ಇ.ಡಿ. ನಿರ್ದೇಶಕ ಎಸ್‌ಕೆ ಮಿಶ್ರ ಸೇವಾ ವಿಸ್ತರಣೆ ಕಾನೂನುಬಾಹಿರ- ಸುಪ್ರೀಂ ಕೋರ್ಟ್

ಸರಕಾರ ಕ್ಷಮೆ ಕೇಳಬೇಕು ಎಂದು ಪ್ರತಿಪಕ್ಷಗಳು ಹೇಳುತ್ತಿದ್ದರೆ, ಗೃಹಮಂತ್ರಿಗಳು ವಾಸ್ತವವಾಗಿ ಇದು ಸರಕಾರಕ್ಕೆ ಸಿಕ್ಕಿರುವ ವಿಜಯ ಎಂದಿದ್ದಾರೆ!  ನ್ಯಾಯಪೀಠ  ಸರಕಾರದ ತಂದಿರುವ ತಿದ್ದುಪಡಿಯನ್ನು ಎತ್ತಿ ಹಿಡಿದಿರುವುದು ತಮ್ಮ ವಿಜಯ ಎಂಬುದು ಅವರ ಮಾತಿನ ಭಾವವಂತೆ.

ಜುಲೈ 11 ರಂದು, ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠವು ಜಾರಿ ನಿರ್ದೇಶನಾಲಯದ (ಇ.ಡಿ.) ಮುಖ್ಯಸ್ಥ ಸಂಜಯ್ ಕುಮಾರ್ ಮಿಶ್ರಾರವರ ಸೇವಾ ಅವಧಿಯನ್ನು  ಸೆಪ್ಟೆಂಬರ್ 8, 2021 ರ ನಂತರ ವಿಸ್ತರಿಸಿದ್ದು, 2021 ರ ಸುಪ್ರೀಂ ಕೋರ್ಟ್ ತೀರ್ಪಿನ ಆದೇಶದ ಉಲ್ಲಂಘನೆಯಾದ್ದರಿಂದ ಕಾನೂನುಬಾಹಿರವಾಗಿದೆ ಎಂದು ಹೇಳಿದೆ.

ಸೆಪ್ಟಂಬರ್  2021ರಲ್ಲಿ ಈ  ಪ್ರಕರಣದಲ್ಲಿ, ನ್ಯಾಯಮೂರ್ತಿಗಳಾದ ಎಲ್‌ಎನ್ ರಾವ್ ಅವರ ಪೀಠವು ಎಸ್‌ಕೆ ಮಿಶ್ರಾ ಅವರಿಗೆ ಹೆಚ್ಚಿನ ವಿಸ್ತರಣೆಯನ್ನು ನೀಡಬಾರದು ಎಂದು ಹೇಳಿತ್ತು. ಆದರೂ ಸರಕಾರ ನವೆಂಬರ್ 17, 2021ರಿಂದ  ಮತ್ತು ನವೆಂಬರ್ 17, 2022 ರಿಂದ ಮತ್ತೆ ಸೇವಾ ವಿಸ್ತರಣೆಯನ್ನು ನೀಡಿತು. “ತೀರ್ಪಿನ ಆಧಾರವನ್ನು ತೆಗೆದುಹಾಕಬಹುದಾದರೂ, ಶಾಸಕಾಂಗವು ಮುಂದಿನ ವಿಸ್ತರಣೆಯನ್ನು ನಿರ್ಬಂಧಿಸಿದ ನಿರ್ದಿಷ್ಟ ನ್ಯಾಯಾದೇಶವನ್ನು ರದ್ದುಗೊಳಿಸುವಂತಿಲ್ಲ. “ಎಂದು ಪ್ರಸಕ್ತ ತೀರ್ಪಿನ  ಅಡಿಯಲ್ಲಿ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಹೇಳುತ್ತ ನ್ಯಾಯಮೂರ್ತಿ ಗವಾಯಿ ಹೇಳಿರುವುದಾಗಿ ವರದಿಯಾಗಿದೆ. ಆದ್ದರಿಂದ, ಎಸ್‌ಕೆ ಮಿಶ್ರಾ ಅವರಿಗೆ ತಲಾ ಒಂದು ವರ್ಷದ ಅವಧಿಗೆ ವಿಸ್ತರಣೆಯನ್ನು ನೀಡುವ ಒಕ್ಕೂಟ ಸರಕಾರದ ನವೆಂಬರ್ 17, 2021 ಮತ್ತು ನವೆಂಬರ್ 17, 2022 ರ ಆದೇಶಗಳು ಅನೂರ್ಜಿತ ಎಂದು ನ್ಯಾಯಾಲಯ ಹೇಳಿದೆ. ಆದರೂ, ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್)ನ ಪರಾಮರ್ಶೆ  ಮತ್ತು ಅಧಿಕಾರದ ಶಾಂತಿಯುತ ಹಸ್ತಾಂತರ ಕುರಿತ ಸರಕಾರದ ಆತಂಕವನ್ನು ಪರಿಗಣಿಸಿ ಮಿಶ್ರಾ ಜುಲೈ 31, 2023 ರವರೆಗೆ ತಮ್ಮ  ಸ್ಥಾನದಲ್ಲಿ ಮುಂದುವರಿಯಲು ನ್ಯಾಯಾಲಯ  ಅವಕಾಶ ಮಾಡಿಕೊಟ್ಟಿದೆ.

