ಆರ್ಥಿಕತೆಯ ಕುಸಿತವೂ ಮಧ್ಯಮವರ್ಗದ ಮೌನವೂ

ಆರ್ಥಿಕ ಕುಸಿತದಿಂದ ಬಾಧಿತರಾಗುವ ಮಧ್ಯಮವರ್ಗಗಳು ದನಿ ಎತ್ತದಿರುವುದು ಆಶ್ಚರ್ಯ

ಕೋವಿಡ್ 19ರ ಆಘಾತದ ನಂತರ ಭಾರತದ ಆರ್ಥಿಕತೆ ಚೇತರಿಸಿಕೊಳ್ಳುತ್ತಿದೆ ಎಂದು ಬಲವಾಗಿ ನಂಬಲಾಗಿತ್ತು. ವಿಶ್ವದಲ್ಲೇ ಅತಿ ವೇಗದ ಆರ್ಥಿಕ ಅಭಿವೃದ್ಧಿಗೆ ಭಾರತ ಸಾಕ್ಷಿಯಾಗುತ್ತಿದೆ ಎಂದು ಅರ್ಥಶಾಸ್ತ್ರಜ್ಞರು ವ್ಯಾಖ್ಯಾನಿಸುತ್ತಿದ್ದರು. ವಿದೇಶಿ ಬಂಡವಾಳ ಹೂಡಿಕೆದಾರರಿಗೂ ಈ ಭವಿಷ್ಯವಾಣಿ ಮತ್ತು ವಾಸ್ತವ ಮಾರುಕಟ್ಟೆ ಸನ್ನಿವೇಶಗಳು ಅಪ್ಯಾಯಮಾನವಾಗಿ ಕಂಡಿದ್ದವು. ಬ್ರಿಟನ್‌ ದೇಶವನ್ನು ಹಿಂದಿಕ್ಕಿ ವಿಶ್ವದ ಐದನೇ ಅತಿ ದೊಡ್ಡ ಆರ್ಥಿಕತೆಯ ಸ್ಥಾನವನ್ನು ಭಾರತ 2022ರಲ್ಲಿ ಆಕ್ರಮಿಸಿತ್ತು. 2025-26ರ ವೇಳೆಗೆ ಜರ್ಮನಿಯನ್ನು ಬದಿಗೆ ಸರಿಸಿ ನಾಲ್ಕನೆಯ ಸ್ಥಾನವನ್ನು ಆಕ್ರಮಿಸುವ ಭರವಸೆಗಳನ್ನೂ ಮೂಡಿಸಿತ್ತು. ಆದರೆ ಜಾಗತಿಕ ಶ್ರೇಣಿಯಲ್ಲಿ ಏರುಗತಿಯಲ್ಲಿದ್ದರೂ ಭಾರತ ತನ್ನ ಗುರಿ ತಲುಪಲು ವಿಫಲವಾಗುತ್ತಿರುವುದು ಮಾರುಕಟ್ಟೆ ವ್ಯತ್ಯಯಗಳಿಂದ, ರೂಪಾಯಿ ಅಪಮೌಲ್ಯದಂತಹ ಬೆಳವಣಿಗೆಗಳಿಂದ ಸ್ಪಷ್ಟವಾಗುತ್ತಿದೆ. ಆರ್ಥಿಕತೆ

-ನಾ ದಿವಾಕರ

2024-25 ವರ್ಷದಲ್ಲಿ ಮೊದಲ ಆರು ತಿಂಗಳಲ್ಲಿ ಏರಿಕೆಯನ್ನು ಕಂಡಿದ್ದ ಶೇರು ಮಾರುಕಟ್ಟೆ ಹಂತಹಂತವಾಗಿ ಕುಸಿಯಲಾರಂಭಿಸಿದ್ದು, ಡಾಲರ್‌ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ ಕಂಡಿದೆ. 2014ರಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರ ವಹಿಸಿಕೊಂಡಾಗ ಡಾಲರ್‌ ಎದುರು ರೂಪಾಯಿ ಮೌಲ್ಯ 58.58 ರೂಗಳಷ್ಟಿತ್ತು. ಆ ಚುನಾವಣೆಗಳಲ್ಲಿ ಮನಮೋಹನ್‌ ಸಿಂಗ್‌ ಸರ್ಕಾರದ ವಿರುದ್ಧ ಬಿಜೆಪಿ ಬಳಸಿದ ಟೀಕಾಸ್ತ್ರಗಳಲ್ಲಿ, ರೂಪಾಯಿ ಮೌಲ್ಯದ ಕುಸಿತವೇ ಬ್ರಹ್ಮಾಸ್ತ್ರವೂ ಆಗಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ವಾಟ್ಸಾಪ್‌ ವಿಶ್ವವಿದ್ಯಾಲಯದಲ್ಲಿ ರೂಪಾಯಿ ಮೌಲ್ಯ ಹೆಚ್ಚಾಗುತ್ತದೆ, ಡಾಲರ್‌ಗೆ 15 ರೂಗಳಷ್ಟಾಗುತ್ತದೆ  ಎಂಬ ಅಪಪ್ರಚಾರವೂ ವ್ಯಾಪಕವಾಗಿ ನಡೆದಿತ್ತು. ಆದರೆ ಕಳೆದ ಹತ್ತು ವರ್ಷಗಳಲ್ಲಿ ಭಾರತದ ರೂಪಾಯಿ ಮೌಲ್ಯ ಕುಸಿಯುತ್ತಲೇ ಇದ್ದು ಪ್ರತಿ ಡಾಲರ್‌ಗೆ 86.71 ರೂಗಳಷ್ಟಾಗಿದೆ. ಆರ್ಥಿಕತೆ

