ಮಹಿಳೆಗೆ ಸಾಮಾಜಿಕ ಹೋರಾಟ, ರಾಜಕೀಯ ಇತ್ಯಾದಿಗಳು ನಿಷಿದ್ಧ ಎಂಬ ಸಂದರ್ಭದಲ್ಲಿಯೇ ಎಡ ಚಿಂತನೆಗಳನ್ನು ಮೈ-ಮನಸಿನಲ್ಲಿ ತುಂಬಿಕೊಂಡು ಬೀದಿ ಬೀದಿಯಲ್ಲಿ ‘ಇಂಕ್ವಿಲಾಬ್ ಜಿಂದಾಬಾದ್’ ಮೊಳಗಿಸಿದವರು ಕೆ ಆರ್ ಗೌರಿ ಅಮ್ಮ.
ಕೇರಳ ರಾಜಕೀಯದಲ್ಲಿ ಮಹಿಳಾ ಪ್ರಾತಿನಿಧ್ಯದ ಗಟ್ಟಿ ದನಿಯಾಗಿದ್ದ ಗೌರಿಯಮ್ಮ ಅಲ್ಲಿನ ಸಾಮಾಜಿಕ ಜೀವನದಲ್ಲೂ ವಿಧಾನಸಭೆಯಲ್ಲೂ ದಾಖಲೆಗಳನ್ನು ಬರೆದಿದ್ದಾರೆ. ಹೀಗಾಗಿ ಅವರಿಗೆ ಹಿತ-ಶತ್ರುಗಳೂ ಇದ್ದರು. ಅಂಥವರ ರಾಜಕೀಯದಿಂದಾಗಿ ಏಳು ಬೀಳುಗಳನ್ನು ಕಂಡರು. ಇಂತಹ ಸಂದರ್ಭದಲ್ಲಿ ಸಾಮಾಜಿಕ ಕಾರ್ಯ, ಸಾಹಿತ್ಯ ಕೃಷಿಯತ್ತ ಹೊರಳಿ ಜೀವನ ಸಾರ್ಥಕ ಪಡಿಸಿಕೊಂಡವರು.
ಅನ್ಯಾಯಕ್ಕೆ ನಿಷ್ಠುರ ಉತ್ತರ
ಕೆ.ಎ.ರಾಮನ್ ಮತ್ತು ಪಾರ್ವತಿ ಅಮ್ಮ ದಂಪತಿಯ ಏಳನೇ ಪುತ್ರಿ ಕೆ ಆರ್ ಗೌರಿ ಅಮ್ಮ. ತುರ ವೂರ್ ಮತ್ತು ಚೇರ್ತಲದಲ್ಲಿ ಶಾಲಾ ಶಿಕ್ಷಣ. ಎರ್ನಾಕುಳಂ ಮಹಾರಾಜ ಕಾಲೇಜಿನಲ್ಲಿ ಪದವಿ. ಸರ್ಕಾರಿ ಕಾನೂನು ಕಾಲೇಜಿನಿಂದ ಕಾನೂನು ಪದವಿ. ಈ ಸಾಧನೆ ಮಾಡಿದ ಈಳವ ಸಮುದಾಯದ ಮೊದಲ ಮಹಿಳೆ ಎಂಬ ದಾಖಲೆ.
ಹುರಿಹಗ್ಗ ತಯಾರಿಕೆಯ ಜೊತೆಯಲ್ಲೇ ಸಾಮಾಜಿಕ ಹೋರಾಟಕ್ಕಾಗಿ ಮನವನ್ನು ಹುರಿಗೊಳಿಸಿದವರಲ್ಲಿ ಪ್ರಮುಖರು; ಆಲಪ್ಪುಳ ಜಿಲ್ಲೆಯವರು. ಆ ಪರಿಸರದಲ್ಲಿ ಬೆಳೆದ ಗೌರಿಯಮ್ಮ ವಿದ್ಯಾರ್ಥಿ ಜೀವನದಲ್ಲೇ ಕೆಂಪು ಪತಾಕೆ ಹಿಡಿದು ಹೆಜ್ಜೆ ಹಾಕಿದರು. ಅನ್ಯಾಯ, ದೌರ್ಜನ್ಯ, ಅಸಮಾನತೆ ಕಂಡರೆ ಸಿಡಿದೇಳುವ ಮನೋಭಾವ ರಕ್ತಗತವಾಗಿದ್ದರಿಂದ ಅವರ ಜೀವನದ ಪ್ರತಿ ಹಂತವೂ ಹೋರಾಟದ ಒಂದೊಂದು ಅಧ್ಯಾಯವಾಯಿತು.
ಅಣ್ಣ ಸುಕುಮಾರನ್ ಜೊತೆಗೂಡಿ ಕಾರ್ಮಿಕರ ಮತ್ತು ಕೃಷಿಕರ ಪರ ಹೋರಾಟಕ್ಕಿಳಿದ ಅವರು ‘ರಾಜಕೀಯ ಚಟುವಟಿಕೆ’ಯ ಹಿನ್ನೆಲೆಯಲ್ಲಿ ಅನೇಕ ಬಾರಿ ಜೈಲು ಸೇರಬೇಕಾಯಿತು. ಆದರೆ ಆ ಹೋರಾಟದ ದನಿಯೇ ಅವರನ್ನು ಜನರ ಪ್ರತಿನಿಧಿಯನ್ನಾಗಿಸಿತು.
ಇ.ಎಂ.ಎಸ್.ನಂಬೂದಿರಿಪ್ಪಾಡ್ ನೇತೃತ್ವದಲ್ಲಿ 1957ರಲ್ಲಿ ರಚನೆಯಾದ ಕೇರಳದ ಮೊದಲ ಕಮ್ಯುನಿಸ್ಟ್ ಸರ್ಕಾರದಲ್ಲಿ ಕಂದಾಯ ಸಚಿವೆಯಾದರು. ಸಚಿವ ಸಂಪುಟದ ಸಹಚರ ಕಾಮ್ರೇಡ್ ಟಿ.ವಿ.ಥಾಮಸ್ ಜೊತೆ ಅದೇ ವರ್ಷ ಆದರ್ಶ ದಾಂಪತ್ಯವೂ ಆರಂಭವಾಯಿತು. ಮಂತ್ರಿಯಾದ ನಂತರವೂ ದೀನರ ಕುರಿತ ಕಾಳಜಿ ಹೆಚ್ಚಿತು. ಕೇರಳ ಕಮ್ಯೂನಿಸ್ಟ್ ಸರಕಾರ ಭೂ ಸುಧಾರಣೆ ನಿಯಮ ರಾಷ್ಟ್ರದಲ್ಲೇ ಹೆಸರು ಮಾಡಿತು.
ಉಳುವವರನ್ನು ಹೊಲದೊಡೆಯರನ್ನಾಗಿಸುವ ಮತ್ತು ಶ್ರೀಮಂತರ ಬಳಿ ಇದ್ದ ಹೆಚ್ಚುವರಿ ಜಾಗವನ್ನು ಭೂರಹಿತರಿಗೆ ನೀಡುವ ಮಸೂದೆಯನ್ನು ಗೌರಿಯಮ್ಮ ಮಂಡಿಸಿದ್ದರು. ಆದರೆ ಇದಕ್ಕೆ ಭಾರಿ ವಿರೋಧ ವ್ಯಕ್ತವಾಯಿತು. ಉಳ್ಳವರು ಬೀದಿಗಿಳಿದು ಪ್ರತಿಭಟನೆ ಮಾಡಿದರು. ನಂತರದ ಬೆಳವಣಿಗೆಯಲ್ಲಿ ಅಂದಿನ ಕೇಂದ್ರದ ಕಾಂಗ್ರೆಸ್ ಸರಕಾರ ಕಮ್ಯೂನಿಸ್ಟ್ ಸರಕಾರವನ್ನು ವಜಾ ಮಾಡಿತು. ಈ ಬೆಳವಣಿಗೆಗಳಿಂದಾಗಿ ನಿಯಮ ರೂಪಿಸಲು ಸಾಧ್ಯವಾಗಲಿಲ್ಲ. ಮುಂದೆ ಸಿಪಿಐ(ಎಂ) ಅಧಿಕಾರಕ್ಕೆ ಬಂದದ್ದು ಒಂದು ದಶಕದ ನಂತರ. ಆಗಲೂ ಭೂಸುಧಾರಣೆ ಕಾಯ್ದೆಯ ಬಗ್ಗೆ ಕಾಳಜಿ ವಹಿಸಿದ ಅವರು ಹಿಂದಿನ ಸರ್ಕಾರ ಜಾರಿಗೆ ತಂದ ಕಾಯ್ದೆಯಲ್ಲಿ ಬದಲಾವಣೆಗಳನ್ನು ಮಾಡಿ ಜಾರಿಗೊಳಿಸಿದರು. ಸಾವಿರಾರು ಮಂದಿ ಸ್ವಂತ ಜಾಗ ಹೊಂದಿದರು.
