ದುಡಿಯುವ ವರ್ಗದ ಚೇತನ ಕಾಮ್ರೇಡ್‌ ಸೂರಿ

ವಿದ್ಯಾರ್ಥಿ ದೆಸೆಯಲ್ಲೇ ಸ್ವಾತಂತ್ರ್ಯ ಚಳುವಳಿಯಲ್ಲಿ ಧುಮುಕಿದ, ಕಾರ್ಮಿಕವರ್ಗದ ಚಳುವಳಿಗೆ ಇಡೀ ಜೀವನವನ್ನೇ ಮುಡಿಪಾಗಿಟ್ಟು, ಆ ಸಂಘರ್ಷದಲ್ಲಿ ಮೂಡಿಬಂದ ಸಮರಧೀರ ಚೇತನ ಕಾಮ್ರೇಡ್ ಸೂರಿ.

ಆರು ದಶಕಗಳ ಅವರ ಸಾರ್ವಜನಿಕ ಜೀವನವೇ ಹೋರಾಟಗಳ ಒಂದು ವೀರಗಾಥೆ. ಅವರು ನಮ್ಮನ್ನು ಅಗಲಿ ಇಂದಿಗೆ 19 ವರ್ಷ  ವರ್ಷಗಳಾಗುತ್ತಿವೆ.

ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿಯ ಕಾರ್ಯದರ್ಶಿ ಹಾಗೂ ಸಿಐಟಿಯುವಿನ ರಾಜ್ಯ ಅಧ್ಯಕ್ಷರೂ ಆಗಿದ್ದ ಕಾಮ್ರೇಡ್ ಎಸ್. ಸೂರ್ಯನಾರಾಯಣ ರಾವ್ ಜುಲೈ 1, 2002 ರ ಸಂಜೆ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಹೃದಯಾಘಾತ ದಿಂದ ನಿಧನರಾದರು. ಕಾಮ್ರೇಡ್ ಸೂರಿಯೆಂದೇ ರಾಜ್ಯದ ಕಾರ್ಮಿಕ ಆಂದೋಲನದಲ್ಲಿ ಜನಪ್ರಿಯರಾಗಿದ್ದ ಅವರು ಸಿಐಟಿಯುನ ಅಖಿಲ ಭಾರತ ಉಪಾಧ್ಯಕ್ಷರೂ ಹಾಗೂ ಸಿಪಿಐ(ಎಂ)ನ ಕೇಂದ್ರ ಸಮಿತಿಯ ಸದಸ್ಯರೂ ಆಗಿದ್ದರು. ಅವರ ಪತ್ನಿ ಲೀಲಾರಾವ್ ಇತ್ತೀಚೆಗೆ ಅಗಲಿದರು.

ಕಾಂ. ಸೂರಿಯವರ ಜನನ ಆಗಸ್ಟ್ 24, 1924 ರಂದು ಹಾಸನ ಜಿಲ್ಲೆಯ ಅರಕಲಗೂಡಿನಲ್ಲಿ ಆಯಿತು. ಅವರ ತಂದೆ ಸ್ವಾಮಿರಾವ್ ಕೈಗಾರಿಕೋದ್ಯಮಿಯಾಗಿದ್ದರಿಂದ ಅವರು ಬೆಂಗಳೂರಿಗೆ ವಲಸೆ ಬಂದು ನೆಲೆ ನಿಂತರು.