ಆರ್ಥಿಕ ನೀತಿಗಳ ತಪ್ಪು ನಡೆ

ಸೆಪ್ಟಂಬರ್‌ 2024ರ ನಂತರದಲ್ಲಿ ರೂಪಾಯಿ ಮೌಲ್ಯದ ಸವೆತ ಶೇಕಡಾ 3.2ರಷ್ಟಿದ್ದು ಶೇರು ಮಾರುಕಟ್ಟೆ ಶೇಕಡಾ 12.6ರಷ್ಟು ನಷ್ಟ ಅನುಭವಿಸಿದೆ. ಕೋವಿದ್‌ ನಂತರ ಭಾರತದ ಮಧ್ಯಮ ವರ್ಗಗಳು ಕಂಡಂತಹ ಆರ್ಥಿಕ ಪ್ರಗತಿ ಮತ್ತು ಉತ್ಕರ್ಷ ಕ್ರಮೇಣ ಕಡಿಮೆಯಾಗುತ್ತಿದೆ. ಭಾರತದ ಜಿಡಿಪಿ ಅಭಿವೃದ್ಧಿಯ ದರ ಸರ್ಕಾರ ಮತ್ತು ಮಾರುಕಟ್ಟೆಯ ನಿರೀಕ್ಷೆಗೆ ವಿರುದ್ಧವಾಗಿ ಶೇಕಡಾ 8.2ರ ಗುರಿ ತಲುಪದೆ, ಪ್ರಸ್ತುತ ಹಣಕಾಸು ವರ್ಷದಲ್ಲಿ ಶೇಕಡಾ 6.4ಕ್ಕೆ ಇಳಿಯುವ ಸಾಧ್ಯತೆಗಳಿವೆ. 2004ರಲ್ಲಿ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದಾಗ ಭಾರತ ಶೀಘ್ರದಲ್ಲೇ ಎರಡಂಕಿ ಅಭಿವೃದ್ಧಿ ದರವನ್ನು ತಲುಪುತ್ತದೆ ಎಂಬ ನಿರೀಕ್ಷೆ ದಟ್ಟವಾಗಿತ್ತು. ಆದರೆ ಈ ಬೆಳವಣಿಗೆಗೆ ಪೂರಕವಾಗಿ ಭಾರತದ ಬ್ಯಾಂಕುಗಳು ವ್ಯಾಪಾರ-ವಾಣಿಜ್ಯ ವಲಯಕ್ಕೆ ಸುಲಭ ದರದ ಸಾಲಗಳನ್ನು ಒದಗಿಸುವುದು ಅತ್ಯವಶ್ಯವಾಗಿತ್ತು. ತನ್ಮೂಲಕ ತಳಹಂತದ ಮಾರುಕಟ್ಟೆಯಲ್ಲಿ ಹಣದ ಚಲಾವಣೆಯನ್ನು ಚುರುಕುಗೊಳಿಸಬಹುದಿತ್ತು. ಆರ್ಥಿಕತೆ

