ಕನಿಷ್ಠ 3,500 ರೂ. ಗಳಿಗೆ ಹೆಚ್ಚಿಸಬೇಕೆಂದು ಬೇಡಿಕೆಯ ನಿರೀಕ್ಷೆ ಹುಸಿಯಾಗಿದೆ ಎಂದು ಎಸ್‌ಎಫ್‌ಐ ಹೇಳಿದೆ. “ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಹಾಗೂ ಅಲ್ಪಾಸಂಖ್ಯಾತ ಕಲ್ಯಾಣ ಇಲಾಖೆಗಳಡಿ ಇರುವ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಮಾಸಿಕ ಬೋಜನ ವೆಚ್ಚವನ್ನು 1750 ದಿಂದ1850 ರೂಪಾಯಿಗೆ ರೂ. 100 ಹೆಚ್ಚಳ ಮಾಡಿದ್ದು ಅತೃಪ್ತಿ ತಂದಿದೆ. ಕೇವಲ ನೂರು ರೂಪಾಯಿ ಹೆಚ್ಚಳದಿಂದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಹಾಗೂ ಪೌಷ್ಠಿಕ ಆಹಾರ ಒದಗಿಸಲು ಅಸಾಧ್ಯ” ಎಂದು ವಿದ್ಯಾರ್ಥಿ ಸಂಘಟನೆ ಹೇಳಿದೆ.
ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಸಾಮಾಜಿಕ ಸಾಮರಸ್ಯ, ವೈಜ್ಞಾನಿಕ ಮನೋಭಾವ ಮತ್ತು ಸಹಬಾಳ್ವೆಯ ವಿದ್ಯಾ-ಕೇಂದ್ರಗಳನ್ನಾಗಿ ರೂಪಿಸಲು ನಾವು-ಮನುಜರು ಎಂಬ ಹೆಸರಿನಲ್ಲಿ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ವಾರಕ್ಕೆ ಎರಡು ಗಂಟೆಗಳ ವಿಚಾರ-ವಿಮರ್ಶೆ ಮತ್ತು ಸಂವಾದ ಚಟುವಟಿಕೆಗಳನ್ನು ಒಳಗೊಂಡ ತರಗತಿಗಳನ್ನು ನಡೆಸುವ ನಿರ್ಧಾರವನ್ನು ಎಸ್ಎಫ್ಐ ಸ್ವಾಗತಿಸಿದೆ.
ಇದನ್ನೂ ಓದಿ:ಇಡಿ ಸಮನ್ಸ್ ಪ್ರಕರಣ | ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾದ ಅರವಿಂದ್ ಕೇಜ್ರಿವಾಲ್
ಸರ್ಕಾರಿ ವಿಶ್ವವಿದ್ಯಾಲಯಗಳ ಸಮಗ್ರ ಅಭಿವೃದ್ಧಿಗಾಗಿ ಅನುದಾನ ಬಿಡುಗಡೆ ಮಾಡಬೇಕಿತ್ತು ಎಂದಿರುವ ಎಸ್‌ಎಫ್‌ಐ, “ವಿಶೇಷವಾಗಿ ನೂತನ 7 ವಿವಿಗಳಿಗೆ ವಿಶೇಷ ಅನುದಾನ ಘೋಷಿಸಿ ಮೇಲೆತ್ತುವ ಕೆಲಸ ಮಾಡಬೇಕಿತ್ತು. ರೈತ ವಿದ್ಯಾನಿಧಿ, ವಿದ್ಯಾಸಿರಿ ವಿತರಣೆ ಪುನರ್ ಘೋಷಣೆ ಮಾಡಬೇಕಿತ್ತು. ಕಡಿತ ಮಾಡಿದ ಕಾರ್ಮಿಕ ಮಕ್ಕಳ ವಿದ್ಯಾರ್ಥಿ ವೇತನ ಸೇರಿದಂತೆ ಎಲ್ಲಾ ವಿಭಾಗದ ಎಲ್ಲಾ ರೀತಿಯ ಬಾಕಿ ಇರುವ ವಿದ್ಯಾರ್ಥಿ ವೇತ ಬಿಡುಗಡೆ ಹಾಗೂ ಹೆಚ್ಚಿಸುವ ಅವಶ್ಯಕತೆ ಇತ್ತು. ಬಹುತೇಕ ಎಲ್ ಕೆಜಿ ಯಿಂದು ಪಿಜಿ ವರೆಗೂ ಶೌಚಾಲಯ, ಕೊಠಡಿ, ಉಪಕರಣಗಳು, ಮೂಲಭೂತ ಸೌಕರ್ಯಗಳಿಗಾಗಿ ಸಾರ್ವಜನಿಕ ಸಹಭಾಗಿತ್ವ ಹೆಸರಿನಲ್ಲಿ ಸಿ ಎಸ್ ಆರ್ ನಿಧಿ ಮೇಲೆ ಸರ್ಕಾರ ಅವಲಂಬನೆ ಆಗಿರುವುದು ಸರಿಯಲ್ಲ” ಎಂದು ಹೇಳಿದೆ.
