ಮತ್ತೆ ಗುಲಾಮಗಿರಿ ಮಾನಸಿಕತೆಗೆ ಹದಗೊಳಿಸುವ ಶಿಕ್ಷಣ ನೀತಿ

ಪ್ರೊ. ಪ್ರಭಾತ್ ಪಟ್ನಾಯಕ್
ಅನು : ಕೆ.ಎಂ. ನಾಗರಾಜ್
ನವಉದಾರವಾದಿ ಯುಗವು ಜಾಗತೀಕರಣಗೊಂಡ ಹಣಕಾಸು ಬಂಡವಾಳದ ನಾಯಕತ್ವವನ್ನು ಅವಶ್ಯಗೊಳಿಸಿರುವುದರಿಂದ ಮತ್ತು  ಬಂಡವಾಳಕ್ಕೆ ಜಾಗತಿಕ ಮಟ್ಟದ ಅಂದರೆ ಏಕರೂಪದ ತಂತ್ರಜ್ಞರ ಅಗತ್ಯವಿರುವುದರಿಂದ,ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಂತಹ ತಂತ್ರಜ್ಞರನ್ನು ರೂಪಿಸುವ ಶಿಕ್ಷಣ ವ್ಯವಸ್ಥೆಯನ್ನು ಹೊಂದುವಂತೆ ಒತ್ತು ನೀಡಲಾಗುತ್ತದೆ.ಅದು ಮುಂದುವರೆದ ಬಂಡವಾಳಶಾಹೀ ದೇಶಗಳಿಂದ ಹೊಮ್ಮಿದ ವ್ಯವಸ್ಥೆಯೇ ಆಗಿರಬೇಕಾಗುತ್ತದೆ ಎಂದರೆ ಶಿಕ್ಷಣ ವ್ಯವಸ್ಥೆಯು ಸ್ವಾತಂತ್ರ್ಯದ ಆರಂಭದ ವರ್ಷಗಳಲ್ಲಿ ಇದ್ದಂತೆ ವಸಾಹತುಶಾಹಿ ಮನಸ್ಥಿತಿಯಿಂದ ವಿದ್ಯಾರ್ಥಿಗಳನ್ನು ಪರಿವರ್ತಿಸುವುದರ ಬದಲು ಅವರ ಮನಸ್ಸುಗಳನ್ನು ಮತ್ತೆ ವಸಾಹತೀಕರಣಗೊಳಿಸ ಬಯಸುತ್ತದೆ.ಯುಪಿಎ ಸರಕಾರ  ಕಾರ್ಯವನ್ನು ಆರಂಭಿಸಿತು,ಇದನ್ನು ಎನ್ಡಿಎ ಸರಕಾರ ಬಹುಮಟ್ಟಿಗೆ ಮುಂದಕ್ಕೆ ಒಯ್ದಿದೆ.ಹಿಂದುತ್ವಕ್ಕೂ ಇಂತಹುದೇ ಮಾನಸಿಕತೆ ಬೇಕಾಗಿದೆ.ಆದರೆ ಇಂತಹ ಶಿಕ್ಷಣ ನೀತಿಯು ಕ್ಷಣಿಕವಷ್ಟೇ ಆಗಿರುತ್ತದೆ.. .. ಗುಲಾಮಗಿರಿ

ಸಾಮ್ರಾಜ್ಯಶಾಹಿಯು ಮೂರನೆಯ ಜಗತ್ತಿನ ದೇಶಗಳ ಮೇಲೆ ಯಜಮಾನಿಕೆಯನ್ನು ಕೇವಲ ಶಸ್ತ್ರಾಸ್ತ್ರಗಳು ಮತ್ತು ಆರ್ಥಿಕ ಬಲದ ಮೂಲಕವಷ್ಟೇ ಅಲ್ಲ, ಆ ದೇಶಗಳ ಜನರನ್ನು ತಾನು ಬಯಸಿದ ರೀತಿಯಲ್ಲೇ ಜಗತ್ತನ್ನು ಪರಿಗ್ರಹಿಸುವಂತೆ ಮಾಡುವ ರೀತಿಯಲ್ಲಿ ತನ್ನ ವಿಚಾರಗಳನ್ನು ಹೇರುವ ಮೂಲಕವೂ ಹೊಂದಬಯಸುತ್ತದೆ. ಆದ್ದರಿಂದ, ಮೂರನೆಯ ಜಗತ್ತಿನ ದೇಶಗಳ ಸಂದರ್ಭದಲ್ಲಿ, ವಸಾಹತುಶಾಹಿಯು ವಿರೂಪಗೊಳಿಸಿದ ಮನಸ್ಥಿತಿಯಿಂದ ಹೊರ ಬಂದು ಸತ್ಯಾನ್ವೇಷಣೆಯಲ್ಲಿ ತೊಡಗಿದಾಗ ಮಾತ್ರ ಅದು ಸ್ವಾತಂತ್ರ‍್ಯವಾಗುತ್ತದೆ. ವಸಾಹತುಶಾಹಿ-ವಿರೋಧಿ ಹೋರಾಟವು ಈ ಅರಿವನ್ನು ಹೊಂದಿತ್ತು ಮತ್ತು ಈ ಅರಿವಿನೊಂದಿಗೇ ಹೋರಾಟವು ವಾಸ್ತವವಾಗಿ ಆರಂಭವಾಯಿತು. ವಸಾಹತುಶಾಹಿಯ ಔಪಚಾರಿಕ ರಾಜಕೀಯ ನಿರ್ಗಮನದೊಂದಿಗೆ ಸಾಮ್ರಾಜ್ಯಶಾಹಿ ಯೋಜನೆಯು ಸಮಾಪ್ತಿಯಾಗುವುದಿಲ್ಲ. ಆದ್ದರಿಂದ, ಹೊಸದಾಗಿ ಸ್ವಾತಂತ್ರ‍್ಯ ಗಳಿಸಿದ ಈ ದೇಶಗಳ ಶಿಕ್ಷಣ ವ್ಯವಸ್ಥೆಯು ಸಾಮ್ರಾಜ್ಯಶಾಹಿಯ ಸುಳ್ಳುಗಳನ್ನು ಬಯಲು ಮಾಡುವ ಗುರಿಯನ್ನು ನಿರಂತರವಾಗಿ ಹೊಂದಿರಬೇಕಾಗುತ್ತದೆ. ಗುಲಾಮಗಿರಿ