ಇದು ಮೋದಿ ಸರಕಾರಕ್ಕೆ ದೇಶದ ಸರ್ವೋಚ್ಚ ನ್ಯಾಯಾಲಯದ ಮತ್ತೊಂದು ತಪರಾಕಿ ಎಂದು ಪ್ರತಿಪಕ್ಷಗಳು ಮತ್ತು ಇತರು ಟಿಪ್ಪಣಿ ಮಾಡಿದ್ದಾರೆ. ಆದರೆ ಗೃಹಮಂತ್ರಿಗಳು ಹೀ ಗೆಹೇಳುವವರು ಭ್ರಮಾಧಿನರಾಗಿದ್ದಾರೆ, ವಾಸ್ತವವಾಗಿ ಇದು ಸರಕಾರದ ವಿಜಯ ಎಂದಿದ್ದಾರೆ!

ಹಿನ್ನೆಲೆ

ನವೆಂಬರ್ 19, 2018 ರಂದು, ಎಸ್‌ಕೆ ಮಿಶ್ರಾ ಅವರನ್ನು ಎರಡು ವರ್ಷಗಳ ನಿಗದಿತ ಅವಧಿಗೆ ಇ.ಡಿ. ನಿರ್ದೇಶಕರಾಗಿ ನೇಮಿಸಲಾಯಿತು. ನವೆಂಬರ್ 13, 2020 ರಂದು, ಮಿಶ್ರಾ ಅವರ ಅಧಿಕಾರಾವಧಿಯು ಕೊನೆಗೊಳ್ಳುವ ಕೆಲವೇ ದಿನಗಳ ಮೊದಲು, ಒಕ್ಕೂಟ ಸರಕಾರ  ಹಿಂದಿನ ಆದೇಶವನ್ನು ಪೂರ್ವಾನ್ವಯವಾಗುವಂತೆ ಮಾರ್ಪಡಿಸಿ ಮಿಶ್ರಾ ಅವರ ಅಧಿಕಾರಾವಧಿಯನ್ನು ಎರಡು ವರ್ಷಗಳಿಂದ ಮೂರು ವರ್ಷಗಳಿಗೆ ಬದಲಾಯಿಸಿತು.

ಸೆಪ್ಟೆಂಬರ್ 2021 ರಲ್ಲಿ, ನ್ಯಾಯಮೂರ್ತಿ ಎಲ್. ನಾಗೇಶ್ವರ ರಾವ್ ಅವರ ಸುಪ್ರೀಂ ಕೋರ್ಟ್ ಪೀಠವು ವಿಸ್ತರಣೆಯನ್ನು ಎತ್ತಿಹಿಡಿಯಿತು, ಆದರೆ “ಅಪರೂಪದಲ್ಲಿ ಅಪರೂಪದ ಪ್ರಕರಣಗಳಲ್ಲಿ” ಮಾತ್ರ ಇಂತಹ ಪೂರ್ವಾನ್ವಯದ  ಪರಿಷ್ಕರಣೆಗಳಿಗಷ್ಟೇ ಅವಕಾಶ ನೀಡಬಹುದು, ಆದರೆ  ಮಿಶ್ರಾರವರಿಗೆ ಇನ್ನಷ್ಟು  ವಿಸ್ತರಣೆಯನ್ನು ನೀಡಲಾಗುವುದಿಲ್ಲ ಎಂದು ಹೇಳಿತ್ತು.