ಕವಲು ದಾರಿಯಲ್ಲಿ ಸಾಗಿದ ಬದುಕು
1964ರಲ್ಲಿ ಗೌರಿಯಮ್ಮ ಅವರ ವೈಯಕ್ತಿಕ ಮತ್ತು ರಾಜಕೀಯ ಜೀವನ ಕವಲು ದಾರಿಯಲ್ಲಿ ಸಾಗಿದ ವರ್ಷ. ಅಂದಿನ ಐಕ್ಯ ಕಮ್ಯೂನಿಸ್ಟ್ ಪಕ್ಷ ಸಿಪಿಐ ಮತ್ತು ಸಿಪಿಐ(ಎಂ) ಆಗಿ ಹಿಬ್ಬಾಗವಾದಾಗ ಪತಿ-ಪತ್ನಿಯರೂ ಭಿನ್ನ ಹಾದಿಯಲ್ಲಿ ಸಾಗಿದರು. ಗೌರಿಯಮ್ಮ ಸಿಪಿಐ(ಎಂ) ನಲ್ಲಿ ಉಳಿದರು. ಆದರೆ ಸರಿಯಾಗಿ ಮೂರು ದಶಕಗಳ ನಂತರ ‘ಪಕ್ಷ ವಿರೋಧಿ ಚಟುವಟಿಕೆ’ಯಲ್ಲಿ ಪಾಲ್ಗೊಂಡದ್ದಕ್ಕಾಗಿ ಪಕ್ಷದಿಂದ ಅವರು ಉಚ್ಚಾಟನೆಗೆ ಒಳಗಾದರು.
ಅನಂತರ ಗೌರಿಯಮ್ಮ ಜನಾಧಿಪತ್ಯ ಸಂರಕ್ಷಣ ಸಮಿತಿ (ಪ್ರಜಾಪ್ರಭುತ್ವ ರಕ್ಷಣಾ ಸಮಿತಿ) ಸ್ಥಾಪಿಸಿದರು. ಕ್ರಮೇಣ ಈ ಸಂಘಟನೆ ಯುಡಿಎಫ್ಗೆ ಬೆಂಬಲ ನೀಡಿತು. ಕಾಂಗ್ರೆಸ್ ಸರ್ಕಾರದಲ್ಲಿ ಗೌರಿಯಮ್ಮ ಮಂತ್ರಿಯಾದರು.
ಆದರೆ ಎಡಚಿಂತನೆಯಲ್ಲೇ ಬೆಳೆದ ಅವರಿಗೆ ಕಾಂಗ್ರೆಸ್ ಪಾಳಯ ಉಸಿರುಗಟ್ಟಿಸಿತು. ಹೀಗಾಗಿ ದೂರ ಉಳಿಯಲು ಬಯಸಿದರು. ಚರ್ಚೆ, ಮಾತುಕತೆ, ಸಂಧಾನದ ಕೊನೆಯಲ್ಲಿ ಅವರು ಕಾಂಗ್ರೆಸ್ ತೊರೆಯುವ ನಿರ್ಧಾರ ಪ್ರಕಟಿಸಿ, ಗೊಂದಲಗಳಿಗೆ ಕೊನೆ ಹಾಡಿದರು.
‘ಮೀನು ನೀರಿನಲ್ಲಿ ಇರುವಂತೆ ರಾಜಕಾರಣಿ ಜನಗಳ ಮಧ್ಯದಲ್ಲೇ ಇರಬೇಕು’ ಎಂಬುದು ಗೌರಿಯಮ್ಮ ಅವರ ರಾಜಕೀಯ ನೀತಿ. ಮಕ್ಕಳಿಲ್ಲದ ಅವರಿಗೆ ಜನಸೇವೆಯೇ ಜೀವನವಾಯಿತು; ಕಾಮ್ರೇಡ್ ಗಳೇ ಮಕ್ಕಳಾದರು.