ಇದನ್ನೂ ಓದಿ: ಮೀಟರ್ ಬಡ್ಡಿ ದಂಧೆಕೋರರ ಅಟ್ಟಹಾಸ: ಅರೆಬೆತ್ತಲೆಗೊಳಿಸಿ ರಾತ್ರಿಯಿಡಿ ಹಲ್ಲೆ

ಆದರೆ 2016ರ ನೋಟು ಅಮಾನ್ಯೀಕರಣದ ದುಸ್ಸಾಹಸದ ಪರಿಣಾಮ ಜಿಡಿಪಿ ಅಭಿವೃದ್ಧಿ ಶೇಕಡಾ 8ರ ಗುರಿಯನ್ನು ತಲುಪುವುದೂ ದುಸ್ತರವಾಗುತ್ತಿದೆ. ಕಳೆದ ಹತ್ತು ವರ್ಷಗಳಲ್ಲಿ ಭಾರತದಲ್ಲಿ ಬಂಡವಾಳ ಹೂಡಿಕೆದಾರರ ಖಾತೆಗಳ ಸಂಖ್ಯೆ 22 ದಶಲಕ್ಷದಿಂದ 150 ದಶಲಕ್ಷಕ್ಕೆ ಹೆಚ್ಚಾಗಿದೆ. ಅಂದರೆ ಈ 13 ಕೋಟಿ ಉದ್ಯಮಿಗಳ ಸಂಪತ್ತು ಹೆಚ್ಚಳವಾಗಿದೆ ಎಂದು ಹೇಳಬಹುದು. ಈ ಸಿರಿವಂತ ವರ್ಗದಲ್ಲಿ ಕಾರು ಬಳಕೆ ಹೆಚ್ಚಾಗಿದೆ. ಐಷಾರಾಮಿ ಬದುಕು ವ್ಯಾಪಕವಾಗಿದೆ. ಆದರೆ ಈ ಸಮೃದ್ಧಿಯು ದೇಶದ ಶೇಕಡಾ 10ರಷ್ಟು ಜನರಲ್ಲಿ ಕೇಂದ್ರೀಕೃತವಾಗಿದೆ. ಉಳಿದ ಶೇಕಡಾ 90ರಷ್ಟು ಜನತೆ ದುಸ್ಥಿತಿಗೆ ತಳ್ಳಲ್ಪಡುತ್ತಿದ್ದಾರೆ. ಮೋದಿ ಸರ್ಕಾರದ ಆರ್ಥಿಕ ನೀತಿಗಳು ಮೂಲತಃ ದೊಡ್ಡಮಟ್ಟದ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡುತ್ತಿರುವುದೂ ಈ ಬೆಳವಣಿಗೆಗೆ ಕಾರಣವಾಗಿದೆ.

ಆದರೆ ತಳಮಟ್ಟದ ಆರ್ಥಿಕತೆಯಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಸಾಮಾನ್ಯ ಜನರ ಬಳಿ ನಗದು ಹರಿದಾಡುತ್ತಿಲ್ಲ. ತಳಸಮಾಜದ ಖರೀದಿಯ ಸಾಮರ್ಥ್ಯ ಕ್ರಮೇಣ ಕುಸಿಯುತ್ತಲೇ ಇದೆ. ಆರ್ಥಿಕತೆಯಲ್ಲಿ ಕೂಲಿ ಅಥವಾ ವೇತನದ ಪ್ರಮಾಣ ಕಡಿಮೆಯಾದಷ್ಟೂ ಜನರ ಖರ್ಚು ಮಾಡುವ ಸಾಮರ್ಥ್ಯವೂ ಕುಸಿಯುತ್ತಲೇ ಇರುತ್ತದೆ. ಇಂದಿಗೂ ಅನೌಪಚಾರಿಕ ಆರ್ಥಿಕ ವಲಯದಲ್ಲಿ ಕನಿಷ್ಠ ಕೂಲಿ ರಾಷ್ಟ್ರೀಯ ಮಾನದಂಡದ ಅನುಸಾರ ಪಾವತಿ ಮಾಡಲಾಗುತ್ತಿಲ್ಲ. ಮತ್ತೊಂದೆಡೆ ಉತ್ಪಾದನಾ ವಲಯದ ನಿರ್ಲಕ್ಷ್ಯ ಮತ್ತು ಕೆಳಸ್ತರದ ಮಾರುಕಟ್ಟೆಯಲ್ಲಿ ಹೆಚ್ಚಿನ ಜನರಿಗೆ ಉದ್ಯೋಗ ಒದಗಿಸುವ ಕೈಗಾರಿಕೆಗಳು ಸ್ಥಾಪನೆಯಾಗದಿರುವುದು, ಜನಸಾಮಾನ್ಯರ ಜೀವನವನ್ನು ದುರ್ಭರವಾಗಿಸಿದೆ. ಭಾರತ ಬೇಡಿಕೆ ಆಧಾರಿತ ಆರ್ಥಿಕ ನೀತಿಯನ್ನು ಕೈಬಿಟ್ಟು ಸರಬರಾಜು ಆಧಾರಿತ ನೀತಿಯನ್ನು ಅನುಸರಿಸುತ್ತಿರುವುದೇ ಈ ಸಮಸ್ಯೆಗಳ ಮೂಲ ಕಾರಣವಾಗಿದೆ. ಆರ್ಥಿಕತೆ