ಆದರೂ  ಸರಕಾರ ಅವರಿಗೆ ನವಂಬರ್‍ 17, 2021ರಿಂದ ನವಂಬರ್‍ 17, 2022 ರ ವರೆಗೆ ಎರಡನೇ ಸೇವಾವಿಸ್ತರಣೆಯನ್ನು ನೀಡಿತು. ಇದನ್ನು ಪ್ರಶ್ನಿಸಿದ ಅರ್ಜಿಯೊಂದು ನ್ಯಾಯಾಲಯದ ಮುಂದಿದ್ದಾಗಲೇ ನವಂಬರ್  2022ರಲ್ಲಿ ಮತ್ತೊಂದು ವರ್ಷದ ವಿಸ್ತರಣೆಯನ್ನು ನೀಡಲಾಯಿತು. ಈ ನಡುವೆ  ಇ.ಡಿ. ಮತ್ತು ಸಿಬಿಐ ನಿರ್ದೇಶಕರುಗಳ ಸೇವಾವಧಿಯನ್ನು ನಿಗದಿತ ಎರಡು ವರ್ಷಗಳಿಂದ ಮತ್ತೆ ಮೂರು ವರ್ಷಗಳ ವರೆಗೆ ವಿಸ್ತರಿಸಬಹುದು ಎಂದು ಕೇಂದ್ರ ಜಾಗೃತಾ ಆಯೋಗ ಕಾಯ್ದೆ ಮತ್ತು ದಿಲ್ಲಿ ವಿಶೆಷ ಪೋಲೀಸ್‍ ವ್ಯವಸ್ಥೆ ಕಾಯ್ದೆಗಳಿಗೆ ತಿದ್ದುಪಡಿ ಮಾಡುವ ಸುಗ್ರೀವಾಜ್ಞೆಯನ್ನು ಹೊರಡಿಸಿತು.

ಈ ತಿದ್ದುಪಡಿಯನ್ನು ಮತ್ತು ಅದರ ಪ್ರಕಾರ ಮಿಶ್ರಾರವರ ಸೇವಾ ವಿಸ್ತರಣೆಯನ್ನು ಪ್ರಶ್ನಿಸಿ ಹಾಕಿದ್ದ ಅರ್ಜಿಗಳಿಗೆ ಸಂಬಂಧಪಟ್ಟಂತೆ, ಪ್ರಸ್ತುತ ವಿಚಾರಣೆಯಲ್ಲಿ ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ, ವಿಕ್ರಮ್ ನಾಥ್ ಮತ್ತು ಸಂಜಯ್ ಕರೋಲ್ ಅವರ ಪೀಠವು ಎರಡು ಅಂಶಗಳನ್ನು ಪರಿಶೀಲಿಸಬೇಕಾಗಿತ್ತು: ಮೊದಲನೆಯದ, ತಿದ್ದುಪಡಿಗಳ ಕಾನೂನುಬದ್ಧತೆ ಮತ್ತು ಎರಡನೆಯದು ಮಿಶ್ರಾ ಅವರ ಅಧಿಕಾರಾವಧಿಗೆ ನೀಡಲಾದ ವಿಸ್ತರಣೆಗಳ ಸಿಂಧುತ್ವ.

ಸರಕಾರ ತಂದ ತಿದ್ದುಪಡಿಯನ್ನು ಎತ್ತಿ ಹಿಡಿಯುತ್ತಲೇ ನ್ಯಾಯಪೀಠ, ಶಾಸನಗಳನ್ನು ರೂಪಿಸುವುದನ್ನು ಕುರಿತಂತೆ ನ್ಯಾಯಾಂಗ ಪರಾಮರ್ಶೆಯ ವ್ಯಾಪ್ತಿ ಬಹಳ ಸೀಮೀತವಾಗಿದೆ, “ಉನ್ನತ ಮಟ್ಟದ ಅಧಿಕಾರಿಗಳಿಗೆ ಸಾರ್ವಜನಿಕ ಹಿತದೃಷ್ಟಿಯಿಂದ ಮತ್ತು ಕಾರಣಗಳನ್ನು ಲಿಖಿತವಾಗಿ ದಾಖಲಿಸುವ ಮೂಲಕ ವಿಸ್ತರಣೆ ನೀಡಬಹುದು ಎಂದು ಹೇಳಿತು.