ದೇಶದ ಇತರೆಡೆಯಂತೆ ರಾಜ್ಯದಲ್ಲೂ ವಿದ್ಯಾರ್ಥಿ, ಯುವಜನರ ನಡುವೆ ಸ್ವಾತಂತ್ರ್ಯ ಹೋರಾಟದ ಭಾಗವಾಗಿ ವಿದ್ಯಾರ್ಥಿ ಆಂದೋಲನ ಹರಡಲಾರಂಭಿಸಿದಾಗ ಸೂರಿಯವರು ವಿದ್ಯಾರ್ಥಿ ಚಳುವಳಿಗೆ ಧುಮುಕಿದರು. ಮುಂದೆ ಇನ್ನೊಬ್ಬ ಕಮ್ಯುನಿಸ್ಟ್ ಮುಂದಾಳುವಾಗಿ ಬೆಳೆದು ಬಂದ ಎಂ.ಎಸ್.ಕೃಷ್ಣನ್ ರವರ ಜತೆ ರಾಜ್ಯದಲ್ಲಿ ಎಐಎಸ್ಎಫ್(ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್)ನ ಪ್ರಮುಖ ಮುಖಂಡರಾಗಿ ಬೆಳೆದುಬಂದರು.

ಸೂರಿಯವರ 9ನೇ (1933ರಲ್ಲಿ) ವಯಸ್ಸಿನಲ್ಲಿಯೇ ತಮ್ಮ ತಂದೆಯನ್ನು ಕಳೆದುಕೊಂಡರು. ಈ ಸಂದರ್ಭದಲ್ಲಿ ಕೆಲಸ ಮಾಡುತ್ತಾ ಶಿಕ್ಷಣವನ್ನು ಮುಂದುವರೆಸಿದರು. ಸತತ ಮೂರು ವರ್ಷ ವಿಭಿನ್ನ ರೀತಿಯಲ್ಲಿ ವಿವಿದೆಡೆ ದುಡಿಮೆ ಮಾಡಿದರು.

1941-42ರಲ್ಲಿ ತಮ್ಮ ಹದಿನೆಂಟನೇ ವಯಸ್ಸಿನಲ್ಲಿ ಮೈಸೂರು ಟೊಬ್ಯಾಕೋ ಕಂಪನಿ(ಎಂಟಿಸಿ)ಯ ಲೆಕ್ಕ ಪತ್ರ ವಿಭಾಗದಲ್ಲಿ ಕೆಲಸ. ಅದರೊಂದಿಗೆ ರಾಮಸ್ವಾಮಿ ಐಯ್ಯಾಂಗಾರ್‌ ಎಂಬ ಒಬ್ಬ ಖಾಸಗಿ ಆಡಿಟರ್‌ರವರ ಬಳಿ ಕೂಡ ಪಾರ್ಟ್‌ ಟೈಂ ಕೆಲಸ ಮಾಡಿದ್ದರು. ದುಡಿಮೆಯಲ್ಲಿ ತೊಡಗಿಸಿಕೊಂಡು ಅವರು ವಿದ್ಯಾರ್ಥಿ ಚಳುವಳಿಯೊಂದಿಗೆ ಆಕರ್ಷಿತರಾದರು. ನಂತರ ಅವರ ಜೀವನವೇ ಹೋರಾಟಕ್ಕೆ ಮೀಸಲಾಯಿತು.

1942 ರಲ್ಲಿ ಗಾಂಧೀಜಿಯವರ ಕ್ವಿಟ್ ಇಂಡಿಯಾ’ ಕರೆ ಬಂದಾಗ ಸಕ್ರಿಯವಾಗಿ ಭಾಗವಹಿಸಿದ ಸೂರ್ಯ ನಾರಾಯಣ ರಾವ್‌ ಅವರು ಇದಕ್ಕಾಗಿ 18 ತಿಂಗಳು ಬ್ರಿಟಿಷರ ಜೈಲು ವಾಸ ಅನುಭವಿಸಬೇಕಾಯಿತು. ಪ್ರಧಾನಿ ಇಂದಿರಾಗಾಂಧಿಯವರ ಸಲಹಾಕಾರರಾದ ಶ್ರೀ ಹೆಚ್.ವೈ.ಶಾರದಾಪ್ರಸಾದ್, ಡಾ. ಎಚ್.ನರಸಿಂಹಯ್ಯ ಮೊದಲಾದವರು ಈ ಹೋರಾಟದಲ್ಲಿ ಅವರ ಸಹಯೋಗಿಗಳು.

ವಿದ್ಯಾರ್ಥಿ ಮುಖಂಡರಾಗಿ ಅವರು ಚಳುವಳಿಗೆ ನೇತೃತ್ವ ನೀಡಿದ್ದಷ್ಟೇ ಅಲ್ಲ, ಆಗ ಬೆಂಗಳೂರಿಗೆ ಹೊರ ಊರುಗಳಿಂದ ಬರುತ್ತಿದ್ದ ಬಡ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ನೆರವು ಸಮಿತಿ’ ಹಾಗೂ ಒಂದು ಹಾಸ್ಟೆಲನ್ನು ಸೂರ್ಯನಾರಾಯಣ ರಾವ್ ನಡೆಸಿದ್ದರು.

ಅವರ ತಂದೆ ಸ್ವಾಮಿರಾವ್ ಕೈಗಾರಿಕೋದ್ಯಮಿಯಾಗಿದ್ದರೂ ಸೂರಿಯವರು ತನ್ನ ಕಾಲ ಮೇಲೆಯೇ ನಿಂತು ಬದುಕಲು ನಿರ್ಧರಿಸಿ ಹೆಚ್.ಎ.ಎಲ್. ನಲ್ಲಿ ಕೆಲಸಕ್ಕೆ ಸೇರಿದರು.

ಅವರ ಉತ್ಸಾಹ, ಕಾರ್ಯಶೀಲತೆ, ಬದ್ಧತೆಯನ್ನು ಕಂಡ ಆಗಿನ ರಾಜ್ಯ ಕಾಂಗ್ರೆಸ್ ಅಧ್ಯಕ್ಷರು ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನಿಸಿದರು. ವಿದ್ಯಾರ್ಥಿ ಚಳುವಳಿಯಲ್ಲಿ ಸಕ್ರಿಯವಾಗಿ ತೊಡಗಿದ್ದರೂ ಸಹ ಸ್ವಾತಂತ್ರ್ಯ ಪೂರ್ವದವರೆಗೂ ಅವರು ಕಮ್ಯೂನಿಸ್ಟ್‌ ಪಕ್ಷವನ್ನು ಸೇರಿರಲಿಲ್ಲ. ಕೊನೆಗೆ ಕಾಮ್ರೇಡ್‌ ಎನ್‌.ಎಲ್‌. ಉಪಾಧ್ಯಾಯರು ಕಾಮ್ರೇಡ್‌ ಸೂರಿಯವರನ್ನು ಕಮ್ಯೂನಿಸ್ಟ್‌ ಪಕ್ಷಕ್ಕೆ ಸೇರಿಸಿಕೊಳ್ಳುವುದರಲ್ಲಿ ಯಶಸ್ವಿಯಾದರು. ಅಂದಿನಿಂದ ತಮ್ಮ ಇಡೀ ಜೀವನವನ್ನು ರಾಜ್ಯದ ದುಡಿಯುವ ವರ್ಗಕ್ಕೆ, ಪ್ರಜಾಪ್ರಭುತ್ವ ಆಂದೋಲನಕ್ಕೆ ಮುಡಿಪಿಟ್ಟರು. ಸುಮಾರು ಆರು ದಶಕಗಳ ಅವರ ಸಾರ್ವಜನಿಕ ಜೀವನ ಒಂದು ಹೋರಾಟಮಯ ಜೀವನ.

1948ರಲ್ಲಿ ಕಮ್ಯೂನಿಸ್ಟ್‌ ಪಕ್ಷವನ್ನು ಸೇರಿದ ಅವರು ನಂತರ 1964ರಲ್ಲಿ ಕಮ್ಯೂನಿಸ್ಟ್‌ ಪಕ್ಷ ವಿಭಜನೆಯಾದಾಗ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪಕ್ಷದ ಮುಖಂಡರಾಗಿ ಸುಮಾರು ಆರು ದಶಕಗಳ ಕಾಲ ಕಾರ್ಮಿಕ ವರ್ಗದ ಮಧ್ಯೆ ದುಡಿದವರು ಕಾಮ್ರೇಡ್‌ ಸೂರಿ.

1949ರಲ್ಲಿ ಅಖಿಲ ಭಾರತ ರೈಲ್ವೆ ಮುಷ್ಕರಕ್ಕೆ ಬಿ.ಟಿ. ರಣದಿವೆ ನೀಡಿದ ಕರೆಯು ಕಾಮ್ರೇಡ್‌ ಸೂರಿಯವರಲ್ಲಿ ವಿದ್ಯುತ್‌ ಸಂಚಾರವನ್ನು ಉಂಟು ಮಾಡಿತು. ಸೂರಿ ಅವರು ರೈಲುಗಳನ್ನು ತಡೆದು ನಿಲ್ಲಿಸಲು ಹೊರಟರು. ಸಿಐಡಿ ಪೊಲೀಸರು ಅವರನ್ನು ಹಿಂಬಾಲಿಸುತ್ತಿದ್ದರು. ಸೂರಿ ತಲೆಮರೆಸಿಕೊಂಡರು. ಕೊನೆಗೂ ಸಿಕ್ಕಿಬಿದ್ದಾಗ ಅವರನ್ನು ಮಂಡ್ಯ ಸಬ್‌ ಜೈಲಿಗೆ ಕಳುಹಿಸಲಾಯಿತು.

ಸ್ವಾತಂತ್ರ್ಯ ನಂತರ ಕಮ್ಯೂನಿಸ್ಟ್‌ ಪಕ್ಷ ನಿಷೇಧಿಸಲ್ಪಟ್ಟಾಗ ಭೂಗತವಾಗಿ ಕೆಲಸ ಮಾಡಿದರು. ಸುಮಾರು 1951ರ ನಂತರ ಅವರು ಬಹಿರಂಗವಾಗಿ ಗುರುತಿಸಿಕೊಂಡರು. ಮೈಸೂರು ಸಂಸ್ಥಾನದಲ್ಲಿ ಜವಾಬ್ದಾರಿ ಸರಕಾರಕ್ಕಾಗಿ ನಡೆದ ಪ್ರಜಾಪ್ರಭುತ್ವ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಮೂರು ತಿಂಗಳ ಭೂಗತವಾಸವನ್ನು ಅನುಭವಿಸಿದರು.

1956-58 ರ ಅವಧಿಯಲ್ಲಿ, ನಂತರ 1960-62 ರಲ್ಲಿ ಅವರು ಅವಿಭಜಿತ ಕಮ್ಯುನಿಸ್ಟ್ ಪಕ್ಷದ ಬೆಂಗಳೂರು ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾಗಿ ಆಯ್ಕೆಗೊಂಡರು. ಕಮ್ಯುನಿಸ್ಟ್ ಆಂದೋಲನದಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯ ಬಂದು 1964 ರಲ್ಲಿ ತೆನಾಲಿಯಲ್ಲಿ ವಿಶೇಷ ಅಧಿವೇಶನ ನಡೆದಾಗ ಅದರಲ್ಲಿ ಕರ್ನಾಟಕ ಪ್ರತಿನಿಧಿಗಳ ಮುಖಂಡರಾಗಿದ್ದವರು ಕಾಮ್ರೇಡ್ ಸೂರಿಯವರು.

1964ರಲ್ಲಿ ಸಿಪಿ‍ಐ(ಎಂ) ಪಕ್ಷ ಸ್ಥಾಪನೆಗೊಂಡಾಗ ರಾಜ್ಯದಲ್ಲಿ ಪಕ್ಷವನ್ನು ಬುಡಮಟ್ಟದಿಂದ ಕಟ್ಟಿದ ಪ್ರಮುಖರಲ್ಲಿ ಕಾಮ್ರೇಡ್‌ ಸೂರಿ ಸಹ ಒಬ್ಬರು.

ಸಿಪಿಐ(ಎಂ) ಪಕ್ಷವನ್ನು ತಳಮಟ್ಟದಲ್ಲಿ ಕಟ್ಟುವ ನಿಟ್ಟಿನಲ್ಲಿ ಒಮ್ಮೆ ಒಂದು ಸಭೆಗೆ ಸಿಪಿಐನ ಅಧ್ಯಕ್ಷರಾದ ಡಾಂಗೆಯವರು ಬರುವವರಿದ್ದರು. ಅಂದೇ ಸಿಪಿಐ(ಎಂ) ನಿಂದ ಇನ್ನೊಂದು ಸಭೆ ಆಯೋಜಿಸಲಾಗಿತ್ತು. ಕಾಮ್ರೇಡ್‌ ಸೂರಿ ಅವರು ಸಭೆಯ ವ್ಯವಸ್ಥೆಯ ಹೊಣೆ ಹೊತ್ತಿದ್ದರು. ಡಾಂಗೆಯವರ ಸಭೆಗೆ ಕೆಲವೇ ಜನರು ಸೇರಿದ್ದರೆ ಸಿಪಿಐ(ಎಂ)ನ ಸಭೆಗೆ ಸಾವಿರಾರು ಜನ ಕಿಕ್ಕಿರಿದು ಸೇರಿ ಅತ್ಯಂತ ಯಶಸ್ವಿಯಾಯಿತು. ಅದೂ ಪ್ರತಿನಿಧಿ ಶುಲ್ಕವನ್ನು ಕಟ್ಟಿ. ಕಾರ್ಮಿಕ ವರ್ಗದ ನಡುವೆ ಸಿಪಿಐ(ಎಂ) ಪಕ್ಷವನ್ನು ಕಟ್ಟಿದ ಬಗೆ ಇದು.

1998ರಲ್ಲಿ ಕಾಮ್ರೇಡ್‌ ಪಿ.ರಾಮಚಂದ್ರರಾವ್‌ ಅವರ ನಿಧನದ ನಂತರ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿಯಾಗಿ ಜೀವಿತಾವಧಿಯ ಕೊನೆಯವರೆಗೂ ಕೆಲಸ ಮಾಡಿದರು. ನಂತರ ಸಿಪಿಐ(ಎಂ) ಕೇಂದ್ರ ಸಮಿತಿ ಸದಸ್ಯರೂ ಆದರು. 2002 ರಲ್ಲಿ ನಡೆದ ಸಿಪಿಐ(ಎಂ) 17ನೇ ಮಹಾಧಿವೇಶನದಲ್ಲಿ ಅವರು ಕೇಂದ್ರ ಸಮಿತಿಗೆ ಮರು ಆಯ್ಕೆಗೊಂಡರು.

1975 ರಲ್ಲಿ ತುರ್ತುಪರಿಸ್ಥಿತಿಯ ಕಾಲದಲ್ಲಿ ಸೂರ್ಯನಾರಾಯಣ ರಾವ್ ಮತ್ತೆ ಜೈಲು ವಾಸ ಅನುಭವಿಸಬೇಕಾಯಿತು.