ಈ ಉದ್ದೇಶ ಸಾಧನೆಗಾಗಿ ಭಾರತದ ಶಿಕ್ಷಣ ಸಂಸ್ಥೆಗಳ ವಿಷಯಾಧಾರಿತ ಕೋರ್ಸ್‍ ಗಳು ಮತ್ತು ಪಠ್ಯಕ್ರಮಗಳು ಮೆಟ್ರೊಪಾಲಿಟನ್ (ಮುಂದುವರೆದ ಬಂಡವಾಳಶಾಹಿ) ದೇಶಗಳ ವಿದ್ಯಾಸಂಸ್ಥೆಗಳಲ್ಲಿರುವುದಕ್ಕಿಂತ ಭಿನ್ನವಾಗಿರಬೇಕಾಗುತ್ತದೆ. ದೇಶದ ವಸಾಹತುಶಾಹಿ ಭೂತಕಾಲವನ್ನು ಪರಿಗಣಿಸದೆ ಅದರ ವರ್ತಮಾನವನ್ನು ಅರ್ಥಮಾಡಿಕೊಳ್ಳುವುದು ಅಸಾಧ್ಯ ಎಂಬುದು ಮಾನವಿಕ ಮತ್ತು ಸಾಮಾಜಿಕ ವಿಜ್ಞಾನಗಳ ವಿಷಯದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಭೂತಕಾಲ ಮತ್ತು ವರ್ತಮಾನದ ನಡುವಿನ ಈ ಸಂಪರ್ಕವನ್ನು ಮೆಟ್ರೋಪಾಲಿಟನ್ ವಿಶ್ವವಿದ್ಯಾನಿಲಯಗಳು ಜಾಗರೂಕತೆಯಿಂದ ತಪ್ಪಿಸುತ್ತವೆ. ದೇಶದ ಪ್ರಸ್ತುತ ಪರಿಸ್ಥಿತಿಗೆ ಸೋಮಾರಿತನ, ಉದ್ಯಮಶೀಲತೆಯ ಕೊರತೆ, ಮೂಢನಂಬಿಕೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಜನಸಂಖ್ಯಾ ಬಾಹುಳ್ಯದಂಥಹ ಕೆಲವು ಬಾಹ್ಯ ಅಂಶಗಳು ಕಾರಣವೆಂದು ಅವು ಹೇಳುತ್ತವೆ. ಆದರೆ ನಿಸರ್ಗ ವಿಜ್ಞಾನಗಳ ವಿಷಯದಲ್ಲಿಯೂ ಸಹ, ಮೂರನೆಯ ಜಗತ್ತಿನ ದೇಶಗಳ ವಿಶ್ವವಿದ್ಯಾನಿಲಯಗಳ ವಿಷಯಾಧಾರಿತ ಕೋರ್ಸ್‍ ಗಳು ಮತ್ತು ಪಠ್ಯಕ್ರಮಗಳು ಮೆಟ್ರೋಪಾಲಿಟನ್ ದೇಶಗಳ ವಿಶ್ವವಿದ್ಯಾನಿಲಯಗಳ ತದ್ರೂಪವೇ ಆಗಿರಬೇಕಿಲ್ಲ. ಐನ್‌ಸ್ಟೈನ್ ಸಿದ್ಧಾಂತವಾಗಲಿ ಅಥವಾ ಕ್ವಾಂಟಮ್ ಭೌತಶಾಸ್ತ್ರವೇ ಆಗಲಿ ಸಾಮ್ರಾಜ್ಯಶಾಹಿ ಸಿದ್ಧಾಂತವನ್ನು ಹೊಂದಿಲ್ಲ, ನಿಜ. ಆದರೆ, ಹಿತಾಸಕ್ತಿಯ ದೃಷ್ಟಿಯಿಂದ ಮೂರನೇ ಜಗತ್ತಿನ ದೇಶಗಳ ವಿಜ್ಞಾನ ವಿಷಯ-ವ್ಯಾಪ್ತಿಯು, ಮೆಟ್ರೋಪಾಲಿಟನ್ ದೇಶಗಳಂತೆಯೇ ಇರಬೇಕೆಂದೇನೂ ಇಲ್ಲ. ವಾಸ್ತವವಾಗಿ, ಇದು ಇಪ್ಪತ್ತನೇ ಶತಮಾನದ ಮಹಾನ್ ವ್ಯಕ್ತಿಗಳಲ್ಲಿ ಒಬ್ಬರಾದ ಬ್ರಿಟಿಷ್ ವಿಜ್ಞಾನಿ ಮತ್ತು ಮಾರ್ಕ್ಸ್ ವಾದಿ ಬುದ್ಧಿಜೀವಿ ಜೆ.ಡಿ. ಬರ್ನಾಲ್ ಅವರು ಹೊಂದಿದ್ದ ದೃಷ್ಟಿಕೋನವೂ ಆಗಿತ್ತು. ಗುಲಾಮಗಿರಿ

