ಥಾಮಸ್ ಐಸಾಕ್‍ ಮತ್ತು ಕೆ.ಐ.ಐ.ಎಫ್.ಬಿ. ಗೆ ಸಮನ್ಸ್ ವಾಪಾಸ್: ಕೇರಳ ಹೈಕೋರ್ಟಿಗೆ ಇ.ಡಿ. ಹೇಳಿಕೆ

ಕೇರಳ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್‌ಮೆಂಟ್ ಫಂಡ್ ಬೋರ್ಡ್ (ಕೆಐಐಎಫ್‍ಬಿ) ಅಂದರೆ ಕೇರಳ ಮೂಲರಚನಾ ಹೂಡಿಕೆ  ನಿಧಿ ಮಂಡಳಿಯ ಹಣಕಾಸು ವ್ಯವಹಾರಗಳಲ್ಲಿ ಕಾನೂನು ಉಲ್ಲಂಘನೆಗಳಾಗಿವೆ ಎಂದು ಆರೋಪಿಸಿ ತನಿಖೆ ನಡೆಸುತ್ತಿರುವ  ಕೇಂದ್ರ ಸರಕಾರದ ಜಾರಿ ನಿರ್ದೇಶನಾಲಯ(ಇ.ಡಿ.) ತನ್ನ  ತನಿಖೆಯ ಭಾಗ ಎಂದು ಕೇರಳದ ಮಾಜಿ ಹಣಕಾಸು ಸಚಿವರು ಮತ್ತು ಹಿರಿಯ ಸಿಪಿಐ(ಎಂ) ನಾಯಕ ಟಿಎಂ ಥಾಮಸ್ ಐಸಾಕ್‌ ರಿಗೆ ಮತ್ತು ಕೆಐಐಎಫ್‍ಬಿ ಅಧಿಕಾರಿಗಳಿಗೆ ತಮ್ಮ ಮುಂದೆ ಹಾಜರಾಗುವಂತೆ ಕಳೆದ ಜುಲೈನಲ್ಲಿ ಸಮನ್ಸ್  ನೀಡಿತ್ತು. ಅವನ್ನು ಹಿಂಪಡೆಯಲು ಈಗ  ನಿರ್ಧರಿಸಿರುವುದಾಗಿ  ಇ.ಡಿ.  ಕೇರಳ ಹೈಕೋರ್ಟ್‌ಗೆ ಡಿಸೆಂಬರ್ 14ರಂದು ತಿಳಿಸಿದೆ.

ಸುಮಾರು ಎರಡು ವರ್ಷಗಳ ಕಾನೂನುಸಮರದ ನಂತರ ಇ.ಡಿ. ಸಮನ್ಸ್ ಗಳನ್ನು ವಾಪಾಸು ಪಡೆಯುವಂತಾಗಿದೆ. ಮೂಲರಚನಾ ಯೋಜನೆಗಳಿಗೆ ಹೂಡಿಕೆಗಳಿಗಾಗಿ ಹಿಂದಿನ ಎಲ್‍ಡಿಎಫ್‍ ಸರಕಾರ ರಚಿಸಿದ್ದ ಕೆಐಐಎಫ್‍ಬಿ ಯ ‘ಮಸಾಲಾ ಬಾಂಡ್’ಗಳ ನೀಡಿಕೆಯಲ್ಲಿ ಕಾನೂನಿನ ಉಲ್ಲಂಘನೆ ಯಾಗಿದೆ ಎಂಬ ಆರೋಪದ ತನಿಖೆಯನ್ನು ಜಾರಿ ನಿರ್ದೇಶನಾಲಯ ಆರಂಭಿಸಿತ್ತು.

