ದ್ವೇಷ ರಾಜಕಾರಣದಿಂದ ಹೊಲಸು ರಾಜಕಾರಣದವರೆಗೆ

ರಾಜಕೀಯೇತರ ಕಾಣದ ಕೈಗಳ ವಿಕೃತಿಗಳಿಗೆ ಸಾಂಸ್ಕೃತಿಕ ರಾಜಕಾರಣದ ಸುಭದ್ರ ಬುನಾದಿ ಇದೆ

ನಾ ದಿವಾಕರ

ಭಾರತದ ಅಧಿಕಾರ ರಾಜಕಾರಣ ತನ್ನ ಸತ್ವಯುತ ಮೌಲ್ಯಗಳನ್ನು ಕಳೆದುಕೊಂಡು ದಶಕಗಳೇ ಸಂದಿವೆ. 1980ರ ದಶಕದಲ್ಲಿ ಜಾತಿ ರಾಜಕಾರಣ ಪರಾಕಾಷ್ಠೆ ತಲುಪಿದ್ದರೂ, ಆಯಾರಾಂ ಗಯಾರಾಂ ಸಂತತಿಯು ರಕ್ತಬೀಜಾಸುರರಂತೆ ಎಲ್ಲೆಡೆ ಸೃಷ್ಟಿಯಾಗುತ್ತಿದ್ದರೂ, ಅಧಿಕಾರ ರಾಜಕಾರಣ ತನ್ನ ಪೀಠ ಉಳಿಸಿಕೊಳ್ಳಲು ಭಯೋತ್ಪಾದನೆ, ಕೋಮುವಾದ, ಜಾತಿವಾದ, ಮತಾಂಧತೆ ಮುಂತಾದ ಎಲ್ಲ ರೀತಿಯ ವಿಚ್ಚಿದ್ರಕಾರಕ ಧೋರಣೆಗಳನ್ನು ಪೋಷಿಸುತ್ತಿದ್ದಾಗಲೂ, ಎಲ್ಲೋ ಒಂದು ಕಡೆ “ಮೌಲ್ಯಾಧಾರಿತ ರಾಜಕಾರಣ” ಎಂಬ ಕ್ಷೀಣ ಸ್ವರ ಕೇಳಿಬರುತ್ತಿತ್ತು. ಈ ಭ್ರಮಾತ್ಮಕ ಪರಿಕಲ್ಪನೆಗೆ ಕರ್ನಾಟಕವೇ ತವರು ಮನೆಯಾಗಿತ್ತು ಎಂದರೆ ನಂಬಲಾಗದಷ್ಟು ಮಟ್ಟಿಗೆ ಇಂದು ರಾಜ್ಯ ರಾಜಕಾರಣ ಸಂಪೂರ್ಣ ಬೆತ್ತಲಾಗಿ ನಿಂತುಬಿಟ್ಟಿದೆ. 1960ರ ದಶಕದ ನೈತಿಕ ಮೌಲ್ಯಗಳು 80ರ ದಶಕದ ವೇಳೆಗೆ ಅಧಿಕಾರ ಮೌಲ್ಯಗಳಾಗಿ ಪರಿವರ್ತಿತವಾದವು. ಹೊಸ ಸಹಸ್ರಮಾನದ ಆರಂಭಕ್ಕೆ ಇದು ಮಾರುಕಟ್ಟೆ ಮೌಲ್ಯವಾಗಿ ಬದಲಾಗಿತ್ತು. ಆತ್ಮನಿರ್ಭರ ಭಾರತದಲ್ಲಿ ಈಗ ಮೂರೂ ಮಾದರಿಯ ಮೌಲ್ಯಗಳು ಅರ್ಥಹೀನವಾಗಿ ಕಾಣುತ್ತಿವೆ. ಹಾಗಾಗಿಯೇ ಇಂದು ಪಕ್ಷಾಂತರ, ಭ್ರಷ್ಟಾಚಾರ, ಹಗರಣಗಳು ಸದ್ದು ಮಾಡುತ್ತಿಲ್ಲ. ಕುದುರೆ ವ್ಯಾಪಾರ ಎನ್ನುವ ಪದಬಳಕೆಯೇ ಇಲ್ಲವಾಗಿದೆ. ಕಾರಣ, ಶಾಸಕರು, ಸಂಸದರು ಮುಕ್ತ ಮಾರುಕಟ್ಟೆಯಲ್ಲಿ ಖುಲ್ಲಂಖುಲ್ಲಾ ಬಿಕರಿಯಾಗುತ್ತಿದ್ದಾರೆ. ಹೀಗೆ ಬಿಕರಿಯಾದ ಅನರ್ಹ ಶಾಸಕರನ್ನೊಳಗೊಂಡ ಸರ್ಕಾರಗಳು ನಮ್ಮ ಸಂವಿಧಾನವನ್ನು ಪ್ರತಿನಿಧಿಸುತ್ತಿವೆ.

ಭಾರತದ ಸಂವಿಧಾನ ಜನಾಂಗೀಯ ಅನುಪಾತ ಆಧಾರಿತ ಪ್ರಾತಿನಿಧ್ಯ ವ್ಯವಸ್ಥೆಯನ್ನು ಸ್ವೀಕರಿಸಿಲ್ಲ. ಸಾಂವಿಧಾನಿಕ ಮೌಲ್ಯಗಳಿಗೆ ಬದ್ಧರಾಗಿ ಜನರಿಂದ ಚುನಾಯಿತರಾಗುವ ಪ್ರತಿನಿಧಿಗಳು, ಜಾತಿ-ಮತ-ಕುಲ-ಪಂಥ-ಪಂಗಡ ಈ ಎಲ್ಲ ಅಸ್ಮಿತೆಗಳಿಂದ ಹೊರತಾದ ಸಮಾಜವನ್ನು ಪ್ರತಿನಿಧಿಸುತ್ತಾರೆ. ಈ ಕನಿಷ್ಠ ಪ್ರಜ್ಞೆಯನ್ನೂ ಕಳೆದುಕೊಂಡಿರುವ ಇಂದಿನ ಜನಪ್ರತಿನಿಧಿಗಳು ಪಕ್ಷ ರಾಜಕಾರಣ ಮತ್ತು ತಮ್ಮ ಪಕ್ಷಗಳ ಸೈದ್ಧಾಂತಿಕ ನೆಲೆಗಳನ್ನೇ ಆಶ್ರಯಿಸಿ ಜನಸಾಮಾನ್ಯರನ್ನು ವಿಂಗಡಿಸಿ, ವಿಭಜಿಸಿ ನೋಡಲಾರಂಭಿಸಿದ್ದಾರೆ. ಮಂಡಲ ಪಂಚಾಯತ್‌ನಿಂದ ಸಂಸತ್ತಿನವರೆಗೆ ಚುನಾಯಿತರಾದ ಯಾವುದೇ ಪ್ರತಿನಿಧಿ ತನ್ನ ಕೌಟುಂಬಿಕ ವಲಯದಿಂದ ಹೊರಗೆ ಕಾಲಿಟ್ಟ ಕೂಡಲೇ ಸಾರ್ವಜನಿಕ ವ್ಯಕ್ತಿತ್ವ ಪಡೆದುಕೊಳ್ಳುತ್ತಾನೆ/ಳೆ. ಅದರೊಂದಿಗೇ ತನ್ನ ಕೌಟುಂಬಿಕ ನೆಲೆಯ ಅಸ್ಮಿತೆಗಳನ್ನೂ, ನಂಬಿಕೆ ಮತ್ತು ಆಚರಣೆಗಳನ್ನೂ, ಮತಶ್ರದ್ಧೆ ಮತ್ತು ಜಾತಿ ನಿಷ್ಠೆಯನ್ನೂ ಕಳೆದುಕೊಳ್ಳಬೇಕಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯೇ ಧರ್ಮ, ಸಂವಿಧಾನವೇ ಧರ್ಮ ಗ್ರಂಥ ಆಗಬೇಕಾಗುತ್ತದೆ. ಈ ಸಾಂವಿಧಾನಿಕ ಮೌಲ್ಯಗಳನ್ನು ಸಂಪೂರ್ಣವಾಗಿ ಕಳೆದುಕೊಂಡಿರುವುದರಿಂದಲೇ ಭಾರತದ ಪ್ರಜಾತಂತ್ರ ಇಂದು ಅವನತಿಯತ್ತ ಸಾಗುತ್ತಿದೆ.

ಸಾರ್ವಜನಿಕರ ನಡುವೆ ಸಂವಿಧಾನವನ್ನು ಪ್ರತಿನಿಧಿಸಬೇಕಾದ ಚುನಾಯಿತ ಪ್ರತಿನಿಧಿಗಳು ತಮ್ಮ ಮನೆಯ ಹೊಸ್ತಿಲಿನಿಂದಾಚೆಗೆ ಆಡುವ ಪ್ರತಿಯೊಂದು ಮಾತಿಗೂ ಸಾರ್ವಜನಿಕ, ಸಾರ್ವತ್ರಿಕ ಮೌಲ್ಯ ಇರುತ್ತದೆ. ಸಾಂವಿಧಾನಿಕ ನೈತಿಕತೆಯನ್ನು ಗೌರವಿಸಿ ಈ ಮೌಲ್ಯಗಳನ್ನು ಉಳಿಸಿ ಬೆಳೆಸುವುದು ಪ್ರತಿಯೊಂದು ರಾಜಕೀಯ ಪಕ್ಷದ ನೈತಿಕ ಹೊಣೆಯೂ ಆಗಿರುತ್ತದೆ. ಇದು ಅರಿವಾಗಬೇಕಾದರೆ ಜನಪ್ರತಿನಿಧಿಗಳಿಗೆ ಸಮಾಜದ ನಾಡಿ ಮಿಡಿತ ಅರ್ಥವಾಗಬೇಕು. ಕಾರ್ಪೋರೇಟ್‌ ಮಾರುಕಟ್ಟೆಯ ಹಣ ಚೆಲ್ಲುವ ಮೂಲಕ ಬಹುಮತ ಗಳಿಸಿದ್ದರೂ, ಕೆಳಸ್ತರದ ದುಡಿಮೆಯ ಜನರು ತಮ್ಮ ಜೀವನೋಪಾಯದ ಮಾರ್ಗಗಳನ್ನು ಸುಗಮಗೊಳಿಸುವ ಒಂದು ಸಮನ್ವಯದ ಸಮಾಜವನ್ನು ಬಯಸಿ ಮತ ನೀಡಿರುತ್ತಾರೆ. ಈ ದುಡಿವ ಜನಗಳ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಬೇಕಾದರೆ, ಅಸ್ಮಿತೆಗಳ ಚೌಕಟ್ಟಿನಿಂದ ಹೊರಬಂದು ಆಲೋಚನೆ ಮಾಡಬೇಕಾಗುತ್ತದೆ. ಈ ಶ್ರಮಿಕರ ಮತ್ತು ಶ್ರಮವನ್ನೇ ನಂಬಿ ಬದುಕುವ ಕೋಟ್ಯಂತರ ಕುಟುಂಬಗಳ ನಾಡಿಮಿಡಿತವನ್ನು ಗ್ರಹಿಸದ ಹೊರತು ಈ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲಾಗುವುದಿಲ್ಲ. ಧಾರವಾಡದಲ್ಲಿ ಐದು ಕ್ವಿಂಟಲ್‌ ಕಲ್ಲಂಗಡಿ ಹಣ್ಣನ್ನು ಮಣ್ಣು ಮಾಡಿದ ಮತಾಂಧರಿಗೆ  ಮತೀಯ ಉನ್ಮಾದ ಖುಷಿ ನೀಡಬಹುದು ಆದರೆ ಈ ಕಲ್ಲಂಗಡಿಯ ಹಿಂದೆ ಇರುವ ಕಾಯಕ ಸಮಾಜದಲ್ಲಿ ಅಂಗಡಿಯನ್ನು ಕಳೆದುಕೊಂಡ ಮುಸ್ಲಿಂ ವೃದ್ಧನೊಂದಿಗೇ ನೂರಾರು ಹಿಂದೂ, ದಲಿತ, ಕ್ರೈಸ್ತ ಶ್ರಮಜೀವಿಗಳಿರುತ್ತಾರೆ. ಈ ವಾಸ್ತವವನ್ನು ಅರ್ಥಮಾಡಿಕೊಂಡರೆ ಜನಪ್ರತಿನಿಧಿಗಳು ಇಂತಹ ದುಷ್ಕೃತ್ಯಗಳನ್ನು ಕೂಡಲೇ ಖಂಡಿಸಬೇಕಾಗುತ್ತದೆ.