ಉತ್ಪಾದನಾ ವಲಯದ ನಿರ್ಲಕ್ಷ್ಯ

ಶೇರು ಮಾರುಕಟ್ಟೆಯ ಉತ್ಕರ್ಷದ ಫಲಾನುಭವಿಗಳಾದ ಮೇಲ್ಪದರದ ಶೇಕಡಾ 10ರಷ್ಟು ಜನತೆ ಹಾಗೂ ತಳಸ್ತರದ ಸಮಾಜದಲ್ಲಿ ಅವಕಾಶವಂಚಿತರಾಗಿರುವ ಶೇಕಡಾ 50ರಷ್ಟು ಜನತೆಯ ನಡುವೆ ಇರುವ ಕೋಟ್ಯಂತರ ಸಾಮಾನ್ಯ ಜನರಿಗೆ ತಮ್ಮ ಜೀವನಾವಶ್ಯಕ ವಸ್ತುಗಳನ್ನು ಖರೀದಿಸುವುದೂ ದುಸ್ತರವಾಗುತ್ತಿದೆ ಎಂದು ಅರ್ಥಶಾಸ್ತ್ರಜ್ಞರು ಹೇಳುತ್ತಾರೆ. ಇವರ ಪೈಕಿ ಹತ್ತುಕೋಟಿ ಜನರಾದರೂ ಉಚಿತ ಪಡಿತರಕ್ಕೆ ಅರ್ಹರಾಗಿರುತ್ತಾರೆ ಎಂದು ಅಭಿಪ್ರಾಯಪಡುತ್ತಾರೆ. ಉದ್ಯಮಿಗಳು ನೌಕರರಿಗೆ ನೀಡುವ ಕೂಲಿ ವೇತನಗಳು ಕಡಿಮೆಯಾದಷ್ಟೂ ಮಾರುಕಟ್ಟೆಯಲ್ಲಿ ಅವಶ್ಯವಸ್ತುಗಳಿಗೆ ಬೇಡಿಕೆ ಕಡಿಮೆಯಾಗುತ್ತದೆ. ಈ ಸರಳ ಆರ್ಥಿಕ ಸೂತ್ರವನ್ನು ಅರ್ಥಮಾಡಿಕೊಳ್ಳುವಲ್ಲಿ ಸರ್ಕಾರ ಸೋತಿರುವುದು ಸ್ಪಷ್ಟ. ರಾಷ್ಟ್ರೀಯ ಅಂಕಿಅಂಶಗಳ ಕಚೇರಿ (National Statistical Office –NSO) ಜನವರಿ 7ರಂದು ಒದಗಿಸಿರುವ ಮಾಹಿತಿಯ ಅನುಸಾರ 2024-25ರ ವರ್ಷಾಂತ್ಯಕ್ಕೆ ಭಾರತದ ಜಿಡಿಪಿ ಬೆಳವಣಿಗೆಯ ದರ ಶೇಕಡಾ 6.4ಕ್ಕೆ ಸೀಮಿತವಾಗಲಿದೆ. ಆರ್ಥಿಕತೆ

ಇದಕ್ಕೆ ಮೂಲ ಕಾರಣವನ್ನು ಸರಕು ಉತ್ಪಾದನೆಯನ್ನು ಹೆಚ್ಚಿಸುವ ಕೈಗಾರಿಕಾ ವಲಯದ ಕುಸಿತದಲ್ಲಿ ಗುರುತಿಸಲಾಗುತ್ತದೆ. ಉತ್ತರಪ್ರದೇಶ, ಹರಿಯಾಣ, ಬಿಹಾರ ಮತ್ತಿತರ ಉತ್ತರದ ರಾಜ್ಯಗಳಲ್ಲಿ ಲಭ್ಯವಿರುವ ಕೆಳಹಂತದ ಉದ್ಯೋಗಗಳಿಗೆ ನೂರು ಪಟ್ಟು ಹೆಚ್ಚು ಅರ್ಜಿಗಳನ್ನು ಸಲ್ಲಿಸಲಾಗುತ್ತಿದೆ. ಹರಿಯಾಣದಲ್ಲಿ ಕಳೆದ ವರ್ಷ ಅಗ್ನಿಪಥ್‌ ಯೋಜನೆಯಡಿ ನೌಕರಿಗೆ ಅರ್ಜಿ  ಸಲ್ಲಿಸಿದ ಯುವಕರು ಉದ್ಯೋಗ ದೊರೆಯದೆ ಗಲಭೆ ಸೃಷ್ಟಿಸಿದ್ದನ್ನು ಸ್ಮರಿಸಬಹುದು. 2021-22ರಲ್ಲಿ ರೈಲ್ವೆ ಇಲಾಖೆಯಲ್ಲಿ ಘೋಷಿಸಲಾಗಿದ್ದ 1,30,581 ನಾಲ್ಕನೆ ಶ್ರೇಣಿಯ ನೌಕರಿಗೆ 2.37 ಕೋಟಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಇದು ಸಾಮಾನ್ಯವಾಗಿ ಭಾರತದಾದ್ಯಂತ ಉದ್ಯೋಗ ಮಾರುಕಟ್ಟೆಯಲ್ಲಿ ಕಾಣುತ್ತಿರುವ ದೃಶ್ಯ. ಲಕ್ಷಾಂತರ ಯುವ ಜನರು ಪದವಿ ಪೂರೈಸಿ ಕಾಲೇಜುಗಳಿಂದ ಹೊರಬಂದ ಮೇಲೆ ಗಿಗ್‌ ಆರ್ಥಿಕತೆಯ (ಓಲಾ, ಊಬರ್‌, ಅಮೆಜಾನ್‌, ಸ್ವಿಗಿ, ಜಮೋಟೋ ಇತ್ಯಾದಿ ) ಅನಿಶ್ಚಿತ ಉದ್ಯೋಗವನ್ನೇ ಅವಲಂಬಿಸಬೇಕಾಗಿರುವುದು ವರ್ತಮಾನ ಭಾರತದ ದುರಂತಗಳಲ್ಲೊಂದು.