ಮೂರನೆಯ ಜಗತ್ತಿನ ದೇಶಗಳ ವಿಶ್ವವಿದ್ಯಾನಿಲಯಗಳ ಕೋರ್ಸ್‍ಗಳು ಮತ್ತು ಪಠ್ಯಕ್ರಮಗಳು ಮೆಟ್ರೋಪಾಲಿಟನ್ ವಿಶ್ವವಿದ್ಯಾನಿಲಯಗಳಂತೆಯೇ ಇರಬೇಕು ಎಂದು ಭಾವಿಸುವ ಕ್ರಮವೇ ಸಾಮ್ರಾಜ್ಯಶಾಹಿಯು ಹೊಂದಿರುವ ಪ್ರಭಾವದ ಲಕ್ಷಣ. ಈ ಅರಿವನ್ನು ನಿಯಂತ್ರಣಗಳ(ಡಿರಿಜಿಸ್ಟ್) ಆಳ್ವಿಕೆಯ ಅವಧಿಯ ಭಾರತದ ಶಿಕ್ಷಣ ನೀತಿಯು ಹೊಂದಿತ್ತು. ಈ ಶಿಕ್ಷಣ ವ್ಯವಸ್ಥೆಯು ಗುರಿಸಾಧಿಸುವಲ್ಲಿ ವಿಫಲವಾಯಿತಾದರೂ, ಅಂದಿನ ಶಿಕ್ಷಣ ನೀತಿಯು ಹೊಂದಿದ್ದ ಕಣ್ಣೋಟದ ಬಗ್ಗೆ ದೋಷಾರೋಪಣೆ ಮಾಡಲಾಗದು. ಗುಲಾಮಗಿರಿ

ಮತ್ತೆ ಗುಲಾಮಗಿರಿ ಮಾನಸಿಕತೆಗೆ ಹದಗೊಳಿಸುವ ಶಿಕ್ಷಣ ನೀತಿ
ಮತ್ತೆ ಗುಲಾಮಗಿರಿ ಮಾನಸಿಕತೆಗೆ ಹದಗೊಳಿಸುವ ಶಿಕ್ಷಣ ನೀತಿ

ನವಉದಾರವಾದದಲ್ಲಿ ಮನಸ್ಸುಗಳ ಮರುವಸಾಹತೀಕರಣದ ಅಗತ್ಯತೆ..

ನವ-ಉದಾರವಾದದ ಆಗಮನದೊಂದಿಗೆ ಅನೇಕ ಬದಲಾವಣೆಗಳಾದವು. ಭಾರತದ ಹಿರಿ ಬೂರ್ಜ್ವಾಗಳು ಜಾಗತೀಕರಣಗೊಂಡ ಹಣಕಾಸು ಬಂಡವಾಳದೊಂದಿಗೆ ಕೈಜೋಡಿಸಿದರು. ವಿದೇಶಿ ಹಣಕಾಸು ಬಂಡವಾಳವನ್ನು ಮತ್ತು ವಿದೇಶಿ ನೇರ ಹೂಡಿಕೆಯನ್ನು ಸ್ವಾಗತಿಸಲಾಯಿತು. ಭಾರತದ ಮೇಲ್-ಮಧ್ಯಮ ವರ್ಗದ ಯುವಕರು ಬಹುರಾಷ್ಟ್ರೀಯ ಸಂಸ್ಥೆಗಳ ಉದ್ಯೋಗಗಳನ್ನು ಬೆನ್ನಟ್ಟಿದರು. ದೇಶದ ಅಭಿವೃದ್ಧಿಯನ್ನು ಸರಕು-ಸೇವೆಗಳ ರಫ್ತುಗಳ ಮೇಲೆ ಅವಲಂಬಿಸುವಂತೆ ಮಾಡಲಾಯಿತು. ಈಸ್ಟ್ ಇಂಡಿಯಾ ಕಂಪನಿಯನ್ನು ಮತ್ತೊಮ್ಮೆ ಭಾರತಕ್ಕೆ ಆಹ್ವಾನಿಸುವ ಮಟ್ಟಿಗೆ ಸರ್ಕಾರದ ಉನ್ನತ ಅಧಿಕಾರಿಗಳು ಮಾತನಾಡುವ ಬದಲಾವಣೆಗಳು ಕಂಡುಬಂದವು.

ನವ-ಉದಾರವಾದಿ ಯುಗವು ಜಾಗತೀಕರಣಗೊಂಡ ಹಣಕಾಸು ಬಂಡವಾಳದ ನಾಯಕತ್ವವನ್ನು ಅವಶ್ಯಗೊಳಿಸಿರುವುದರಿಂದ ಮತ್ತು ಈ ಬಂಡವಾಳಕ್ಕೆ ಜಾಗತಿಕ ಮಟ್ಟದ (ಅಥವಾ ಕನಿಷ್ಠ ಏಕರೂಪದ) ತಂತ್ರಜ್ಞರ ಅಗತ್ಯವಿರುವುದರಿಂದ, ಅಂತಹ ತಂತ್ರಜ್ಞರನ್ನು ತರಬೇತು ಮಾಡಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಏಕರೂಪದ ಶಿಕ್ಷಣ ವ್ಯವಸ್ಥೆಯನ್ನು ಹೊಂದುವಂತೆ ಒತ್ತು ನೀಡಲಾಗುತ್ತದೆ. ಅಂಥಹ ಒಂದು ವ್ಯವಸ್ಥೆಯು ಮೆಟ್ರೋಪಾಲಿಟನ್ ದೇಶಗಳಿಂದ ಹೊರಹೊಮ್ಮಿದ ವ್ಯವಸ್ಥೆಯೇ ಆಗಿರಬೇಕಾಗುತ್ತದೆ. ಗುಲಾಮಗಿರಿ