ಆದರೆ ಮಿಶ್ರಾರವರ ಸೇವಾ ವಿಸ್ತರಣೆಯ ಎರಡು ಆದೇಶಗಳು  ನ್ಯಾಯಾಲಯದ ನಿರ್ದಿಷ್ಟ ಆದೇಶದ ಉಲ್ಲಂಘನೆಯಾದ್ದರಿಂದ ಅವನ್ನು ನ್ಯಾಯಪೀಠ ಅನೂರ್ಜಿತಗೊಳಿಸಿತು. ಆದರೂ, ಮೇಲೆ ಹೇಳಿದಂತೆ, ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್)ನ ಪರಾಮರ್ಶೆ ಮತ್ತು ಅಧಿಕಾರದ ಶಾಂತಿಯುತ ಹಸ್ತಾಂತರ ಕುರಿತ ಸರಕಾರದ ಆತಂಕವನ್ನು ಪರಿಗಣಿಸಿ ಮಿಶ್ರಾ ಜುಲೈ 31, 2023 ರವರೆಗೆ ತಮ್ಮ  ಸ್ಥಾನದಲ್ಲಿ ಮುಂದುವರಿಯಲು ನ್ಯಾಯಾಲಯ  ಅವಕಾಶ ಮಾಡಿಕೊಟ್ಟಿರುವುದಾಗಿ ತೀರ್ಪು  ಹೇಳಿದೆ.

ಎಫ್‍ಎಟಿಎಫ್‍ ಮತ್ತು ಮಿಶ್ರಾರ ಅನಿವಾರ್ಯತೆ

ಈ ವರ್ಷ ಮೇ ತಿಂಗಳಲ್ಲಿ ಮೋದಿ ಸರಕಾರದ ಪರವಾಗಿ ವಾದಿಸಿದ ಸಾಲಿಸಿಟರ್ ಜನರಲ್‍ ತುಷಾರ್ ಮೆಹ್ತಾ ಭಯೋತ್ಪಾದನೆಗೆ ನಿಧಿ ನೀಡಿಕೆಯನ್ನು ನಿರ್ಬಂಧಿಸುವಲ್ಲಿ ಭಾರತದ ಕಾರ್ಯದಕ್ಷತೆಯನ್ನು ಕುರಿತಂತೆ  ಎಫ್‍ಎಟಿಎಫ್ ದಶಕದಲ್ಲಿ ಒಮ್ಮೆ ಮಾಡುವ  ಪರಸ್ಪರ(ಪೀರ್) ಪರಾಮರ್ಶೆಯನ್ನು ನಡೆಸುತ್ತಿದ್ದು  ಅದಕ್ಕಾಗಿ ಮಿಶ್ರಾರವರ ಸೇವಾ ವಿಸ್ತರಣೆ ಅಗತ್ಯವಾಯಿತು ಎಂದು ಹೇಳಿದ್ದರು. (ಎಫ್‍ಎಟಿಎಫ್ ಕಪ್ಪು ಹಣವನ್ನು ಬಿಳಿ ಮಾಡುವ ಕೃತ್ಯಗಳು  ಮತ್ತು ಭಯೋತ್ಪಾದನೆಗೆ ನಿಧಿ ನೀಡಿಕೆಗಳ ಮೇಲೆ ನಿಗಾ ಇಡುವ ಜಾಗತಿಕ  ಸಂಸ್ಥೆ. “ಇಡೀ ಸಂಸ್ಥೆಯಲ್ಲಿ ಈ ಜವಾಬ್ದಾರಿಗಳನ್ನು ನಿರ್ವಹಿಸಬಲ್ಲ ಬೇರೆ ಯಾವ ವ್ಯಕ್ತಿಯೂ ಇಲ್ಲವೇ?” ಎಂದು ಕೇಳಿದ್ದ ನ್ಯಾಯಮೂರ್ತಿ ಗವಾಯ್ “ನಿಮ್ಮ ವಾದವನ್ನು ಒಪ್ಪಿದರೂ ಕೂಡ 2023ರಲ್ಲಿ ಮಿಶ್ರಾರವರು ಕೊನೆಗೂ ನಿವೃತ್ತರಾದ ನಂತರ ಮುಂದೇನು?” ಎಂದು  ಆಗ ಪ್ರಶ್ನಿಸಿದ್ದರು ಎಂಬುದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು.

