ಮಂಗಳೂರು: ಎಡಪಂಥೀಯ ಚಿಂತಕ, ಪ್ರಗತಿಪರ ಚಿಂತಕರ ವೇದಿಕೆಯ ಅಧ್ಯಕ್ಷ, ಜಿಲ್ಲಾ ವಿಚಾರವಾದಿ ವೇದಿಕೆ ಹಾಗೂ ಸಮುದಾಯ ಸಾಂಸ್ಕೃತಿಕ ಸಂಘಟನೆಯ ಸಕ್ರಿಯ ಸದಸ್ಯರು, ಮೆಸ್ಕಾಂನ ನಿವೃತ್ತ ಅಧಿಕಾರಿ ಐ.ಎ.ಪ್ರಸನ್ನ (71 ವರ್ಷ) ಅವರು ತಮ್ಮ ಅಲ್ಪಕಾಲದ ಅಸೌಖ್ಯದಿಂದಾಗಿ ನೆನ್ನೆ(ಸೆಪ್ಟಂಬರ್ 21) ನಗರದ ಖಾಸಗೀ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಪ್ರಸನ್ನ ಅವರು ಒಬ್ಬ ಕಮ್ಯುನಿಸ್ಟ್ ವಿಚಾರವಾದಿ. ಅವರು ತಮ್ಮ ಸ್ವಂತ ಷರತ್ತುಗಳ ಮೇಲೆ ಜೀವನವನ್ನು ನಡೆಸಿದರು. ತಮ್ಮ ನಿಧನದ ಬಳಿಕವೂ ಯಾವುದೇ ಧಾರ್ಮಿಕ ಸಮಾರಂಭಗಳನ್ನು ನಡೆಸಬಾರದು ಮತ್ತು ದೇಹವನ್ನು ಮಣಿಪಾಲದ ಕಸ್ತೂರ್ ಬಾ ವೈದ್ಯಕೀಯ ಕಾಲೇಜಿಗೆ ದಾನ ಮಾಡಬೇಕೆಂದು ಉಲ್ಲೇಖಿಸಿದ್ದರು.
ಐ.ಎ. ಪ್ರಸನ್ನ ಅವರು ತಮ್ಮ ಎಳೆಯ ಪ್ರಾಯದಲ್ಲೇ ಎಡಪಂಥೀಯ ಚಿಂತನೆಯಿಂದ ಪ್ರಭಾವಿತರಾದವರು. ತಮ್ಮ ವಿದ್ಯಾರ್ಥಿ ಜೀವನದಲ್ಲಿ ಪ್ರಗತಿಪರ ವಿಧ್ಯಾರ್ಥಿ ಸಂಘಟನೆಯಲ್ಲಿ ಸಕ್ರಿಯ ಪಾತ್ರವನ್ನು ವಹಿಸಿದ್ದರು. ಯೌವನದಲ್ಲಿ ಸಮುದಾಯ ಬಂಡಾಯ ಚಳುವಳಿಯನ್ನು ಬೆಂಬಲಿಸಿದರು. ದುಡಿಯುವ ವರ್ಗದ ಸಿದ್ಧಾಂತವನ್ನು ಮೈಗೂಡಿಸಿಕೊಂಡು ಕಾರ್ಮಿಕರ ಅನೇಕ ಹೋರಾಟಗಳನ್ನು ಬೆಂಬಲಿಸುತ್ತಿದ್ದರು.
ವಿದ್ಯಾರ್ಥಿ-ಯುವಜನರ ಚಳುವಳಿಯ ಬೆಳವಣಿಗೆಗೆ ಸದಾ ಹಂಬಲಿಸುತ್ತಿದ್ದರು. ಮೆಸ್ಕಾಂನಲ್ಲಿ ಹಿರಿಯ ಅಧಿಕಾರಿಗಳಾಗಿ ಸುಮಾರು 35 ವರ್ಷಗಳಿಂದ ಸೇವೆಯನ್ನು ಸಲ್ಲಿಸಿ ಅತ್ಯಂತ ಪ್ರೀತಿಪಾತ್ರರಾದ ಅಧಿಕಾರಿಗಳೆಂದು ಜನಮನ್ನಣೆ ಪಡೆದಿದ್ದರು. ಸೇವೆಯಿಂದ ನಿವೃತ್ತರಾದ ಬಳಿಕ ಪ್ರಗತಿಪರ ಚಿಂತಕರ ವೇದಿಕೆಯ ಅಧ್ಯಕ್ಷರಾಗಿ ಮಂಗಳೂರಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು.