ಇದನ್ನು ಓದಿ :ಕೆಆರ್‌ಎಸ್ ಅಣೆಕಟ್ಟಿನ ಸುತ್ತ ಗಣಿಗಾರಿಕೆ ನಿಷೇಧ ಹೇರಿದ ಹೈಕೋರ್ಟ್

ಇದು ಏನನ್ನು ಅರ್ಥೈಸುತ್ತದೆ ಎಂದರೆ, ವಸಾಹತುಶಾಹಿ ಮನಸ್ಥಿತಿಯಿಂದ ವಿದ್ಯಾರ್ಥಿಗಳನ್ನು ಪರಿವರ್ತಿಸುವುದರ ಬದಲು ಶಿಕ್ಷಣ ವ್ಯವಸ್ಥೆಯು ಅವರ ಮನಸ್ಸುಗಳನ್ನು ಮರು-ವಸಾಹತೀಕರಣಗೊಳಿಸ ಬಯಸುತ್ತದೆ ಎಂಬುದನ್ನು. ಈ ನಿಟ್ಟಿನಲ್ಲಿ,ಯುಪಿಎ ಸರ್ಕಾರವು ವಿದೇಶಗಳ ಹಲವಾರು ಪ್ರಸಿದ್ಧ ವಿಶ್ವವಿದ್ಯಾನಿಲಯಗಳನ್ನು ಭಾರತದಲ್ಲಿ ತಮ್ಮ ಶಾಖೆಗಳನ್ನು ತೆರೆಯುವಂತೆ ಆಹ್ವಾನಿಸಿತ್ತು. ಮತ್ತು, ಭಾರತದ ಕೆಲವು ವಿಶ್ವವಿದ್ಯಾನಿಲಯಗಳನ್ನು “ದತ್ತು” ಪಡೆದು ತಮ್ಮದೇ ಆದ ರೀತಿಯಲ್ಲಿ ಅವುಗಳನ್ನು ಅಭಿವೃದ್ಧಿಪಡಿಸುವಂತೆ ಆಹ್ವಾನಿಸಿತ್ತು. ಈ ಯೋಜನೆಯಡಿಯಲ್ಲಿ ಆಕ್ಸ್ ಫರ್ಡ್, ಹಾರ್ವರ್ಡ್ ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾಲಯಗಳು, ಭಾರತದಲ್ಲಿ ಸಿದ್ಧಪಡಿಸಿದ ಪಠ್ಯಕ್ರಮವನ್ನು ಮತ್ತು ಪಠ್ಯ ವಿಷಯಗಳನ್ನು ಅನುಸರಿಸುವುದರ ಬದಲು ತಮ್ಮ ಮೂಲ ಪೀಠಗಳಲ್ಲಿ ಅನುಸರಿಸುವ ಪಠ್ಯಕ್ರಮ ಮತ್ತು ಪಠ್ಯ ವಿಷಯಗಳನ್ನೇ ಭಾರತದಲ್ಲೂ ಅನುಸರಿಸುವಂತೆ ಸೂಚಿಸಿ ಅವರನ್ನು ಆಹ್ವಾನಿಸಲಾಗಿತ್ತು ಮತ್ತು ಭಾರತದ ಮತ್ತು ಮೆಟ್ರೋಪಾಲಿಟನ್ ವಿಶ್ವವಿದ್ಯಾನಿಲಯಗಳ ನಡುವೆ ಪಠ್ಯ ವಿಷಯಗಳು ಮತ್ತು ಪಠ್ಯಕ್ರಮಗಳ ಏಕರೂಪತೆಯ ಪ್ರಕ್ರಿಯೆಯನ್ನು ಪ್ರಾರಂಭಿಸುವುದು ಉದ್ದೇಶವಾಗಿತ್ತು ಎಂಬುದು ಸ್ಪಷ್ಟವಾಗುತ್ತದೆ. ಅಂದರೆ, ಭಾರತದ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳನ್ನು ವಸಾಹತುಶಾಹಿ ಮನಸ್ಥಿತಿಯಿಂದ ಪರಿವರ್ತಿಸಲು ಈ ಹಿಂದೆ ಮಾಡಿದ ಪ್ರಯತ್ನವನ್ನು ತ್ಯಜಿಸುವುದು. ಪ್ರಾಸಂಗಿಕವಾಗಿ ಒಂದು ವಾಸ್ತವಾಂಶವನ್ನು ಹೇಳುವುದಾದರೆ, ಭಾರತದ ವಿದ್ಯಾರ್ಥಿಗಳು ಹಾರ್ವರ್ಡ್ ಶಿಕ್ಷಣವನ್ನು ಪಡೆಯಲು ವಿದೇಶಕ್ಕೆ ಹೋಗಬೇಕಾಗಿಲ್ಲ, ಅದನ್ನು ಭಾರತದಲ್ಲಿ ಒದಗಿಸುವುದು ತಮ್ಮ ಉದ್ದೇಶವಾಗಿದೆ ಎಂಬುದಾಗಿ ಭಾರತದ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಿಯೊಬ್ಬರು ಸಂಸತ್ತಿನಲ್ಲಿ ಬಹಿರಂಗವಾಗಿ ಹೇಳಿದ್ದರು. ಗುಲಾಮಗಿರಿ