“ಖಾಸಗಿ ಜೊತೆಗಿನ ಸಹಭಾಗಿತ್ವ ವ್ಯವಸ್ಥೆ ಸರ್ಕಾರಿ ಶಿಕ್ಷಣವನ್ನು ಸಂಪೂರ್ಣವಾಗಿ ಖಾಸಗಿ ಕಾರ್ಪೋರೆಟ್ ಶಿಕ್ಷಣಕ್ಕೆ ಮುನ್ನುಡಿ ಬರೆಯುತ್ತದೆ” ಎಂದು ಎಸ್ಎಫ್ಐ ಆತಂಕ ವ್ಯಕ್ತಪಡಿಸಿದೆ.
“ಜನಪ್ರಿಯ ಯೋಜನೆಗಳಲ್ಲಿ ಒಂದಾದ 8ನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಮರುಜಾರಿ ಮಾಡಬೇಕಿತ್ತು. ಶುಲ್ಕ ಪುನರ್ ಪಾವತಿ, ಅಗತ್ಯ ತರಗತಿ ಕೊಠಡಿಗಳ ನಿರ್ಮಾಣ, ಶೌಚಾಲಯ, ಪ್ರಯೋಗಾಲಯ,ಉಚಿತ ಲ್ಯಾಪ್ಟಾಪ್, ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ವಿಶೇಷವಾಗಿ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಡಿ ದರ್ಜೆಯ ಸಿಬ್ಬಂದಿ ನೇಮಕ, ಸೇರಿದಂತೆ ಮುಂತಾದ ಶೈಕ್ಷಣಿಕ ಬೇಡಿಕೆಗಳನ್ನು ಈಡೇರಿಸಲು ಹಾಗೂ ಶಿಕ್ಷಣದ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಬಜೆಟ್ ನಲ್ಲಿ 30% ಮೀಸಲಿಡಬೇಕಿತ್ತು” ಎಂಧು ಎಸ್‌ಎಫ್‌ಐ ಹೇಳಿದೆ.
“ಖಾಲಿ ಇರುವ ಸರಕಾರಿ ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಪಿಯು ಕಾಲೇಜುಗಳಲ್ಲಿ ಶಿಕ್ಷಕರು, ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ಆರಂಭಿಸುವುದಾಗಿ ಬಜೆಟ್‌ನಲ್ಲಿ ಹೇಳಿರುವುದು ಸ್ವಾಗತಾರ್ಹ. ಇದು ಕೂಡಲೇ ಕಾರ್ಯರೂಪಕ್ಕೆ ಬರಬೇಕಿದೆ. ಘೋಷಣೆಗಳು ಭಾಷಣವಾಗದೆ ಜಾರಿಗೊಳಿಸಲು ಮುಂದಾಗಬೇಕು” ಎಂದು ಎಸ್ಎಫ್ಐ ರಾಜ್ಯ ಸಮಿತಿ ಸರ್ಕಾರವನ್ನು ಒತ್ತಾಯಿಸಿದೆ.
ವಿಡಿಯೊ ನೋಡಿ:ಮೋದಿ ನೇತೃತ್ವ ಸರ್ಕಾರದ ದೊಡ್ಡ ಭ್ರಷ್ಟಾಚಾರ : ಚುನಾವಣಾ ಬಾಂಡ್ ಹಗರಣ Janashakthi Media