ಅರ್ಥಶಾಸ್ತ್ರವನ್ನು ಅಪ್ರಾಮಾಣಿಕತೆಯ ಮಟ್ಟಕ್ಕೆ ಇಳಿಸಿರುವ ನವ-ಉದಾರವಾದ

ಪ್ರೊ.ಪ್ರಭಾತ್ ಪಟ್ನಾಯಕ್
ಅನು: ಕೆ.ಎಂ.ನಾಗರಾಜ್

ಕೆಳ ಮಟ್ಟದ ಆದಾಯವು ಕ್ಯಾಲೊರಿ ಸೇವನೆಯ ಪ್ರಮಾಣವನ್ನು ತಗ್ಗಿಸುತ್ತದೆ ಎಂಬುದನ್ನು ಒಪ್ಪಿಕೊಂಡ ಸರ್ಕಾರ ಈ ವಾದಕ್ಕೆ ತದ್ವಿರುದ್ಧವಾಗಿ, ಉನ್ನತ ಮಟ್ಟದ ಆದಾಯವು ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡುತ್ತದೆ ಎನ್ನುವ ಅಧಿಕೃತ ಅರ್ಥಶಾಸ್ತ್ರಜ್ಞರ ನಿಲುವನ್ನು ಕೂಡ ಸಮರ್ಥಿಸಿಕೊಳ್ಳುತ್ತದೆ; ಉದ್ದೇಶಪೂರ್ವಕ ಸುಳ್ಳು ಪ್ರತಿಪಾದನೆಯ ಮೇಲೆ ರೈತರಿಗೆ ಕೊಡುವ ಬೆಲೆ ಬೆಂಬಲವನ್ನು ತೆಗೆದುಹಾಕುವ ವಿಶ್ವ ವ್ಯಾಪಾರ ಸಂಘಟನೆಯ ಕಾರ್ಯಸೂಚಿಯನ್ನು ಮುಂದೊಯ್ಯುತ್ತದೆ. ಅರ್ಥಶಾಸ್ತ್ರದ ಹೆಸರಿನಲ್ಲಿ ತನ್ನ ಕಾರ್ಯಸೂಚಿಯನ್ನು ಉತ್ತೇಜಿಸುವ ಸಲುವಾಗಿ ನಿಷ್ಪಕ್ಷಪಾತರಲ್ಲದ ಅರ್ಥಶಾಸ್ತ್ರಜ್ಞರ ಒಂದು ಸೈನ್ಯವನ್ನೇ ಬಳಸುವ ನವ ಉದಾರವಾದಿ ಯುಗದಲ್ಲಿ ಅಪ್ರಾಮಾಣಿಕತೆಯು ಖಂಡಿತವಾಗಿಯೂ ಅದರ ಒಂದು ಹೆಗ್ಗುರುತೇ. ಅದೇ ರೀತಿಯಲ್ಲಿ ನವಉದಾರವಾದವನ್ನು ಅಪ್ಪಿಕೊಂಡಿರುವ ಸರಕಾರದ ಸಮಯಸಾಧಕತನ ಕೂಡ.

ಅರ್ಥಶಾಸ್ತ್ರವು ವೈಜ್ಞಾನಿಕ ವಿವರಣೆಯನ್ನುಳ್ಳ ಒಂದು ವಿಷಯ ಎಂಬುದರ ಬದಲಾಗಿ ಆಳುವ ವರ್ಗಗಳು ತಮ್ಮದೇ ಸಿದ್ಧಾಂತ-ಪ್ರೇರಿತ ವಿವರಣೆಗಳನ್ನು ಕೊಡಲು ಪ್ರಯತ್ನಿಸುವ ವಿಷಯವಾಗಿ ಬಿಟ್ಟಿದೆ. ಅವರ ಈ ವಿವರಣೆಗಳು, ಶಾಸ್ತ್ರೀಯ ರಾಜಕೀಯ-ಅರ್ಥಶಾಸ್ತ್ರ(classical Political Economy) ಎಂಬುದಕ್ಕಿಂತ ಭಿನ್ನವಾದ ಮತ್ತು ಮಾರ್ಕ್ಸ್ “ಒರಟು ಅರ್ಥಶಾಸ್ತ್ರ” (vulgar economics) ಎಂದು ಕರೆದಿದ್ದ ಒಂದು ವೈಜ್ಞಾನಿಕವಲ್ಲದ ಪರ್ಯಾಯ ಸೈದ್ಧಾಂತಿಕ ರಚನೆಯೊಳಕ್ಕೆ ಹೊಂದಿಕೊಳ್ಳುವಂತವುಗಳು ಮತ್ತು ಹೊಂದಿಸಿದವುಗಳು. ಇಂತಹ ಒಂದು ಒರಟು ಅರ್ಥಶಾಸ್ತ್ರ ಸಹ ಎಲ್ಲರ ಗಮನಕ್ಕೆ ಬರುವ ವಿದ್ಯಮಾನಗಳನ್ನು ಹೊಂದಿಸಿಕೊಳ್ಳಲು ತನ್ನದೇ ಆದ “ಒರಟು” ರೀತಿಯಲ್ಲಿ ವ್ಯವಸ್ಥಿತವಾಗಿ ಏಗಲು ಪ್ರಯತ್ನಿಸುತ್ತದೆ. ಅದನ್ನೂ ಸಹ ನಿಷ್ಠೆಯಿಂದ ಮಾಡದೆ, ಸಮಯಕ್ಕೆ ತಕ್ಕ ಹಾಗೆ ತನ್ನದೇ ಸಿದ್ಧಾಂತವನ್ನು ತುರುಕಿಸಿ ವಿವರಿಸಲು ಪ್ರಯತ್ನಿಸಿದಾಗ ಅದು ಇನ್ನೂ ಹೊಲಸಾಗಿ ಬಿಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಅರ್ಥಶಾಸ್ತ್ರವು “ಒರಟು” ಮಟ್ಟದಿಂದ “ಅಪ್ರಾಮಾಣಿಕ” ಮಟ್ಟಕ್ಕೆ ಇಳಿಯುತ್ತದೆ. ಅರ್ಥಶಾಸ್ತ್ರವು ಈ ರೀತಿಯಲ್ಲಿ ಅಧಃಪತನಗೊಳ್ಳುವುದು ನವ ಉದಾರವಾದಿ ಕಾಲದ ಒಂದು ಹೆಗ್ಗುರುತು. ಈ ಬಗ್ಗೆ ಕೇವಲ ಮೂರು ಉದಾಹರಣೆಗಳಿಗೆ ಮಾತ್ರ ನಾನು ಇಲ್ಲಿ ನನ್ನನ್ನು ಸೀಮಿತಗೊಳಿಸಿಕೊಳ್ಳುತ್ತೇನೆ.