ಅಲ್ಲದೆ ಸೇವಾ ವಿಸ್ತರಣೆಯನ್ನು ಪ್ರಶ್ನಿಸಿದ ಅರ್ಜಿಗಳಲ್ಲಿ ಒಂದರಲ್ಲಿ ಈ ಎಫ್‍ಎಟಿಎಫ್‍ ಪರಾಮರ್ಶೆಯನ್ನೇ ಒಂದು ಆಧಾರವಾಗಿ ಕೊಡಲಾಗಿತ್ತು ಎಂಬುದನ್ನೂ  ಇಲ್ಲಿ ಗಮನಿಸಬಹುದು( ದಿವೈರ್, ಜುಲೈ 12). “ನವಂಬರ್ 2023ರಲ್ಲಿ ಇದ್ದಕ್ಕಿದ್ದಂತೆ ನಿರಂತರತೆಯಲ್ಲಿ ಸಂಭವಿಸಬಹುದಾದ ತಡೆಯನ್ನು ತಪ್ಪಿಸಲು, ಸಾಧ್ಯವಾದಷ್ಟು ಬೇಗನೇ ಹೊಸ ನಿರ್ದೇಶಕರನ್ನು ನೇಮಿಸಿ, ಪರಸ್ಪರ ಮೌಲ್ಯಮಾಪನಗಳ ಮೊದಲು ಅವರು ಗರಿಷ್ಟ ಸಮಯಾವಕಾಶವನ್ನು   ಪಡೆಯಲು ಅನುಕೂಲ ಮಾಡಿಕೊಡುವುದು ಹೆಚ್ಚು ಜಾಗರೂಕ ಕ್ರಮವಾಗುತ್ತದೆ” ಎಂದು ಅರ್ಜಿದಾರರು ಹೇಳಿದ್ದರು” ಎಂದು ವರದಿಯಾಗಿದೆ.

ಈ ವರ್ಷ ಆರಂಭವಾದ ಈ ಮೌಲ್ಯಮಾಪನ 18 ತಿಂಗಳ ಸಮಯ ಚೌಕಟ್ಟಿನದಾಗಿದ್ದು, 2024ರ ಅಂತ್ಯದ ಮೋದಲೇನೂ ಅಂತಿಮ ವರದಿ ಸಲ್ಲಿಕೆಯಾಗುವದಿಲ್ಲ ಎಂದೂ ಹೇಳಲಾಗಿದೆ. ಅಲ್ಲದೆ 40 ವಿಷಯಗಳ ಮೇಲೆ ಈ ಮೌಲ್ಯಮಾಪನ ನಡೆಯಬೇಕಾಗಿದ್ದು, ಕಪ್ಪುಹಣವನ್ನು ಬಿಳಿ ಮಾಡುವ  ಮತ್ತು ಭಯೋತ್ಪಾದನೆಗೆ ನಿಧಿ ನೀಡಿಕೆಯ ವಿಷಯ  ಅವುಗಳಲ್ಲಿ ಒಂದು ಮಾತ್ರ.  ಈ ಒಂದಂಶವಷ್ಟೇ ಇ.ಡಿ. ವ್ಯಾಪ್ತಿಗೆ ಸೇರಿದ್ದು!

ನಿಜ ಹೇಳಬೇಕೆಂದರೆ, ಎಫ್‍ಎಟಿಎಫ್‍ಗೆ ಮಾಹಿತಿಗಳನ್ನು ಕೊಡಬೇಕಾದ ಪ್ರಮುಖ ಇಲಾಖೆ ಅಥವ ಪ್ರಾಧಿಕಾರವೆಂದರೆ ಆರ್ಥಿಕ ವ್ಯವಹಾರಗಳ ಇಲಾಖೆ.  ಇತರ ಪ್ರಮುಖ ಪ್ರಾಧಿಕಾರಗಳೆಂದರೆ, ಅಬಕಾರಿ ಮತ್ತು ಸೀಮಾಸುಂಕಗಳ ಕೇಂದ್ರೀಯ ಮಂಡಳಿ, ಹಣಕಾಸು ಬೇಹುಗಾರಿಕೆ ಘಟಕ(ಎಫ್‍ಐಯು) ಮತ್ತು ಕೇಂದ್ರ ಕಾನೂನು ಇಲಾಖೆ. ಇ.ಡಿ.( ಜಾರಿ ನಿರ್ದೇಶನಾಲಯ) ರೆವಿನ್ಯೂ ಇಲಾಖೆಯ ಅಡಿಯಲ್ಲಿ ಇರುವಂತದ್ದು.  ಮತ್ತು ಇ.ಡಿ.ಯಂತೆ ಕಪ್ಪು ಹಣ ತಡೆ ಕಾಯ್ದೆ ಮತ್ತು ಇತರ ಕಾಯ್ದೆಗಳನ್ನು ಕುರಿತಂತೆ ಎಫ್‍ಐಯು ಕೂಡ ವ್ಯವಹರಿಸುತ್ತದೆ. ಈ ಘಟಕದಲ್ಲಿ 2016 ರಿಂದ ಮುಖ್ಯಸ್ಥರಾಗಿದ್ದ  ಪಂಕಜ್‍ ಮಿಶ್ರ ರವರನ್ನು 2022ರಲ್ಲಿ ಅವರ ಕಾರ್ಯಾವಧಿಗಿಂತ ಮೊದಲೇ ಬೇರೆ ಇಲಾಖೆಗೆ ಕಳಿಸಲಾಯಿತು ಎಂದೂ ಹೇಳಲಾಗಿದೆ. ಅಂದರೆ ಇ.ಡಿ. ಮುಖ್ಯಸ್ಥ ಎಸ್‍.ಕೆ.ಮಿಶ್ರರವರಿಗೆ ಮೂರು ಬಾರಿ ಸೇವಾವಧಿ ವಿಸ್ತರಣೆ ಬೇರೆ ಯಾವುದೋ ಕಾರಣಕ್ಕೆ ಇರಬಹುದೇ ಎಂಬ ಸಂದೇಹ ಹಲವರಿಗಿದೆ.