2024ರ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ ಪದವೀಧರರ ನಡುವೆ ನಿರುದ್ಯೋಗ ಪ್ರಮಾಣ ಶೇಕಡಾ 29.1ರಷ್ಟಿತ್ತು. ಇದು ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ILO) ಮಾನದಂಡಕ್ಕೆ ಹೋಲಿಸಿದರೆ ಒಂಭತ್ತು ಪಟ್ಟು ಹೆಚ್ಚಾಗಿದೆ. ಸೆಕಂಡರಿ ಅಥವಾ ಉನ್ನತ ಶಿಕ್ಷಣ ಪಡೆದವರ ಪೈಕಿ ನಿರುದ್ಯೋಗ ಪ್ರಮಾಣ ಶೇಕಡಾ 18.4ರಷ್ಟಿದೆ. 15 ರಿಂದ 29 ವಯೋಮಾನದ ಯುವ ಜನರ ನಿರುದ್ಯೋಗ ಪ್ರಮಾಣ 2000ದಲ್ಲಿ ಶೇಕಡಾ 88.6ರಷ್ಟಿದ್ದುದು, 2022ರ ವೇಳೆಗೆ ಶೇಕಡಾ 82.9ಕ್ಕೆ ಇಳಿದಿದೆ. ಈ ಉದ್ಯೋಗ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ವಂಚಿತರಾಗುತ್ತಿರುವುದು ಮಹಿಳೆಯರೇ ಆಗಿದ್ದಾರೆ. ಶಿಕ್ಷಣ ಪೂರೈಸಿದ ಮಹಿಳೆಯರ ಪೈಕಿ ಶೇಕಡಾ 79.1ರಷ್ಟು ನಿರುದ್ಯೋಗಿಗಳಿದ್ದಾರೆ. ಪುರುಷರ ಪೈಕಿ ಇದು ಶೇಕಡಾ 62.2ರಷ್ಟಿದೆ. ಈ ಉದ್ಯೋಗ ವಂಚಿತರು ಬಹುಪಾಲು ಕೆಳಮಧ್ಯಮ ವರ್ಗಗಳಲ್ಲಿ ಹಾಗೂ ಬಡಜನತೆಯ ನಡುವೆಯೇ ಕಂಡುಬರುತ್ತಾರೆ. ಆರ್ಥಿಕತೆ

ಸಾರ್ವಜನಿಕ ಸಂಕಥನಗಳ ಕೊರತೆ

2014ರವರೆಗೂ ಭಾರತದ ಆರ್ಥಿಕ ಸಂಕಥನಗಳಲ್ಲಿ ಮತ್ತು ವಿಶ್ಲೇಷಣೆಗಳಲ್ಲಿ ಮಧ್ಯಮ ವರ್ಗಗಳ ಹಿತಾಸಕ್ತಿಗಳೇ ಪ್ರಧಾನವಾಗಿ ಬಿಂಬಿಸಲ್ಪಡುತ್ತಿದ್ದವು. ಸಾರ್ವಜನಿಕ ಚರ್ಚೆಗಳಲ್ಲೂ ಸಹ ಈ ವರ್ಗದ ಆತಂಕ ಮತ್ತು ಹತಾಶೆಗಳನ್ನು ದಾಖಲಿಸಲಾಗುತ್ತಿತ್ತು. ನಿರುದ್ಯೋಗದ ವಿರುದ್ಧ ದೇಶವ್ಯಾಪಿ ಹೋರಾಟಗಳೂ ನಡೆಯುತ್ತಿದ್ದವು. ಮನಮೋಹನ್‌ ಸಿಂಗ್‌ ಸರ್ಕಾರದ ಅವಧಿಯಲ್ಲಿ ರೂಪಾಯಿ ಮೌಲ್ಯ ಸತತವಾಗಿ ಕುಸಿಯುತ್ತಿದ್ದುದು ಮಧ್ಯಮ ವರ್ಗಗಳಲ್ಲಿ ಚರ್ಚೆಗೊಳಗಾಗುತ್ತಿದ್ದುದಷ್ಟೇ ಅಲ್ಲದೆ, ಸರ್ಕಾರವನ್ನು ಅಪಹಾಸ್ಯ ಮಾಡಲಾಗುತ್ತಿತ್ತು. ನಿರುದ್ಯೋಗ, ರೂಪಾಯಿ ಮೌಲ್ಯ ಕುಸಿತ, ಹಣದುಬ್ಬರ ಇವೆಲ್ಲವೂ ಸಾರ್ವಜನಿಕವಾಗಿ ಹಾಸ್ಯ ಲೇವಡಿಯ ವಸ್ತುಗಳಾಗಿದ್ದವು. ಸಾಮಾಜಿಕ ತಾಣಗಳಲ್ಲಿ ಮಧ್ಯಮ ವರ್ಗಗಳ ಬವಣೆಯೇ ಹಲವು ಜೋಕ್‌ಗಳಿಗೆ ಎಡೆಮಾಡಿಕೊಟ್ಟಿತ್ತು.

