ಬೃಂದಾ ಕಾರಟ್
ಒಂದು ಮೂಲಭೂತವಾದವು ಇನ್ನೊಂದನ್ನು ಬಲಪಡಿಸುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ ಇದರ ಘೋರ ಪರಿಣಾಮಗಳನ್ನು ಭಾರತಾದ್ಯಂತ ನಾವು ನೋಡುತ್ತಿದ್ದೇವೆ. ವಿಷಕಾರೀ ಬಹುಸಂಖ್ಯಾತವಾದೀ ಕೋಮುವಾದದ ಬುಲ್ಡೋಜರ್ ಸಾಂವಿಧಾನಿಕ ಖಾತರಿಗಳ ವಿರುದ್ಧ ರಂಪಾಟ ನಡೆಸಿರುವಾಗ, ಇಸ್ಲಾಮ್‌ವಾದಿಗಳ ಹರಹು ಮತ್ತು ಅವರ ಉನ್ಮತ್ತ ಗುಂಪುಗಳು ಒಂದು ಮುತ್ತಿಗೆಗೊಳಗಾಗಿರುವ ಸಮುದಾಯದೊಳಕ್ಕೆ ನುಸುಳುತ್ತಿವೆ. ಇದೀಗ ಭಾರತ ಎದುರಿಸಬೇಕಾಗಿರುವ ದುಃಸ್ವಪ್ನ. ಅದನ್ನು ಸೃಷ್ಟಿಸಲು ಅನುವು ಮಾಡಿಕೊಟ್ಟಿರುವ ಕತ್ತಲೆಯನ್ನು ದೂರ ಮಾಡುವ ಮೂಲಕ ಭಾರತವು ಎಚ್ಚೆತ್ತುಕೊಳ್ಳಬೇಕಾಗಿದೆ. ಇದರಲ್ಲಿ ನ್ಯಾಯಾಲಯಗಳಿಗೆ ಒಂದು ಮಹತ್ವದ ಪಾತ್ರವಿದೆ. ಅವು ಅಪರೂಪವಾಗಿಯಾದರೂ ಕೆಲವೊಮ್ಮೆ, ನೂಪುರ್ ಶರ್ಮ ಪ್ರಕರಣದಲ್ಲಿ ಮಾಡಿದಂತಹ ಹರಿತವಾದ ಟಿಪ್ಪಣಿಗಳು ದಾರಿಯನ್ನು ಸ್ಪಷ್ಟಪಡಿಸಲು ನೆರವಾಗುತ್ತವೆ ಎನ್ನುತ್ತಾರೆ ನೂಪುರ್ ಶರ್ಮ ಪ್ರಕರಣದಲ್ಲಿ ಸುಪ್ರಿಂ ಕೋರ್ಟಿನ ಟಿಪ್ಪಣಿಗಳ ಬಗ್ಗೆ ವಿಶ್ಲೇಷಿಸಿರುವ ಸಿಪಿಐ(ಎಂ) ಪೊಲಿಟ್ ಬ್ಯುರೊ ಸದಸ್ಯೆ ಬೃಂದಾ ಕಾರಟ್.
ಇಬ್ಬರು ನ್ಯಾಯಾಧೀಶರಿರುವ ಒಂದು ನ್ಯಾಯಪೀಠ ನ್ಯಾಯಾಲಯದಲ್ಲಿ ಕೆಲವು ಟಿಪ್ಪಣಿಗಳನ್ನು ಮಾಡುತ್ತದೆ. ಅದರ ವಿರುದ್ಧ ಒಬ್ಬ ವ್ಯಕ್ತಿ ಅವು ದುರುದ್ದೇಶದಿಂದ ಕೂಡಿವೆ ಎಂದು ಟೀಕಿಸುತ್ತಾನೆ. ಇದು ವೈಯಕ್ತಿಕ ಟೀಕೆಯೆಂದರೂ, ಸುಪ್ರಿಂ ಕೋರ್ಟಿನ ಒಬ್ಬ ನ್ಯಾಯಾಧೀಶರು ಅದರ ವಿರುದ್ಧ ನ್ಯಾಯಾಲಯವನ್ನು ರಕ್ಷಿಸಬೇಕಾಗಿ ಬಂದಿರುವುದು ನಿಜಕ್ಕೂ ಈಗ ಎಂತಹ ಸಮಯ ಬಂದಿದೆ ಎಂಬುದರ ಸಂಕೇತ.