ನನ್ನ ಮೊದಲ ಉದಾಹರಣೆ ಬಡತನಕ್ಕೆ ಸಂಬಂಧಿಸಿದೆ. ಬಡತನವೆಂದರೆ, ಭಾರತದ ಯೋಜನಾ ಆಯೋಗವು ಗ್ರಾಮೀಣ ಭಾರತದಲ್ಲಿ ಒಬ್ಬ ವ್ಯಕ್ತಿಯು ದಿನಕ್ಕೆ 2400 ಕ್ಯಾಲೋರಿ ಮಟ್ಟದ ಆಹಾರವನ್ನು ಪಡೆಯಲಾಗದ ಪರಿಸ್ಥಿತಿ (ಕಾರ್ಯತಃ ಆಯೋಗವು ಇನ್ನೂ ಕೆಳಗಿನ 2200 ಕ್ಯಾಲೋರಿ ಮಾನದಂಡವನ್ನು ಅನುಸರಿಸುತ್ತಿತ್ತು), ಮತ್ತು ನಗರ ಭಾರತದಲ್ಲಿ ಪ್ರತಿ ವ್ಯಕ್ತಿಯು ದಿನಕ್ಕೆ 2100 ಕ್ಯಾಲೋರಿ ಮಟ್ಟದ ಆಹಾರವನ್ನು ಪಡೆಯಲಾಗದ ಪರಿಸ್ಥಿತಿ ಎಂಬುದಾಗಿ 1973-74ರಲ್ಲಿ ವ್ಯಾಖ್ಯಾನಿಸಿತ್ತು. ಆಯೋಗವು ನಿರ್ದಿಷ್ಟಪಡಿಸಿದ ಈ ಅಂಕಿಅಂಶಗಳ ಬಗ್ಗೆ ತಕರಾರುಗಳಿವೆ. ಆದರೂ, ಬಡತನದ ಅನುಪಾತದ ಪ್ರವೃತ್ತಿಗಳನ್ನು ಅಂದಾಜು ಮಾಡಲು ರಾಷ್ಟ್ರೀಯ ಮಾದರಿ ಸಮೀಕ್ಷೆ(ಎನ್‌ಎಸ್‌ಎಸ್) ಸಂಸ್ಥೆಯ ಪಂಚವಾರ್ಷಿಕ ದೊಡ್ಡ ಮಾದರಿ ಸಮೀಕ್ಷೆಗಳು ಸಂಗ್ರಹಿಸಿದ ದತ್ತಾಂಶಗಳನ್ನು ವಸ್ತುನಿಷ್ಠವಾಗಿ ಬಳಸಬಹುದಾದ ಒಂದು ಮಾನದಂಡವನ್ನು ಕನಿಷ್ಟ ಪಕ್ಷ ಈ ಅಂಕಿಅಂಶಗಳು ಒದಗಿಸಿದವು. ಮತ್ತು, ಬಡತನದ ಈ ಅನುಪಾತವು ನವ ಉದಾರವಾದಿ ಆಳ್ವಿಕೆಯ 2011-12ರವರೆಗಿನ ಅವಧಿಯಲ್ಲಿ (ಮತ್ತು ಸರ್ಕಾರವು ಸಮೀಕ್ಷೆಯ ದತ್ತಾಂಶವನ್ನು ಬಚ್ಚಿಟ್ಟ 2017-18 ವರ್ಷದವರೆಗೂ), ಅಂದರೆ, ನವ ಉದಾರವಾದಿ ಅವಧಿಯಲ್ಲಿ ಎನ್‌ಎಸ್‌ಎಸ್ ನ ದೊಡ್ಡ ಮಾದರಿ ಸಮೀಕ್ಷೆಯ ದತ್ತಾಂಶಗಳು ಪೂರ್ಣವಾಗಿ ಲಭ್ಯವಿರುವ ವರೆಗೆ, ಏರುತ್ತ ಬಂದಿದೆ ಎಂಬುದನ್ನು ಸ್ಪಷ್ಟಪಡಿಸಿದವು.