ಹಿಂದುತ್ವ ತೆಳು ಹೊದಿಕೆ

ಯುಪಿಎ ಸರಕಾರ ಆರಂಭಿಸಿದ್ದ ಈ ಕಾರ್ಯವನ್ನು ಎನ್‌ಡಿಎ ಸರಕಾರ ಬಹುಮಟ್ಟಿಗೆ ಮುಂದಕ್ಕೆ ಒಯ್ದಿದೆ. ಅದು ಜಾರಿಗೆ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿಯು ಭಾರತ ಮತ್ತು ಮೆಟ್ರೊಪಾಲಿಟನ್ ದೇಶಗಳ ನಡುವಿನ ಏಕರೂಪದ ಶಿಕ್ಷಣ ವ್ಯವಸ್ಥೆಯ ಕಲ್ಪನೆಗೆ ಅನುಮತಿಯನ್ನು ಅಧಿಕೃತವಾಗಿ ನೀಡಿದೆ. ಅಂದರೆ, ಭಾರತ ಮತ್ತು ಮೆಟ್ರೋಪಾಲಿಟನ್ ವಿಶ್ವವಿದ್ಯಾಲಯಗಳ ನಡುವೆ ಒಂದು ಸಮಾನ ಪಠ್ಯಕ್ರಮ, ಕೋರ್ಸ್-ವಿಷಯಗಳು ಮತ್ತು ಪಠ್ಯಕ್ರಮಗಳನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗುತ್ತದೆ. ಗುಲಾಮಗಿರಿ

ಈ ಏಕರೂಪತೆಯನ್ನು ಸಾಧಿಸುವ ನಿಟ್ಟಿನಲ್ಲಿ ಅದು ಎರಡು ನಿರ್ಣಾಯಕ ಕ್ರಮಗಳನ್ನು ತೆಗೆದುಕೊಂಡಿದೆ: ಮೊದಲನೆಯದು, ಸಾಮ್ರಾಜ್ಯವಾದಿ ಸಂಕಥನದ ಎದುರು ಭಾರತದಲ್ಲಿ ಪ್ರತಿಸಂಕಥನವನ್ನು ಮಂಡಿಸುತ್ತಿದ್ದ ಮತ್ತು ಈ ಕಾರಣಕ್ಕಾಗಿಯೇ ವಿಶ್ವದ ಗಮನ ಸೆಳೆದ ವಿಶ್ವವಿದ್ಯಾಲಯಗಳನ್ನು ನಾಶಪಡಿಸುವುದು. ಸ್ಪಷ್ಟ ಉದಾಹರಣೆಗಳೆಂದರೆ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯ, ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯ, ಜಾದವ್‌ಪುರ ವಿಶ್ವವಿದ್ಯಾನಿಲಯ ಮತ್ತು ಇತರೆ.

ಎರಡನೆಯದು, ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ ಒತ್ತಡದ ಮೇರೆಗೆ ಭಾರತದ ವಿಶ್ವವಿದ್ಯಾಲಯಗಳು ಒಂದೊಂದೂ ಪ್ರತ್ಯೇಕವಾಗಿ ವಿದೇಶಿ ವಿಶ್ವವಿದ್ಯಾಲಯಗಳೊಂದಿಗೆ ವಿವಿಧ ಜ್ಞಾನ-ಶಿಸ್ತುಗಳ ಕೋರ್ಸ್‍ ಗಳ ಬಗ್ಗೆ ಮತ್ತು ವಿದೇಶಿ ವಿಶ್ವವಿದ್ಯಾಲಯಗಳ ಕೋರ್ಸ್- ವಿಷಯಗಳು ಹಾಗೂ ಪಠ್ಯಕ್ರಮಗಳ ತದ್ರೂಪುಗಳನ್ನು ಭಾರತದ ವಿಶ್ವವಿದ್ಯಾಲಯಗಳಲ್ಲಿ ಅಳವಡಿಕೆ ಮಾಡಿಕೊಳ್ಳುವ ಸಂಬಂಧವಾಗಿ ಮಾತುಕತೆಗಳನ್ನು ನಡೆಸುವುದು. ಇಲ್ಲಿರುವ ಏಕೈಕ ಅಡ್ಡಿ ಎಂದರೆ, ವಿದೇಶಿ ವಿಶ್ವವಿದ್ಯಾನಿಲಯಗಳು ಒಪ್ಪದಿರಬಹುದಾದ ವೈದಿಕ ಗಣಿತದಂತಹ ಕೆಲವು ವಿಷಯಗಳನ್ನು ಭಾರತದ ವಿಶ್ವವಿದ್ಯಾನಿಲಯಗಳ ಪಠ್ಯ ವಿಷಯಗಳು ಒಳಗೊಂಡಿರಬೇಕು ಎನ್ನುವ ಯುಜಿಸಿಯ ಒತ್ತಡ. ಗುಲಾಮಗಿರಿ

