ದುರಹಂಕಾರಕ್ಕೆ ಸೋಲು-ಅನಗತ್ಯವಾಗಿದ್ದ ಸಂಘರ್ಷಕ್ಕೆ ತಡೆ

ಕೃಷಿ ಕಾನೂನುಗಳನ್ನು ರದ್ದುಗೊಳಿಸಿರುವುದರಿಂದ, ಕೊನೆಯ ಪಕ್ಷ ತಾತ್ಕಾಲಿಕವಾಗಿಯಾದರೂ, ಕೇಂದ್ರ ಸರ್ಕಾರ ಮತ್ತು ರೈತರ ನಡುವಿನ ಸಲೀಸಾಗಿ ತಪ್ಪಿಸಬಹುದಾಗಿದ್ದ ಸಂಘರ್ಷದ ಒಂದು ಕೆಟ್ಟ ಅಧ್ಯಾಯವನ್ನು ಕೊನೆಗೊಳಿಸಲಾಗಿದೆ. ಆದಾಗ್ಯೂ, ಪ್ರತಿಭಟನೆಯು ಹೊರಸೂಸಿದ ಆವೇಗವು ಖಂಡಿತವಾಗಿಯೂ ಮುಂದುವರಿಯುತ್ತದೆ. ನಿರಂತರವಾಗಿ ಕಾಡುತ್ತಿರುವ ಕೃಷಿ ಬಿಕ್ಕಟ್ಟನ್ನು ಪರಿಹರಿಸುವ ಬೇಡಿಕೆಗಳ ಸುತ್ತ ಗ್ರಾಮೀಣ ಜನತೆಯನ್ನು ಹೊಸದಾಗಿ ಅಣಿನೆರೆಸುವ, ಹೊಸ ಸಂಘರ್ಷಗಳು ಹೊರಹೊಮ್ಮುವ ಮತ್ತು ಬೆಳೆಯುವ ಸಾಧ್ಯತೆಗಳಿರುವ, ಖಂಡಿತವಾಗಿಯೂ ಕುತೂಹಲ ಕೆರಳಿಸುವ ದಿನಮಾನಗಳಲ್ಲಿ ನಾವಿದ್ದೇವೆ. ಎನ್ನುತ್ತಾರೆ ಮುಂಬೈಯ ಟಾಟಾ ಸಮಾಜಿಕ ವಿಜ್ಞಾನಗಳ ಸಂಸಥೆಯಲ್ಲಿ ಪ್ರಾಧ್ಯಾಪಕ ಪ್ರೊ. ಆರ್. ರಾಮಕುಮಾರ್…..

ಮೂಲ ಲೇಖನ ಕೃಪೆ: ದಿ ಹಿಂದು, ನವೆಂಬರ್ 20, 2021

ಭಾರತದ ರೈತ ಚಳುವಳಿಯು ಒಂದು ಅಭೂತಪೂರ್ವ ವಿಜಯವನ್ನು ಸಂಪಾದಿಸಿದೆ. ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದಾಗಿ ಪ್ರಧಾನಿ ಮೋದಿ ಘೋಷಣೆ ಮಾಡಿದ್ದಾರೆ. ಈ ಕಾನೂನುಗಳನ್ನು ವಿರೋಧಿಸಿ, ಒಂದು ವರ್ಷಕ್ಕೂ ಹೆಚ್ಚು ಸಮಯದಿಂದಲೂ ಸಾವಿರ ಸಾವಿರಗಟ್ಟಲೆ ರೈತರು ದೆಹಲಿಯನ್ನು ಸುತ್ತುಗಟ್ಟಿ ಠಿಕಾಣಿ ಹೂಡಿ ಪ್ರತಿಭಟನೆ ನಡೆಸುತ್ತಿದ್ದರು. ಅವರ ಈ ಐತಿಹಾಸಿಕ ಪ್ರತಿಭಟನೆಯು ದಿನೇ ದಿನೇ ದೇಶವ್ಯಾಪಿಯಾಗಿ ವಿಸ್ತರಿಸುತ್ತಾ, ಪ್ರತಿರೋಧದ ಒಂದು ಬೃಹತ್ ಆಂದೋಲನವಾಗಿ ವಿಕಾಸ ಹೊಂದುವ ಲಕ್ಷಣಗಳು ಗೋಚರಿಸುತ್ತಿದ್ದವು. ಈ ಕಾನೂನುಗಳನ್ನು ರದ್ದುಗೊಳಿಸುವ ನಿರ್ಧಾರವು ಬುದ್ಧಿವಂತಿಕೆಯದ್ದೇ ಆದರೂ ಅದನ್ನು ಕೈಗೊಳ್ಳುವಲ್ಲಿ ತಡವಾಗಿದೆ. ದೆಹಲಿಯಲ್ಲಿ ಈಗಲೂ ಮುಂದುವರೆಯುತ್ತಿರುವ ಈ ಚಳುವಳಿಯ ಮೇಲೆ ತೆರೆ ಎಳೆದರೂ ಸಹ, ಅದು ರಾಜಕೀಯವಾಗಿ ಹೊರಸೂಸಿದ ಭಾವ ತೀವ್ರತೆ, ಹುರುಪು-ಉತ್ಸಾಹಗಳು ಕಡಿಮೆಯಾಗುವ ಸಾಧ್ಯತೆಗಳಿಲ್ಲ.

ರೈತರ ಈ ಪ್ರತಿಭಟನೆಗೆ ಸರ್ಕಾರ ತೋರಿದ ಪ್ರತಿಕ್ರಿಯೆ ಭಯಾನಕವಾಗಿತ್ತು ಮತ್ತು ದುರಹಂಕಾರದಿಂದ ಕೂಡಿತ್ತು. ಒಂದು ಕಡೆಯಲ್ಲಿ, ಕೃಷಿ ಸುಧಾರಣೆಗಳ ಹೆಸರಿನಲ್ಲಿ ತಾನು ರೂಪಿಸಿದ ಯೋಜನೆಯ ಬಗ್ಗೆ ಸದಭಿಪ್ರಾಯ ಮೂಡಿಸುವ ನಿರೂಪಣೆಯಲ್ಲಿ ತೊಡಗಿದ್ದ ಸರ್ಕಾರವು ಇನ್ನೊಂದು ಕಡೆಯಲ್ಲಿ, ಹೇಗಾದರೂ ಸರಿ, ಚಳುವಳಿಯನ್ನು ಮುರಿಯಲೇಬೇಕು ಎನ್ನುವ ಹಠಕ್ಕೆ ಬಿದ್ದಿತ್ತು. ಪ್ರತಿಭಟನಾಕಾರರನ್ನು ಭಯೋತ್ಪಾದಕರೆಂದು ಮತ್ತು ಖಲಿಸ್ತಾನಿಗಳೆಂದು ಹಣೆಪಟ್ಟಿ ಹಚ್ಚಿತು. ಅವರ ಐಕ್ಯತೆಯನ್ನು ಮುರಿಯಲು ಪ್ರಯತ್ನಿಸಿತು. ಅವರನ್ನು ಖರೀದಿಸಲು ಪ್ರಯತ್ನಿಸಿತು. ಅವರನ್ನು ರಾಕ್ಷಸರಂತೆ ಬಿಂಬಿಸಿ, ಅವಮಾನಿಸಲು ಪ್ರಯತ್ನಿಸಿತು. ಅವರ ಮೇಲೆ ಅಶ್ರುವಾಯು ಸಿಡಿಸಿತು. ಜಲ ಫಿರಂಗಿಗಳನ್ನು ಸಿಡಿಸಿತು. ಅವರ ವಿರುದ್ಧ ದೇಶದ್ರೋಹದ ಕೇಸುಗಳನ್ನು ಜಡಿಯಿತು. ರೈತರು ಬಗ್ಗಲಿಲ್ಲ. ಹತಾಶೆಗೊಂಡ ಸರ್ಕಾರದ ಅಧಿಕಾರಿಗಳು, ಪ್ರತಿಭಟನಾಕಾರರ ತಲೆ ಒಡೆಯುವಂತೆ ಪೊಲೀಸರಿಗೆ ಬಹಿರಂಗವಾಗಿಯೇ ಹೇಳಿದರು. ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಶಾಂತಿಯುತ ಪ್ರದರ್ಶನ ನಡೆಸುತ್ತಿದ್ದ ರೈತರ ಮೇಲೆ ವಾಹನವನ್ನು ಓಡಿಸಲಾಯಿತು. ಹಲವರು ಸತ್ತರು. ಇಂತಹ ಅನೇಕ ಕಿರುಕುಳಗಳನ್ನು ಮತ್ತು ಕ್ರೌರ್ಯವನ್ನು ಸಹಿಸಿಕೊಂಡು ಚಳುವಳಿಯನ್ನು ಮುಂದುವರೆಸಿದ ಪ್ರತಿಭಟನಾಕಾರರು ವಂದನೀಯರೇ.

ಒಟ್ಟಾರೆ ಸಂದರ್ಭ

1991ರ ನಂತರ, ಬಲಪಂಥೀಯ ಅರ್ಥಶಾಸ್ತ್ರಜ್ಞರು ಪ್ರತಿಪಾದಿಸಿದ ಕೃಷಿ ವಲಯದ “ಸುಧಾರಣೆಗಳು”, 1960ರ ನಂತರ ಆರಂಭಗೊಂಡು ಕೃಷಿಗೆ ಒದಗುತ್ತಿದ್ದ ಸಾಂಸ್ಥಿಕ ಬೆಂಬಲವನ್ನು ಮತ್ತು ಅದರ ಕ್ರಮಗಳನ್ನು ಕಳಚಿಹಾಕುವ ನಿಟ್ಟಿನಲ್ಲಿದ್ದವು. ಧಾನ್ಯಗಳಿಗೆ ಕನಿಷ್ಠ ಬೆಂಬಲ ಬೆಲೆ, ರಸಗೊಬ್ಬರ ಸಬ್ಸಿಡಿ, ಬೆಳೆ ಸಾಲ, ಕೃಷಿ ಮಾರುಕಟ್ಟೆಯ ಅಭಿವೃದ್ಧಿ, ಕೃಷಿ ಸಂಶೋಧನೆ ಮತ್ತು ಕೃಷಿ ಸೇವೆಗಳ ವಿಸ್ತರಣೆ ಮುಂತಾದ ಸಾಂಸ್ಥಿಕ ಬೆಂಬಲದ ಕ್ರಮಗಳು, 1960 ಮತ್ತು 1980ರ ನಡುವೆ ದೇಶವು ಸಾಧಿಸಿದ ಆಹಾರ ಸ್ವಾವಲಂಬನೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ. ಪ್ರಸಕ್ತ ಕಾನೂನುಗಳ ಪೈಕಿ, ಕೃಷಿ ಉತ್ಪನ್ನಗಳ ಮಾರಾಟಕ್ಕೆ ಸಂಬಂಧಿಸಿದ ಕಾಯ್ದೆಯ ಉದ್ದೇಶವು ಎಪಿಎಂಸಿ (ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ) ಕಾಯ್ದೆಯನ್ನು ಅನೂರ್ಜಿತಗೊಳಿಸುವುದೇ ಆಗಿತ್ತು. ರಾಜ್ಯ ವಿಧಾನಸಭೆಗಳು ಅಂಗೀಕರಿಸಿದ ಎಪಿಎಂಸಿ ಕಾಯ್ದೆ(1972) ಪ್ರಕಾರ ನಿಯಂತ್ರಿಸಲ್ಪಡುತ್ತಿದ್ದ ಮಂಡಿ ವ್ಯವಸ್ಥೆಯನ್ನು ನಾಶಪಡಿಸುವುದೇ ಹೊಸ ಕಾಯ್ದೆಯ ಉದ್ದೇಶ. ರಫ್ತು ಬೆಳೆಗಳು ಮತ್ತು ಹೆಚ್ಚಿನ ಲಾಭ ತರುವ ಇತರ ಬೆಳೆಗಳೊಂದಿಗೆ ಭಾರತವು ತನ್ನ ಬೆಳೆ ಮಾದರಿಯನ್ನು ವೈವಿಧ್ಯಮಯಗೊಳಿಸಿಕೊಳ್ಳಬೇಕು ಎಂದಾದರೆ, ಮಂಡಿ ವ್ಯವಸ್ಥೆಯು ಖಾಸಗಿ ಮಾರುಕಟ್ಟೆಗಳಿಗೆ, ವಾಯ್ದೆ(ಫ್ಯೂಚರ್ಸ್) ಮಾರುಕಟ್ಟೆಗೆ ಮತ್ತು ಗುತ್ತಿಗೆ ಕೃಷಿಗೆ ದಾರಿ ಮಾಡಿಕೊಡಬೇಕಾಗುತ್ತದೆ ಎಂಬುದಾಗಿ ಹೇಳಲಾಯಿತು. ದೊಡ್ಡ ಕಾರ್ಪೊರೇಟ್ ಖರೀದಿದಾರರು ಮತ್ತು ರಫ್ತುದಾರರೊಂದಿಗೆ ರೈತರು ನೇರವಾಗಿ ವ್ಯವಹರಿಸಲು ಎಪಿಎಂಸಿ ಕಾಯ್ದೆಯು ಅವಕಾಶ ನೀಡದ ಕಾರಣದಿಂದ ರೈತರಿಗೆ ತಾರತಮ್ಯ ಮಾಡಿದಂತಾಗುತ್ತದೆ ಎಂದು ವಾದಿಸಲಾಯಿತು. ಆದ್ದರಿಂದ, ಸ್ಥಳೀಯ ಮಂಡಿಯ ಅನುಮತಿ ಇಲ್ಲದೆ ಅಥವಾ ಮಂಡಿಗೆ ಯಾವುದೇ ತೆರಿಗೆ ಪಾವತಿ ಮಾಡದೆ, ಎಲ್ಲಿ ಬೇಕಾದರೂ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ಸ್ವಾತಂತ್ರ‍್ಯವನ್ನು ರೈತರು ಹೊಂದಿದಾಗ ಖಾಸಗಿ ಮಾರುಕಟ್ಟೆಗಳು ಅಥವಾ ಗ್ರಾಮೀಣ ಸಂಗ್ರಹ ಕೇಂದ್ರಗಳು ಅಸ್ತಿತ್ವಕ್ಕೆ ಬರುತ್ತವೆ ಮತ್ತು ಈ ಮೂಲಕ ಗುತ್ತಿಗೆ ಕೃಷಿ ಪದ್ಧತಿಯನ್ನು ಜನಪ್ರಿಯಗೊಳಿಸಬಹುದು ಎಂಬ ನೆಲೆಯಲ್ಲಿ ಎಪಿಎಂಸಿ ಕಾಯ್ದೆಯನ್ನು ತಿದ್ದುಪಡಿ ಮಾಡಲಾಗಿದೆ. ಅದೇ ರೀತಿಯಲ್ಲಿ, ವ್ಯಾಪಾರಿಗಳು ತಮ್ಮ ಬಳಿ ಇಟ್ಟುಕೊಳ್ಳುವ ದಾಸ್ತಾನು ಮಿತಿಯನ್ನು ಸಡಿಲಿಸಿದರೆ ಧಾನ್ಯಗಳ ಸಂಗ್ರಹಣೆ, ಪರಿಷ್ಕರಣೆ ಮತ್ತು ದಾಸ್ತಾನುಗಳಿಗೆ ಖಾಸಗಿ ಕಾರ್ಪೊರೇಟ್ ಹೂಡಿಕೆಯನ್ನು ಪ್ರೋತ್ಸಾಹಿಸಬಹುದು ಎಂಬ ನೆಲೆಯಲ್ಲಿ 1955ರ ಅಗತ್ಯ ವಸ್ತುಗಳ ಕಾಯ್ದೆಗೆ ತಿದ್ದುಪಡಿಮಾಡಲಾಗಿದೆ.

ವ್ಯಂಗ್ಯಚಿತ್ರ ಕೃಪೆ: ದಿನೇಶ್ ಕುಕ್ಕುಜಡ್ಕ

ಕೃಷಿ ಮಾರುಕಟ್ಟೆಗಳಿಗೆ ಸಂಬಂಧಿಸಿದಂತೆ ಕಾನೂನುಗಳನ್ನು ರೂಪಿಸುವುದು ರಾಜ್ಯ ಸರ್ಕಾರಗಳ ವ್ಯಾಪ್ತಿಗೆ ಸೇರಿದ್ದು  ಎಂಬುದು ದೀರ್ಘಕಾಲದಿಂದಲೂ ಭಾರತದಲ್ಲಿ ಪಾಲಿಸಿಕೊಂಡು ಬಂದಿದ್ದ ಒಂದು ಸಾಂವಿಧಾನಿಕ ಒಮ್ಮತದ ಪರಂಪರೆಯೇ ಆಗಿತ್ತು. ಹಾಗಾಗಿ, 2003ರಲ್ಲಿ ಕೇಂದ್ರ ಸರ್ಕಾರವು ಕೃಷಿ ಮಾರುಕಟ್ಟೆಗಳಿಗೆ ಸಂಬಂಧಿಸಿದ ಒಂದು ಮಾದರಿ ಕಾಯ್ದೆಯನ್ನು ಸಿದ್ಧಪಡಿಸಿ ಅದನ್ನು ತಮ್ಮ ತಮ್ಮ ರಾಜ್ಯ ವಿಧಾನಸಭೆಗಳಲ್ಲಿ ಅಂಗೀಕರಿಸಿಕೊಳ್ಳುವಂತೆ ರಾಜ್ಯಗಳಿಗೆ ಸೂಚಿಸಿತು. ತದನಂತರ, ಇನ್ನೆರಡು ಮಾದರಿ ಕಾಯ್ದೆಗಳನ್ನು 2017 ಮತ್ತು 2018ರಲ್ಲಿ ಸಿದ್ಧಪಡಿಸಿ ಅವುಗಳನ್ನು ರಾಜ್ಯಗಳಿಗೆ ಕಳುಹಿಸಲಾಗಿತ್ತು. ಕೇಂದ್ರ ಸರ್ಕಾರವು ರೂಪಿಸಿದ ಈ ಮಾದರಿ ಕಾಯ್ದೆಗಳನ್ನು ರಾಜ್ಯಗಳು ಸ್ವಾಗತಿಸಲೂ ಇಲ್ಲ ಅಥವಾ ತಳ್ಳಿ ಹಾಕಲೂ ಇಲ್ಲ. ಅನೇಕ ರಾಜ್ಯಗಳು ತಮಗೆ ಆಕರ್ಷಕವಾಗಿ ಕಂಡ ಮತ್ತು ತಮ್ಮ ಸಂದರ್ಭಗಳಿಗೆ ಸೂಕ್ತವೆಂದು ಕಂಡುಬಂದ ಕೆಲವು ಕಲಮು/ಖಂಡಗಳನ್ನು ಆಯ್ಕೆ ಮಾಡಿಕೊಂಡವು ಮತ್ತು ಅದಕ್ಕನುಗುಣವಾಗಿ 2003 ಮತ್ತು 2020 ರ ನಡುವೆ ತಮ್ಮ ಎಪಿಎಂಸಿ ಕಾಯ್ದೆಗಳಿಗೆ ತಿದ್ದುಪಡಿ ಮಾಡಿಕೊಂಡವು. ಈ ಸಂದರ್ಭವನ್ನು ಬಳಸಿಕೊಂಡ, ಏಕ ಮಾತ್ರ, ಬಿಹಾರ ರಾಜ್ಯವು 2006ರಲ್ಲಿ ತನ್ನ ಎಪಿಎಂಸಿ ಕಾಯ್ದೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಿತು.

ಅಸಂವಿಧಾನಿಕ ಕಾನೂನುಗಳು

ಕೃಷಿಗೆ ಸಂಬಂಧಿಸಿದ ಕಾನೂನುಗಳನ್ನು ರಾಜ್ಯ ಸರ್ಕಾರಗಳ ಶಾಸಕ ವ್ಯಾಪ್ತಿಗೆ ಸೇರಿದ್ದು  ಎಂಬ  ಒಮ್ಮತವನ್ನು ಕೇಂದ್ರ ಸರ್ಕಾರವು 2020ರಲ್ಲಿ ಈ ಮೂರು ಕೃಷಿ ಕಾನೂನುಗಳನ್ನು ರಚಿಸುವ ಮೂಲಕ ಮುರಿಯಿತು. ರಾಜ್ಯ ಪಟ್ಟಿಯ ದಾಖಲೆ ಸಂಖ್ಯೆ 14, 26 ಮತ್ತು 27ರ ವಿಷಯಗಳಲ್ಲಿ ಮಧ್ಯಪ್ರವೇಶಿಸಲು ಕೇಂದ್ರ ಸರ್ಕಾರವು ಸಮವರ್ತಿ ಪಟ್ಟಿಯ ದಾಖಲೆ ಸಂಖ್ಯೆ 33ನ್ನು ಬಳಕೆ ಮಾಡಿಕೊಳ್ಳುವ ಮೂಲಕ ಕೇಂದ್ರ-ರಾಜ್ಯಗಳ ನಡುವಿನ ಸಂಬಂಧದ ತತ್ವಗಳನ್ನು ಉಲ್ಲಂಘಿಸಿದೆ. ಈ ಕೃಷಿ ಕಾನೂನುಗಳು ರಾಜ್ಯ ಪಟ್ಟಿಯ ದಾಖಲೆ ಸಂಖ್ಯೆ 28ರಲ್ಲಿ ಹಸ್ತಕ್ಷೇಪ ಮಾಡಿವೆ. ಏಕೆಂದರೆ, ಅವು ಸಮವರ್ತಿ ಪಟ್ಟಿಯ ದಾಖಲೆ ಸಂಖ್ಯೆ 33ಕ್ಕೆ ಒಳಪಟ್ಟಿಲ್ಲ. ಹೀಗಾಗಿ, ಆರಂಭದಲ್ಲೇ, ಈ ಕೃಷಿ ಕಾನೂನುಗಳು ಅಸಂವಿಧಾನಿಕವಾಗಿವೆ ಎಂಬುದನ್ನು ಸಮಂಜಸವಾಗಿ ಮತ್ತು ಸಮರ್ಥನೀಯವಾಗಿ ವಾದಿಸಬಹುದು.

ಅದೇನೇ ಇರಲಿ, ಈ ಕೃಷಿ ಕಾನೂನುಗಳ ಅಸಂವಿಧಾನಕತೆಯ ಬಗ್ಗೆ ರೈತ ಸಂಘಟನೆಗಳು ಭಾರತದ ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ ಅರ್ಜಿಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಸರ್ವೋಚ್ಚ ನ್ಯಾಯಾಲಯವು ನಿರಾಕರಿಸಿತು. ಬದಲಿಗೆ, ಪ್ರತಿಭಟನಾ ನಿರತ ರೈತ ಸಂಘಟನೆಗಳೊಂದಿಗೆ ಸಮಾಲೋಚಿಸದೆ, ಸರ್ವೋಚ್ಚ ನ್ಯಾಯಾಲಯವು ಜನವರಿ 2021 ರಲ್ಲಿ ನಾಲ್ಕು ಜನರ ಒಂದು ಸಮಿತಿಯನ್ನು ನೇಮಿಸಿತು. ಈ ಸಮಿತಿಯ ನಾಲ್ಕೂ ಸದಸ್ಯರೂ ಕೃಷಿ ಕಾನೂನುಗಳನ್ನು ಬಹಿರಂಗವಾಗಿಯೇ ಸಮರ್ಥಿಸಿದ್ದರು. ರೈತ ಸಂಘಟನೆಗಳು ಈ ಸಮಿತಿಯನ್ನು ವಿರೋಧಿಸಿದವು. ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದವು.

ಸಂವಿಧಾನಾತ್ಮಕತೆಯಲ್ಲದೆ, ಅವು ಒಳಗೊಂಡ ವಿಷಯಗಳನ್ನು ವ್ಯಾಪಕವಾಗಿ ಟೀಕಿಸಲಾಯಿತು. ಎಪಿಎಂಸಿ ಕಾಯ್ದೆಗಳನ್ನು ರದ್ದುಗೊಳಿಸಿದರೂ ಸಹ, ಖಾಸಗಿ ಹೂಡಿಕೆಯು ಕೃಷಿ ಮಾರುಕಟ್ಟೆಯತ್ತ ಹರಿಯುವುದಿಲ್ಲ ಎಂಬುದನ್ನು ಬಿಹಾರದ ಉದಾಹರಣೆ ತೋರಿಸುತ್ತದೆ. ವಾಸ್ತವವಾಗಿ ಹೇಳುವುದಾದರೆ, 2006ರಲ್ಲಿ ಎಪಿಎಂಸಿ ಕಾಯ್ದೆಯನ್ನು ಬಿಹಾರದಲ್ಲಿ ರದ್ದುಗೊಳಿಸಿದ ನಂತರ, ನಿರ್ಲಜ್ಜ ವ್ಯಾಪಾರಿಗಳಿಂದ ರೈತರ ಶೋಷಣೆ ಮತ್ತಷ್ಟು ಹೆಚ್ಚಾಗಿದೆ. ಕೇರಳದಲ್ಲಿ ಎಪಿಎಂಸಿ ಕಾಯ್ದೆ ಇರಲೇ ಇಲ್ಲ. ಆದರೂ, ಅಲ್ಲಿಗೆ ಖಾಸಗಿ ಹೂಡಿಕೆ ಹರಿದಿಲ್ಲ.

ಮಹಾರಾಷ್ಟ್ರವು 2016ರಲ್ಲಿ ಹಣ್ಣುಗಳು ಮತ್ತು ತರಕಾರಿಗಳನ್ನು ಎಪಿಎಂಸಿಯ ವ್ಯಾಪ್ತಿಯಿಂದ ತೆಗೆದುಹಾಕಿತ್ತು. ಆದರೂ, ಅಲ್ಲಿನ ಕೃಷಿ ಮಾರುಕಟ್ಟೆಗೆ ಖಾಸಗಿ ಹೂಡಿಕೆಯಾದದ್ದು ಸ್ವಲ್ಪವೇ ಸ್ವಲ್ಪ. ಹಾಗಾಗಿ, ಎಪಿಎಂಸಿ ಕಾಯ್ದೆ ದುರ್ಬಲಗೊಂಡರೆ ಏನಾಗಬಹುದು ಎಂದರೆ, ಒಂದು ಔಪಚಾರಿಕ ನೆಲೆ ಹೊಂದಿರುವ ಮತ್ತು ನಿಯಂತ್ರಣಕ್ಕೆ ಒಳಪಟ್ಟಿರುವ ಕೃಷಿ ಮಾರುಕಟ್ಟೆಯು ಅನೌಪಚಾರಿಕ ಮತ್ತು ಅನಿಯಂತ್ರಿತ ಮಾರುಕಟ್ಟೆಯಾಗಿ ಛಿದ್ರಗೊಳ್ಳಬಹುದು.

ಜೊತೆಗೆ, ಇನ್ನೂ ಎರಡು ಸಮಸ್ಯೆಗಳಿವೆ. ಒಂದು, ಪಂಜಾಬ್ ರಾಜ್ಯದಲ್ಲಿ ಮಂಡಿಗಳು ವಸೂಲು ಮಾಡುತ್ತಿದ್ದ ತೆರಿಗೆಯನ್ನು ಗ್ರಾಮೀಣ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ಬಳಸಲಾಗುತ್ತಿತ್ತು. ಮಂಡಿ ವ್ಯವಸ್ಥೆಯು ದುರ್ಬಲಗೊಂಡರೆ, ಗ್ರಾಮೀಣ ಮೂಲಸೌಕರ್ಯಗಳಿಗೆ ಯಾವ ಬದಲಿ ಮೂಲದಿಂದ ಹಣ ಬರುತ್ತದೆ? ಎರಡು, ಒಂದೊಮ್ಮೆ ಖಾಸಗಿ ಮಾರುಕಟ್ಟೆಗಳು ಬೆಳೆದು ಬಂದರೂ ಸಹ, ಸಣ್ಣ ಮತ್ತು ಅತಿ ಸಣ್ಣ ಬಡ ರೈತರ ಹೊಲದ ಬದಿಯಿಂದ ಅವರ ಉತ್ಪನ್ನಗಳನ್ನು ಮಾರುಕಟ್ಟೆಗೆ ಒಯ್ಯುವಲ್ಲಿ ಇರುವ ಕೆಲವು ಸಮಸ್ಯೆಗಳನ್ನು ಖಾಸಗಿ ವ್ಯಾಪಾರಸ್ತರು ಹೇಗೆ ಪರಿಹರಿಸುತ್ತಾರೆ? ಒಬ್ಬ ಸಾಧಾರಣ ಮಧ್ಯವರ್ತಿಯ ಬದಲಾಗಿ ಇನ್ನೊಬ್ಬ ಸೂಟು ಬೂಟಿನ ಮಧ್ಯವರ್ತಿಯೊಂದಿಗಿನ ಬದಲಾವಣೆಯೇ? ಈ ಪ್ರಶ್ನೆಗಳಿಗೆ ತಕ್ಕ ಉತ್ತರಗಳು ಕೃಷಿ ಕಾನೂನುಗಳ ಸಮರ್ಥಕರ ಬಳಿಯಿಲ್ಲ.

ವಿವಾದಗಳು ಸಾಮಾನ್ಯವಾಗಿ ಸಿವಿಲ್ ನ್ಯಾಯಾಲಯಗಳ ವ್ಯಾಪ್ತಿಗೆ ಬರುತ್ತವೆ. ಆದರೆ, ಹೊಸ ಕಾನೂನಿನಡಿಯಲ್ಲಿ ಸಿವಿಲ್ ನ್ಯಾಯಾಲಯಗಳ ಈ ಅಧಿಕಾರವನ್ನು ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ಕೋರ್ಟುಗಳಿಗೆ ವಹಿಸಲಾಗಿದೆ. ಈ ಬದಲಾವಣೆಯಿಂದ ಸಣ್ಣ ಮತ್ತು ಅತಿ ಸಣ್ಣ ಬಡ ರೈತರಿಗೆ ಭಾರೀ ಅನ್ಯಾಯವಾಗುತ್ತದೆ. ಇದು ಗುತ್ತಿಗೆ ಪಡೆದ ಕಾರ್ಪೊರೇಟ್‌ಗಳಿಗೆ ಮಾತ್ರ ಪ್ರಯೋಜನವಾಗಬಹುದು. ತನ್ನ ಒಂದೋ ಅಥವಾ ಎರಡೂ ಎಕರೆ ಜಮೀನನ್ನು ಒಂದು ದೊಡ್ಡ ಕಾರ್ಪೊರೇಟ್ ಕಂಪೆನಿಗೆ ಗುತ್ತಿಗೆ ಕೊಟ್ಟ ಬಡ ರೈತನೊಬ್ಬನು ತನ್ನ ಅಹವಾಲಿನ ಬಗ್ಗೆ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ಕೋರ್ಟ್ ಇರುವ ಜಿಲ್ಲಾ ಕೇಂದ್ರದಲ್ಲಿ ಆ ಕಾರ್ಪೊರೇಟ್ ಕಂಪೆನಿಯ ವಿರುದ್ಧ ಸೆಣಸಲು ಸಾಧ್ಯವೇ? ಅದ್ದರಿಂದ, ಈ ಬದಲಾವಣೆಯ ಬಗ್ಗೆ ಟೀಕೆಗಳು ವ್ಯಾಪಕವಾಗಿವೆ.

ಕಾರ್ಪೊರೇಟ್‌ಗಳತ್ತ ಒಲವು

ಒಟ್ಟಾರೆಯಾಗಿ ಹೇಳುವುದಾದರೆ, ಈ ಕೃಷಿ ಕಾನೂನುಗಳು, ದೊಡ್ಡ ದೊಡ್ಡ ಕಾರ್ಪೊರೇಟ್ ಕಂಪೆನಿಗಳು ಕೃಷಿ ಚಟುವಟಿಕೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಪಾಲ್ಗೊಳ್ಳಲು ಪ್ರೋತ್ಸಾಹಿಸುತ್ತವೆ ಎಂದೇ ಹೇಳಬಹುದು. ಏಕೆಂದರೆ, ರೈತ ಸ್ನೇಹಿ ಸಂಸ್ಥೆಗಳಿಗೆ, ಅಂದರೆ, ರೈತ-ಸಹಕಾರ ಸಂಘಗಳು ಅಥವಾ ರೈತ ಉತ್ಪಾದಕ ಕಂಪನಿಗಳಂತಹ (ಎಫ್‌ಪಿಸಿ) ಸಂಸ್ಥೆಗಳಿಗೆ ಈ ಕಾನೂನುಗಳಲ್ಲಿ ಪ್ರಸ್ತಾಪವೇ ಇಲ್ಲ. ಅವುಗಳಿಗೆ ಸಲ್ಲಬೇಕಿದ್ದ ಸ್ಥಾನವನ್ನು ಕಾರ್ಪೊರೇಟ್ ಕಂಪೆನಿಗಳು ಆಕ್ರಮಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಅಗತ್ಯ ವಸ್ತುಗಳ ಕಾಯ್ದೆಯ ತಿದ್ದುಪಡಿಯಂತೂ ಬೆರಳೆಣಿಕೆಯ ಕಾರ್ಪೊರೇಟ್ ಆಟದಲ್ಲಿ ತೊಡಗಿರುವವರಿಗೆ ಸಾಗಾಟ, ಸಂಗ್ರಹಣೆ ಮತ್ತು ಉಗ್ರಾಣ ಸಂಬಂಧಿತ ಹೂಡಿಕೆಗಳಿಂದ ಭಾರೀ ಲಾಭ ಮಾಡಿಕೊಡಲಿದೆ.

ಮಂಡಿಗಳು ಸ್ಥಳೀಯ ಅರ್ಥವ್ಯವಸ್ಥೆಯಲ್ಲಿ ಮತ್ತು ಸಮಾಜದಲ್ಲಿ ಆಳವಾಗಿ ಬೇರೂರಿದ್ದ ಪಂಜಾಬ್ ಮತ್ತು ಹರಿಯಾಣದಂತಹ ರಾಜ್ಯಗಳಲ್ಲಿ ರೈತರ ಪ್ರತಿಭಟನೆ ಆರಂಭವಾಯಿತು. ದಿನಗಳು ಕಳೆದಂತೆ, ಈ ಪ್ರತಿಭಟನೆಯು ಪಶ್ಚಿಮ ಉತ್ತರ ಪ್ರದೇಶ ಮತ್ತು ಅಲ್ಲಿಂದ ಇತರ ಅನೇಕ ರಾಜ್ಯಗಳಿಗೆ ಹರಡಿತು. ಕೆಲವೇ ತಿಂಗಳುಗಳಲ್ಲಿ, ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕೆಂಬ ವಿಶಾಲ ಬೇಡಿಕೆಯೊಂದಿಗೆ ಸ್ಥಳೀಯ ಕೃಷಿ ಬೇಡಿಕೆಗಳ ನಿರಂತರ ಸೇರ್ಪಡೆಯೊಂದಿಗೆ ಈ ಪ್ರತಿಭಟನೆಯು ಇಡೀ ಭಾರತವನ್ನು ವ್ಯಾಪಿಸಿಕೊಳ್ಳುವ ವಿದ್ಯಮಾನವಾಗಿ ಪರಿಣಮಿಸಿತು. ಚಳುವಳಿಯು ಸ್ಥಳೀಯ ಸಮಸ್ಯೆಗಳೊಂದಿಗೆ ಸಮಗ್ರಗೊಂಡದ್ದು ಚಳುವಳಿಯ ಉದ್ದೇಶಕ್ಕೆ ಸಹಾಯವಾಯಿತು. ಅಸಾಮಾನ್ಯ ಸಂಖ್ಯೆಯಲ್ಲಿ ಮಹಿಳೆಯರು ಪ್ರತಿಭಟನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಪಶ್ಚಿಮ ಉತ್ತರ ಪ್ರದೇಶದಲ್ಲಿ, 2013ರ ಮುಜಾಫರ್ ನಗರ ಗಲಭೆಗಳ ನಂತರ ಪ್ರಜ್ಞಾಪೂರ್ವಕವಾಗಿ ಬೆಳೆಸಲಾದ ಕೋಮು ದ್ವೇಷದ ಹಿನ್ನೆಲೆಯಲ್ಲಿ ಜನರನ್ನು ಒಗ್ಗೂಡಿಸುವಲ್ಲಿ ರೈತ ಚಳುವಳಿಯು ಯಶಸ್ವಿಯಾಯಿತು. ನೂರಾರು ಪ್ರತಿಭಟನಾಕಾರರು ಸಾವಿಗೀಡಾದರು. ಆದರೂ, ಈ ಚಳುವಳಿಗೆ ದೇಶೀಯವಾಗಿ ಮಾತ್ರವಲ್ಲ, ಜಾಗತಿಕ ಮಟ್ಟದಲ್ಲೂ ಅಪಾರ ಬೆಂಬಲ ದೊರೆಯಿತು.

ಅಸಹಿಷ್ಣುತೆಯ ಮನಸ್ಥಿತಿ

ರೈತ ಚಳುವಳಿಯ ಬಗ್ಗೆ ಸರ್ಕಾರ ತೋರಿದ ಪ್ರತಿಕ್ರಿಯೆಯಲ್ಲಿ ಕಂಡದ್ದು ಅದರ ದುರಹಂಕಾರ ಒಂದೇ ಅಲ್ಲ. ಅದು ಅಪ್ರಬುದ್ಧವೂ ಹೌದು. ರಿಹಾನ್ನಾ ಎಂಬ ಅಮೆರಿಕಾದ ಪಾಪ್ ತಾರೆ ಮತ್ತು ಪ್ರಸಿದ್ಧ ಗಾಯಕಿಯು ರೈತ ಪ್ರತಿಭಟನೆಗಳ ಬಗ್ಗೆ ಒಂದು ಮುಗ್ಧ ಕಾಮೆಂಟ್‌ ಅನ್ನು ಟ್ವೀಟ್ ಮಾಡಿದಾಗ, ನಮ್ಮ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಇಡೀ ಯಂತ್ರವು ಮರ್ಮಾಘಾತಕ್ಕೆ ಒಳಗಾಯಿತೇನೋ ಎಂಬಂತೆ ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿತು. ಬೇಜವಾಬ್ದಾರಿತನದ ಅವಳು ಮತ್ತು ಇತರ ಕೆಲವು ಪ್ರಸಿದ್ಧನಾಮರು ಗುಂಪುಗೂಡಿ ಭಾರತದ ಪ್ರತಿಷ್ಠೆ-ಪ್ರಗತಿಯನ್ನು ಅಪಖ್ಯಾತಿಗೊಳಿಸುವ ಪ್ರಚಾರದಲ್ಲಿ ತೊಡಗಿದ್ದಾರೆ ಎಂಬ ಸುದ್ದಿಯನ್ನು ಹರಡುವಂತೆ ಭಾರತೀಯ ರಾಯಭಾರ ಕಚೇರಿಗಳಿಗೆ ಹೇಳಲಾಯಿತು. ಈ ಪ್ರತಿಕ್ರಿಯೆಗಳು ಒಂದು ಅಸಹಿಷ್ಣು ಮನೋಭಾವ ಮತ್ತು ಆಳವಾದ ಅಭದ್ರತೆಗೆ ಒಳಗಾದ ಗೊಂದಲದ ಮನಸ್ಥಿತಿಯನ್ನಲ್ಲದೆ ಬೇರೇನನ್ನೂ ತೋರಿಸುವುದಿಲ್ಲ.

ಕೃಷಿ ಕಾನೂನುಗಳನ್ನು ರದ್ದುಗೊಳಿಸಿರುವುದರಿಂದ, ಕೊನೆಯ ಪಕ್ಷ ತಾತ್ಕಾಲಿಕವಾಗಿಯಾದರೂ, ಕೇಂದ್ರ ಸರ್ಕಾರ ಮತ್ತು ರೈತರ ನಡುವಿನ ಸಲೀಸಾಗಿ ತಪ್ಪಿಸಬಹುದಾಗಿದ್ದ ಸಂಘರ್ಷದ ಒಂದು ಕೆಟ್ಟ ಅಧ್ಯಾಯವನ್ನು ಕೊನೆಗೊಳಿಸಲಾಗಿದೆ. ಆದಾಗ್ಯೂ, ಪ್ರತಿಭಟನೆಯು ಹೊರಸೂಸಿದ ಆವೇಗವು ಖಂಡಿತವಾಗಿಯೂ ಮುಂದುವರಿಯುತ್ತದೆ. ಈ ಪ್ರತಿಭಟನೆಯು ಸ್ಥಿರ ಮಾರುಕಟ್ಟೆಗಳ ಅಗತ್ಯ ಮತ್ತು ಲಾಭದಾಯಕ ಬೆಲೆಗಳೂ ಸೇರಿದಂತೆ ಹಲವಾರು ಕೃಷಿ ಬೇಡಿಕೆಗಳನ್ನು ಒಂದು ಸಕಾರಾತ್ಮಕ ರಾಜಕೀಯ ವಿಷಯವಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿದೆ. ನಿಷ್ಠೆ, ಪ್ರಾಮಾಣಿಕತೆ ಮತ್ತು ಬದ್ಧತೆಗಳಿಂದ ಕೂಡಿದ ಹೋರಾಟಗಳು ಮಹತ್ವಪೂರ್ಣವಾಗುತ್ತವೆ ಮತ್ತು ಅಂತಹ ಹೋರಾಟಗಳು ಆಕ್ರಮಣಕಾರಿ ಸರ್ಕಾರಗಳನ್ನೂ ಸಹ ಮಂಡಿಯೂರಿ ನಿಲ್ಲುವಂತೆ ಮಾಡಬಲ್ಲವು ಎಂಬ ವಿಶ್ವಾಸವನ್ನು ಬೆಳೆಸುತ್ತವೆ. ಒಂದು ದೊಡ್ಡದಾದ ಮತ್ತು ನಿರಂತರವಾಗಿ ಕಾಡುತ್ತಿರುವ ಕೃಷಿ ಬಿಕ್ಕಟ್ಟನ್ನು ಪರಿಹರಿಸುವ ಬೇಡಿಕೆಗಳ ಸುತ್ತ ಗ್ರಾಮೀಣ ಜನತೆಯನ್ನು ಹೊಸದಾಗಿ ಅಣಿನೆರೆಸುವ ಸಾಧ್ಯತೆಗಳಿವೆ. ಹೊಸ ಸಂಘರ್ಷಗಳು ಹೊರಹೊಮ್ಮುವ ಮತ್ತು ಬೆಳೆಯುವ ಸಾಧ್ಯತೆಯಿದೆ. ಖಂಡಿತವಾಗಿಯೂ ಕುತೂಹಲ ಕೆರಳಿಸುವ ದಿನಮಾನಗಳಲ್ಲಿ ನಾವಿದ್ದೇವೆ.

ಅನು: ಕೆ.ಎಂ. ನಾಗರಾಜ್

Donate Janashakthi Media

Leave a Reply

Your email address will not be published. Required fields are marked *