ಬಡತನದ ಅಂದಾಜಿನಲ್ಲಿ ಅಪ್ರಾಮಾಣಿಕತೆ

ಬಡತನದ ಅಂದಾಜಿನ ಬಗ್ಗೆ ಯೋಜನಾ ಆಯೋಗವು ಮೊದಲಿಗೆ ವ್ಯಾಖ್ಯಾನಿಸಿದ್ದ ಕ್ಯಾಲೋರಿ ಮಾನದಂಡವನ್ನು ಕಾಲಾನಂತರ ಮತ್ತೊಂದು ವ್ಯಾಖ್ಯಾನದೊಂದಿಗೆ ಬದಲಾಯಿಸಿತು: ಕ್ಯಾಲೋರಿ ಮಾನದಂಡಗಳಿಗೆ ಅನುರೂಪವಾಗಿ, ಮೂಲ ವರ್ಷದ ತಲಾ ವೆಚ್ಚದ ಮಟ್ಟಗಳನ್ನು ನಿಗದಿಪಡಿಸಲಾಯಿತು ಮತ್ತು ಅವುಗಳನ್ನು ಗ್ರಾಮೀಣ ಮತ್ತು ನಗರ ಭಾರತದ “ಬಡತನ ರೇಖೆಗಳು” ಎಂದು ಕರೆಯಲಾಯಿತು. ಮೂಲ ವರ್ಷದ ಬಡತನದ ಈ ರೇಖೆಗಳನ್ನು ನಂತರದ ವರ್ಷಗಳಲ್ಲಿ ಗ್ರಾಹಕ ಬೆಲೆ ಸೂಚ್ಯಂಕವನ್ನು ಬಳಸಿಕೊಂಡು ಪ್ರತಿ ವರ್ಷವೂ ಪರಿಷ್ಕರಿಸಿ ಬಡತನದ ಹೊಸ ರೇಖೆಗಳನ್ನು ಗುರುತಿಸಲಾಯಿತು ಮತ್ತು ಬಡತನದ ಈ ಹೊಸ ರೇಖೆಗಳಿಗಿಂತ ಕೆಳಗಿರುವವರನ್ನು, ಬಡತನ-ರೇಖೆಯನ್ನು ಪರಿಷ್ಕರಿಸುವಾಗ ಅವರ ಆಹಾರ ಸೇವನೆಯ ಕ್ಯಾಲೊರಿ ಪ್ರಮಾಣವು ನಿರಂತರವಾಗಿ ಕುಸಿಯುತ್ತಿದ್ದುದು ಕಂಡುಬಂದರೂ ಸಹ, “ಬಡವರು” ಎಂದು ಪರಿಗಣಿಸಲಾಯಿತು. ಇದನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ಆಹಾರ ಸೇವನೆಯಲ್ಲಿ ಕ್ಯಾಲೊರಿಗಳ ಕುಸಿತವನ್ನು ಅನುಭವಿಸುತ್ತಿದ್ದ ಜನರನ್ನೂ ಸಹ ಬಡತನದಿಂದ ಮೇಲೆತ್ತಲ್ಪಟ್ಟವರು ಎಂದು ಪರಿಗಣಿಸಲಾಯಿತು. ಟೀಕೆ-ಟಿಪ್ಪಣಿಗಳ ಹೊರತಾಗಿಯೂ, ಕ್ಯಾಲೊರಿ ಸೇವನೆಯ ಕುಸಿತದ ಬಗ್ಗೆ ಕೊಂಚವೂ ತಲೆಕೆಡಿಸಿಕೊಳ್ಳದೆ ಮತ್ತು ಗ್ರಾಹಕ ಬೆಲೆ ಸೂಚ್ಯಂಕಗಳನ್ನು ಮಾತ್ರ ಬಳಸಿಕೊಂಡು ನವೀಕರಿಸಿದ ಬಡತನದ ರೇಖೆಯು ಸುಳ್ಳುಗಳಿಂದ ಕೂಡಿದ್ದರೂ ಸಹ ತಲಾ ವೆಚ್ಚದ ವಿಧಾನವನ್ನೇ ಮುಂದುವರಿಸಲಾಯಿತು.

ನೀತಿ ಆಯೋಗದ ಸದಸ್ಯರೊಂದಿಗೆ ಪ್ರಧಾನ ಮಂತ್ರಿಗಳು

ಜೀವನ ನಿರ್ವಹಣೆಯ ವೆಚ್ಚಗಳ ನೈಜ ಹೆಚ್ಚಳವನ್ನು ಗ್ರಾಹಕ ಬೆಲೆ ಸೂಚ್ಯಂಕದ ಅಂಕಿ-ಸಂಖ್ಯೆಗಳು ಖಂಡಿತವಾಗಿಯೂ ಕೀಳಂದಾಜು ಮಾಡುತ್ತಿದ್ದವು. ವಿಶ್ವ ಬ್ಯಾಂಕಿನ ಷಬಾಸ್‌ಗಿರಿ ಪಡೆದ ಮತ್ತು ನವ ಉದಾರವಾದದ ಬಗ್ಗೆ ಒಂದು ಸುಂದರ ಚಿತ್ರಣವನ್ನು ಕಟ್ಟಿಕೊಡಲು ನೆರವಾದ ಈ ಬದಲಾವಣೆಯ (ಅಂದರೆ, ಗ್ರಾಹಕ ಬೆಲೆ ಸೂಚ್ಯಂಕವನ್ನು ಬಳಸಿಕೊಂಡು ಬಡತನವನ್ನು ಅಂದಾಜು ಮಾಡುವ ಈ ಕಾರ್ಯವಿಧಾನ) ನಿವ್ವಳ ಫಲಿತಾಂಶವೇ ಇಂದು ನಾವು ಎದುರಿಸುತ್ತಿರುವ ಈ ಅಸಂಬದ್ಧತೆ: ವಿಶ್ವ ಹಸಿವು ಸೂಚ್ಯಂಕದ ಪಟ್ಟಿಯಲ್ಲಿರುವ 121 ದೇಶಗಳ ಪೈಕಿ ಭಾರತವು 107 ನೇ ಶ್ರೇಯಾಂಕದಲ್ಲಿದೆ (ಸಾಂಕ್ರಾಮಿಕ-ಪೂರ್ವ ವರ್ಷಗಳಲ್ಲಿಯೂ ಸಹ ಭಾರತವು 100 ನೇ ಶ್ರೇಯಾಂಕದ ಸಮೀಪದಲ್ಲೇ ಇತ್ತು). 1973-74ರಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಶೇ. 56.4 ಮತ್ತು ನಗರ ಪ್ರದೇಶಗಳಲ್ಲಿ ಶೇ. 49ರಷ್ಟಿದ್ದ ಬಡತನದ ಅನುಪಾತವನ್ನು 2011-12ರ ವೇಳೆಗೆ ಅನುಕ್ರಮವಾಗಿ ಶೇ. 25.7 ಮತ್ತು ಶೇ. 13.7ಕ್ಕೆ ಇಳಿಸಿರುವುದಾಗಿಯೂ ಮತ್ತು ಬಡತನದ ಈ ಇಳಿಕೆಯ ಪ್ರವೃತ್ತಿಯು ಮುಂದುವರೆಯುತ್ತಿದೆ ಎಂದೂ ಸರ್ಕಾರ ಹೇಳಿಕೊಳ್ಳುತ್ತದೆ.