ಈ ವಿಷಯಗಳ ಬಗ್ಗೆ ಕಾಲಕ್ರಮದಲ್ಲಿ ಎಂಥದ್ದೊ ಒಂದು ಒಪ್ಪಂದಕ್ಕೆ ಬರಲಾಗುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ಈ ಒಪ್ಪಂದ ಏರ್ಪಟ್ಟಾಗ ಅದರಲ್ಲಿ ಭಾರತದ ವಿಶ್ವವಿದ್ಯಾನಿಲಯಗಳು, ನವ-ಉದಾರವಾದದ ಬೇಡಿಕೆಗಳು ಮತ್ತು ಹಿಂದುತ್ವದ ಬೇಡಿಕೆಗಳನ್ನು ಪ್ರತಿನಿಧಿಸುವ ಒಂದು ಕಲಬೆರಕೆಯ ಪಠ್ಯಕ್ರಮವನ್ನು ಮತ್ತು ಪಠ್ಯ ವಿಷಯಗಳನ್ನು ಹೊಂದಿರುತ್ತವೆ.  ಇದು ಮನಸುಗಳನ್ನು “ಪ್ರಾಚೀನ ಕಾಲದಲ್ಲಿ ನಮ್ಮ ದೇಶ ಎಷ್ಟು ಮಹೋನ್ನತವಾಗಿತ್ತು” ಎಂಬ ತೆಳುಹೊದಿಕೆಯೊಂದಿಗೆ ವಸಾಹತುಶಾಹಿ ಮಾನಸಿಕತೆಗೆ ಪರಿವರ್ತಿಸುವ ಕ್ರಮವಾಗುತ್ತದೆ. ಸಾಮ್ರಾಜ್ಯಶಾಹಿಗೇನೂ ಇದು ತಕರಾರಿನ ವಿಷಯವಲ್ಲ. ಬಂಡವಾಳಶಾಹಿ ಬೆಳವಣಿಗೆಯೊಂದಿಗೆ ಹೊರಹೊಮ್ಮಿದ ಆಧುನಿಕ ವಿದ್ಯಮಾನವಾಗಿರುವ ಸಾಮ್ರಾಜ್ಯಶಾಹಿಯನ್ನು ಶೋಷಣೆಯ ವ್ಯವಸ್ಥೆ ಎಂದು ಬಣ್ಣಿಸದೇ, ಭಾರತದಂತಹ ದೇಶಗಳ ಅಸಂಸ್ಕೃತರನ್ನು ತಿದ್ದಿ ತೀಡಿ ಅವರನ್ನು ಮೇಲೆತ್ತುವ ಉದ್ಧಾರಕನೆಂದು ಬಣ್ಣಿಸುತ್ತಲೇ ಇರುವವರೆಗೂ ಮತ್ತು ಇಂಥಹ ದೇಶಗಳ ಪ್ರಸ್ತುತ ಅಭಿವೃದ್ಧಿಯಾಗದ ಪರಿಸ್ಥಿತಿಗೂ ಮತ್ತು ಸಾಮ್ರಾಜ್ಯಶಾಹಿ ವಿದ್ಯಮಾನಕ್ಕೂ ಸಂಬಂಧ ಕಲ್ಪಿಸದೆ ಇರುವವರೆಗೂ, ಕಲಬೆರಕೆಯ ಪಠ್ಯಕ್ರಮ ಮತ್ತು ಪಠ್ಯ ವಿಷಯಗಳ ಬಗ್ಗೆ ಸಾಮ್ರಾಜ್ಯಶಾಹಿಗೆ ತಕರಾರಿಲ್ಲ. ವಿದೇಶಿ ಮತ್ತು ಭಾರತದ ವಿಶ್ವವಿದ್ಯಾಲಯಗಳ ಸಮಾನ ಪಠ್ಯ ವಿಷಯ ಮತ್ತು ಪಠ್ಯಕ್ರಮ ಆ ವಿದೇಶಗಳ ವಿಶ್ವವಿದ್ಯಾಲಯಗಳಂತೆಯೇ ಇದ್ದರೆ. ಇಂತಹ ಸಮಸ್ಯೆಯೂ ಇರುವುದಿಲ್ಲ. ಹಾಗಾಗಿ, ಪ್ರಾಚೀನ ಕಾಲದಲ್ಲಿ ಭಾರತ ಮಹೋನ್ನತವಾಗಿತ್ತು ಎಂಬುದು ಬಿಳಿಯರೇ ಶ್ರೇಷ್ಠರು ಎನ್ನುವ ಉಗ್ರ ಬಲ ಪಂಥದವರಿಗೆ ಹಿಡಿಸಲಿಕ್ಕಿಲ್ಲ. ಆದರೆ ಉದಾರ-ಸಾಮ್ರಾಜ್ಯವಾದಿ ದೃಷ್ಟಿಕೋನಕ್ಕೆ ಇದು ತಲೆ ಕೆಡಿಸಿಕೊಳ್ಳುವ ವಿಷಯವಲ್ಲ. ಗುಲಾಮಗಿರಿ

ಕಾರ್ಪೊರೇಟ್ಹಿಂದುತ್ವ ಮೈತ್ರಿಯ ಪ್ರತಿರೂಪ

ಮತ್ತೆ ವಸಾಹತುಶಾಹಿ ಮಾನಸಿಕತೆಗೆ ಪರಿವರ್ತಿಸುವ ಪರಿಣಾಮ ಹೊಂದಿರುವ ಒಂದು ಪರ್ಯಾಯ ಪ್ರವೃತ್ತಿಯೆಂದರೆ, ಸಮಾಜ ವಿಜ್ಞಾನ ಮತ್ತು ಮಾನವಿಕ ವಿಷಯ-ಪಾಠಗಳನ್ನು ಸಂಪೂರ್ಣವಾಗಿ ತೊಡೆದು ಹಾಕುವುದು ಅಥವಾ ಅವುಗಳ ಪಾಠ-ವಿಷಯಗಳನ್ನು ನಗಣ್ಯ ಮಟ್ಟಕ್ಕೆ ಇಳಿಸುವುದು ಮತ್ತು ಅವುಗಳ ಬದಲಿಗೆ ಸಮಾಜದ ಬಗ್ಗೆ ಪ್ರಶ್ನೆಗಳನ್ನು ಕೇಳದ ಎಂಬಿಎ ಮತ್ತು ಬಿ.ಕಾಂ. ನಂತಹ “ಉದ್ಯೋಗೋನ್ಮುಖ” ಕೋರ್ಸ್‍ ಗಳನ್ನಷ್ಟೇ ತರುವುದು. ಈ ಬದಲಾವಣೆಯ ವಿಷಯದಲ್ಲಿ ಹಿಂದುತ್ವ ಪರಿವಾರ ಮತ್ತು ಕಾರ್ಪೊರೇಟ್‌ಗಳು ಸಮಾನ ಪಟ್ಟಭದ್ರ ಹಿತಾಸಕ್ತಿಯನ್ನು ಹೊಂದಿವೆ. ಸಾಮಾಜಿಕ ಅಭಿವೃದ್ಧಿಯ ದಿಕ್ಪಥದ ಬಗ್ಗೆ ಪ್ರಶ್ನೆಗಳನ್ನು ಕೇಳದ ಮತ್ತು ಸಂಪೂರ್ಣವಾಗಿ ಸ್ವಾರ್ಥ ಸಾಧನೆಯನ್ನೇ ಗುರಿಯಾಗಿ ಹೊಂದಿರುವ ವಿದ್ಯಾರ್ಥಿಗಳನ್ನು ಹೊಂದಲು ಈ ಇಬ್ಬರೂ ಉತ್ಸುಕರಾಗಿದ್ದಾರೆ. ಈ ಪ್ರವೃತ್ತಿಯೂ ಈಗ ವೇಗ ಪಡೆಯುತ್ತಿದೆ. ಗುಲಾಮಗಿರಿ

