ನವದೆಹಲಿ : ದುರಂತಕ್ಕೆ ತಾಂತ್ರಿಕ ಕಾರಣಗಳು ಏನಿರಬಹುದು ಎಂದು ರೈಲ್ವೇ ಸುರಕ್ಷಾ ನಿಯಂತ್ರಣಾಧಿಕಾರಿಗಳಿಗೆ ತನಿಖೆ ಮಾಡಲು ಅವಕಾಶ ನೀಡದೆ ನೇರವಾಗಿ ತರಾತುರಿಯಲ್ಲಿ ಸಿಬಿಐ ತನಿಖೆಗೆ ಆದೇಶ ನೀಡಿರುವುದು ವಿಧ್ವಂಸಕ ಕೃತ್ಯದ ಸಾಧ್ಯತೆಯನ್ನು ಸರ್ಕಾರ ಸೂಚಿಸುತ್ತಿರಬಹುದೆ ? ಎಂದು ಮಾಜಿ ಕೇಂದ್ರ ಕಂದಾಯ ಕಾರ್ಯದರ್ಶಿ ಇ.ಎ.ಎಸ್ ಶರ್ಮಾ ಅವರು ಕೇಂದ್ರ ರೈಲ್ವೇ ಸಚಿವ ಅಶ್ವಿನ್ ವೈಷ್ಣವ್ ಅವರಿಗೆ ಪತ್ರ ಬರೆದು ಪ್ರಶ್ನಿಸಿದ್ದಾರೆ.
“ರೈಲ್ವೇ ಸಚಿವಾಲಯದ ಮಟ್ಟದಲ್ಲಿನ ಸರ್ಕಾರದ ಆಡಳಿತ ವೈಫಲ್ಯವನ್ನು ಮರೆ ಮಾಚಲು ಕೈಗೊಂಡ ಕ್ರಮ ಇದಿರಬಹುದು ಎಂದು ತೋಚುತ್ತದೆ” ಎಂದೂ ಅವರು ಗಂಭೀರ ಅನುಮಾನ ವ್ಯಕ್ತಪಡಿಸಿದ್ದಾರೆ.
ಅಶ್ವಿನ್ ವೈಷ್ಣವ್ ಮತ್ತು ಪ್ರಧಾನಿ ಮೋದಿಯವರು ಭಾರಿ ಪ್ರಚಾರ ಮಾಡಿ ಪ್ರಯಾಣಿಕರ ಸುರಕ್ಷತೆಗಾಗಿ ತಮ್ಮ ಸರ್ಕಾರದ ಬಹು ದೊಡ್ಡ ಕೊಡುಗೆ ಎಂದು ಹಾಡಿ ಹೊಗಳಿದ ಪರಸ್ಪರ ಢಿಕ್ಕಿ ತಡೆ ವ್ಯವಸ್ಥೆಯಾದ “ಕವಚ್” ಯೋಜನೆಯನ್ನು ಇನ್ನೂ ದೇಶದ 97% ರೈಲುಗಳಿಗೆ ಅಳವಡಿಸಬೇಕಾಗಿರುವ ಹಿನ್ನೆಲೆಯಲ್ಲಿ, ಈ ಬಾಲಾಸೋರ್ ದುರಂತಕ್ಕೆ ಬಿಪಿಎಸಿ (ಬ್ಲಾಕ್ ಪ್ರೂವಿಂಗ್ ಏಕ್ಸೆಲ್ ಕೌಂಟರ್ಸ್) ವ್ಯವಸ್ಥೆಯಲ್ಲಿನ ದೋಷಗಳು ಕಾರಣವಾಗಿರಬಹುದೆ ಎಂದು ರೈಲ್ವೆಯವರು ತನಿಖೆ ಮಾಡುವ ಅಗತ್ಯವಿದೆ ಎಂದು ತಜ್ಞರು ಸೂಚಿಸುತ್ತಿದ್ದಾರೆ.
ಹಳಿಯ ಮೇಲೆ ಒಂದು ರೈಲು ಚಲಿಸಲು ಆ ಹಳಿಯಲ್ಲಿ ಬೇರೆ ಯಾವ ರೈಲೂ ಬರುತ್ತಿಲ್ಲ ಎನ್ನುವುದನ್ನು ಈ ಬಿಪಿಎಸಿ ವ್ಯವಸ್ಥೆಯ ಉಪಕರಣ ಖಾತ್ರಿಪಡಿಸುತ್ತದೆ ಎಂದು ರೈಲ್ವೇ ಇಲಾಖೆಗೆ ಆ ಉಪಕರಣವನ್ನು ಪೂರೈಕೆ ಮಾಡಿದ ಕಂಪನಿ ಹೇಳಿಕೊಂಡಿದೆ.
ಪ್ರಾಯಶಃ ಈ ವ್ಯವಸ್ಥೆಯ ವೈಫಲ್ಯತೆಯೇ ಬಾಲಾಸೋರ್ ದುರಂತಕ್ಕೆ ಕಾರಣವಾಗಿರಬಹುದು. ಫೆಬ್ರವರಿ 2022 ರಲ್ಲಿ ಇಲಾಖೆಯ ಒಬ್ಬ ಹಿರಿಯ ಅಧಿಕಾರಿ ರೈಲ್ವೇಗೆ ಸಲ್ಲಿಸಿದ ಒಂದು ಟಿಪ್ಪಣಿಯ ಬಗ್ಗೆ ಪತ್ರಿಕೆಯಲ್ಲಿ ಪ್ರಕಟವಾದ ವರದಿಯನ್ನು ಶರ್ಮಾ ಅವರು ಸಚಿವ ವೈಷ್ಣವ್ ಅವರ ಗಮನಕ್ಕೆ ತರುತ್ತಾರೆ. ರೈಲ್ವೆಯ ಮೈಸೂರು ವಿಭಾಗದಲ್ಲಿ ದೋಷಪೂರಿತ ಉಪಕರಣದಿಂದಾಗಿ ಎರಡು ರೈಲುಗಳು ಢಿಕ್ಕಿ ಯಾಗುವ ಸಂಭವವಿತ್ತು ಎಂಬ ವಿಷಯವನ್ನು ಆ ಟಿಪ್ಪಣಿಯಲ್ಲಿ ಹೇಳಲಾಗಿತ್ತು. ಆ ದೋಷಪೂರಿತ ಉಪಕರಣದಿಂದಾಗಿ ರೈಲು ಒಂದು ನಿಲ್ದಾಣದಿಂದ ಹೊರಟ ನಂತರವೂ ಆ ಮಾರ್ಗದಲ್ಲಿ ಮತ್ತೊಂದು ರೈಲು ಚಲಿಸುವ ಸಾಧ್ಯತೆ ಇರುವುದನ್ನು ನೈಋತ್ಯ ರೈಲ್ವೇ ಅಧಿಕಾರಿ ಈ ವರ್ಷದ ಫೆಬ್ರವರಿ 9 ರಂದು ಕೇಂದ್ರ ಕಛೇರಿಗೆ ಬರೆದು ತಿಳಿಸಿದ್ದರು.
ಬಿಪಿಎಸಿ ಉಪಕರಣದ ದೋಷವನ್ನು ತಿಳಿಸಿದ ಈ ಪತ್ರ ರೈಲ್ವೆ ಮಂಡಳಿಯನ್ನು ಎಚ್ಚರಿಸಬೇಕಿತ್ತು. ರೈಲ್ವೇ ಮಂಡಳಿಯು ಆ ಪತ್ರದ ವಿಚಾರದಲ್ಲಿ ಯಾವ ಕ್ರಮ ತೆಗೆದುಕೊಂಡಿದೆ? ಈಗ ಸೂಪರ್ ವೇಗದಲ್ಲಿ ದೇಶದ ಉದ್ದಗಲದಲ್ಲಿ ಚಲಿಸುತ್ತಿರುವ ಇವತ್ತಿನ ಸಂದರ್ಭದಲ್ಲಿ, ರೈಲ್ವೆ ಮಂಡಳಿಯು ಆ ಪತ್ರದ ಬಗ್ಗೆ ಸರಿಯಾದ ಸಮಯಕ್ಕೆ ಏನಾದರೂ ಕ್ರಮ ವಹಿಸಿದ್ದರೆ, ಆ ನಂತರ ಸಂಭವಿಸಿದ ಅನಾಹುತಗಳನ್ನು ತಪ್ಪಿಸಬಹುದಿತ್ತು ! ಎಂದು ತಿಳಿಸಿದ್ದಾರೆ.