ಅವರು ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿಯಲ್ಲಿ ಇಂಜಿನಿಯರ್ ಆಗಿದ್ದರೂ, ತಮ್ಮ ವೃತ್ತಿಜೀವನದಲ್ಲಿ ತುಂಬಾ ಕಟ್ಟುನಿಟ್ಟಾಗಿದ್ದರು ಮತ್ತು ಯಾವುದೇ ರೀತಿಯ ಭ್ರಷ್ಟಾಚಾರಕ್ಕೆ ಅವಕಾಶ ನೀಡಲಿಲ್ಲ. ಭ್ರಷ್ಟರಿಂದ ಕಿರುಕುಳಗಳನ್ನು ಎದುರಿಸಬೇಕಾಗಿ ಬಂದಿತು. ನಿವೃತ್ತಿಯ ನಂತರ ಅವರು ತಮ್ಮ ಕೊನೆಯ ದಿನಗಳವರೆಗೂ ಸಿಪಿಐ(ಎಂ) ಪಕ್ಷದ ಬಹಿರಂಗ ಪ್ರದರ್ಶನಗಳಲ್ಲಿ ಭಾಗವಹಿಸುತ್ತಿದ್ದರು.
ಪ್ರಗತಿಪರ ಜಾತ್ಯತೀತ ಮಾನವೀಯ ಮನಸ್ಸಿನ ನೂರಾರು ಜನರನ್ನು ಒಟ್ಟು ಸೇರಿಸುವ ಮೂಲಕ ಜನತೆಯ ಪ್ರೀತಿ ವಿಶ್ವಾಸವನ್ನು ಗಳಿಸಿದ್ದರು. ಇಂತಹ ವ್ಯಕ್ತಿತ್ವದ ಪ್ರಸನ್ನರವರ ಅಗಲುವಿಕೆ ದಕ್ಷಿಣ ಕನ್ನಡ ಜಿಲ್ಲೆಯ ಎಡಪಂಥೀಯ ಚಳುವಳಿಗೆ ತುಂಬಲಾರದ ನಷ್ಟವಾಗಿದೆ ಎಂದು ಪ್ರಗತಿಪರ ಚಿಂತಕರ ವೇದಿಕೆಯು ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸಿದೆ.
ಅವರ ಆಸೆಯಂತೆಯೇ ದೇಹವನ್ನು ವೈದ್ಯಕೀಯ ಕಾಲೇಜಿಗೆ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಅವರ ಆತ್ಮೀಯ ಒಡನಾಡಿಗಳು ಮತ್ತು ಕುಟುಂಬ ಸದಸ್ಯರು ಶ್ರದ್ಧಾಂಜಲಿ ಸಲ್ಲಿಸಿದರು. ಡಾ. ದುರ್ಗಾ ಪ್ರಸಾದ್, ನರೇಂದ್ರ ನಾಯಕ್, ಕೃಷ್ಣಪ್ಪ ಕೊಂಚಾಡಿ, ಜೆ. ಬಾಲಕೃಷ್ಣ ಶೆಟ್ಟಿ, ವಾಸುದೇವ ಉಚ್ಚಿಲ್, ಯಾದವ್ ಶೆಟ್ಟಿ, ವಸಂತ ಆಚಾರಿ, ಯಶವಂತ ಮರೋಳಿ, ಶ್ಯಾಂ ಸುಂದರ್ ರಾವ್ ಮತ್ತಿತರರ ಉಪಸ್ಥಿತರಿದ್ದರು.
ವಿಚಾರವಾದಿ, ಪ್ರಗತಿಪರ ಚಿಂತ ನರೇಂದ್ರ ನಾಯಕ್ ಅವರು, ಪ್ರಸನ್ನ ಅವರನ್ನು ನೆನೆಯುತ್ತಾ, ಹೀಗೆ ಹೇಳಿದ್ದಾರೆ…
ಅವರು ನನ್ನ ಸಹಪಾಠಿ, ನಮ್ಮ ಪದವಿ ಪೂರ್ವ ಶಿಕ್ಷಣ ಸಮಯದಲ್ಲಿ ಅಂದರೆ, 1966ರಲ್ಲಿ ಕಾಲೇಜಿನಲ್ಲಿ 10 ವಿಭಾಗಗಳು ಹೊಂದಿದ್ದವು. ಪ್ರತಿಯೊಂದು ವಿಭಾಗದಲ್ಲಿಯೂ ಕನಿಷ್ಠ ನೂರು ವಿದ್ಯಾರ್ಥಿಗಳು ಇರುತ್ತಿದ್ದರು. ನಮಗೆ ಆಗ ಒಬ್ಬರಿಗೊಬ್ಬರು ಪರಿಚಯವಿರುತ್ತಿರಲಿಲ್ಲ. ನಂತರದ ದಿನಗಳಲ್ಲಿ ನಾನು ಮತ್ತು ಅವರು ನಮ್ಮ ಚಳುವಳಿಗಳ ಮೂಲಕ ಮತ್ತಷ್ಟು ಹತ್ತಿರವಾದೇವು, ಉತ್ತಮ ಸ್ನೇಹಿತರಾದವು.
ಆಗಿನ ದಿನಗಳಲ್ಲಿ ನಾವು ಹಣವಿಲ್ಲದೆ ಒಟ್ಟಿಗೆ ಪ್ರಯಾಣಿಸುತ್ತಿದ್ದೆವು, ಬಸ್ಸುಗಳಲ್ಲಿ ಹೋಗುತ್ತಿದ್ದೆವು, ಕಿಕ್ಕಿರಿದ ಸಾರಿಗೆಯಲ್ಲಿ ನಮ್ಮ ಚೀಲಗಳನ್ನು ನೇತುಹಾಕಿಕೊಂಡು ಪ್ರಯಾಣಿಸುತ್ತಿದ್ದೆವು.
ನಾನು ಕಾರ್ಯಕ್ರಮಗಳ ಭಾಗವಾಗಿ ಸಂಚಾರ ನಡೆಸುತ್ತಿದ್ದೆ. ಹಲವಾರು ಮಂದಿ ಸಂಪರ್ಕಕ್ಕೆ ಬಂದರು. ಪ್ರಸನ್ನ, ದೇವದಾಸ್, ಕೃಷ್ಣಪ್ಪ ಕೊಂಚಾಡಿ ಅವರು ನನ್ನ ಹಲವಾರು ಪವಾಡ ಬಯಲು ಕಾರ್ಯಕ್ರಮಗಳಿಗೆ ಬೆಂಬಲವಾಗಿ ಇರುತ್ತಿದ್ದರು.
ಪ್ರಸನ್ನ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾಗ ಮತ್ತು ಅವರ ಕೊನೆಯ ದಿನಗಳಲ್ಲಿ ಬಹಳ ನಿಷ್ಠೂರ ವಿಚಾರವಾದಿಯಾಗಿಯೇ ನಡೆದುಕೊಳ್ಳುತ್ತಿದ್ದರು. ಅವರು ನಿಧನಕ್ಕೆ ಒಂದು ವಾರದ ಹಿಂದೆ, ಕೃಷ್ಣಪ್ಪ ಕೊಂಚಾಡಿ ಅವರು ಭೇಟಿ ಮಾಡಿದಾಗ ತಮ್ಮ ಅನಾರೋಗ್ಯದ ಬಗ್ಗೆ ಇತರರಿಗೆ ಮತ್ತು ಅದರಲ್ಲೂ ನಿರ್ದಿಷ್ಟವಾಗಿ ತಮ್ಮ ಸಹಪಾಠಿ ವಾಸುದೇವ ಉಚ್ಚಿಲ್ ಅವರಿಗೆ ತಿಳಿಸದಂತೆ ಕಟ್ಟಾಜ್ಞೆ ಮಾಡಿದ್ದರಂತೆ.
ಕೊರಗುವವರು ಕಣ್ಣು ಬಿಟ್ಟು ನೋಡಬಹುದು. ಆದರೆ, ಪ್ರಸನ್ನ ಅವರು ಅದಕ್ಕೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ದೃಢವಾದ ರಾಜಿಯಾಗದ ಮನುಷ್ಯ ಅವರು, ಅದು ಅವರು ಬಯಸಿದ ಮಾರ್ಗವಾಗಿತ್ತು. “ಒಮ್ಮೆ ನಾನು ಸತ್ತರೆ, ನಾನು ಸತ್ತಿದ್ದೇನೆ ಅಷ್ಟೇ, ಮುಂದೆ ಹೋಗಿ ನಿಮಗೆ ಬೇಕಾದುದನ್ನು ಮಾಡಿ” ಎಂದು ಅವರು ನನಗೆ ಹೇಳುತ್ತಿದ್ದರು. ಪ್ರಸನ್ನ ನಿಮ್ಮ ಜೀವನ, ನಿಮ್ಮ ತತ್ವಗಳು ಮತ್ತು ರಾಜಿಯಾಗದ ವರ್ತನೆಗಳಿಗೆ ನನ್ನ ನಮಸ್ಕಾರಗಳು.
ಭಾವಪೂರ್ಣ ಶ್ರದ್ಧಾಂಜಲಿ
ಪ್ರಸನ್ನರವರ ನಿಧನಕ್ಕೆ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ) ಸೇರಿದಂತೆ, ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು), ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇನಷ್(ಡಿವೈಎಫ್ಐ), ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್ಎಫ್ಐ), ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ(ಎಐಡಿಡಬ್ಲ್ಯೂಎ) ಸಂಘಟನೆಗಳೂ ಕೂಡ ತೀವ್ರ ಸಂತಾಪ ವ್ಯಕ್ತಪಡಿಸಿವೆ.