ಮತ್ತೆ ವಸಾಹತುಶಾಹಿ ಮಾನಸಿಕತೆಗೆ ಪರಿವರ್ತಿಸುವ ಶಿಕ್ಷಣ ವ್ಯವಸ್ಥೆಯು ದೇಶದಲ್ಲಿ ರಾಜಕೀಯ ಪ್ರಾಬಲ್ಯವನ್ನು ಹೊಂದಿರುವ ಕಾರ್ಪೊರೇಟ್- ಹಿಂದುತ್ವ ಮೈತ್ರಿಯ ಪ್ರತಿರೂಪವೇ ಆಗಿದೆ. ಮಾನಸಿಕತೆಯ ಇಂಥಹ ಪರಿವರ್ತನೆಯನ್ನೇ ಕಾರ್ಪೊರೇಟ್‌ಗಳು ಬಯಸುವುದು. ವಸಾಹತುಶಾಹಿ -ವಿರೋಧಿ ಹೋರಾಟದೊಂದಿಗೆ ಎಂದೂ ಸಂಬಂಧ ಹೊಂದಿಲ್ಲದ, ರಾಷ್ಟ್ರ ನಿರ್ಮಾಣದ ಅರ್ಥವನ್ನು ಎಂದೂ ಸರಿಯಾಗಿ ಅರ್ಥಮಾಡಿಕೊಳ್ಳದ,ದೇಶ ದೇಶಗಳನ್ನು ಗುಲಾಮಗಿರಿಗೆ ತಳ್ಳಿ ಅವುಗಳ ಸಂಪತ್ತನ್ನು ಕೊಳ್ಳೆ ಹೊಡೆದ ಸಾಮ್ರಾಜ್ಯಶಾಹಿಯ ಪಾತ್ರವನ್ನು ಮತ್ತು ಅದರ ಮರ್ಮವನ್ನು ಅರ್ಥಮಾಡಿಕೊಳ್ಳದ ಹಿಂದುತ್ವವು ಬಯಸುವುದು ಗುಲಾಮಗಿರಿಯ ಮಾನಸಿಕತೆಯನ್ನೇ. ಪ್ರಾಚೀನ ಭಾರತದ ಶ್ರೇಷ್ಠತೆಯ ಬಗ್ಗೆ ಬಾಯುಪಚಾರದ ಮಾತುಗಳಲ್ಲೇ ಅದು ಸಂತೃಪ್ತ. ಸಾಮ್ರಾಜ್ಯಶಾಹಿ ಸಿದ್ಧಾಂತವನ್ನು ಒಂದಿಷ್ಟು ವೈದಿಕ ಒಗ್ಗರಣೆಯೊಂದಿಗೆ ಸರಬರಾಜು ಮಾಡುವ ಶಿಕ್ಷಣ ವ್ಯವಸ್ಥೆಯು ಅವರಿಗೆ ಸಾಕಷ್ಟು ತೃಪ್ತಿಕರವಾಗಿದೆ. ದೇಶವು ಈಗ ರೂಪಿಸುತ್ತಿರುವ ಶಿಕ್ಷಣ ವ್ಯವಸ್ಥೆ ಎಂದರೆ, ಇದೇ. ಗುಲಾಮಗಿರಿ

