ಬೆಂಗಳೂರು : ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಶಾಲಾ ಶಿಕ್ಷಣದ ಸ್ಥಿತಿಗತಿಯ ಬಗ್ಗೆ ಚರ್ಚಿಸಬೇಕು ಏಂದು ಸಂಚಾಲಕರು ಹಾಗು ಅಭಿವೃದ್ಧಿ ಶಿಕ್ಷಣ ತಜ್ಞ ನಿರಂಜನಾರಾಧ್ಯ.ವಿ.ಪಿ ಒತ್ತಾಯಿಸಿದ್ದಾರೆ.
ಗಡಿನಾಡ ಜಿಲ್ಲೆ ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಿಸಿ ಅಧಿವೇಶನಗಳನ್ನು ನಡೆಸುವ ತೀರ್ಮಾನ ಆ ಭಾಗದ ಮೂಲಭೂತ ಸಮಸ್ಯೆಗಳನ್ನು ಚರ್ಚಿಸಿ ಸೂಕ್ತ ಪರಿಹಾರ ಕಂಡುಕೊಳ್ಳುವುದಾಗಿತ್ತು. ಕಾರಣ , ಕರ್ನಾಟಕದ ಈ ಭಾಗವು ಎಲ್ಲಾ ಬಗೆಯ ಮೂಲ ಸೌಕರ್ಯಗಳಿಂದ ವಂಚಿತವಾಗಿದ್ದು ಅತ್ಯಂತ ಹಿಂದುಳಿದು ಭಾಗವಾಗಿದೆ. ಈ ಹಿಂದುಳಿಯುವಿಕೆ ಕಣ್ಣಿಗೆ ಎಷ್ಟು ರಾಚುತ್ತದೆಯೆಂದರೆ, ಇದು ನಿಜವಾಗಿಯೂ ಕರ್ನಾಟಕದ ಭಾಗವೇ ಎಂಬ ಮಟ್ಟಿಗೆ ಅನುಮಾನ ಮೂಡಿಸುತ್ತದೆ . ಈ ಕಾರಣಕ್ಕೆ ಹಲವು ಬಾರಿ ಪ್ರತ್ಯೇಕ ರಾಜ್ಯದ ಸದ್ದೂ ಕೂಡ ಕೇಳಿ ಬಂದದ್ದುಂಟು.
ಸುವರ್ಣ ಸೌಧ ನಿರ್ಮಾಣವಾಗಿ ಅಧಿವೇಶನಗಳು ನಡೆಯಲು ಪ್ರಾರಂಭವಾದಾಗ, ಅಲ್ಲಿನ ಸಮಸ್ಯೆಗಳಿಗೆ ಪರಿಹಾರ ಸಿಗಬಹುದೆ0ಬ ನಿರೀಕ್ಷೆಯಿತ್ತು. ಈಗ ಅದು ಭ್ರಮರನಿರಸನವಾಗುತ್ತಿದೆ.
ಹಾಲಿ ನಡೆಯುತ್ತಿರುವ ಅಧಿವೇಶನವು ಗೊಂದಲದ ಗೂಡಾಗಿದ್ದು ಪರಸ್ಪರ ಆರೋಪ -ಪ್ರತ್ಯಾರೋಪ ಗಳ ವೇದಿಕೆಯಾಗಿದೆ . ಒಂದು ರಾಜಕೀಯ ವಿಷಯವನ್ನು ಕೈಗೆತ್ತಿಕೊಂಡು ಉಳಿದ ಜ್ವಲಂತ ಸಮಸ್ಯೆಗಳನ್ನು ಮೂಲೆಗುಂಪು ಮಾಡುವ ಕೆಲಸ ವ್ಯವಸ್ಥಿತವಾಗಿ ಮತ್ತು ಉದ್ದೇಶಪೂರ್ವಕವಾಗಿ ನಡೆಯುತ್ತಿರುವುದನ್ನು ಶಿಕ್ಷಣದ ಮೂಲಭೂತ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯ ಬಲವಾಗಿ ಖಂಡಿಸುತ್ತದೆ.
ಉತ್ತರ ಕರ್ನಾಟಕದ ಭಾಗದಲ್ಲಿ ಸರ್ಕಾರಿ ಶಾಲೆಗಳ ಸ್ಥಿತಿಗತಿ ಶೋಚನೀಯವಾಗಿದ್ದು ಈ ವಿಷಯದ ಬಗ್ಗೆ ಚರ್ಚಿಸಬೇಕೆಂದು ಪಾಫ್ರೆ ಬಲವಾಗಿ ಒತ್ತಾಯಿಸುತ್ತದೆ.
ಸಮಸ್ಯೆಯನ್ನು ತೀವ್ರತೆಯ ನ್ನು ತಿಳಿಯಲು ಒಂದು ಉದಾಹರಣೆಯನ್ನು ಗಮನಿಸಬಹುದಾಗಿದೆ. ಶಿಕ್ಷಣ ಇಲಾಖೆಯ 2024-25ನೇ ಸಾಲಿನ ಅಂಕಿ-ಅಂಶಗಳ ಅನ್ವಯ ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ಒಟ್ಟು ಮುಂಜೂರಾದ ಶಿಕ್ಷಕರ ಹುದ್ದೆಗಳು 1,87,993. ಆದರೆ,ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ಸಂಖ್ಯೆ 1,44,747. ಸರಿ ಸುಮಾರು 43,246 ಶಿಕ್ಷಕರ ಹುದ್ದೆಗಳು ಖಾಲಿ ಇವೆ . ಈ ಖಾಲಿ ಇರುವ ಹುದ್ದೆಗಳಲ್ಲಿ ಸುಮಾರು 27,376 ಹುದ್ದೆಗಳು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿವೆ. ಶೇಕಡವಾರು ಲೆಕ್ಕದಲ್ಲಿ ಇದು 63.3.
ಇದನ್ನೂ ಓದಿ : ಬಗರ್ ಹುಕುಂ ಸಾಗುವಳಿದಾರರ 2.23 ಲಕ್ಷ ಅರ್ಜಿಗಳ ತಿರಸ್ಕಾರ ಅಕ್ರಮ – ಸಿಪಿಐಎಂ ಖಂಡನೆ
ಅದರಲ್ಲಿ , ಅತಿ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇರುವ ಮೊದಲ 5 ಜಿಲ್ಲೆಗಳೆಂದರೆ ಉತ್ತರ ಕರ್ನಾಟಕದ ರಾಯಚೂರು, ಚಿಕ್ಕೋಡಿ , ಕಲ್ಬುರ್ಗಿ, ಕೊಪ್ಪಳ, ಮತ್ತು ಬಳ್ಳಾರಿ. ಈ ಜಿಲ್ಲೆಗಳಲ್ಲಿ ಮುಂಜೂರಾಗಿರು ಹುದ್ದೆಗಳು ಕ್ರಮವಾಗಿ 8436, 9779, 9276, 6335 ಮತ್ತು 4494. ಆದರೆ, ಈ ಐದು ಜಿಲ್ಲೆಗಳಲ್ಲಿ ಖಾಲಿ ಇರುವ ಹುದ್ದೆಗಳು ಕ್ರಮವಾಗಿ 3826, 2903, 2452, 2214 ಮತ್ತು 1907. ಈ ಐದು ಜಲ್ಲೆಗಳಲ್ಲಿ ಸರಾಸರಿ ಶೇಕಡ 35.8 ರಷ್ಟು ಹುದ್ದೆಗಳು ಖಾಲಿ ಇವೆ.
ಈ ಜಿಲ್ಲೆಗಳಲ್ಲಿ ಹಾಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರ ಸಂಖ್ಯೆ ಕ್ರಮವಾಗಿ 3205, 2231, 1832,1818 ಮತ್ತು1661.
ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ಖಾಯಂ ಶಿಕ್ಷಕರನ್ನು ನೇಮಿಸಿಕೊಳ್ಳುವ ಬದಲು ರಾಜ್ಯ ಸರ್ಕಾರ ಅತಿಥಿ ಶಿಕ್ಷಕರ ನೇಮಕಾತಿಯ ಮೂಲಕ ವ್ಯವಸ್ಥೆಯನ್ನು ಮತ್ತಷ್ಟು ಅನಿಶ್ಚಿತತೆಗೆ ದೂಡಿ ದುರ್ಬಲಗೊಳಿಸಿದೆ . 2024-25 ನೇ ಸಾಲಿನಲ್ಲಿ ರಾಜ್ಯದಲ್ಲಿ 34192 ಅತಿಥಿ ಶಿಕ್ಷಕರು ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅತಿಥಿ ಶಿಕ್ಷಕರಿಗೆ ಯಾವುದೇ ರೀತಿಯ ಸೇವಾಭದ್ರತೆ ಯಾಗಲಿ ಅಥವಾ ಕನಿಷ್ಠ ವೇತನವಾಗಲಿ ಸಿಗುತ್ತಿಲ್ಲ. ಒಮ್ಮೊಮ್ಮೆ 4-5 ತಿಂಗಳಾದರು ಅವರಿಗೆ ಸಿಗಬೇಕಾದ ಗೌರವಧನವೂ ಸಿಕ್ಕಿರುವುದಿಲ್ಲ.
ಜೊತೆಗೆ, ಈ ಹಿಂದೆ, 1 ರಿಂದ 7ನೇ ತರಗತಿಗೆ ನೇಮಕವಾಗಿದ್ದ ಪ್ರಾಥಮಿಕ ಶಾಲಾ ಶಿಕ್ಷಕರನ್ನು 1 ರಿಂದ 5 ನೇ ತರಗತಿಗೆ ಸೀಮಿತಗೊಳಿಸುವ ಮೂಲ. ಹಿಂಬಡ್ತಿ ನೀಡಿ ಶಿಕ್ಷಕರ ಉತ್ಸಾಹವನ್ನು ಕುಗ್ಗಿಸಿ ಆಸಕ್ತಿ ಕಳೆದುಕೊಳ್ಳುವಂತೆ ಮಾಡಿದೆ. ಸಹ ಶಿಕ್ಷಕರಾಗಿ ವೃತ್ತಿಗೆ ಸೇರುವ ಶಿಕ್ಷರಿಗೆ ಜೇಷ್ಠತೆ ಅಥವಾ ಸೇವಗೆ ಸೇರಿದ ನಂತರ ಪಡೆದ ವಿದ್ಯಾರ್ಹತೆಗಳನ್ನು ಪರಿಗಣಿಸಿ ಅವರ ವೃತ್ತಿ ಬದುಕಿನಲ್ಲಿ ಮುಂಬಡ್ತಿ ನೀಡಬೇಕಾಗಿದ್ದ ಸರ್ಕಾರ, ಅವರಿಗೆ ಹಿಂಬಡ್ತಿ ನೀಡಿ ಘೋರ ಅನ್ಯಾಯವೆಸಗುವ ಮೂಲಕ ಶಿಕ್ಷಕರು ತಮ್ಮ ವೃತ್ತಿಯಲ್ಲಿ ಆಸಕ್ತಿ ಕಳೆದುಕೊಳ್ಳುವಂತೆ ಮಾಡಿದೆ .
ಒಟ್ಟಾರೆ ಕರ್ನಾಟಕದಲ್ಲಿ , ಅದರಲ್ಲೂ ವಿಷೇಶವಾಗಿ ಉತ್ತರ ಕರ್ನಾಟಕದಲ್ಲಿ ಶೂನ್ಯ ಶಿಕ್ಷಕರ ಶಾಲೆ , ಏಕೋಪಾಧ್ಯ ಶಾಲೆ ಮತ್ತು ಮಕ್ಕಳ ಅನುಪಾತಕ್ಕೆ ತಕ್ಕಂತೆ ಶಿಕ್ಷಕರಿಲ್ಲದಿರುವುದು ಗುಣಮಟ್ಟದ ಶಿಕ್ಷಣದ ಮೇಲೆ ತೀವ್ರ ನಕಾರಾತ್ಮಕ ಪರಿಣಾಮ ಬೀರಿದೆ .
ಈ ಭಾಗದಲ್ಲಿ ಬಾಲ ಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ ಮತ್ತು ಶಾಲೆ ಬಿಡುವ ಮಕ್ಕಳ ಸಂಖ್ಯೆಯೂ ಹೆಚ್ಚಿದೆ. ಜೊತೆಗೆ ಶಿಕ್ಷಕರ ನೇಮಕಾತಿ, ವರ್ಗಾವಣೆ, ಬಡ್ತಿ ಮತ್ತು ಸೇವಾಭದ್ರತೆ ವಿಷಯದಲ್ಲಿ ಸಾಕಷ್ಟು ನ್ಯೂನತೆಗಳ ಗೊಂದಲದಿಂದಾಗಿ, ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಗಳಲ್ಲಿ ಗುಣಾತ್ಮಕ ಕಲಿಕೆ ನೆನೆಗುದಿಗೆ ಬಿದ್ದಿದೆ .
ಈ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಈ ಜ್ವಲಂತ ಸಮಸ್ಯೆಯ ಬಗ್ಗೆ ಸರ್ಕಾರ ಬಗ್ಗೆ ಗಂಭೀರವಾಗಿ ಅಲೋಚಿಸಬೇಕಿದೆ.
ಈ ಎಲ್ಲಾ ಕಾರಣಗಳಿಂದ,. ಸರ್ಕಾರವು ಈ ವಿಷಯಗಳನ್ನು ಆದ್ಯತೆಯ ವಿಷಯವಾಗಿ ಪರಿಗಣಿಸಿ ಹಾಲಿ ನಡೆಯುತ್ತಿರುವ ಅಧಿವೇಶನದಲ್ಲಿ ಚರ್ಚಿಸಬೇಕಿದೆ. ಇಲ್ಲವಾದಲ್ಲಿ ಸುವರ್ಣ ಸೌಧ ನಿರ್ಮಿಸಿ ಉತ್ತರ ಕರ್ನಾಟಕದಲ್ಲಿ ವಿಧಾನಸಭಾ ಅಧಿವೇಶನ ನಡೆಸುವ ಸಂಪ್ರದಾಯ ಅರ್ಥಕಳೆದುಕೊಳ್ಳುತ್ತದೆ ಎಂದು ಫಾಫ್ರೆ ಅಭಿಪ್ರಾಯಪಡುತ್ತದೆ ಹಾಗೂ ಒತ್ತಾಯಿಸುತ್ತದೆ .
ಇದನ್ನೂ ಓದಿ : ಎಸ್‌ಎಂ ಕೃಷ್ಣ ನಿಧನಕ್ಕೆ ಸಿದ್ದರಾಮಯ್ಯ ಸಂತಾಪ | ಬೆಳಗಾವಿ ವಿಧಾನಸಭೆ ಅಧಿವೇಶನ Janashakthi Media