ಪ್ರೊ. ವಿ.ಎನ್.ಲಕ್ಷ್ಮೀನಾರಾಯಣ
ನನ್ನ ಗ್ರಹಿಕೆಯ ಪ್ರಕಾರ, ಭಾರತದಲ್ಲಿ ‘ಪ್ರಜಾಪ್ರಭುತ್ವ’ ಎಂಬುದು ಆಳುವ ವರ್ಗವು ತನ್ನ ನವ ಉದಾರವಾದೀ ನೀತಿಗಳ ಬಂಡವಳಿಗ ಸರ್ವಾಧಿಕಾರೀ ಆಳ್ವಿಕೆಯನ್ನು ಮರೆಮಾಚುವಂತೆ ಹೊದ್ದುಕೊಂಡಿರುವ ಒಂದು ಆಕರ್ಷಕ ವರ್ಣರಂಜಿತ ದುಪ್ಪಟಿ ಅಷ್ಟೆ. ಪ್ರಸ್ತುತ ಈ ದುಪ್ಪಟಿಯ ಕೆಳಗಿರುವ ಸಂಘಪರಿವಾರದ ಸರ್ಕಾರದ ರಾಜಕೀಯ ನೀತಿಗಳು ಹಿಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರದ ನೀತಿಗಳ ಮುಂದುವರಿಕೆ ಎಂಬುದು ಎಡ-ಬಲದ ಬಹಳಷ್ಟು ಮಂದಿ ಚಿಂತಕರಿಗೆ ಗೊತ್ತಿರುವ ಸಂಗತಿಯೇ. ಜಾಗತಿಕ ಬಂಡವಾಳದ ದೇಶೀಯ ಶಾಖೆಗಳಾಗಿ ಅಧಿಕಾರ ಪಡೆಯುವ ಈ ಎರಡೂ ಬಗೆಯ ಸರ್ಕಾರಗಳ ನಡುವೆ ಇರುವ ವ್ಯೆತ್ಯಾಸವೆಂದರೆ, ಈ ಮೊದಲು ಕಾಂಗ್ರೆಸ್ ನೇತೃತ್ವದ ಸರ್ಕಾರವು ಹೊದ್ದಿದ್ದ ‘ಪ್ರಜಾಪ್ರಭುತ್ವ’ದ ದುಪ್ಪಟಿಯು ಅಸಹ್ಯ ಹುಟ್ಟಿಸುವಷ್ಟು ಕೊಳಕಾಗಿ ಹರಿದುಹೋಗಿತ್ತು. ಆ ಕೊಳಕು ಮತ್ತು ಛಿದ್ರಗಳನ್ನು ತನ್ನ ಶಕ್ತಿಯಾಗಿ ಪರಿವರ್ತಿಸಿಕೊಂಡ ಸಂಘಪರಿವಾರವು ಅಧಿಕಾರ ಹಿಡಿದು ಈ ಹರಿದ ಕೊಳಕು ದುಪ್ಪಟಿಗೆ ಸಂಕೀರ್ಣವಾದ ಜಾಗತಿಕ ಬಂಡವಾಳ ಮತ್ತು ರಾಷ್ಟ್ರೀಯವಾದೀ ಫ್ಯಾಸೀವಾದದ ನೇಯ್ಗೆಯ ಕೇಸರೀ ತೇಪೆಗಳನ್ನು ಹಾಕುತ್ತಿದೆ. ಅಂದರೆ, ಇಂದಿನ ಶ್ರಮಿಕವಿರೋಧೀ ಜನವಿರೋಧೀ ಆಳುವ ವರ್ಗವು ‘ಪ್ರಜಾಪ್ರಭುತ್ವ’ವೆಂಬ ಕೇಸರೀ ತೇಪೆಗಳ ದುಪ್ಪಟಿಯನ್ನು ಹೊದ್ದುಕೊಂಡು ಹಿಂದಿನ ಸರ್ಕಾರಗಳ ಆರ್ಥಿಕ ನೀತಿಗಳನ್ನೇ ಮತ್ತಷ್ಟು ಗಟ್ಟಿಯಾಗಿ ಮತ್ತು ವ್ಯಾಪಕವಾಗಿ ಜಾರಿಗೊಳಿಸುತ್ತಿದೆ. ನವ ಉದಾರವಾದೀ ಬಂಡವಾಳವು ಹಿಂದುತ್ವದ ಫ್ಯಾಸೀವಾದವನ್ನೂ ತನ್ನೊಳಕ್ಕೆ ಸೇರಿಸಿಕೊಳ್ಳುವಷ್ಟು ‘ಉದಾರ’ವಾಗಿರುವುದರಿಂದ, ಸಂಘಪರಿವಾರದ ಕೋಮುವಾದೀ ಧೋರಣೆಗಳು ಹಿಂದಿನಂತೆ ಅದರ ಗುಪ್ತ ಕಾರ್ಯಕ್ರಮಗಳಾಗಿರದೆ ‘ಬಲಿಷ್ಠ ಹಿಂದೂ ರಾಷ್ಟ್ರ ನಿರ್ಮಾಣ’ದ ರಾಷ್ಟ್ರೀಯವಾದವಾಗಿ ನಗ್ನವಾಗಿ ಪ್ರಕಟಗೊಳ್ಳುತ್ತಿವೆ.
ಶ್ರೀ ನಾರಾಯಣ ಅವರ ಬರಹದಲ್ಲಿನ ದೊಡ್ಡ ಕೊರತೆಯೆಂದರೆ, ಭಾರತದ ಪ್ರಸ್ತುತ ವಿದ್ಯಮಾನಗಳನ್ನು ವ್ಯಾಖ್ಯಾನಿಸುವಾಗ ಅವುಗಳ ಸಂದರ್ಭವನ್ನು ಚಾರಿತ್ರಿಕವಾಗಿ ಮತ್ತು ರಾಜಕೀಯವಾಗಿ ನಿರ್ದಿಷ್ಟಗೊಳಿಸುವುದಿಲ್ಲ. ಅಂದರೆ ಸಂಘಪರಿವಾರದ ಹೆಸರನ್ನು ನೇರವಾಗಿ ಹೇಳುವುದಿಲ್ಲ ಎಂಬುದು ನನ್ನ ಅರ್ಥವಲ್ಲ. ಅವರು ಸರ್ಕಾರದ ಬೆನ್ನಿಗಿರುವ ಭಾರತದ ಆಳುವ ವರ್ಗಗಳ ಸೈದ್ಧಾಂತಿಕ ನಿಲುವನ್ನು ಅರ್ಥೈಸುವುದಿಲ್ಲ. ಅಥವಾ ತಮ್ಮ ಸೈದ್ಧಾಂತಿಕ ನೆಲೆ-ನಿಲುವುಗಳು ಏನೆಂಬುದನ್ನೂ ಸ್ಪಷ್ಟಪಡಿಸಿಕೊಳ್ಳುವುದಿಲ್ಲ. ಆಳುವ ವರ್ಗಗಳು ಸರ್ಕಾರಗಳ ಮೇಲೆ ಹೊದಿಸುವ ದುಪ್ಪಟಿಯನ್ನೇ ‘ಪ್ರಜಾಪ್ರಭುತ್ವ’ವೆಂದು ನಂಬಿ, “ತತ್ವಗಳನ್ನೆಲ್ಲಾ ಹೇಳುವ, ಕೇಳುವ ಕಾಲ ಇದಲ್ಲ. ಇದು ಶುದ್ಧ ಪ್ರಾಯೋಗಿಕ ರಾಜಕಾರಣದ ಕಾಲ. ಅಧಿಕಾರವೊಂದು ಕೈಯಲ್ಲಿ ಇದ್ದರೆ, ಏನನ್ನಾದರೂ ಮಾಡಿ ದಕ್ಕಿಸಿಕೊಳ್ಳಬಹುದಾದ ಕಾಲ” ಎಂದು ಭಾರತದ ‘ಪ್ರಜಾಪ್ರಭುತ್ವ’ಕ್ಕೊದಗಿರುವ ದುಃಸ್ಥಿತಿಯನ್ನು ಕುರಿತು ಹಳಹಳಿಸುತ್ತಾರೆ.. ಸಂಘಪರಿವಾರದ ಕಾಲಾಳುಗಳ ನಗ್ನ ಹಿಂಸಾಚಾರ, ಸಂಘಪರಿವಾರವನ್ನು ಬೆಂಬಲಿಸುವ ಪೋಲೀಸರ ವಸ್ತ್ರಸಂಹಿತೆಗೆ ಸಂಬಂಧಿಸಿದ ಅನಾಚಾರಗಳನ್ನು ಟೀಕಿಸುತ್ತಾರೆ. ಅವನ್ನು ಖಂಡಿಸದೆ, ಅಥವಾ ವಿಷಾದಿಸದೆ, ಸಮರ್ಥಿಸುವ ರಾಜಕೀಯ ಪದಾಧಿಕಾರಿಗಳು ಜನಪ್ರತಿನಿಧಿಗಳಾಗಿ ಅಧಿಕಾರದಲ್ಲಿರಲು ಯೋಗ್ಯರಲ್ಲವೆಂದು ಘೋಷಿಸುತ್ತಾರೆ. ಅಂಥವನ್ನು ಟೀಕಿಸದ ಪತ್ರಿಕಾ ಸಂಪಾದಕರು, (ಮಹಾಭಾರತದ ವಿಕರ್ಣನಂತೆ) ವಿರಳವಾಗಿಯಾದರೂ ಈ ‘ಅರಾಜಕ’ ಸ್ಥಿತಿ ಮತ್ತು ವಿದ್ಯಮಾನಗಳ ಬಗ್ಗೆ ಪ್ರತಿಭಟಿಸದ ಪ್ರಜ್ಞಾವಂತರು ಅಥವಾ ಬುದ್ಧಿಜೀವಿಗಳು, ಹೀಗೆ ಎಲ್ಲರೂ ಅವರವರ ಸ್ಥಾನಗಳಲ್ಲಿ ರಾಜಕೀಯ ನೈತಿಕತೆಯ ಅಭಾವದಿಂದಾಗಿ ಅಪರಾಧಿಗಳಾಗಿದ್ದಾರೆಂದು ತೀರ್ಮಾನಿಸುತ್ತಾರೆ.
ಸರ್ಕಾರ ಎಂದರೆ ಏನು? ಜನರಿಗೂ ಸರ್ಕಾರಕ್ಕೂ ಇರುವ ಸಂಬಂಧವೇನು? ಆಳುವ ವರ್ಗಕ್ಕೂ ಸರ್ಕಾರಕ್ಕೂ ಏನಾದರೂ ವ್ಯತ್ಯಾಸವಿದೆಯೇ? ಜಾಗತಿಕ ಬಂಡವಾಳದ ಹಿನ್ನೆಲೆಯಲ್ಲಿ ಭಾರತ ಸರ್ಕಾರದ ರಾಜಕೀಯ ಮತ್ತು ಆರ್ಥಿಕ ನೀತಿಗಳಲ್ಲಿ ಆಗಿರುವ ಪಲ್ಲಟಗಳು ಎಂಥವು? ಹಿಂದಿನ ಸರ್ಕಾರಗಳು ರಕ್ಷಿಸುತ್ತಿದ್ದ ‘ಪ್ರಜಾಪ್ರಭುತ್ವ” ದ ಸ್ವರೂಪ ಎಂಥದ್ದು? ಸಂಘಪರಿವಾರದ ಸರ್ಕಾರವು ‘ಪ್ರಜಾಪ್ರಭುತ್ವ’ವನ್ನು ಶಿಥಿಲಗೊಳಿಸುತ್ತಿದೆಯೋ ಅಥವಾ ಕೇವಲ ಅದರ ಹೊದಿಕೆಯನ್ನು ಹರಿದು ಅದರ ಕೆಳಗಿರುವ ವ್ಯವಸ್ಥೆಯನ್ನು ನಗ್ನಗೊಳಿಸುತ್ತಿದೆಯೋ? ಅಥವಾ ಇರುವ ವ್ಯವಸ್ಥೆಗೇ ಬೇರೊಂದು ಹೊದಿಕೆಯನ್ನು ಹೊದ್ದಿಸುತ್ತಿದೆಯೋ? ಪ್ರಜಾಪ್ರಭುತ್ವವನ್ನು ಕಾಪಾಡುವುದೆಂದರೆ, ಈ ಹೊದಿಕೆಯ ಬಣ್ಣವನ್ನು ಮೊದಲಿನ ರೂಪಕ್ಕೆ ತರುವುದೋ ಅಥವಾ ಅದರ ಕೆಳಗಿರುವ ವ್ಯವಸ್ಥೆಯ ಸ್ವರೂಪವನ್ನು ಜನಪರವಾಗಿಸುವುದೋ? ಈ ಯಾವ ಪ್ರಶ್ನೆಗಳೂ ಶ್ರೀ ನಾರಾಯಣ ಅವರನ್ನು ಕಾಡುವುದಿಲ್ಲ. ಅವರ ಪ್ರಕಾರ “ಸರ್ಕಾರ ಎಂಬ ವ್ಯವಸ್ಥೆಯನ್ನು ಮನುಷ್ಯಕೋಟಿ ಆವಿಷ್ಕರಿಸಿಕೊಂಡಿದ್ದೇ ಒಬ್ಬರ ಮೇಲೆ ಒಬ್ಬರು ನಡೆಸಬಹುದಾದ ಸಂಭಾವ್ಯ ಹಿಂಸೆಯನ್ನು ಹತ್ತಿಕ್ಕುವುದಕ್ಕೋಸ್ಕರ. ಎಂತಹದ್ದೇ ಸಂದರ್ಭದಲ್ಲಾದರೂ ಆಡಳಿತ ಕಾನೂನು ಬದ್ಧವಾಗಿಯೇ (rule of law) ನಡೆಯುವಂತೆ ನೋಡಿಕೊಳ್ಳುವುದಕ್ಕೋಸ್ಕರ.”
‘ಸರ್ಕಾರ’, ‘ಜನ’ ಮತ್ತು ‘ಕಾನೂನುಬದ್ಧ ಆಡಳಿತ’ ವನ್ನು ಶ್ರೀ ನಾರಾಯಣ ಅವರು, ಅಮೂರ್ತಗೊಳಿಸಿ ನೋಡುವುದರಿಂದ ಅವರಿಗೆ ಈಗ ನಮ್ಮನ್ನು ಆಳುತ್ತಿರುವ ಸಂಘಪರಿವಾರದ ಸರ್ಕಾರವು ಈ ನೆಲದ ಕಾನೂನುಗಳನ್ನು ಬಳಸಿಕೊಂಡೇ ಅಧಿಕಾರಕ್ಕೆ ಬಂದಿದೆಯೆನ್ನುವುದು ಎದ್ದುಕಾಣುವುದೇ ಇಲ್ಲ. ಅದು ಕಾನೂನಾತ್ಮಕವಾಗೇ ‘ಪ್ರಜಾಪ್ರಭುತ್ವ’ವೆಂಬ ಹಳೆಯ ದುಪ್ಪಟಿಗೆ ಕೇಸರೀ ಬಣ್ಣವನ್ನು ಹಾಕುತ್ತಿದೆಯೆಂಬುದು, ಕಾನೂನಾತ್ಮಕವಾಗೇ ನಿರ್ಬಲರಾದ ನಾಗರಿಕರ ಮೇಲೆ ತನ್ನ ಜನವಿರೋಧೀ ಅಜೆಂಡಾವನ್ನು ಹೇರುತ್ತಿದೆಯೆಂಬುದು, ಕಾನೂನಾತ್ಮಕವಾಗೇ ರೈತವಿರೋಧೀ, ಶ್ರಮಿಕವಿರೋಧೀ ತಿದ್ದುಪಡಿ-ಮಸೂದೆಗಳನ್ನು ಜಾರಿಗೊಳಿಸುತ್ತಿದೆಯೆಂಬ ಸತ್ಯ ಮುನ್ನೆಲೆಗೆ ಬರುವುದೇ ಇಲ್ಲ. ದುರ್ಬಲರಲ್ಲಿ ದುರ್ಬಲರು, ದಲಿತರು, ಧಾರ್ಮಿಕ ಅಲ್ಪಸಂಖ್ಯಾತರು, ಆದಿವಾಸಿಗಳಮೇಲೆ ನಡೆಯುವ ಆರ್ಥಿಕ ಮತ್ತು ಸಾಮಾಜಿಕ ದೌರ್ಜನ್ಯಗಳ ವಿರುದ್ಧ ದನಿಯೆತ್ತುವ ಸಾಮಾಜಿಕ ಕಾರ್ಯಕರ್ತರಮೇಲೆ ದೇಶದ್ರೋಹದ ಆರೋಪ ಹೊರಿಸಿ ವಿಚಾರಣೆಯಿಲ್ಲದೆ ಜೈಲುಗಳಲ್ಲಿ ಕೊಳೆಯುವಂತೆ ಮಾಡುವುದೂ ಸಹ ‘ಕಾನೂನಾತ್ಮಕ’ವಾಗೇ ನಡೆಯುತ್ತಿದೆ ಎಂಬುದನ್ನು ಶ್ರೀ ನಾರಾಯಣ ಮರೆತೇಬಿಡುತ್ತಾರೆ. ದೇಶದ ನಾಗರಿಕರ ಜೀವನಮಟ್ಟವನ್ನು ಸುಧಾರಿಸುವುದಕ್ಕಿಂತಾ ಪೋಲೀಸು, ಸೈನ್ಯ, ಯುದ್ಧೋದ್ಯಮ ತಂತ್ರಜ್ಞಾನ, ಸರ್ವೇಕ್ಷಣಾ ಸಾಧನಗಳು, ಅತ್ಯಾಧುನಿಕ ಬೇಹುಗಾರಿಕೆಯ ಸಾಧನಗಳನ್ನು ನಿರಂತರವಾಗಿ ಬಲಪಡಿಸುತ್ತಲೇ, ಭೂಮಿ ಮತ್ತು ಶ್ರಮಶಕ್ತಿಗಳನ್ನು ಜಾಗತಿಕ ಬಂಡವಳಿಗರ ನಿಯಂತ್ರಣಕ್ಕೆ ಒಪ್ಪಿಸುತ್ತಾ ಸಾಗುತ್ತಿರುವ ಸಂಘಪರಿವಾರದ ಜನಘಾತುಕ ನೀತಿಗಳಿಗೆ ಭಾರತದ ಸಂವಿಧಾನ ಮತ್ತು ಕಾನೂನುಗಳು ಯಾವರೀತಿಯಲ್ಲೂ ಅಡ್ಡಿಮಾಡುತ್ತಿಲ್ಲ. ಹೀಗೆ, ಮೂಲ ಸಂರಚನೆಯಲ್ಲೇ ಬಲಿಷ್ಠರ ಪರವಾಗಿರುವ ಸಂವಿಧಾನವನ್ನು ತಮ್ಮ ವರ್ಗಹಿತಾಸಕ್ತಿಗಳಿಗೆ ಪೂರಕವಾಗುವಂತೆ ಮತ್ತಷ್ಟು ಬಾಗಿಸಿ, ತಿರುಚಿ, ವಿಕೃತಗೊಳಿಸಿ ಜಾರಿಗೊಳಿಸುತ್ತಿರುವ ಸಂಘಪರಿವಾರದ ಜನವಿರೋಧೀ ಕ್ರಮಗಳು, ಮತ್ತಷ್ಟು ಬಲಿಷ್ಠರಾಗಿರುವ ಬಂಡವಳಿಗ ಆಳುವವರ್ಗದ ನವ ಉದಾರವಾದೀ ರಾಜಕೀಯ ನೀತಿಗಳಾಗಿ ಕಾಣದೆ ದೇಶದ ನೈತಿಕ ಅದಃಪತನವಾಗಿ, ಅರಾಜಕತೆಯಾಗಿ, ಬೌದ್ಧಿಕರ ನಿಷ್ಕ್ರಿಯತೆ-ಹೊಣೆಗೇಡಿತನವಾಗಿ ಶ್ರೀ ನಾರಾಯಣ ಅವರಿಗೆ ಕಾಣಿಸುತ್ತಿವೆ.
ಹಿಂದೊಮ್ಮೆ ಸಂಘಪರಿವಾರದ ಬೌಧ್ದಿಕರಲ್ಲೊಬ್ಬರಾದ ಗೋವಿಂದಾಚಾರ್ಯರು ‘ವಾಜಪೇಯಿ ನಮ್ಮ ಉದಾರವಾದೀ ಮುಖವಾಡ ಅಷ್ಟೆ’ ಎಂದು ಸಾರ್ವಜನಿಕವಾಗಿ ಹೇಳಿ ಸಂಘಪರಿವಾರಕ್ಕೆ ತೀವ್ರ ಮುಜುಗರ ಉಂಟು ಮಾಡಿದ್ದರು. ಈಗ ಮೋದಿ ಹೆಸರಿನ ರಾಜಕೀಯ ಶೈಲಿಯನ್ನು ಟೀಕಿಸುವವರು, ಪ್ರಜಾತಾಂತ್ರಿಕ ನಡವಳಿಕೆಗೆ ವಾಜಪೇಯಿ ಶೈಲಿಯ ‘ರಾಜಕೀಯವು’ ಸಂಘ ಪರಿವಾರದ ಸಿದ್ಧಾಂತದ ಚೌಕಟ್ಟಿನೊಳಗೇ ಆದರ್ಶ ‘ಪ್ರಜಾತಾಂತ್ರಿಕ’ ಮಾದರಿಯೆಂದು ಮೆಚ್ಚಿಕೊಳ್ಳುತ್ತಾರೆ. ಭಾರತದಲ್ಲಿ ‘ಪ್ರಜಾಪ್ರಭುತ್ವ’ ವನ್ನು ರಕ್ಷಿಸಬೇಕೆಂದು ಕೂಗುಹಾಕುವವರು, ಸಾಂವಿಧಾನಿಕ ಸಂಸ್ಥೆಗಳು ರಾಜಕೀಯವಾಗಿ ಭ್ರಷ್ಠವಾಗಿವೆ ಎಂದು ದೂರುವವರು, ಸಂವಿಧಾನದ ರಕ್ಷಣೆಗಾಗಿ ಹೋರಾಟಮಾಡಬೇಕೆಂದು ಕರೆಕೊಡುವವರು ಸಂಘಪರಿವಾರವು ಹೊದ್ದುಕೊಂಡಿರುವ ಕೇಸರೀತೇಪೆಯ ಏಕತೆಯ ದುಪ್ಪಟಿಯ ಬದಲು ಕಾಂಗ್ರೆಸ್‍ನಂಥ ಹಿಂದಿನ ಸರ್ಕಾರಗಳು ಹೊದ್ದುಕೊಂಡಿದ್ದ ವಿವಿಧ ವರ್ಣಗಳ ಬಹುತ್ವದ ದುಪ್ಪಟಿಯನ್ನು ಭಾರತದ ನವಉದಾರವಾದೀ ಬಂಡವಳಿಗ ಆಳುವವರ್ಗಕ್ಕೆ ಹೊದಿಸಲು ಬಯಸುತ್ತಾರೆ. ಸಂಘಪರಿವಾರದ ಉದ್ದೇಶಿತ ಏಕಾಧಿಕಾರದ ವಿರುದ್ಧ ಹೋರಾಡುವಾಗ ಬಹುತ್ವವನ್ನು ಕೀರ್ತಿಸುವ ಕನ್ನಯ್ಯ ಕುಮಾರರಂಥಾ ಶಕ್ತಿಶಾಲೀ ಯುವ ಹೋರಾಟಗಾರರೂ ಸಹ ಆಧುನಿಕ ಫ್ಯಾಸೀವಾದವು ಬಹುತ್ವವನ್ನು ಮಾನ್ಯಮಾಡಿಯೂ ತನ್ನ ಕಾರ್ಯಕ್ರಮವನ್ನು ಮುನ್ನೊತ್ತಬಲ್ಲದು ಎಂಬುದನ್ನು ಮರೆತುಬಿಡುತ್ತಾರೆ.
ನೈಜಸ್ವಾತಂತ್ರ್ಯದ ಸಾಮಾಜಿಕ ಬದಲಾವಣೆ, ಜನಪರವಾದ ಆರ್ಥಿಕ ನೀತಿ ಮತ್ತು ಪ್ರಜಾತಾಂತ್ರಿಕ ರಾಜಕೀಯ ಆಯ್ಕೆಗಳ ದೇಶವನ್ನು ಕಟ್ಟುವುದೆಂದರೆ ವ್ಯವಸ್ಥೆಯ ಸಂರಚನೆಯನ್ನು ಆಮೂಲಾಗ್ರವಾಗಿ ಜನಪರವಾಗಿರುವಂತೆ ಬದಲಾಯಿಸುವುದೇ ಹೊರತು ಜನವಿರೋಧೀ ವ್ಯವಸ್ಥೆಗೆ, ಕಾನೂನಾತ್ಮಕವಾಗಿ ಏಕ ವರ್ಣದ ಅಥವಾ ಬಹುವರ್ಣದ ದುಪ್ಪಟಿಯನ್ನು ಹೊದ್ದಿಸುವುದಲ್ಲ ಎಂಬುದು ನನ್ನ ಒಟ್ಟು ಅಭಿಪ್ರಾಯ.
(2021ರ ಅಕ್ಟೋಬರ್ 26ರ ಪ್ರಜಾವಾಣಿಯಲ್ಲಿ ಪ್ರಕಟವಾದ ಬರಹಕ್ಕೆ ಪ್ರತಿಕ್ರಿಯೆ)