ಯುವಕರು ಪ್ರಶ್ನೆಗಳನ್ನು ಕೇಳಲು ಆರಂಭಿಸುವ ತನಕ

ಕಾರ್ಪೊರೇಟ್- ಹಿಂದುತ್ವ ಮೈತ್ರಿಯು ನವ-ಉದಾರವಾದದ ಬಿಕ್ಕಟ್ಟಿಗೆ ಒಂದು ಸ್ಪಂದನೆಯೇ ಸರಿ.ಬಿಕ್ಕಟ್ಟಿನ ಸಂದರ್ಭದಲ್ಲಿ ತನ್ನ ಪ್ರಾಬಲ್ಯವನ್ನು ಉಳಿಸಿಕೊಳ್ಳಲು ಹಿಂದುತ್ವದೊಂದಿಗೆ ಮೈತ್ರಿ ಮಾಡಿಕೊಳ್ಳುವ ಅಗತ್ಯವನ್ನು ಕಾರ್ಪೊರೇಟ್ ಬಂಡವಾಳವು ಕಂಡುಕೊಳ್ಳುತ್ತದೆ. ಅದೇ ರೀತಿಯಲ್ಲಿ, ರಾಷ್ಟ್ರೀಯ ಶಿಕ್ಷಣ ನೀತಿಯು ರಾಷ್ಟ್ರವನ್ನು ಮುಂದಕ್ಕೆ ಕೊಂಡೊಯ್ಯುವುದರ ಬದಲು, ಪ್ರಶ್ನೆಗಳನ್ನು ಕೇಳುವುದನ್ನು ಮತ್ತು ಸತ್ಯ ಶೋಧನೆಯನ್ನು ಅಡ್ಡಿಪಡಿಸುವ ಮೂಲಕ ಮತ್ತು ವಿಚಾರಗಳನ್ನು ನಾಶಪಡಿಸುವ ಮೂಲಕ ಬಿಕ್ಕಟ್ಟನ್ನು ನಿರ್ವಹಿಸುತ್ತದೆ. ಹೆಮ್ಮೆಪಡುವ “ಉದ್ಯೋಗ-ಪ್ರಧಾನ” ನೀತಿಯು ಬೆರಳೆಣಿಕೆಯಷ್ಟು ವ್ಯಕ್ತಿಗಳಿಗೆ ಮಾತ್ರ ಪ್ರಯೋಜನಕಾರಿಯಾಗಿದೆ. ನವ-ಉದಾರವಾದದ ಬಿಕ್ಕಟ್ಟು ಎಂದರೆ, ಉದ್ಯೋಗಗಳು ಒಟ್ಟಾರೆಯಾಗಿ ಕಡಿಮೆಯಾಗುವ ವಾಸ್ತವವೇ ಅಲ್ಲದೆ ಮತ್ತೇನೂ ಅಲ್ಲ. ಅದರ ಆಶಯಗಳಿಗನುಗುಣವಾಗಿ, ಹೆಚ್ಚಿನ ಸಂಖ್ಯೆಯ ವ್ಯಕ್ತಿಗಳನ್ನು ಶಿಕ್ಷಣ ವ್ಯವಸ್ಥೆಯ ವ್ಯಾಪ್ತಿಯಿಂದ ಹೊರಗಿಡಲಾಗುತ್ತದೆ. ಈ ಶಿಕ್ಷಣ ವಂಚಿತರ ಮನಸ್ಸನ್ನು ಕೋಮು ವಿಷದಿಂದ ತುಂಬಿಸಿ, ಒಂದು ಮಾರ್ಪಡಿಸಿದ ಕಥನದೊಂದಿಗೆ ಅವರ ಲೌಕಿಕ ಜೀವನದ ಸಮಸ್ಯೆಗಳನ್ನು ಪಕ್ಕಕ್ಕೆ ತಳ್ಳಲಾಗುತ್ತದೆ. ಪರಿಣಾಮವಾಗಿ ಅವರು ಫ್ಯಾಸಿಸ್ಟ್ ತೆರನ ಕೊಲೆಗಡುಕ-ತಂಡಗಳಿಗೆ ಮೂರು ಕಾಸಿನ ಕೂಲಿಗೆ ನಿಯೋಜನೆಗೊಳ್ಳುತ್ತಾರೆ.

ಆದ್ದರಿಂದ ಈ ಶಿಕ್ಷಣ ನೀತಿಯು ಕ್ಷಣಿಕವಷ್ಟೇ ಆಗಿರುತ್ತದೆ, ನಿರುದ್ಯೋಗ ಮತ್ತು ಅದರಿಂದ ಉಂಟಾಗುವ ಸಂಕಷ್ಟಗಳ ಬಗ್ಗೆ ಯುವಕರು ಪ್ರಶ್ನೆಗಳನ್ನು ಕೇಳಲು ಆರಂಭಿಸುವ ತನಕ ಅದು ಇರುತ್ತದೆ. ನವ-ಉದಾರವಾದಿ ಬಂಡವಾಳಶಾಹಿಯನ್ನು ಮೀರಿದ ಪರ್ಯಾಯ ಅಭಿವೃದ್ಧಿ ದಿಕ್ಪಥದ ಅನ್ವೇಷಣೆ ಆಗುತ್ತಿರುವಂತೆಯೇ,ಎನ್‌ಡಿಎ ಸರ್ಕಾರವು ಪರಿಚಯಿಸ ಬಯಸುವ ಶಿಕ್ಷಣ ವ್ಯವಸ್ಥೆಯ ಆಚೆಗಿನ ಶಿಕ್ಷಣ ವ್ಯವಸ್ಥೆಯ ಅನ್ವೇಷಣೆಯೂ ಆರಂಭವಾಗುತ್ತದೆ. ವಸಾಹತುಶಾಹಿ-ವಿರೋಧಿ ಹೋರಾಟದ ಸಮಯದಲ್ಲಿ ಆಗಿದ್ದಂತೆ ವಸಾಹತುಶಾಹಿ ಮಾನಸಿಕತೆಯಿಂದ ಮನಸ್ಸುಗಳನ್ನು ಹೊರತರುವ ಕಾರ್ಯವು ಮತ್ತೊಮ್ಮೆ ಕಾರ್ಯಸೂಚಿಗೆ ಬರುತ್ತದೆ. ಗುಲಾಮಗಿರಿ

ಇದನ್ನು ನೋಡಿ : ಕಲಾಸಕ್ತರ ಕಣ್ಮನ ತಣಿಸಿದ ಚಿತ್ರಸಂತೆ : ಹರಿದು ಬಂದ ಕಲಾ ಪ್ರೇಮಿಗಳ ಸಾಗರ Janashakthi Media

 

Donate Janashakthi Media

Leave a Reply

Your email address will not be published. Required fields are marked *