ಅಧಿಕೃತ ಅರ್ಥಶಾಸ್ತ್ರಜ್ಞರು ಹೇಳುವುದೇನೆಂದರೆ, ಜನರ ಜೀವನ ಮಟ್ಟ ಉತ್ತಮಗೊಳ್ಳುತ್ತಿದ್ದಂತೆ, ಅವರು ಆಹಾರ ಧಾನ್ಯಗಳಿಗಾಗಿ ಮಾಡುವ ಖರ್ಚುಗಳು ಇಳಿಯುತ್ತವೆ. ಆಹಾರ ಸೇವನೆಗಾಗಿ ಅವರು ಮಾಡುವ ಖರ್ಚುಗಳಿಗಿಂತಲೂ ಹೆಚ್ಚಾಗಿ ಆರೋಗ್ಯ ರಕ್ಷಣೆ, ಮಕ್ಕಳ ಶಿಕ್ಷಣ ಮುಂತಾದವುಗಳಿಗೆ ಹೆಚ್ಚು ಹಣ ಖರ್ಚು ಮಾಡುತ್ತಾರೆ. ಹಾಗಾಗಿ, ಆಹಾರ ಸೇವನೆಯ ಕ್ಯಾಲೋರಿ ಕುಸಿತವು ಸುಧಾರಣೆಯನ್ನು ಸೂಚಿಸುತ್ತದೆ ಮತ್ತು ಜೀವನ ಮಟ್ಟ ಹದಗೆಡುವುದನ್ನಲ್ಲ ಎಂಬುದು ಅವರ ತರ್ಕ. ಅವರ ಈ ವಾದವನ್ನು ನಿಜ-ಜೀವನದ ಅನುಭವಗಳು ಸಂಪೂರ್ಣವಾಗಿ ಅಲ್ಲಗಳೆಯುತ್ತವೆ: ದೇಶದೊಳಗೆ ಮತ್ತು ದೇಶ ದೇಶಗಳಾದ್ಯಂತ, ತಲಾ ನೈಜ ಆದಾಯದ ಹೆಚ್ಚಳದೊಂದಿಗೆ ತಲಾ ಕ್ಯಾಲೊರಿ ಸೇವನೆಯೂ ಸಹ ನಿರಂತರವಾಗಿ ಹೆಚ್ಚುತ್ತದೆ. ಈ ಸಂಗತಿಯನ್ನು ನಾವು ನಿರ್ಲಕ್ಷಿಸೋಣ.

ವಿಷಯವೇನೆಂದರೆ, 2009-10ರ ಎನ್‌ಎಸ್‌ಎಸ್ ದೊಡ್ಡ ಮಾದರಿ ಸಮೀಕ್ಷೆಯ ಪ್ರಕಾರ, 2004-05ರ ಪರಿಸ್ಥಿತಿಗೆ ಹೋಲಿಸಿದರೆ, ಗ್ರಾಮೀಣ ಬಡತನದ ಅನುಪಾತ ಹೆಚ್ಚುತ್ತಿದೆ ಎಂಬುದು ಬಯಲಾಯಿತು. ಸರ್ಕಾರದ ಅಧಿಕೃತ ಅಂದಾಜಿನ ಪ್ರಕಾರ, 2004-05ರಲ್ಲಿದ್ದ ಶೇ. 28.3ರ ಬಡತನದ ಅನುಪಾತಕ್ಕೆ ಹೋಲಿಸಿದರೆ, 2009-10ರಲ್ಲಿ ಅದು ಶೇ. 33.8ಕ್ಕೆ ಏರಿಕೆಯಾಗಿತ್ತು (ಕ್ಯಾಲೋರಿ ಸೇವನೆಯ ಮಾನದಂಡದ ಪ್ರಕಾರವೂ ಈ ಏರಿಕೆಯು ಶೇ. 69.5ರಿಂದ ಶೇ. 75.5ಕ್ಕೆ ಏರಿತ್ತು). ಆದ್ದರಿಂದ, ಸರ್ಕಾರವು 2009-10 ವರ್ಷವು ಒಂದು ಬರ ಪೀಡಿತ ವರ್ಷವಾಗಿತ್ತು ಎಂಬ ನೆಪದಲ್ಲಿ ಒಂದು ಹೊಸ ದೊಡ್ಡ ಮಾದರಿ ಸಮೀಕ್ಷೆಯನ್ನು ಕೈಗೊಳ್ಳುವಂತೆ ಆದೇಶಿಸಿತು. ಈ ಹೊಸ ಸಮೀಕ್ಷೆಯನ್ನು 2011-12 ರಲ್ಲಿ ಸೂಕ್ತವಾಗಿ ನಡೆಸಲಾಯಿತು. 2011-12 ವರ್ಷವು ಒಂದು ಉತ್ತಮ ಬೆಳೆ ವರ್ಷವಾಗಿತ್ತು. ವಿಪರ್ಯಾಸವೆಂದರೆ, 2009-10 ವರ್ಷವೇನೂ ಕಳಪೆ ಬೆಳವಣಿಗೆಯ ವರ್ಷವಾಗಿರಲಿಲ್ಲ: ಈ 2009-10 ವರ್ಷದಲ್ಲಿ, ಮೂಲಾಂಶ ಬೆಲೆ ಮಟ್ಟದಲ್ಲಿ (at factor cost) ಜಿಡಿಪಿಗೆ ಸೇರ್ಪಡೆಯಾದ ಒಟ್ಟು ಮೌಲ್ಯವು ಶೇ. 8.6ರ ಬೆಳವಣಿಗೆಯನ್ನು ಕಂಡಿತ್ತು ಮತ್ತು “ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳು” ವಿಭಾಗದಲ್ಲಿ ಶೇ. 1.5ರ ಬೆಳವಣಿಗೆಯನ್ನು ಕಂಡಿತ್ತು!

ಹೊಸ ಸಮೀಕ್ಷೆಯನ್ನು ಕೈಗೊಳ್ಳುವಂತೆ ಆದೇಶ ಮಾಡುವಲ್ಲಿ, ಕೆಳ ಮಟ್ಟದ ಆದಾಯವು ಕ್ಯಾಲೊರಿ ಸೇವನೆಯ ಪ್ರಮಾಣವನ್ನು ತಗ್ಗಿಸುತ್ತದೆ ಎಂಬುದನ್ನು ಸರ್ಕಾರವು ಸತ್ಯಾಂಶಗಳನ್ನು ಪರಿಶೀಲಿಸುವ ಮೂಲಕ ಒಪ್ಪಿಕೊಂಡಿತ್ತು. ಆದರೆ, ಈ ವಾದಕ್ಕೆ ತದ್ವಿರುದ್ಧವಾಗಿ, ಉನ್ನತ ಮಟ್ಟದ ಆದಾಯವು ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡುತ್ತದೆ ಎಂಬುದಾಗಿ ವ್ಯಕ್ತಪಡಿಸಿದ ಅಧಿಕೃತ ಅರ್ಥಶಾಸ್ತ್ರಜ್ಞರ ನಿಲುವನ್ನು ಅದು ಉದ್ದಕ್ಕೂ ಸಮರ್ಥಿಸಿಕೊಳ್ಳುತ್ತಲೇ ಬಂತು. ಮೇಲ್ನೋಟದಲ್ಲೇ ವಿರುದ್ಧವಾಗಿ ಕಾಣುವ ಈ ಎರಡು ಹೇಳಿಕೆಗಳನ್ನು ಸಮನ್ವಯಗೊಳಿಸುವ ಪ್ರಯತ್ನವನ್ನು ಸರ್ಕಾರ ಮಾಡಲೇ ಇಲ್ಲ. ಈ ಒಂದೊಂದು ಹೇಳಿಕೆಯನ್ನೂ ತನಗೆ ಅನುಕೂಲವಾಗುವ ಸಂದರ್ಭಗಳಲ್ಲಿ ಅಂಗೀಕರಿಸಿದ ಸರ್ಕಾರದ ಈ ಸಮಯಸಾಧಕತನದಲ್ಲಿ ನವ ಉದಾರವಾದಿ ಅವಧಿಯ ಅರ್ಥಶಾಸ್ತ್ರದ ಅಪ್ರಾಮಾಣಿಕತೆ ಅಡಗಿದೆ.

ಡಬ್ಲ್ಯುಟಿಒ ದ ಸಬ್ಸಿಡಿ ಅಪ್ರಾಮಾಣಿಕತೆ

ನನ್ನ ಎರಡನೆಯ ಉದಾಹರಣೆಯು ವಿಶ್ವ ವ್ಯಾಪಾರ ಸಂಘಟನೆಯ ಅಪ್ರಾಮಾಣಿಕತೆಗೆ ಸಂಬಂಧಿಸುತ್ತದೆ. ಈ ವಿಶ್ವ ವ್ಯಾಪಾರ ಸಂಘಟನೆಯು ದೇಶ ದೇಶಗಳ ಸರ್ಕಾರಗಳು ತಮ್ಮ ಕೃಷಿಕರಿಗೆ ಒದಗಿಸುವ ಸಬ್ಸಿಡಿಗಳ ನಡುವೆ “ಮಾರುಕಟ್ಟೆ-ವಿರೂಪಗೊಳಿಸುವ” ಸಬ್ಸಿಡಿಗಳು ಮತ್ತು “ಮಾರುಕಟ್ಟೆ-ವಿರೂಪಗೊಳಿಸದ” ಸಬ್ಸಿಡಿಗಳು ಎಂಬ ಭಿನ್ನೀಕರಿಸುತ್ತದೆ. ಯುಎಸ್ ಮತ್ತು ಐರೋಪ್ಯ ಒಕ್ಕೂಟದ ಮುಂದುವರಿದ ದೇಶಗಳು ತಮ್ಮ ಕೃಷಿ ವಲಯಕ್ಕೆ ನೀಡುವ ನೇರ ನಗದು ವರ್ಗಾವಣೆಗಳನ್ನು ಮಾರುಕಟ್ಟೆ-ವಿರೂಪಗೊಳಿಸದ ಸಬ್ಸಿಡಿಗಳು ಎಂದು ಪರಿಗಣಿಸುತ್ತದೆ ಮತ್ತು ಯಾವ ಆಕ್ಷೇಪವೂ ಇಲ್ಲದೆ ಈ ಸಬ್ಸಿಡಿಗಳನ್ನು ಅನುಮೋದಿಸುತ್ತದೆ. ಆದರೆ, ಭಾರತದಂತಹ ಮೂರನೇ ಜಗತ್ತಿನ ದೇಶಗಳು ರೈತರಿಗೆ ನೀಡುವ ಬೆಲೆ ಬೆಂಬಲ ರೂಪದ ಸಬ್ಸಿಡಿಯನ್ನು ಮತ್ತು ಬೀಜ, ರಸ ಗೊಬ್ಬರ ಮುಂತಾದ ಪರಿಕರಗಳಿಗೆ ಕೊಡುವ ಸಬ್ಸಿಡಿಗಳನ್ನು ಮಾರುಕಟ್ಟೆ-ವಿರೂಪಗೊಳಿಸುವ ಸಬ್ಸಿಡಿಗಳು ಎಂದು ಪರಿಗಣಿಸಿ ಈ ಸಬ್ಸಿಡಿಗಳನ್ನು ಒಂದು ನಿರ್ದಿಷ್ಟಪಡಿಸಿದ ಮಿತಿಗೆ ಒಳಪಡಿಸುತ್ತದೆ. ತನ್ನ ಸಣ್ಣ ಸಂಖ್ಯೆಯ ಕೃಷಿಕರಿಗೆ ನಗದು ವರ್ಗಾವಣೆಯ ರೂಪದಲ್ಲಿ ಯುಎಸ್ ವಾರ್ಷಿಕವಾಗಿ 100 ಬಿಲಿಯನ್ ಡಾಲರ್ ಸಬ್ಸಿಡಿಯನ್ನು ನೀಡುತ್ತದೆ. ಈ ಬಗ್ಗೆ ವಿಶ್ವ ವ್ಯಾಪಾರ ಸಂಘಟನೆಗೆ ಯಾವ ಆಕ್ಷೇಪಣೆಯೂ ಇಲ್ಲ. ಆದರೆ, ಭಾರತದ ರೈತ ಕೃಷಿಯನ್ನು ಕಾರ್ಯಸಾಧ್ಯವಾಗುವಂತೆ ಮಾಡುವುದು ಮಾತ್ರವಲ್ಲದೆ ಬಡವರಿಗೆ ನೆರವಾಗುವ ಸಾರ್ವಜನಿಕ ಧಾನ್ಯ ವಿತರಣಾ ವ್ಯವಸ್ಥೆಯ ನಿರ್ವಹಣೆಗೂ ಸಹ ಅತ್ಯಗತ್ಯವಾಗಿರುವ ಧಾನ್ಯ ಖರೀದಿ ವ್ಯವಸ್ಥೆಯ ಬಗ್ಗೆ ವಿಶ್ವ ವ್ಯಾಪಾರ ಸಂಘಟನೆಯು ನಿರಂತರವಾಗಿ ಭಾರತವನ್ನು ಪ್ರಶ್ನಿಸುತ್ತಲೇ ಇದೆ.

ಈ ಭಿನ್ನತೆಗೆ ಕಾರಣವೆಂದರೆ, ಬೆಳೆಗಳ ಬೆಲೆ ನಿಗದಿಯ ಮಾರ್ಗವಾಗಿ ಕೃಷಿಗೆ ನೀಡುವ ಸಬ್ಸಿಡಿಯು ಉತ್ಪಾದನೆಯ ಮಟ್ಟವನ್ನು ಪ್ರಭಾವಿಸುವುದರಿಂದ ಮಾರುಕಟ್ಟೆಯ ಸಮತೋಲ ಬದಲಾಗುತ್ತದೆ; ಆದರೆ, ನೇರ ನಗದು ಸಬ್ಸಿಡಿಗಳನ್ನು ನೀಡಿದಾಗ ಮಾರುಕಟ್ಟೆಯ ಸಮತೋಲದ ಪರಿಸ್ಥಿತಿ ಬದಲಾಗುವುದಿಲ್ಲ ಎಂಬ ಭಾವನೆಯೇ. ಮಾರುಕಟ್ಟೆಯ ಸಮತೋಲವು ಅರ್ಥವ್ಯವಸ್ಥೆಯಲ್ಲಿ ಸಂಪನ್ಮೂಲಗಳ ಅತ್ಯುತ್ತಮ ಬಳಕೆಯನ್ನು ಒಳಗೊಂಡಿರುವುದರಿಂದ, ಸರ್ಕಾರವು ನೇರ ಹಣ ವರ್ಗಾವಣೆಯ ಮಾರ್ಗವಾಗಿ ಬೆಂಬಲ ಕೊಡುವ ಕ್ರಮಕ್ಕೆ ಆದ್ಯತೆ ನೀಡುತ್ತದೆ. ಏಕೆಂದರೆ, ಈ ಕ್ರಮವು, ಮಾರುಕಟ್ಟೆಯ ಸಮತೋಲಕ್ಕೆ ಭಂಗ ತರುವುದಿಲ್ಲ ಮತ್ತು ಮಾರುಕಟ್ಟೆಗೆ ಎಷ್ಟು ಬೇಕೊ ಅಷ್ಟು ಉತ್ಪಾದನೆಯಾಗುವಂತೆ ನೋಡಿಕೊಳ್ಳುತ್ತದೆ.

ಸಬ್ಸಿಡಿಗಳ ಈ ಭಿನ್ನತೆಯು ಸಂಪೂರ್ಣವಾಗಿ ಅಪ್ರಾಮಾಣಿಕವಾದುದು. ಈ ಭಿನ್ನತೆಯನ್ನು ಸೈದ್ಧಾಂತಿಕವಾಗಿ ನಿರೂಪಿಸುವುದು ಸಾಧ್ಯವಿಲ್ಲ ಎಂಬ ಅಂಶದ ಹೊರತಾಗಿಯೂ, ನೇರ ನಗದು ವರ್ಗಾವಣೆಗಳೂ ಸಹ ಉತ್ಪಾದನೆಯ ಮಟ್ಟದ ಮೇಲೆ ಪರಿಣಾಮ ಬೀರುತ್ತವೆ. ಅಮೆರಿಕಾದಲ್ಲಿ ಗೋಧಿ ಮತ್ತು ಹತ್ತಿಯಂತಹ ಕೆಲವು ಬೆಳೆಗಳು ಅನೇಕ ವರ್ಷಗಳಲ್ಲಿ ಸೇರಿಸಿದ್ದ ಮೌಲ್ಯವು ನಕಾರಾತ್ಮಕವಾಗಿತ್ತು. ಅಂದರೆ, ಉತ್ಪಾದನೆಗಾಗಿ ಖರ್ಚು ಮಾಡಿದ ಪದಾರ್ಥಗಳ ಮೌಲ್ಯವು ಫಸಲಿನ (ಬೆಳೆ ಉತ್ಪಾದನೆಯ) ಮೌಲ್ಯವನ್ನು ಮೀರಿತ್ತು ಎಂಬ ವಿಷಯವು ಎಲ್ಲರಿಗೂ ತಿಳಿದದ್ದೇ. ಅಂತಹ ಸಂದರ್ಭಗಳಲ್ಲಿ ಮಾರುಕಟ್ಟೆ ಸಮತೋಲದ ದೃಷ್ಟಿಯಲ್ಲಿ ಉತ್ಪಾದನೆಯು ಶೂನ್ಯವಾಗಿರಬೇಕಾಗುತ್ತದೆ. ಆದರೆ, ಆ ಸಂದರ್ಭದಲ್ಲಿಯೂ ಉತ್ಪಾದನೆಯು ಸಕಾರಾತ್ಮಕವಾಗಿತ್ತು, ಏಕೆಂದರೆ, ಕೃಷಿಕರ ಕಸುಬನ್ನು ಕಾರ್ಯಸಾಧ್ಯವಾಗಿ ಉಳಿಯುವಂತೆ ನೋಡಿಕೊಳ್ಳುವ ಉದ್ದೇಶದಿಂದ ಅವರಿಗೆ ಸಬ್ಸಿಡಿಯನ್ನು ನೇರ ಹಣ ವರ್ಗಾವಣೆಯ ಮೂಲಕ ಒದಗಿಸಲಾಗಿತ್ತು. ಈ ವಿದ್ಯಮಾನವು ಸಬ್ಸಿಡಿಗಳು ಉತ್ಪಾದನೆಯನ್ನು ಪ್ರಭಾವಿಸುತ್ತವೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಹಾಗಾಗಿ, ನೇರ ನಗದು ವರ್ಗಾವಣೆಗಳು ಮಾರುಕಟ್ಟೆಯನ್ನು ವಿರೂಪಗೊಳಿಸುವುದಿಲ್ಲ ಎಂಬ ವಾದವು ಸಂಪೂರ್ಣವಾಗಿ ಆಧಾರರಹಿತವಾಗಿದೆ. ಆದ್ದರಿಂದ, ನೇರ ನಗದು ವರ್ಗಾವಣೆಗಳ ಬಗ್ಗೆ ವಿಶ್ವ ವ್ಯಾಪಾರ ಸಂಘಟನೆಯ ವ್ಯಾಖ್ಯಾನವು ತಪ್ಪು ಮಾತ್ರವಲ್ಲ, ಸಮಯಸಾಧಕವೂ ಹೌದು. ಮುಂದುವರಿದ ದೇಶಗಳ ಹಿತಾಸಕ್ತಿಗಳನ್ನು ಕಾಪಾಡುವ ಉದ್ದೇಶದಿಂದ ಅವುಗಳು ನೇರ ನಗದು ವರ್ಗಾವಣೆಗಳ ಮೂಲಕ ಒದಗಿಸುವ ಕೃಷಿ ಸಬ್ಸಿಡಿಗಳ ಬಗ್ಗೆ ಕಣ್ಣು ಮುಚ್ಚಿಕೊಳ್ಳುವ ವಿಶ್ವ ವ್ಯಾಪಾರ ಸಂಘಟನೆಯು ಭಾರತದಂತಹ ದೇಶಗಳು ನೀಡುವ ಕೃಷಿ ಸಬ್ಸಿಡಿಗಳ ಬಗ್ಗೆ ಮುಗಿಬೀಳುತ್ತದೆ.

ಎಂಎಸ್‌ಪಿ ರದ್ದು ಮಾಡುವ ಅಪ್ರಾಮಾಣಿಕತೆ

ನನ್ನ ಮೂರನೆಯ ಉದಾಹರಣೆಯನ್ನು ಭಾರತ ಸರ್ಕಾರದ ಕೃಷಿ ನೀತಿಯಿಂದ ತೆಗೆದುಕೊಳ್ಳಲಾಗಿದೆ. ದೀರ್ಘಕಾಲದಿಂದಲೂ ಜಾರಿಯಲ್ಲಿರುವ, ಆಹಾರ ಧಾನ್ಯಗಳಿಗೆ ಒದಗಿಸುತ್ತಿರುವ ಕನಿಷ್ಠ ಬೆಂಬಲ ಬೆಲೆ ಪದ್ಧತಿಯನ್ನು ತೆಗೆದುಹಾಕಬೇಕೆಂದು ಸಮರ್ಥಿಸುವ ವಾದವೇನೆಂದರೆ, ಈ ಕ್ರಮವು ರೈತರು ಇತರ ಹೆಚ್ಚು ಲಾಭದಾಯಕ ಬೆಳೆಗಳತ್ತ ಹೊರಳುವ ಬದಲು, ಆಹಾರ ಧಾನ್ಯಗಳ ಉತ್ಪಾದನೆಯನ್ನೇ ಮುಂದುವರಿಸಲು ಪ್ರೋತ್ಸಾಹಿಸುತ್ತದೆ ಎಂಬುದು. ತೀವ್ರ ಹಸಿವಿನಿಂದ ಬಳಲುತ್ತಿರುವ ಭಾರತದಂತಹ ದೇಶದಲ್ಲಿ ಆಹಾರ ಧಾನ್ಯಗಳ ಉತ್ಪಾದನೆಯಿಂದ ವಿಮುಖವಾಗುವುದು ಖಂಡಿತವಾಗಿಯೂ ಅಸಂಬದ್ಧವೇ. ಆಹಾರ ಧಾನ್ಯಗಳಿಗೆ ಬೇಡಿಕೆ ಅಸಮರ್ಪಕವಾಗಿರುವ ಕಾರಣದಿಂದ ಸರ್ಕಾರದ ಬಳಿ ಆಹಾರಧಾನ್ಯಗಳ ದಾಸ್ತಾನು-ಸಂಗ್ರಹವು ತುಂಬಿ ತುಳುಕುತ್ತಿದ್ದರೆ, ಆಗ, ಆಹಾರ ಧಾನ್ಯಗಳ ಉತ್ಪಾದನೆಯನ್ನು ಕಡಿತಗೊಳಿಸುವುದು ಪರಿಹಾರವಲ್ಲ. ಬದಲಿಗೆ, ಜನರ ಕೈಯಲ್ಲಿ ಕೊಳ್ಳುವ ಶಕ್ತಿಯನ್ನು ತುಂಬುವುದೇ ಸರಿಯಾದ ಪರಿಹಾರ. ಇದನ್ನು ನಾವು ಸದ್ಯಕ್ಕೆ ನಿರ್ಲಕ್ಷಿಸೋಣ.

ಆಹಾರಧಾನ್ಯಗಳಿಗೆ ಬದಲಾಗಿ ಇತರ ಬೆಳೆಗಳ ಉತ್ಪಾದನೆಯತ್ತ ರೈತರು ಹೊರಳಿದರೆ, ಆಗ, ಇತರ ಬೆಳೆಗಳ ಉನ್ನತ ಮಟ್ಟದ ಲಾಭದಾಯಕತೆಯು ಕಾರಣದಿಂದ ರೈತರಿಗೆ ತಕ್ಷಣವೇ ಪ್ರಯೋಜನವಾಗುತ್ತದೆ, ನಿಜ. ಆದರೆ, ಇತರ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆಯನ್ನು ಜಾರಿಗೆ ತರದ ಹೊರತು, ಕಾಲಾನಂತರದಲ್ಲಿ ಬೆಲೆಗಳ ಕುಸಿತ ಉಂಟಾದಾಗ ರೈತರು ನಾಶವಾಗುತ್ತಾರೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಆಹಾರಧಾನ್ಯಗಳ ಉತ್ಪಾದನೆಯಿಂದ ಹೊರಳಿ ಇತರ ಬೆಳೆಗಳ ಉತ್ಪಾದನೆಯತ್ತ ಬದಲಾಗಬೇಕು ಎಂಬ ವಾದವು ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆಯನ್ನು ಹೊಂದಿರಬೇಕು ಎಂಬ ವಾದಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ರೈತರು ಆಹಾರ ಧಾನ್ಯಗಳ ಉತ್ಪಾದನೆಯಿಂದ ಹೊರಳಬೇಕೆಂದು ಸರ್ಕಾರವು ಒಂದು ವೇಳೆ ಬಯಸಿದರೆ, ಆಗ, ಇತರ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ ಕೊಡಲು ಮುಂದಾಗಬೇಕಾಗುತ್ತದೆ ಮತ್ತು ರೈತರನ್ನು ಪ್ರೇರೇಪಿಸುವ ರೀತಿಯಲ್ಲಿ ಕನಿಷ್ಠ ಬೆಂಬಲ ಬೆಲೆಗಳಲ್ಲಿ ಕೈಚಳಕ ಮಾಡಿಯೇ ಅವರನ್ನು ಇತರ ಬೆಳೆಗಳಿಗೆ ಬದಲಾಗುವಂತೆ ಮಾಡಬೇಕಾಗುತ್ತದೆ. ಆಹಾರ ಧಾನ್ಯಗಳಲ್ಲದ ಇತರ ಬೆಳೆಗಳಿಗೆ ಹೊರಳುವಂತೆ ರೈತರ ಮನವೊಲಿಸುವ ಸಲುವಾಗಿ ಈಗಾಗಲೇ ಜಾರಿಯಲ್ಲಿರುವ ಆಹಾರ ಧಾನ್ಯಗಳ ಮೇಲಿನ ಕನಿಷ್ಠ ಬೆಂಬಲ ಬೆಲೆ ಪದ್ಧತಿಯನ್ನು ರದ್ದು ಮಾಡುವುದು ತಪ್ಪು ಮಾರ್ಗವಾಗುತ್ತದೆ. ಇದು ತಪ್ಪು ಮಾತ್ರವಲ್ಲ, ಇದು ಸಮಯಸಾಧಕತನವೂ ಹೌದು. ಏಕೆಂದರೆ, ಬೆಲೆ ಬೆಂಬಲವನ್ನು ತೆಗೆದುಹಾಕುವುದರಿಂದ ರೈತರು ಮೊದಲಿಗಿಂತ ಉತ್ತಮ ಸ್ಥಿತಿಯಲ್ಲಿರುತ್ತಾರೆ ಎಂಬ ಒಂದು ಸಂಪೂರ್ಣ ಮತ್ತು ಉದ್ದೇಶಪೂರ್ವಕ ಸುಳ್ಳು ಪ್ರತಿಪಾದನೆಯ ಮೇಲೆ ರೈತರಿಗೆ ಕೊಡುವ ಬೆಲೆ ಬೆಂಬಲವನ್ನು ತೆಗೆದುಹಾಕುವ ವಿಶ್ವ ವ್ಯಾಪಾರ ಸಂಘಟನೆಯ ಕಾರ್ಯಸೂಚಿಯನ್ನು ಮುಂದೊಯ್ಯುತ್ತದೆ. ವಾಸ್ತವವಾಗಿ, ಬೆಲೆ ಬೆಂಬಲವನ್ನು ತೆಗೆದು ಹಾಕಿದಾಗ ಒಂದು ವೇಳೆ ರೈತರು ತಕ್ಷಣವೇ ಲಾಭ ಪಡೆದರೂ ಸಹ, ನಂತರ ಅವರು ನಷ್ಟದ ತೀವ್ರ ಅಪಾಯಕ್ಕೆ ಒಡ್ಡಿಕೊಳ್ಳುತ್ತಾರೆ.

ಅರ್ಥಶಾಸ್ತ್ರದ ಹೆಸರಿನಲ್ಲಿ ತನ್ನ ಕಾರ್ಯಸೂಚಿಯನ್ನು ಉತ್ತೇಜಿಸುವ ಸಲುವಾಗಿ ನಿಷ್ಪಕ್ಷಪಾತರಲ್ಲದ ಅರ್ಥಶಾಸ್ತ್ರಜ್ಞರ ಒಂದು ಸೈನ್ಯವನ್ನೇ ಬಳಸುವ ನವ ಉದಾರವಾದಿ ಯುಗದಲ್ಲಿ ಅಪ್ರಾಮಾಣಿಕತೆಯು ಖಂಡಿತವಾಗಿಯೂ ಅದರ ಒಂದು ಹೆಗ್ಗುರುತೇ…

Donate Janashakthi Media

Leave a Reply

Your email address will not be published. Required fields are marked *