ಮಸಾಲಾ ಬಾಂಡ್‍ ಎಂದರೆ ವಿದೇಶಿ ಮಾರುಕಟ್ಟೆಗಳಲ್ಲಿ ಭಾರತೀಯ ಸಂಸ್ಥೆಗಳು ನೀಡಬಹುದಾದ ರೂಪಾಯಿ ಬಾಂಡ್‍ ಗಳು, ಅಂದರೆ ಸಾಲಪತ್ರಗಳು. ಕೆಐಐಎಫ್‍ಬಿ ದೊಡ್ಡ ಮತ್ತು ಅಗತ್ಯ ಮೂಲರಚನಾ ಪ್ರಾಜೆಕ್ಟುಗಳಿಗೆ  ಹಣಕಾಸು ಸಂಗ್ರಹಿಸು ರಾಜ್ಯ ಸರಕಾರದ ಪ್ರಧಾನ ಸಂಸ್ಥೆಯಾಗಿದ್ದು, 2021ರಲ್ಲಿ ಮಸಾಲಾ ಬಾಂಡ್‍ ಮೂಲಕ 2150 ಕೋಟಿ ರೂ.ಗಳನ್ನು ಸಂಗ್ರಹಿಸಿತ್ತು. ಒಟ್ಟು ಸುಮಾರು 50,000 ಕೋಟಿ ರೂ.ಗಳನ್ನು ಸಂಗ್ರಹಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.

ಇದನ್ನೂ ಓದಿ ಈಗ ಕೇರಳ ಎಲ್‌ಡಿಎಫ್ ಸರಕಾರದ ಮೇಲೆ ಗುರಿ

ಇದರಲ್ಲಿ ವಿದೇಶ ವಿನಿಮಯ ನಿರ್ವಹಣಾ ಕಾಯ್ದೆ(ಎಫ್‍ಇಎಂಎ-ಫೆಮ)ಯ ಉಲ್ಲಂಘನೆಯಾಗಿದೆ ಎಂಬುದು ಆರೋಪ. ಇ.ಡಿ. ನೋಟಿಸ್ ಕೇಂದ್ರದ ಬಿಜೆಪಿ ಸರ್ಕಾರದ ‘ರಾಜಕೀಯ ನಡೆ’, ಅದು ತನ್ನ ರಾಜಕೀಯ ಲಾಭಕ್ಕಾಗಿ ಎಲ್ಲಾ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಎಂದು ಐಸಾಕ್ಆ ರೋಪಿಸಿದ್ದರು.  ಕೆಐಐಎಫ್‌ಬಿ ಮತ್ತು ಕೇರಳ ರಾಜ್ಯ ಮಾಹಿತಿ ತಂತ್ರಜ್ಞಾನ ಮೂಲಸೌಕರ್ಯ ಲಿಮಿಟೆಡ್ (ಕೆಎಸ್‌ಐಟಿಐಎಲ್) ಅಧಿಕಾರಿಗಳಿಗೆ ಇ.ಡಿ. ಸಮನ್ಸ್ ನೀಡಿರುವ ರೀತಿ ಮತ್ತು ಮಾಧ್ಯಮಗಳ ಮೂಲಕ ಅದಕ್ಕೆ ಪ್ರಚಾರ ನೀಡುತ್ತಿರುವುದು ಭೀತಿ ಹರಡಿಸುವ ಮತ್ತು ಇವುಗಳಿಗೆ ಮಸಿ ಬಳೆಯುವ ಅಭಿಯಾನದ ಭಾಗ, ಕೇರಳ ಸರ್ಕಾರೀ ಯಂತ್ರಕ್ಕೆ  ಅಪಖ್ಯಾತಿ ತರಲು “ಪಟ್ಟಭದ್ರ ರಾಜಕೀಯ ಹಿತಾಸಕ್ತಿಗಳು” ಇದನ್ನು ನಡೆಸುತ್ತಿವೆ ಎಂದೂ ಹೇಳಿದ್ದರು.

ಈ ಬಗ್ಗೆ ತನಿಖೆಗೆ ಸಂಬಂಧಪಟ್ಟಂತೆ ಆಗ ಹಣಕಾಸು ಮಂತ್ರಿಯಾಗಿದ್ದ ಥಾಮಸ್‍ ಐಸಾಕ್‍ ಹಾಗೂ ಕೆಐಐಎಫ್‍ಬಿ ಯ ಸಿಇಒ ಸೇರಿದಂತೆ ಉನ್ನತ ಅಧಿಕಾರಿಗಳಿಗೆ ಪದೇಪದೇ ಅನಗತ್ಯವಾಗಿ ಇ.ಡಿ. ಸಮನ್ಸ್ ಕಳಿಸುತ್ತಿದ್ದುದರ ವಿರುದ್ಧ ಅವರುಗಳು ಹೈಕೋರ್ಟಿಗೆ ಅರ್ಜಿ ಹಾಕಿದ್ದರು.

“ಈ ಪ್ರಕರಣವು ಫೆಮ ಗೆ ಸಂಬಂಧಿಸಿದೆ ಎಂದು ಹೇಳಲಾಗಿದೆ. ನಾನು ಅಥವಾ ಕೆಐಐಎಫ್‍ಬಿ ಕಾನೂನನ್ನು ಉಲ್ಲಂಘಿಸಿದೇವೆಯೇ? ಅದು ಅವರ ವಾದವಾಗಿದ್ದರೆ, ಮಸಾಲಾ ಬಾಂಡ್‌ಗಳಿಗೆ ಎನ್‌ಒಸಿ ಮತ್ತು ನೋಂದಣಿ ಸಂಖ್ಯೆಯನ್ನು ನೀಡಿದ್ದು ಆರ್‌ಬಿಐ ಆಗಿರುವುದರಿಂದ ಅದನ್ನು ಮೊದಲು ಆರ್‌ಬಿಐಗೆ ಸೂಚಿಸಬೇಕು” ಎಂದು  ಐಸಾಕ್ ಹೇಳಿದ್ದರು.

ಇದಕ್ಕೆ ಸಂಬಂಧಪಟ್ಟಂತೆ ,  ಕೆಐಐಎಫ್‍ಬಿ ಗೆ ವಿದೇಶಗಳಲ್ಲಿ ಈ ಮಸಾಲಾ ಬಾಂಡ್‍ಗಳ ಮೂಲಕ ನಿಧಿ ಸಂಗ್ರಹಿಸಲು ತಾನು ಎನ್‍ಒಸಿ( ಆಕ್ಷೇಪಣೆಯೇನೂ ಇಲ್ಲ ಎಂಬ) ಪತ್ರವನ್ನು) ನೀಡಿರುವುದಾಗಿ ಭಾರತೀಯ ರಿಝರ್ವ್‍ ಬ್ಯಾಂಕ್ ಹೈಕೋರ್ಟಿಗೆ ಈಗಾಗಾಲೇ ತಿಳಿಸಿದೆ.

ಈಗ ಹೈಕೋರ್ಟ್‍ ಇದನ್ನು ಕೈಗೆತ್ತಿಕೊಳ್ಳುವ ಸಂದರ್ಭದಲ್ಲಿ ಇ.ಡಿ. ಸಮನ್ಸ್ ಗಳನ್ನೇ ವಾಪಾಲು ಪಡೆಯಲು ನಿರ್ಧರಿಸಿರುವುದು ಈ ಪ್ರಕರಣ ಒಂದು ‘ರಾಜಕೀಯ ನಡೆ’ ಎಂಬ ಸಂದೇಹವನ್ನು ಬಲಪಡಿಸಿದೆ.

ಇ.ಡಿ. ಸಮನ್ಸ್ ಹಿಂಪಡೆದಿರುವ ಹಿನ್ನೆಲೆಯಲ್ಲಿ ಹೈಕೋರ್ಟ್ ಐಸಾಕ್ ಮತ್ತು ಕೆಐಐಎಫ್‍ಬಿ  ಅರ್ಜಿಗಳನ್ನು ವಿಲೇವಾರಿ ಮಾಡಿದೆ. ಅದೇ ಸಮಯದಲ್ಲಿ, ಈ ವಿಷಯದ ಬಗ್ಗೆ ತನ್ನ ತನಿಖೆಯನ್ನು ಮುಂದುವರಿಸಲು ಇ.ಡಿ. ಮುಕ್ತವಾಗಿದೆ ಎಂದು ನ್ಯಾಯಾಲಯ ಹೇಳಿದೆ. ತನಿಖೆ ನಡೆಯಲೇ ಬಾರದು ಎಂದೇನೂ ತಾವು ಕೇಳುತ್ತಿಲ್ಲ, ಅಕಾರಣವಾದ, ಗಾಳ ಹಾಕುವ ತನಿಖೆಯನ್ನು ಮಾತ್ರ ವಿರೋಧಿಸುವುದಾಗಿ ಪ್ರೊ. ಥಾಮಸ್‍ ಐಸಾಕ್‍ ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *