ಅಮಾನುಲ್ಲ ಖಾನ್
ಅನು: ಎಸ್.ಕೆ.ಗೀತಾ
ಭಾರತದಲ್ಲಿ ಒಂದು ಸಾರ್ವತ್ರಿಕ ಸಾಮಾಜಿಕ ಸುರಕ್ಷಾ ಜಾಲವನ್ನು ರಚಿಸಬೇಕೆಂಬ ದೀರ್ಘಕಾಲದ ಬೇಡಿಕೆಯ ಹಿನ್ನೆಲೆಯಲ್ಲಿ ಹಿರಿಯ ನಾಗರಿಕರಿಗೆ ಆರೋಗ್ಯವಿಮೆಯ ಯೋಜನೆಯನ್ನು ಕೇಂದ್ರ ಸರಕಾರ ಪ್ರಕಟಿಸಿದೆ. ಇದಕ್ಕೆ ಮೊದಲು ಸರಕಾರೀ ನೌಕರರಿಗೆ ನಿಶ್ಚಿತ ಪಿಂಚಣಿಯ ಯುಪಿಎಸ್ ಎಂಬುದನ್ನು ಎನ್ಪಿಎಸ್ ವಿರುದ್ಧ ಸರಕಾರೀ ನೌಕರರ ದೀರ್ಘ ಹೋರಾಟದ ಪರಿಣಾಮವಾಗಿ ಪ್ರಕಟಿಸಲಾಗಿದೆ. ಇವು ದೇಶದ ನಾಗರೀಕರ ಕೆಲವು ಆರ್ಥಿಕ ಬೇಡಿಕೆಗಳನ್ನು ತೀವ್ರವಾಗಿ ಮುನ್ನೆಲೆಗೆ ತಂದಿವೆ. ದೇಶದ ಸಂವಿಧಾನವು ನಾಗರೀಕರಿಗೆ ಹಲವು ಮೂಲಭೂತ ರಾಜಕೀಯ ಹಕ್ಕುಗಳನ್ನು ನೀಡಿದೆ. ಆರ್ಥಿಕ ಹಕ್ಕುಗಳನ್ನಲ್ಲ. ಆದರೆ ಈಗ ನಾಗರಿಕರು ಮೂಲಭೂತ ಆರ್ಥಿಕ ಹಕ್ಕುಗಳ ಬೇಡಿಕೆಯನ್ನು ಮುಂದೊಡ್ಡುವ ಕಾಲ ಬಂದಿದೆ.
ಸಾಮಾಜಿಕ ಸುರಕ್ಷೆ ಕುರಿತಾಗಿ ಕೇಂದ್ರ ಸರ್ಕಾರವು ಇತ್ತೀಚೆಗೆ ಎರಡು ನಿರ್ಧಾರಗಳನ್ನು ತೆಗೆದುಕೊಂಡಿದೆ. ಅದು ಸರ್ಕಾರಿ ನೌಕರರಿಗಾಗಿ ಒಂದು ಏಕೀಕೃತ ನಿವೃತ್ತಿ ವೇತನ ಯೋಜನೆ (ಯುಪಿಎಸ್) ಯನ್ನು ಪ್ರಕಟಿಸಿದೆ. ಈ ಯೋಜನೆಯ ಸಂಪೂರ್ಣ ಮಾಹಿತಿ ಇನ್ನೂ ಹೊರಬಂದಿಲ್ಲ. ಲಭ್ಯವಿರುವ ಮಾಹಿತಿಯ ಪ್ರಕಾರ ಈ ಯೋಜನೆಯಡಿ ಸರ್ಕಾರಿ ನೌಕರರಿಗೆ ಸೇವಾವಧಿಯ ಕೊನೆಯ ಹನ್ನೆರಡು ತಿಂಗಳ ಸರಾಸರಿ ಒಟ್ಟು ಮೂಲ ವೇತನದ ಶೇ 50 ರಷ್ಟು ಮತ್ತು ಅದರ ಮೇಲೆ ಅನ್ವಯಿಕ ತುಟ್ಟಿ ಭತ್ಯೆ ಸೇರಿಸಿ ಖಚಿತವಾದ ನಿವೃತ್ತಿವೇತನ ನೀಡುವ ಭರವಸೆಯಿದೆ, ಇದಲ್ಲದೆ ಕನಿಷ್ಟ 10000 ರೂ.ಗಳ ನಿವೃತ್ತಿ ವೇತನದ ಭರವಸೆಯಿದೆ. 25 ವರ್ಷಗಳ ಸೇವೆ ಸಲ್ಲಿಸಿದ ನಂತರ ಉದ್ಯೋಗಿಗಳು ಈ ನಿವೃತ್ತಿ ವೇತನಕ್ಕೆ ಅರ್ಹರಾಗುತ್ತಾರೆ.
ನಿವೃತ್ತಿದಾರರ ಮರಣದ ನಂತರ ಮೂಲ ಪಿಂಚಣಿಯ ಶೇ 60 ರಷ್ಟನ್ನು ಕೌಟುಂಬಿಕ ಪಿಂಚಣಿಯಾಗಿ ನೀಡಲಾಗುವುದು. ಪಿಂಚಣಿಯಲ್ಲಿ ಒಂದು ಭಾಗದ ಮೊತ್ತವನ್ನು ಆರಂಭದಲ್ಲೇ ಪಡೆಯುವ ಕಮ್ಯುಟೇಷನ್ ಅವಕಾಶವಿಲ್ಲ, ಬದಲಿಗೆ ಸಣ್ಣ ಮೊತ್ತವೊಂದನ್ನು ನೀಡಲಾಗುವುದತ್ತಿದನ್ನು ನಿವೃತ್ತಿ ವಏತನದಲ್ಲಿ ಕಳೆಯಲಾಗುವದಿಲ್ಲ. ನೌಕರರು ತಮ್ಮ ಮೂಲವೇತನದ ಶೇ 10 ರಷ್ಟು ದೇಣಿಗೆ ನೀಡಿದರೆ ಸರ್ಕಾರವು ಮೂಲ ವೇತನ ಮತ್ತು ತುಟ್ಟಿ ಭತ್ಯೆಯ ಶೇ 18.5 ರಷ್ಟನ್ನು ದೇಣಿಗೆಯಾಗಿ ನೀಡುತ್ತದೆ. ಈಗಿರುವ ರಾಷ್ಟ್ರೀಯ ಪಿಂಚಣಿ ಯೋಜನೆ ( ಎನ್ಪಿಎಸ್)ಯಿಂದ ಈ ಏಕೀಕೃತ ಪಿಂಚಣಿ ಯೋಜನೆ(ಯುಪಿಎಸ್)ಗೆ ಬದಲಾವಣೆ ಮಾಡಿಕೊಳ್ಳಲು ಅವಕಾಶವಿದೆ.
ಪ್ರಸ್ತುತ ಪರಿಸ್ಥಿತಿಯಲ್ಲಿ ತರಬಹುದಾಗಿದ್ದ ಅತ್ಯುತ್ತಮ ಮತ್ತು ಆಕರ್ಷಕ ಯೋಜನೆ ಇದೆಂದು ಸರ್ಕಾರವು ಪ್ರಚಾರ ಮಾಡುತ್ತಿದೆ. ಸರ್ಕಾರವು ಈ ಮೊದಲೇ ಕೈಗೊಂಡಿದ್ದ ಸುಧಾರಣೆಗಳನ್ನು ಕೈಬಿಡದೆ ಇಂತಹದೊಂದು ಯೋಜನೆಯನ್ನು ರೂಪಿಸಿದ್ದಕ್ಕಾಗಿ ಪ್ರಮುಖ ಉದ್ಯಮಿಗಳು ಮತ್ತು ವಾಣಿಜ್ಯ ಮಂಡಳಿಗಳ ನಾಯಕರು ಹಾಗೂ ನವ ಉದಾರವಾದಿ ಅರ್ಥಶಾಸ್ತ್ರಜ್ಞರು ಸರ್ಕಾರವನ್ನು ಕೊಂಡಾಡುತ್ತಿದ್ದಾರೆ. ಆದರೆ ಕಾರ್ಮಿಕ ಸಂಘಟನೆಗಳು ಇದನ್ನು ತಿರಸ್ಕರಿಸಿವೆ. ಈ ಯೋಜನೆಯು ತಮ್ಮ ಆಶೋತ್ತರಗಳ ಸಮೀಪಕ್ಕೂ ಬರುವುದಿಲ್ಲ್ಲ, ಹಾಗಾಗಿ ದೇಣಿಗೆ-ರಹಿತ ಹಳೆ ಪಿಂಚಣಿ ಯೋಜನೆ(ಒಪಿಎಸ್)ಗಾಗಿ ತಮ್ಮ ಹೋರಾಟ ಮುಂದುವರೆಸುವುದಾಗಿ ತಿಳಿಸಿವೆ. ಅವರ ಈ ಬೇಡಿಕೆ ನ್ಯಾಯಯುತವಾಗಿದೆ. ಪಿಂಚಣಿಯೆಂಬುದು ಯಾರ ದಯಾ ಭಿಕ್ಷೆಯೂ ಅಲ್ಲ. ಅದು ಸೇವಾವಧಿಯಲ್ಲಿ ದುಡಿದು ಗಳಿಸಿದ ಮುಂದೂಡಲ್ಪಟ್ಟ ವೇತನ.
ಹಳೆ ಪಿಂಚಣಿ ಯೋಜನೆಯನ್ನು ಪುನರ್ ಸ್ಥಾಪಿಸಬೇಕೆಂದು ಸರ್ಕಾರಿ ನೌಕರರು ಕಳೆದೊಂದು ದಶಕದಿಂದ ಹೋರಾಟ ನಿರತರಾಗಿದ್ದಾರೆ. ಈ ಬೇಡಿಕೆಯನ್ನು ನ್ಯಾಯಾಸಮ್ಮತ ಎಂದು ಅರಿತುಕೊಂಡ, ವಿರೋಧ ಪಕ್ಷಗಳು ಆಳುತ್ತಿರುವ ರಾಜ್ಯ ಸರ್ಕಾರಗಳು ಮತ್ತೆ ಹಳೆಯ ಪಿಂಚಣಿ ಯೋಜನೆಗೇ ಮರಳುವುದಾಗಿ ಹೇಳಿದ್ದಾರೆ. ಈ ಹೋರಾಟದ ತೀವ್ರತೆಯನ್ನು ಗಮನಿಸಿದ ನರೇಂದ್ರ ಮೋದಿ ನೇತೃತ್ವದ ಎನ್.ಡಿ,ಎ ಸಮ್ಮಿಶ್ರ ಸರ್ಕಾರವು ಖಚಿತ ಪಿಂಚಣಿ ಮೊತ್ತದಂತಹ ಬೇಡಿಕೆಗಳನ್ನು ಪರಿಗಣಿಸಲೇ ಬೇಕಾಯಿತು. ಈ ಹೋರಾಟವು ಇನ್ನೂ ಮುಗಿದಿಲ್ಲ, ಸರ್ಕಾರಿ ನೌಕರರು ಹಳೆ ಪಿಂಚಣಿ ಯೋಜನೆಗಾಗಿ ಇನ್ನೂ ಒತ್ತಾಯಿಸುತ್ತಿದ್ದಾರೆ.
ಸಾರ್ವಜನಿಕ ವಲಯದ ವಿಮೆ, ಬ್ಯಾಂಕ್ ವಲಯಗಳಲ್ಲೂ ನೌಕರರ ಸಂಘಟನೆಗಳು 1995ರ ನಂತರ ನೌಕರಿಗೆ ಸೇರಿದವರಿಗೆ ಎನ್ಪಿಎಸ್ ಅನ್ವಯಿಸಿರುವುದನ್ನು ಹಿಂತೆಗೆದುಕೊಂಡು ಎಲ್ಲ ನೌಕರರಿಗೂ ಖಚಿತ ನಿವೃತ್ತಿ ವೇತನದ ಯೋಜನೆಯನ್ನು ಅನ್ವಯಿಸಬೇಕೆಂದು ಆಗ್ರಹಿಸುತ್ತಿವೆ.
ಇದನ್ನು ಓದಿ : ತಂದೆಯ ಚಿತೆಗೆ ಬೆಂಕಿ ಇಡಲು ಹಣ ಕೇಳಿದ ಮಗ – ಕೊನೆಗೆ ತಾನೇ ಚಿತೆಗೆ ಬೆಂಕಿ ಇರಿಸಿದ ಪತ್ನಿ
‘ಕಲ್ಯಾಣ ಪ್ರಭುತ್ವ”
ಸರ್ಕಾರ ಘೋಷಿಸಿದ ಇನ್ನೊಂದು ಯೋಜನೆಯೆಂದರೆ 70 ವರ್ಷ ಮೀರಿದ ಎಲ್ಲ ಹಿರಿಯ ನಾಗರೀಕರಿಗೆ 5 ಲಕ್ಷ ರೂಗಳ ಆರೋಗ್ಯ ವಿಮಾ ಯೋಜನೆ ಈ ಯೋಜನೆಯ ಪೂರ್ತಿ ಮಾಹಿತಿಗಳು ಇನ್ನೂ ಹೊರಬಂದಿಲ್ಲ. ಭಾರತವು ಒಂದು ಸಾರ್ವತ್ರಿಕ ಸಾಮಾಜಿಕ ಸುರಕ್ಷಾ ಜಾಲವನ್ನು ರಚಿಸಬೇಕೆಂಬ ದೀರ್ಘಕಾಲದ ಬೇಡಿಕೆಯ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ರೂಪಿಸಲಾಗಿದೆ. ಇದು ದೇಶದ ನಾಗರೀಕರ ಕೆಲವು ಆರ್ಥಿಕ ಬೇಡಿಕೆಗಳನ್ನು ತೀವ್ರವಾಗಿ ಮುನ್ನೆಲೆಗೆ ತಂದಿದೆ. ದೇಶದ ಸಂವಿಧಾನವು ದೇಶದ ನಾಗರೀಕರಿಗೆ ಹಲವು ಮೂಲಭೂತ ರಾಜಕೀಯ ಹಕ್ಕುಗಳನ್ನು ನೀಡಿದೆ. ಆರ್ಥಿಕ ಹಕ್ಕುಗಳನ್ನಲ್ಲ. ಪ್ರಭುತ್ವ ಧೋರಣೆಗಳ ನಿರ್ದೇಶಕ ತತ್ವಗಳನ್ನು ಕುರಿತ ಸಂವಿಧಾನದ ನಾಲ್ಕನೆಯ ಭಾಗವು ಭಾರತ ಒಂದು ‘ಕಲ್ಯಾಣ ಪ್ರಭುತ್ವ’ ಎಂದು ಗುರುತಿಸುತ್ತದೆ ಮತ್ತು ಸರ್ಕಾರವು ತನ್ನೆಲ್ಲ ನಾಗರಿಕರೂ ಘನತೆಯಿಂದ ಬದುಕುವುದು ಸಾಧ್ಯವಾಗುವಂತಹ ನೀತಿಗಳನ್ನೇ ಅನುಸರಿಸಬೇಕೆಂದು ನಿರ್ದೇಶಿಸುತ್ತದೆ. ಆದರೆ ಇವು ನ್ಯಾಯ ವಿಚಾರಣೆಗೆ ಒಳಪಡುವುದಿಲ್ಲ. ಹಾಗಿದ್ದರೂ ಸರ್ವೋಚ್ಛ ನ್ಯಾಯಾಲಯವು ಪರಿಚ್ಛೇದ 21ರ ವ್ಯಾಪ್ತಿಯನ್ನು ಹಿಗ್ಗಿಸಿದ್ದು ಜನರ ಬದುಕಿನ ಹಕ್ಕು ಅವರ ಆರೋಗ್ಯ, ವಿದ್ಯಾಭ್ಯಾಸದ ಹಕ್ಕುಗಳನ್ನು ಒಳಗೊಂಡಿದೆಯೆಂದು ಹೇಳಿದೆ.
ಭಾರತ ದೇಶದಲ್ಲಿ ತೀವ್ರ ಆರ್ಥಿಕ ಬೆಳವಣಿಗೆಗಳಾಗುತ್ತಿದ್ದು ಅದು ಜಗತ್ತಿನಲ್ಲೆ ಮೂರನೆಯ ಅತಿದೊಡ್ಡ ಆರ್ಥಿಕ ವ್ಯವಸ್ಥೆಯಾಗಲಿದೆಯೆಂದು ಸರ್ಕಾರವು ಬೀಗುತ್ತಿದೆ. ಜಗತ್ತಿನ ಬಹುದೊಡ್ಡ ತೀವ್ರವಾಗಿ ಬೆಳೆಯುತ್ತಿರುವ ದೇಶಗಳಲ್ಲಿ ಭಾರತವೂ ಒಂದು ಎಂದು ಬಿಂಬಿಸಲು ಹಲವಾರು ಅಂಕಿಅಂಶಗಳನ್ನು ಪ್ರಸ್ತುತ ಪಡಿಸುತ್ತಿದೆ. ಆದರೆ ಈ ದೇಶದ ಬಹುತೇಕ ಜನರ ಬದುಕಿನಲ್ಲಿ ಇದು ಪ್ರತಿಬಿಂಬಿತವಾಗುತ್ತಿಲ್ಲ. ಈ ಅಭಿವೃದ್ಧಿ ಹೊಂದುತ್ತಿರುವ ಅರ್ಥವ್ಯವಸ್ಥೆಯು ಹೊಸ ಉದ್ಯೋಗಗಳನ್ನು ಸೃಷ್ಟಿಸುವಲ್ಲಿ ಸೋತಿದೆ. ನಿರುದ್ಯೋಗದ ಪ್ರಮಾಣವು ಹಿಂದೆಂದಿಗಿಂತಲೂ ಹೆಚ್ಚಾಗಿದೆ. ದೇಶದ ನಿರುದ್ಯೋಗಿಗಳಲ್ಲಿ ಶೇ 66ಕ್ಕಿಂತಲೂ ಹೆಚ್ಚಿನವರು ವಿದ್ಯಾವಂತರು.
ಪ್ರಧಾನ ಮಂತ್ರಿಯವರ ಆರ್ಥಿಕ ಸಲಹೆಗಾರರ ಪ್ರಕಾರ ದೇಶದ ದುಡಿಯುವ ಜನರಲ್ಲಿ ಶೇ 90 ರಷ್ಟು ಜನರ ತಲಾ ತಿಂಗಳ ಆದಾಯ ರೂ 25000 ಕ್ಕಿಂತ ಕಡಿಮೆಯಿದೆ. ಅಜೀಜ್ ಪ್ರೇಮ್ ಜಿ ವಿಶ್ವವಿದ್ಯಾನಿಲಯದ ಅಧ್ಯಯನವೊಂದರ ವರದಿ ಶೇ 90 ಕ್ಕಿಂತ ಹೆಚ್ಚಿನ ಕುಟುಂಬಗಳ ತಿಂಗಳ ಆದಾಯ ರೂ 10000 ಕ್ಕಿಂತ ಕಡಿಮೆಯಿದೆ ಎಂದು ಸೂಚಿಸುತ್ತದೆ. ಉದ್ಯೋಗಿಗಳಾಗಿರುವವರಲ್ಲೂ ಬಹುತೇಕರಿಗೆ ಸಾಮಾಜಿಕ ಸುರಕ್ಷೆಯಿಲ್ಲ. ಸ್ವಉದ್ಯೋಗಿಗಳ ಪರಿಸ್ಥಿತಿ ಇನ್ನೂ ಕೆಟ್ಟದಾಗಿದೆ. ಭಾರತದಲ್ಲಿ ಜಗತ್ತಿನ ಮೂರನೆ ಒಂದರಷ್ಟು ಅಪೌಷ್ಠಿಕ ಮಕ್ಕಳಿದ್ದಾರೆ. ಮೂರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಅರ್ಧದಷ್ಟು ಮಕ್ಕಳು ಕಡಿಮೆ ತೂಕದವರು ಜಾಗತಿಕ ಹಸಿವು ಸೂಚ್ಯಂಕ 2023 ರಲ್ಲಿ ಭಾರತವು 125 ದೇಶಗಳಲ್ಲಿ 111 ನೇ ಸ್ಥಾನದಲ್ಲಿದೆ. ಭಾರತದಲ್ಲಿ ಹೆಚ್ಚುತ್ತಿರುವ ಹಸಿವಿನ ಗಂಭೀರ ಪರಿಸ್ಥಿತಿಯು ಬಹಳ ಕಳವಳಕಾರಿಯಾಗಿದೆ.
ಆರ್ಥಿಕ ಹಕ್ಕುಗಳು
ಭಾರತದೊಳಗೇ ಅಸಹ್ಯಕರ ಅತಿವೈಭೋಗದ ಜೀವನ ನಡೆಸುತ್ತಿರುವ ಶೇ 1 ರಷ್ಟು ಜನರ ಇನ್ನೊಂದು ಭಾರತವಿದೆ. ಬೆಳೆಯುತ್ತಿರುವ ಅರ್ಥವ್ಯವಸ್ಥೆಯ ಎಲ್ಲ ಲಾಭವನ್ನೂ ಅವರು ಕಬಳಿಸುತ್ತಿದ್ದಾರೆ. ಪ್ರತೀವರ್ಷ ಲಕ್ಷಾಂತರ ಜನ ಬಡತನದ ಅಂಚಿಗೆ ತಳ್ಳಲ್ಪಡುತ್ತಿರುವಾಗ ಕೆಲವೇ ಬಹು ಕೋಟ್ಯಟಧಿಪತಿಗಳ ಸಂಪತ್ತು ಏರುತ್ತಲೇ ಇದೆ. ದೇಶದ ಅತಿ ಶ್ರೀಮಂತ ಶೇ 1 ರಷ್ಟು ಜನ ದೇಶದ ಶೇ 40 ರಷ್ಟು ಸಂಪತ್ತಿನ ಒಡೆತನ ಹೊಂದಿದ್ದಾರೆ. ಈ ಹಿಂದೆಂದೂ ಕಂಡಿರದಂತಹ ಅಸಮಾನತೆಗೆ ದೇಶ ಸಾಕ್ಷಿಯಾಗಿದೆ. ಈ ಅಸಮಾನತೆಯನ್ನು ನಿಗ್ರಹಿಸದಿದ್ದಲ್ಲಿ ಅದು ಕೇವಲ ಆರ್ಥಿಕತೆಯ ಮೇಲೆ ದುಷ್ಟರಿಣಾಮ ಬೀರುವುದಿಲ್ಲ ಸಾಮಾಜಿಕ ಆಸ್ಫೋಟಕ್ಕೂ ಕಾರಣವಾಗುತ್ತದೆ. ದೇಶದ ನಾಗರೀಕರಿಗೆ ಹಿಂದೆಂದಿಗಿಂತಲೂ ಇಂದು ತಮಗೆ ಆರ್ಥಿಕ ಹಕ್ಕುಗಳ ಅಗತ್ಯವಿದೆಯೆಂದು ಅನುಭವವಾಗುತ್ತಿದೆ.
ಆಹಾರ, ಆರೋಗ್ಯ, ಶಿಕ್ಷಣ, ಉದ್ಯೋಗ ಮತ್ತು ವೃದ್ಧಾಪ್ಯ ವೇತನ ದಂತಹ ಮೂಲಭೂತ ಆರ್ಥಿಕ ಹಕ್ಕುಗಳಿಗಾಗಿ ಒಂದು ಸಶಕ್ತ ಚಳುವಳಿ ಕಟ್ಟುವುದನ್ನು ಇಂದಿನ ಸಾಮಾಜಿಕ ಮತ್ತು ಆರ್ಥೀಕ ಪರಿಸ್ಥಿತಿಯು ಅನಿವಾರ್ಯಗೊಳಿಸಿದೆ. ದೇಶದ ನಾಗರಿಕರಿಗೆ ಈ ಹಕ್ಕುಗಳನ್ನು ನೀಡಲು ಅಗತ್ಯ ಸಂಪನ್ಮೂಲವಿಲ್ಲವೆಂದು ನವ ಉದಾರೀಕರಣವು ವಾದಿಸುತ್ತದೆ. ದೇಶದ ನೈಸರ್ಗಿಕ ಸಂಪನ್ಮೂಲದಲ್ಲಿ ಎಲ್ಲ ನಾಗರೀಕರಿಗೂ ಸಮಾನ ಅಧಿಕಾರವಿದೆ ಎಂಬುದು ಸಾಮಾನ್ಯ ಅರಿವು.
ಹಾಗಾಗಿ ಎಲ್ಲ ನಾಗರಿಕರಿಗೂ ಘನತೆಯ ಬದುಕು ಸಾಧ್ಯವಾಗಿಸುವ ಸೇವಾ ಸೌಲಭ್ಯಗಳನ್ನೊದಗಿಸುವುದು ಸರ್ಕಾರದ ಕರ್ತವ್ಯ. ಒಂದು ನ್ಯಾಯಯುತವಾದ ತೆರಿಗೆಯ ವ್ಯವಸ್ಥೆಯನ್ನು ರೂಪಿಸುವ ಮೂಲಕ ಅದಕ್ಕೆ ಬೇಕಾದ ಸಂಪನ್ಮೂಲ ಸಂಗ್ರಹಿಸುವುದು ಸಾಧ್ಯವಿದೆಯೆಂದು ಖ್ಯಾತ ಅರ್ಥಶಾಸ್ತ್ರಜ್ಞ ಪ್ರೊ. ಪ್ರಭಾತ್ ಪಟ್ನಾಯಕ್ ವಾದಿಸುತ್ತಾರೆ. ಕಡು ಶ್ರೀಮಂತರ ಸಂಪತ್ತಿನ ಮೇಲೆ ಶೇ 2 ರಷ್ಟು ತೆರಿಗೆ ವಿಧಿಸಿದರೆ, ಮುಂದುವರೆದ ದೇಶಗಳಂತೆ ಪಿತ್ರಾರ್ಜಿತ ಆಸ್ತಿಯ ಮೇಲೆ ತೆರಿಗೆ ವಿಧಿಸಿದರೆ ಜನರಿಗೆ ಆಹಾರ, ಆರೋಗ್ಯ, ಶಿಕ್ಷಣ ಮತ್ತು ವೃದ್ಧಾಪ್ಯ ವೇತನಗಳನ್ನು ಒದಗಿಸಲು ಅಗತ್ಯವಿರುವ ಸಂಪನ್ಮೂಲ ಸಂಗ್ರಹವಾಗುತ್ತದೆ. ಅದಕ್ಕೆ ಅಗತ್ಯವಿರುವುದು ರಾಜಕೀಯ ಇಚ್ಛಾಶಕ್ತಿ. ಆಸೆಬುರುಕತನದಿಂದ ಕೂಡಿರುವ ಬಂಡವಾಳಶಾಹಿ ವ್ಯವಸ್ಥೆ ಇದನ್ನು ಖಂಡಿತ ಸುಲಭವಾಗಿ ಒಪ್ಪುವುದಿಲ್ಲ. ಆ ನಿಟ್ಟಿನಲ್ಲಿ ಬಹು ಸಶಕ್ತ ಚಳುವಳಿ ಕಟ್ಟಬೇಕಿದೆ. ನಾಗರಿಕರು ಮೂಲಭೂತ ಆರ್ಥಿಕ ಹಕ್ಕುಗಳ ಬೇಡಿಕೆಯನ್ನು ಮುಂದೊಡ್ಡುವ ಕಾಲ ಬಂದಿದೆ. ಇನ್ನು ತಡಮಾಡದೇ ನಾಗರಿಕ ಸಮಾಜದ ಪ್ರಗತಿಗಾಮಿ ಜನತೆ, ಕಾರ್ಮಿಕ ಸಂಘಟನೆಗಳು ಮತ್ತು ರೈತ ಸಂಘಟನೆಗಳು ಒಂದಾಗಿ ಸೌಹಾರ್ದತೆಯಿಂದ ಚಳುವಳಿ ಕಟ್ಟ ಬೇಕಿದೆ.
ಇದನ್ನು ನೋಡಿ : ಮತೀಯ ದ್ವೇಷದ ವಿರುದ್ಧ ಹೋರಾಡಬೇಕಿದೆ – ಡಾ. ಎಸ್.ವೈ. ಗುರುಶಾಂತJanashakthi Media