ದುಡಿಮೆ ಮತ್ತು ಮಹಿಳೆ

ವಿಮಲಾ.ಕೆ.ಎಸ್‌.

ಮಹಿಳೆಯರು ತಮ್ಮ ದುಡಿಮೆಯ ಅವಧಿಯನ್ನು ವೈಜ್ಞಾನಿಕವಾಗಿ ೮ ಘಂಟೆಗಳಿಗೆ ನಿಗದಿ ಪಡಿಸಬೇಕೆಂಬ ಅತಿ ಮುಖ್ಯ ಅಂಶವೂ ಸೇರಿದಂತೆ ಹಲವು ಒತಾಯಗಳನ್ನು ಮುಂದಿಟ್ಟು ಜಯ ಸಾಧಿಸಿದ ಚಾರಿತ್ರಿಕ ದಿನವದು. ಈ ವರ್ಷದ ಈ ದಿನಕ್ಕೆ ಕರ್ನಾಟಕ ಸರಕಾರದ ಭರ್ಜರಿ ಕೊಡುಗೆ ಈಗಿರುವ ೮ ಘಂಟೆಗಳ ದುಡಿತದ ಅವಧಿಯನ್ನು ೧೨ ಕ್ಕೆ ಏರಿಸಿರುವುದು. ಅಷ್ಟೇ ಅಲ್ಲ ʼಕಾರ್ಖಾನೆಗಳಲ್ಲಿ ಕೆಲಸಗಾರರಿಗೆ ಯಾವುದೇ ಮಧ್ಯಂತರವಿಲ್ಲದೇ ೬ ಘಂಟೆಗಳ ವರೆಗೆ ವಿಸ್ತರಿಸಲೂ ಅವಕಾಶ ನೀಡಲಾಗಿದೆ. ಈ ಅಯ್ಕೆಯನ್ನು ಒಪ್ಪಿಕೊಂಡರೆ ೬ ಘಂಟೆಯ ನಂತರ ಹೆಚ್ಚುವರಿ ಕೆಲಸ ಮಾಡಿದರೂ ದುಪ್ಪಟ್ಟು ದರದ ಮಜೂರಿ ನೀಡಬೇಕಾಗುತ್ತದೆ. ಎಂಬಿತ್ಯಾದಿ ಗೊಂದಲಮಯ ಅಂಶಗಳಿವೆ.

ಹುಟ್ಟುವಾಗಲೇ ಕೈಯಲ್ಲಿ ದುಡಿತದ ಪರವಾನಗಿ ಹಿಡಿದೇ ಹುಟ್ಟುವವರು ಎಂದು ಯಾರಾದರೂ ಇದ್ದರದು ಮಹಿಳೆ. ಇದು ಸಾರ್ವಕಾಲಿಕ ಮತ್ತು ಸಾರ್ವತ್ರಿಕ ಸತ್ಯ. ಕೆಲವು ವರ್ಷಗಳ ಹಿಂದೆ ಕರ್ನಾಟಕದ ಖ್ಯಾತ ಐ.ಟಿ.ಕಂಪನಿಯ ಮಾಲಿಕರು (ಮಹಿಳೆ) ತಮ್ಮ ಮನೆಯ ಕೆಲಸಗಳಿಗೆ ಸಹಾಯಕ್ಕೆ ಯಾರನ್ನೂ ಇಟ್ಟುಕೊಂಡಿಲ್ಲ ಅವರೇ ಮಾಡಿಕೊಳ್ಳುತ್ತಾರೆ ಎಂಬುದು ದೊಡ್ಡ ಸುದ್ದಿಯಾಗಿತ್ತು. ಸುದ್ದಿಗೆ ಕಾರಣಗಳೇನೇ ಇರಲಿ ಎಲ್ಲ ವರ್ಗದ ಮಹಿಳೆಯರಿಗೂ ಗೃಹಕೃತ್ಯ ಎಂಬುದು ಚರ್ಮಕ್ಕೆ ಅಂಟಿದ್ದು ಎಂಬುದನ್ನು ದೃಢಪಡಿಸುವ ಸುದ್ದಿಯಾಗಿಲ್ಲಿ ನೋಡಬಹುದು. ಈ ದುಡಿಮೆಯ ಜಾಲದಲ್ಲಿ ಸಿಕ್ಕ ಮಹಿಳೆಯ ಗಳಿಕೆಯ ಪ್ರಶ್ನೆ ಬಂದಾಗ ಅದು ಉದ್ಯೋಗಸ್ಥ ಮಹಿಳೆ ಎಂದು ವ್ಯಾಖ್ಯಾನಿಸಬಹುದು. ಹಾಗೆ ಉದ್ಯೋಗದಲ್ಲಿ ತೊಡಗುವ ಮತ್ತು ಅದರ ಮೂಲಕ ವೇತನ/ಕೂಲಿ/ಗೌರವ ಧನ ಎಂಬಿತ್ಯಾದಿ ಪಡೆಯುವ ಮಹಿಳೆಯರ ಮೇಲಿನ ಹೊರೆ ಮತ್ತು ಹೊಣೆಯನ್ನು ಗಮನಿಸಿದರೆ ದೇಶದ ಸಂಪತ್ತಿನ ಸೃಷ್ಟಿಗೆ ಅವರ ಕೊಡುಗೆಯನ್ನು ಊಹಿಸಬಹುದು.

ಮಹಿಳಾ ದಿನ ಓಡೋಡಿ ಬರುತ್ತಿದೆ.:

ಇನ್ನೇನು ಅಂತರ ರಾಷ್ಟ್ರೀಯ ಮಹಿಳಾ ದಿನ ಹತ್ತಿರ ಬಂತು. ಕಂಡು ಕೇಳದವರೆಲ್ಲ ಶುಭಾಶಯ ಕಳಿಸುವವರೆ, ಸ್ತ್ರೀ ಎಂದರೆ ಅಷ್ಟೇ ಸಾಕೆ ಎಂದು ನಮ್ಮ ಮಾತೃತ್ವವನ್ನು, ವಿಶಾಲ ಹೃದಯವನ್ನು ಇನ್ನಷ್ಟು ವೈಭವೀಕರಿಸಿ ನಮ್ಮನ್ನು ನಾವೇ ಮರೆತು ಓಲಾಡುವಂತೆ ಮಾಡುವ ʼಸಹೃದಯಿಗಳುʼ, ಈ ದಿನವನ್ನೂ ತಮ್ಮ ಲಾಭ ಹೆಚ್ಚಿಸುವ ಶುಭದಿನವನ್ನಾಗಿ ಮಾರ್ಪಡಿಸಿಕೊಳ್ಳಲು ತರಹೇವಾರಿ ಸ್ಕೀಂಗಳನ್ನು ಘೋಷಿಸುವ ಕಾರ್ಪೊರೆಟ್‌ ಜಗತ್ತು, ಮಹಿಳೆಯರ ನೈಜ ಅಭಿವೃದ್ದಿಯೇನೂ ಆದ್ಯತೆಯಾಗಿ ಹೊಂದದಿದ್ದರೂ ಮಹಿಳಾ ಅಭಿವೃದ್ದಿ ಅಥವಾ ಕಲ್ಯಾಣ  ಎಂದೇ ಹೆಸರು ಹೊತ್ತಿರುವ ಇಲಾಖೆ ಈ ಎಲ್ಲ ಕಡೆ ಸಡಗರ ಸಂಭ್ರಮ. ಅಸಲಿ ಸಂಗತಿ ಏನೆಂದರೆ ಬಹುತೇಕ ಈ ಯಾರಿಗೂ ಅಂತರ ರಾಷ್ಟ್ರೀಯ ಮಹಿಳೆಯರ ದಿನದ ನಿಜ ಚರಿತ್ರೆಯ ಗಂಧವೂ ಗೊತ್ತಿರುವುದಿಲ್ಲ ಎಂಬುದು ಕೂಡ ಸತ್ಯ. ಏನೇ ಇರಲಿ ವಿಶ್ವ ಸಂಸ್ಥೆಯ ಕರೆಯ ಮೇರೆಗೆ ೧೯೭೫ರಿಂದ ಬಹುತೇಕ ರಾಷ್ಟ್ರಗಳು ಈ ದಿನವನ್ನು ಆಚರಿಸುತ್ತಿವೆ ಎಂಬುದು ದಾಖಲಿಸಬೇಕಾದ ಸಂಗತಿ.

ಇದನ್ನು ಓದಿ: ಕಾರ್ಖಾನೆಗಳಲ್ಲಿ ಕಾರ್ಮಿಕರ ದುಡಿಮೆಯ ಅವಧಿ 9 ರಿಂದ 12 ಗಂಟೆಗೆ ಹೆಚ್ಚಳ; ಮಸೂದೆ ಅಂಗೀಕರಿಸಿದ ರಾಜ್ಯ ಸರ್ಕಾರ

ಮಹಿಳಾ ದಿನಕ್ಕೆ ಕಹಿಬೇವು ನೀಡಿದ ಬೊಮ್ಮಾಯಿ ಸರಕಾರ:

ಈ ದಿನದ ಮಹತ್ವವನ್ನು ನಾವು ಮರೆಯುವುದಿಲ್ಲ. ಮಹಿಳೆಯರು ತಮ್ಮ ದುಡಿಮೆಯ ಅವಧಿಯನ್ನು ವೈಜ್ಞಾನಿಕವಾಗಿ ೮ ಘಂಟೆಗಳಿಗೆ ನಿಗದಿ ಪಡಿಸಬೇಕೆಂಬ ಅತಿ ಮುಖ್ಯ ಅಂಶವೂ ಸೇರಿದಂತೆ ಹಲವು ಒತಾಯಗಳನ್ನು ಮುಂದಿಟ್ಟು ಜಯ ಸಾಧಿಸಿದ ಚಾರಿತ್ರಿಕ ದಿನವದು. ಈ ವರ್ಷದ ಈ ದಿನಕ್ಕೆ ಕರ್ನಾಟಕ ಸರಕಾರದ ಭರ್ಜರಿ ಕೊಡುಗೆ ಈಗಿರುವ ೮ ಘಂಟೆಗಳ ದುಡಿತದ ಅವಧಿಯನ್ನು ೧೨ ಕ್ಕೆ ಏರಿಸಿರುವುದು. ಅಷ್ಟೇ ಅಲ್ಲ ʼಕಾರ್ಖಾನೆಗಳಲ್ಲಿ ಕೆಲಸಗಾರರಿಗೆ ಯಾವುದೇ ಮಧ್ಯಂತರವಿಲ್ಲದೇ ೬ ಘಂಟೆಗಳ ವರೆಗೆ ವಿಸ್ತರಿಸಲೂ ಅವಕಾಶ ನೀಡಲಾಗಿದೆ. ಈ ಅಯ್ಕೆಯನ್ನು ಒಪ್ಪಿಕೊಂಡರೆ ೬ ಘಂಟೆಯ ನಂತರ ಹೆಚ್ಚುವರಿ ಕೆಲಸ ಮಾಡಿದರೂ ದುಪ್ಪಟ್ಟು ದರದ ಮಜೂರಿ ನೀಡಬೇಕಾಗುತ್ತದೆ. ಎಂಬಿತ್ಯಾದಿ ಗೊಂದಲಮಯ ಅಂಶಗಳಿವೆ. ದೈನಂದಿನ ಬದುಕು ನಡೆಸುವುದು ದುಸ್ತರ ಎಂಬ ಸ್ಥಿತಿಗೆ ದುಡಿದುಣ್ಣುವ ಜನರನ್ನು ನೂಕಿಯಾಗಿದೆ. ಈಗ ಮೂರು ಕಾಸಿನಾಸೆಗೆ ಮತ್ತಷ್ಟು ದುಡಿಯುವ ಮತ್ತು ಅದರ ಪರಿಣಾಮವಾಗಿ ಅನಾರೋಗ್ಯಕ್ಕೆ ತುತ್ತಾಗಿ ಗಳಿಸಿದ ಮೂರುಕಾಸು ವೈದ್ಯರಿಗೆ ಸುರಿಯಲೂ ಸಾಲದಾಗಿ ಸಾಲದ ಶೂಲಕ್ಕೆ ಮತ್ತೆ ಬಿದ್ದು ಏಳಲಾರದ ದಯನೀಯತೆಗೆ ತಳ್ಳುವ ಹುನ್ನಾರಿದೆ ಇಲ್ಲಿ. ಇದು ಜಂಡರ್‌ ನ್ಯೂಟ್ರಲ್‌ ಆಗಿದೆಯಾದರೂ ಮಹಿಳೆಯರ ಸ್ಥಿತಿಯತ್ತ ಒಮ್ಮೆ ಹೊರಳಿ ನೋಡಿದರೆ ಇದರ ಪರಿಣಾಮಗಳು ತೀರಾ ವಿಪರೀತವಾಗಿ ತೋರುತ್ತದೆ.

ಏರಿದ ನಿರುದ್ಯೋಗ ಕುಸಿದ ಬದುಕು::

ಅಧಿಕೃತ ಅಂಕಿ ಅಂಶಗಳನ್ನು ಪ್ರಕಟಿಸುವ ಹಲವು ವರದಿಗಳು ಇತ್ತೀಚಿನ ವರ್ಷಗಳಲ್ಲಿಯೇ ಅತಿ ಹೆಚ್ಚು ನಿರುದ್ಯೋಗದ ಸಮಸ್ಯೆಯನ್ನು ದೇಶ ಎದುರಿಸುತ್ತಿದೆ ಎಂದು ತೋರಿಸಿವೆ. ಮಹಿಳೆಯರು ಅಲ್ಲಿ ಹೆಚ್ಚು ಬಾದಿತರು ಎಂಬುದೂ ಅಲ್ಲಿ ದೃಢಪಟ್ಟಿದೆ. ೨೦೦೮-೦೯ರಲ್ಲಿಯೇ ಸಂಭವಿಸಿದ ತೀವ್ರ ಆರ್ಥಿಕ ಕುಸಿತದ ಸಂದರ್ಭದಿಂದಲೂ ಮಹಿಳೆಯರ ನಿರುದ್ಯೋಗದ ಪ್ರಮಾಣದಲ್ಲಿ ತೀವ್ರ ಏರಿಕೆಯಾಗಿದೆ ಎನ್ನುತ್ತವೆ ವರದಿಗಳು. ಇವು ವಿಶ್ವದ ಹಲವು ರಾಷ್ಟ್ರಗಳಲ್ಲಿರುವ ಸನ್ನಿವೇಶಗಳು. ಅದರಲ್ಲಿಯೂ ಭಾರತದಲ್ಲಿ ಇದರ ತೀವ್ರತೆಯನ್ನು ನಾವು ಕಾಣುತ್ತಿದ್ದೇವೆ. ಕೋವಿಡ್‌ ಸಾಂಕ್ರಾಮಿಕದ ನಂತರವಂತೂ ಈ ಪೃವೃತ್ತಿಯಲ್ಲಿ ಇನ್ನಷ್ಟು ಏರುಗತಿ ಕಂಡುಬಂತು. ವಿಶ್ವಬ್ಯಾಂಕ್‌ ನ ಇತ್ತೀಚಿನ ಸಮೀಖ್ಷೆಯ ಪ್ರಕಾರ ೨೦೧೦ ರಿಂದ ೨೦೨೨ ರ ನಡುವೆ ದೇಶದ ಒಟ್ಟು ಕಾರ್ಮಿಕ ಬಲದಲ್ಲಿ ಮಹಿಳಾ ದುಡಿಮೆಗಾರರ ಸಂಖ್ಯೆ ಈ ಹಿಂದಿನ ೨೬% ನಿಂದ ೧೯%ಕ್ಕೆ ಇಳಿದಿದೆ. ದೇಶದ ಜನಸಂಖ್ಯೆಯ ೪೦% ದುಡಿಮೆಗೆ ಅರ್ಹರಾದ ಜನರಿದ್ದಾರೆ. ೨೦೨೦-೨೦೨೧ರಲ್ಲಿ (ಜುಲೈನಿಂದ ಜೂನ್‌ ವರೆಗೆ) ಕೆಲಸ ಮಾಡಲು ಸಿದ್ಧರಿರುವ ಕಾರ್ಮಿಕ ಬಲದ ೭.೫% ಜನರು ನಿರುದ್ಯೋಗಿಗಳಾಗಿದ್ದಾರೆ. ಎಂದರೆ ಸುಮಾರು ೪೨ ಮಿಲಿಯನ್ ಜನರಿಗೆ ಉದ್ಯೋಗವಿಲ್ಲ ಎಂದು ಇದು ಸೂಚಿಸುತ್ತದೆ. (ನಿಯತಕಾಲಿಕ ಕಾರ್ಮಿಕ ಶಕ್ತಿ ಸಮೀಕ್ಷೆ (periodic labour force survey)  ಯ ಪ್ರಕಾರ ಸಮೀಕ್ಷೆಯ ದಿನಾಂಕದ ಹಿಂದಿನ ಏಳುದಿನಗಳಲ್ಲಿ ಒಬ್ಬ ವ್ಯಕ್ತಿಯು ಒಂದು ದಿನ ಕನಿಷ್ಟ ಒಂದು ಘಂಟೆ ಕೆಲಸ ಮಾಡಿದರೆ ಉದ್ಯೋಗಿ ಎಂದು ವ್ಯಾಖ್ಯಾನಿಸಲಾಗಿದೆ.) ಒಂದು ವರ್ಷದಲ್ಲಿ ಒಬ್ಬ ವ್ಯಕ್ತಿಯ ೧೮೦ ಅಥವಾ ಅದಕ್ಕಿಂತ ಹೆಚ್ಚು ದಿನಗಳ ಚಟುವಟಿಕಯನ್ನು ಆಧರಿಸಿ ನೋಡಿದರೆ ಜನಸಂಖ್ಯೆಯ ೪.೨% ಅಥವಾ ೨೫ ಮಿಲಿಯನ್‌ ಜನರು ನಿರುದ್ಯೋಗಿಗಳು ಎನ್ನುತ್ತದೆ ಆ ಸಮೀಕ್ಷೆ.

ಇದನ್ನು ಓದಿ: ದಿನದ ಕೆಲಸದ ಅವಧಿ 3 ಗಂಟೆ ಹೆಚ್ಚಳ: ಮಾರ್ಚ್ 1 ರಂದು ರಾಜ್ಯವ್ಯಾಪಿ ಪ್ರತಿಭಟನೆಗೆ ಸಿಐಟಿಯು ಕರೆ

ನಿರುದ್ಯೋಗದ ಮಹಿಳೀಕರಣ:

ಹೀಗಿರುವಾಗ ಭಾರತದಲ್ಲಿ ಕಳೆದ ಇಡೀ ದಶಕದಲ್ಲಿಯೇ ಮಹಿಳೆಯರ ನಿರುದ್ಯೋಗದ ಪ್ರಮಾಣ ಹೆಚ್ಚುತ್ತಲೇ ಇದೆ. ಕೊವಿಡ್‌ ಸಾಂಕ್ರಾಮಿಕದಲ್ಲಿ ಇದು ಇನ್ನಷ್ಟು ಹದಗೆಟ್ಟಿತು. ಕಾರ್ಮಿಕ ಶಕ್ತಿಯ ಸಮೀಕ್ಷೆಯಲ್ಲಿಯೂ ದೃಢಪಟ್ಟ ಹಾಗೆ ಮಹಿಳಾ ಕಾರ್ಮಿಕರ ಭಾಗವಹಿಸುವಿಕೆ ಪುರುಷರಿಗಿಂತ ಕಡಿಮೆಯಾಗಿದೆ. ದುಡಿಯುವ ವಯೋಮಾನದ ಮಹಿಳೆಯರ ಉದ್ಯೋಗದಲ್ಲಿ ಪಾಲ್ಗೊಳ್ಳುವಿಕೆಯ ಪ್ರಮಾಣ ೨೦೧೯-೨೦ ರಲ್ಲಿ ೨೨.೨% ಇತ್ತು. ೨೦೨೧ರ ತ್ರೈಮಾಸಿಕದಲ್ಲಿ ಅದು ೧೬.೯% ಆಯಿತು ಎನ್ನುತ್ತದೆ ಆ ಸಮೀಕ್ಷೆಯ ವರದಿ. ಅದರ ಪ್ರಕಾರವೇ ದುಡಿಮೆಯ ವಯೋಮಾನದ ಕೇವಲ ೧೮.೬% ಮಹಿಳೆಯರು ಮಾತ್ರ ದುಡಿಮೆಯಲ್ಲಿ ತೊಡಗುತ್ತಾರೆ ಎನ್ನುತ್ತದೆ. ಇದು ಪುರುಷರಿಗಿಂತ ಮೂರು ಪಟ್ಟು ಕಡಿಮೆ ಎಂದು ೨೦೨೦ ರ  ವರದಿ ಹೇಳುತ್ತದೆ.೨೦೧೦ ರಿಂದ ೨೦೨೨ ರ ನಡುವೆ ಒಟ್ಟು ದುಡಿಯುವ ಜನರ ಪ್ರಮಾಣದಲ್ಲಿ ಮಹಿಳಾ ಉದ್ಯೋಗಿಗಳ ಬಲ ೨೬%ನಿಂದ ೧೯% ಗೆ ಇಳಿದಿದೆ ಎಂದು ವರದಿ ಉಲ್ಲೇಖಿಸಿದೆ.

ವಿಶ್ವ ಬ್ಯಾಂಕ್‌ ಪ್ರಕಾರ  ಭಾರತದಲ್ಲಿ ಔಪಚಾರಿಕ ಉದ್ಯೋಗದಲ್ಲಿ ಮಹಿಳೆಯರ ಭಾಗವಹಿಸುವಿಕೆ ವಿಶ್ವದಲ್ಲೇ ಅತ್ಯಂತ ಕಡಿಮೆ. ಕೆಲವು ಅರಬ್‌ ದೇಶಗಳಲ್ಲಿ ಮಾತ್ರ ಇಂತಹ ದುಃಸ್ಥಿತಿ ಇದೆ. ಕೆಲಸದಲ್ಲಿ ತೊಡಗುವ ಮಹಿಳೆಯರೂ ಕೂಡಾ ಅತ್ಯಂತ ಕಡಿಮೆ ಕೂಲಿಗೆ, ಕನಿಷ್ಟ ಕೂಲಿಯ ಆಸುಪಾಸೂ ಸುಳಿಯಲಾರದಂತೆ, ಯಾವುದೇ ಸುರಕ್ಷಾ ಸೌಲಭ್ಯಗಳು ಲಭ್ಯವಿಲ್ಲದೇ, ರಜಾ ಸಾಮಾಜಿಕ ಭದ್ರತೆಗಳೂ ಸಿಗದೇ ಅತ್ಯಂತ ದಯನೀಯ ಸ್ಥಿತಿಯಲ್ಲಿ ಕೆಲಸ ಮಾಡುತ್ತಾರೆ.

ಇದನ್ನು ಓದಿ: ರಾಜಕೀಯ ಪಕ್ಷಗಳ ಚುನಾವಣಾ ಆಶ್ವಾಸನೆಗಳು: ಈಡೇರಿಕೆಗೆ ದಾರಿ ಯಾವುದಯ್ಯ?

ಗೃಹಕೃತ್ಯಗಳನ್ನು ದುಡಿಮೆಯ ಭಾಗವಾಗಿ ಪರಿಗಣಿಸದ ಸ್ಥಿತಿಯೂ ಇರುವುದರಿಂದ ಮತ್ತು ಹೊರಗಿನ ದುಡಿತದ ಅವಕಾಶಗಳೂ ಕ್ಷೀಣಿಸುತ್ತಿರುವುದರಿಂದ ದೇಶದ ಆರ್ಥಿಕತೆಗೆ ಮಹಿಳೆಯರ ಕೊಡುಗೆ ಶೂನ್ಯದತ್ತ ಸಾಗುತ್ತಿದೆ. ವಿದ್ಯಾವಂತ ಐವರು ಮಹಿಳೆಯರಲ್ಲಿ ಒಬ್ಬರು ಮತ್ತು ಮೂವರು ಯುವತಿಯರಲ್ಲಿ ಒಬ್ಬ ಯುವತಿ ಕೆಲಸಕ್ಕಾಗಿ ಹುಡುಕುತ್ತಿದ್ದರೂ ಕೆಲಸ ಸಿಗುತ್ತಿಲ್ಲ ಎಂಬುದು ವಾಸ್ತವ ಸಂಗತಿ. ಆದರೆ ಮಹಿಳೆಯರು ಕೆಲಸ ಮಾಡಲು ಬಯಸುತ್ತಿಲ್ಲ ಎಂದು ಸುದ್ದಿ ಹರಡಲಾಗುತ್ತಿದೆ. ಇದರ ಜೊತೆಗೆ ಮನುವಾದಿಗಳು ಹೆಣ್ಣು ಮಕ್ಕಳು ಕೌಟುಂಬಿಕ ಜವಾಬ್ದಾರಿ ನಿಭಾಯಿಸುತ್ತ ಮಕ್ಕಳನ್ನು ಹೆತ್ತುಕೊಂಡಿದ್ದರೆ ಸಾಕೆಂಬ ಮೌಲ್ಯಗಳನ್ನು ಬಿತ್ತುತ್ತಿರುವ ವಿಪರೀತಗಳಿವೆ, ಅವರಿಗೆ ಸಾಥ್‌ ಕೊಡುವ ಮುಸ್ಲಿಂ ಮೂಲಭೂತವಾದ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಕುತ್ತು ಬರುವ ರೀತಿ ರಿವಾಜುಗಳನ್ನು ಮುಂದಿಟ್ಟು ಕ್ಷುಲ್ಲಕ ರಾಜಕಾರಣ ಮಾಡುತ್ತಿದೆ. ಹೀಗೆ ಶಿಕ್ಷಣದಿಂಧ ವಂಚಿತರಾದ ಮುಸ್ಲಿಂ ಹೆಣ್ಣು ಮಕ್ಕಳು ಸಹಜವಾಗಿಯೇ ಗೃಹಾಧಾರಿತ ಅಥವಾ ಮನೆಗೆಲಸದಂತಹ ಕೆಲಸಗಳಿಗೆ ಅತ್ಯಂತ ಕಡಿಮೆ ಕೂಲಿಯ ದುಡಿಮೆಗೆ ದೂಡಲ್ಪಡುತ್ತಾರೆ. ಹೀಗೆ ವೇತನವಿಲ್ಲದೇ ದುಡಿಯುವ ಪ್ರಮಾಣವನ್ನು ಐ.ಎಲ್.ಓ ಕೂಡಾ ಗುರುತಿಸಿದೆ. ೨೦೧೮ ರ ಅದರ ವರದಿಯಂತೆ ಏಷ್ಯಾ ಫೆಸಿಪಿಕ್‌ ರಾಷ್ಟ್ರಗಳಲ್ಲಿ ಮಹಿಳೆಯರು ಪುರುಷರಿಗಿಂತ ೪.೧% ಪಟ್ಟು ಹೆಚ್ಚು ಸಮಯವನ್ನು ವೇತನವಿಲ್ಲದ ಆರೈಕೆ ಕೆಲಸಗಳಲ್ಲಿ ಕಳೆಯುತ್ತಾರೆ. ೬೪ ದೇಶಗಳ ಅಂಕಿ ಅಂಶಗಳು ದಿನಕ್ಕೆ ೧೬.೪ ಶತಕೋಟಿ ಘಂಟೆಗಳಷ್ಟು ಹಣ ಪಡೆಯದ ಆರೈಕೆ ಕೆಲಸಗಳಲ್ಲಿ ಮಹಿಳೆಯರು ತೊಡಗಿರುತ್ತಾರೆ ಎಂದು ಗುರುತಿಸಿದೆ. ಎಂದರೆ ಯಾವುದೇ ಸಂಭಾವನೆ  ಇಲ್ಲದೇ ದಿನಕ್ಕೆ ೮ ಘಂಟೆಗಳ ಕೆಲಸ ಮಾಡುವ ೨ ಶತಕೋಟಿ ಜನರಿಗೆ ಇದು ಸಮಾನವಾಗಿದೆ ಎಂದರ್ಥ. ಒಂದು ಘಂಟೆಯ ಕನಿಷ್ಟ ಕೂಲಿಯ ಆಧಾರದಲ್ಲಿ ಅದನ್ನು ಮೌಲ್ಯೀಕರಿಸಿದರೆ ಅವು ಜಾಗತಿಕ ಜಿ.ಡಿ.ಪಿ.ಯ ೯% ಅಥವಾ ೧೧ ಟ್ರಿಲಿಯನ್‌ ಅಮೇರಿಕನ್‌ ಡಾಲರ್‌ ಆಗುತ್ತದೆ. ಇದು ಜಾಗತಿಕ ಚಿತ್ರಣ. ಈ ಮೇಲೆ ನಾವು ನೋಡಿದಂತೆ ಭಾರತದ ಮಹಿಳೆಯರು ದುಡಿಮೆಯ ಕ್ಷೇತ್ರದಿಂದ ದೊಡ್ಡ ಪ್ರಮಾಣದಲ್ಲಿ ಹೊರತಳ್ಳಲ್ಪಟ್ಟಿದ್ದಾರೆ. ಆದ್ದರಿಂದಲೇ ಭಾರತದಲ್ಲಿ ವೇತನ/ಕೂಲಿ ಇಲ್ಲದೆಯೇ ಕೆಲಸ ಮಾಡುವ ಪ್ರಮಾಣವು ಹಿಂದಿಗಿಂತ ಹೇಚ್ಚಾಗಿದೆ ಎಂದು ಅರ್ಥ ಮಾಡಿಕೊಳ್ಳಬಹುದು.

ನಿರುದ್ಯೋಗದ ದವಡೆಗೆ ಸಿಕ್ಕ ಯುವ ಸಂಪನ್ಮೂಲ:

ಈ ಸಧ್ಯದ ಸ್ಥಿತಿಯಲ್ಲಿ ಸಾಮಾನ್ಯವಾಗಿ ಉದ್ಯೋಗಗಳ ಕೊರತೆ ಮಾತ್ರವಲ್ಲ ವಿಶೇಷವಾಗಿ ಯುವಜನರಲ್ಲಿ ನಿರುದ್ಯೋಗದ ಪ್ರಮಾಣ ಹೆಚ್ಚಿರುವುದು ನಿಜಕ್ಕೂ ಆತಂಕಕಾರಿ ಸಂಗತಿ. ಈ ನಿರುದ್ಯೋಗೀ ಯುವ ಜನರಲ್ಲಿ ಯುವತಿಯರೇ ಹೆಚ್ಚು. ವಿಶ್ವ ಬ್ಯಾಂಕ್‌ ನ ಮಾಜಿ ಮುಖ್ಯ ಅರ್ಥಶಾಸ್ತ್ರಜ್ಞರಾದ ಕೌಶೀಕ್‌ ಬಸು ರವರ ಮಾತಿನಲ್ಲಿ ಹೇಳುವುದಾದರೆ ʼಭಾರತದ ದೊಡ್ಡ ಸವಾಲೆಂದರೆ ಯುವ ಜನರ ನಿರುದ್ಯೋಗ ಅದು ೨೪%ಗಿಂತ ಹೆಚ್ಚಿದ್ದು ವಿಶ್ವದಲ್ಲಿಯೇ ಅತಿ ಹೆಚ್ಚುʼ.

ಇಂತಹ ಪರಿಸ್ಥಿತಿ ಇರುವಾಗ ಕರ್ನಾಟಕ ಸರಕಾರ ದುಡಿಮೆಯ ಕ್ಷೇತ್ರಕ್ಕೆ ಬಲ ತುಂಬುವ, ಆರ್ಥಿಕ ಚಟುವಟಿಕೆಗಳು ಮತ್ತು ಉದ್ಯೋಗಾವಕಾಶ ಸೃಷ್ಟಿಸುವ! ಎಂದು ಸಮರ್ಥನೆ ಮಾಡಿಕೊಳ್ಳುತ್ತ ದಿನದ ದುಡಿತದ ಅವಧಿಯನ್ನು ೪ ಘಂಟೆ ಹೆಚ್ಚಿಸಿದೆಯಲ್ಲದೇ, ವಿಶ್ರಾಂತಿಯೂ ಇಲ್ಲದೆಯೇ ನಿರಂತರ ೬ ಘಂಟೆಗಳ ದುಡಿತದ ಅವಕಾಶದ ಪ್ರಸ್ತಾಪವನ್ನೂ ಇಟ್ಟಿದೆ. ಹಾಗೆ ನಿರಂತರವಾಗಿ ಕೆಲಸ ಮಾಡಲು ಬಹುಷಃ ಯಂತ್ರ ಮಾನವರಿಗೂ ಸಾಧ್ಯವಾಗಲಿಕ್ಕಿಲ್ಲ. ಮನೆಯೊಳಗೆ ಅಡುಗೆ ಒಲೆ ಉರಿಯಬೇಕೆಂದರೆ ಎಂತಹ ಸ್ಥಿತಿಯಲ್ಲಿಯೂ ಕೆಲಸ ಮಾಡಲು ಸಿದ್ಧರಾಗಬೇಕಾದ ಅನಿವಾರ್ಯತೆಯಲ್ಲಿ ಇರುವ ಮಹಿಳೆಯರು ಈ ಹೆಚ್ಚುವರಿ ಕೆಲಸದ ಅವಧಿಗಾಗಿ ಸಿಗಬಹುದಾದ ಹೆಚ್ಚುವರಿ ವೇತನದ ಆಸೆಗೆ ಹಾಗೊಮ್ಮೆ ಕೆಲಸಕ್ಕೆ ತೊಡಗಿಕೊಂಡರೆ ಅದು ಅವರ ಮೇಲೆ ಎಂತಹ ಪರಿಣಾಮ ಬೀರಬಹುದು. ಗಾರ್ಮೆಂಟ್ಸ್‌ ನಂತಹ ಕ್ಷೇತ್ರಗಳಲ್ಲಿ ಈಗಾಗಲೇ ಡೆಡ್‌ ಲೈನ್‌,ಡಿಮ್ಯಾಂಡ್‌ ಪೂರೈಕೆ ಇತ್ಯಾದಿಗಳ ಕಾರಣಕ್ಕಾಗಿ ಸಾಧ್ಯವಿದ್ದರೂ ಇಲ್ಲದಿದ್ದರೂ ಓ.ಟಿ ಮಾಡಲೇಬೇಕಾದ ಒತ್ತಡವಿದೆ. ಈಗ ಅಧಿಕೃತವಾಗಿಒಯೇ ೧೨ ಘಂಟೆಗಳ ಕೆಲಸ ಎಂದು ಬಂದ ಮೇಲೆ ಅನಿವಾರ್ಯವಾಗಿ ಯಂತ್ರಗಳ ಮೇಲೆ ಕೆಲಸ ಮಾಡುವ ಒತ್ತಾಯಕ್ಕೆ ಒಳಗಾಗುತ್ತಾರೆ. ಅದರ ನೇರ ಪರಿಣಾಮ ಅವರ ಕಣ್ಣುಗಳ ಶಕ್ತಿ ಕ್ಷೀಣಿಸುತ್ತವೆ. ಬೆನ್ನು ಕುತ್ತಿಗೆಗಳ ಸ್ನಾಯುಗಳು ದುರ್ಬಲಗೊಳ್ಳುತ್ತವೆ. ಸಹಜ ಜೈವಿಕ ಕ್ರಿಯೆಗಳಾದ ಮುಟ್ಟು, ಬಸಿರು, ಮುಟ್ಟು ನಿಲ್ಲುವಾಗಿನ ಹಾರ್ಮೋನಲ್‌ ಏರು ಪೇರುಗಳು, ಮಾನಸಿಕ ಒತ್ತಡಗಳೂ ತೀವ್ರವಾಗಿ ಬಾದಿಸುತ್ತವೆ. ಇದರ ಜೊತೆಯೇ ಕೌಟುಂಬಿಕ ಕೆಲಸದ ಒತ್ತಡಗಳು ಬಹತೇಕ ತಪ್ಪಿಸಿಕೊಳ್ಳುವ ಸಾಧ್ಯತೆಗಳೇ ಇಲ್ಲದ ಮಹಿಳೆಯರೇ ಹೆಚ್ಚಿದ್ದು ಅವರ ಬದುಕು ಅಕ್ಷರಶಃ ನರಕವಾಗಲಿದೆ. ಇದು ಕೇವಲ ಗಾರ್ಮೆಂಟ್ಸ್‌ ಮಾತ್ರವಲ್ಲ ಎಲ್ಲ ವಿಭಾಗದ ಮಹಿಳಾ ಕಾರ್ಮಿಕರು, ನೌಕರರನ್ನು ಬಾಧಿಸುವ ಪ್ರಶ್ನೆಯಾಗಲಿದೆ. ಹಾಗಾಗಿ ಈಗಾಗಲೇ ಉದ್ಯೋಗದ ಕ್ಷೇತ್ರದಲ್ಲಿ ಕ್ಷೀಣಿಸುತ್ತಿರುವ ಮಹಿಳೆಯರ ಪಾಲ್ಗೊಳ್ಳುವಿಕೆ ಇನ್ನಷು ಅಧೋಗತಿಗೆ ಇಳಿಯಲಿದೆ.

ಉದ್ಯೋಗಾವಕಾಶ ಹೆಚ್ಚಳವೋ ಮಾಲೀಕರ ಥೈಲಿ ತುಂಬುವ ಆತುರವೋ:

ಸರಕಾರ ಹೇಳಿಕೊಂಡಂತೆ ಇದು ಉದ್ಯೋಗಾವಕಾಶ ಹೆಚ್ಚಿಸುವಿಕೆಯಲ್ಲ ಬದಲು ಚುನಾವಣೆಯ ಹೊಸ್ತಿಲಲ್ಲಿ ಮಾಲಿಕರಿಗೆ ಮೃಷ್ಟಾನ್ನ ಭೋಜನ ಉಣಿಸುವ ಮತ್ತು ಅದಕ್ಕೆ ʼಯಥಾನುಶಕ್ತಿʼ ಪ್ರತಿಫಲ ಪಡೆಯುವ ಸಂಚು ಇದು. ಕೊವಿಡ್‌ ಸಂಕಷ್ಟದ ಹೊಡೆತದಿಂದ ದುಡಿಯುವ ಜನ ಇನ್ನೂ ಚೇತರಿಸಿಕೊಂಡಿಲ್ಲದಾಗ, ಅದರ ದೊಡ್ಡ ಪೆಟ್ಟು ಮಹಿಳಾ ಸಮೂಹಕ್ಕೆ ಬಿದ್ದಿರುವಾಗ ಅದಕ್ಕನುಗುಣವಾಗಿ ಸಹಾಯ ಹಸ್ತ ಚಾಚುವ ಬದಲು, ತನ್ನ ಅವಧಿಯ ಕೊನೆಯ ಅಧಿವೇಶನದ ಬಹುತೇಕ ಕೊನೆಯಲ್ಲಿ ಬೊಮ್ಮಾಯಿ ಸರಕಾರ ಇಟ್ಟಿದ್ದು ರಾಜ್ಯದ ದುಡಿಯುವ ಜನರ ಅದರಲ್ಲಿಯೂ ಮಹಿಳೆಯರ ಬದುಕಿಗೆ ಉರಿಯುವ ಕೊಳ್ಳಿಯನ್ನು.

ಶತಮಾನದ ಹಿಂದೆ ದುಡಿಯುವ ಮಹಿಳೆಯರೇ ಬೀದಿಗಿಳಿದು ಹೋರಾಟ ಮಾಡಿ ಗಳಿಸಿಕೊಂಡ ೮ ಘಂಟೆಯ ಕೆಲಸದ ಅವಧಿಯ ಹಕ್ಕು ಹೀಗೆ ಒಂದು ಸೋ ಕಾಲ್ಡ್‌ ಪ್ರಜಾಪ್ರಭುತ್ವ ದೇಶದಲ್ಲಿ ವಿಧಾನಸಭೆಯಲ್ಲಿ ಮಸೂದೆಯಾಗಿ ಮಂಡಿತವಾಗಿ ಅಂಗೀಕಾರಗೊಳ್ಳುತ್ತದೆ. ಅದೂ ಬೆಳಗಾದರೆ ಬರುವ ಅಂತರ ರಾಷ್ಟ್ರೀಯ ಮಹಿಳಾ ದಿನದ ಮುನ್ನಾದಿನ.

ಪ್ರಜಾಪ್ರಭುತ್ವದಲ್ಲಿ ನಮಗಿರುವ ಒಂದು ಸಶಕ್ತ ಅಸ್ತ್ರವೆಂದರೆ ಮತದಾನ. ಜನರ ಬದುಕಿಗೆ ಕೊಳ್ಳಿ ಇಟ್ಟು ಮಾಲಿಕರು ಮತ್ತು ಉಳ್ಳವರ ಥೈಲಿ ತುಂಬಿಸುವ ಅಧಿಕಾರ ದಾಹಿ, ಮನುವಾದೀ ಬಿ.ಜೆ.ಪಿ.ಯನ್ನು ಸೋಲಿಸಿ ಮೂಲೆಯಲ್ಲಿ ಕೂರಿಸುವುದೊಂದೇ ದಾರಿ. ಈಗ ಮರೆತರೆ ಮತ್ತೆ ಅವಕಾಶ ದೊರೆಯದಾದೀತು. ಎಚ್ಚರದಲ್ಲಿರೋಣ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *