ಡಿಡಿಪಿಐ ಹುದ್ದೆ ಗಿಟ್ಟಿಸಿಕೊಳ್ಳಲು ಲಂಚ; ಶಿಕ್ಷಣಾಧಿಕಾರಿ ಬಂಧನ

ಹಾವೇರಿ: ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮೌನೇಶ ಬಡಿಗೇರ ಎಂಬುವವರು ಶಿಕ್ಷಕರೊಬ್ಬರ ಬಾಕಿ ವೇತನ ಮಂಜೂರಾತಿಗೆ ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದೂ, ‘ಶಾಲಾ ಶಿಕ್ಷಣ ಇಲಾಖೆಯ ಹಾವೇರಿ ಉಪನಿರ್ದೇಶಕ (ಡಿಡಿಪಿಐ) ಹುದ್ದೆ ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು’ ಎಂಬ ಮಾಹಿತಿ ಪ್ರಾಥಮಿಕ ತನಿಖೆಯಿಂದ ಹೊರಬಿದ್ದಿದೆ.

ಲಂಚದ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ಶಿಕ್ಷಕ ಪ‍್ರತಾಪ್ ಬಾರ್ಕಿ ಎಂಬುವವರು ದೂರು ನೀಡಿದ್ದೂ, ತನಿಖೆ ಆರಂಭಿಸಿದ್ದ ಲೋಕಾಯುಕ್ತ ಪೊಲೀಸ್ ಡಿವೈಎಸ್ಪಿ ಸಿ. ಮಧುಸೂದನ್ ನೇತೃತ್ವದ ತಂಡ, ಆರೋಪಿ ಮೌನೇಶ್ ಬಡಿಗೇರ ಅವರನ್ನು ₹ 15 ಸಾವಿರ ಲಂಚದ ಸಮೇತ ಏಪ್ರಿಲ್ 19ರಂದು ಬಂಧಿಸಿತ್ತು.

ಕೃತ್ಯಕ್ಕೆ ಸಹಕರಿಸಿದ್ದ ಆರೋಪದಡಿ ಜೀಪು ಚಾಲಕ ಪಾಪು ಪೂಮಪ್ಪ ಉದಾಯತ್ ಅವರನ್ನೂ ಸೆರೆ ಹಿಡಿದಿತ್ತು. ಇನ್ನೊಬ್ಬ ಆರೋಪಿ ಶಿಕ್ಷಕ ಮಲ್ಲಿಕಾರ್ಜುನ ಕುಂಬಾರಗೇರಿ ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ಪೊಲೀಸರು ಶೋಧ ನಡೆಸಿದ್ದಾರೆ.

ಬಂಧಿತರಾದ ಮೌನೇಶ ಹಾಗೂ ಪಾಪು ಸದ್ಯ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಇದನ್ನೂ ಓದಿ: ಬೆಂಗಳೂರು| ಸೈಬರ್ ವಂಚನೆಗಳನ್ನು ತಡೆಯಲು ವೆಬ್ ಬಾಟ್ ಉನ್ನತೀಕರಣ

ಹಾವೇರಿ ಡಿಡಿಪಿಐ ಆಗಲು ಪ್ರಯತ್ನ

‘ಹಾವೇರಿ ತಾಲ್ಲೂಕಿನಲ್ಲಿ ಎರಡೂವರೆ ವರ್ಷದಿಂದ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದ ಮೌನೇಶ್ ಅವರಿಗೆ ಇತ್ತೀಚೆಗಷ್ಟೇ ಡಿಡಿಪಿಐ ಆಗಿ ಬಡ್ತಿ ಸಿಕ್ಕಿತ್ತು. ಅವರನ್ನು ಬೆಂಗಳೂರಿನ ಪ್ರಧಾನ ಕಚೇರಿಗೆ ವರ್ಗಾಯಿಸಲಾಗಿತ್ತು. ಅವರಿಂದ ತೆರುವಾದ ಕ್ಷೇತ್ರ ಶಿಕ್ಷಣಾಧಿಕಾರಿ ಹುದ್ದೆಗೆ ಬೇರೊಬ್ಬರನ್ನು ವರ್ಗಾವಣೆ ಮಾಡಲಾಗಿತ್ತು’ ಎಂದು ಮೂಲಗಳು ಹೇಳಿವೆ.

‘ಬಡ್ತಿ ಸಿಕ್ಕ ಬಳಿಕವೂ ಮೌನೇಶ್ ಅಧಿಕಾರ ಹಸ್ತಾಂತರಿಸಿರಲಿಲ್ಲ. ಪ್ರಧಾನ ಕಚೇರಿಗೂ ಹೋಗಿರಲಿಲ್ಲ. ಹಾವೇರಿ ಜಿಲ್ಲೆಯಲ್ಲಿಯೇ ಡಿಡಿಪಿಐ ಆಗಿ ಮುಂದುವರಿಯಲು ಪ್ರಯತ್ನ ಆರಂಭಿಸಿದ್ದರೆಂಬುದು ಆಪ್ತರಿಂದ ಗೊತ್ತಾಗಿದೆ’ ಎಂದು ಮೂಲಗಳು ತಿಳಿಸಿವೆ.

ಸದ್ಯ ಹಾವೇರಿ ಡಿಡಿಪಿಐ ಆಗಿರುವ ಸುರೇಶ ಹುಗ್ಗಿ, ಮೂರು ತಿಂಗಳಿನಲ್ಲಿ ನಿವೃತ್ತರಾಗಲಿದ್ದಾರೆ. ಅವರ ನಿವೃತ್ತಿ ನಂತರ, ಹಾವೇರಿ ಡಿಡಿಪಿಐ ಆಗಲು ಮೌನೇಶ್ ತೆರೆಮರೆಯಲ್ಲಿ ಪ್ರಯತ್ನ ನಡೆಸುತ್ತಿದ್ದರು. ಕೆಲ ವ್ಯಕ್ತಿಗಳನ್ನು ಅವರು ಭೇಟಿ ಮಾಡಿದ್ದರೆಂಬ ಮಾಹಿತಿ ಲಭ್ಯವಿದ್ದು, ಈ ಬಗ್ಗೆಯೂ ಪರಿಶೀಲನೆ ನಡೆದಿದೆ.

‘ಡಿಡಿಪಿಐ ಹುದ್ದೆ ಪಡೆಯಲು ರಾಜಕೀಯ ಹಾಗೂ ಹಣದ ಬೆಂಬಲ ಬೇಕೆಂದು ತಿಳಿದಿದ್ದ ಮೌನೇಶ, ಎರಡೂ ಕಡೆಯಿಂದ ಪ್ರಯತ್ನಿಸುತ್ತಿದ್ದರು. ಕೆಲ ಮಧ್ಯವರ್ತಿಗಳನ್ನೂ ಭೇಟಿಯಾಗಿದ್ದರು. ಅದಕ್ಕಾಗಿಯೇ ದೊಡ್ಡ ಪ್ರಮಾಣದ ಹಣವನ್ನು ಹೊಂದಿಸಲು ಅವರು ‘ಲಂಚ’ಕ್ಕೆ ಕೈಯೊಡ್ಡಿರಬಹುದೆಂಬ ಲೆಕ್ಕಾಚಾರವಿದೆ. ಜೊತೆಗೆ, ಮೌನೇಶ ಅವರು ಭೇಟಿಯಾಗಿದ್ದ ಮಧ್ಯವರ್ತಿಗಳು ಯಾರೆಂಬುದು ತನಿಖೆಯಿಂದ ತಿಳಿಯಬೇಕಿದೆ.

₹ 3 ಲಕ್ಷ ಜಪ್ತಿ: ಬಸವೇಶ್ವರನಗರದ 13ನೇ ಕ್ರಾಸ್‌ನಲ್ಲಿರುವ ಮನೆಯಲ್ಲಿ ಪುತ್ರನ ಜೊತೆ ಮೌನೇಶ್ ವಾಸವಿದ್ದರು. ಅವರ ಮನೆಯಲ್ಲಿ ಕಾರ್ಯಾಚರಣೆ ನಡೆಸಿದ್ದ ಲೋಕಾಯುಕ್ತ ಪೊಲೀಸರು, ₹ 3.97 ಲಕ್ಷ ಪತ್ತೆ ಮಾಡಿದ್ದಾರೆ.

‘ಮೌನೇಶ್ ಮನೆಯಲ್ಲಿ ₹ 3.97 ಲಕ್ಷ ಪತ್ತೆಯಾಗಿದೆ. ಕಾನೂನಿನ್ವಯ ಮನೆ ನಿರ್ವಹಣೆ ವೆಚ್ಚಕ್ಕಾಗಿ ₹ 97 ಸಾವಿರವನ್ನು ಅವರ ಮಗನಿಗೆ ನೀಡಲಾಗಿದೆ. ಉಳಿದ ₹ 3 ಲಕ್ಷವನ್ನು ಜಪ್ತಿ ಮಾಡಲಾಗಿದೆ’ ಎಂದು ಲೋಕಾಯುಕ್ತ ಪೊಲೀಸರು ಹೇಳಿದರು.

ಸಮಗ್ರ ತನಿಖೆಗೆ ಒತ್ತಾಯ: ಮೌನೇಶ್ ಅವರು ಲಂಚದ ಪ್ರಕರಣದಲ್ಲಿ ಸಿಕ್ಕಿಬೀಳುತ್ತಿದ್ದಂತೆ ತಾಲ್ಲೂಕಿನ ಹಲವು ಶಿಕ್ಷಕರು, ತಮಗಾದ ಅನುಭವವನ್ನು ಲೋಕಾಯುಕ್ತ ಪೊಲೀಸರ ಎದುರು ಹಂಚಿಕೊಳ್ಳುತ್ತಿದ್ದಾರೆ.

‘ಮೌನೇಶ್ ಅವರು ಹಲವು ರೀತಿಯಲ್ಲಿ ಶಿಕ್ಷಕರಿಂದ ಹಣ ಪಡೆದುಕೊಳ್ಳುತ್ತಿದ್ದರೆಂಬ ಆರೋಪವಿದೆ. ಅವರ ಮೇಲಿರುವ ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು’ ಎಂದು ಶಿಕ್ಷಕರು ಒತ್ತಾಯಿಸುತ್ತಿದ್ದಾರೆ.

ಪಾಪು ಉದಾಯತ್ಸಿ. ಮಧುಸೂದನ್ ಲೋಕಾಯುಕ್ತ ಪೊಲೀಸ್ ಡಿವೈಎಸ್ಪಿ ಬಿಇಒ ಮೌನೇಶ್ ಬಡಿಗೇರ ಅವರನ್ನು ಲಂಚ ಪ್ರಕರಣದಲ್ಲಿ ಬಂಧಿಸಲಾಗಿದೆ. ಹೆಚ್ಚಿನ ತನಿಖೆಯಿಂದ ಮತ್ತಷ್ಟು ಮಾಹಿತಿ ಲಭ್ಯವಾಗಬೇಕಿದೆ

‘ಕಾರ್ಯಾಚರಣೆಯ ಮುನ್ನಾದಿನ ಡಿಡಿಪಿಐಗೆ ಕರೆ’

ಲೋಕಾಯುಕ್ತ ಪೊಲೀಸರ ಕಾರ್ಯಾಚರಣೆಯ ಮುನ್ನಾದಿನವಾದ ಏಪ್ರಿಲ್ 18ರಂದು ಹಾಲಿ ಡಿಡಿಪಿಐ ಸುರೇಶ ಹುಗ್ಗಿ ಅವರಿಗೆ ಕರೆ ಮಾಡಿದ್ದ ಮೌನೇಶ್ ‘ನನಗೆ ಕಡ್ಡಾಯ ರಜೆ ಮಂಜೂರು ಮಾಡಿ’ ಎಂದು ಕೋರಿದ್ದರು. ಬೆಂಗಳೂರಿಗೆ ಹೋಗುವುದನ್ನು ತಪ್ಪಿಸುವುದಕ್ಕಾಗಿ ರಜೆ ಪಡೆದುಕೊಳ್ಳಲು ಅವರು ಕರೆ ಮಾಡಿದ್ದರೆಂಬ ಮಾಹಿತಿ ಮೂಲಗಳಿಂದ ಗೊತ್ತಾಗಿದೆ.

ಲಂಚ ಪ್ರಕರಣದಲ್ಲಿ ಜಾಮೀನು ಕೋರಿ ಮೌನೇಶ್ ಬಡಿಗೇರ ಅವರು ತಮ್ಮ ಪರ ವಕೀಲರ ಮೂಲಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ ಆಕ್ಷೇಪಣೆ ಸಲ್ಲಿಸಲು ಲೋಕಾಯುಕ್ತ ಪೊಲೀಸರಿಗೆ ಅವಕಾಶ ನೀಡಿತ್ತು. ಮಂಗಳವಾರ ಆಕ್ಷೇಪಣೆ ಸಲ್ಲಿಕೆಯಾಗಿದೆ. ಪರಿಶೀಲನೆ ನಡೆಸಿದ್ದ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಏಪ್ರಿಲ್ 28ಕ್ಕೆ ಮುಂದೂಡಿದೆ.

ಇದನ್ನೂ ನೋಡಿ: ಪಿಚ್ಚರ್‌ ಪಯಣ – 156 | ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಕೆಲವು ಸಿನಿಮಾಗಳ ಅವಲೋಕನ

Donate Janashakthi Media

Leave a Reply

Your email address will not be published. Required fields are marked *