ದುರಾಡಳಿತಕ್ಕೆ ಬೆಲೆ ತೆತ್ತ ಶ್ರೀಲಂಕಾ – ಜನಾಕ್ರೋಶಕ್ಕೆ ಮಣಿದ ಸರ್ಕಾರ

ಹಸಿವು ಬಡತನ ಮತ್ತು ನಿರ್ಗತಿಕತೆಯ ಮುಂದೆ ನಿರಂಕುಶಾಧಿಕಾರ ಹೆಚ್ಚು ಕಾಲ ನಿಲ್ಲಲಾಗದು

ನಾ ದಿವಾಕರ

ಕಳೆದ ಭಾನುವಾರ ಶ್ರೀಲಂಕಾ ಎಂದಿನಂತಿರಲಿಲ್ಲ. ಶ್ರೀಲಂಕಾದ ಸಾಮಾನ್ಯ ಜನತೆ ಭಾನುವಾರದ ರಜಾ ದಿನವನ್ನು ವಿಶ್ರಮಿಸಲು ಬಳಸಲಿಲ್ಲ. ರಜಾ ದಿನದ ಪ್ರವಾಸ, ಮೋಜು ಮಸ್ತಿಯಲ್ಲಿ ತೊಡಗಲಿಲ್ಲ. ತಮ್ಮ ಬದುಕಿನ ನಾಳೆಗಳು ದಿನದಿಂದ ದಿನಕ್ಕೆ ಅನಿಶ್ಚಿತತೆಯತ್ತ ಸಾಗುತ್ತಿರುವುದನ್ನು ಗಮನಿಸುತ್ತಲೇ ಇರುವ ಶ್ರೀಲಂಕಾದ ಜನತೆ ಇದೇ ವರ್ಷದ ಮೇ ತಿಂಗಳಲ್ಲಿ ತಮ್ಮೊಳಗಿನ ಆಕ್ರೋಶವನ್ನು ಹೊರಹಾಕಿದ್ದರು. ಆ ಸಂದರ್ಭದಲ್ಲೇ ಶ್ರೀಲಂಕಾದ ಆಳುವ ವರ್ಗಗಳು ನೊಂದ ಜನತೆಯಲ್ಲಿ ಮಡುಗಟ್ಟಿದ್ದ ಆಕ್ರೋಶವನ್ನು ಮನಗಾಣಬೇಕಿತ್ತು. ಆದರೆ ನವ ಉದಾರವಾದ ಮತ್ತು ಬಂಡವಾಳಶಾಹಿ ವ್ಯವಸ್ಥೆ ಸೃಷ್ಟಿಸಿರುವ ದಪ್ಪ ಚರ್ಮದ ಆಳುವ ವರ್ಗಗಳಿಗೆ ಇದು ಸಾಕಾಗಿರಲಿಕ್ಕಿಲ್ಲ. ಇದರ ಪರಿಣಾಮವನ್ನು ಕಳೆದ ಭಾನುವಾರ ರಾಜಧಾನಿ ಕೊಲಂಬೋದಲ್ಲಿ ಕಂಡಿದ್ದೇವೆ. ಶ್ರೀಲಂಕಾದಲ್ಲಿ ಈಗ ನಡೆದಿರುವುದು ಹಠಾತ್ತನೆ ಭುಗಿಲೆದ್ದಿರುವ ಹೋರಾಟವಲ್ಲ. ಗುಪ್ತವಾಹಿನಿಯಾಗಿ ಕಳೆದ ಒಂದು ವರ್ಷದಿಂದಲೂ ಹರಿಯುತ್ತಿರುವ ಜನತೆಯ ಹತಾಶೆ, ಜಿಗುಪ್ಸೆ ಮತ್ತು ಆಕ್ರೋಶಗಳು ಈಗ ಪರಾಕಾಷ್ಟೆ ಮುಟ್ಟಿವೆ. ಒಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದುರಾಡಳಿತ ಮತ್ತು ನಿರಂಕುಶಾಧಿಕಾರ ಎಂತಹ ಪರಿಣಾಮ ಬೀರುತ್ತದೆ ಎನ್ನುವುದನ್ನು ಶ್ರೀಲಂಕಾದ ಬೆಳವಣಿಗೆಗಳು ನಿರೂಪಿಸಿವೆ.

ಆರ್ಥಿಕ ಬಿಕ್ಕಟ್ಟು , ರಾಜಕೀಯ ಕ್ಷೋಭೆ ಮತ್ತು ಸಾಮಾಜಿಕ ಅರಾಜಕತೆಯ ನಡುವೆಯೇ ದ್ವೀಪ ರಾಷ್ಟ್ರದಲ್ಲಿ ಸಾರ್ವಜನಿಕರ ಆಕ್ರೋಶ ಮುಗಿಲು ಮುಟ್ಟಿದೆ. ಆಡಳಿತ ವ್ಯವಸ್ಥೆಯ ಸ್ವರೂಪ ಯಾವುದೇ ಆಗಿರಲಿ, ಪ್ರಭುತ್ವ ಎಷ್ಟೇ ಬಲಿಷ್ಠವಾಗಿರಲಿ ಜನಾಕ್ರೋಶವನ್ನು ಮಣಿಸುವುದು ಸುಲಭವಲ್ಲ ಎನ್ನುವುದನ್ನು ಇತಿಹಾಸ ಅನೇಕ ಸಂದರ್ಭಗಳಲ್ಲಿ ನಿರೂಪಿಸಿದೆ. ಕಳೆದ ಎರಡು ದಶಕಗಳಲ್ಲಿ ಜಗತ್ತನ್ನು ಕಾಡುತ್ತಿರುವ  ಬಡತನ, ಹಸಿವು, ನಿರುದ್ಯೋಗ ಮತ್ತು ವಸತಿಹೀನತೆ ಒಂದೆಡೆ ವಿಶ್ವದಾದ್ಯಂತ ಸಾಮಾನ್ಯ ಜನರ ಆಕ್ರೋಶಕ್ಕೆ ಕಾರಣವಾಗುತ್ತಿರುವಂತೆಯೇ, ಆಡಳಿತಾರೂಢ ಸರ್ಕಾರಗಳು ಮತ್ತಷ್ಟು ಬಿಗಿಯಾಗುತ್ತಿವೆ. ಪ್ರಜಾಪ್ರಭುತ್ವದ ವ್ಯಾಪ್ತಿಯಲ್ಲೇ ನಿರಂಕುಶಾಧಿಕಾರವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಅಮೆರಿಕ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳು ನಡೆದಿವೆ. ಆದರೆ ಮನುಷ್ಯನಲ್ಲಿ ಹಸಿವು ಮತ್ತು ಬಡತನದ ಅಪಮಾನ ಸೃಷ್ಟಿಸುವ ಆಕ್ರೋಶವನ್ನು ಯಾವುದೇ ವ್ಯವಸ್ಥೆಯೂ ತಡೆಗಟ್ಟಲಾಗುವುದಿಲ್ಲ ಎನ್ನುವುದು ಚಾರಿತ್ರಿಕ ಸತ್ಯ. ಶ್ರೀಲಂಕಾ ಜ್ವಲಂತ ನಿದರ್ಶನ.

ಕಳೆದ ಭಾನುವಾರ ಶ್ರೀಲಂಕಾದ ಅಧ್ಯಕ್ಷ ಗೋಟಬಾಯಾ ರಾಜಪಕ್ಸ ಅವರ ಕಚೇರಿ ಮತ್ತು ಅಧಿಕೃತ ನಿವಾಸಕ್ಕೆ ಲಗ್ಗೆ ಇಟ್ಟಿರುವ ನೊಂದ ಜನತೆ , ಪ್ರಧಾನಿ ರಾಣಿಲ್‌ ವಿಕ್ರಮಸಿಂಘೆ ಅವರ ನಿವಾಸಕ್ಕೂ ಬೆಂಕಿ ಹಚ್ಚಿದ್ದಾರೆ. ಮೇ ತಿಂಗಳಲ್ಲಿ ಅಧಿಕಾರ ವಹಿಸಿಕೊಂಡ ಪ್ರಧಾನಿ ರಾಣಿಲ್‌ ವಿಕ್ರಮಸಿಂಘೆ ಸಮಾಧಾನಕರ ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಫಲವಾಗಿರುವುದರಿಂದಲೇ ಜನರ ಸುಪ್ತ ಆಕ್ರೋಶ ಒಮ್ಮೆಲೆ ಭುಗಿಲೆದ್ದಿದೆ. ಇಬ್ಬರೂ ನಾಯಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ಕೊಡಲು ಒಪ್ಪಿಕೊಂಡಿದ್ದು, ಅಧ್ಯಕ್ಷ ರಾಜಪಕ್ಸ ವಿದೇಶಕ್ಕೆ ಪಲಾಯನ ಮಾಡಲು ಹರಸಾಹಸ ಮಾಡುತ್ತಿದ್ದಾರೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನತೆ ಮತ್ತು ಜನರಿಗಾಗಿಯೇ ರೂಪುಗೊಂಡ ಸಂವಿಧಾನದ ವ್ಯಾಪ್ತಿಯನ್ನೂ ಮೀರಿ ನಿರಂಕುಶಾಧಿಕಾರವನ್ನು ನಡೆಸಿದರೆ ಏನಾಗುತ್ತದೆ ಎನ್ನಲು ರಾಜಪಕ್ಷ ಸ್ಪಷ್ಟ ನಿದರ್ಶನ ಒದಗಿಸಿದ್ದಾರೆ. . ಶ್ರೀಲಂಕಾದ ಆಡಳಿತ ವ್ಯವಸ್ಥೆಯ ಮೇಲೆ ರಾಜಪಕ್ಸ ಕುಟುಂಬ ಹೊಂದಿದ್ದ ನಿಯಂತ್ರಣವನ್ನೂ ಜನರು ಪ್ರಶ್ನಿಸುತ್ತಿದ್ದಾರೆ. 2005ರಿಂದಲೂ ಶ್ರೀಲಂಕಾದ ಆಡಳಿತ ವ್ಯವಸ್ಥೆಯ ಮೇಲೆ ನಿಯಂತ್ರಣ ಸಾಧಿಸಿರುವ ರಾಜಪಕ್ಸ ಕುಟುಂಬ ಇಂದು ಜನಾಕ್ರೋಶವನ್ನು ಎದುರಿಸುತ್ತಿರುವುದಕ್ಕೆ ಕಾರಣ ದುರಾಡಳಿತ ಮತ್ತು ಅತಿಯಾದ ಅಧಿಕಾರ ವ್ಯಾಮೋಹವೇ ಆಗಿದೆ.

ಕೆಲವೇ ವರ್ಷಗಳ ಹಿಂದೆ ಕ್ಷಿಪ್ರಗತಿಯಲ್ಲಿ ಅಭಿವೃದ್ಧಿಯತ್ತ ಸಾಗುತ್ತಿದ್ದ ಶ್ರೀಲಂಕಾ ಬೆಳೆಯುತ್ತಿದ್ದುದೇ ಅಲ್ಲದೆ, ಮಧ್ಯಮ ವರ್ಗಗಳ ಹಿತವಲಯವನ್ನೂ ಸೃಷ್ಟಿಸಿತ್ತು. ಆದರೆ ಈಗ ಸಂಪೂರ್ಣ ಕುಸಿತದ ಅಪಾಯ ಎದುರಿಸುತ್ತಿದೆ.  ಸರ್ಕಾರದ ಸಾಲದ ಹೊರೆ 51 ಬಿಲಿಯನ್‌ ಡಾಲರ್‌ಗಳಷ್ಟಿದೆ. ಸಾಲದ ಮೇಲಿನ ಬಡ್ಡಿಯನ್ನೂ ತೀರಿಸಲು ಸಾಧ್ಯವಾಗುತ್ತಿಲ್ಲ. ಸಾಲದ ಹೊರೆಯನ್ನೂ ಕಡಿಮೆ ಮಾಡಲಾಗುತ್ತಿಲ್ಲ. ಶ್ರೀಲಂಕಾದ ಆರ್ಥಿಕ ಅಭಿವೃದ್ಧಿಗೆ ಮುಖ್ಯವಾಹಿನಿಯಾಗಿರುವ ಪ್ರವಾಸೋದ್ಯಮ ಕ್ಷೇತ್ರವು ಕೋವಿದ್‌ ಸಾಂಕ್ರಾಮಿಕದ ಕಾರಣ ನೆಲ ಕಚ್ಚಿದ್ದು 2019ರ ಭಯೋತ್ಪಾದಕರ ದಾಳಿಯ ನಂತರ ಸುರಕ್ಷತೆಯ ಅಭಾವವೂ ಸೃಷ್ಟಿಯಾಗಿದೆ. ಶ್ರೀಲಂಕಾದ ಕರೆನ್ಸಿ ಶೇ 80ರಷ್ಟು ಕುಸಿದಿದ್ದು ಆಮದು ವಹಿವಾಟು ದುಬಾರಿಯಾಗಿ ಪರಿಣಮಿಸಿದೆ. ಹಣದುಬ್ಬರ ಈಗಾಗಲೇ ನಿಯಂತ್ರಣ ತಪ್ಪಿದ್ದು ಆಹಾರ ಪದಾರ್ಥಗಳ ಬೆಲೆಗಳು ಶೇ 57ರಷ್ಟು ಹೆಚ್ಚಳ ಕಂಡಿವೆ. ಅರ್ಥಾತ್‌ ದೇಶವು ದಿವಾಳಿಯತ್ತ ಸಾಗುತ್ತಿದ್ದು ಪತನದ ಅಂಚಿನಲ್ಲಿದೆ. ಗ್ಯಾಸೋಲಿನ್, ಹಾಲು, ಅಡುಗೆ ಅನಿಲ ಮತ್ತು ಶೌಚಕ್ಕೆ ಬಳಸುವ ಪೇಪರ್‌ ಆಮದು ಮಾಡಿಕೊಳ್ಳಲೂ ಹಣ ಇಲ್ಲದಂತಾಗಿದೆ.

ಈ ಆರ್ಥಿಕ ಸಮಸ್ಯೆಗಳೊಂದಿಗೆ ರಾಜಕೀಯ ಭ್ರಷ್ಟಾಚಾರವೂ ಬಹುಮುಖ್ಯ ಸಮಸ್ಯೆಯಾಗಿದೆ. ದೇಶದ ಸಂಪತ್ತನ್ನು ದುಂದುವೆಚ್ಚ ಮಾಡುವ ಮೂಲಕ ಕೊಳ್ಳೆಹೊಡೆಯುವ ಪ್ರವೃತ್ತಿಯ ಪರಿಣಾಮ ಶ್ರೀಲಂಕಾದ ಹಣಕಾಸು ಸಮಸ್ಯೆಯನ್ನು ಬಗೆಹರಿಸುವುದೂ ಸಂಕೀರ್ಣ ಸಮಸ್ಯೆಯಾಗಲಿದೆ. ವಾಷಿಂಗ್‌ಟನ್‌ನಲ್ಲಿರುವ ಜಾಗತಿಕ ಅಭಿವೃದ್ಧಿ ಕೇಂದ್ರದ ಅರ್ಥಶಾಸ್ತ್ರಜ್ಞ ಅನಿತ್‌ ಮುಖರ್ಜಿ ಹೇಳುವಂತೆ, ಐಎಂಎಫ್‌ ಅಥವಾ ವಿಶ್ವಬ್ಯಾಂಕಿನಿಂದ ಯಾವುದೇ ನೆರವು ಒದಗಿಬಂದರೂ ಕಠಿಣ ನಿಬಂಧನೆಗಳನ್ನೊಳಗೊಂಡಿರುತ್ತದೆ. ಈ ನೆರವು ದುರುಪಯೋಗವಾಗದಂತೆ ಖಾತರಿ ನೀಡಬೇಕಾಗುತ್ತದೆ. ಶ್ರೀಲಂಕಾ ಇಂದಿಗೂ ಸಹ ಅತ್ಯಂತ ಹೆಚ್ಚು ಸಂಚಾರ ದಟ್ಟಣೆ ಇರುವ ನೌಕಾ ಮಾರ್ಗವಾಗಿದ್ದು, ಈ ದೇಶದ ಅರ್ಥವ್ಯವಸ್ಥೆ ಕುಸಿಯಲು ಬಿಡುವುದು ಉಚಿತವಲ್ಲ ಎಂದು ಅನಿಲ್‌ ಮುಖರ್ಜಿ ಹೇಳುತ್ತಾರೆ. ಉಷ್ಣವಲಯದಲ್ಲಿರುವ ಶ್ರೀಲಂಕಾದಲ್ಲಿ ಸಾಮಾನ್ಯವಾಗಿ ಆಹಾರದ ಕೊರತೆಯನ್ನೇ ಕಾಣದ ದಿನಗಳೂ ಇದ್ದವು. ಆದರೆ ಇಂದು ಜನರು ಹಸಿವಿನಿಂದ ಬಳಲುತ್ತಿದ್ದಾರೆ. ವಿಶ್ವಸಂಸ್ಥೆಯ ವಿಶ್ವ ಆಹಾರ ಯೋಜನೆಯ ಅನುಸಾರ 10 ರಲ್ಲಿ ಒಂಬತ್ತು ಕುಟುಂಬಗಳು ಊಟ ಮಾಡದೆ ಬಳಲುತ್ತಿವೆ ಅಥವಾ ತಮ್ಮ ಆಹಾರಕ್ಕಾಗಿ ಅಲೆದಾಡುತ್ತಿವೆ. 30 ಲಕ್ಷ ಜನರಿಗೆ ತುರ್ತು ಮಾನವೀಯ ನೆರವು ನೀಡಲಾಗುತ್ತಿದೆ.

ಔಷಧಿ ಮತ್ತು ಉಪಕರಣಗಳ ಸರಬರಾಜು ಸುಸ್ಥಿತಿಯಲ್ಲಿರಿಸಲು ವೈದ್ಯರು ಸಾಮಾಜಿಕ ತಾಣವನ್ನು ಅವಲಂಬಿಸುತ್ತಿದ್ದಾರೆ. ಶ್ರೀಲಂಕಾದ ಹೆಚ್ಚು ಹೆಚ್ಚು ಜನರು ನೌಕರಿಯನ್ನು ಅರಸಿ ಹೊರದೇಶಗಳಿಗೆ ಹೋಗಲು ಪಾಸ್‌ಪೋರ್ಟ್‌ ಪಡೆಯಲು ಹೆಣಗಾಡುತ್ತಿದ್ದಾರೆ. ಪಾಸ್‌ ಪೋರ್ಟ್‌ ಕಚೇರಿಯ ಮುಂದೆ ಮೈಲುಗಟ್ಟಲೆ ಜನರು ಸಾಲುಗಟ್ಟಿದ್ದಾರೆ. ಸರ್ಕಾರಿ ನೌಕರರಿಗೆ, ತಮ್ಮ ಆಹಾರವನ್ನು ತಾವೇ ಬೆಳೆದುಕೊಳ್ಳಲು, ಮೂರು ತಿಂಗಳ ಕಾಲ ವಾರದಲ್ಲಿ ಹೆಚ್ಚುವರಿ ಒಂದು ದಿನ ರಜೆ ನೀಡಲಾಗಿದೆ. ಅಂದರೆ ಜನರು ತೀವ್ರ ಸಂಕಷ್ಟಕ್ಕೊಳಗಾಗಿದ್ದು ಪರಿಸ್ಥಿತಿ ಸುಧಾರಿಸುವುದೇನೋ ಎಂಬ ಹತಾಶೆಯಲ್ಲಿದ್ದಾರೆ. 2019ರಲ್ಲಿ ಈಸ್ಟರ್‌ ಹಬ್ಬದ ಸಂದರ್ಭದಲ್ಲಿ ಚರ್ಚುಗಳಲ್ಲಿ ಮತ್ತು ಹೋಟೆಲುಗಳಲ್ಲಿ ನಡೆದ ಆತ್ಮಹತ್ಯಾ ಬಾಂಬ್‌ ದಾಳಿಯಲ್ಲಿ 260ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಇದರಿಂದ ದೇಶದ ಪ್ರವಾಸೋದ್ಯಮಕ್ಕೆ ಭಾರಿ ಹಿನ್ನಡೆ ಉಂಟಾಗಿತ್ತು. ಶ್ರೀಲಂಕಾದ ಆರ್ಥಿಕತೆಗೆ ಪ್ರವಾಸೋದ್ಯಮವೇ ಮೂಲ. ಈ ಉದ್ಯಮವೇ ಇಂದು ಭಾರೀ ಹಿನ್ನಡೆ ಎದುರಿಸುತ್ತಿದೆ.

ಬೃಹತ್‌ ಮೂಲ ಸೌಕರ್ಯ ಯೋಜನೆಗಳನ್ನು ಜಾರಿಗೊಳಿಸಲು ಪಡೆಯಲೇಬೇಕಿದ್ದ ವಿದೇಶಿ ಸಾಲಗಳ ಹೊರೆ ಹೆಚ್ಚಾಗುತ್ತಿದ್ದಂತೆಲ್ಲಾ ದೇಶದಲ್ಲಿ ಆಂತರಿಕ ಆದಾಯವನ್ನು ಹೆಚ್ಚಿಸಬೇಕಿತ್ತು. ಆದರೆ ರಾಜಪಕ್ಸ ಸರ್ಕಾರವು ಶ್ರೀಲಂಕಾದ ಇತಿಹಾಸದಲ್ಲೇ ಕಂಡರಿಯದಂತೆ ತೆರಿಗೆ ಕಡಿತ, ರಿಯಾಯಿತಿಗಳನ್ನು ಘೋಷಿಸುವ ಮೂಲಕ ಆದಾಯ ಕ್ಷೀಣಿಸುವಂತೆ ಮಾಡಿತ್ತು. ಇತ್ತೀಚೆಗೆ ತೆರಿಗೆ ಕಡಿತವನ್ನು ರದ್ದುಗೊಳಿಸಲಾಗಿದೆಯಾದರೂ, ಆ ವೇಳೆಗಾಗಲೇ ಸಾಲಗಾರ ಸಂಸ್ಥೆಗಳು ಶ್ರೀಲಂಕಾದ ಶ್ರೇಣಿಯನ್ನು ತಗ್ಗಿಸಿದ್ದವು. ವಿದೇಶಿ ಹಣಕಾಸು ಆವರ್ತನಿಧಿ ಕ್ಷೀಣಿಸಿದ್ದರಿಂದ ಶ್ರೀಲಂಕಾಗೆ ಸಾಲದೊರೆಯುವುದೂ ದುಸ್ತರವಾಯಿತು. ಏಪ್ರಿಲ್‌ 2021ರಲ್ಲಿ ರಾಜಪಕ್ಸ ಸರ್ಕಾರವು ಹಠಾತ್ತನೆ ರಾಸಾಯನಿಕ ಗೊಬ್ಬರಗಳ ಆಮದು ವಹಿವಾಟುಗಳನ್ನು ನಿಷೇಧಿಸಿತ್ತು. ಸಾವಯವ ಕೃಷಿಯನ್ನು ಉತ್ತೇಜಿಸುವ ಸಲುವಾಗಿ ಸರ್ಕಾರ ಕೈಗೊಂಡ ಈ ಕ್ರಮದಿಂದ ರೈತರು ಕಂಗಾಲಾದರು. ಇದರ ಪರಿಣಾಮ ಭತ್ತದ ಬೆಳೆ ಬಹುತೇಕ ನಾಶವಾಯಿತು. ಬೆಲೆಗಳು ಗಗನಕ್ಕೇರಿದವು. ವಿದೇಶಿ ವಿನಿಮಯದಲ್ಲಿ ಉಳಿತಾಯ ಮಾಡುವ ದೃಷ್ಟಿಯಿಂದ, ಐಷಾರಾಮಿ ಪದಾರ್ಥಗಳ ಆಮದು ವಹಿವಾಟುಗಳನ್ನೂ ನಿಷೇಧಿಸಲಾಯಿತು. ಏತನ್ಮಧ್ಯೆ ರಷ್ಯಾ ಉಕ್ರೇನ್‌ ಯುದ್ಧ ಆರಂಭವಾದದ್ದರಿಂದ ಆಹಾರ ಪದಾರ್ಥಗಳು ಮತ್ತು ತೈಲ-ಇಂಧನ ಬೆಲೆಗಳು ಗಗನಕ್ಕೇರಿದವು. ಹಣದುಬ್ಬರ ಶೇ 40ರಷ್ಟಾಯಿತು. ಆಹಾರ ಪದಾರ್ಥಗಳು ಮೇ 2022ರ ವೇಳೆಗೆ ಶೇ 60ರಷ್ಟು ಹೆಚ್ಚಾಗಿದ್ದವು. ‌ ಒಂದು ಹೊತ್ತು ಮಾತ್ರ  ಊಟ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಶ್ರೀಲಂಕಾದ ಜನತೆ ತೈಲ ಮತ್ತು ಇಂಧನಕ್ಕಾಗಿ ದಿನಗಟ್ಟಲೆ ಸಾಲುಗಟ್ಟಿ ನಿಲ್ಲಬೇಕಿದೆ.

ಕಳೆದ ಮಾಸಾಂತ್ಯದಲ್ಲಿ ಶ್ರೀಲಂಕಾದ ಪ್ರಧಾನಿ ರಾನಿಲ್‌ ವಿಕ್ರಮಸಿಂಘೆ, ಸಾಲದ ಹೊರೆಯಿಂದ ಜರ್ಝರಿತವಾಗಿರುವ ದೇಶದ ಅರ್ಥವ್ಯವಸ್ಥೆಯು ಸಂಪೂರ್ಣವಾಗಿ ಕುಸಿದಿದ್ದು, ಆಹಾರ ಮತ್ತು ಇಂಧನ ಪೂರೈಕೆಗೆ ನೀಡಲೂ ಹಣ ಇಲ್ಲ ಎಂದು ಘೋಷಿಸಿದ್ದರು. ನಿತ್ಯಾವಶ್ಯ ಪದಾರ್ಥಗಳನ್ನು ಆಮದು ಮಾಡಿಕೊಳ್ಳಲು ಹಣಕಾಸು ಕೊರತೆ ಉಂಟಾಗಿದ್ದು, ಈಗಾಗಲೆ ಸಾಲ ತೀರಿಸಲಾಗದೆ ಸುಸ್ತಿದಾರ ದೇಶವಾಗಿರುವ ಶ್ರೀಲಂಕಾ ನೆರೆ ರಾಷ್ಟ್ರಗಳಾದ ಭಾರತ ಮತ್ತು ಚೀನಾದಿಂದ, ಹಾಗೂ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್)‌ಯಿಂದ ನೆರವು ಕೋರಿದೆ. ಪ್ರಧಾನಿ ರಾಣಿಲ್‌ ವಿಕ್ರಮಸಿಂಘೆ ಮೇ ತಿಂಗಳಲ್ಲಿ ಅಧಿಕಾರ ವಹಿಸಿಕೊಂಡಿದ್ದು, ಪಾತಾಳಕ್ಕೆ ಕುಸಿದಿದ್ದ ಅರ್ಥವ್ಯವಸ್ಥೆಯನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಎದುರಾಗಬಹುದಾದ ಸವಾಲುಗಳ ಬಗ್ಗೆ ಆಗಲೇ ಪ್ರಸ್ತಾಪಿಸಿದ್ದರು.  ಐಎಂಎಫ್‌ನಿಂದ ಪಡೆಯುತ್ತಿದ್ದ ನೆರವಿನೊಂದಿಗೇ ತಮ್ಮ ಸರ್ಕಾರ ಎದುರಿಸುತ್ತಿರುವ ಸವಾಲುಗಳನ್ನೇ ಪ್ರಧಾನವಾಗಿ ಬಿಂಬಿಸುತ್ತಿದ್ದ ಪ್ರಧಾನಮಂತ್ರಿ, ಎಲ್ಲ ವಿರೋಧಾಭಿಪ್ರಾಯಗಳನ್ನೂ ಎದುರಿಸಲು ಸಜ್ಜಾಗಿದ್ದರು. ಬಹುಶಃ ಪರಿಸ್ಥಿತಿಯನ್ನು ಸುಧಾರಿಸಲು ಮತ್ತಷ್ಟು ಸಮಯ ಕೋರುವ ಉದ್ದೇಶದಿಂದಲೇ ಅರ್ಥವ್ಯವಸ್ಥೆ ಕುಸಿದಿದೆ ಎಂದು ಜೂನ್‌ ತಿಂಗಳಲ್ಲಿ ಅಧಿಕೃತವಾಗಿ ಘೋಷಿಸಿದ್ದರು. ಶ್ರೀಲಂಕಾದ ಹಣಕಾಸು ಸಚಿವಾಲಯದ ಮಾಹಿತಿಯನುಸಾರ ದೇಶದಲ್ಲಿ 25 ದಶಲಕ್ಷ ಡಾಲರ್‌ಗಳಷ್ಟು ಮಾತ್ರ ಬಳಸಬಹುದಾದ ವಿದೇಶಿ ಆವರ್ತನಿಧಿ ಲಭ್ಯವಿದೆ. ಹಾಗಾಗಿ ಆಮದು ವೆಚ್ಚವನ್ನು ಸರಿದೂಗಿಸುವ ಸಾಮರ್ಥ್ಯವನ್ನು ಕಳೆದುಕೊಂಡಿದ್ದು, ಬಿಲಿಯನ್‌ಗಟ್ಟಲೆ ಇರುವ ಸಾಲವನ್ನು ತೀರಿಸುವುದು ಅಸಾಧ್ಯವೇ ಆಗಿದೆ.  ಏತನ್ಮಧ್ಯೆ ಶ್ರೀಲಂಕಾದ ರೂಪಾಯಿ ಸತತವಾಗಿ ಕುಸಿಯುತಿದ್ದು ಪ್ರತಿ ಡಾಲರ್‌ಗೆ 360 ರೂಗಳಷ್ಟಾಗಿದೆ. ಇದರ ಪರಿಣಾಮ ಆಮದು ವೆಚ್ಚ ಇನ್ನೂ ಹೆಚ್ಚು ದುಬಾರಿಯಾಗಿ ನಿರ್ಬಂಧಕವಾಗಲಿದೆ.

ಐಎಂಎಫ್‌ ಮಾಹಿತಿಯ ಅನುಸಾರ 2020ರ ಅಂತ್ಯದಲ್ಲೇ ಶ್ರೀಲಂಕಾ ಸರ್ಕಾರದ ಸಾಲದ ಹೊರೆ 81.7 ಬಿಲಿಯನ್‌ ಡಾಲರ್‌ಗಳಷ್ಟಾಗಿತ್ತು. ಇದು ದೇಶದ 2020ರ ಜಿಡಿಪಿಯ ಶೇ 101ರಷ್ಟಾಗಿತ್ತು. 2026ರ ವೇಳೆಗೆ 25 ಬಿಲಿಯನ್‌ ಡಾಲರ್‌ ವಿದೇಶಿ ಸಾಲದ ಮೊತ್ತವನ್ನು ತೀರಿಸಬೇಕಾಗಿರುವ ಶ್ರೀಲಂಕಾ ಈ ವರ್ಷ ಪಾವತಿಸಬೇಕಿದ್ದ 7 ಬಿಲಿಯನ್‌ ಡಾಲರ್‌ ಮೊತ್ತವನ್ನು ಬಾಕಿ ಉಳಿಸಿಕೊಂಡಿದೆ. ಈ ಬಿಕ್ಕಟ್ಟು ನಿವಾರಿಸಲು ಸರ್ಕಾರ ಯಾವ ಕ್ರಮಗಳನ್ನು ಕೈಗೊಂಡಿದೆ ? ಈವರೆಗಿನ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಭಾರತದಿಂದ ಪಡೆದ 4 ಬಿಲಿಯನ್‌ ಡಾಲರ್‌ ಸಾಲದ ನೆರವಿನ ಮೂಲಕ ಶ್ರೀಲಂಕಾ ನಿರ್ವಹಣೆ ಮಾಡುತ್ತಿದೆ. ಜೂನ್‌ ಮಾಹೆಯಲ್ಲಿ ಶ್ರೀಲಂಕಾಕ್ಕೆ ಭೇಟಿ ನೀಡಿದ್ದ ಭಾರತ ಸರ್ಕಾರದ ನಿಯೋಗವು ಮತ್ತಷ್ಟು ನೆರವು ನೀಡುವುದರ ಬಗ್ಗೆ ಮಾತುಕತೆಗೆ ಸಿದ್ಧವಾಗಿತ್ತು. ಆದರೆ ಶ್ರೀಲಂಕಾವನ್ನು ದೀರ್ಘಕಾಲ ಸಹಿಸಿಕೊಳ್ಳಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ವಿಕ್ರಮಸಿಂಘೆ ನೀಡಿದ್ದರು. ತನ್ನ ಸಾಲದ ಹೊರೆಯನ್ನು ತಗ್ಗಿಸಲು ಅಥವಾ ಸಾಲದಿಂದ ಪಾರು ಮಾಡಲು ಶ್ರೀಲಂಕಾ ಐಎಂಎಫ್‌ ಮೊರೆ ಹೋಗುವುದಾಗಿ ಅಧಿಕೃತವಾಗಿ ಪ್ರಕಟಿಸಿತ್ತು. ಮುಂದಿನ ದಿನಗಳಲ್ಲಿ ಈ ಕುರಿತು ಚರ್ಚಿಸಲು ಐಎಂಎಫ್‌ ಅಧಿಕಾರಿಗಳೊಡನೆ ಮಾತುಕತೆ ನಡೆಸುವುದಾಗಿ ಸರ್ಕಾರ ಘೋಷಿಸಿತ್ತು. ಚೀನಾದಿಂದಲೂ ಹೆಚ್ಚಿನ ನೆರವು ಕೋರಿರುವ ಶ್ರೀಲಂಕಾ ಸರ್ಕಾರ, ಅಮೆರಿಕ, ಜಪಾನ್‌ ಮತ್ತು ಆಸ್ಟ್ರೇಲಿಯಾ ಸರ್ಕಾರಗಳ ಮೂಲಕ ನೂರಾರು ಮಿಲಿಯನ್‌ ಡಾಲರ್‌ ನೆರವು ಪಡೆದಿದೆ. ಶ್ರೀಲಂಕಾದ ನೆರವಿಗೆ ಮುಂದೆಬರುವಂತೆ ವಿಶ್ವಸಂಸ್ಥೆಯೂ ಜೂನ್‌ ತಿಂಗಳಲ್ಲಿ ಎಲ್ಲ ದೇಶಗಳಲ್ಲಿ ಮನವಿ ಮಾಡಿದೆ. ಆದರೆ ಮುಂದಿನ ಆರು ತಿಂಗಳ ಕಾಲ ಶ್ರೀಲಂಕಾ ದೇಶವನ್ನು ಉಳಿಸಲು ಬೇಕಾಗುವ 6 ಬಿಲಿಯನ್‌ ಡಾಲರ್‌ಗಳಿಗೆ ಹೋಲಿಸಿದರೆ ಈ ಎಲ್ಲ ನೆರವು ಯಾವುದಕ್ಕೂ ಸಾಲುವುದಿಲ್ಲ. ಶ್ರೀಲಂಕಾದ ಇಂಧನ ಮತ್ತು ತೈಲ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ವಿಕ್ರಮಸಿಂಘೆ ರಷ್ಯಾದಿಂದ ರಿಯಾಯಿತಿ ದರದಲ್ಲಿ ಹೆಚ್ಚಿನ ತೈಲ ಖರೀದಿಸುವುದಾಗಿ ಹೇಳಿದ್ದಾರೆ. ಈ ನಡುವೆ ಶ್ರೀಲಂಕಾದ ವಿದೇಶಿ ವಿನಿಮಯ ಆವರ್ತ ನಿಧಿ ಮಾರ್ಚ್‌ ವೇಳೆಗೆ 2 ಬಿಲಿಯನ್‌ ಡಾಲರ್‌ಗೆ ಕುಸಿದಿತ್ತು. ಈಗ ಕೇವಲ 50 ಮಿಲಿಯನ್‌ ಡಾಲರ್‌ಗಳಷ್ಟಾಗಿದೆ ಅಂದರೆ ಒಂದು ದಿನದ ಆಮದು ವೆಚ್ಚವನ್ನು ಸರಿದೂಗಿಸುವುದೂ ದುಸ್ತರವಾಗುತ್ತದೆ.

ತಮ್ಮ ಚುನಾಯಿತ ಪ್ರತಿನಿಧಿಗಳ ಐಷಾರಾಮಿ ಜೀವನವನ್ನು ಕಣ್ಣಾರೆ ಕಂಡಿರುವ ಶ್ರೀಲಂಕಾದ ಜನತೆ ಸಹಜವಾಗಿಯೇ ಆಘಾತಕ್ಕೊಳಗಾಗಿದ್ದಾರೆ. ಈ ಆಘಾತವೇ ಜನರಲ್ಲಿ ಆಕ್ರೋಶವನ್ನೂ ಹೆಚ್ಚಿಸುತ್ತದೆ. ಮುಂದಿನ ದಿನಗಳು ದ್ವೀಪ ರಾಷ್ಟ್ರದ ಪಾಲಿಗೆ ನಿರ್ಣಾಯಕವಾಗಲಿವೆ. ನವ ಉದಾರವಾದ ಮತ್ತು ಬಂಡವಾಳಶಾಹಿ-ಕಾರ್ಪೋರೇಟ್ ಮಾರುಕಟ್ಟೆ ವ್ಯವಸ್ಥೆ‌ ಪೋಷಿಸುವ ಬಹುಪಾಲು ಎಲ್ಲ ಪ್ರಜಾಪ್ರಭುತ್ವ ವ್ಯವಸ್ಥೆಗಳೂ ಆಳುವವರು ಮತ್ತು ಪ್ರಜೆಗಳ ನಡುವೆ ಈ ಕಂದರಗಳನ್ನು ಸೃಷ್ಟಿಸುತ್ತಲೇ ಹೋಗುತ್ತದೆ. ತಮ್ಮ ದೈನಂದಿನ ಬದುಕು ಹಿತಕರವಾಗಿರುವವರೆಗೂ ಜನರು ಎಂತಹ ನಿರಂಕುಶಾಧಿಕಾರವನ್ನಾದರೂ ಸಹಿಸಿಕೊಳ್ಳುತ್ತಾರೆ. ನಾಗರಿಕ ಸಮಾಜದ ಒಂದು ವರ್ಗ ಮಾತ್ರವೇ ಪ್ರತಿರೋಧಧ ದನಿಯಾಗಿರುತ್ತದೆ. ಆದರೆ ಈ ಹಿತವಲಯವೂ ಭಗ್ನಗೊಂಡು, ಹಸಿವು, ಬಡತನ, ನಿರುದ್ಯೋಗ ಮತ್ತು ನಿರ್ಗತಿಕತೆ ಕಾಡಲಾರಂಭಿಸಿದಾಗ ತಳಮಟ್ಟದಿಂದಲೇ ಜನಾಕ್ರೋಶವು ಹೊರಹೊಮ್ಮುತ್ತದೆ. ಯಾವುದೇ ನಿರ್ದಿಷ್ಟ ಸಿದ್ಧಾಂತ, ನಾಯಕತ್ವದ ಮುಂದಾಳತ್ವ ಇಲ್ಲದೆಯೂ ಜನರು ಆಳುವವರ ವಿರುದ್ಧ ʼಮಾಡು ಇಲ್ಲವೆ ಮಡಿʼ ಹೋರಾಟಕ್ಕೆ ಸಜ್ಜಾಗುತ್ತಾರೆ. ಇತಿಹಾಸ ಇದನ್ನು ಕಂಡಿದೆ. ವರ್ತಮಾನದಲ್ಲಿ ಶ್ರೀಲಂಕಾದಲ್ಲಿ ಕಾಣುತ್ತಿದ್ದೇವೆ. ಇತಿಹಾಸದಿಂದ ಪಾಠ ಕಲಿಯದವರು ವರ್ತಮಾನದಿಂದಾದರೂ ಪಾಠ ಕಲಿಯಬೇಕಿದೆ. ಶ್ರೀಲಂಕಾ ನಮ್ಮ ಕಣ್ಣೆದುರಿನಲ್ಲೇ ಇದೆ.

Donate Janashakthi Media

Leave a Reply

Your email address will not be published. Required fields are marked *