ಈ ಮೊದಲೇ ಹೇಳಿದಂತೆ ರಾಜ್ಯದ ಕಾರ್ಮಿಕ ಆಂದೋಲನದಲ್ಲಿ ಕಾಮ್ರೇಡ್ ಸೂರಿಯವರದ್ದು ಅಚ್ಚಳಿಯದ ಹೆಸರು. ರಾಜ್ಯದ ಅಸಂಘಟಿತ ಕಾರ್ಮಿಕರನ್ನು ಸಂಘಟಿತರಾಗಿಸಿ ಸಮರಶೀಲ ಹೋರಾಟಗಳಿಗೆ ಇಳಿಸಿದ ಅವರು ನೇತೃತ್ವ ನೀಡಿದ ಹೋರಾಟಗಳು ಹಲವಾರು. 1965ರ ರಾಮ್ ಕುಮಾರ್ ಮಿಲ್ ಹೋರಾಟ, 1967 ರ ಐತಿಹಾಸಿಕ ಹೋಟೆಲ್ ಕಾರ್ಮಿಕರ ಹೋರಾಟ, 1979 ರಲ್ಲಿ ಬೆಂಗಳೂರನ್ನು ನಡುಗಿಸಿದ ಮೈಕೊ ಕಾರ್ಮಿಕರ ಹೋರಾಟ, ನಂತರ 1980 ರ ಐಟಿಸಿ ಕಾರ್ಮಿಕರ ಹೋರಾಟ, 1981 ರ ಬೆಂಗಳೂರಿನ ಸಾರ್ವಜನಿಕ ವಲಯದ ಕಾರ್ಮಿಕರ ಎರಡು ತಿಂಗಳಿಗೂ ಹೆಚ್ಚು ಕಾಲ ನಡೆದ ಐತಿಹಾಸಿಕ ಮುಷ್ಕರ, 1991 ರ ಎಸ್ಕಾರ್ಟ್ಸ್ ಕಾರ್ಮಿಕರ ಹೋರಾಟ, 3 ತಿಂಗಳು ನಡೆದ ಎಲ್ ಅಂಡ್‌ ಟಿ ಕಾರ್ಮಿಕರ ಹೋರಾಟ ಇವುಗಳಲ್ಲಿ ಕೆಲವು. ಭದ್ರಾ ಮಿಲ್ಸ್‌, ಟಿ.ಆರ್‌.ಮಿಲ್ಸ್‌ ಕಾರ್ಮಿಕರನ್ನು, ಆಟೋರಿಕ್ಷಾ ಚಾಲಕರನ್ನೂ, ಪುಟ್‌ಪಾತ್‌ ವ್ಯಾಪಾರಿಗಳನ್ನು ಸಂಘಟಿಸಿದರು.

ಮೈಸೂರಿನ ವಿಕ್ರಾಂತ್‌ ಟೈರ್ಸ್‌ ಕಾರ್ಮಿಕರು, ಕೆಜಿಎಫ್‌ ಗಣಿ ಕಾರ್ಮಿಕರು, ರಾಜ್ಯ ವಿವಿಧ ಮೂಲೆಗಳಲ್ಲಿರುವ ಕಾರ್ಮಿಕ ಸಂಘಗಳಿಗೆ ನಾಯಕತ್ವವನ್ನು ನೀಡಿದವರು ಕಾಮ್ರೇಡ್‌ ಸೂರಿ ಅವರು.

ಬೆಂಗಳೂರಿನ ಮೈಕೋ (ಈಗ ಬಾಷ್‌ ಕಂಪನಿ) ಕಾರ್ಮಿಕ ಸಮರಶೀಲ ಹೋರಾಟ ದಶಕಗಳು ಹೆಚ್ಚು ಕಾಲ ನಡೆದ ಹೋರಾಟ ಅದಾಗಿತ್ತು. ಕಾರ್ಮಿಕರು 1979 ರಿಂದ 1984ರ ಅವಧಿಯಲ್ಲಿ ಕೈಗೊಂಡ ಹೋರಾಟವಂತೂ ಕಾರ್ಮಿಕ ಚಳುವಳಿಗೆ ಹೊಸ ಸಂಚಲನವನ್ನೇ ಮೂಡಿಸಿತು. ಇದೇ ಸಂದರ್ಭದಲ್ಲಿ ಕಾಮ್ರೇಡ್‌ ಸೂರಿಯವರ ಮೇಲೆ ಗೂಂಡಾಗಳು ಹಲ್ಲೆಗೆ ಮುಂದಾಗಿದ್ದರು.

ʻʻಹೋರಾಟವೆಂದರೆ, ರಬ್ಬರ್‌ ಎಳೆದಂತೆ. ರಬ್ಬರ್‌ ಎಳೆಯುವಾಗ ಅದರಲ್ಲಿನ ಶಕ್ತಿಯ ಬಗ್ಗೆ ಅರಿವಿರಬೇಕು. ಮಿತಿಮೀರಿ ಎಳೆದ ರಬ್ಬರ್‌ ತುಂಡಾಗುತ್ತೆʼʼ ಕಾರ್ಮಿಕರ ಹೋರಾಟದ ಸಂದರ್ಭದಲ್ಲಿ ಕಾಮ್ರೇಡ್‌ ಸೂರಿ ಹೇಳುತ್ತಿದ್ದ ಮಾತು.

ಸಿಐಟಿಯು ಕಾರ್ಮಿಕ ಸಂಘಟನೆಯ ರಾಜ್ಯ ಕಾರ್ಯದರ್ಶಿಯಾಗಿ ರಾಜ್ಯ ಅಧ್ಯಕ್ಷರಾಗಿ, ಅಖಿಲ ಭಾರತ ಉಪಾಧ್ಯಕ್ಷರಾಗಿ ದುಡಿದವರು. ಸಿಐಟಿಯುವಿನ ಸ್ಥಾಪಕ ಮುಖಂಡರಲ್ಲಿ ಒಬ್ಬರಾಗಿದ್ದ ಅವರು ಸಂಘಟನೆ ಮತ್ತು ಐಕ್ಯ ಹೋರಾಟ ಹಾಗೂ ಚಳುವಳಿಗಳಲ್ಲಿ ಸಿಐಟಿಯುವಿನ ಮುಂಚೂಣಿ ಪಾತ್ರದ ಕುರಿತು ನೀತಿಗಳನ್ನು ರೂಪಿಸುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು.

1983ರಲ್ಲಿ ಕಾರ್ಮಿಕ ಹೋರಾಟದ ಮುಂದಾಳು ಕಾಮ್ರೇಡ್‌ ಸೂರಿ ಅವರು ಸಿಪಿಐ(ಎಂ) ಪಕ್ಷದಿಂದ ವರ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾಗಿ ದುಡಿಯುವ ವರ್ಗದ ಪರವಾಗಿ ಧ್ವನಿಯನ್ನು ಮೊಳಗಿಸಿದರು.

ಕಾಮ್ರೇಡ್ ಸೂರ್ಯನಾರಾಯಣ ರಾವ್ ಕರ್ನಾಟಕ ಕಾರ್ಮಿಕರ ಪ್ರತಿನಿಧಿಯಾಗಿ ಹಲವು ಅಂತರ‍್ರಾಷ್ಟೀಯ ಸಮ್ಮೇಳನಗಳಲ್ಲಿ ಭಾಗವಹಿಸಿದರು. ಇದರ ಭಾಗವಾಗಿ ಅವರು ಚೀನಾ, ಪ್ಯಾರಿಸ್, ಸೋವಿಯತ್ ಒಕ್ಕೂಟ, ಕ್ಯೂಬಾ ಹಾಗೂ ದಕ್ಷಿಣ ಕೊರಿಯಾದ ರಾಜಧಾನಿ ಸೋಲ್‌ನಲ್ಲಿ ನಡೆದ ಜಾಗತೀಕರಣ – ವಿರೋಧಿ ಸಮ್ಮೇಳನದಲ್ಲಿ ಅವರು ಭಾಗವಹಿಸಿದ್ದರು.

ಕಾರ್ಮಿಕ ಚಳುವಳಿಯೊಂದಿಗೆ ಪ್ರಜಾಪ್ರಭುತ್ವ ಚಳುವಳಿಯಲ್ಲಿಯೂ ಸಕ್ರಿಯವಾಗಿದ್ದು, ಉದಾರೀಕರಣ, ಖಾಸಗೀಕರಣ, ಜಾಗತೀಕರಣಗಳು ಕಾರ್ಮಿಕ ವರ್ಗದ ಜನಸಾಮಾನ್ಯರ ಬದುಕಿನ ಮೇಲೆ ಸತತ ದಾಳಿ ನಡೆಸುತ್ತಿರುವಾಗ ಅದರೊಂದಿಗೆ ಕೋಮುವಾದ ದುಡಿಯುವ ಜನಗಳನ್ನು ವಿಭಜಿಸುವ ಹುನ್ನಾರಗಳ ವಿರುದ್ಧ ಕಾರ್ಮಿಕರು ಮತ್ತು ಜನಸಾಮಾನ್ಯರನ್ನು ಅಣಿನೆರೆಸುವಲ್ಲಿಯೂ ಮುಂದಾಳತ್ವವನ್ನು ನೀಡಿದವರು ಕಾಮ್ರೇಡ್‌ ಸೂರಿ ಅವರು.

ಕಾಮ್ರೇಡ್ ಸೂರಿಯವರು ತಮ್ಮ ಹೋರಾಟಮಯ ಬದುಕು ಹಾಗೂ ಧೀಮಂತ ನೇತೃತ್ವದ ಗುಣಗಳಿಂದಾಗಿ ಕಾರ್ಮಿಕ ವರ್ಗದಲ್ಲಿ ಅಪಾರ ಅನುಯಾಯಿಗಳನ್ನು ಗಳಿಸಿದ್ದರು. ತಮ್ಮ ಪ್ರಾಮಾಣಿಕ ರಾಜಕೀಯ ಜೀವನದಿಂದಾಗಿ ಕಾರ್ಮಿಕ ಆಂದೋಲನದ ಹೊರಗೂ ಹಲವಾರು ಅಭಿಮಾನಿಗಳನ್ನು ಪಡೆದಿದ್ದರು.

ಅವರ ನಿಧನದಿಂದ ರಾಜ್ಯದ ಕಾರ್ಮಿಕ ಆಂದೋಲನ ಹಾಗೂ ಪ್ರಜಾಪ್ರಭುತ್ವ ಆಂದೋಲನವು ಒಂದು ಧೀಮಂತ ಚೇತನವನ್ನು ಕಳೆದುಕೊಂಡಿತು. ದೇಶದಲ್ಲಿ ಇಂದು ಸರ್ವಾಧಿಕಾರಿ, ಕೋಮುವಾದಿ ಶಕ್ತಿಗಳು ಪ್ರಜಾಪ್ರಭುತ್ವಕ್ಕೇ ಬೆದರಿಕೆಯನ್ನುಂಟು ಮಾಡಲು ಮುಂದಾಗುತ್ತಿರುವಾಗ ಅದನ್ನು ಎದುರಿಸಿ ಹಿಮ್ಮೆಟ್ಟಿಸಲು ಕಾಮ್ರೆಡ್ ಸೂರಿಯವರ ಹೋರಾಟದ ಬದುಕೇ ನಮಗೆ ಸ್ಪೂರ್ತಿಯ ಸೆಲೆ ಹಾಗೂ ದಾರಿ ದೀಪ.

ಕಾರ್ಮಿಕ  ಚಳುವಳಿಯ ನೇತರರಾಗಿ, ಕಮ್ಯೂನಿಸ್ಟ್‌ ಪಕ್ಷದ ದೃಢ ವಿಶ್ವಾಸದ ನಾಯಕನಾಗಿ ಸಹಸ್ರಾರು ದುಡಿಯುವ ವರ್ಗವನ್ನು ಚಳುವಳಿಗೆ ಕರೆತಂದ ಕಾಮ್ರೇಡ್‌ ಸೂರಿ ಅವರನ್ನು ನೆನೆಯೋಣ…..

Donate Janashakthi Media

Leave a Reply

Your email address will not be published. Required fields are marked *