ಸರಕಾರಕ್ಕೆ ಮುಜುಗರವೇ ಅಥವ ವಿಜಯವೇ?

ಸುಪ್ರಿಂ ಕೋರ್ಟ್ ಇ.ಡಿ. ಸೇವಾವಧಿ ವಿಸ್ತರಣೆಯನ್ನು ಕಾನೂನುಬಾಹಿರ ಎಂದು ಘೋಷಿಸಿರುವ , ಹಾಗೂ ಮೋದಿ ಸರಕಾರದ ಕ್ರಮವನ್ನು  ಸುಪ್ರಿಂ ಕೋರ್ಟಿನ ಆದೇಶದ ಉಲ್ಲಂಘನೆ ಎಂದು  ಅನೂರ್ಜಿತಗೊಳಿಸಿರುವ ಹಿನ್ನೆಲೆಯಲ್ಲಿ ಸರಕಾರ ಕ್ಷಮೆ ಕೇಳಬೇಕಾಗಿದೆ ಎಂದು ಪ್ರತಿಪಕ್ಷಗಳು ಹಾಗೂ ಇತರರು ಹೇಳುತ್ತಿದ್ದರೆ, ಗೃಹಮಂತ್ರಿಗಳು, ಅವರೆಲ್ಲ ಭ್ರಮೆಯಲ್ಲಿದ್ದಾರೆ, ವಾಸ್ತವವಾಗಿ ಇದು ಸರಕಾರಕ್ಕೆ ಸಿಕ್ಕಿರುವ ವಿಜಯ ಎಂದಿದ್ದಾರೆ!  ನ್ಯಾಯಪೀಠ  ಸರಕಾರ ತಂದಿರುವ ತಿದ್ದುಪಡಿಯನ್ನು ಎತ್ತಿ ಹಿಡಿದಿರುವುದು ತಮ್ಮ ವಿಜಯ ಎಂಬುದು ಅವರ ಮಾತಿನ ಭಾವವಂತೆ. ಆದರೆ ಇಲ್ಲಿಯೂ ನ್ಯಾಯಪೀಠ, ಈ ತಿದ್ದುಪಡಿಗಳನ್ನು ಕುರಿತಂತೆ ತನ್ನಅಧಿಕಾರ ವ್ಯಾಪ್ತಿ ಸೀಮಿತವಾಗಿದೆ ಎನ್ನುತ್ತಲೇ, ಸೇವಾವಧಿಯ ವಿಸ್ತರಣೆ ಸಾರ್ವಜನಿಕ ಹಿತದೃಷ್ಟಿಯಿಂದ ಇರಬೇಕು ಮತ್ತು ಅದಕ್ಕೆ ಕಾರಣಗಳನ್ನು ಲಿಖಿತವಾಗಿ ದಾಖಲಿಸಬೇಕು ಎಂದು ಹೇಳಿರುವುದು ಏನನ್ನು ಸೂಚಿಸುತ್ತದೆ ಎಂದು ರಾಜಕೀಯ ವಿಶ್ಲೇಷಕರು ಪ್ರಶ್ನಿಸುತ್ತಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *