ದುಡಿಮೆ ಮಾಡುವ ಹಂಬಲವಿದ್ದರೂ ಚೈತನ್ಯ ತುಂಬವವರು ಯಾರು..?

ಜ್ಯೋತಿ ಶಾಂತರಾಜು

‘ಆಳಾಗಿ ದುಡಿ ಅರಸನಾಗಿ ಉಣ್ಣು’ ಎಂಬ ಗಾದೆಯಂತೆ ದುಡಿದೇ ಉಣ್ಣಬೇಕೆಂಬ ಆಸೆಯಿದೆ ಆದರೆ ಯಾರಿಗೂ ಈ ಅರಸನನ್ನು ಆಳಾಗಿ ದುಡಿಸಿಕೊಳ್ಳುವ ಛಾತಿ ಇಲ್ಲದಾಗಿದೆ. ಹೌದು ಇವರ ಹೆಸರೇ ಅರಸು. ಆದರೆ ಈ ಅರಸನಿಗೆ ರಾಜ್ಯವಿಲ್ಲ ಅರಮನೆಯಿಲ್ಲ. ನ್ಯೂನ್ಯತೆ ಮೀರಿ ದುಡಿಯುತ್ತೇನೆಂದರೆ ಕೆಲಸ ಕೊಡುವವರಿಲ್ಲ.

ಪ್ರಯತ್ನ ಮಾಡಿದರೆ ಯಾವುದೂ ಅಸಾಧ್ಯವಲ್ಲ ಎನ್ನುವ ಅರಸು ಈಗ ವಾಸವಿರುವುದು ಬೆಂಗಳೂರಿನ ಬಾಗಲೂರು ಕ್ರಾಸ್,  ದ್ವಾರಕಾನಗರದ ಹತ್ತಿರ. ವಾಸುದೇವ ಮತ್ತು ಮೇರಿಯಮ್ಮ ದಂಪತಿಯ ಆರು ಜನರು ಮಕ್ಕಳಲ್ಲಿ ಮೊದಲನೇ ಮಗುವಾಗಿ ಹುಟ್ಟಿದ್ದು ಅರಸು ಅವರು. ‘ನಾನು ಕಷ್ಟಪಟ್ಟು ಕೆಲಸ ಮಾಡುತ್ತೇನೆ ಎಂದರೂ ಯಾರೂ ಕೆಲಸ ಕೊಡುತ್ತಿಲ್ಲ. ತರಕಾರಿ  ಹೆಚ್ಚುವುದು, ಹೋಟೆಲಿನಲ್ಲಿ ಸರ್ವಿಸ್ ಮಾಡುವುದು, ಪಾತ್ರೆ ತೊಳೆಯುವುದು ಮಾಡುತ್ತೇನೆ. ಜೊತೆಗೆ ರೋಟಿ, ಪೂರಿ, ದೋಸೆ, ವಡೆ, ಬಜ್ಜಿ ಮತ್ತು ಆಮ್ಲೆಟ್, ಕಬಾಬ್ ಹಾಕುವುದು, ಬಿರಿಯಾನಿ ಈ ತರಹದ ಎಲ್ಲಾ ಅಡುಗೆ ಕೆಲಸವನ್ನು ಕಲಿತಿದ್ದೇನೆ’ ಎನ್ನುವ ಇವರ ಜೀವನವನ್ನು ಅವರ ಮಾತಲ್ಲೇ ಓದಿಕೊಳ್ಳಿ. ‘ನಮ್ಮಮ್ಮ ಹೇಳ್ತಿದ್ರು ನಾನು ಹುಟ್ಟಿ ಮೂರು ತಿಂಗಳ ಮಗು ಇರುವಾಗ ಯಾವುದೋ ಜ್ವರ ಬಂದು ಕಾಲಿನ ನರ ಹಾಗೂ ಸೊಂಟ ದುರ್ಬಲವಾದವು. ಸ್ವಲ್ಪ ದೂರ ನಡೆದುಕೊಂಡು ಹೋಗುವಾಗ ಒಂದು ಸಣ್ಣ ಕಲ್ಲನ್ನು ಎಡವಿದರೂ ಬಿದ್ದುಬಿಡುತ್ತೇನೆ. ದೇಹವನ್ನು ಬ್ಯಾಲೆನ್ಸ್ ಮಾಡಲು ಸಾಧ್ಯವಾಗುವುದಿಲ್ಲ. ಆಗ ಬೆಲೆ ಕಡಿಮೆ ಇತ್ತು. ಹೊಟ್ಟೆ ತುಂಬ ಊಟ ಸಿಕ್ತಿತ್ತು. ಈಗ ನಾನು ಕೆಲಸ ಮಾಡ್ತೇನೆ ಅಂದರೂ ಯಾರೂ ಕೆಲಸ ಕೊಡುತ್ತಿಲ್ಲ. ಭಿಕ್ಷೆ ಬೇಡಿ ತಿನ್ನಲು ಮನಸ್ಸು ಒಪ್ಪುವುದಿಲ್ಲ. ಭಿಕ್ಷೆ ಬೇಡಿ ಮೂರು ಹೊತ್ತು ತಿನ್ನುವುದಕ್ಕಿಂತ ಕಷ್ಟಪಟ್ಟು ದುಡಿದು ಒಂದು ಹೊತ್ತು ತಿನ್ನೋಣ’ ಎನ್ನುತ್ತಾರೆ ಅರಸು.

‘ನಾನು ಓದಿಲ್ಲ. ನಾನು ನನ್ನ ಎಂಟನೇ ವಯಸ್ಸಿನಿಂದ ಹೋಟೆಲ್ ಗಳಲ್ಲಿ ಪಾತ್ರೆ ತೊಳೆಯುವ ಕೆಲಸ ಮಾಡಿಕೊಂಡು ಬದುಕು ಸಾಗಿಸಿಕೊಂಡು ಬಂದವನು. ರಜೆ ಇದ್ದಾಗ ಮನೆಯಿಂದ ಹೊರಗೆ ಬರುತ್ತಿದ್ದೆ. ಕೆಲವರು ಚೆನ್ನಾಗಿ ಮಾತನಾಡಿಸುತ್ತಿದ್ದರು, ಊಟ ಕೊಡುತ್ತಿದ್ದರು. ಕೆಲವರು ನಮ್ಮನೆ ಹತ್ತಿರ ಕುಂಟ್ಕೊಂಡ್ ಕುಂಟ್ಕೊಂಡ್ ಬರ್ತಾನೆ ಅಂತ ಬೇಜಾರ್ ಮಾಡಿಕೊಳ್ಳುತ್ತಿದ್ದರು. ನಾನು ಬರುತ್ತಿದ್ದೇನೆ ಅಂತ ಗೊತ್ತಾಗುವಷ್ಟರಲ್ಲಿ ಮನೆ ಬಾಗಿಲು ಹಾಕುತ್ತಿದ್ದರು. ಕುಂಟ ಅಂತ ರೇಗಿಸುತ್ತಿದ್ದರು. ನನ್ನ ನೋಡಿ ನಗುತ್ತಿದ್ದರು. ನಾನೇನಾದರೂ ಅವರ ವಿರುದ್ಧ ಪ್ರಶ್ನೆ ಮಾಡಿದರೆ ಏನಾದರೂ ಕೇಳಿದರೆ ನೋಡು ಕುಂಟ ಆದರೂ ಎಷ್ಟು ಜಂಬ ಅಂತ  ಅಣಕಿಸುತ್ತಿದ್ದರು. ಹಾಗಾಗಿ ಮರು ಪ್ರಶ್ನಿಸದೆ ನನ್ನ ಪಾಡಿಗೆ ನಾನು ಇರುತ್ತಿದ್ದೆ.’

‘ಹೋಟೆಲ್ ಒಂದರಲ್ಲಿ ತಟ್ಟೆ ತೊಳೆಯುವುದು, ಸರ್ವಿಸ್ ಮಾಡುವುದು, ಟೇಬಲ್ ಸ್ವಚ್ಛ ಮಾಡುವುದು, ತರಕಾರಿ ಕತ್ತರಿಸುವುದು ಮಾಡುತ್ತಿದ್ದೆ. ಹೀಗೆ ಒಂದೇ ಕೆಲಸ ಅಂತ ಇಲ್ಲ. ಎಲ್ಲಾ ಕೆಲಸ ಮಾಡಿಸುತ್ತಿದ್ದರು. ನೀರಿನಲ್ಲಿ ಹೆಚ್ಚು ಕೆಲಸ ಮಾಡುತ್ತಿದ್ದರಿಂದ ಕಾಲು ಕೊಳೆಯಲು ಪ್ರಾರಂಭವಾಯ್ತು. ಆಗ ಅಲ್ಲಿದ್ದವರೆಲ್ಲ ಔಷಧಿ ಕೊಡಿಸಿ ಇಲ್ಲಿ ಕೆಲಸ ಬಿಟ್ಟು ಬೇರೆ ಕಡೆಗೆ ಹೋಗು ಎನ್ನುತ್ತಿದ್ದರು. ಅಷ್ಟು ಹೊತ್ತಿಗೆ ನಾನು ಚಪಾತಿ, ಪೂರಿ, ರೋಟಿ, ಬಜ್ಜಿ, ವಡೆ, ಕಬಾಬ್, ಆಮ್ಲೆಟ್, ಬಿರಿಯಾನಿ ಮಾಡುವ ಅಡುಗೆ ಕೆಲಸವನ್ನು ಕಲಿತಿದ್ದೆ. ಆಗ ಸ್ವಲ್ಪ ಧೈರ್ಯ ಇಲ್ಲಿ ಕೆಲಸ ಬಿಟ್ಟು ಹೋದರೂ ಬೇರೆ ಕಡೆ ಕೆಲಸ ಮಾಡಿ ಜೀವನ ಸಾಗಿಸಬಹುದು ಎಂಬ ನಂಬಿಕೆ ಬಂದಿತ್ತು. ಅಲ್ಲಿಂದ ಹೊರಬಂದಾದ ಮೇಲೆ ಗುಟ್ಟಹಳ್ಳಿ, ಬಿ. ಡಿ. ಎ. ಆಫೀಸ್ ಹತ್ತಿರ ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಿದ್ದೆ. ತರುವಾಯ ಪ್ಯಾಲೇಸ್ ಗ್ರೌಂಡ್ ಹತ್ತಿರ ಕಟೌಟ್ ಪೇಂಟಿಂಗ್ ಅಂಗಡಿಯಲ್ಲಿ ಸಹಾಯಕನಾಗಿ ಕೆಲಸಕ್ಕೆ ಸೇರಿಕೊಂಡೆ. ಅಲ್ಲಿ ಒಂದೂವರೆ ವರ್ಷ ಕೆಲಸ ಮಾಡಿದೆ.’

‘ಐದು ವರ್ಷದ ಹಿಂದೆ ಮುನಿಯಮ್ಮ ಎಂಬುವವರನ್ನು ಮದುವೆ ಮಾಡಿಕೊಂಡೆ. ಈಗ ಮಗಳು ಜಾಸ್ಮಿನ್ ನನ್ನ ಕಷ್ಟದಲ್ಲಿ ತುಸು ನಗುವನ್ನು ಮೂಡಿಸಲು ಜೊತೆಯಾಗಿದ್ದಾಳೆ. ಎರಡು ವರ್ಷದ ಹಿಂದೆ ಆರ್. ಟಿ. ನಗರದ ಹೋಟೆಲ್ ಒಂದರಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದೆ. ಕೋವಿಡ್ ಬಂದ ಮೇಲೆ ಹೋಟೆಲ್ ವ್ಯಾಪಾರವೂ ಕಡಿಮೆಯಾಯ್ತು. ಹೋಟೆಲ್ ನಷ್ಟದಲ್ಲಿ ನಡೆಯುತ್ತಿದ್ದರಿಂದ ಬೇರೆಯವರಿಗೆ ಮಾರಿದರು.’

‘ಈಗ ನಾಗವಾರ, ಅಲ್ಲಾಳಸಂದ್ರ, ಜಕ್ಕೂರ್ ಎಲ್ಲೇ ಕೆಲಸ ಕೇಳಿದರೂ ಯಾರೂ ಕೆಲಸ ಕೊಟ್ಟು ನೋಡುತ್ತಿಲ್ಲ. ಕೈ ಕಾಲು ಚೆನ್ನಾಗಿರುವವರೇ ಸರಿಯಾಗಿ ಕೆಲಸ ಮಾಡಲ್ಲ. ಇನ್ನೂ ನೀನೇನು ಮಾಡ್ತೀಯ ತಟ್ಟಾಡಿ ಏನಾದರೂ ಬಿದ್ದರೆ, ನಿನ್ನಿಂದ ಏನ್ ಕೆಲಸ ಮಾಡೋಕೆ ಆಗತ್ತೆ ಪಾಪ ಹೋಗು ಅಂತ ಕಳುಹಿಸುತ್ತಿದ್ದಾರೆ. ಇನ್ನು ಮುಂದೆ ಅವರು ಇವರ ಮುಂದೆ ಬೇಡುವುದು ಬೇಡ. ನಾನೆ ಏನಾದರೂ ವ್ಯಾಪಾರ ಮಾಡಿ ಮೂರು ಹೊತ್ತು ತಿನ್ನುವಲ್ಲಿ ಒಂದ್ ಹೊತ್ತು ನೆಮ್ಮದಿಯಿಂದ ಊಟ ಮಾಡೋಣ ಅನ್ನಿಸಿದೆ.’

‘ಕೊರೋನ ಸಮಯದಲ್ಲಿ ಬಾಡಿಗೆ ಕಟ್ಟುವುದು ಅಸಾಧ್ಯವಾಗಿ ಮನೆ ಬಿಡುವಂತಾಯಿತು. ಕೊನೆಗೆ ಒಂದು ಗಸಗಸೆ ಮರದ ಕೆಳಗೆ ಆರು ತಿಂಗಳು ವಾಸಮಾಡಿದ್ದೇವೆ. ಪುಟ್ಟ ಮಗುವಿನೊಂದಿಗೆ ಬಿಸಿಲು, ಮಳೆ, ಗಾಳಿ, ಚಳಿ ಎನ್ನದೆ ಅವರಿವರು ಕೊಟ್ಟ ದಿನಸಿಯಿಂದ, ಅಲ್ಲಿ ಇಲ್ಲಿ ಬಿದ್ದ ಪುಡಿ ಸೌದೆಯನ್ನು ಆಯ್ದು ತಂದು ಅಡುಗೆ ಮಾಡಿಕೊಂಡು ಜೀವನ ಸಾಗಿಸಿದ್ದೇವೆ. ಶೌಚಕ್ಕೆ, ಸ್ನಾನಕ್ಕೆ ಹತ್ತಿರದಲ್ಲೇ ಇದ್ದ ಹಮಾಮ್ ಗೆ ಹೋಗಿ ಬರುತ್ತಿದ್ದೆವು. ಛತ್ರಗಳಲ್ಲಿ ಪಾತ್ರೆ ತೊಳೆದು, ಅಲ್ಲಿ ಇಲ್ಲಿ ಸಣ್ಣ ಪುಟ್ಟ ಸಿಕ್ಕ ಕೆಲಸಗಳನ್ನು ಮಾಡಿ ಒಂದು ಸಣ್ಣ ಬಾಡಿಗೆ ಮನೆಗೆ ಬಂದಿದ್ದೇವೆ.’

‘ಭಾರ ಎತ್ತಲು ಆಗುವುದಿಲ್ಲ. ನಾನೆ ಕುಳಿತುಕೊಂಡು ಒಂದೆಡೆ ಏನಾದರೂ ವ್ಯಾಪಾರ ಮಾಡಬೇಕು ಎಂಬ ಛಲವಿದೆ. ಪ್ಲಾಸ್ಟಿಕ್, ಸ್ಟೀಲ್, ತೆಂಗಿನಕಾಯಿ, ಜೋಳ, ಸೊಪ್ಪು ನಿಂಬೆಹಣ್ಣು ಇಂತದ್ದನ್ನೆಲ್ಲ ವ್ಯಾಪಾರ ಮಾಡಿ ಜೀವನ ಸಾಗಿಸಬೇಕೆಂಬ ತುಡಿತವಿದೆ. ತಳ್ಳುವಗಾಡಿ ಹೊಸದು 12,000. ಹಳೆಯದ್ದು ತೆಗೆದುಕೊಳ್ಳಬೇಕು ಅಂದರೂ ಸುಮಾರು 5 ರಿಂದ 6 ಸಾವಿರ ರೂಪಾಯಿ ಇರುತ್ತದೆ. ಇನ್ನು ಬಂಡವಾಳ ಅಂತ 5000 ಆದರೂ ಇದ್ದರೆ ನನ್ನ ಅನ್ನ ನಾನು ದುಡಿದು ನನ್ನ ಹೆಂಡತಿ ಮಕ್ಕಳನ್ನು ಸಾಕಬಹುದು.’

‘ನಾನು ಓದಿಲ್ಲವಾದ್ದರಿಂದ ಸರ್ಕಾರದಿಂದ ಸಿಗುವ ಸೌಲಭ್ಯಗಳ ಮಾಹಿತಿ ಗೊತ್ತಿಲ್ಲ. ಯಾರನ್ನಾದರೂ ಕೇಳಿಕೊಂಡು ಮಾಡಿಸೋಣ ಎಂದರೆ ಅವರಿಗೆ ಲಂಚ ಕೊಡಲು ನನ್ನಲ್ಲಿ ಹಣವಿಲ್ಲ. ಎಲ್ಲರೂ ಹೀಗಿದ್ದೀಯ ಭಿಕ್ಷೆ ಕೇಳಲು ಹೋಗು ಅಂತಾರೆ. ನನಗೆ ಭಿಕ್ಷೆ ಬೇಡಿ ತಿನ್ನಲು ಮನಸ್ಸು ಒಪ್ಪುವುದಿಲ್ಲ. ದುಡಿದು ತಿನ್ನುವ ಆಸೆ. ನಾನು ಕೆಲಸ ಮಾಡುತ್ತೇನೆ. ನಾನೆ ಕುಂತಿದ್ದ ಕಡೆ ಏನಾದರೂ ವ್ಯಾಪಾರ ಮಾಡುವ ಆಸೆ. ದುಡಿದು ಮಗಳನ್ನು ಚೆನ್ನಾಗಿ ಓದಿಸಬೇಕು. ಅವಳಿಗೊಂದು ನೆಲೆ ಸಿಗುವ ಹಾಗೆ ಮಾಡಬೇಕು ಎನ್ನುವ ಗುರಿಯಿದೆ’ ಎನ್ನುತ್ತಾರೆ ಮೂವತ್ತೇಳು ವರ್ಷದ ಅರಸು.

ದುಡಿಯುವ ಇವರ ಮನಸ್ಸಿಗೆ ಕೈಗಳಿಗೆ ಚೈತನ್ಯ ಶಕ್ತಿ ಬರಲಿ.

Donate Janashakthi Media

Leave a Reply

Your email address will not be published. Required fields are marked *