ನ್ಯಾಯಾಧೀಶರು ಅಧಿಕಾರದಲ್ಲಿರುವವರಿಗೆ ಇಷ್ಟವಾಗದ ಟಿಪ್ಪಣಿಗಳನ್ನು ಮಾಡಿದರೆ ಎಂತಹ ಒತ್ತಡ ಅವರ ಮೇಲೆ ಬರುತ್ತದೆ ಎಂಬುದು ನೂಪುರ್ ಶರ್ಮ ಪ್ರಕರಣದಲ್ಲಿ ಸ್ಪಷ್ಟವಾಗಿ ಕಾಣ ಬಂದಿದೆ. ಗೃಹ ವ್ಯವಹಾರಗಳ ರಾಜ್ಯ ಸಚಿವರು ಬಹಳ ಚಾಣಾಕ್ಷತನ ತೋರಲು ಪ್ರಯತ್ನಿಸಿದರು. ನ್ಯಾಯಾಧೀಶರು ಮಾಡಿದ ಟಿಪ್ಪಣಿಗಳನ್ನು ಇಷ್ಟಪಡದಿದ್ದರೂ ತಾನು ಟಿಪ್ಪಣಿ ಮಾಡುವುದಿಲ್ಲ, ಬದಲಿಗೆ ಸೂಕ್ತ ರೀತಿಯಲ್ಲಿ ಎತ್ತಿಕೊಳ್ಳುತ್ತೇನೆ ಎಂದರು. ಇದು ನೀಡುವ ಸ್ಪಷ್ಟವಾದ, ಜೋರಾದ ಸಂದೇಶ ಎಂದರೆ, ಸರಕಾರಕ್ಕೆ “ಅಸಂತೋಷ”ವಾಗಿದೆ!
ಇದರ ಬೆನ್ನಹಿಂದೆಯೇ, ಸುಪ್ರಿಂ ಕೋರ್ಟನ್ನು ಅಕ್ಷರಶಃ ಖಂಡಿಸುವ, ಆ ಟಿಪ್ಪಣಿಗಳನ್ನು ಹಿಂತೆಗೆದುಕೊಳ್ಳಬೇಕೆಂದು ಆಗ್ರಹಿಸುವ ಹಲವು ಮಾಜಿ ನ್ಯಾಯಾಧೀಶರು ಮತ್ತು ಉನ್ನತಾಧಿಕಾರಿಗಳ ಬಹಿರಂಗ ಪತ್ರವೊಂದು ಪ್ರಕಟವಾಯಿತು. ಈ ಗಣ್ಯರು ಉತ್ತರಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ಬೃಹತ್ ಧ್ವಂಸ ಕಾರ್ಯ ಮುಂತಾದ ಅಕ್ರಮಗಳಲ್ಲಿ ನ್ಯಾಯದ ಗರ್ಭಪಾತವಾಗುತ್ತಿದ್ದಾಗ ಎಲ್ಲಿ ಅಡಗಿಕೊಂಡಿದ್ದರೋ? ಕನಿಷ್ಟ ಈ ಪ್ರಕರಣದಲ್ಲಾದರೂ, ಸಂಬಂಧಪಟ್ಟ ನ್ಯಾಯಾಧೀಶರು ತಮ್ಮ ಸಹಯೋಗಿಗಳನ್ನು ರಕ್ಷಿಸುತ್ತಾರೆ ಎಂದು ಆಶಿಸೋಣ.
ಅಧಿಕಾರಸ್ಥರ ಭಂಡತನಕ್ಕೆ ಮಿತಿಯೇ ಇದ್ದಂತಿಲ್ಲ
ನೂಪುರ್ ಶರ್ಮ ಮತ್ತು ಪ್ರವಾದಿಯ ವಿರುದ್ಧ ಆಕೆಯ ಹೇಳಿಕೆಯ ವಿರುದ್ಧ ಸುಪ್ರೀಂ ಕೋರ್ಟಿನ, ತಡವಾಗಿಯಾದರೂ, ಸ್ವಾಗತಾರ್ಹವಾದ ಟಿಪ್ಪಣಿಗಳು, ಈಗಲಾದರೂ ಆಕೆಯ ಬಂಧನದ ತಾರ್ಕಿಕ ಹೆಜ್ಜೆಗೆ ದಾರಿ ಮಾಡಿಕೊಡುತ್ತದೆಯೇ? “ಆಕೆ ದೇಶದ ಉದ್ದಗಲಕ್ಕೂ ಭಾವನೆಗಳನ್ನು ಹೊತ್ತಿಸಿದ ರೀತಿ….. ದೇಶದಲ್ಲಿ ಈಗ ಏನಾಗುತ್ತಿದೆಯೋ ಅದಕ್ಕೆ ಈ ಮಹಿಳೆಯೇ ಏಕೈಕ ಹೊಣೆ” ಎಂದು ನ್ಯಾಯಾಲಯದಲ್ಲಿ ಬಹಿರಂಗವಾಗಿಯೇ ಪೀಠ ಕಟುವಾದ ದೋಷಾರೋಪಣೆ ಮಾಡಿತು. ಸುಪ್ರಿಂ ಕೋರ್ಟ್ ಈ ಟಿಪ್ಪಣಿ ಮಾಡಿದ್ದು ಆಕೆಯ ವಿರುದ್ಧದ ಎಲ್ಲ ಎಫ್‌ಐಆರ್‌ಗಳನ್ನು ಒಟ್ಟಾಗಿ ತೆಗೆದುಕೊಳ್ಳಬೇಕು ಎಂಬ ಆಕೆಯ ಅರ್ಜಿಯ ವಿಚಾರಣೆ ನಡೆಸುತ್ತಿದ್ದಾಗ. ಆಕೆ ತನ್ನ ಅರ್ಜಿಯನ್ನು ಹಿಂದಕ್ಕೆ ಪಡೆಯಲೇ ಬೇಕಾಗಿ ಬಂದಿದೆ.
ರಾಷ್ಟ್ರೀಯ ಟೆಲಿವಿಷನ್ ಮೇಲೆ ಈಕೆಯ ಹೇಳಿಕೆಯ ನಂತರ ಹಲವು ವಾರಗಳಾದರೂ, ಅದರ ವಿರುದ್ಧ ಹಲವಾರು ಎಫ್‌ಐಆರ್‌ಗಳನ್ನು ಹಾಕಲಾಗಿದ್ದರೂ, ಮೊಹಮ್ಮದ್ ಜುಬೇರನ್ನು ಕೂಡಲೇ ಬಂಧಿಸಿದ, ಕಿರುಕುಳ ಕೊಡುತ್ತಿರುವ ಅಮಿತ್ ಷಾ ರವರ ಪೋಲೀಸರ ಪತ್ತೆಯೇ ಇಲ್ಲ. ತಮ್ಮವರಿಗೆ ರಕ್ಷಣೆ ಒದಗಿಸುವ ಅಧಿಕಾರಸ್ಥರ ಭಂಡತನಕ್ಕೆ ಮಿತಿಯೇ ಇದ್ದಂತಿಲ್ಲ.
ಮೊಹಮ್ಮದ್ ಜುಬೇರನ್ನು ಕೇಂದ್ರ ಗೃಹ ಮಂತ್ರಾಲಯದ ಅಡಿಯಲ್ಲಿರುವ ದಿಲ್ಲಿ ಪೋಲೀಸ್ ಬಂಧಿಸಿದ್ದು, ವಿವಿಧ ಕಿರುಕುಳಗಳಿಗೆ ಒಳಪಡಿಸುತ್ತಿರುವುದು, ಆತ ಟಿವಿಯಲ್ಲಿ ಶ್ರೀಮತಿ ಶರ್ಮಾ ಅವರ ಟಿಪ್ಪಣಿಗಳ ಕ್ಲಿಪ್ಪನ್ನು ಹಂಚಿಕೊಂಡದ್ದಕ್ಕೆ ಎಂಬುದು ರಹಸ್ಯ ಸಂಗತಿಯೇನಲ್ಲ. ಸತ್ಯವನ್ನು ಮತ್ತು ದ್ವೇಷಕೋರತನವನ್ನು ಬಯಲು ಮಾಡಲು ಬದ್ಧನಾದ ಪತ್ರಕರ್ತನಾಗಿ ಆತ ಮಾಡಿದ್ದು ಸಂಪೂರ್ಣವಾಗಿ ಕಾನೂನುಬದ್ಧವಾದ ಮತ್ತು ತಾರ್ಕಿಕ ಹೆಜ್ಜೆಯೇ ಆಗಿತ್ತು. ಪೊಲೀಸರು ಈ ಪ್ರತೀಕಾರದ ಕಾರ್ಯಾಚರಣೆಯನ್ನು ಮರೆಮಾಚಲು ಪ್ರಯತ್ನಿಸಿದ್ದಾರೆ. ಅದಕ್ಕಾಗಿ ಹೃಷಿಕೇಶ ಮುಖರ್ಜಿಯವರು ಮಾಡಿದ ಒಂದು ಚಿತ್ರದ ದೃಶ್ಯವನ್ನು ಉಲ್ಲೇಖಿಸುವ 2018ರ ಒಂದು ಟ್ವೀಟನ್ನು ಹೆಕ್ಕಿ ತೆಗೆದಿದ್ದಾರೆ. ಜುಬೈರ್‌ನ ಆ ಟ್ವೀಟ್ ನಿಂದ ನಾಲ್ಕು ವರ್ಷಗಳ ಕಾಲ ಯಾರ ‘ಧಾರ್ಮಿಕ ಭಾವನೆ’ಗಳಿಗೂ ನೋವಾಗಿರಲಿಲ್ಲ, ಎಲ್ಲಿಂದಲೂ ಯಾವುದೇ ದೂರು ಬಂದಿರಲಿಲ್ಲ. ಈಗ ಇದ್ದಕ್ಕಿದ್ದಂತೆ, ಒಂದು ಸಾಮಾಜಿಕ ಮಾಧ್ಯಮ ಅಕೌಂಟ್ ತಯಾರಾಗುತ್ತದೆ, ಈ ಹಳೆಯ ಟ್ವೀಟ್ ಮೇಲೆ ದೂರು ಸಲ್ಲಿಸುತ್ತದೆ, ಮತ್ತು ದಿಲ್ಲಿ ಪೋಲಿಸ್ ಕೂಡಲೇ ಕಾರ್ಯಪ್ರವೃತ್ತರಾಗುತ್ತಾರೆ.
ನೂಪುರ್ ಶರ್ಮಾ ತನ್ನ ಟ್ರೋಲಿಂಗ್ ನಡೆಯಲು, ಹಲವಾರು ಕೊಲೆ ಬೆದರಿಕೆಗಳು ಬರಲು ಮೊಹಮ್ಮದ್ ಜುಬೇರನೇ ಕಾರಣ ಎಂದು ಬಲಪಂಥೀಯ ಸುದ್ದಿ ಪೋರ್ಟಲ್ ‘ಒಪ್‌ಇಂಡಿಯ’ ಸಂದರ್ಶನವೊಂದರಲ್ಲಿ ದೂಷಿಸಿದ್ದರು. ಆಕೆಗೆ ಬಂದಿದೆ ಎನ್ನಲಾದ ಕೊಲೆ ಬೆದರಿಕೆಯ ಮೂಲಗಳನ್ನು ಪತ್ತೆ ಹಚ್ಚುವುದು ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳುವುದು ಸೈಬರ್ ಅಪರಾಧಗಳ ಸೆಲ್‌ನ ಕೆಲಸ. ಖಂಡಿತವಾಗಿಯೂ ಕೊಲೆ ಬೆರಿಕೆಗಳನ್ನು ಸುಮ್ಮನೇ ಬಿಡಲು ಸಾಧ್ಯವಿಲ್ಲ, ಅದನ್ನು ನಿಲ್ಲಿಸಲು ಕ್ರಮ ಕೈಗೊಳ್ಳಲೇ ಬೇಕು. ಆದರೆ ಅದಕ್ಕೆ ಮೊಹಮ್ಮದ್ ಜುಬೈರ್ ಹೇಗೆ ದೋಷಿಯಾಗುತ್ತಾರೆೆ? ಆಕೆಯೇ ಸ್ವತಃ ರಾಷ್ಟ್ರೀ ಯ ಟೆಲಿವಿಷನ್‌ನಲ್ಲಿ ಹೇಳಿದ್ದನ್ನು ಆತ ಹಂಚಿಕೊಂಡಿದ್ದಾರೆ. ಅಲ್ಲದೆ ಆಕೆ ನಂತರ ಅದಕ್ಕೆ ಕ್ಷಮೆಯನ್ನೂ ಯಾಚಿಸಿದ್ದಾರೆ. ಈಗ, ಆಕೆಯ ಕ್ಷಮಾಯಾಚನೆ ಅರೆಮನಸ್ಸಿನದ್ದು, ಆಕೆ ಇಡೀ ದೇಶದ ಕ್ಷಮೆ ಕೇಳಬೇಕು ಎಂದು ಸುಪ್ರಿಂ ಕೋರ್ಟ್ ಹೇಳುತ್ತಿದೆ. ತಾವು ಪೂರ್ಣ ವಿಡೀಯೋವನ್ನು ನೋಡಿದ್ದೇವೆ ಎನ್ನುತ್ತಾ, ಆ ಇಡೀ ಕಾರ್ಯಕ್ರಮದ ಧ್ವನಿಯನ್ನೇ ನ್ಯಾಯಪೀಠ ಟೀಕಿಸಿದೆ. ಹಾಗಿದ್ದರೆ ನ್ಯಾಯಾಧೀಶರುಗಳು ಕೂಡ ಕೊಲೆ ಬೆದರಿಕೆಗಳನ್ನು ಪ್ರೋತ್ಸಾಹಿಸಿದ್ದಾರೆ ಎಂದು ಆರೋಪಿಸಬಹುದೇ?
ಸುಳ್ಳಿನ ಕಂತೆ-ಕೋಮುವಾದಿ ಪ್ರಚಾರ
ನೂಪುರ್ ಶರ್ಮಾಗೆ ಜುಬೈರನ್ನು ಹೆಸರಿಸಲು ಮತ್ತು ದೂರಲು ವೇದಿಕೆ ಒದಗಿಸಿದ ಅದೇ ಸುದ್ದಿ ಪೋರ್ಟಲ್ ಬಹಿರಂಗವಾಗಿಯೇ ನ್ಯಾಯಾಲಯದ ಟಿಪ್ಪಣಿಗಳನ್ನು ಅಪಾಯಕಾರಿಯಾಗಿ ಮತ್ತು ಉದ್ದೇಶಪೂರ್ವಕವಾಗಿ ತಿರುಚುವ ಕೆಲಸಕ್ಕೆ ಮುಂದಾಗಿದೆ. ಸುಪ್ರಿಂ ಕೋರ್ಟಿನ ಟಿಪ್ಪಣಿಗಳು ಪ್ರಕಟವಾದ ಕೂಡಲೇ ಬಂದ ಆ ಪೋರ್ಟಲ್‌ನ ಸಂಪಾದಕೀಯ ಡೆಸ್ಕ್ನ ಒಂದು ಲೇಖನ ಹೀಗೆ ಹೇಳುತ್ತದೆ: “ಸುಪ್ರಿಂ ಕೋರ್ಟ್ ಧರ್ಮಾಂಧರು ಇಸ್ಲಾಮಿನ ಹೆಸರಲ್ಲಿ ಎಸಗಿದ ಹಿಂಸಾಚಾರ ಮತ್ತು ಕೊಲೆಗೆ ಒಬ್ಬ ಮಹಿಳೆಯನ್ನು ಮಾತ್ರ ದೂಷಿಸಿರುವುದಷ್ಟೇ ಅಲ್ಲ” (ಸುಪ್ರೀಂ ಕೋರ್ಟ್ ಎಲ್ಲೂ ಹಿಂಸೆ, ಕೊಲೆ, ಮತಾಂಧರು ಅಥವಾ ಇಸ್ಲಾಂ ಎಂದು ಉಲ್ಲೇಖಿಸಿಲ್ಲ), ಮುಂದುವರೆದು “ಬೇರೆ ರೀತಿಯಲ್ಲಿ ಹೇಳುವುದಾದರೆ, ನ್ಯಾಯಮೂರ್ತಿ ಸೂರ್ಯಕಾಂತ್, ತನ್ನ ಮಟ್ಟಿಗೆ ಶರ್ಮಾ ಅವರು ಇಸ್ಲಾಮ್‌ವಾದಿಗಳನ್ನು ‘ಉದ್ರೇಕಿಸುವ’ ರೀತಿಯಲ್ಲಿ ಮಾತಾಡಿದ್ದು ಆಕೆಯ ತಪ್ಪೇ ಹೊರತು, ತಾವು ‘ಧರ್ಮನಿಂದಕರು’ ಎಂದು ಬಗೆಯುವ ಯಾರದೇ ಆದರೂ ಶಿರಚ್ಛೇದನ ಮಾಡುವುದಾಗಿ ಬಹಿರಂಗವಾಗಿ ಘೋಷಿಸಿರುವ ಇಸ್ಲಾಮ್‌ವಾದಿಗಳ ತಪ್ಪಲ್ಲ ಎಂದು (ನ್ಯಾಯಾಲಯ ಎಂದೂ ಹೇಳದ ಪದಗಳನ್ನು ಅದರದೆಂದು ಇಲ್ಲಿ ಹೇಳಲಾಗಿದೆ) ಸ್ಪಷ್ಟಪಡಿಸಿದ್ದಾರೆ.”
ಕೊನೆಯದಾಗಿ ಈ ಲೇಖನ “ಉದಯಪುರ ಕೊಲೆ, ಅಲ್ಲಿ ಹಿಂದೂ ವ್ಯಕ್ತಿಯೊಬ್ಬನನ್ನು ಶರ್ಮಾರನ್ನು ಬೆಂಬಲಿಸಿದ ಒಂದು ಸಾಮಾಜಿಕ ಮಾಧ್ಯಮದ ಪೋಸ್ಟನ್ನು ಹಂಚಿಕೊಂಡದ್ದಕ್ಕಾಗಿ ಸಾಯಿಸಿರುವುದು ಶರ್ಮಾರ ತಪ್ಪು ಎಂದು ಘೋಷಿಸಿರುವುದರಿಂದ, ಶರ್ಮಾರವರೇ ಸ್ವತಃ ಇಸ್ಲಾಮ್‌ವಾದಿಗಳು ಆಕೆಗೆ ಘೋಷಿಸಿದ ಹಿಂಸಾಚಾರಕ್ಕೆ ಬಲಿಯಾದರೆ, ಆಕೆ ಅದಕ್ಕೆ ಅರ್ಹಳಾಗಿದ್ದರು ಎಂದೇ ಈ ದೇಶದ ಸರ್ವೋಚ್ಚ ನ್ಯಾಯಾಲಯ ಹೇಳಬಹುದೇನೋ”(ಓಪ್‌ಇಂಡಿಯ.ಕಾಂ ). ಇದು ಕೇವಲ ಜನರನ್ನು ಕೋಮುವಾದೀ ದೃಷ್ಟಿಯಿಂದ ಪ್ರಚೋದಿಸುವ ಸುಳ್ಳಿನ ಕಂತೆ. ಖಂಡಿತವಾಗಿಯೂ, ನ್ಯಾಯಾಲಯದ ಟಿಪ್ಪಣಿಗಳಿಗೆ ಕೋಮುವಾದೀ ಬಣ್ಣ ಹಚ್ಚುವ ಇಂತಹ ಸುದ್ದಿ ಪೋರ್ಟಲಿನ ವಿರುದ್ಧ ಒಂದು ಪ್ರಕರಣ ದಾಖಲಿಸಬೇಕು. ಇದು ಕ್ರಿಮಿನಲ್ ನ್ಯಾಯಾಂಗ ನಿಂದನೆಗಿಂತಲೂ ಹೆಚ್ಚಾಗಿ, ನೇರವಾಗಿಯೇ ಉದ್ದೇಶಪೂರ್ವಕವಾದ ಕೋಮುವಾದೀ ಪ್ರತಿಕ್ರಿಯ್ರೆಯನ್ನು ಪ್ರಚೋದಿಸುತ್ತದೆ. ಈ ಪ್ರಶ್ನೆ ಉದ್ಭವಿಸುವುದು ಇವರೆಲ್ಲ ಮಹಾ ಪ್ರಭಾವ ಉಂಟು ಮಾಡುವವರು ಎಂಬುದಕ್ಕಲ್ಲ, ಇಂತಹ ಸಂಘ-ಸಂಸ್ಥೆಗಳು ರಾಜಕೀಯ ಕೃಪಾಪೋಷಣೆ ಮತ್ತು ಬಿಜೆಪಿ ಆಳ್ವಿಕೆಯ ಸರಕಾರಗಳಿಂದ ಉದಾರ ಜಾಹೀರಾತುಗಳ ಮೂಲಕ ಹಣಕಾಸುಗಳನ್ನು ಪಡೆಯುತ್ತಿವೆ ಎಂಬುದಕ್ಕಾಗಿ.
ಹಿಂಸಾಚಾರದ ನೇರ ಕೊಂಡಿ
ದುರದೃಷ್ಟವಶಾತ್, ಬಹಿರಂಗ ಕೋರ್ಟಿನಲ್ಲಿನ ನ್ಯಾಯಾಲಯದ ಟಿಪ್ಪಣಿಗಳು ನೂಪುರ್ ಶರ್ಮಾ ತನ್ನ ಅರ್ಜಿಯನ್ನು ಹಿಂಪಡೆಯಲು ಅನುಮತಿ ನೀಡುವ ಅಂತಿಮ ಆದೇಶದಲ್ಲಿ ಪ್ರತಿಫಲಿಸಿಲ್ಲ. ಆದಾಗ್ಯೂ ನೂಪುರ್ ಶರ್ಮಾ ಪ್ರಕರಣವನ್ನೂ ಮೀರಿ ಹೋಗುವ ಈ ಟಿಪ್ಪಣಿಗಳು, ಸಾರ್ವತ್ರಿಕ ಸಂದರ್ಭದಲ್ಲಿ, ದ್ವೇಷದ ಭಾಷಣ ಮತು ಅದರ ಪರಿಣಾಮಗಳ ನಡುವಿನ ನೇರ ಕೊಂಡಿಯನ್ನು ಕುರಿತಂತೆ ಒಂದು ಮಹತ್ವಪೂರ್ಣ ಅಂಶವನ್ನು ದಾಖಲಿಸಿದೆ. ಇದಕ್ಕೆ ಮೊದಲು ದೆಹಲಿ ಹೈಕೋರ್ಟ್ ತನ್ನ ಇತ್ತೀಚಿನ ಒಂದು ಆದೇಶದಲ್ಲಿ ದ್ವೇಷ ಭಾಷಣ ಮತ್ತು ತದನಂತರದ ಹಿಂಸಾಚಾರದ ನಡುವಿನ ಕೊಂಡಿಯನ್ನು ಹೆಚ್ಚು ಸ್ಪಷ್ಟವಾಗಿ ಗುರುತಿಸಿತ್ತು. ಅದು “ದ್ವೇಷ ಭಾಷಣಗಳು ಗುರಿಯಿಟ್ಟಿರುವ ಸಮುದಾಯದ ವಿರುದ್ಧ ದಾಳಿಗಳ ಪ್ರಾರಂಭದ ಹಂತವಾಗಿದ್ದು, ಇವು ತಾರತಮ್ಯದಿಂದ ಹಿಡಿದು ಬಹಿಷ್ಕಾರ, ಕೊಳೆಗೇರೀಕರಣ, ಗಡೀಪಾರು ಮತ್ತು ನರಮೇಧ ವರೆಗೂ ಹೋಗಬಹುದು” ಎಂದು ಹೇಳಿತ್ತು. ಇದು ಈ ಲೇಖಕರು ಬಿಜೆಪಿ ಸರಕಾರದ ಉನ್ನತ ಮತ್ತು ಚುನಾಯಿತ ವ್ಯಕ್ತಿಗಳ ವಿರುದ್ಧ ಅವರ ದ್ವೇಷ ಭಾಷಣಕ್ಕಾಗಿ ಹಾಕಿದ್ದ ಅರ್ಜಿಯ ಸಂಬಂಧದಲ್ಲಿ ನೀಡಿದ ಆದೇಶದಲ್ಲಿರುವ ವಾಕ್ಯಗಳು. ಸರಕಾರ ಆ ವ್ಯಕ್ತಿಗಳ ವಿಚಾರಣೆಗೆ ಅಗತ್ಯ ಮಂಜೂರಾತಿ ನೀಡದ್ದರಿಂದ ಈ ಅರ್ಜಿಯನ್ನು ವಜಾ ಮಾಡಲಾಯಿತು. ಅದರ ವಿರುದ್ಧ ಅಪೀಲು ಹಾಕಲಾಗುತ್ತಿದೆ. ಆದರೆ ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ದ್ವೇಷ ಭಾಷಣ ಮತ್ತು ನಂತರದ ಬೆಳವಣಿಗೆಗಳ “ಪ್ರಾರಂಭದ ಬಿಂದು” ಎಂದು ಕೊಂಡಿಯನ್ನು ಗುರುತಿಸಿರುವುದು.
ಇಂದು ಅಳುವ ವ್ಯವಸ್ಥೆಗಳ ರಾಜಕೀಯ ಕಾರ್ಯಸೂಚಿಯ ಭಾಗವಾಗಿ ದ್ವೇಷ ಭಾಷಣದ “ಸಾಮಾನ್ಯೀಕರಣ”ವಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಇದಕ್ಕೆ ಕೆಲವಾರು ಮಾಧ್ಯಮ ಸಂಸ್ಥೆಗಳ ಬೆಂಬಲವೂ ಇದೆ. ಇದು ಸಮುದಾಯಗಳ ನಡುವಿನ ಸಾಮಾಜಿಕ ಸಂಬಂಧಗಳನ್ನು ಗಂಭೀರವಾಗಿ ಕಲುಷಿತಗೊಳಿಸಿದೆ. ಇಂತಹ “ಸಾಮಾನ್ಯೀಕರಣ”ದಲ್ಲಿ ದ್ವೇಷ ಆಧಾರಿತ ಪ್ರಚೋದನಕಾರೀ ಹೇಳಿಕೆಗಳನ್ನು ಖಂಡಿಸುವಲ್ಲಿ ಉನ್ನತ ಮುಖಂಡರ ಬೇಜವಾಬ್ದಾರಿ ಮತ್ತು ಉದ್ದೇಶಪೂರ್ವಕ ಮೌನ ಅಥವಾ ಶಾಂತಿ ಮತ್ತು ಸಾಮರಸ್ಯಕ್ಕೆ ಮನವಿ ಮಾಡಲು ನಿರಾಕರಣೆಯೂ ಸೇರಿದೆ. ಅಂತರಾಷ್ಟ್ರೀಯ ಭಯೋತ್ಪಾದಕ ಗುಂಪುಗಳೊಂದಿಗೆ ನಂಟು ಹೊಂದಿದ್ದಾರೆ ಎನ್ನಲಾದ ಮುಸ್ಲಿಂ ಉಗ್ರರಿಂದ ಕನ್ಹಯ್ಯಾ ಲಾಲ್ ರವರ ಬರ್ಬರ ಮತ್ತು ಅಮಾನುಷ ಕೊಲೆ ಮತ್ತು ನಂತರ ಅದರ ಅತ್ಯಂತ ಭಯಾನಕ ಅಮಾನವೀಯ ವೀಡಿಯೊ ಬಿಡುಗಡೆ ಮಾಡುವ ಒಂದು ಭಯೋತ್ಪಾದಕ ಕೃತ್ಯವನ್ನು ಎಲ್ಲಾ ರಾಜಕೀಯ ವಲಯಗಳು ವ್ಯಾಪಕವಾಗಿ ಖಂಡಿಸಿವೆ. ರಾಜಸ್ತಾನ ಸರಕಾರ ಒಂದು ಕ್ಷಿಪ್ರ ಕಾರ್ಯಾಚರಣೆಯಲ್ಲಿ ಕೊಲೆಗಡುಕರನ್ನು ಬಂಧಿಸಿದೆ.
ಆದರೆ ಇದರ ವಿರುದ್ಧ ವ್ಯಾಪಕ ಆಕ್ರೋಶದ ಪ್ರಯೋಜನ ಪಡೆಯಲು ಬಿಜೆಪಿ ನೇತೃತ್ವದ ಗುಂಪುಗಳು ನೂಪುರ್ ಶರ್ಮರನ್ನು ಬೆಂಬಲಿಸುವ ಘೋಷಣೆಗಳನ್ನು ಕೂಗುತ್ತ, ಆಕೆಯ ಫೋಟೋಗಳೊಂದಿಗೆ ಉದಯಪುರದ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಒಬ್ಬರೇ ಒಬ್ಬ ಬಿಜೆಪಿ ಮುಖಂಡರು ಇದನ್ನು ಖಂಡಿಸಿದರೇ? ಇಂತಹ ಉದ್ವಿಗ್ನ ಸನ್ನಿವೇಶದಲ್ಲಿ ರಾಜಸ್ತಾನದ ಮುಖ್ಯಮಂತ್ರಿಗಳು ಶಾಂತಿ ಮತ್ತು ಸಾಮರಸ್ಯಕ್ಕೆ ಮನವಿ ಮಾಡುವಂತೆ ಪ್ರಧಾನ ಮಂತ್ರಿಗಳನ್ನು ಬಹಿರಂಗವಾಗಿಯೇ ವಿನಂತಿಸಿದರು. ಆದರೆ ಅವರ ಮನವಿಗೆ ಸಿಕ್ಕಿದ್ದು ಕಿವಿ ಗಡಚಿಕ್ಕುವ ಮೌನ. ಪ್ರಧಾನ ಮಂತ್ರಿಗಳು ಒಂದೇ ಒಂದು ಮಾತನ್ನಾಡಲಿಲ್ಲ. ಸಂಘ ಪರಿವಾರದ ಧ್ವಜಧಾರಿಗಳು ದ್ವೇಷಪೂರ್ಣ ಭಾಷಣಗಳನ್ನು ಮಾಡಿದ ಪ್ರತಿಯೊಂದು ಸಂದರ್ಭದಲ್ಲೂ , ಉನ್ನತ ರಾಜಕೀಯ ಮತ್ತು ಸರಕಾರೀ ಮುಖಂಡರು ಮೌನವಾಗಿಯೇ ಉಳಿದಿದ್ದಾರೆ. ಅಧಿಕಾರದಲ್ಲಿರುವವರ ಮಾತುಗಳು ಮಾತ್ರವಲ್ಲ ಕ್ರಿಯೆಗಳೂ ಸಮುದಾಯಗಳ ನಡುವೆ ದ್ವೇಷ ಮತ್ತು ಸಂದೇಹದ ವಾತಾವರಣವನ್ನು ಸೃಷ್ಟಿಸಿವೆ, ಇವು ಮನಸ್ಸುಗಳು ಮತ್ತು ಹೃದಯಗಳನ್ನು ಧ್ರುವೀಕರಿಸುವ ಒಂದು ದುಷ್ಟ ಪ್ರಯತ್ನ. ಶರ್ಮ, ಸಂಬಂಧಪಟ್ಟ ಸುದ್ದಿ ವಾಹಿನಿ ಹಾಗೂ ದಿಲ್ಲಿ ಪೋಲೀಸ್ ಬಗ್ಗೆ ಸುಪ್ರಿಂ ಕೋರ್ಟ್ ಸರಿಯಾಗಿಯೇ ಬಲವಾದ ಟೀಕೆ ಮಾಡಿದ್ದರೂ, ಇಂತಹ ಟಿಪ್ಪಣಿಗಳನ್ನು ಮಾಡಬೇಕಾಗಿ ಬಂದಿರುವ ಒಂದು ವಾತಾವರಣವನ್ನು ಸೃಷ್ಟಿಸುವಲ್ಲಿ ಅಧಿಕಾರದಲ್ಲಿರುವವರನ್ನು ಹೊಣೆಗಾರರಾಗಿಸ ಬೇಕಾಗುತ್ತದೆ.
ಒಂದು ಮೂಲಭೂತವಾದ ಇನ್ನೊಂದನ್ನು ಬಲಪಡಿಸುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ ಇದರ ಘೋರ ಪರಿಣಾಮಗಳನ್ನು ಭಾರತಾದ್ಯಂತ ನಾವು ನೋಡುತ್ತಿದ್ದೇವೆ. ವಿಷಕಾರೀ ಬಹುಸಂಖ್ಯಾತವಾದೀ ಕೋಮುವಾದದ ಬುಲ್ಡೋಜರ್ ಸಾಂವಿಧಾನಿಕ ಖಾತರಿಗಳ ವಿರುದ್ಧ ರಂಪಾಟ ನಡೆಸಿರುವಾಗ, ಇಸ್ಲಾಮ್‌ವಾದಿಗಳ ಹರಹು ಮತ್ತು ಅವರ ಉನ್ಮತ್ತ ಗುಂಪುಗಳು ಒಂದು ಮುತ್ತಿಗೆಗೊಳಗಾಗಿರುವ ಸಮುದಾಯದೊಳಕ್ಕೆ ನುಸುಳುತ್ತಿವೆ. ಇದೀಗ ಭಾರತ ಎದುರಿಸಬೇಕಾಗಿರುವ ದುಃಸ್ವಪ್ನ. ಅದನ್ನು ಸೃಷ್ಟಿಸಲು ಅನುವು ಮಾಡಿಕೊಟ್ಟಿರುವ ಕತ್ತಲೆಯನ್ನು ದೂರ ಮಾಡುವ ಮೂಲಕ ಭಾರತವು ಎಚ್ಚೆತ್ತುಕೊಳ್ಳಬೇಕಾಗಿದೆ. ಇದರಲ್ಲಿ ನ್ಯಾಯಾಲಯಗಳಿಗೆ ಒಂದು ಮಹತ್ವದ ಪಾತ್ರವಿದೆ. ಅವು ಅಪರೂಪವಾಗಿಯಾದರೂ ಕೆಲವೊಮ್ಮೆ, ನೂಪುರ್ ಶರ್ಮ ಪ್ರಕರಣದಲ್ಲಿ ಮಾಡಿದಂತಹ ಹರಿತವಾದ ಟಿಪ್ಪಣಿಗಳು ದಾರಿಯನ್ನು ಸ್ಪಷ್ಟಪಡಿಸಲು ನೆರವಾಗುತ್ತವೆ. “ಶರ್ಮ ವಿರುದ್ಧ ಟಿಪ್ಪಣಿಗಳನ್ನು ಹಿಂತೆಗೆದುಕೊಳ್ಳಬೇಕು” ಎಂದು ಅವರ ಬೆಂಬಲಿಗರು ಮುಖ್ಯ ನ್ಯಾಯಾಧೀಶರಿಗೆ ಮನವಿ ಮಾಡಿದ್ದಾರೆ. ಹಾಗಾದರೆ ಅದೊಂದು ದುಃಖದ ದಿನವಾಗಿರುತ್ತದೆ. ಸತ್ಯವನ್ನು ಅಳಿಸಿ ಹಾಕಲು ಸಾಧ್ಯವಿಲ್ಲವಲ್ಲ.
ದ್ವೇಷ ಯಂತ್ರದಲ್ಲಿ “ನಾನೊಂದು ಸಣ್ಣ ಗಾಲಿ ಹಲ್ಲಷ್ಟೇ”
ವ್ಯಂಗ್ಯಚಿತ್ರ: ಸಂದೀಪ್ ಅಧ್ವರ್ಯು, ಟೈಂಸ್ ಆಫ್ ಇಂಡಿಯ