ಇಂತಹ ವ್ಯವಸ್ಥೆಯಲ್ಲಿ ಒಂದು ಪ್ರಜಾಸತ್ತಾತ್ಮಕ ಸಂವಿಧಾನವನ್ನು ಪ್ರತಿನಿಧಿಸುವ ವ್ಯಕ್ತಿಗಳಿಗೆ ತಮ್ಮ ಸಾರ್ವಜನಿಕ ವ್ಯಕ್ತಿತ್ವದ ಪರಿವೆ, ಪರಿಜ್ಞಾನ ಇರಬೇಕಲ್ಲವೇ ? ಅಸ್ಪೃಶ್ಯತೆ, ಜಾತಿ ತಾರತಮ್ಯ, ಜಾತಿ ದೌರ್ಜನ್ಯ ಮತ್ತು ಮತೀಯ ದ್ವೇಷದ ಸರಕುಗಳನ್ನು ಹೊತ್ತುಕೊಂಡು, ಮತದಾರರ ನಡುವೆ ಅಮೂಲ್ಯ ಮತಗಳನ್ನು ಬಿಕರಿ ಮಾಡುತ್ತಾ, ಕೊನೆಗೆ ಅಧಿಕಾರ ಲಾಲಸೆಗಾಗಿ ತಮ್ಮನ್ನೂ ಬಿಕರಿಗಿಟ್ಟು ಮಾರಿಕೊಳ್ಳುವ ಜನಪ್ರತಿನಿಧಿಗಳಲ್ಲಿ ಈ ಪರಿಜ್ಞಾನವನ್ನು ಅಪೇಕ್ಷಿಸಲಾದೀತೇ ? ಧಾರವಾಡದಲ್ಲಿ ಮಣ್ಣಾದ ಕಲ್ಲಂಗಡಿ ಹಣ್ಣುಗಳು ಈ ದ್ವೇಷ ರಾಜಕಾರಣವನ್ನೇ ಪ್ರತಿನಿಧಿಸುತ್ತವೆ. ಈ ದ್ವೇಷ ಎಲ್ಲಿಯವರೆಗೆ ಹರಡಲು ಸಾಧ್ಯ ? ಒಂದು ಮಂದಿರಕ್ಕಾಗಿ, ಚಾರಿತ್ರಿಕ ಮಸೀದಿಗಾಗಿ ಗತ ಇತಿಹಾಸವನ್ನೇ ಪಲ್ಲಟಗೊಳಿಸಿ ಸಮಕಾಲೀನ ಸಮಾಜದ ಮನುಜ ಸಂಬಂಧಗಳನ್ನು ಮರುವಿಶ್ಲೇಷಣೆಗೊಳಪಡಿಸುವ ಸಾಂಸ್ಕೃತಿಕ ರಾಜಕಾರಣದ ಪರಿಣಾಮ ಇಂದು ಭಾರತದಲ್ಲಿ ಜನಾಂಗೀಯ ದ್ವೇಷ ಮಡುಗಟ್ಟಿದೆ. ನಿರ್ದಿಷ್ಟ ಮತಶ್ರದ್ಧೆಯನ್ನು ಪ್ರತಿನಿಧಿಸುವ ಮತೀಯ ಸಂಘಟನೆಗಳು, ಧಾರ್ಮಿಕ ನೇತಾರರು, ಮುಸ್ಲಿಂ ಮೌಲ್ವಿಗಳು, ಹಿಂದೂ ಮಠಾಧೀಶರು, ಮಠೋದ್ಯಮಿಗಳು, ಸಾಧು ಸಂತರು ತಮ್ಮದೇ ಆದ ಸಾಂಸ್ಥಿಕ, ಮತ ಕೇಂದ್ರಿತ, ಧರ್ಮ ಕೇಂದ್ರಿತ ಅಸ್ಮಿತೆಗಳನ್ನು ರಕ್ಷಿಸಿಕೊಳ್ಳಲು ಅಧಿಕಾರ ಕೇಂದ್ರಗಳೊಡನೆ ನಿಕಟ ಸಂಪರ್ಕವನ್ನು ಸಾಧಿಸಿ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳುತ್ತಿದ್ದಾರೆ.

ಇದರೊಂದಿಗೇ ಹಿಂದೂ ಧರ್ಮ ರಕ್ಷಣೆಗೆ, ಇಸ್ಲಾಂ ಧರ್ಮ ರಕ್ಷಣೆಗೆ ಟೊಂಕ ಕಟ್ಟಿ ನಿಂತ ಹತ್ತು ಹಲವು ಸಂಘಟನೆಗಳು ಇಂದು ದೇಶಾದ್ಯಂತ ಹರಡಿವೆ. ಹರಿದ್ವಾರದಲ್ಲಿ ನಡೆದ ಹಿಂದೂ ಸಂತರ ಸಮ್ಮೇಳನದಲ್ಲಿ ಮುಸಲ್ಮಾನರ ನರಮೇಧಕ್ಕೆ ಕರೆ ನೀಡಿರುವುದನ್ನೂ ಸೇರಿದಂತೆ, ಹಲವು ಧಾರ್ಮಿಕ ನಾಯಕರು, ಸ್ವಾಮೀಜಿಗಳು ಜನವಿರೋಧಿ ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದಾರೆ. ಇದಕ್ಕೆ ಪ್ರತಿಯಾಗಿ ಕೆಲವು ಮುಸ್ಲಿಂ ಮತಾಂಧ ಸಂಘಟನೆಗಳೂ ಸಹ ಪ್ರತ್ಯಕ್ಷವಾಗಿ, ಪರೋಕ್ಷವಾಗಿ, ಮತೀಯ ದ್ವೇಷವನ್ನು ಹರಡುವ ಕಾರ್ಯಾಚರಣೆಯಲ್ಲಿ ತೊಡಗಿರುವುದು ಗುಟ್ಟಿನ ಮಾತೇನಲ್ಲ. ಈ ವಾಸ್ತವವನ್ನು ಒಪ್ಪಿಕೊಂಡೇ ಭಾರತ ಇಂದು ಮತಾಂಧತೆಯ ವಿರುದ್ಧ ಹೋರಾಡಬೇಕಿದೆ. ಅಲ್ಪಸಂಖ್ಯಾತ ಸಮುದಾಯಗಳ ಜೀವನೋಪಾಯಕ್ಕೆ ಸಂಚಕಾರ ತಂದೊಡ್ಡುವ ರೀತಿಯಲ್ಲಿ ವ್ಯಾಪಾರ ನಿಷೇಧ ಹೇರುವ ಪ್ರಕ್ರಿಯೆಗೆ ಚಾಲನೆ ದೊರೆತಿದ್ದು, ಇದು ದೇವಾಲಯದ ಆವರಣದಿಂದ ಸಂತೆಮಾಳದವರೆಗೆ, ಜಾತ್ರೆಗಳವರೆಗೆ ಹರಡಿದೆ. ಇದರ ಪರಾಕಾಷ್ಠೆಯನ್ನು ಧಾರವಾಡದ ಕಲ್ಲಂಗಡಿ ಅಂಗಡಿಯ ಧ್ವಂಸದಲ್ಲಿ ಕಂಡಿದ್ದೇವೆ. ದೆಹಲಿಯ ಜೆಎನ್‌ಯು ವಿಶ್ವವಿದ್ಯಾಲಯದ ಹಾಸ್ಟೆಲ್‌ ಒಂದರಲ್ಲಿ ಮಾಂಸಾಹಾರ ಸೇವಿಸಲು ಅಡ್ಡಿಪಡಿಸಿರುವ ಕೆಲವು ಮತಾಂಧರು ಅಲ್ಲಿನ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿರುವುದು ವರದಿಯಾಗಿದೆ.

ಈ ದುಷ್ಕೃತ್ಯಗಳಲ್ಲಿ ತೊಡಗುವ, ಮುಸ್ಲಿಂ ವ್ಯಾಪಾರಿಗಳಲ್ಲಿ ಭೀತಿ ಉಂಟುಮಾಡುವ ಸಂಘಟನೆಗಳನ್ನು ನಿಯಂತ್ರಿಸುವುದು ಚುನಾಯಿತ ಸರ್ಕಾರದ ಆದ್ಯತೆಯಾಗಬೇಕಿದೆ. ಈ ಸಂಘಟನೆಗಳ ಧ್ಯೇಯ ಯಾವುದೇ ಧರ್ಮ ರಕ್ಷಣೆಯಲ್ಲ ಅಥವಾ ಒಂದು ಸಮುದಾಯದ ಹಿತಾಸಕ್ತಿಗಳ ರಕ್ಷಣೆಯೂ ಆಗಿರುವುದಿಲ್ಲ. ತಮ್ಮ ಸಂಘಟನಾತ್ಮಕ ಅಸ್ತಿತ್ವವನ್ನು ಉಳಿಸಿಕೊಳ್ಳಲು ಕೆಲವೇ ಬೆರಳೆಣಿಕೆಯಷ್ಟು ಮಂದಿಯ ಸಂಘಟನೆಗಳು ಸಮಾಜದಲ್ಲಿ ಪ್ರಕ್ಷುಬ್ಧತೆ ಉಂಟುಮಾಡಲು ಈ ರೀತಿಯ ದಾಳಿ ನಡೆಸಲಾಗುತ್ತದೆ. ಆದರೆ ಈ ದಾಳಿಗಳ ಹಿಂದಿರುವ ಮನಸ್ಥಿತಿಗೆ ಕಳೆದ ಮೂರು ದಶಕಗಳಲ್ಲಿ ನೆಲೆಯೂರಿರುವ ದ್ವೇಷ ರಾಜಕಾರಣವೇ ಆಗಿದೆ ಎನ್ನುವುದನ್ನು ಅಲ್ಲಗಳೆಯಲಾಗುವುದಿಲ್ಲ. ತಳಮಟ್ಟದಲ್ಲಿ ಸದಾ ಸಮನ್ವಯ ಮತ್ತು ಸೌಹರ್ದತೆಯಿಂದ ಬದುಕು ಸವೆಸುವ ಶ್ರಮಜೀವಿ ವರ್ಗಗಳ ನಡುವೆ ಜಾತಿ ಮತಗಳ ಗೋಡೆಗಳನ್ನು ಕಟ್ಟುವ ಮೂಲಕ ಸಾಮಾಜಿಕ ವಿಘಟನೆಗೆ ಕಾರಣವಾಗುವುದೇ ಅಲ್ಲದೆ, ಜನಸಾಮಾನ್ಯರಲ್ಲಿ ಅನ್ಯಮತ ದ್ವೇಷ ಮತ್ತು ಅಸೂಯೆಯನ್ನು ಹರಡುವ ಪ್ರಕ್ರಿಯೆಗೆ ದ್ವೇಷ ರಾಜಕಾರಣ ಬುನಾದಿಯಾಗುತ್ತದೆ.

ಈ ವಿಘಟನೆಯ ಪ್ರಕ್ರಿಯೆಯನ್ನು ಮತ್ತು ವಿಧ್ವಂಸಕ ಪ್ರವೃತ್ತಿಯನ್ನು ತಡೆಗಟ್ಟುವುದು ಈ ದೇಶದ ಪ್ರತಿಯೊಬ್ಬ ಜನಪ್ರತಿನಿಧಿಯ ಕರ್ತವ್ಯವೂ ಆಗಿರುತ್ತದೆ. ಆದರೆ ಇಂತಹ ಪ್ರತಿಯೊಂದು ಘಟನೆ ಸಂಭವಿಸಿದಾಗಲೂ, ಅಲ್ಪಸಂಖ್ಯಾತರ ಮೇಲೆ ದಾಳಿ ನಡೆದಾಗಲೂ ಅದನ್ನ ಸಮರ್ಥಿಸುವ ಅಥವಾ ಪ್ರಚೋದಿಸುವ ಹೇಳಿಕೆಗಳನ್ನು ನೀಡುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ರಾಜಕೀಯ ಪಕ್ಷದ ನಾಯಕರು ಮತ್ತು ವಿಶೇಷವಾಗಿ ಜನಪ್ರತಿನಿಧಿಗಳು ತಮ್ಮ ಪ್ರಾತಿನಿಧಿತ್ವವನ್ನು ಒಂದು ಸೀಮಿತ ಜಾತಿ, ಮತದ ಚೌಕಟ್ಟಿಗೆ ಒಳಪಡಿಸಿಕೊಳ್ಳುವುದು ಸಂವಿಧಾನಕ್ಕೆ ದ್ರೋಹ ಬಗೆದಂತಾಗುತ್ತದೆ. ತಮ್ಮ ಪಕ್ಷದ ಸಿದ್ಧಾಂತ, ತಾತ್ವಿಕ ನೆಲೆಗಳು ಮತ್ತು ಅಂತಿಮ ಗುರಿ ಏನೇ ಆಗಿದ್ದರೂ, ಇಂದು ದೇಶದ ಶಾಸನ ಸಭೆಗಳಲ್ಲಿ ಆಸೀನರಾಗಿರುವ ಪ್ರತಿಯೊಬ್ಬ ಜನಪ್ರತಿನಿಧಿಯೂ ಭಾರತದ ಸಂವಿಧಾನಕ್ಕೆ ಬದ್ಧರಾಗಿಯೇ ನಡೆದುಕೊಳ್ಳಬೇಕಲ್ಲವೇ ? ಹಿಂದೂ ಮತ್ತು ಇಸ್ಲಾಂ ಧರ್ಮದ ರಕ್ಷಣೆಯ ಹೆಸರಿನಲ್ಲಿ ಹುಟ್ಟಿಕೊಂಡಿರುವ ಅಸಂಖ್ಯಾತ ಸಂಘಟನೆಗಳು ಇಂದು ಶಸ್ತ್ರಾಸ್ತ್ರಗಳ ಭಂಡಾರವನ್ನೇ ತಮ್ಮ ಬಳಿ ಇಟ್ಟುಕೊಂಡಿವೆ. ಬಹಿರಂಗವಾಗಿಯೇ ಖಡ್ಗ ಝಳಪಿಸುವ, ಲಾಂಗು ಮಚ್ಚುಗಳನ್ನು ವಿತರಿಸುವ ಮತ್ತು ಪ್ರದರ್ಶಿಸುವ, ಹಂಚುವ ಹಾಗೂ ಬಳಸುವ ಮಟ್ಟಿಗೆ ಈ ಮತಾಂಧ ಸಂಘಟನೆಗಳು ಬೆಳೆದು ನಿಂತಿವೆ.

ಈ ವಿಧ್ವಂಸಕತೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ವಿಫಲವಾಗಿರುವುದೇ ಅಲ್ಲದೆ, ಅಮಾಯಕ ಸಾರ್ವಜನಿಕರ ಮೇಲೆ ನಡೆಯುವ ಮತಾಂಧರ ದಾಳಿಗಳ ಬಗ್ಗೆ ಮೌನ ವಹಿಸುವ ಮೂಲಕ ಈ ಕೃತ್ಯಗಳಿಗೆ ಪರೋಕ್ಷ ಸಮ್ಮತಿಯನ್ನೂ ನೀಡುತ್ತಿವೆ. ಕಳೆದ ಎರಡು ತಿಂಗಳಲ್ಲೇ ಕರ್ನಾಟಕದಲ್ಲಿ ಐದಾರು ಯುವಕರ ಹತ್ಯೆಗಳು ನಡೆದಿವೆ. ಪ್ರತಿಯೊಂದು ಘಟನೆಯಲ್ಲೂ ಜಾತಿ-ಮತ-ಧರ್ಮದ ಅಸ್ಮಿತೆಗಳನ್ನು ಕೆದಕುವ ಮೂಲಕ ಪರಸ್ಪರ ದೋಷಾರೋಪಣೆಯಲ್ಲಿ ತೊಡಗಿರುವ ಜನಪ್ರತಿನಿಧಿಗಳು, ಈ ಹತ್ಯೆಗಳನ್ನು ಪ್ರಚೋದಿಸುವ ಸಾಮಾಜಿಕ-ಸಾಂಸ್ಕೃತಿಕ ಕಾರಣಗಳನ್ನು ಶೋಧಿಸಲು ಮುಂದಾಗುತ್ತಿಲ್ಲ. ಬದಲಾಗಿ ಪ್ರತಿಯೊಂದು ಹತ್ಯೆಯನ್ನೂ, ದಾಳಿಯನ್ನೂ ತಮ್ಮ ಪಕ್ಷದ ಸೈದ್ಧಾಂತಿಕ ನಿಲುಮೆಗೆ ಅನುಗುಣವಾಗಿ ಸಮರ್ಥಿಸಿಕೊಳ್ಳುವ ಅಥವಾ ವಿರೋಧಿಸುವ ಬೀಸು ಹೇಳಿಕೆಗಳ ಮೂಲಕ ಸಮಾಜದಲ್ಲಿ ಅಶಾಂತಿ ಮತ್ತು ಪ್ರಕ್ಷುಬ್ಧತೆಯನ್ನು ಹೆಚ್ಚಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ನಡೆದ ಚಂದ್ರು ಕೊಲೆ ಪ್ರಕರಣದಲ್ಲಿ ಗೃಹಸಚಿವರ ಅವಸರದ ಹೇಳಿಕೆ ಇದಕ್ಕೊಂದು ನಿದರ್ಶನ. ಮುಸ್ಕಾನ್‌ ಪ್ರಕರಣದಲ್ಲಿ ಅಲ್‌ಖೈದಾ ಸಂದೇಶವನ್ನು ಆರೆಸ್ಸೆಸ್‌ ಪಿತೂರಿ ಎಂದು ನಿರಾಧಾರವಾಗಿ ಆರೋಪಿಸುವ ಕಾಂಗ್ರೆಸ್‌ ಪಕ್ಷದ ವರ್ತನೆಯೂ ಇಲ್ಲಿ ಪ್ರಶ್ನಾರ್ಹವಾಗುತ್ತದೆ.  ಈ ಸಂದೇಶದ ಮೂಲವನ್ನು ತಮ್ಮ ವಿರೋಧಿ ಪಕ್ಷಗಳಲ್ಲಿ ಹುಡುಕುತ್ತಾ ದೋಷಾರೋಪಣೆಯಲ್ಲಿ ತೊಡಗುವುದರಿಂದ, ಜಾಗತಿಕ ಭಯೋತ್ಪಾದನೆಯ ರೂವಾರಿ ಸಂಘಟನೆಗಳಿಗೆ ಮತ್ತಷ್ಟು ಪುಷ್ಟಿ ನೀಡಿದಂತಾಗುತ್ತದೆ. ಈ ಸೂಕ್ಷ್ಮವನ್ನು ಸಹ ಗಮನಿಸಲಾರದಷ್ಟು ನಮ್ಮ ಜನಪ್ರತಿನಿಧಿಗಳು ವಿವೇಕ ಕಳೆದುಕೊಂಡಂತಿದೆ.

ಇಂದು ಹಿಂದೂ ಮತಾಂಧ ಸಂಘಟನೆಗಳು ನಡೆಸುತ್ತಿರುವ ದಾಳಿಗಳ ಹಿಂದೆ ಒಂದು ರಾಜಕೀಯ ಚಿಂತನಾ ವಾಹಿನಿ ಇದೆ. ಇದಕ್ಕೆ ಪ್ರತಿಯಾಗಿ ಮುಸ್ಲಿಂ ಸಂಘಟನೆಗಳು ತಾಳ್ಮೆಯಿಂದಲೇ ಇದ್ದರೂ, ಇಂತಹ ಸನ್ನಿವೇಶದಲ್ಲಿ ಸಮುದಾಯದೊಳಗಿನ ಒಳಗುದಿ, ಅಂತರಿಕ ಕ್ಷೋಭೆ ಯಾವುದೇ ಕ್ಷಣದಲ್ಲಾದರೂ ಸ್ಫೋಟಿಸುವ ಸಾಧ್ಯತೆಗಳಿರುತ್ತವೆ. ರಾಮಮಂದಿರ ವಿವಾದದ ಸಂದರ್ಭದಲ್ಲಿ ಭಾರತ ಇಂತಹ ಸನ್ನಿವೇಶಗಳಿಗೆ ಸಾಕ್ಷಿಯಾಗಿ, ಸಾವಿರಾರು ಜೀವಗಳ ಬಲಿಯಾಗಿದೆ. ಎರಡೂ ಕಡೆಯ ಮತಾಂಧ ಸಂಘಟನೆಗಳ ಬಳಿ ಅಂತರಿಕ ಕಲಹ ಸೃಷ್ಟಿಮಾಡುವಷ್ಟು ಪ್ರಮಾಣದ ಶಸ್ತ್ರಾಸ್ತ್ರಗಳ ಸಂಗ್ರಹವಾಗಿರುವುದು ಸರ್ಕಾರಕ್ಕೂ ತಿಳಿದಿದೆ. ಆದರೆ ಈ ದಿಕ್ಕಿನಲ್ಲಿ ಪ್ರಸ್ತುತ ಸರ್ಕಾರವನ್ನೂ ಸೇರಿದಂತೆ ಯಾವುದೇ ಸರ್ಕಾರವೂ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳದಿರುವುದು ನಾಗರಿಕ ಸಮಾಜವನ್ನು ಸದಾ ಪ್ರಕ್ಷುಬ್ಧತೆಯಲ್ಲಿರುವಂತೆ ಮಾಡಿದೆ. ಹಿಜಾಬ್‌ ಆಗಲೀ, ಹಲಾಲ್‌ ಆಗಲೀ ಅಥವಾ ದೇವಾಲಯಗಳ ಬಳಿ ವ್ಯಾಪಾರ ನಡೆಸುವುದಾಗಲೀ, ಸಾಂವಿಧಾನಿಕ ನೆಲೆಯಲ್ಲಿ ನಿರ್ಧಾರವಾಗಬೇಕಾದ ಈ ವಿವಾದಗಳಲ್ಲಿ ಇಂದು ಹಿಂದೂ ಮತ್ತು ಮುಸ್ಲಿಂ ಮತಾಂಧ ಸಂಘಟನೆಗಳು ನಿರ್ಣಾಯಕವಾಗುತ್ತಿವೆಯೇ ಹೊರತು ಜಾತ್ಯತೀತ ನೆಲೆಯ ವಿವೇಕಯುತ ನಾಗರಿಕ ಸಮಾಜ ಕಂಡುಬರುತ್ತಿಲ್ಲ.  ಪರಿಣಾಮ ನಬೀಸಾಬ್‌ನಂತಹ ಅಮಾಯಕ ವ್ಯಾಪಾರಿಗಳು, ಹರ್ಷನಂತಹ ಯುವಕರು ಬಲಿಯಾಗುತ್ತಾರೆ.

ನಾಗರಿಕ ಸಮಾಜದ ಉದಾರವಾದಿ ನೆಲೆಯ, ಜಾತ್ಯತೀತ ಧೋರಣೆಯ ಸಾರ್ವಜನಿಕ ಪ್ರತಿನಿಧಿಗಳಿಗೆ ಇಂತಹ ಒಂದು ಅವಕಾಶವನ್ನು ಕಲ್ಪಿಸುವ ಜವಾಬ್ದಾರಿ ಜನಪ್ರತಿನಿಧಿಗಳ ಮೇಲಿರುತ್ತದೆ. ಪಕ್ಷ ರಾಜಕಾರಣ ಕೇವಲ ಅಧಿಕಾರ ಪೀಠವನ್ನು ಅಲಂಕರಿಸುವ ಒಂದು ಸಾಧನ ಮಾತ್ರ. ಇದನ್ನು ಮೀರಿದ ಒಂದು ಸಾಂವಿಧಾನಿಕ ನೈತಿಕತೆ ಎಲ್ಲ ಪಕ್ಷದ ನಾಯಕರಲ್ಲೂ ಇರಬೇಕಾಗುತ್ತದೆ. ಸಂವಿಧಾನ ಪ್ರತಿಪಾದಿಸುವ ಸಮಾನತೆ, ಸಹಿಷ್ಣುತೆ, ಭ್ರಾತೃತ್ವ ಮತ್ತು ಜಾತ್ಯತೀತೆಯನ್ನು ಕಾಪಾಡುವ ಹೊಣೆ ಪ್ರತಿಯೊಬ್ಬ ಜನಪ್ರತಿನಿಧಿಯ ಮೇಲೆ, ಪಕ್ಷಾತೀತವಾಗಿ, ಇರುತ್ತದೆ. ದುರಂತ ಎಂದರೆ ಪಕ್ಷ ರಾಜಕಾರಣದ ಅಧಿಕಾರ ಮೋಹಕ್ಕೆ ಬಲಿಯಾಗಿರುವ ಭಾರತದ ರಾಜಕಾರಣಿಗಳು ತಮ್ಮ ಈ ನೈತಿಕ ಹೊಣೆಯನ್ನೇ ಮರೆತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರ ಶಾಶ್ವತವಲ್ಲ, ಈ ಅಧಿಕಾರವನ್ನು ಅನುಭವಿಸಲು ಅವಕಾಶ ನೀಡುವ ಪ್ರಜಾಸತ್ತಾತ್ಮಕ ಸಂವಿಧಾನ ಮತ್ತು ಈ ಸಂವಿಧಾನ ಪ್ರತಿಪಾದಿಸುವ ಮೌಲ್ಯಗಳು ಶಾಶ್ವತವಾದದ್ದು. ಈ ಪರಿಜ್ಞಾನ ಎಲ್ಲ ರಾಜಕೀಯ ನಾಯಕರಲ್ಲೂ ಇರಬೇಕಾಗುತ್ತದೆ.

ಇದು ಇಲ್ಲವಾಗಿರುವುದರಿಂದಲೇ ಭಾರತ ಇಂದು ದ್ವೇಷ, ಅಸೂಯೆ, ಮತ್ಸರ, ಮತಾಂಧತೆ, ಜಾತೀಯತೆ ಮತ್ತು ಹಿಂಸೆಯಿಂದ ಕೂಡಿದ ಒಂದು ಅಗ್ನಿಕುಂಡದಲ್ಲಿ ಬೇಯುವಂತಾಗಿದೆ. ಇದಕ್ಕೆ ಯಾರು ಹೊಣೆ ? ನಬೀ ಸಾಬ್‌ ಅಲ್ಲ, ಮುಸ್ಕಾನ್‌ ಅಲ್ಲ, ಹರ್ಷನೂ ಅಲ್ಲ, ಚಂದ್ರು ಸಹ ಅಲ್ಲ. ಇವರೆಲ್ಲರೂ ಸ್ಥಾಪಿತ ವ್ಯವಸ್ಥೆಯೊಳಗಿನ ವಿಕೃತಿಗಳಿಗೆ ಬಲಿಯಾದ ಅಮಾಯಕರೇ ಆಗಿದ್ದಾರೆ. ಈ ಸ್ಥಾಪಿತ ವ್ಯವಸ್ಥೆಯಲ್ಲಿ ನಡೆಯುತ್ತಿರುವ ರಾಜಕೀಯ ಅಪರಾಧೀಕರಣ, ಸಾಂಸ್ಕೃತಿಕ ಪಾತಕೀಕರಣ ಮತ್ತು ಮತ ಧಾರ್ಮಿಕ ಹಿಂಸಾಚರಣೆಗೆ ಈ ದೇಶದ ರಾಜಕೀಯ ವ್ಯವಸ್ಥೆಯೇ ಕಾರಣ ಎನ್ನುವುದು ಸುಸ್ಪಷ್ಟ. ಇದರ ನೇರ ಹೊಣೆಯನ್ನು ಅಧಿಕಾರ ರಾಜಕಾರಣದ ವಾರಸುದಾರರು, ಪಕ್ಷಾತೀತವಾಗಿ ಹೊರಬೇಕಾಗುತ್ತದೆ. ತಮ್ಮ ಸಾಂವಿಧಾನಿಕ ನೈತಿಕತೆ ಮತ್ತು ಹೊಣೆಗಾರಿಕೆಯನ್ನು ಅರಿತು, ಪ್ರಜಾತಂತ್ರವನ್ನು ಉಳಿಸುವ ಜವಾಬ್ದಾರಿಯೊಂದಿಗೇ, ಸಾರ್ವಜನಿಕ ಬದುಕಿನಲ್ಲಿ ಶಾಂತಿಯುತ ವಾತಾವರಣವನ್ನು ಸೃಷ್ಟಿಸುವ ನಿಟ್ಟಿನಲ್ಲಿ ಎಲ್ಲ ರಾಜಕೀಯ ಪಕ್ಷಗಳೂ, ನಾಯಕರೂ ಯೋಚಿಸಿದರೆ ಬಹುಶಃ ಭಾರತ, ಕನಿಷ್ಠ ಪಕ್ಷ ಕರ್ನಾಟಕ “ ಸರ್ವ ಜನಾಂಗದ ಶಾಂತಿಯ ತೋಟ ” ಆಗಲು ಸಾಧ್ಯವಾದೀತು.

“ಸಂವಿಧಾನವನ್ನು ಹೊತ್ತು ತಿರುಗುವ ಚುನಾಯಿತ ಜನಪ್ರತಿನಿಧಿಗಳು ಈ ತೋಟದ ಮಾಲಿಗಳಾದರೆ ಶಾಂತಿ ನೆಲೆಸುತ್ತದೆ ಇಲ್ಲವಾದರೆ ಇರುವ ಹಸಿರೆಲೆಗಳೂ ಮುರುಟಿಹೋಗುತ್ತವೆ.”

Donate Janashakthi Media

Leave a Reply

Your email address will not be published. Required fields are marked *