ಆದರೆ 2014ರ ನಂತರದ ಹತ್ತು ವರ್ಷದ ಆಳ್ವಿಕೆಯಲ್ಲಿ ಈ ಸಮಸ್ಯೆ ಇನ್ನೂ ಉಲ್ಬಣಿಸಿದೆ. ಇಂದು ಮಧ್ಯಮ ವರ್ಗಗಳು ಯಾವುದೋ ಒಂದು ಉದ್ಯೋಗ ಗಳಿಸಿ ಜೀವನ ನಿರ್ವಹಣೆ ನಡೆಸುತ್ತಿದ್ದರೂ, ಸುಸ್ಥಿರ ಬದುಕಿಗೆ ಅಗತ್ಯವಾದ ಸುರಕ್ಷಿತ/ಸುಭದ್ರ ನೌಕರಿ ಗಗನಕುಸುಮವೇ ಆಗಿದೆ. ಗಿಗ್‌ ಆರ್ಥಿಕತೆಯಲ್ಲಿ ಲಭ್ಯವಾಗುವ ಸರಕು ವಿತರಣೆಯ ನೌಕರಿ (Delivery jobs) ಬಹುತೇಕವಾಗಿ ಗಂಡು ಮಕ್ಕಳ ಪಾಲಾಗುತ್ತಿದ್ದು, ವ್ಯಾಸಂಗ ಪೂರೈಸಿದ ಹೆಣ್ಣುಮಕ್ಕಳು ಅವಕಾಶವಂಚಿತರಾಗುತ್ತಿದ್ದಾರೆ. ಸರ್ಕಾರಿ ಇಲಾಖೆಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ, ಕೇಂದ್ರ ಸರ್ಕಾರದ ಸೇವಾ ವಲಯದಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಉಳಿದಿದ್ದರೂ, ಭರ್ತಿ ಮಾಡುವ ಯಾವುದೇ ಸಮಗ್ರ ಯೋಜನೆಯನ್ನು ಸರ್ಕಾರಗಳು ಹಮ್ಮಿಕೊಳ್ಳುತ್ತಿಲ್ಲ.

ಆದಾಗ್ಯೂ ಭಾರತದ ಮಧ್ಯಮ ವರ್ಗಗಳ ಮೌನ ಸೋಜಿಗ ಮೂಡಿಸುತ್ತದೆ. ಇಂದು ಬೆಲೆ ಏರಿಕೆ ಮತ್ತು ನಿರುದ್ಯೋಗ ಸಾರ್ವಜನಿಕ ವಲಯದ ಪ್ರತಿರೋಧಗಳಿಗೆ ಭೂಮಿಕೆಯಾಗುತ್ತಿಲ್ಲ. ಹರಿಯಾಣದಲ್ಲಿ ಸೆಪ್ಟಂಬರ್‌ 2024ರಲ್ಲಿ ನಾಲ್ಕನೆ ದರ್ಜೆಯ ಕೆಲವೇ ಹುದ್ದೆಗಳಿಗಾಗಿ  6,000 ಸ್ನಾತಕೋತ್ತರ ಪದವೀಧರರು, 40, ಸಾವಿರ ಪದವೀಧರನ್ನೂ ಸೇರಿದಂತೆ 1 ಲಕ್ಷ 20 ಸಾವಿರ ಅರ್ಜಿಗಳು ಸಲ್ಲಿಕೆಯಾಗಿದ್ದವು. ಹರಿಯಾಣ ಕುಶಲ ಉದ್ಯೋಗ ನಿಗಮ ಸಂಸ್ಥೆಯಲ್ಲಿ ಲಭ್ಯವಿದ್ದ ಈ ತಳದರ್ಜೆಯ ನೌಕರಿಗೆ ಮಾಸಿಕ 15 ಸಾವಿರ ರೂ ವೇತನ ದೊರೆಯುತ್ತದೆ. ಉತ್ತರ ಪ್ರದೇಶದಲ್ಲಿ ಸೂಕ್ತ ನೌಕರಿ ದೊರೆಯದೆ ಯುವಕರು ಯುದ್ಧಪೀಡಿತ ಇಸ್ರೇಲ್‌ನಲ್ಲಿ ದುಡಿಯಲು ಧಾವಿಸುತ್ತಿದ್ದಾರೆ. ಇಲ್ಲಿ ದೊರೆಯಬಹುದಾದ ಮಾಸಿಕ ಹತ್ತು ಸಾವಿರ ರೂಗಳ ಆದಾಯದಲ್ಲಿ ಸಂಸಾರ ತೂಗಿಸಲಾಗದೆ, ಯುವಜನರು ಹೊರದೇಶಗಳಿಗೆ ವಲಸೆ ಹೋಗುತ್ತಿರುವುದು ನಿರುದ್ಯೋಗ ಬವಣೆಯ ದುರಂತ ಚಿತ್ರಣ. ಆರ್ಥಿಕತೆ

ಮಧ್ಯಮ ವರ್ಗಗಳ ನಿರ್ಲಿಪ್ತತೆ

ಇಷ್ಟೆಲ್ಲಾ ಸಮಸ್ಯೆಗಳಿದ್ದರೂ, ಮಧ್ಯಮ ವರ್ಗಗಳು ಏಕೆ ಸರ್ಕಾರದ ನೀತಿಗಳ ವಿರುದ್ದ ಪ್ರತಿಭಟಿಸುತ್ತಿಲ್ಲ? ಅಥವಾ ಯಾವುದೇ ಸಮಗ್ರ ನೆಲೆಯ ಹೋರಾಟಗಳು ರೂಪುಗೊಳ್ಳುತ್ತಿಲ್ಲ ? ಇದು ಸೋಜಿಗದ ಸಂಗತಿಯಾಗಿದೆ. ರಾಜಕೀಯ ಒಲವು, ಹಿಂದುತ್ವ ರಾಜಕಾರಣದ ಆಕರ್ಷಣೆ ಮತ್ತು ಪಕ್ಷ ನಿಷ್ಠೆ ಈ ಪ್ರವೃತ್ತಿಗೆ ಒಂದು ಕಾರಣ ಎಂದು ಗುರುತಿಸಲಾಗುತ್ತದೆ. ಮತ್ತೊಂದೆಡೆ ಯುವ ಸಮೂಹವನ್ನು ಕಾಡುತ್ತಿರುವ  ನಿರುದ್ಯೋಗ, ಎಡ ಪಕ್ಷಗಳನ್ನು ಹೊರತುಪಡಿಸಿದರೆ, ಉಳಿದ ಯಾವುದೇ ರಾಜಕೀಯ ಪಕ್ಷಗಳ ಮುಖ್ಯ ಕಾರ್ಯಸೂಚಿಯಾಗುತ್ತಿಲ್ಲ. ಕಳೆದ ಲೋಕಸಭಾ ಚುನಾವಣೆಗಳಲ್ಲಿ ಅತ್ಯಂತ ಕನಿಷ್ಠ ಮಟ್ಟದ ಚರ್ಚೆಗೊಳಗಾಗಿದ್ದು ನಿರುದ್ಯೋಗ ಸಮಸ್ಯೆಯೇ ಆಗಿತ್ತು. ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಚುನಾವಣಾ ಪ್ರಣಾಳಿಕೆಗಳ ಆಕರ್ಷಣೀಯ ಘೋಷಣೆಗಳು ಹಾಳೆಗಳಲ್ಲೇ ಉಳಿದಿವೆ. ಆರ್ಥಿಕತೆ

ಈ ನಿಷ್ಕ್ರಿಯತೆಯ ಮತ್ತೊಂದು ಆಯಾಮವನ್ನು ಮುಖ್ಯವಾಹಿನಿಯ ವಿದ್ಯುನ್ಮಾನ-ಮುದ್ರಣ ಮಾಧ್ಯಮಗಳಲ್ಲಿ ಕಾಣಬಹುದು. ಮುಖ್ಯವಾಹಿನಿಯ ಯಾವುದೇ ಟಿವಿ ಮಾಧ್ಯಮಗಳಲ್ಲೂ ನಿರುದ್ಯೋಗದ ಸುತ್ತ ಪ್ಯಾನೆಲ್‌ ಚರ್ಚೆಗಳಾಗಲೀ, ಸಂವಾದವಾಗಲೀ, ವಿಶ್ಲೇಷಣೆಗಳಾಗಲೀ ನಡೆಯುತ್ತಿಲ್ಲ. ಕೆಲವೇ ಸ್ವತಂತ್ರ ಮಾಧ್ಯಮಗಳು, ಯು ಟ್ಯೂಬ್‌ಗಳು ಮತ್ತು ಸಾಮಾಜಿಕ ತಾಣಗಳು ಅಲ್ಲಲ್ಲಿ ಸದ್ದು ಮಾಡುತ್ತಿದ್ದರೂ, ಈ ಸಮಸ್ಯೆಯ ಮೂಲ ಕಾರಣಗಳನ್ನು ಶೋಧಿಸುವ ನಿಟ್ಟಿನಲ್ಲಿ ವಿಫಲವಾಗುತ್ತಿವೆ. ಅರ್ಥವ್ಯವಸ್ಥೆಯನ್ನು ರಾಷ್ಟ್ರೀಯ ಚರ್ಚೆಯ ಒಂದು ಪ್ರಧಾನ ಭಾಗವಾಗಿ ಮಾಡುವುದರಲ್ಲಿ ಭಾರತದ ಮಾಧ್ಯಮ ಲೋಕ ಸೋತಿರುವುದು ಸ್ಪಷ್ಟ. ಮಧ್ಯಮ ವರ್ಗಗಳು ಈ ನಿಟ್ಟಿನಲ್ಲಿ ಕ್ರಿಯಾಶೀಲವಾಗಿ ಪಾಲ್ಗೊಳ್ಳದೆ ಹೋದರೆ ಈ ನಿಷ್ಕ್ರಿಯತೆ ಹೀಗೆಯೇ ಮುಂದುವರೆಯುತ್ತದೆ.

ಬಂಡವಾಳಿಗ ರಾಜಕೀಯ ಪಕ್ಷಗಳ (Bourgeous Political Parties) ನಿರ್ಲಿಪ್ತತೆ ಮತ್ತು ಕಾರ್ಯನಿಷ್ಕ್ರಿಯತೆ, ಪಕ್ಷಾತೀತವಾಗಿ ಎಲ್ಲ ರಾಜ್ಯಗಳಲ್ಲೂ ಕಾರ್ಪೋರೇಟ್‌ ಮಾರುಕಟ್ಟೆ ಆರ್ಥಿಕ ನೀತಿಗಳಿಗೆ ನೀಡಲಾಗುತ್ತಿರುವ ಪ್ರಾಮುಖ್ಯತೆ ಹಾಗೂ ದೇಶದಲ್ಲಿ ಉತ್ಪಾದನಾ ವಲಯದ ನಿರ್ಲಕ್ಷ್ಯ ಈ ಮೂರೂ ಕಾರಣಗಳು ಮಧ್ಯಮ ವರ್ಗಗಳ ಜೀವನವನ್ನು ದುರ್ಭರಗೊಳಿಸುತ್ತಿವೆ. ಇದು ಯಾವುದೇ ದೇಶದ ಆರ್ಥಿಕ ಬೆಳವಣಿಗೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಭಾರತವೂ ಹೊರತಾಗುವುದಿಲ್ಲ. ರೂಪಾಯಿ ಮೌಲ್ಯದ ಕುಸಿತ ಕ್ರಮೇಣ ಚೇತರಿಕೆ ಕಂಡು ಹೆಚ್ಚಾಗಬಹುದು, ಆದರೆ ಮಧ್ಯಮ ವರ್ಗಗಳ, ವಿಶೇಷವಾಗಿ ಹಿತವಲಯದಿಂದಾಚೆ ಇರುವ ಕೆಳ ಮಧ್ಯಮ ವರ್ಗಗಳ ಜೀವನ ಮತ್ತು ಜೀವನೋಪಾಯದ ಮಾರ್ಗಗಳು ಚೇತರಿಸಿಕೊಳ್ಳಬೇಕಾದರೆ, ಕೆಳಸ್ತರದ ಆರ್ಥಿಕತೆಯಲ್ಲಿ ಉದ್ಯೋಗ ಸೃಷ್ಟಿ ಹೆಚ್ಚಾಗಬೇಕು. ಜನರ ಬಳಿ ಖರ್ಚು ಮಾಡಲು ನಗದು ಪ್ರಮಾಣ ಹೆಚ್ಚಾಗಬೇಕು. ತಯಾರಿಕಾ ವಲಯದ ಉದ್ಯೋಗಾವಕಾಶಗಳು ಹೆಚ್ಚಾಗಬೇಕು.

ಈ ನಿಟ್ಟಿನಲ್ಲಿ ಯಾವ ರಾಜಕೀಯ ಪಕ್ಷಗಳೂ ಗಂಭೀರವಾಗಿ ಯೋಚಿಸದಿರುವುದು ವಿಡಂಬನೆಯೇ ಸರಿ.

ಇದನ್ನೂ ನೋಡಿ: ಮೋದಿ ಸರ್ಕಾರದ ಪ್ರಕಾರ ಭಾರತದಲ್ಲಿ 3-7 ಕೋಟಿ ಬಡವರಿದ್ದಾರೆ ಅಷ್ಟೇ! ಹೌದಾ ಭಾರತೀಯರೇ?? Janashakthi Media

Donate Janashakthi Media

Leave a Reply

Your email address will not be published. Required fields are marked *