ಬೆಂಗಳೂರು: ಧರ್ಮಸ್ಥಳ ಪ್ರದೇಶದಲ್ಲಿ ಕ್ರೂರವಾಗಿ ಹತ್ಯೆಗೈದು ಹೆಣಗಳನ್ನು ಹೂತು ಹಾಕಿದ ಪ್ರಕರಣಗಳ ಸಾಕ್ಷಿ ನೀಡಲು ಪ್ರತ್ಯಕ್ಷದರ್ಶಿ ದೂರದಾರರು ಮುಂದೆ ಬಂದಿದ್ದು ರಾಜ್ಯ ಸರಕಾರ ಧರ್ಮಸ್ಥಳ ಸರಣಿ ಹತ್ಯೆ ಪ್ರಕರಣ ಕುರಿತು ಎಸ್.ಐ.ಟಿ ರಚಿಸಿ ನಿಷ್ಪಕ್ಷಪಾತ ತನಿಖೆಗೆ ಮುಂದಾಗಬೇಕು ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ರಾಜ್ಯ ಸಮಿತಿಯು ಒತ್ತಾಯಿಸುತ್ತದೆ ಎಂದು ಅಧ್ಯಕ್ಷೆ ಲವಿತ್ರ ವಸ್ತ್ರದ ಹಾಗೂ ಕಾರ್ಯದರ್ಶಿ ಬಸವರಾಜ ಪೂಜಾರ ಜಂಟಿ ಹೇಳಿಕೆ ನೀಡಿದ್ದಾರೆ. ಹತ್ಯೆ
ಈಗಾಗಲೇ ಧರ್ಮಸ್ಥಳ ಪ್ರದೇಶದಲ್ಲಿ ಕೊಲೆಗೈದು ಶವಗಳನ್ನು ಹೂತು ಹಾಕಲಾಗಿದ್ದು ಆ ಕುರಿತು ಪ್ರತ್ಯಕ್ಷದರ್ಶಿಯಾಗಿರುವ ದೂರುದಾರ ವ್ಯಕ್ತಿ (ನಾಪತ್ತೆ) ತಲೆಮರೆಸಿಕೊಳ್ಳದಂತೆ ಕಾಯುವ ಹಾಗೂ ರಕ್ಷಣೆ ಒದಗಿಸುವ ಮಹತ್ವದ ಜವಾಬ್ದಾರಿ ಪೊಲೀಸ್ ಇಲಾಖೆಯ ಮೇಲಿದೆ. ಸಿದ್ರಾಮಯ್ಯ ನೇತೃತ್ವದ ಕಾಂಗ್ರೇಸ್ ಸರಕಾರ ಈ ಕುರಿತು ಕಟ್ಟೆಚ್ಚರ ವಹಿಸಬೇಕಿದೆ. ಹೆಚ್ಚುಕಮ್ಮಿಯಾದರೆ ಸರಕಾರದ ಮೇಲೆ ಗಂಭೀರ ಪರಿಣಾಮ ಆಗಲಿದೆ ಎಂಬುದನ್ನು ಮರೆಯಬಾರದು ಎಂದರು.
ಇದನ್ನೂ ಓದಿ: ಕಲ್ಬುರ್ಗಿ| ಎಸ್‌ಎಫ್ಐ ಪ್ರತಿಭಟನೆ: ಮೋದಿ ಸರ್ಕಾರದಲ್ಲಿ ವಿದ್ಯಾರ್ಥಿಗಳಿಗಿಲ್ಲ ಸುರಕ್ಷತೆ
ಧರ್ಮಸ್ಥಳದ ಬಗ್ಗೆ ತಮಗಿರುವ ಇರುವ ಭಾವನಾತ್ಮಕ ನಂಟನ್ನು ಮುಂದು ಮಾಡಿ ಮುಖ್ಯಮಂತ್ರಿಗಳು ಇಡೀ ಸನ್ನಿವೇಶವನ್ನು ಇನ್ನಷ್ಟು ಸಂಕೀರ್ಣಗೊಳಿಸಲು ಮುಂದಾಗಬಾರದು. ಈ ಪ್ರಕರಣದಲ್ಲಿ ಭಾವನಾತ್ಮಕತೆ ಮುಖ್ಯವಾಗದೇ ಭಯಾನಕತೆಯು ಮುಖ್ಯವಾಗಿ ನೊಂದವರಿಗೆ ನ್ಯಾಯ ದೊರಕಿಸಿಕೊಡಬೇಕಾದುದು ಎಲ್ಲಕ್ಕಿಂತ ಮುಖ್ಯವೆಂಬುದನ್ನು ರಾಜ್ಯ ಸರ್ಕಾರ ಸಾಬೀತುಪಡಿಸಬೇಕಿದೆ ಎಂದು ಆಗ್ರಹಿಸಿದರು.
ಅಧಿಕಾರದಲ್ಲಿರುವ ಕಾಂಗ್ರೇಸ್ ಸರಕಾರಕ್ಕೆ ಇಚ್ಛಾಶಕ್ತಿ ಇಲ್ಲದಿದ್ದರೆ, ಎಸ್ಐಟಿ ರಚನೆಯಿಂದಲೂ ನ್ಯಾಯ ಸಿಗಲಾರದು. ಪಾತಕಿಗಳು ತಮಗೆ ಬೇಕಾದ ಅಧಿಕಾರಿಗಳನ್ನು ಅಲ್ಲಿ ಇರುವಂತೆ ನೋಡಿಕೊಳ್ಳುವ ಸಾಧ್ಯತೆಯೇ ಹೆಚ್ಚು. ಸೌಜನ್ಯ ಪ್ರಕರಣ ತನಿಖೆಯ ಸಂದರ್ಭದಲ್ಲಿ ಎಸ್.ಐ.ಟಿ ರಚನೆಯಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಧರ್ಮಸ್ಥಳದ ಪಾತಕಗಳ ಸತ್ಯಾಸತ್ಯತೆ ತಿಳಿಯುವುದು ರಾಜ್ಯದ ಜನತೆಯ ಹಕ್ಕು ಎಂದರು.
ಈ ಕುರಿತು ನಿಷ್ಪಕ್ಷಪಾತವಾಗಿ ತನಿಖೆ ನಡೆಸಲು ಎಸ್.ಐ.ಟಿ ರಚನೆ ಮಾಡಿ ಹಾಲಿ ಅಥವಾ ನಿವೃತ್ತ ಸುಪ್ರೀಮ್ ಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸುವುದು ಅಗತ್ಯವಿದೆ. ರಾಜ್ಯ ಸರಕಾರ ಈ ನಿಟ್ಟಿನಲ್ಲಿ ವಿಳಂಬ ನೀತಿ ಅನುಸರಿಸದೇ ಎಸ್.ಐ.ಟಿ ರಚಿಸಲು ಮುಂದಾಗಬೇಕು. ಇಲ್ಲವಾದಲ್ಲಿ ಈ ತನಿಖೆಗೆ ಒತ್ತಾಯಿಸಿ ರಾಜ್ಯವ್ಯಾಪಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ರಾಜ್ಯ ಸಮಿತಿಯು ಆಗ್ರಹಿಸುತ್ತದೆ ಎಂದು ಹೇಳಿದರು.
ಇದನ್ನೂ ನೋಡಿ: ಧರ್ಮಸ್ಥಳದಲ್ಲಿ ಹೂತಿಟ್ಟ ಶವಗಳ ಪ್ರಕರಣಪ್ರಭಾವ ಲೆಕ್ಕಿಸದೆ ಬಂಧಿಸಬೇಕು | Janashakthi Media
