ಮಳೆ ಕೊರತೆಯ ಕಾರಣ : ವಿದ್ಯುತ್‌ ಬೇಡಿಕೆ ದುಪ್ಪಟ್ಟು

ಮಳೆ ಕೊರತೆ

ಬೆಂಗಳೂರು: ಮಳೆ ಕೊರತೆಯಿಂದಾಗಿ ರಾಜ್ಯದಲ್ಲಿ ಶ್ರಾವಣದಲ್ಲೇ ಬೇಸಿಗೆಯ ವಾತಾವರಣ ನಿರ್ಮಾಣವಾಗಿದ್ದು, ವಿದ್ಯುತ್‌ ಬೇಡಿಕೆ ದುಪ್ಪಟ್ಟಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಲೋಡ್‌ಶೆಡ್ಡಿಂಗ್‌ನತ್ತ ರಾಜ್ಯ ಸಾಗಲಿದೆ.

ಬೇಸಿಗೆ ಆರಂಭಕ್ಕೂ ಆರೇಳು ತಿಂಗಳ ಮೊದಲೇ ವಿದ್ಯುತ್‌ ಬೇಡಿಕೆ ಗಣನೀಯವಾಗಿ ಹೆಚ್ಚಳವಾಗಿದೆ. ಕೊರತೆ ಸರಿದೂಗಿಸಲು ಹರಸಾಹಸ ಮಾಡುತ್ತಿರುವ ಇಂಧನ ಇಲಾಖೆ ಪ್ರತಿ ಯೂನಿಟ್‌ಗೆ ₹8.45 ನೀಡಿ ಖರೀದಿಸುತ್ತಿದೆ. ಆದರೂ, ಕೊರತೆಯ ಪ್ರಮಾಣ ಪ್ರತಿ ದಿನವೂ ಹೆಚ್ಚುತ್ತಲೇ ಸಾಗಿದೆ.

ವಿದ್ಯುತ್‌ ಬಳಕೆಯಾಗಿದ್ದು ಎಷ್ಟು?

ಜುಲೈನಲ್ಲಿ ಒಂದು ದಿನ ಗರಿಷ್ಠ 8 ಸಾವಿರ ಮೆಗಾವಾಟ್‌ ವಿದ್ಯುತ್‌ ಬಳಕೆ ಆಗಿತ್ತು. ಆಗಸ್ಟ್‌ ಅಂತ್ಯದ ವೇಳೆಗೆ ಬೇಡಿಕೆ 16 ಸಾವಿರ ಮೆಗಾವಾಟ್‌ ದಾಟಿದೆ. ಏಪ್ರಿಲ್‌ನಲ್ಲಿ ಪ್ರಸ್ತಕ ವರ್ಷದಲ್ಲೇ ಅತ್ಯಧಿಕ ಅಂದರೆ 16,180 ಮೆಗಾವಾಟ್‌ಗೆ ಬೇಡಿಕೆ ಬಂದಿತ್ತು. ಸಾಮಾನ್ಯವಾಗಿ ಫೆಬ್ರವರಿ ಕಳೆದ ನಂತರವೇ ಮತ್ತೆ ಅಧಿಕ ಪ್ರಮಾಣದ ವಿದ್ಯುತ್‌ ಬಳಕೆ ಆರಂಭವಾಗುತ್ತಿತ್ತು. ಆದರೆ, ಆಗಸ್ಟ್‌-30 ರಂದು ಒಂದೇ ದಿನ 16,932 ಮೆಗಾವಾಟ್‌ ವಿದ್ಯುತ್‌ ಬಳಕೆಯಾಗಿದೆ.

ಇಂಧನ ಇಲಾಖೆಯ ಪ್ರಕಾರ ವಿದ್ಯುತ್‌ ಉತ್ಪಾದನೆ ಎಷ್ಟು?

ರಾಜ್ಯದಲ್ಲಿ ಪ್ರಸ್ತುತ ಲಭ್ಯವಿರುವ ಮೂಲಗಳಿಂದ 8,738 ಮೆಗಾವಾಟ್‌ ವಿದ್ಯುತ್‌ ಉತ್ಪಾದಿಸಲಾಗುತ್ತಿದೆ. ಕೇಂದ್ರ ಗ್ರಿಡ್‌ ಮೂಲಕ ಮತ್ತು ಇತರೆ ರಾಜ್ಯ ಹಾಗೂ ಖಾಸಗಿ ಉತ್ಪದಕರಿಂದ 6 ಸಾವಿರ ಮೆಗಾವಾಟ್‌ ಖರೀದಿಸಲಾಗುತ್ತಿದೆ. ಉಳಿದ ಕೊರತೆ ನೀಗಿಸಲು ಪ್ರತಿದಿನ ಸುಮಾರು ₹40 ಕೋಟಿ ಖರ್ಚು ಮಾಡಲಾಗುತ್ತಿದೆ ಎಂದು ಇಂಧನ ಇಲಾಖೆಯ ಮೂಲಗಳು ತಿಳಿಸಿವೆ.

ಕೃಷಿ ಪಂಪ್‌ಸೆಟ್‌ಗಳಿಗೇ 3,400 ಸಾವಿರ ಮೆಗಾವಾಟ್‌:

ರಾಜ್ಯದಲ್ಲಿ ಒಟ್ಟು 32.55 ಲಕ್ಷ ಕೃಷಿ ಪಂಪ್‌ಸೆಟ್‌ಗಳಿವೆ. ಉತ್ತಮ ಮಳೆಯಾಗಿ ಕೆರೆ-ಕಟ್ಟೆಗಳು,ಜಲಮೂಲಗಳು ತುಂಬಿ ನೀರು ಸಮೃದ್ಧಿಯಾಗಿದ್ದಾಗ ಕೃಷಿ ಕ್ಷೇತ್ರಕ್ಕೆ 1,900 ಮೆಗಾವಾಟ್‌ ವಿದ್ಯುತ್‌ ಬಳಕೆಯಾಗುತ್ತಿದೆ. ಬೆಳೆಗಳು ಒಣಗುತ್ತಿರುವ ಕಾರಣ ಅಧಿಕ ಸಂಖ್ಯೆಯ ರೈತರು ವಿದ್ಯುತ್‌ ಪೂರೈಕೆಯಾದ ತಕ್ಷಣ ಏಕಕಾಲಕ್ಕೆ ಬಳಕೆ ಮಾಡುತ್ತಿದ್ದಾರೆ. ಇದರಿಂದ ವಿದ್ಯುತ್‌ ಪರಿವರ್ತಕಗಳು, ಗ್ರಿಡ್‌ಗಳಿಗೆ ಒತ್ತಡ ತಾಳಲಾಗುತ್ತಿಲ್ಲ. ಇದರಿಂದ ಕೆಲ ಪ್ರದೇಶಗಳಲ್ಲಿ ವಿದ್ಯುತ್‌ ಅಭಾವ ಎದುರಾಗಿದೆ. ರಾಜ್ಯದಲ್ಲಿ ಪ್ರಸ್ತುತ ಸೌರ-ಪವನ ಶಕ್ತಿ, ಜಲಶಕ್ತಿ, ಶಾಖೋತ್ಪನ್ನ ಘಟಕಗಳು ಸೇರಿದಂತೆ ಬೇರೆಬೇರೆ ಮೂಲಗಳಿಂದ 32 ಸಾವಿರ ಮೆಗಾವಾಟ್‌ ಉತ್ಪದನೆಗೆ ಅವಕಾಶವಿದ್ದರೂ ಇದುವರೆಗಿನ ಉತ್ಪಾದನಾ ಸಾಮರ್ಥ್ಯ 9 ಸಾವಿರ ಮೆಗಾವಾಟ್‌ ದಾಟಿಲ್ಲ.

ಮೊದಲೇ ಒಪ್ಪಂದ ಮಾಡಿಕೊಂಡಂತೆ ಕಡಿಮೆ ದರಕ್ಕೆ ಮಳೆಗಾಲಕ್ಕೆ ಅಗತ್ಯವಾದ ವಿದ್ಯುತ್‌ ಖರೀದಿಸಲಾಗುತ್ತಿತ್ತು. ಮಳೆ ಕೊರತೆಯ ಕಾರಣ ಹೆಚ್ಚಿದ ಬೇಡಿಕೆಗೆ ಅನುಗುಣವಾಗಿ ಕೊರತೆ ನೀಗಿಸಲು ದುಬಾರಿ ದರ ನೀಡಲಾಗುತ್ತಿದೆ. ಸರ್ಕಾರ ಇನ್ನು 5 ಸಾವಿರ ಮೆಗಾವಾಟ್‌ ವಿದ್ಯುತ್‌ ಉತ್ಪಾದನೆಗೆ ಸರ್ಕಾರ ಕಾರ್ಯಕ್ರಮ ರೂಪಿಸಿದೆ. ಯೋಜನೆ ಅನುಷ್ಠಾನಕ್ಕೆ ಸಮಯ ಬೇಕಾಗುತ್ತದೆ. ಸದ್ಯದ ಮಟ್ಟಿಗೆ ಅನ್ಯ ರಾಜ್ಯಗಳು ಹಾಗೂ ಕೇಂದ್ರದ ಮೇಲಿ ಅವಲಂಬನೆ ಅನಿವಾರ್ಯವಾಗಿದೆ. ಅಲ್ಲಿಯವರೆಗೂ ಬೇಡಿಕೆ ಸರಿದೂಗಿಸುವ ಸವಾಲು ನಮ್ಮ ಮುಂದಿದೆ ಎಂದು ಕೆಪಿಟಿಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ. ಮಳೆ ಕೊರತೆ

Donate Janashakthi Media

Leave a Reply

Your email address will not be published. Required fields are marked *